ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ಇರುವೆಗಳಿಂದ ಮದ್ದು ಮಾಡಿಸಿಕೊಳ್ಳುವ ಕಾಗೆ

ಇರುವೆಗಳು ರಕ್ಷಣೆಗಾಗಿ ತಮ್ಮ ದೇಹದಿಂದ ‘ಫಾರ್ಮಿಕ್ ಆಸಿಡ್’ ಎಂಬ ರಾಸಾಯನಿಕ ವನ್ನು ಹೊರ ಹಾಕುತ್ತವೆ. ಈ ಆಮ್ಲವು ಕಾಗೆಯ ಪಾಲಿಗೆ ಅದ್ಭು ಸಂಹಾರಕ. ರೆಕ್ಕೆಗಳ ನಡುವೆ ಅಡಗಿರುವ ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ಕ್ರಿಮಿಗಳನ್ನು ಈ ಆಮ್ಲವು ನಾಶಪಡಿಸುತ್ತದೆ. ಕಾಗೆ ಎಷ್ಟು ಜಾಣ ಎಂದರೆ, ಕೆಲವೊಮ್ಮೆ ತನ್ನ ಕೊಕ್ಕಿನಿಂದ ಇರುವೆಗಳನ್ನು ಹಿಡಿದು, ರೆಕ್ಕೆಗಳ ಕೆಳಗೆ ಎಲ್ಲಿ ಹೆಚ್ಚು ತುರಿಕೆ ಇದೆಯೋ ಅಲ್ಲಿ ಸಾವಕಾಶವಾಗಿ ಉಜ್ಜಿಕೊಳ್ಳುತ್ತದೆ.

ಒಂದೊಳ್ಳೆ ಮಾತು

ಪ್ರಕೃತಿಯ ಅಖಾಡದಲ್ಲಿ ಬದುಕುಳಿಯುವುದು ಎಂದರೆ ಕೇವಲ ಓಡುವುದು ಅಥವಾ ಬೇಟೆ ಯಾಡುವುದು ಮಾತ್ರವಲ್ಲ; ಅದು ಕೆಲವೊಮ್ಮೆ ಅತ್ಯಂತ ನಿಗೂಢ ಮೌನದಿಂದಲೂ ಕೂಡಿರುತ್ತದೆ. ಒಂದು ಹಳೆಯ ಮರದ ಕೊಂಬೆಯ ಮೇಲೆ ಕಾಗೆಯೊಂದು ಭಾರವಾದ ಮನಸ್ಸಿನಿಂದ ಕುಳಿತಿದೆ. ಅದರ ರೆಕ್ಕೆಗಳು ಎಂದಿನಂತೆ ಚುರುಕಾಗಿಲ್ಲ.

ರೆಕ್ಕೆಗಳ ಒಳಗೆ ಕಣ್ಣಿಗೆ ಕಾಣದ ನೂರಾರು ಪರಾವಲಂಬಿ ಕ್ರಿಮಿಗಳು ಅದರ ಚರ್ಮವನ್ನು ಕಚ್ಚು ತ್ತಿವೆ. ಆ ತುರಿಕೆ, ಆ ಕಿರಿಕಿರಿ ಅಸಹನೀಯವಾಗಿದೆ. ಆದರೆ, ಕಾಗೆ ಗಾಬರಿಯಾಗುವುದಿಲ್ಲ, ದಿಕ್ಕಾ ಪಾಲಾಗಿ ಹಾರುವುದಿಲ್ಲ. ಬದಲಿಗೆ, ತನ್ನ ಪೂರ್ವಜರಿಂದ ಬಳುವಳಿಯಾಗಿ ಬಂದ ಜ್ಞಾನದಂತೆ ಅದು ಮೌನವಾಗಿ ಕೆಳಕ್ಕೆ ಇಳಿಯುತ್ತದೆ.

ಅದು ಬಂದು ಕೂರುವುದು ಒಂದು ಇರುವೆಯ ಗೂಡಿನ ಮುಂದೆ. ಇತರ ಪ್ರಾಣಿಗಳಿಗೆ ಇರುವೆಯ ಗೂಡು ಎಂದರೆ ಅಪಾಯದ ತಾಣ, ಆದರೆ ಈ ಕಾಗೆಗೆ ಅದು ಒಂದು ಜೀವಂತ ಔಷಧಾಲಯ. ಕಾಗೆ ನೆಲದ ಮೇಲೆ ಕುಳಿತು ತನ್ನ ರೆಕ್ಕೆಗಳನ್ನು ಅಗಲವಾಗಿ ಹರಡುತ್ತದೆ. ನೂರಾರು ಇರುವೆಗಳು ತನ್ನ ದೇಹದ ಮೇಲೆ ಹರಿದಾಡಲು ಅದು ಅವಕಾಶ ಮಾಡಿಕೊಡು ತ್ತದೆ.

ಇದನ್ನೂ ಓದಿ: Roopa Gururaj Column: ಅವಿದ್ಯಾವಂತ ತಂದೆಯ ನೆನಪಿಗಾಗಿ ಇಮ್ಯಾಜಿನೇಷನ್‌ ಲೈಬ್ರರಿ ಕಟ್ಟಿದ ಮಗಳು

ಮೇಲ್ನೋಟಕ್ಕೆ ಇದು ಕಾಗೆಯ ಸೋಲಿನಂತೆ ಕಂಡರೂ, ವಾಸ್ತವದಲ್ಲಿ ಇದು ಅದರ ಅದ್ಭುತ ಚಿಕಿತ್ಸಾ ತಂತ್ರ. ವಿಜ್ಞಾನಿಗಳು ಇದನ್ನು ‘ಆಂಟಿಂಗ್’ (Anting) ಎಂದು ಕರೆಯು ತ್ತಾರೆ.

ಇರುವೆಗಳು ರಕ್ಷಣೆಗಾಗಿ ತಮ್ಮ ದೇಹದಿಂದ ‘ಫಾರ್ಮಿಕ್ ಆಸಿಡ್’ ಎಂಬ ರಾಸಾಯನಿಕ ವನ್ನು ಹೊರ ಹಾಕುತ್ತವೆ. ಈ ಆಮ್ಲವು ಕಾಗೆಯ ಪಾಲಿಗೆ ಅದ್ಭುತ ಸಂಹಾರಕ. ರೆಕ್ಕೆಗಳ ನಡುವೆ ಅಡಗಿರುವ ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ಕ್ರಿಮಿಗಳನ್ನು ಈ ಆಮ್ಲವು ನಾಶ ಪಡಿಸುತ್ತದೆ. ಕಾಗೆ ಎಷ್ಟು ಜಾಣ ಎಂದರೆ, ಕೆಲವೊಮ್ಮೆ ತನ್ನ ಕೊಕ್ಕಿನಿಂದ ಇರುವೆಗಳನ್ನು ಹಿಡಿದು, ರೆಕ್ಕೆಗಳ ಕೆಳಗೆ ಎಲ್ಲಿ ಹೆಚ್ಚು ತುರಿಕೆ ಇದೆಯೋ ಅಲ್ಲಿ ಸಾವಕಾಶವಾಗಿ ಉಜ್ಜಿ ಕೊಳ್ಳುತ್ತದೆ.

ಇದು ಒಬ್ಬ ತಾಯಿ ಮಗುವಿನ ಗಾಯಕ್ಕೆ ಮದ್ದು ಹಚ್ಚುವಷ್ಟೇ ನಾಜೂಕಾದ ಕ್ರಿಯೆ. ಕೆಲವೊಮ್ಮೆ ಬದುಕಿನಲ್ಲಿ ನಮಗೆ ನೋವಾದಾಗ, ಕಿರಿಕಿರಿಯಾದಾಗ ನಾವು ಮನುಷ್ಯರಿಂದ ದೂರ ಓಡುತ್ತೇವೆ. ಆದರೆ ಈ ಕಾಗೆ ಕಲಿಸುವ ಪಾಠವೆಂದರೆ ಗುಣವಾಗಬೇಕೆಂದರೆ ನಾವು ಕೆಲವೊಮ್ಮೆ ಅಷ್ಟೇ ವಿನಯ ದಿಂದ ನಮಗಿಂತ ಸಣ್ಣವರ ಬಳಿ ಹೋಗಬೇಕಾಗುತ್ತದೆ.

ತಾನು ಬಲಿಷ್ಠ ಪಕ್ಷಿ ಎಂಬ ಅಹಂಕಾರ ತೊರೆದು, ಪುಟ್ಟ ಇರುವೆಗಳ ಮುಂದೆ ಶರಣಾದಾಗ ಮಾತ್ರ ಅದಕ್ಕೆ ವಿಮುಕ್ತಿ ಸಿಗುತ್ತದೆ. ಕಾಗೆಗೆ ರಸಾಯನಶಾಸ್ತ್ರ ತಿಳಿದಿಲ್ಲ, ಅದಕ್ಕೆ ಯಾವುದೇ ವೈದ್ಯಕೀಯ ಪದವಿ ಇಲ್ಲ. ಆದರೆ ಪ್ರಕೃತಿಯ ಜತೆ ಹೇಗೆ ಸಮತೋಲನದಿಂದ ಬದುಕಬೇಕು ಎಂಬ ಮೌನಜ್ಞಾನ ಅದಕ್ಕಿದೆ. ಈ ಜ್ಞಾನವು ಯಾವುದೇ ಪುಸ್ತಕದಲ್ಲಿ ಬರೆದಿಲ್ಲ, ಅದು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಕೇವಲ ವೀಕ್ಷಣೆಯ ಮೂಲಕ ಹರಿದು ಬಂದಿದೆ.

ಚಿಕಿತ್ಸೆ ಮುಗಿದ ನಂತರ, ಕಾಗೆ ತನ್ನ ರೆಕ್ಕೆಗಳನ್ನು ಒಮ್ಮೆ ಜೋರಾಗಿ ಕೊಡವುತ್ತದೆ. ಈಗ ಅದರ ಮೈಮೇಲಿದ್ದ ಕಿರಿಕಿರಿ ಮಾಯವಾಗಿದೆ, ಭಾರ ಇಳಿದಿದೆ ಎಂದರ್ಥ. ಅದು ಒಮ್ಮೆ ಜೋರಾಗಿ ‘ಕಾವ್ ಕಾವ್’ ಎಂದು ಕೂಗಿ ನೀಲಾಕಾಶಕ್ಕೆ ಜಿಗಿಯುತ್ತದೆ. ಕಾಗೆ ಇದನ್ನು ಔಷಧ ಎಂದು ಕರೆಯುವುದಿಲ್ಲ, ಆದರೆ ಅದು ಕೆಲಸ ಮಾಡುತ್ತದೆ. ಬದುಕಿನಲ್ಲಿ ಅನೇಕ ತೊಂದರೆ ಗಳು ಹೇಳಿ ಬರುವುದಿಲ್ಲ, ಕೆಲವೊಮ್ಮೆ ಅವುಗಳನ್ನು ಹೇಳಿಕೊಂಡರೂ ಬೇರೆಯವರಿಗೆ ಅರ್ಥವಾಗುವುದಿಲ್ಲ.

ತಮಾಷೆ ಎಂದರೆ ಅವರಿಗೆ ಅದು ತೊಂದರೆ ಎಂದೇ ಅನಿಸುವುದಿಲ್ಲ. ಅಂಥ ಸಮಯದಲ್ಲಿ ನಮ್ಮ ತೊಂದರೆಗಳಿಗೆ ನಾವೇ ಪರಿಹಾರವನ್ನು ಕಂಡುಕೊಳ್ಳಬೇಕು. ಎಲ್ಲಕ್ಕೂ ಕೆಲವೊಮ್ಮೆ ಒಂದೇ ರೀತಿಯ ಪರಿಹಾರ ಇರುವುದಿಲ್ಲ. ಬದುಕಿನ ಪ್ರಶ್ನೆಪತ್ರಿಕೆಗೆ ನಾವು ಉತ್ತರ ಕಂಡುಕೊಳ್ಳುವಷ್ಟರಲ್ಲಿ, ಪ್ರಶ್ನೆಪತ್ರಿಕೆಯೇ ಬದಲಾಗಿ ಹೋಗಿರುತ್ತದೆ. ಆದ್ದರಿಂದಲೇ ಸಮಸ್ಯೆ ಬಂದಾಗ ಧೃತಿಗೆಡದೆ ನಾವು ಎಲ್ಲಿ ಸಹಾಯ ಕೇಳಬೇಕು ಮತ್ತು ಹೇಗೆ ತಾಳ್ಮೆಯಿಂದ ಇರಬೇಕು ಎಂದು ತಿಳಿದುಕೊಂಡರೆ, ಬದುಕು ಸಹನೀಯವಾಗುತ್ತದೆ.

ರೂಪಾ ಗುರುರಾಜ್

View all posts by this author