M J Akbar Column: ಮಮ್ದಾನಿ: ಅಮೆರಿಕದ ಬೀದಿಗಳಿಂದ ಎದ್ದ ಕೋಪ ಸಂದೇಶ
ಗಾಜಾ ಪಟ್ಟಿಯಲ್ಲಿ ಆಹಾರದ ಪೊಟ್ಟಣಕ್ಕಾಗಿ ಓಡುವ ಜನರು ಬಾಂಬ್ ಸ್ಫೋಟದಲ್ಲಿ ಛಿದ್ರಗೊಂಡು ಮಾಂಸದ ಮುದ್ದೆಯಾಗಿ ಹಾರುವ ಹಾಗೂ ಮಕ್ಕಳು ಅಸಹಾಯಕರಾಗಿ ಸಾವಿರಾರು ಸಂಖ್ಯೆಯಲ್ಲಿ ಸಾಯುವ ಭಯಾನಕ ಚಿತ್ರಗಳು ಜಗತ್ತಿನೆಲ್ಲೆಡೆ ಹರಿದಾಡುತ್ತಿರುವಾಗ ಅದರಿಂದ ತನ್ನ ವಿಶ್ವಾಸಾರ್ಹತೆಗೆ ದೀರ್ಘಾವಧಿಯಲ್ಲಿ ಆಗುವ ಹಾನಿಯನ್ನು ಲೆಕ್ಕಹಾಕಿದರೆ ಕ್ರಮೇಣ ಇಸ್ರೇಲ್‌ಗೇ ಶಾಕ್ ಆಗಬಹುದು.


ಅಕ್ಬರ್ ನಾಮಾ
ಎಂ.ಜೆ.ಅಕ್ಬರ್
ಅಮೆರಿಕದ ಗಾಳಿಯಲ್ಲಿ ಈಗಲೂ ಅರವತ್ತರ ದಶಕದ ಕೊನೆಕೊನೆಯ ವಿಚಿತ್ರ ನಿಡುಸುಯ್ಯುವಿಕೆ ಯೊಂದು ಹರಿದಾಡುತ್ತಿದೆ. ಶಾಂತಿ ಸ್ಥಾಪನೆಯ ಪ್ರಕ್ರಿಯೆಗೆ ಮಿಲಿಟರಿ ಬಳಕೆ ಅನಿವಾರ್ಯ ಎಂದು ನಂಬುವ ಕಟ್ಟರ್ ಬಲಪಂಥೀಯ ಚಿಂತನೆಯೊಂದು ಶ್ವೇತಭವನದ ಕೋಣೆಯೊಳಗೆ ಸುಳಿದಾಡುವುದು ಒಂದೆಡೆಯಾದರೆ, ಇನ್ನೊಂದೆಡೆ ಯುದ್ಧದಲ್ಲಿ ಸಂತ್ರಸ್ತರಾದವರ ಬಗ್ಗೆ ಅತ್ಯಂತ ಕಕ್ಕುಲಾತಿಯಿಂದ ಉರಿಯುವ ಬೆಂಕಿಯೊಂದು ಅದೇ ಶ್ವೇತಭವನದ ಕ್ಯಾಂಪಸ್‌ನಲ್ಲೇ ಕಾಣಸಿಗುತ್ತದೆ.
ಹಿಂದೆ ರಿಚರ್ಡ್ ನಿಕ್ಸನ್ ಮತ್ತು ವಿಯೆಟ್ನಾಂ ಯುದ್ಧ; ಈಗ ಡೊನಾಲ್ಡ್ ಟ್ರಂಪ್ ಮತ್ತು ಗಾಜಾ ಹಿಂಸಾಚಾರ. ಸಮಾನಾಂತರಗಳು ಸಮಾನವಾಗಿರುವುದು ಅಪರೂಪ. ಅವು ಸಮಾನವಾಗಿರಲು ಸಾಧ್ಯ ಕೂಡ ಇಲ್ಲ, ಏಕೆಂದರೆ ಇತಿಹಾಸ ಮತ್ತು ಭೂಗೋಳದ ನಡುವಿನ ಸಂಘರ್ಷ ಯಾವಾಗಲೂ ವಿಭಿನ್ನವಾಗಿಯೇ ಇರುತ್ತದೆ.
ಟ್ರಂಪ್ ಬಳಿ ಆಗಾಗ ಪ್ರಾರ್ಥಿಸಲು, ಪದೇ ಪದೆ ಮನವೊಲಿಸಲು ಹಾಗೂ ನಿರಂತರವಾಗಿ ರಾಜತಾಂತ್ರಿಕ ಜಾಣ್ಮೆಯನ್ನು ಮೆರೆಯಲು ಹೆನ್ರಿ ಕಿಸಿಂಜರ್ ಇಲ್ಲ. ಆದರೆ ಟ್ರಂಪ್ ತಮಗೆ ತಾವೇ ಕಿಸಿಂಜರ್ ಆಗುತ್ತಾರೆ ಎಂಬುದು ಗಮನಾರ್ಹ ವಿಚಾರ. ಬೀದಿಗಳು ಹೊತ್ತಿ ಉರಿಯುತ್ತಿದ್ದಾಗ ಕನ್ನಡಿ ಯಾವಾಗಲೂ ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತದೆ. ಆ ಉರಿ ಈಗ ಅಟ್ಲಾಂಟಿಕ್ ಸಮುದ್ರವನ್ನೂ ದಾಟಿ ಯುರೋಪ್‌ಗೆ ಹೋಗಿ ತಲುಪಿದೆ.
ಗಾಜಾ ಪಟ್ಟಿಯಲ್ಲಿ ಆಹಾರದ ಪೊಟ್ಟಣಕ್ಕಾಗಿ ಓಡುವ ಜನರು ಬಾಂಬ್ ಸ್ಫೋಟದಲ್ಲಿ ಛಿದ್ರಗೊಂಡು ಮಾಂಸದ ಮುದ್ದೆಯಾಗಿ ಹಾರುವ ಹಾಗೂ ಮಕ್ಕಳು ಅಸಹಾಯಕರಾಗಿ ಸಾವಿರಾರು ಸಂಖ್ಯೆಯಲ್ಲಿ ಸಾಯುವ ಭಯಾನಕ ಚಿತ್ರಗಳು ಜಗತ್ತಿನೆಲ್ಲೆಡೆ ಹರಿದಾಡುತ್ತಿರುವಾಗ ಅದರಿಂದ ತನ್ನ ವಿಶ್ವಾಸಾರ್ಹತೆಗೆ ದೀರ್ಘಾವಧಿಯಲ್ಲಿ ಆಗುವ ಹಾನಿಯನ್ನು ಲೆಕ್ಕಹಾಕಿದರೆ ಕ್ರಮೇಣ ಇಸ್ರೇಲ್‌ಗೇ ಶಾಕ್ ಆಗಬಹುದು.
ಇಸ್ರೇಲಿನಲ್ಲಿ ನಡೆಯುತ್ತಿದ್ದ ಸಂಗೀತೋತ್ಸವದ ಮೇಲೆ ಹಮಾಸ್ ಬಂಡುಕೋರರು ಭೀಕರ ಹಾಗೂ ಅಕ್ಷಮ್ಯ ದಾಳಿ ನಡೆಸಿ ನೂರಾರು ಜನರನ್ನು ಕೊಂದಾಗ ಇಡೀ ಜಗತ್ತು ಇಸ್ರೇಲ್‌ನ ಪರ ನಿಂತಿತ್ತು. ಆದರೆ ಈಗ ಬ್ರಿಟನ್ನಿನ ಅತ್ಯಂತ ಜನಪ್ರಿಯ ಗ್ಲಾಸ್ಟನ್‌ಬರಿ ಸಂಗೀತೋತ್ಸವದಲ್ಲಿ ‘ಐಡಿಎಫ್ ಸಾಯಲಿ’ ಎಂಬ ಪ್ರತಿಧ್ವನಿ ಮೊಳಗುತ್ತಿದೆ.
ಇದನ್ನೂ ಓದಿ: M J Akbar Column: ಯುದ್ಧ ಯಾವಾಗ ಮುಗಿಯುತ್ತದೆ ಎಂಬುದು ದೇವರಿಗೇ ಗೊತ್ತು !
ಸ್ಟಾರ್ ಸಂಗೀತಗಾರರು ಪ್ಯಾಲೆಸ್ತೀನ್‌ನ ಸಂಕಷ್ಟವನ್ನು ಇಡೀ ಜಗತ್ತಿಗೆ ಕೂಗಿ ಹೇಳುತ್ತಿದ್ದಾರೆ. ಬ್ರಿಟನ್ನಿನ ಅಧಿಕಾರಿಗಳು ಈ ದಾಳಿಯ ವಿಡಿಯೋ ತುಣುಕು ಬಿಬಿಸಿಗೆ ಸಿಕ್ಕಿದ್ದು ಹೇಗೆ ಎಂದು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸರಕಾರಗಳು ಬೀದಿ ಹೋರಾಟದ ಬಿಸಿ ತಟ್ಟಿಸಿಕೊಳ್ಳದೆ ಇರಲು ಸಾಧ್ಯವಿಲ್ಲ. ಐರ್ಲೆಂಡ್ ದೇಶ ಇಸ್ರೇಲ್ ನಿಂದ ಆಮದು ವ್ಯವಹಾರಗಳನ್ನು ನಿಷೇಧಿಸಿದೆ.
ಸ್ಪೇನ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಇಸ್ರೇಲ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿವೆ. ಈಗ, ಪ್ಯಾಲೆಸ್ತೀನ್‌ನ ಹೋರಾಟವನ್ನು ಹೊಗಳಿದ ಮೇಲೂ ನ್ಯೂಯಾರ್ಕ್ ನಗರದಲ್ಲಿ ಜಗತ್ತಿನ ಅತ್ಯಂತ ಶಕ್ತಿಶಾಲಿ ಮೇಯರ್ ಹುದ್ದೆಗೆ ಡೆಮಾಕ್ರಟಿಕ್ ಪಕ್ಷದಿಂದ ಸಂಪೂರ್ಣ ಹೊರಗಿನ ವ್ಯಕ್ತಿಯೊಬ್ಬ ಪ್ರಾಥಮಿಕ ಆಯ್ಕೆ ಪ್ರಕ್ರಿಯೆಯಲ್ಲಿ ಜಯ ಗಳಿಸಿದ್ದಾನೆ. ಆತ ಜೊಹ್ರಾನ್ ಮಮ್ದಾನಿ. ಈಗ ನ್ಯೂಯಾರ್ಕ್ ಮೇಯರ್ ಚುನಾವಣೆಯಲ್ಲಿ ಅತ್ಯಂತ ಪ್ರಬಲ ಹುರಿಯಾಳು.
ಜನರಿಗೂ ಆತ ಅಚ್ಚುಮೆಚ್ಚು. ಆದರೆ, ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿದ್ದ ಆಂಡ್ರೂ ಕೌಮೋ ಎಂಬ ರಾಜಕುಮಾರ ಕಮ್ ವಕೀಲನನ್ನು ಜೊಹ್ರಾನ್ ಮಮ್ದಾನಿ ಸೋಲಿಸಿದ್ದಕ್ಕೆ ಇದೇ ಪ್ರಮುಖ ಕಾರಣವೇನಲ್ಲ. ಎಲ್ಲರಿಗೂ ಗಂಟೆಗೆ ೩೦ ಡಾಲರ್ ಕನಿಷ್ಠ ವೇತನ, ಸಾರ್ವತ್ರಿಕ ಮಕ್ಕಳ ಆರೈಕೆ ಯೋಜನೆ, ಉಚಿತ ಬಸ್ ಪ್ರಯಾಣ ಹಾಗೂ ಬಾಡಿಗೆ ಮೊತ್ತದ ಮೇಲೆ ಮಿತಿ ಹೇರುವುದೇ ಮೊದಲಾದ ಸೌಕರ್ಯಗಳನ್ನು ಜನರಿಗೆ ನೀಡುವ ಭರವಸೆಯನ್ನು ಮಮ್ದಾನಿ ನೀಡುತ್ತಿದ್ದಾರೆ.
ಅದಕ್ಕೆ ಬೇಕಾದ ಹಣ ಸಂಗ್ರಹಿಸಲು ಶತಕೋಟ್ಯಧಿಪತಿಗಳು ಮತ್ತು ಕೋಟ್ಯಧೀಶರಿಗೆ ದುಬಾರಿ ತೆರಿಗೆ ವಿಽಸುವ ಚಿಂತನೆ ನಡೆಸಿದ್ದಾರೆ. ಅದರ ಜತೆಗೆ, ನ್ಯೂಯಾರ್ಕ್ ನಗರಕ್ಕೆ ಇಸ್ರೇಲಿನ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಕಾಲಿಟ್ಟರೆ ಬಂಧಿಸುವುದಾಗಿಯೂ ಹೇಳಿಕೊಂಡಿದ್ದಾರೆ. ಇದನ್ನೆಲ್ಲ ಕೇಳಿದ ಮೇಲೆ ಡೊನಾಲ್ಡ್ ಟ್ರಂಪ್ ಸುಮ್ಮನಿರುತ್ತಾರಾ? ಮಮ್ದಾನಿ ಒಬ್ಬ ಕಮ್ಯುನಿಸ್ಟ್ ಹುಚ್ಚ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಮ್ದಾನಿಯನ್ನು ಜನರು ಆಯ್ಕೆ ಮಾಡಿದರೆ ಮತ್ತು ಮೇಯರ್ ಆದ ಮೇಲೆ ಅವರೇನಾದರೂ ಈಗ ಹೇಳುತ್ತಿರುವುದನ್ನೇ ಕಾರ್ಯರೂಪಕ್ಕೆ ಇಳಿಸಿದರೆ ನ್ಯೂಯಾರ್ಕ್ ನಗರಕ್ಕೆ ನೀಡುವ ಅನುದಾನದಲ್ಲಿ ೧೦೦ ಬಿಲಿಯನ್ ಡಾಲರ್ ಕಡಿತಗೊಳಿಸುವುದಾಗಿಯೂ ಟ್ರಂಪ್ ಬೆದರಿಕೆ ಹಾಕಿದ್ದಾರೆ. ತನಗೆ ರೆವರೆಂಡ್ ಮಾರ್ಟಿನ್ ಲೂಥರ್ ಕಿಂಗ್ ಅವರೇ ಸ್ಪೂರ್ತಿಯೆಂದು ಮಮ್ದಾನಿ ಹೇಳಿಕೊಳ್ಳುತ್ತಾರೆ. ಅಲ್ಲಿಗೆ, ಅರವತ್ತರ ದಶಕದ ಜತೆಗೆ ಅವರ ವಿಷಯದಲ್ಲಿದ್ದ ಕಂದಕ ಕೂಡ ಮುಚ್ಚಿದಂತಾಯಿತು.
ತಲೆಬಾಗಿ ಸೇವೆಗೆ ನಿಂತ ಮಹಾರಾಜನ ಲೋಗೋವನ್ನು ಏರ್ ಇಂಡಿಯಾ ಬದಲಿಸಿಕೊಳ್ಳುವ ಸಮಯ ಬಂದಿದೆ. ಕಣ್ಣೀರು ಸುರಿಸುವ ಮೊಸಳೆಯ ಲೋಗೋ ಈಗ ಏರ್ ಇಂಡಿಯಾಕ್ಕೆ ಚೆನ್ನಾಗಿ ಹೊಂದುತ್ತದೆ. ನಮ್ಮಲ್ಲಿ ಬಹುತೇಕರು ಮೊಸಳೆಯ ಕಣ್ಣೀರನ್ನು ನೋಡಿರುವುದಿಲ್ಲ. ಆದರೆ, ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ಯಾಂಪೆಲ್ ವಿಲ್ಸನ್ ಜೂನ್ ೧೨ರಂದು ಅಹಮದಾಬಾದ್‌ನಲ್ಲಿ ವಿಮಾನ ಪತನಗೊಂಡ ನಂತರ ಕಣ್ಣೀರು ಹಾಕಿದ್ದನ್ನು ನೋಡಿದ್ದೇವಲ್ಲವೆ? ಮೊಸಳೆ ಕಣ್ಣೀರನ್ನು ನೋಡಿದಂತೆಯೇ ಆಯಿತು ಬಿಡಿ.
ಆ ಕಣ್ಣೀರನ್ನು ಅಕ್ಷರ ರೂಪಕ್ಕೆ ಇಳಿಸಿ ಏರ್ ಇಂಡಿಯಾದ ಮಹಾರಾಜ ಕ್ಲಬ್‌ಗೆ ಸಂದೇಶವೊಂದನ್ನು ಕಳುಹಿಸಿಕೊಡಲು ಅವರು ಹೆಚ್ಚುಕಮ್ಮಿ ಒಂದು ವಾರ ತೆಗೆದುಕೊಂಡರು. ಕೃತಿಚೌರ್ಯಕ್ಕಿಂತ ದೊಡ್ಡ ಅಪ್ರಾಮಾಣಿಕತೆ ಇನ್ನೊಂದಿಲ್ಲ. ವರದಿಗಳ ಪ್ರಕಾರ ಕ್ಯಾಂಪೆಲ್ ಬರೆದ ಪತ್ರದಲ್ಲಿ ಅರ್ಧದಷ್ಟು ವಾಕ್ಯಗಳು ವಾಷಿಂಗ್ಟನ್ ಡಿ.ಸಿ.ಯಲ್ಲಿ ಅಮೆರಿಕನ್ ಏರ್‌ಲೈನ್ಸ್‌ನ ವಿಮಾನ ಮಿಲಿಟರಿ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದು ೬೭ ಜನರು ಮೃತಪಟ್ಟ ದುರಂತದ ಬಳಿಕ ಆ ಏರ್‌ಲೈನ್ಸ್‌ನ ಸಿಇಒ ರಾಬರ್ಟ್ ಇಸೋಮ್ ಬರೆದಿದ್ದ ಪತ್ರದಿಂದ ಅನಾಮತ್ತಾಗಿ ‘ಕಟ್ ಆಂಡ್ ಪೇಸ್ಟ್’ ಮಾಡಿದ್ದ ವಾಕ್ಯಗಳಾಗಿದ್ದವು.
ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಅವಸಾನದತ್ತ ಸಾಗುತ್ತಿದೆ. ಸರಕಾರಿ ವಿಮಾನ ಅಪಘಾತವಾಗಲಿ ಎಂದು ಬಯಸುವುದಿಲ್ಲ. ಆದರೆ, ಏರ್ ಇಂಡಿಯಾದ ಸಿಇಒ ಕ್ಯಾಂಪೆಲ್ ಹಾಕಿದ ಕಣ್ಣೀರು ನಿಜವಾಗಿಯೂ ಮೊಸಳೆ ಕಣ್ಣೀರೇ. ಏಕೆಂದರೆ, ಒಂದು ಕಾಲದಲ್ಲಿ ದೇಶದ ಹೆಮ್ಮೆಯ ಏರ್‌ಲೈನ್ಸ್ ಆಗಿದ್ದ ಏರ್ ಇ ಂಡಿಯಾ ಈಗ ತನ್ನ ಸೇವೆ ಮತ್ತು ಮ್ಯಾನೇಜ್‌ಮೆಂಟ್ ಎರಡೂ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಅವಸಾನದತ್ತ ಸಾಗುತ್ತಿದೆ.
ಸರಕಾರಿ ಸ್ವಾಮ್ಯದಲ್ಲಿದ್ದ ಕಂಪನಿಯ ಚುಕ್ಕಾಣಿ ಖಾಸಗಿ ಸಂಸ್ಥೆಗೆ ಬಂದ ಮೇಲೂ ಹೆಚ್ಚು ಬದಲಾವಣೆ ಆಗಿಲ್ಲ. ಉದ್ಯಮ ಲೋಕ ದಿಗ್ಗಜ ಜೆಆರ್‌ಡಿ ಟಾಟಾ ಅವರ ಕನಸಿನ ಕೂಸು ಏರ್ ಇಂಡಿಯಾ ಆಗಿತ್ತು. ನಾನೊಮ್ಮೆ ಜೆಆರ್‌ಡಿಯನ್ನು ಭೇಟಿಯಾಗಿದ್ದೆ. ಅದೊಂದು ಪೂರ್ವಕೃತ ಪುಣ್ಯ. ಅವರು ಭಾರತದ ಹೀರೋ ಆಗಿದ್ದರು. ಅವರ ನೆನಪು ದೇಶಕ್ಕೆ ಸದಾ ಇರುತ್ತದೆ.
ಹಿಂದೆ ಮನೆಮಾತಾಗಿದ್ದ ಏರ್ ಇಂಡಿಯಾ ಇವತ್ತು ಎಂಥ ಹಿಂದೆ ಮನೆಮಾತಾಗಿದ್ದ ಏರ್ ಇಂಡಿಯಾ ಇವತ್ತು ಎಂಥ ಅಧೋಗತಿಗೆ ಸಾಗಿದೆ ಎಂಬುದನ್ನು ತಿಳಿಯಲು ಯಾವುದೇ ತನಿಖೆ ನಡೆಸುವ ಅಗತ್ಯವಿಲ್ಲ. ಏರ್ ಇಂಡಿಯಾದಲ್ಲಿ ಪ್ರಯಾಣಿಸಿದ ಅನುಭವವಿದ್ದರೆ ಸಾಕು, ನಿಮಗೆ ಎಲ್ಲವೂ ಅರ್ಥವಾಗುತ್ತದೆ. ಅಹಮದಾಬಾದ್ ದುರಂತ ಘಟಿಸುವುದಕ್ಕೆ ಕೆಲ ದಿನಗಳಿದ್ದಾಗ ನಾವು ಏರ್ ಇಂಡಿಯಾದಲ್ಲಿ ವಿಯೆನ್ನಾದಿಂದ ದೆಹಲಿಗೆ ಪ್ರಯಾಣಿಸಿದ್ದೆವು.
ನಾವು ಕುಳಿತ ಮೂಲೆಯ ಕಡೆಗೆ ಕಣ್ಣೆತ್ತಿಯೂ ನೋಡದೆ ಅಲ್ಲಿದ್ದ ಸಿಬ್ಬಂದಿ ಬೇರೇನೇನೋ ಕೆಲಸ ಹಾಗೂ ಹರಟೆಯಲ್ಲಿ ನಿರತರಾಗಿದ್ದರು. ತಾಳ್ಮೆಗೂ ಒಂದು ಮಿತಿಯಿದೆಯಲ್ಲವೆ. ನನ್ನ ಪಕ್ಕ ಕುಳಿತಿದ್ದವರಿಗೆ ನಿದ್ದೆಗೂ ಮುನ್ನ ಸಣ್ಣದೊಂದು ಊಟ ಬೇಕಿತ್ತು.
ಎರಡು ತಾಸುಗಳ ಕಾಲ ಸಿಬ್ಬಂದಿಗಾಗಿ ಕಾದು ಕಾದು ಸುಸ್ತಾಗಿ ಕೊನೆಗೆ ಇವರೇ ಎದ್ದು ಹೋಗಿ, ‘ನಾವೇನು ಪಾಪ ಮಾಡಿದ್ದೇವೆ ಎಂದು ಈ ಕಡೆ ಅಪ್ಪಿತಪ್ಪಿಯೂ ನೀವು ನೋಡುತ್ತಿಲ್ಲ’ ಎಂದು ಕೇಳಿದರು. ಅವರಿಂದ ಅದೇನು ಉತ್ತರ ಬಂತೋ ಗೊತ್ತಿಲ್ಲ. ಇವರಿಗೆ ತುಂಬಾ ಕಿರಿಕಿರಿಯಾಗಿತ್ತು. ಅವರು ಎಷ್ಟು ತಾಳ್ಮೆಗೆಟ್ಟಿದ್ದರು ಅಂದರೆ, ಅವರಿಗೀಗ ಊಟ ಬೇಕಿರಲಿಲ್ಲ.
ತಮ್ಮ ಸೀಟು ಹಾಸಿಗೆಯ ರೀತಿ ಹಿಂದೆ ಚಾಚಿಕೊಳ್ಳುತ್ತಿಲ್ಲ ಎಂಬ ಏಕೈಕ ಸಮಸ್ಯೆಗೆ ಅವರು ಪರಿಹಾರ ಹುಡುಕುತ್ತಿದ್ದರು. ಅವರ ಸೀಟಿನ ಹಿಂಜ್ ಮುರಿದುಹೋಗಿತ್ತು. ಬಿಸಿನೆಸ್ ಕ್ಲಾಸ್ ಸೀಟು ಅದು. ಹಾಗಂತ ಅದು ವಿಯೆನ್ನಾದಲ್ಲಿ ಮುರಿದಿರಲಿಲ್ಲ. ಭಾರತದಿಂದ ವಿಮಾನ ಹೊರಡುವುದಕ್ಕೂ ಮೊದಲೇ ಮುರಿದುಹೋಗಿತ್ತು. ಆದರೂ ಸಿಬ್ಬಂದಿ ತಲೆಕೆಡಿಸಿಕೊಂಡಿರಲಿಲ್ಲ.
ಸೀಟು ಮುರಿದಿದ್ದರೂ ವಿಮಾನ ಹಾರುತ್ತಲೇ ಇರಬೇಕು ಎಂಬುದು ಮ್ಯಾನೇಜ್‌ಮೆಂಟಿನ ನೀತಿಯಾಗಿತ್ತು. ಕೊನೆಯ ಪಕ್ಷ ಆ ಸೀಟನ್ನು ಖಾಲಿ ಬಿಡುವುದಕ್ಕೂ ಅವರು ಮನಸ್ಸು ಮಾಡಿರಲಿಲ್ಲ. ನನ್ನ ಸ್ನೇಹಿತರಿಗೆ ಇದಕ್ಕೆಲ್ಲ ಯಾವುದೇ ಸ್ಪಷ್ಟನೆ ಸಿಗಲಿಲ್ಲ. ಏಕೆಂದರೆ ಏರ್ ಇಂಡಿಯಾ ಬಳಿ ಆ ನಿರ್ಲಕ್ಷ್ಯಕ್ಕೆ ಯಾವುದೇ ಸ್ಪಷ್ಟನೆ ಇರಲಿಲ್ಲ.
ವಿಮಾನದಲ್ಲಿ ಪ್ರಯಾಣಿಕರು ಹೇಳುವ ದೂರುಗಳಿಗೆ ಪರಿಹಾರ ಸಿಗುವುದು ಕಡಿಮೆ. ಹೆಚ್ಚಿನ ಪ್ರಯಾಣಿಕರು ತಮ್ಮ ಊರು ಬಂದಾಗ ಇಳಿದು ಸುಮ್ಮನೆ ಹೋಗಿಬಿಡುತ್ತಾರೆ. ದೂರನ್ನು ಮೇಲ್ಮಟ್ಟಕ್ಕೆ ಕೊಂಡೊಯ್ದು ಪರಿಹಾರ ಪಡೆದುಕೊಳ್ಳುವಷ್ಟು ತಾಳ್ಮೆ ಬಹುತೇಕರಿಗೆ ಇರುವುದಿಲ್ಲ. ನಾನಿದನ್ನು ಬರೆಯುತ್ತಿರುವ ಹೊತ್ತಿಗೆ ಟೋಕಿಯೋದಿಂದ ದೆಹಲಿಗೆ ಬರಬೇಕಿದ್ದ ಏರ್ ಇಂಡಿಯಾ ಬೋಯಿಂಗ್ ೭೮೭ ವಿಮಾನವನ್ನು ಕೊಲ್ಕತ್ತಾಕ್ಕೆ ಕೊಂಡೊಯ್ದ ಸುದ್ದಿ ಬರುತ್ತಿದೆ.
ವಿಮಾನದಲ್ಲಿ ಏರ್ ಕಂಡೀಷನಿಂಗ್ ವ್ಯವಸ್ಥೆ ಕೆಲಸ ಮಾಡುತ್ತಿರಲಿಲ್ಲವಂತೆ. ಅಹಮದಾಬಾದ್ ದುರಂತಕ್ಕೂ ಮೊದಲು ಹೀಗೆ ಆಗಿದ್ದರೆ ಏರ್ ಕಂಡೀಷನ್ ಇಲ್ಲದಿದ್ದರೂ ಆ ವಿಮಾನ ದೆಹಲಿಗೆ ಹಾರುವ ಸಾಧ್ಯತೆಯೇ ಹೆಚ್ಚಿತ್ತು. ಮಹಾರಾಜ ಕ್ಲಬ್‌ಗೆ ಬರೆದ ಪತ್ರವನ್ನು ಏರ್ ಇಂಡಿಯಾ ಸಿಇಒ ವಿಲ್ಸನ್ ದುಃಖದೊಂದಿಗೆ ಮುಗಿಸುವ ಬದಲು ‘ವಾರ್ಮ್ ರಿಗಾರ್ಡ್ಸ್’ ಎಂದು ಮುಗಿಸಿದ್ದಾರೆ.
ನಿಜವಾಗಿಯೂ ಆತ ಯಾವ ಜಗತ್ತಿನಲ್ಲಿ ಬದುಕುತ್ತಿದ್ದಾರೆ? ಸ್ವಲ್ಪವೂ ಸೂಕ್ಷ್ಮತೆ ಬೇಡವೆ? ಏರ್ ಇಂಡಿಯಾದಲ್ಲಿ ಅತ್ಯುನ್ನತ ಹುದ್ದೆಗಳಲ್ಲಿರುವವರು ಹೀಗೆ ಸೂಕ್ಷ್ಮತೆಯನ್ನು ಮರೆತರೆ ಅವರಿಗೆ ಯಾವುದೇ ಶಿಕ್ಷೆಯಾಗುವುದಿಲ್ಲ. ಆದರೆ ಅವರ ಕಂಪನಿಯ ಕೆಳಹಂತದ ಸಿಬ್ಬಂದಿ ಹೀಗೆ ನಡೆದುಕೊಂಡರೆ ಖಂಡಿತ ಶಿಕ್ಷೆ ನೀಡಲಾಗುತ್ತದೆ.
ಅಹಮದಾಬಾದ್ ದುರಂತದ ಕೆಲ ದಿನಗಳ ಬಳಿಕ ಯಾವುದೋ ಖಾಸಗಿ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿದರು ಎಂಬ ಕಾರಣಕ್ಕೆ ಏರ್ ಇಂಡಿಯಾದ ಕೆಲ ಸಿಬ್ಬಂದಿಯನ್ನು ಅಮಾನತು ಮಾಡಿರುವುದು ಇದಕ್ಕೆ ಜ್ವಲಂತ ಉದಾಹರಣೆ. ವಿಮಾನದ ಸಿಬ್ಬಂದಿ ಯಾವಾಗಲೂ ಒತ್ತಡದಲ್ಲಿರುತ್ತಾರೆ. ಅಪಘಾತಗಳು ಸಂಭವಿಸಿದರೆ ಅವರೂ ಸಾಯುತ್ತಾರೆ. ಮೇಲಾಗಿ ಅವರು ದಿನನಿತ್ಯ ವಿಮಾನದಲ್ಲಿ ಹಾರಾಡುತ್ತಲೇ ಇರುತ್ತಾರೆ. ಅಂದರೆ ಪ್ರತಿದಿನ ಅವರು ಅಪಾಯದಲ್ಲಿರುತ್ತಾರೆ.
ಕಾಕತಾಳೀಯವೇ ಇರಬಹುದು. ವಿಮಾನಯಾನ ಉದ್ದಿಮೆ ಗಿ ವಿಮಾನದ ಸಿಬ್ಬಂದಿಯನ್ನು ‘ಹರಕೆಯ ಕುರಿ’ ಮಾಡುವುದು ಅವರ ಸೇವೆಗೇ ಅವಮಾನ ಮಾಡಿದಂತೆ. ದುರಂತದ ಬಳಿಕ ಪಾರ್ಟಿ ಮಾಡಿದ್ದು ಸರಿಯೆಂದು ನಾನು ಹೇಳುವುದಿಲ್ಲ, ಆದರೆ ಅದರಿಂದ ಯಾರ ಜೀವಕ್ಕೂ ಅಪಾಯ ವಿರಲಿಲ್ಲ. ಹೀಗಾಗಿ ಯಾರನ್ನಾದರೂ ಅಮಾನತು ಮಾಡುವುದಿದ್ದರೆ ಆ ಸಿಬ್ಬಂದಿಯನ್ನು ಅಮಾನತು ಮಾಡಿದವರನ್ನು ಅಮಾನತು ಮಾಡಬೇಕಿತ್ತು. ಶಿಕ್ಷೆಗೆ ಅವರೇ ಅರ್ಹರು. ಇಂದು ಸೀಟು ಕೆಟ್ಟಿರಬಹುದು, ನಾಳೆ ಎಂಜಿನ್ ಕೆಡುತ್ತದೆ.
ಕಾಕತಾಳೀಯವೇ ಇರಬಹುದು. ವಿಮಾನಯಾನ ಉದ್ದಿಮೆಯನ್ನು ಹತ್ತಿರದಿಂದ ಗಮನಿಸುವವರ ವಲಯದಲ್ಲಿ ಇದೊಂದು ಮಾಹಿತಿ ಹರಿದಾಡುತ್ತಿದೆ. ಅಹಮದಾಬಾದ್ ದುರಂತದಲ್ಲಿ ಒಬ್ಬನೇ ಒಬ್ಬ ಪ್ರಯಾಣಿಕ ಬದುಕುಳಿದಿದ್ದಾನಲ್ಲವೇ? ಹಾಗೆ ದೊಡ್ಡ ವೈಮಾನಿಕ ದುರಂತಗಳಲ್ಲಿ ಏಕೈಕ ಪ್ರಯಾಣಿಕ ಬದುಕುಳಿದ ೫ ಘಟನೆಗಳು ಇತಿಹಾಸದಲ್ಲಿ ದಾಖಲಾಗಿವೆ. ೧೯೮೭ರ ಆಗಸ್ಟ್ ೧೬ರಂದು ಸಂಭವಿಸಿದ ವಿಮಾನ ದುರಂತದಲ್ಲಿ ೧೫೬ ಪ್ರಯಾಣಿಕರು ಮೃತಪಟ್ಟು, ಸಿಸಿಲಿಯಾ ಸಿಚಾನ್ ಎಂಬ ಏಕೈಕ ವ್ಯಕ್ತಿ ಬದುಕುಳಿದಿದ್ದರು.
೨೦೦೩ರ ಮಾರ್ಚ್ ೬ರಂದು ಏರ್ ಅಲ್ಜೀರಿಯಾ ದುರಂತದಲ್ಲಿ ೧೦೨ ಮಂದಿ ಮೃತಪಟ್ಟು, ಯೌಸೆಫ್ ಜಿಲ್ಲಾಲಿ ಎಂಬ ಒಬ್ಬರೇ ವ್ಯಕ್ತಿ ಬಚಾವಾಗಿದ್ದರು. ಸುಡಾನ್‌ನಲ್ಲಿ ೨೦೦೩ರ ಜುಲೈ ೮ರಂದು ಸಂಭವಿಸಿದ ವಿಮಾನ ದುರಂತದಲ್ಲಿ ಮೊಹಮ್ಮದ್ ಎಲ್ ಫತೆ ಎಂಬ ಒಬ್ಬರು ಪಾರಾಗಿದ್ದರು. ೨೦೦೯ರ ಜೂನ್ ೩೦ರಂದು ಯೆಮನ್‌ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಬಹಿಯಾ ಬಕಾರಿ ಎಂಬ ಒಬ್ಬರು ಜೀವ ಉಳಿಸಿಕೊಂಡಿದ್ದರು. ೨೦೧೦ರ ಮೇ ೧೨ರಂದು ಟ್ರಿಪೋಲಿಯಲ್ಲಿ ವಿಮಾನ ಪತನಗೊಂಡಾಗ ೯ ವರ್ಷದ ರೂಬೆನ್ ವಾನ್ ಅಸ್ಸೌವಾ ಎಂಬ ಮಗುವೊಂದು ಬದುಕುಳಿದಿತ್ತು.
ಲಂಡನ್‌ನಲ್ಲಿ ಬೇಸಿಗೆ ರಜೆ ಕಳೆಯಲು ಯಾರಾದರೂ ವಿಮಾನ ಹತ್ತುವವರಿದ್ದರೆ ಒಂದು ಸಲ ಇಲ್ಲಿರುವ ಕೆಲ ಅಂಕಿ-ಅಂಶಗಳನ್ನು ಗಮನಿಸಿ. ‘ದಿ ಟೈಮ್ಸ್’ ಪತ್ರಿಕೆಯಲ್ಲಿ ಪ್ರಕಟವಾದ ಮಾಹಿತಿಯಿದು. ಲಂಡನ್‌ನಲ್ಲಿ ಪ್ರತಿ ವರ್ಷ ೬೦,೦೦೦ ಮೊಬೈಲ್ ಫೋನ್ ಗಳನ್ನು ಕಸಿದುಕೊಂಡು ಪರಾರಿಯಾಗುವ ಘಟನೆಗಳು ನಡೆಯುತ್ತಿವೆ. ಅಂದರೆ ಪ್ರತಿ ಮೂರು ನಿಮಿಷಕ್ಕೊಂದು ಫೋನ್ ಕಳ್ಳತನ. ಅವುಗಳ ಪೈಕಿ ೧೦,೦೦೦ ಫೋನ್‌ಗಳು ಪ್ರವಾಸಿಗರಿಂದ ತುಂಬಿರುವ ವೆಸ್ಟ್ ಎಂಡ್‌ನಲ್ಲೇ ಕಳವಾಗುತ್ತವೆ.
ಅಲ್ಲೇ ಸಮೀಪದ ವೆಸ್ಟ್‌ಮಿನ್‌ಸ್ಟರ್ ಸೇಂಟ್ ಜೇಮ್ಸ್ ಬಳಿ ಎರಡನೇ ಅತಿಹೆಚ್ಚು ಫೋನ್‌ಗಳು ಕಳವಾಗುತ್ತವೆ. ಕಳೆದ ನಾಲ್ಕು ವರ್ಷಗಳಲ್ಲಿ ಬ್ರಿಟನ್ನಿನಲ್ಲಿ ೨,೩೧,೦೦೦ ಫೋನ್‌ಗಳು ಕಳ್ಳತನವಾಗಿವೆ. ಅವುಗಳಲ್ಲಿ ಲಂಡನ್ನಿನ ಪಾಲು ೯೦,೦೦೦. ನಿಜವಾದ ಸಂಖ್ಯೆ ಇನ್ನೂ ಜಾಸ್ತಿಯಿರುತ್ತದೆ. ಏಕೆಂದರೆ ಫೋನ್ ಕಳೆದುಕೊಂಡವರಲ್ಲಿ ಅನೇಕರು ಹೇಗಿದ್ದರೂ ಅದು ಮರಳಿ ಸಿಗುವುದಿಲ್ಲ ಎಂದು ದೂರು ನೀಡುವುದಕ್ಕೇ ಹೋಗುವುದಿಲ್ಲ. ಅವರ ಲೆಕ್ಕಾಚಾರ ಸರಿಯಾಗಿಯೇ ಇದೆ.
ಕಳುವಾದ ಫೋನ್‌ಗಳು ಮರಳಿ ಸಿಗುವ ಉದಾಹರಣೆಗಳು ಲಂಡನ್ನಿನಲ್ಲಿ ಇಲ್ಲ. ಪೊಲೀಸರು ಕಳ್ಳರಿಗೆ ಶರಣಾಗಿದ್ದಾರೆ. ಶೇ.೧ಕ್ಕೂ ಕಡಿಮೆ ಕಳ್ಳತನ ಪ್ರಕರಣಗಳು ಅಥವಾ ಮನೆಯ ಬಾಗಿಲು ಮುರಿದ ಪ್ರಕರಣಗಳು ಮಾತ್ರ ಪೊಲೀಸರಿಂದ ಭೇದಿಸಲ್ಪಡುತ್ತಿವೆ. ಹೀಗಾಗಿ ಮಾಸ್ಕೋಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ೨೦೨೪ರಿಂದ ಈಚೆಗೆ ಮಾಸ್ಕೋಗೆ ಪ್ರವಾಸಿಗರ ಸಂಖ್ಯೆ ಶೇ.೪೦ರಷ್ಟು ಹೆಚ್ಚಾಗಿದೆ.
ಅರಬ್ಬರು ಕೂಡ ಲಂಡನ್ನನ್ನು ತೊರೆಯುತ್ತಿದ್ದಾರೆ. ಸೌದಿಯಿಂದ ಮಾಸ್ಕೋಗೆ ತೆರಳುವವರ ಸಂಖ್ಯೆಯಲ್ಲಿ ಶೇ.೫೭೦ರಷ್ಟು ಏರಿಕೆಯಾಗಿದೆ. ಇದು ರಷ್ಯಾದ ಆರ್ಥಿಕತೆಗೆ ಅತ್ಯಂತ ಒಳ್ಳೆಯ ಸುದ್ದಿ. ೨೦೨೫ರ ಮೇ ೭ರಂದು ‘ಸ್ಪೆಕ್ಟೇಟರ್’ ವಾರಪತ್ರಿಕೆಯ ಸಂಪಾದಕೀಯದಲ್ಲಿ ಬ್ರಿಟನ್ ಬಗ್ಗೆ ತುಂಬಾ ಪ್ರಾಮಾಣಿಕವಾದ ಕೆಲ ವಾಕ್ಯಗಳು ಅಚ್ಚಾಗಿವೆ. ‘ನಮ್ಮ ರಸ್ತೆಗಳಲ್ಲಿ ಅರಾಜಕತೆ ತಾಂಡವ ವಾಡುತ್ತಿದೆ. ಯಾರೂ ಕಾನೂನು ಪಾಲಿಸುತ್ತಿಲ್ಲ.
ಹೇಳುವವರು ಕೇಳುವವರು ಇಲ್ಲವಾಗಿದೆ... ಅಂಗಡಿಗಳಲ್ಲಿ ಕಳ್ಳತನ ಮಾಡುವ ವರನ್ನು ಹಿಡಿಯುವವರಿಲ್ಲ. ಕೈಯಿಂದ ಕಿತ್ತುಕೊಂಡು ಓಡುವ ಘಟನೆಗಳು ದಿನೇದಿನೆ ಹೆಚ್ಚುತ್ತಿವೆ. ಸಾರ್ವಜನಿಕವಾಗಿ ಡ್ರಗ್ಸ್ ಸೇವಿಸುವುದು ಹಾಗೂ ಮಾರುವುದು ಬಹಳ ಸಾಮಾನ್ಯವಾಗುತ್ತಿದೆ. ಒಂದು ತಲೆಮಾರಿನ ಹಿಂದೆ ಸಾಮಾಜಿಕ ಬದುಕಿನಿಂದ ಕಂಗೊಳಿಸುತ್ತಿದ್ದ ಬ್ಯುಸಿ ವಾಣಿಜ್ಯ ಪ್ರದೇಶಗಳಲ್ಲಿ ಇಂದು ಸಾಲುಸಾಲಾಗಿ ಬಾರ್ಬರ್ ಶಾಪ್‌ಗಳಿವೆ. ಅವುಗಳಲ್ಲಿ ಹೆಚ್ಚಿನವು ಅಕ್ರಮ ಹಣಕಾಸು ವ್ಯವಹಾರ ನಡೆಸುವ, ಗಾಂಜಾ ಸೇವಿಸುವ, ಡ್ರಗ್ಸ್ ಮಾರುವ ಜಾಗಗಳಾಗಿವೆ.
ಇನ್ನೊಂದಷ್ಟು ಜಾಗಗಳು ಬಹಳ ಸಮಯದಿಂದ ಖಾಲಿ ಬಿದ್ದಿವೆ. ಅಲ್ಲಿ ಏನಾದರೂ ಮಾಡಬೇಕು ಎಂದು ಮಾಲೀಕರಿಗೆ ಅನ್ನಿಸುತ್ತಿಲ್ಲ. ಒಟ್ಟಿನಲ್ಲಿ ಅವಸಾನದ ಕಡೆ ಲಂಡನ್ ಸಾಗುತ್ತಿದೆ. ಗಾಂಜಾದ ಹೊಗೆ ಹಾಗೂ ಇನ್ನೊಂದಷ್ಟು ಜಾಗಗಳು ಬಹಳ ಸಮಯದಿಂದ ಖಾಲಿ ಬಿದ್ದಿವೆ. ಅಲ್ಲಿ ಏನಾದರೂ ಮಾಡಬೇಕು ಎಂದು ಮಾಲೀಕರಿಗೆ ಅನ್ನಿಸುತ್ತಿಲ್ಲ. ಒಟ್ಟಿನಲ್ಲಿ ಅವಸಾನದ ಕಡೆ ಲಂಡನ್ ಸಾಗುತ್ತಿದೆ. ಗಾಂಜಾದ ಹೊಗೆ ಹಾಗೂ ಕವಿ ರುಡ್ಯಾರ್ಡ್ ಕಿಪ್ಲಿಂಗ್ ಬ್ರಿಟಿಷ್ ಕೊಲ್ಕತ್ತಾವನ್ನು ‘ಭಯಾನಕ ರಾತ್ರಿಗಳ ನಗರ’ ಎಂದು ಕರೆದಿದ್ದ. ಲಂಡನ್ ಈಗ ‘ಭಯಾನಕ ಹಗಲುಗಳ ನಗರ’ವಾಗುತ್ತಿದೆಯೇ?
(ಲೇಖಕರು ಹಿರಿಯ ಪತ್ರಕರ್ತರು)