ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಮತಗಳ್ಳತನವನ್ನು ಸಾಕ್ಷ್ಯ ಸಮೇತ ಕಟ್ಟಿಹಾಕಲಿ !

ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಯಾವುದೂ ಅಸಾಧ್ಯವೆನ್ನಲು ಸಾಧ್ಯವಿಲ್ಲ ಎನ್ನುವುದಕ್ಕೆ ಈಗಿನ ‘ಮತಗಳ್ಳತನ’ದ ಆರೋಪವೇ ಸ್ಪಷ್ಟ ಉದಾಹರಣೆ. ಹೌದು, ಕಳೆದ ಒಂದೆರಡು ವಾರಗಳಿಂದ ಇಡೀ ದೇಶದಲ್ಲಿ ಸದ್ದಾಗುತ್ತಿರುವುದು ‘ಮತಗಳ್ಳತನ’ದ ಆರೋಪ. ಇದಕ್ಕೂ ಮೊದಲು ವಿಧಾನಸಭಾ ಚುನಾವಣಾ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆಯ ವಿವಾದ ಶುರುವಾಗಿತ್ತು.

ಅಶ್ವತ್ಥಕಟ್ಟೆ

ranjith.hoskere@gmail.com

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಯಾವುದೇ ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳ ‘ಕೆಸರೆರಚಾಟ’ ಸಾಮಾನ್ಯ ಸಂಗತಿ. ಭಾರತದಲ್ಲಿ ಒಂದು ರೀತಿಯಲ್ಲಿ ಕೆಸರೆರಚಾಟ ನಡೆದರೆ, ಅಮೆರಿಕದಲ್ಲಿ ಮತ್ತೊಂದು ರೀತಿಯ ವಾಕ್ಸಮರ ನಡೆಯಬಹುದು. ಆದರೆ ಚುನಾವಣೆಯ ಗೆಲುವಿಗೆ ಆರೋಪ-ಪ್ರತ್ಯಾರೋಪ ಸರ್ವೇಸಾಮಾನ್ಯ.

ಅದರಲ್ಲಿಯೂ ಭಾರತದಂಥ ದೇಶದಲ್ಲಿ, ಚುನಾವಣೆಯ ಹೊರತಾಗಿಯೂ ಪರಸ್ಪರ ಕೆಸರೆರಚಾಟ ನಡೆಯುವುದನ್ನು ನೋಡಬಹುದು. ಅನೇಕ ಬಾರಿ, ಚುನಾವಣೆ ಮುಗಿದು ಫಲಿತಾಂಶ ಬಂದರೂ ಆ ಫಲಿತಾಂಶವನ್ನೇ ಪ್ರಶ್ನಿಸುವ, ಅನುಮಾನಿಸುವ ಅನೇಕ ನಿದರ್ಶನಗಳನ್ನು ನೋಡಿದ್ದೇವೆ. ಆದರೆ ಚುನಾವಣೆ ಮುಗಿದು ಹತ್ತಿರ ಹತ್ತಿರ ಎರಡು ವರ್ಷದ ಬಳಿಕ ‘ಚುನಾವಣೆಯಲ್ಲಿ ಅಕ್ರಮ’ ಎನ್ನುವ ಆರೋಪ ತೀರಾ ಅಪರೂಪ.

ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಯಾವುದೂ ಅಸಾಧ್ಯವೆನ್ನಲು ಸಾಧ್ಯವಿಲ್ಲ ಎನ್ನುವುದಕ್ಕೆ ಈಗಿನ ‘ಮತಗಳ್ಳತನ’ದ ಆರೋಪವೇ ಸ್ಪಷ್ಟ ಉದಾಹರಣೆ. ಹೌದು, ಕಳೆದ ಒಂದೆರಡು ವಾರಗಳಿಂದ ಇಡೀ ದೇಶದಲ್ಲಿ ಸದ್ದಾಗುತ್ತಿರುವುದು ‘ಮತಗಳ್ಳತನ’ದ ಆರೋಪ. ಇದಕ್ಕೂ ಮೊದಲು ವಿಧಾನಸಭಾ ಚುನಾವಣಾ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆಯ ವಿವಾದ ಶುರುವಾಗಿತ್ತು.

ಈ ವಿವಾದವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸೇರಿದಂತೆ ‘ಇಂಡಿ ಒಕ್ಕೂಟ’ ಆರಂಭಿಸಿದ್ದ ಆರೋಪ, ಹೋರಾಟ, ಪ್ರತಿಭಟನೆ ಹಾಗೂ ಕಾನೂನು ಸಮರ ನಡೆಯುತ್ತಲೇ ಇದೆ. ಆದರೆ ಈ ಸಮಯದಲ್ಲಿ ಈ ಕಿಚ್ಚಿಗೆ ಇನ್ನಷ್ಟು ಕಿಚ್ಚು ಹಚ್ಚಿದ್ದು, ಬಿಹಾರಕ್ಕೆ ಸೀಮಿತವಾಗಿದ್ದ ಆರೋಪವನ್ನು ಇಡೀ ದೇಶಕ್ಕೆ ವ್ಯಾಪಿಸುವಂತೆ ಮಾಡಿದ್ದು ಮಾತ್ರ ಕಾಂಗ್ರೆಸ್ ವರಿಷ್ಠ, ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ‘ಮತಗಳ್ಳತನ’ದ ಆರೋಪ.

ಇದನ್ನೂ ಓದಿ:Ranjith H Ashwath Column: ಬೀಸೋ ದೊಣ್ಣೆಯಿಂದ ಪಾರಾಗಲು ಹೀಗೊಂದು ಅಸ್ತ್ರ !

ರಾಹುಲ್ ಗಾಂಧಿಯವರ ಈ ಆರೋಪದ ಬೆನ್ನಲ್ಲೇ, ಕಾಂಗ್ರೆಸ್ ಸೋತಿರುವ ಕಡೆಯೆಲ್ಲ ತಮ್ಮ ಸೋಲಿಗೆ ಮತಗಳ್ಳತನ ಕಾರಣವಿರಬಹುದು ಎಂದು ಪರಾಜಿತ ಅಭ್ಯರ್ಥಿಗಳು ಹೇಳಲು ಶುರು ಮಾಡಿದ್ದಾರೆ. ಈ ಆರೋಪಕ್ಕೆ ತಮ್ಮ ಬಳಿ ಸಾಕ್ಷ್ಯವಿದೆ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದರೆ, ಕಾಂಗ್ರೆಸ್ ನಾಯಕರು ಸೂಕ್ತ ಸಮಯದಲ್ಲಿ ರಾಹುಲ್ ತಮ್ಮ ಸಾಕ್ಷ್ಯವನ್ನು ಬಹಿರಂಗಪಡಿಸ ಲಿದ್ದಾರೆ ಎನ್ನುವ ಮಾತುಗಳನ್ನು ಆಡುತ್ತಿದ್ದಾರೆ.

ಮತಗಳ್ಳತನದ ಆರೋಪವನ್ನು ಮಾಡಿದ ದಿನವೇ ಬಿಜೆಪಿ ನಾಯಕರು ಹಾಗೂ ಕೇಂದ್ರ ಚುನಾ ವಣಾ ಆಯೋಗದವರು ಇದೊಂದು ಆಧಾರರಹಿತ ಆರೋಪವೆಂದು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಆದರೂ, ಕಾಂಗ್ರೆಸ್ ನಾಯಕರು ಈ ವಿಷಯವನ್ನೇ ಮುಂದಿಟ್ಟುಕೊಂಡು ರಾಷ್ಟ್ರಾದ್ಯಂತ ಆಂದೋಲನ ನಡೆಸುವ ಲೆಕ್ಕಾಚಾರದಲ್ಲಿದ್ದಾರೆ. ಈ ವಿಷಯವನ್ನು ಮುಂದಿಟ್ಟು ಕೊಂಡು ಸಂಸತ್‌ನ ಉಭಯ ಸದನದಲ್ಲಿ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಬಿಜೆಪಿ ವಿರುದ್ಧ ಹೋರಾಟವನ್ನು ನಡೆಸುವ ಜತೆಜತೆಗೆ ಚುನಾವಣಾ ಆಯೋಗವನ್ನೇ ಅನುಮಾನಿಸುತ್ತಿವೆ.

ಸದನದ ಒಳ-ಹೊರಗೆ ಕೈ ನಾಯಕರು ಈ ಪ್ರಮಾಣದಲ್ಲಿ ಹೋರಾಟ ನಡೆಸಲು ಸಿದ್ಧತೆ ನಡೆಸಿ ಕೊಂಡಿದ್ದರೂ, ಚುನಾವಣಾ ಆಯೋಗವು ರಾಹುಲ್ ಗಾಂಧಿ ಅವರಿಗೆ ಹಾಕಿರುವ ‘ಸವಾಲ’ನ್ನು ಸ್ವೀಕರಿಸದಿರುವುದು ಹಲವು ಅನುಮಾನಗಳಿವೆ ಕಾರಣವಾಗಿದೆ. ಈ ಮತಗಳ್ಳತನ ಆರೋಪ ಕರ್ನಾಟಕದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಲು ಕಾರಣವೆಂದರೆ, ಕಳೆದ ಲೋಕಸಭಾ ಚುನಾವಣೆ ಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಸೋಲಿಗೆ ಇದೇ ಮತಗಳ್ಳತನ ಕಾರಣವಂತೆ.

ಇದೇ ರೀತಿ ಬೆಂಗಳೂರು ಕೇಂದ್ರದಲ್ಲಿ ಆರಂಭಿಕ ಸುತ್ತಿನಲ್ಲಿ ಮುಂದಿದ್ದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಮಹದೇವಪುರ ಭಾಗದ ಮತ ಎಣಿಕೆಯಾಗುತ್ತಿದ್ದಂತೆ ತೀವ್ರ ಹಿನ್ನಡೆ ಅನುಭವಿಸಲು ಇದೇ ಮತಗಳ್ಳತನ ಕಾರಣವಂತೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಪರ-ವಿರೋಧ ಚರ್ಚೆಗಳು ಒಂದೆಡೆಯಾದರೆ, ಚುನಾವಣೆ ನಡೆದು ಒಂದೂವರೆ ವರ್ಷ ಕಳೆದ ಬಳಿಕ ಈ ವಿಷಯವನ್ನು ಮುನ್ನೆಲೆಗೆ ತಂದಿದ್ದೇಕೆ? ಎನ್ನುವುದು ಬಿಜೆಪಿಯವರ ಪ್ರಶ್ನೆಯಾಗಿದೆ.

ಹಾಗೆ ನೋಡಿದರೆ, ಯಾವುದೇ ಚುನಾವಣೆಯಲ್ಲಿ ಫಲಿತಾಂಶ ವ್ಯತಿರಿಕ್ತವಾಗಿ ಬಂದಾಗ, ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಫಲಿತಾಂಶವನ್ನು ಪ್ರಶ್ನಿಸುವ ಅವಕಾಶವಿರುತ್ತದೆ. ಸಕಾರಣಗಳಿದ್ದರೆ, ಸ್ಥಳದಲ್ಲಿಯೇ ಮರುಎಣಿಕೆ ನಡೆಸಲೂ ಅವಕಾಶವಿರುತ್ತದೆ (ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಜಯನಗರ ಕ್ಷೇತ್ರದಲ್ಲಿ ಮರುಎಣಿಕೆಯ ಸಮಯದಲ್ಲಿಯೇ ಸಿ.ಕೆ.ರಾಮಮೂರ್ತಿ ಅವರು ಗೆಲುವು ಸಾಧಿಸಿದ್ದು). ಒಂದು ವೇಳೆ ಅದಕ್ಕೂ ಅವಕಾಶ ಸಿಗದಿದ್ದರೆ, ನ್ಯಾಯಾಲಯದಲ್ಲಿ ಫಲಿತಾಂಶವನ್ನು ಪ್ರಶ್ನಿಸಲು ಅಥವಾ ಫಲಿತಾಂಶವನ್ನು ಅಸಿಂಧುಗೊಳಿಸುವಂತೆ ಅರ್ಜಿ ಸಲ್ಲಿಸಲು ಅವಕಾಶ ವಿರುತ್ತದೆ.

ನ್ಯಾಯಾಲಯದಲ್ಲಿ ಪ್ರಕ್ರಿಯೆ ಇತ್ಯರ್ಥವಾಗುವ ವೇಳೆಗೆ ಮುಂದಿನ ಚುನಾವಣೆ ಘೋಷಣೆ ಯಾಗಿರುತ್ತದೆ ಎನ್ನುವುದು ಬೇರೆ ಮಾತು. ಆದರೆ ಅದಕ್ಕೆ ಕಾನೂನಿನಲ್ಲಿ ಅವಕಾಶವಂತೂ ಇದೆ. ಆದರೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರದಲ್ಲಿ ಮತಗಳ್ಳತನದ ಆರೋಪವನ್ನು ಸಾಕ್ಷ್ಯ ಸಮೇತ ಸಾಬೀತುಪಡಿಸುತ್ತೇವೆ ಎನ್ನುವ ಮಾತುಗಳನ್ನು ಆಡುತ್ತಿರುವ ಕಾಂಗ್ರೆಸ್ ನಾಯಕರು ಫಲಿತಾಂಶ ಬರುತ್ತಿದ್ದಂತೆ ನ್ಯಾಯಾಲಯದಲ್ಲಿ ಏಕೆ ಪ್ರಶ್ನಿಸಿಲ್ಲ? ಆ ಸಮಯದಲ್ಲಿ ಸಾಕ್ಷ್ಯವಿರಲಿಲ್ಲ.

ಈಗ ಸಿಕ್ಕಿದೆ ಎನ್ನುವುದಾದರೆ ಕನಿಷ್ಠ ಈಗಲಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಲ್ಲವೇ? ಎನ್ನುವ ಪ್ರಶ್ನೆಗೆ ಕಾಂಗ್ರೆಸ್ ನಾಯಕರಿಂದ ಈವರೆಗೆ ಸಮಪರ್ಕ ಉತ್ತರ ಬಂದಿಲ್ಲ. ಒಂದು ವೇಳೆ ಮತಗಳ್ಳತನವಾಗಿರುವುದಕ್ಕೆ ಬಲವಾದ ಸಾಕ್ಷಿಯಿದ್ದರೆ, ಅದರ ವಿರುದ್ಧ ಹೋರಾಡಬೇಕಿರುವುದು ಕಾಂಗ್ರೆಸ್‌ನ ಆದ್ಯ ಕರ್ತವ್ಯ.

ಏಕೆಂದರೆ, ಇಡೀ ಪ್ರಜಾಪ್ರಭುತ್ವ ವ್ಯವಸ್ಥೆ ನಿಂತಿರುವ ಚುನಾವಣೆಯಲ್ಲಿಯೇ ಅಕ್ರಮ ನಡೆದಿದ್ದರೆ ಅದು ಇಡೀ ವ್ಯವಸ್ಥೆಯನ್ನೇ ಕಲಕಿದಂತಾಗುತ್ತದೆ. ಈ ವಿಷಯವನ್ನು ಕಾಂಗ್ರೆಸ್ ಇತರೆ ರಾಜಕೀಯ ಆರೋಪದ ರೀತಿ ಪರಿಗಣಿಸದೇ, ತಾರ್ಕಿಕ ಅಂತ್ಯಕ್ಕಾಗಿ ಹೋರಾಡಬೇಕು. ಏಕೆಂದರೆ, ಬಿಜೆಪಿ ವಿರುದ್ಧ ಅಥವಾ ಕೇಂದ್ರ ಸರಕಾರದ ವಿರುದ್ಧ ಮಾಡುವ ಆರೋಪಕ್ಕೂ ಸ್ವಾಯತ್ತ ಸಂಸ್ಥೆಗಳ ಮೇಲೆ ಮಾಡುವ ಆರೋಪಗಳಿಗೂ ಅಜಗಜಾಂತರವಿದೆ.

ಚುನಾವಣಾ ಆಯೋಗವು ಪಾರದರ್ಶಕವಾಗಿ ಚುನಾವಣೆಯನ್ನು ನಡೆಸಿದ್ದರೆ ಮಾತ್ರ ಪ್ರಜಾ ಪ್ರಭುತ್ವ ವ್ಯವಸ್ಥೆ ಸರಿಯಾಗಿರಲು ಸಾಧ್ಯ. ಆದ್ದರಿಂದ ಕೇಂದ್ರ ಸರಕಾರದ ವಿರುದ್ಧ ತಾನು ಕಂಡು ಕೊಂಡಿರುವ ಹೊಸ ‘ಅಸ್ತ್ರ’ವನ್ನು ಕಾಂಗ್ರೆಸ್ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕೆ ಹೊರತು, ಕೇವಲ ಟೀಕೆಗೆ ಅಥವಾ ಒಂದೆರೆಡು ಪ್ರತಿಭಟನೆಗೆ ಅದನ್ನು ಸೀಮಿತಗೊಳಿಸಬಾರದು.

ಸದ್ಯ, ಮತಗಳ್ಳತನದ ವಿರುದ್ಧದ ಹೋರಾಟಕ್ಕೆ ಕರ್ನಾಟಕದಿಂದಲೇ ಮುನ್ನುಡಿ ಬರೆಯಲು ಕಾಂಗ್ರೆಸ್ ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇಂದು ಸ್ವಾತಂತ್ರ್ಯ ಉದ್ಯಾನ ದಲ್ಲಿ ಪ್ರತಿಭಟನೆ ನಡೆಸಬೇಕಿತ್ತು. ಆದರೆ ಶಿಬು ಸೋರೇನ್ ನಿಧನದಿಂದ ಮುಂದಕ್ಕೆ ಹೋಗಿದೆ. ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಸ್ತಾಪಿಸುತ್ತಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಹಾಗೂ ಮಹದೇವಪುರ ಕ್ಷೇತ್ರದಲ್ಲಿ ಮತಗಳ್ಳತನವಾಗಿದೆ ಎನ್ನುವ ವಿಷಯದಲ್ಲಿ ‘ಏಕ್‌ದಮ್’ ಬಿಜೆಪಿ ಅಭ್ಯರ್ಥಿ ಲೀಡ್ ಸಿಕ್ಕಿದೆ ಎನ್ನುವುದು ಈಗ ಅನುಮಾನಕ್ಕೆ ಕಾರಣವಾಗಿದೆ.

ಆದರೆ ಕಳೆದ ಮೂರು ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ, ಬೆಂಗಳೂರು ಕೇಂದ್ರದಲ್ಲಿ ಮಹದೇವಪುರ ಕ್ಷೇತ್ರದಲ್ಲಿಯೇ ಬಿಜೆಪಿಗೆ ಅತಿಹೆಚ್ಚು ಲೀಡ್ ಸಿಕ್ಕಿರುವುದು. ಅದಕ್ಕೆ ಕಾರಣ, ಕ್ಷೇತ್ರದಲ್ಲಿ ಅರವಿಂದ ಲಿಂಬಾವಳಿ ತಮ್ಮದೇ ಪ್ರಭಾವದಿಂದ ಪಕ್ಷದ ಸಂಘಟನೆಯನ್ನು ಗಟ್ಟಿಯಾಗಿಸಿಕೊಂಡಿದ್ದಾರೆ.

ಆದ್ದರಿಂದ ಸಹಜವಾಗಿಯೇ ಶೇ.50ಕ್ಕಿಂತ ಹೆಚ್ಚು ಮತಗಳು ಬಿಜೆಪಿ ಪಾಲಾಗುತ್ತವೆ. ಒಂದು ವೇಳೆ ಈ ಬಾರಿ ಮಹದೇವಪುರದಲ್ಲಿ ಮತಗಳ್ಳತನವಾಗಿದೆ ಎನ್ನುವುದಾದರೆ, ಈ ಹಿಂದಿನ ಎರಡು ಲೋಕ ಸಭಾ ಚುನಾವಣೆಯಲ್ಲಿ, ವಿಧಾನಸಭಾ ಚುನಾವಣೆಗಳಲ್ಲಿ ಈ ವಿಷಯವನ್ನು ಕಾಂಗ್ರೆಸ್ ಏಕೆ ಗಮನಿಸಲಿಲ್ಲ ಎನ್ನುವ ಸಹಜ ಪ್ರಶ್ನೆ ಮೂಡುತ್ತದೆ.

ಹಾಗೆ ನೋಡಿದರೆ, ಕೇಂದ್ರ ಚುನಾವಣಾ ಆಯೋಗ ಹಾಗೂ ಚುನಾವಣಾ ವ್ಯವಸ್ಥೆಯ ಮೇಲೆ ಆರೋಪ ಬಂದಿರುವುದು ಇದೇ ಮೊದಲಲ್ಲ. ಕಾಂಗ್ರೆಸ್ ಸೋತಾಗಲೆಲ್ಲ ಇವಿಎಂ ಹ್ಯಾಕ್ ಎನ್ನುವ ಸಹಜ ಆರೋಪವನ್ನು ಮಾಡಿಕೊಂಡೇ ಬಂದಿತ್ತು. ಗೆದ್ದಾಗ ಇವಿಎಂ ಮೇಲೆ ‘ವಿಶ್ವಾಸ’ವಿಟ್ಟು ಸೋತಾಗ ಮಾತ್ರ ಹ್ಯಾಕ್ ಆಗಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್, ಈ ಮತಗಳ್ಳತನ ವಿಷಯ ದಲ್ಲಿಯೂ ಅದೇ ರೀತಿ ವರ್ತಿಸುತ್ತಿರುವುದು ‘ವಿಶ್ವಾಸರ್ಹತೆ’ಗೆ ಧಕ್ಕೆಯಾಗುತ್ತಿದೆ ಎಂದರೆ ತಪ್ಪಾಗುವು ದಿಲ್ಲ. ಆದ್ದರಿಂದ ಕಾಂಗ್ರೆಸ್ ತನ್ನ ಬಳಿಯಿರುವ ಸಾಕ್ಷ್ಯವನ್ನು ತಡ ಮಾಡದೇ ಬಹಿರಂಗಪಡಿಸುವ ಮೂಲಕ ಚುನಾವಣಾ ಆಯೋಗದ ಸವಾಲಿಗೆ ಪ್ರತಿಸವಾಲು ಹಾಕಬೇಕಿದೆ.

ಇನ್ನು ಜಗತ್ತಿನ ಹಲವು ದೇಶಗಳು ಭಾರತದ ಚುನಾವಣಾ ವ್ಯವಸ್ಥೆಯನ್ನು ‘ಉತ್ತಮ’ವೆಂದು ಒಪ್ಪಿಕೊಂಡಿರುವುದಷ್ಟೇ ಅಲ್ಲದೇ, ತಮ್ಮಲ್ಲಿಯೂ ಅಳವಡಿಸಿಕೊಳ್ಳಬಹುದೇ ಎನ್ನುವ ಆಲೋಚನೆ ಯಲ್ಲಿವೆ. ಅದರಲ್ಲಿಯೂ ಮುಂದುವರಿದ ರಾಷ್ಟ್ರಗಳಲ್ಲಿಯೂ ಇರದ ಆಧುನಿಕ ತಂತ್ರಜ್ಞಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅನೇಕ ಉದಾಹರಣೆಗಳಿವೆ.

ಹಾಗೆಂದ ಮಾತ್ರಕ್ಕೆ ಚುನಾವಣಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಎತ್ತಿ ತೋರಿಸುವುದು ತಪ್ಪಲ್ಲ. ಆದರೆ ಕಳೆದ ಒಂದು ದಶಕದಿಂದ ಚುನಾವಣಾ ಆಯೋಗದ ಮೇಲೆ ಮಾಡುತ್ತಿರುವ ಬಹುತೇಕ ಆರೋಪಗಳು ‘ಹಿಟ್ ಆಂಡ್ ರನ್’ ರೀತಿಯಲ್ಲಿಯೇ ಇರುವುದು ಆತಂಕಕಾರಿ ವಿಷಯ. ವಿವಿಧ ರಾಜಕೀಯ ಪಕ್ಷಗಳು ಹಲವು ಬಾರಿ ಮಾಡಿರುವ ಆರೋಪಗಳಿಗೆಲ್ಲ ಚುನಾವಣಾ ಆಯೋಗ ನಿರಾಕರಿಸುವ ಜತೆಜತೆಗೆ ಮಾಡಿರುವ ಆರೋಪಗಳಿಗೆ ಒಂದಾದರೂ ‘ಸಾಕ್ಷ್ಯ’ ನೀಡಲಿ ಎಂದು ಹಲವು ಬಾರಿ ಕೇಳಿದ್ದರೂ ಈವರೆಗೆ ಯಾರೊಬ್ಬರೂ ಸಾಕ್ಷ್ಯ ನೀಡುವ ಸವಾಲನ್ನು ಪೂರ್ಣ ಗೊಳಿಸಿಲ್ಲ ಎನ್ನುವುದು ವಾಸ್ತವ.

ಈ ಹಿಂದಿನ ಆರೋಪಗಳನ್ನೆಲ್ಲ ಬದಿಗಿಟ್ಟು, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಈಗ ಮಾಡುತ್ತಿರುವ ‘ಮತಗಳ್ಳತನ’ದ ಆರೋಪಕ್ಕಾದರೂ ಸಾಕ್ಷ್ಯ ನೀಡುವ ಮೂಲಕ ಚುನಾವಣಾ ವ್ಯವಸ್ಥೆಯಲ್ಲಿನ ‘ಲೋಪ’ವನ್ನು ಇಡೀ ದೇಶಕ್ಕೆ ತೋರಿಸಬೇಕಿದೆ. ಇಲ್ಲವಾದರೆ ಇಷ್ಟು ದಿನ ಮಾಡಿರುವ ನೂರು ಆರೋಪಗಳ ಜತೆಗೆ ‘ಮತಗಳ್ಳತನ’ ನೂರಾ ಒಂದನೇ ಆರೋಪವಾಗಿ ಕೆಲವೇ ದಿನದಲ್ಲಿ ಕಳೆದುಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ.

ರಂಜಿತ್​ ಎಚ್​ ಅಶ್ವತ್ಥ್

View all posts by this author