ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Prakash Shesharaghavachar Column: ಬಂಗಾಳದಲ್ಲಿ ಛಿದ್ರವಾದ ಮಮತಾ ಬ್ಯಾನರ್ಜಿ ಸಾಮ್ರಾಜ್ಯ

2011ರಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷವು ಕಾಂಗ್ರೆಸ್ ಜೊತೆ ಕೈ ಜೋಡಿಸಿ 34 ವರ್ಷದಿಂದ ಆಡಳಿತ ಚುಕ್ಕಾಣಿ ಹಿಡಿದಿದ್ದ ಎಡರಂಗ ಸರಕಾರವನ್ನು ನೆಲಕಚ್ಚಿಸಿತು. ಟಿಎಂಸಿ 184 ಮತ್ತು ಕಾಂಗ್ರೆಸ್ 42 ಸ್ಥಾನಗಳನ್ನು ಗೆದ್ದು ಸರಕಾರ ರಚನೆ ಮಾಡಿದವು. 2016ರ ವಿಧಾನ ಸಭಾ ಚುನಾವಣೆಯಲ್ಲಿ ಟಿಎಂಸಿ 211 ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ಬಂತು.

ಪ್ರಕಾಶ ಪಥ

- ಪ್ರಕಾಶ್ ಶೇಷರಾಘವಾಚಾರ್

ಬೇರು ಆಳಕ್ಕೆ ಇಳಿಯದ ಮರವು ಜೋರಾದ ಮಳೆಗೆ ನೆಲಕಚ್ಚುವಂತೆ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ವಿಧಾನಸಭೆಯ ಸೋಲಿಗೆ ಛಿದ್ರ ಛಿದ್ರವಾಗುತ್ತಿದೆ. ಶಾಸಕರು, ಸಂಸದರು ಹಾಗೂ ಪಾಲಿಕೆಯ ಸದಸ್ಯರು ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಪಕ್ಷದ ನಿಯಂತ್ರಣ ಕಳೆದುಕೊಂಡಿರುವ ಮಮತಾ ಅಸಹಾಯಕರಾಗಿ, ತಮ್ಮ ಕಣ್ಣ ಮುಂದೆಯೇ ತಾವೇ ಕಟ್ಟಿ ಬೆಳೆಸಿದ ಪಕ್ಷ ಕುಸಿಯುತ್ತಿರುವುದನ್ನು ನೋಡುವಂತಾಗಿದೆ.

1998ರಲ್ಲಿ ಮಮತಾ ಬ್ಯಾನರ್ಜಿ ಕಾಂಗ್ರೆಸ್‌ನಿಂದ ಸಿಡಿದು ಹೊರಬಂದು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದರು. ಅವರ ಏಕೈಕ ಗುರಿಯು ಪಶ್ಚಿಮ ಬಂಗಾಳದಲ್ಲಿ ಆಳವಾಗಿ ನೆಲೆಯೂರಿದ್ದ 21 ವರ್ಷದ ಎಡರಂಗ ಸರಕಾರವನ್ನು ಸೋಲಿಸುವುದು. ಎಡರಂಗ ಸರಕಾರದ ಹಿಂಸಾತ್ಮಕ ರಾಜಕಾರಣಕ್ಕೆ ಇತಿಶ್ರೀ ಹಾಡಲು ಅವರು ಏಕಾಂಗಿಯಾಗಿ ಹೋರಾಡಲು ಸಜ್ಜಾದರು.

1998ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಏಳು ಸ್ಥಾನಗಳನ್ನು ಗೆದ್ದಿತ್ತು. 1999ರ ಚುನಾವಣೆ ಯಲ್ಲಿ ಒಂಬತ್ತು ಸ್ಥಾನಗಳನ್ನು ಗೆದ್ದಿತು. 2006ರಲ್ಲಿ ಎನ್ ಡಿಎ ಮೈತ್ರಿಕೂಟದಿಂದ ಹೊರಬಂದು 2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಸೇರಿ 19 ಸ್ಥಾನಗಳನ್ನು ವಶಪಡಿಸಿ ಕೊಂಡಿತು. ಮಮತಾರವರು ಯುಪಿಎ ಭಾಗವಾಗಿ ಮನಮೋಹನ ಸಿಂಗ್ ಅವರ ಸರಕಾರದಲ್ಲಿ ರೈಲ್ವೇ ಸಚಿವರಾದರು. 2010ರಲ್ಲಿ ಟಿಎಂಸಿ ಕೋಲ್ಕತ್ತಾ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 14 ಸ್ಥಾನಗಳಲ್ಲಿ 97 ಸ್ಥಾನ ಗೆದ್ದು ಪಾಲಿಕೆಯಲ್ಲಿ ಅಧಿಕಾರಕ್ಕೆ ಏರಿತು.

ಇದನ್ನೂ ಓದಿ: ‌Prakash Shesharaghavachar Column: ಕೇಸರಿಮಯವಾಯಿತು ಪಶ್ಚಿಮ ಬಂಗಾಳ

2011ರಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷವು ಕಾಂಗ್ರೆಸ್ ಜೊತೆ ಕೈ ಜೋಡಿಸಿ 34 ವರ್ಷದಿಂದ ಆಡಳಿತ ಚುಕ್ಕಾಣಿ ಹಿಡಿದಿದ್ದ ಎಡರಂಗ ಸರಕಾರವನ್ನು ನೆಲಕಚ್ಚಿಸಿತು. ಟಿಎಂಸಿ 184 ಮತ್ತು ಕಾಂಗ್ರೆಸ್ 42 ಸ್ಥಾನಗಳನ್ನು ಗೆದ್ದು ಸರಕಾರ ರಚನೆ ಮಾಡಿದವು. 2016ರ ವಿಧಾನ ಸಭಾ ಚುನಾವಣೆಯಲ್ಲಿ ಟಿಎಂಸಿ 211 ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ಬಂತು.

ಇದೇ ಕಾಲದಲ್ಲಿ ಈ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಗಳಿಸಿ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಪಾದಾರ್ಪಣೆ ಮಾಡಿತು. ರಾಜ್ಯದಲ್ಲಿ ಬಿಜೆಪಿ ತನ್ನ ಪ್ರಭಾವವನ್ನು ವಿಸ್ತರಿಸಲು ಆರಂಭಿಸಿತು. ಮಮತಾ ಅಧಿಕಾರಕ್ಕೆ ಬರುವ ಮುನ್ನ ಅಕ್ರಮ ನುಸುಳುಕೋರರ ವಿರುದ್ಧ ಪ್ರಬಲ ಧ್ವನಿಯಾಗಿದ್ದರು. ಪಾರ್ಲಿಮೆಂಟಿನಲ್ಲಿ ಕಾಗದ ಹರಿದು ಬಿಸಾಡಿ ಹೊರಗೆ ಹೋಗಿದ್ದರು. ಆದರೆ ಅಽಕಾರ ದೊರತ ಕೂಡಲೇ ತಮ್ಮ ವರಸೆ ಬದಲಾಯಿಸಿ ನುಸುಳುಕೋರರ ಪರ ಬಲವಾಗಿ ನಿಂತರು.

ದೇಶದ ಭದ್ರತೆಗೆ ಅಪಾಯ ಒಡ್ಡುವ ಹಾಗೆ ಅಕ್ರಮ ನುಸುಳುಕೋರರಿಗೆ ಮಮತಾ ಕೆಂಪುಗಂಬಳಿ ಹಾಕುತ್ತಾರೆ. ಬಂಗಾಳದ ಮುಸಲ್ಮಾನರಿಗಿಂತ ಅಕ್ರಮ ವಲಸಿಗರು ಮಮತಾರವರಿಗೆ ಹೆಚ್ಚು ಪ್ರಿಯರಾಗುತ್ತಾರೆ. ಇವರನ್ನು ತಮ್ಮ ಓಟು ಬ್ಯಾಂಕ್ ಆಗಿ ಪರಿವರ್ತಿಸಿ ಜೋಪಾನವಾಗಿ ಕಾಪಾಡಿದರು ಮಮತಾ.

Mamata Banerjee

ಎಡರಂಗ ಸರಕಾರದ ಹಿಂಸಾಚಾರದ ವಿರುದ್ಧ ದಿಟ್ಟ ಹೋರಾಟ ಮಾಡಿದ್ದ ಮಮತಾ, ತಮ್ಮ ಹದಿನೈದು ವರ್ಷದ ಆಡಳಿತದಲ್ಲಿ ಎಡರಂಗ ಮೀರಿಸುವ ಹಿಂಸಾಚಾರ ಮತ್ತು ಅರಾಜಕತೆಯನ್ನು ನಿರ್ಮಿಸಿದ ಅಪಕೀರ್ತಿಯನ್ನು ಹೊಂದಿದ್ದಾರೆ. ದುರದೃಷ್ಟವಶಾತ್, ಯಾವ ಹಿಂಸಾಚಾರವನ್ನು ವಿರೋಧಿಸಿ ಅಧಿಕಾರಕ್ಕೆ ಬಂದರೋ ಅದೇ ಹಿಂಸಾ ಹಾದಿಯನ್ನು ಬಳಸಿಕೊಂಡು ತಮ್ಮ ಅಧಿಕಾರ ಉಳಿಸಿಕೊಳ್ಳುವ ಹೀನಾಯ ಸ್ಥಿತಿಗೆ ಅವರು ತಲುಪಿದರು.

2021ರ ವಿಧಾನ ಸಭಾ ಚುನಾವಣೆಯನ್ನು ಕೇವಲ ತೋಳ್ಬಲದಿಂದ ಮಮತಾ ಗೆದ್ದರು. ಬಿಜೆಪಿಯ ಪ್ರಬಲ ಪೈಪೋಟಿಯನ್ನು ಎದುರಿಸಲು ವ್ಯಾಪಕ ಹಿಂಸಾಚಾರ ನಡೆಯುತ್ತದೆ. ಬಿಜೆಪಿ ಪ್ರಾಬಲ್ಯದ ಜಾಗದಲ್ಲಿ ಮತದಾನ ಮಾಡದಂತೆ ಗೂಂಡಾಗಿರಿಯ ಮೂಲಕ ಅಡ್ಡಿ ಮಾಡಿದರು. ಚುನಾವಣೆಯ ಹಿಂಸಾಚಾರದಲ್ಲಿ 24 ಜನರು ಬಲಿಯಾದರು.

2021ರ ಗೆಲುವು ಟಿಎಂಸಿಯ ನಾಯಕರಿಗೆ ಅಮಲು ನೆತ್ತಿಗೇರಿಸುತ್ತದೆ. ತಮ್ಮನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ನಂಬಿಕೆ ಬಲಪಡಿಸಿಕೊಂಡರು. ಇದರ ಪರಿಣಾಮ ೨೦೨೩ರಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಟಿಎಂಸಿ ಕಾರ್ಯಕರ್ತರು ನಡೆಸಿದ ಹಿಂಸಾಚಾರ ಮತ್ತು ಅತ್ಯಾಚಾರಕ್ಕೆ ಕಡಿವಾಣ ಇಲ್ಲದಾಗುತ್ತದೆ. ಅವಿರೋಧವಾಗಿ ಆಯ್ಕೆ ಮಾಡಲು ಬಿಜೆಪಿ ಮತ್ತಿತರ ವಿರೋಧ ಪಕ್ಷಗಳ ಅಭ್ಯರ್ಥಿಗಳ ಮೇಲೆ ಅಪಹರಣದ ಬೆದರಿಕೆ ಮತ್ತು ದೌರ್ಜನ್ಯ ಎಸಗಿದರು. ಸಾವಿರಾರು ಟಿಎಂಸಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. ಚುನಾವಣೆಯಲ್ಲಿ ಟಿಎಂಸಿ ಕ್ರೂರ ಹಿಂಸಾಚಾರಕ್ಕೆ 48 ಜನರು ಬಲಿಯಾದರು.

ಹೋರಾಟದ ಕೆಚ್ಚು ಕಳೆದುಕೊಂಡಿದ್ದ ಕಾಂಗ್ರೆಸ್ ಮತ್ತು ಎಡಪಕ್ಷಗಳು ಇವರ ಅಟ್ಟಹಾಸಕ್ಕೆ ಪ್ರತಿರೋಧ ತೋರುವ ಧೈರ್ಯವಿಲ್ಲದೆ ನಿಷ್ಕ್ರಿಯರಾದರು. ಕೇವಲ ಬಿಜೆಪಿಯ ಕಾರ್ಯಕರ್ತರು ಮಾತ್ರ ಇವರಿಗೆ ಪೈಪೋಟಿ ಒಡ್ಡಿದರು. ಮತ್ತು ಇವರ ದೌರ್ಜನ್ಯವನ್ನು ಎದುರಿಸಿ ಪಕ್ಷದ ಬಾವುಟ ಎತ್ತಿ ಹಿಡಿದರು. ಹಿಂಸಾಚಾರ ಮಿತಿ ಮೀರಿದಾಗ ಕೋಲ್ಕತ್ತಾ ಹೈಕೋರ್ಟ್ ಮಧ್ಯಪ್ರವೇಶಿಸಿ ಚುನಾವಣಾ ಪ್ರಕ್ರಿಯೆಗೆ ಭದ್ರತೆ ಒದಗಿಸಲು ಕೇಂದ್ರ ಸಶಸ ಪೊಲೀಸ್ ಪಡೆಗಳನ್ನು ನಿಯೋಜಿಸು ವಂತೆ ಆದೇಶಿಸಿತು.

ಮೂರು ಬಾರಿ ಅಧಿಕಾರಕ್ಕೆ ಬಂದ ಪಕ್ಷವು ಅಽಕಾರದ ದರ್ಪದಲ್ಲಿ ಮಾನವೀಯತೆಯನ್ನು ಮರೆಯಿತು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ನಿರಂಕುಶ ಆಡಳಿತ ನಡೆಸಿತು. ಪಕ್ಷದ ಕಾರ್ಯಕರ್ತರಿಗೆ ವಿಚಾರದ ಪ್ರೇರಣೆಯ ವಿಷಯವಿಲ್ಲ. ನಾಯಕರಿಗೆ ಮತ್ತು ಕಾರ್ಯಕರ್ತ ರಿಗೆ ತಮ್ಮ ಏಕೈಕ ನಾಯಕಿ ಮಮತಾ ಬ್ಯಾನರ್ಜಿಯನ್ನು ಹೊಗಳಿ ಅಟ್ಟಕೇರಿಸುವುದೇ ಆದ್ಯತೆ ಯಾಗಿತ್ತು.

ಆಕೆಯ ಅಣ್ಣನ ಮಗ ಅಭಿಷೇಕ್ ಬ್ಯಾನರ್ಜಿಯನ್ನು ಮುಂದಿನ ವಾರಸುದಾರನಾಗಿ ಪಕ್ಷದಲ್ಲಿ ಪ್ರತಿಷ್ಠಾಪಿಸಲಾಯಿತು. ವಯಸ್ಸು ಸಣ್ಣದಿದ್ದರೂ ದೊಡ್ಡ ಜವಾಬ್ದಾರಿ ಹೊತ್ತು ಪಕ್ಷಕ್ಕೆ ದಿಕ್ಕು ತೋರಿಸುವ ಕೆಲಸದ ಬದಲು ಕೇವಲ ಭ್ರಷ್ಟಾಚಾರ ಮತ್ತು ತೋಳ್ಬಲದ ರಾಜಕೀಯವನ್ನು ಪ್ರಾಧಾನ್ಯವಾಗಿಟ್ಟು ಆತ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದ.

ಅಭಿಷೇಕ್ ಬ್ಯಾನರ್ಜಿಯ ನೇತೃತ್ವದಲ್ಲಿ ಟಿಎಂಸಿ ನಾಯಕರ ಮತ್ತು ಕಾರ್ಯಕರ್ತರ ಗೂಂಡಾಗಿರಿಗೆ ತಡೆ ಇಲ್ಲವಾಯಿತು. ತತ್ಪರಿಣಾಮ ‘ಕಟ್ ಮನಿ’ ಹೆಸರಿನಲ್ಲಿ ಪ್ರತಿಯೊಂದು ಕೆಲಸಕ್ಕೂ ಹಣ ವಸೂಲಿ ಮಾಡುವ ದಂಧೆ ನಾಯಿಕೊಡೆಯಂತೆ ಹಬ್ಬಿತು. ಕಂಡ ಕಂಡವರ ಆಸ್ತಿಯನ್ನು ಅತಿಕ್ರಮಿಸುವ ಮಾಫಿಯಾಗಳು ಹುಟ್ಟಿಕೊಂಡವು. ಹಿಂದಿನ ಎಡರಂಗ ಸರಕಾರದ ಕಾರ್ಯ ಕರ್ತರು ಹಸಿರು ಬಣ್ಣ ಬಳಿದುಕೊಂಡು ಟಿಎಂಸಿ ಬಾವುಟ ಹಿಡಿದು ತಮ್ಮ ಕರಾಳ ದಂಧೆಯನ್ನು ಮುಂದುವರೆಸಿದರು.

2021ರ ನಂತರ ನಡೆದ 18 ಕ್ಷೇತ್ರಗಳ ಉಪಚುನಾವಣೆಯಲ್ಲಿ ಟಿಎಂಸಿ ಹದಿನೇಳರಲ್ಲಿ ಜಯ ಸಾಧಿಸಿತು ಈ ಗೆಲುವು ಮತದಾರರಿಗೆ ಮತದಾನ ಮಾಡಲು ಅವಕಾಶ ನೀಡದೆ ಗೂಂಡಾಗಿರಿಯ ಮೂಲಕ ಸಾಧಿಸಲಾಗಿತ್ತು.

ಟಿಎಂಸಿ ಗೂಂಡಾಗಿರಿಯ ಕಾರಣ ಬಿಜೆಪಿ ಕಾರ್ಯಕರ್ತರು ಹಲವಾರು ಕಡೆಗಳಲ್ಲಿ ರಾತ್ರಿಯ ಹೊತ್ತು ಪಕ್ಷದ ಕಚೇರಿಗೆ ಬಂದು ಮಲಗುವಂತಾಗಿತ್ತು. ಶಾಸಕರ ಮೇಲೆ ಹ ಮಾಡುವುದು ಮತ್ತು ಅವರನ್ನು ಬೆದರಿಸುವುದು ಸಾಮಾನ್ಯವಾಗಿತ್ತು. ಇವೆಲ್ಲದರ ನಡುವೆ ಐದು ವರ್ಷದ ಅವಧಿಯಲ್ಲಿ 77 ಬಿಜೆಪಿ ಶಾಸಕರ ಪೈಕಿ ಕೇವಲ ಒಂಬತ್ತು ಶಾಸಕರು ಮಾತ್ರ ಟಿಎಂಸಿಗೆ ಸೇರಿದರು. ಇವರ ದಬ್ಬಾಳಿಕೆ ದೌರ್ಜನ್ಯದಿಂದ ಬಿಜೆಪಿಯನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ.

ಮಮತಾ ಬ್ಯಾನರ್ಜಿ ಇಂಡಿ ಒಕ್ಕೂಟದ ಭಾಗವಾಗಿದ್ದರೂ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಗೆಲುವಿನ ಅತಿಯಾದ ಆತ್ಮವಿಶ್ವಾಸದಿಂದ ಒಕ್ಕೂಟದ ಪಕ್ಷಗಳನ್ನು ಕ್ಯಾರೆ ಎನ್ನಲಿಲ್ಲ. ಇವೆಲ್ಲದರ ನಡುವೆ ಮಮತಾಗೆ ಮರ್ಮಾಘಾತ ನೀಡಿದ್ದು ಚುನಾವಣಾ ಆಯೋಗದ ಎಸ್‌ಐಆರ್ ಮೂಲಕ ಮತಪಟ್ಟಿಯ ಪರಿಷ್ಕರಣೆ. ಎಸ್‌ಐಆರ್ ನಡೆಯದಂತೆ ಮಾಡಲು ನ್ಯಾಯಾಲಯದಲ್ಲಿ ಒಂದಾದ ಮೇಲೆ ಒಂದು ಕೇಸ್ ಹೂಡಿ ತಡೆಯುವ ವಿಫಲ ಯತ್ನ ಮಾಡಿದರು. ಅಂತಿಮ ಮತದಾರರ ಪಟ್ಟಿ ಸಿದ್ಧವಾದಾಗ 93 ಲಕ್ಷ ಮತದಾರರು ಪಟ್ಟಿಯಿಂದ ಹೊರಗುಳಿದರು. ಚುನಾವಣಾ ಆಯೋಗದ ಈ ಕ್ರಮದ ನಿರೀಕ್ಷೆ ಇಲ್ಲದ ಮಮತಾ ದಿನನಿತ್ಯ ಒಂದ ಒಂದು ನೆಪ ಮುಂದಿಟ್ಟುಕೊಂಡು ಸರ್ವೋಚ್ಚ ನ್ಯಾಯಾಲಯದ ಬಾಗಿಲು ಬಡಿದು ಬಡಿದು ಸುಸ್ತಾದರು.

ಮೇ ೪ರಂದು ವಿಧಾನ ಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದ ಹಾಗೆ ಟಿಎಂಸಿ ಸೋಲು ಖಚಿತವಾಗಿತ್ತು. ಮೇ 4ರ ನಂತರ ಮೊದಲ ಆಘಾತವೆಂದರೆ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದ -ಲ್ಟಾ ವಿಧಾನಸಭಾ ಕ್ಷೇತ್ರದ ಮರು ಮತದಾನ ನಡೆದಾಗ ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ ಸ್ಪರ್ಧೆಯಿಂದ ಹಿಂದೆ ಸರಿದದ್ದು. ಈ ಆಘಾತದಿಂದ ಹೊರಬರುವ ಮುನ್ನ ವಿರೋಧ ಪಕ್ಷದ ನಾಯಕರಾಗಿ ಶೋಹಬ್ ದೇಬ್ ಚಟ್ಟೋಪಾಧ್ಯಾಯ ನೇಮಕದ ಪತ್ರದಲ್ಲಿ ತಮ್ಮ ಸಹಿ ನಕಲು ಮಾಡಲಾಗಿದೆ ಎಂದು ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ವಿಧಾನಸಭಾ ಸ್ಪೀಕರ್ ಅವರಿಗೆ ದೂರು ನೀಡಿದರು. ತದನಂತರ ಎದ್ದ ಬಂಡಾಯದಲ್ಲಿ ಅರವತ್ತು ಶಾಸಕರು ತಮ್ಮದೇ ನಿಜವಾದ ಟಿಎಂಸಿ ಎಂದು ಘೋಷಿಸಿಕೊಂಡು ರಿತಬ್ರತಾ ಬ್ಯಾನರ್ಜಿಯವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಘೋಷಿಸಿದರು. ಇದರ ಬೆನ್ನ ಹಿಂದೆಯೇ ಇಪ್ಪತ್ತು ಲೋಕಸಭಾ ಸದಸ್ಯರು ಪ್ರತ್ಯೇಕ ಗುಂಪು ರಚಿಸಿಕೊಂಡರು. ಇದು ಸಾಲದು ಎಂಬಂತೆ ಮೂರು ರಾಜ್ಯಸಭಾ ಸದಸ್ಯರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು. ಕೋಲ್ಕತ್ತಾ ಮಹಾನಗರ ಪಾಲಿಕೆಯ ಮೇಯರ್ ಫಿರ್ಹಾದ್ ಹಕೀಂ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು ಹಾಗೂ ರಾಜ್ಯದ ಅನೇಕ ನಗರ ಪಾಲಿಕೆ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು.

ಟಿಎಂಸಿಯ ಅನೇಕ ಗೂಂಡಾಗಳನ್ನು ಸೊಂಟಕ್ಕೆ ಹಗ್ಗ ಕಟ್ಟಿ ಚಡ್ಡಿಯಲ್ಲಿ ಮೆರವಣಿಗೆ ಮಾಡಲಾ ಯಿತು. ಕಟ್ ಮನಿ ವಸೂಲಿ ಮಾಡುತ್ತಿದ್ದವರನ್ನು ಅಟ್ಟಾಡಿಸಿಕೊಂಡು ಮೊಟ್ಟೆ ಸೇವೆ ಮಾಡಲಾ ಯಿತು. ಟಿಎಂಸಿ ನಾಯಕರು ಹೆಲ್ಮೆಟ್ ಧರಿಸಿಕೊಂಡು ಓಡಾಡಬೇಕಾದ ದಯನೀಯ ಸ್ಥಿತಿಗೆ ತಲುಪಿದರು.

ಇಪ್ಪತ್ತೆಂಟು ವರ್ಷದ ಪಕ್ಷವು ಚುನಾವಣೆ ಸೋತ ಇಪ್ಪತ್ತೆಂಟು ದಿನಗಳಲ್ಲಿ ಅಸ್ತಿತ್ವವೇ ಮರೆಯಾಗುವ ಹಾಗೆ ಕುಸಿಯಿತು. ಕೇವಲ ಭ್ರಷ್ಟಾಚಾರ ಮತ್ತು ದುರಾಚಾರದ ಆಧಾರಿತವಾಗಿದ್ದ ಪಕ್ಷವು ಒಂದು ಸೋಲಿನಿಂದ ತತ್ತರಿಸಿ ಹೋಗಿ ಮಮತಾ ಬ್ಯಾನರ್ಜಿ ಕಟ್ಟಿದ್ದ ಮಣ್ಣಿನ ಕೋಟೆಯು ಸಂಪೂರ್ಣವಾಗಿ ಕುಸಿದಿದೆ. ಸೈದ್ಧಾಂತಿಕವಾಗಿ ಅಥವಾ ಯಾವುದೇ ನೀತಿ ಆಧಾರವಿಲ್ಲದೆ ಪಕ್ಷ ಕಟ್ಟಿದರೆ ಅದರ ಭವಿಷ್ಯ ಅಲ್ಪಾವಽ ಎಂಬುದನ್ನು ಮಗದೊಮ್ಮೆ ಟಿಎಂಸಿ ಸಾಬೀತು ಪಡಿಸಿದೆ.