ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‌Prakash Shesharaghavachar Column: ಕೇಸರಿಮಯವಾಯಿತು ಪಶ್ಚಿಮ ಬಂಗಾಳ

2016ರಲ್ಲಿ ಬಿಜೆಪಿ ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಕೇವಲ ಮೂರು ಸ್ಥಾನಗಳನ್ನು ಗಳಿಸಿತ್ತು. 2021ರಲ್ಲಿ ಅದರ ಬಲ 77ಕ್ಕೇರಿತು. 2026ರಲ್ಲಿ 207 ಸೀಟುಗಳನ್ನು ಗೆಲ್ಲುವ ಮೂಲಕ ಬಂಗಾಳವು ಕೇಸರಿಕರಣವಾಯಿತು. ಬಿಜೆಪಿ ಈ ಎತ್ತರಕ್ಕೆ ಬೆಳೆಯಲು ಅತ್ಯಂತ ಕಠಿಣ ಹಾದಿಯನ್ನು ತುಳಿದಿದೆ. ತೃಣಮೂಲ ಗೂಂಡಾಗಳ ರಾಜಕೀಯ ಹಿಂಸಾಚಾರದಲ್ಲಿ ಕಳೆದ ಹದಿನೈದು ವರ್ಷದಲ್ಲಿ 321 ಕಾರ್ಯಕರ್ತರು ತಮ್ಮ ಪ್ರಾಣವನ್ನು ಕೊಟ್ಟಿದ್ದಾರೆ.

ಕೇಸರಿಮಯವಾಯಿತು ಪಶ್ಚಿಮ ಬಂಗಾಳ

-

Profile
Ashok Nayak May 16, 2026 9:09 AM

ಪ್ರಕಾಶಪಥ

ಪ್ರಕಾಶ್‌ ಶೇಷರಾಘವಾಚಾರ್

ಬಿಜೆಪಿ ಮತ್ತು ಮೋದಿ ವಿರೋಧಿಗಳು, ಪಶ್ಚಿಮ ಬಂಗಾಳದ ಬಿಜೆಪಿಯ ವಿಜಯವನ್ನು ಎಸ್‌ಐಆರ್, ಚುನಾವಣಾ ಆಯೋಗ, ಓಟು ಚೋರಿ, ಕೇಂದ್ರೀ ಯ ಭದ್ರತಾ ಪಡೆಗಳ ದುರ್ಬಳಕೆಯಿಂದ ಜಯಿಸಿದೆ ಎಂದು ವ್ಯಾಖ್ಯಾನಿಸಿದರೆ, ಮತ್ತೆ ಕೆಲವರು ನೆಲಮಟ್ಟದ ಮಾಹಿತಿಯೇ ಇಲ್ಲದೆ ಮಮತಾ ಬ್ಯಾನರ್ಜಿಯ ಸೋಲನ್ನು ಚುನಾವಣಾ ವಂಚನೆಗೆ ಬಲಿಯಾಗಿದ್ದಾರೆ ಎಂದಿದ್ದಾರೆ.

ಹೀಗೆ ವಿಶ್ಲೇಷಣೆ ಮಾಡುವವರು ಬಂಗಾಳದ ವಾಸ್ತವಿಕತೆಯ ಅರಿವಿಲ್ಲದವರು. ಮೋದಿ ಸೋಲ ಬೇಕು ಎಂದು ಸದಾ ಬಯಸುವ ಈ ವರ್ಗಕ್ಕೆ ಮಮತಾ ಬ್ಯಾನರ್ಜಿಯ ದುರಾಡಳಿತದ ಆಳವನ್ನು ಅರಿಯುವುದು ಬೇಡವಾಗಿತ್ತು. ರಾಜಕೀಯ ಹತ್ಯೆ, ವಿರೋಧಿಗಳ ಮೇಲೆ ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರ, ಅವರ ನೋವು ಕೇಳದ ಇವರು ಬಿಜೆಪಿಯ ಜಯಕ್ಕೆ ಚುನಾವಣಾ ಆಯೋಗ ಕಾರಣ ಎಂದು ಸಮಾಧಾನ ಪಟ್ಟಿಕೊಂಡಿದ್ದಾರೆ.

ಹಿರಿಯ ಪತ್ರಕರ್ತರಾದ ಎಂಜೆ ಅಕ್ಬರ್ ತಮ್ಮ ಅಂಕಣದಲ್ಲಿ ಬರೆಯುತ್ತಾರೆ- ಸಾಮಾಜಿಕ ಮಾಧ್ಯಮಗಳ ಗಾಸಿಪ್ ದಾರಿಗಳಲ್ಲಿ ಒಂದು ಸುದ್ದಿ ಹರಡಿತು. ಕೋಲ್ಕತ್ತಾ ನಗರದ ಮಾರುಕಟ್ಟೆ ಗಳಲ್ಲಿ ಪರಂಪರೆಯ ಸಂಭ್ರಮಾಚರಣೆಯಲ್ಲಿ ಗಾಳಿಗೆ ಎರಚುವ ಕೇಸರಿ ಗುಲಾಲ್ ಪುಡಿ ಮುಗಿದು ಹೋಗಿದೆ.

ಹಸಿರು ಗುಲಾಲ್‌ಗೆ ಬೇಡಿಕೆ ಇರಲಿಲ್ಲ. ಹೆಚ್ಚಿನ ಮಾಧ್ಯಮಗಳು ಗಮನಿಸದಿದ್ದುದನ್ನು ಅಥವಾ ಒಪ್ಪಿಕೊಳ್ಳಲು ನಿರಾಕರಿಸಿದ್ದುದನ್ನು ಮಾರುಕಟ್ಟೆ ಈಗಾಗಲೇ ಅರಿತಿತ್ತು. ಸೋಮವಾರ ಮಧ್ಯಾಹ್ನಕ್ಕೆ ಚುನಾವಣಾ ಫಲಿತಾಂಶ ಜನರಿಗೆ ಈಗಾಗಲೇ ತಿಳಿದಿದ್ದುದನ್ನೇ ದೃಢಪಡಿಸಲಿದ್ದವು ಎಂದು.

ಇದನ್ನೂ ಓದಿ: ‌Prakash Shesharaghavachar Column: ಮಹಿಳಾ ಮೀಸಲಾತಿ ಮಸೂದೆಗೆ ಮತ್ತೆ ಸೋಲು

2016ರಲ್ಲಿ ಬಿಜೆಪಿ ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಕೇವಲ ಮೂರು ಸ್ಥಾನಗಳನ್ನು ಗಳಿಸಿತ್ತು. 2021ರಲ್ಲಿ ಅದರ ಬಲ 77ಕ್ಕೇರಿತು. 2026ರಲ್ಲಿ 207 ಸೀಟುಗಳನ್ನು ಗೆಲ್ಲುವ ಮೂಲಕ ಬಂಗಾಳವು ಕೇಸರಿಕರಣವಾಯಿತು. ಬಿಜೆಪಿ ಈ ಎತ್ತರಕ್ಕೆ ಬೆಳೆಯಲು ಅತ್ಯಂತ ಕಠಿಣ ಹಾದಿಯನ್ನು ತುಳಿದಿದೆ. ತೃಣಮೂಲ ಗೂಂಡಾಗಳ ರಾಜಕೀಯ ಹಿಂಸಾಚಾರದಲ್ಲಿ ಕಳೆದ ಹದಿನೈದು ವರ್ಷದಲ್ಲಿ 321 ಕಾರ್ಯಕರ್ತರು ತಮ್ಮ ಪ್ರಾಣವನ್ನು ಕೊಟ್ಟಿದ್ದಾರೆ.

ನೂರಾರು ಕಡೆ ಬಿಜೆಪಿ ಕಾರ್ಯಕರ್ತರು ತೃಣಮೂಲ ಗೂಂಡಾಗಳ ದಾಳಿಯಿಂದ ತಪ್ಪಿಸಿಕೊಳ್ಳಲು ರಾತ್ರಿಯ ಹೊತ್ತು ಪಕ್ಷದ ಕಚೇರಿಗೆ ಬಂದು ಮಲಗಬೇಕಾಗಿತ್ತು. ಅನೇಕ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುವ ಬೆದರಿಕೆಯನ್ನು ಎದುರಿಸಿ ಪಕ್ಷದ ಜೊತೆ ನಿಂತರು. ಕಾರ್ಯಕರ್ತರು ನಾನಾ ವಿಧವಾದ ಸಂಕಷ್ಟಗಳನ್ನು ಅನುಭವಿಸಿ ಪಕ್ಷವನ್ನು ಕಟ್ಟಿದರು.

ಸಂದೇಶ್ ಖಾಲಿಯ ಶಹಜಹಾನ್ ಶೇಖ್ ಹೆಣ್ಣು ಮಕ್ಕಳನ್ನು ಪಕ್ಷದ ಕಚೇರಿಗೆ ಕರೆದೊಯ್ದು ಮಾಡುತ್ತಿದ್ದ ಅತ್ಯಾಚಾರವನ್ನು ಬಿಜೆಪಿ ನಾಯಕಿ ರೇಖಾ ಪಾತ್ರ ಬಯಲು ಮಾಡುತ್ತಾರೆ. ಇಂದು ಷಹಜಹಾನ್ ಶೇಖ್ ಜೈಲಿನಲ್ಲಿ ಇದ್ದಾನೆ, ರೇಖಾ ಪಾತ್ರ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.

ಪಶ್ಚಿಮ ಬಂಗಾಳದ ಜನತೆಯು ಮಮತಾ ಬ್ಯಾನರ್ಜಿಯವರ ದಬ್ಬಾಳಿಕೆ, ಗೂಂಡಾಗಿರಿ ಮತ್ತು ಅತಿರೇಕದ ತುಷ್ಟೀಕರಣವನ್ನು ಮೌನವಾಗಿ ಸಹಿಸಿದ್ದರು. ಉತ್ತರ ಕೊಡುವ ಸಮಯಕ್ಕಾಗಿ ತಾಳ್ಮೆ ಯಿಂದ ಕಾದಿದ್ದರು. ಭಯಮುಕ್ತ ವಾತಾವರಣಕ್ಕಾಗಿ ಹಂಬಲಿಸುತ್ತಿದ್ದರು. ಕಳೆದ ಚುನಾ ವಣೆಯ ಹಿಂಸಾಚಾರವನ್ನು ಗಮನದಲ್ಲಿರಿಸಿಕೊಂಡು 2.5 ಲಕ್ಷ ಕೇಂದ್ರೀಯ ಭದ್ರತಾ ಪಡೆಯನ್ನು ರಾಜ್ಯಾದ್ಯಂತ ನಿಯೋಜಿಸಿತು.

Screenshot_5

2021ರಲ್ಲಿಯೂ ಕೇಂದ್ರೀಯ ಪಡೆಯನ್ನು ನಿಯೋಜಿಸಲಾಗಿತ್ತು ಆದರೂ ಹಿಂಸೆ ತಡೆಯಲಾಗಲಿಲ್ಲ, ಕಾರಣ ಆಗ ಕೇಂದ್ರೀಯ ಪಡೆಗಳು ರಾಜ್ಯ ಪೊಲೀಸರ ಅಧೀನದಲ್ಲಿ ಕೆಲಸ ಮಾಡುತ್ತಿದ್ದವು, ಈ ಬಾರಿ ಅದು ತಿರುವು ಮುರುವಾಗಿತ್ತು ಎಂದು ಕಳೆದ ನಾಲ್ಕು ತಿಂಗಳಿನಿಂದ ಬಂಗಾಳದ ಚುನಾವಣೆ ಯಲ್ಲಿ ತೊಡಗಿಸಿಕೊಂಡಿದ್ದ ರಾಜ್ಯದ ಸಂದೀಪ್ ಶೆಟ್ಟಿ ಹೇಳುತ್ತಾರೆ.

ಚುನಾವಣೆಗೆ ಮುನ್ನ ಹಲವಾರು ಟಿಎಂಸಿ ನಾಯಕರ ಮಾತುಗಳು ಬೀದಿ ಗೂಂಡಾಗಳ ವರಸೆ ಯನ್ನು ಹೋಲುತ್ತಿತ್ತು. ತಾವು ಈಗಾಗಲೇ ಗೆದ್ದಾಗಿದೆ ಎಂಬ ಸೂಕ್ಕಿನಿಂದ ವಿರೋಧಿಗಳ ವಿರುದ್ಧ ವಾಗ್ದಾಳಿ, ಬೆದರಿಕೆ ನಿರ್ಲಜ್ಜವಾಗಿ ಒಡ್ಡುತ್ತಿದ್ದರು. ಟಿಎಂಸಿ ರಾಜ್ಯಸಭಾ ನಾಯಕ ಡೆರಿಕ್ ಒಬ್ರೇನ್‌ ಅವರು ‘ನರೇಂದ್ರ ಮತ್ತು ಅಮಿತ್’ ಎಂದು ಏಕವಚನದಲ್ಲಿ ಉದ್ದೇಶಿಸಿ ಮಾತನಾಡುವ ವಿಡಿಯೊ ಹಂಚಿಕೊಳ್ಳುತ್ತಾರೆ.

ಮಮತಾ ಬ್ಯಾನರ್ಜಿ ಉತ್ತರಾಧಿಕಾರಿ ಅಭಿಷೇಕ್ ಬ್ಯಾನರ್ಜಿ ಅಮಿತ್ ಶಾ ಉದ್ದೇಶಿಸಿ ‘ನಿಮಗೆ ಧೈರ್ಯ ಇದ್ದರೆ ಮತ್ತು ನಿಜವಾದ ಗಂಡಸಾದರೆ, 4 ರಂದು ಕೋಲ್ಕತಾದಲ್ಲಿ ಇರಿ; 12 ಗಂಟೆಯ ನಂತರ ನೋಡೋಣ. ಈ ಜವಾಬ್ದಾರಿಯನ್ನು ನಾನು ಸ್ವತಃ ತೆಗೆದುಕೊಳ್ಳುತ್ತೇನೆ. ದೆಹಲಿಯ ಯಾವ ಅಪ್ಪ ಬಂದು ಯಾರನ್ನು ಉಳಿಸುತ್ತಾನೆ ಎಂಬುದನ್ನು ನೋಡುತ್ತೇನೆ’ ಎನ್ನುತ್ತಾರೆ.

ಟಿಎಂಸಿ ವಕ್ತಾರ ರಿಜುದತ್ತಾ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮರವರಿಗೆ ‘ನೀವು ಎಲ್ಲೇ ಇರಿ, ನಿಮ್ಮ ಮೇಲೆ ಮೊಕದ್ದಮೆ ದಾಖಲಿಸಿ ಹುಡುಕಿ ಎಳೆದು ತರುತ್ತೇವೆ‘ ಎಂದು ಬೆದರಿಕೆಯೊಡ್ಡುತ್ತಾರೆ. ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಅತ್ಯಂತ ಅವಹೇಳನಕಾರಿಯಾಗಿ ‘ಗೂಂಡಾ ಮತ್ತು ಜದ್’ ಎಂದು ಕರೆದು ‘ತಲೆಕೆಳಗಾಗಿ ನೇಣು ಹಾಕುತ್ತೇನೆ’ ಎಂದು ಬೆದರಿಕೆ ಹಾಕುತ್ತಾರೆ.

ಡೆರಿಕ್ ಒಬ್ರೇನ್ ‘ಬಿಜೆಪಿ ಕೋಲ್ಕತ್ತಾದಲ್ಲಿ ಎಷ್ಟು ಸೀಟು ಗೆಲ್ಲುತ್ತದೊ ಅಷ್ಟು ಟಿಎಂಸಿ ಸಂಸದರು ತಲೆ ಬೋಳಿಸಿಕೊಳ್ಳುತ್ತಾರೆ’ ಎಂದು ಘೋಷಿಸುತ್ತಾರೆ. ಇದೀಗ ಬಿಜೆಪಿಯ ಆರು ಜನ ಶಾಸಕರಾಗಿ ಅಲ್ಲಿ ಆಯ್ಕೆಯಾಗಿದ್ದಾರೆ.

ಆರ್‌ಜೆ ಕರ್ ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾಗಿದ್ದ ಅಭಯಾಳ ತಾಯಿ ರತ್ನ ದೇಬನಾಥ್ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಾರೆ. ತಮ್ಮ ಮತ ಚಲಾಯಿಸಲು ಹೋದಾಗ ಟಿಎಂಸಿ ಕಾರ್ಯಕರ್ತರು ಅವರ ವಿರುದ್ಧ ಘೋಷಣೆ ಕೂಗಿ ಗಲಾಟೆಯೆಬ್ಬಿಸುತ್ತಾರೆ. ಈ ಎಲ್ಲಾ ದೌರ್ಜನ್ಯವನ್ನು ಮೌನವಾಗಿ ಜನ ಸಹಿಸಿದ್ದರು. ಆದರೆ ಟಿಎಂಸಿ ಹೀನಾಯ ಸೋಲು ಅನುಭವಿಸಿದ ಕೂಡಲೇ ಅದುಮಿಟ್ಟಿದ್ದ ಆಕ್ರೋಶ ಒಮ್ಮೆಗೆ ಸ್ಪೋಟಗೊಂಡಿತು. ಮಮತಾರವರ ದಬ್ಬಾಳಿಕೆಯ ಆಡಳಿತ ಮೇ 4ರಂದು ಕೊನೆಗೊಂಡಾಗ ಪಶ್ಚಿಮ ಬಂಗಾಳದ ಜನತೆ ಅಕ್ಷರಶಃ ಮತ್ತೊಮ್ಮೆ ಸ್ವಾತಂತ್ರ್ಯ ದೊರೆತ ಹಾಗೆ ಸಂಭ್ರಮಿಸಿದ್ದಾರೆ.

ಬಿಜೆಪಿ ಗೆದ್ದ ಕೂಡಲೇ ಮತ್ತೊಂದು ಬದಲಾವಣೆಯೆಂದರೆ ಟಿಎಂಸಿ ಗೂಂಡಾಗಳು ವಶಪಡಿಸಿ ಕೊಂಡಿದ್ದ ಮಂದಿರ, ಶಾಲೆ, ಮೈದಾನ ಮುಂತಾದ ಜಾಗಗಳು ತಕರಾರಿಲ್ಲದೆ ತೆರವಾಗುತ್ತಿದೆ. ಸುಂದರ ಬನದಲ್ಲಿ ಆರ್ಯನ್ ರಾಜ್ ಸೊಸೈಟಿಯು ಬಡ ಮಕ್ಕಳಿಗೆ ತೆರೆದಿದ್ದ ಶಾಲೆಯನ್ನು ಟಿಎಂಸಿ ಗೂಂಡಾಗಳು ವಶಪಡಿಸಿಕೊಂಡು ಬೀಗ ಹಾಕಿದ್ದರು.

ಇದರ ಮುಖ್ಯಸ್ಥೆ ಅಮೃತ ಬೋಸ್ ಗುಪ್ತಾ ಬದಲಾವಣೆಯ ಗಾಳಿಯನ್ನು ಗ್ರಹಿಸಿ ಬಿಜೆಪಿಯ ಪರವಾಗಿ ಚುನಾವಣೆಯಲ್ಲಿ ಪ್ರಚಾರ ಮಾಡಿದರು. ಅವರ ನಿರೀಕ್ಷೆಯಂತೆ ಬಿಜೆಪಿಯು ಚುನಾವಣೆ ಯಲ್ಲಿ ಗೆದ್ದ ಕೂಡಲೇ ಶಾಲೆಗೆ ಹಾಕಿದ್ದ ಬೀಗವನ್ನು ಒಡೆದು ಕಟ್ಟಡವನ್ನು ತಮ್ಮ ವಶಕ್ಕೆ ಪಡೆದು ಕೊಂಡರು.

ಅಸನ್ಸೋಲ್ ನ ಬಸ್ತಿನ್ ಬರ್ಜಾನ ದುರ್ಗಾ ಮಂದಿರವನ್ನು ಕಳೆದ ಹತ್ತಾರು ವರ್ಷಗಳಿಂದ ಮುಚ್ಚಲಾಗಿತ್ತು. ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಇದ್ದ ಕಾರಣ ಮಂದಿರವನ್ನು ತೆರೆಯಲು ಅವಕಾಶ ಕೊಟ್ಟಿರಲಿಲ್ಲ. ಕೇವಲ ದುರ್ಗಾ ಪೂಜೆ ಮತ್ತು ಲಕ್ಷ್ಮೀ ಪೂಜೆಗೆ ಮಾತ್ರ ಮಂದಿರದ ದ್ವಾರ ತೆಗೆಯಲಾಗುತ್ತಿತ್ತು. ಸಚಿವೆ ಅಂಗನಿ ಮಿತ್ರ ಈ ಕ್ಷೇತ್ರದಿಂದ ಗೆದ್ದ ಕೂಡಲೇ ಹಿಂದೂ ಯುವಕರು ಬಂದು ಮಂದಿರದ ದ್ವಾರ ತೆರೆಯಿಸಿದರು.

2011ರಲ್ಲಿ ತೃಣಮೂಲ ಅಧಿಕಾರಕ್ಕೆ ಬಂದ ಮೇಲೆ ಟಿಎಂಸಿ ಗೂಂಡಾಗಳು ಕಮ್ಯುನಿಸ್ಟ್, ಬಿಜೆಪಿ ಮತ್ತು ಕಾಂಗ್ರೆಸ್ ಕಚೇರಿಗಳನ್ನು ವಶಪಡಿಸಿಕೊಂಡಿದ್ದರು. ನಡಿಯಾ ಜಿಲ್ಲೆಯ ಕರೀಂಪುರದಲ್ಲಿನ ಕಾಂಗ್ರೆಸ್ ಕಚೇರಿಯನ್ನು ತೃಣಮೂಲ ಸೋಲುತ್ತಿದ್ದ ಹಾಗೆಯೇ ತಮ್ಮ ವಶಕ್ಕೆ ಪಡೆದುಕೊಂಡರು. ಹತ್ತಾರು ಬಿಜೆಪಿ ಕಚೇರಿಗಳನ್ನು ಟಿಎಂಸಿ ಗೂಂಡಾಗಳು ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದರು.

ಫಲಿತಾಂಶ ಹೊರ ಬೀಳುತ್ತಿದ್ದಂತೆ ಯಾವುದೇ ಪ್ರತಿರೋಧವಿಲ್ಲದೆ ಕಚೇರಿಗಳನ್ನು ತೆರವುಗೊಳಿಸ ಲಾಗಿದೆ. ಕೋಲ್ಕತ್ತಾ ನಗರದಲ್ಲಿ ಪ್ರಮುಖ ಟಿಎಂಸಿ ನಾಯಕ ತನ್ನ ಮನೆಯ ಮುಂದಿನ ಆಟದ ಮೈದಾನಕ್ಕೆ ಬೇಲಿ ಹಾಕಿ ತನ್ನ ಸ್ವಂತ ಉಪಯೋಗಕ್ಕೆ ಬಳಸುತ್ತಿರುತ್ತಾನೆ. ಚುನಾವಣಾ ಫಲಿತಾಂಶ ಬಂದ ಕೂಡಲೇ ಬಿಜೆಪಿಯ ಯುವಕರು, ಸ್ಥಳೀಯ ನಾಗರಿಕರು ಮೈದಾನದಲ್ಲಿ ನಿರ್ಮಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತು ಎಸೆದು ಸಾರ್ವಜನಿಕರ ಉಪಯೋಗಕ್ಕೆ ತೆರೆಯಲಾಗಿದೆ.

ಬೀರ್‌ಭುಮ್‌ನ ಜಗನ್ನಾಥ ಮಂದಿರದ ಪ್ರಸಾದದ ಕೊಣೆಯನ್ನು ಅಕ್ರಮವಾಗಿ ವಶಕ್ಕೆ ಪಡೆದು ಟಿಎಂಸಿ ಪಕ್ಷದ ಕಚೇರಿಯಾಗಿ ಬಳಸಲಾಗುತ್ತಿತ್ತು. ಮೇ 5ರಂದು ಈ ಕೋಣೆಯು ಮಂದಿರದ ಸುಪರ್ದಿಗೆ ಮರಳಿದೆ. ಅನೇಕ ಹೆzರಿಗಳಲ್ಲಿ ಟಿಎಂಸಿ ಗೂಂಡಾಗಳು ಅಕ್ರಮವಾಗಿ ವಾಹನಗಳಿಂದ ಟೋಲ್ ಸಂಗ್ರಹ ಮಾಡುತ್ತಿದ್ದರು. ಪೊಲೀಸರು ಇವರೊಂದಿಗೆ ಶಾಮೀಲಾಗಿ ಇದನ್ನು ತಡೆಯು ತ್ತಿರಲಿಲ್ಲ.

ಸರ್ಕಾರ ಬದಲಾದ ಕೂಡಲೇ ಈ ಟೋಲ್‌ಗಳು ಈಗ ಕಾಣೆಯಾಗಿವೆ. ಹೊಸ ಸರ್ಕಾರ ಬರುತ್ತಿದ್ದ ಹಾಗೆ ಟಿಎಂಸಿ ಜನ ಸಾಮಾನ್ಯ ರಿಗೆ ನೀಡಿದ್ದ ತೊಂದರೆಗಳು ಬಗೆಹರಿಯುತ್ತಿದೆ. ಟಿಎಂಸಿ ಗೂಂಡಾ ಗಳು ಈಗ ಬಂಧನದ ಭೀತಿಯಿಂದ ಭೂಗತರಾಗುತ್ತಿದ್ದಾರೆ.

ಬಿಜೆಪಿಗೆ ಪಶ್ಚಿಮ ಬಂಗಾಳದಲ್ಲಿನ ಗೆಲುವಿನೊಂದಿಗೆ ಭಾವನಾತ್ಮಕ ಸಂಬಂಧವಿದೆ. ಜನಸಂಘದ ಸಂಸ್ಥಾಪಕ ಅಧ್ಯಕ್ಷ ಶ್ಯಾಮಪ್ರಸಾದ್ ಮುಖರ್ಜಿಯವರು ಜನಿಸಿದ್ದು ಕೋಲ್ಕತ್ತಾದಲ್ಲಿ ಮತ್ತು ಸಂಘದ ಸಂಸ್ಥಾಪಕ ಡಾ| ಹೆಡ್ಗೇವಾರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಬಂಗಾಳದ ಕ್ರಾಂತಿ ಕಾರಿಗಳೊಂದಿಗೆ ಕೈಜೋಡಿಸಿದ ಪುಣ್ಯಭೂಮಿಯೂ ಕೂಡಾ ಕೋಲ್ಕತ್ತಾ.

ಐದು ದಶಕಗಳ ತರುವಾಯ ಪಶ್ಚಿಮ ಬಂಗಾಳ ಪೊರಿಬರ್ತನ್ ಕಂಡಿದೆ. ಮೂವತ್ತೈದು ವರ್ಷದ ಎಡರಂಗ ಸರ್ಕಾರ, ಹದಿನೈದು ವರ್ಷದ ಮಮತಾ ಸರ್ಕಾರದಲ್ಲಿ ಕಂಡಿದ್ದು ಉದ್ಯೋಗ, ಕೈಗಾರಿಕೆ, ಪ್ರಗತಿ, ಸುರಕ್ಷತೆಯನ್ನಲ್ಲ, ಕಂಡಿದ್ದು ಕೇವಲ ಹಿಂಸಾಚಾರ, ಕೊಲೆ, ಮಹಿಳೆಯರ ಅಪಹರಣ ಮಾನಭಂಗ ಮತ್ತು ಅವ್ಯಾಹತವಾಗಿ ಅಕ್ರಮವಾಗಿ ಬಂಗ್ಲಾ ನುಸುಳಿಕೋರರು ಸ್ಥಳೀಯರ ಉದ್ಯೋಗಕ್ಕೆ ವ್ಯಾಪಾರಕ್ಕೆ ಕಲ್ಲು ಹಾಕುವುದನ್ನು ಮಾತ್ರ.

ಪಶ್ಚಿಮ ಬಂಗಾಳದ ಪರಿಸ್ಥಿತಿಯು ಅತ್ಯಂತ ಸೂಕ್ಷ ವಾಗಿ ಕೈತಪ್ಪಿ ಹೋಗುವ ಆತಂಕ ಕಾಡುತ್ತಿತ್ತು. ಮಮತಾರವರ ಅತಿರೇಕದ ತುಷ್ಟೀಕರಣ ರಾಜಕಾರಣದ ನೀತಿಯು ಸಮಾಜವನ್ನು ಹಿಂಡಿ ಹಿಪ್ಪೆ ಮಾಡಿತ್ತು. ಬಹುಸಂಖ್ಯಾತ ಸಮಾಜ ಹಿಂಸೆಯ ಭೀತಿಯಿಂದ ಭಯದ ವಾತಾವರಣದಲ್ಲಿ ನಲುಗಿ ಹೋಗಿತ್ತು. ಇದೆಲ್ಲದರ ಪರಿಣಾಮವಾಗಿಯೇ ಮತದಾರ ತನ್ನ ತೀರ್ಪನ್ನು ಸ್ಪಷ್ಟವಾಗಿ ಬಿಜೆಪಿಯ ಪರವಾಗಿ ನೀಡಿದ್ದಾನೆ. ರಾಷ್ಟ್ರೀಯ ಹಿತಾಸಕ್ತಿ ಕಾಪಾಡಲು ಬಿಜೆಪಿ ಮಾತ್ರ ಸಮರ್ಥ ಎಂಬ ಸಂದೇಶವು ಈ ಮೂಲಕ ರವಾನೆಯಾಗಿದೆ.