ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shashidhara Halady: Column: ಕರಗಿದ ಹಿಮನದಿ, ಮರುಗಿದ ಮನ

ನೇಪಾಳದಲ್ಲಿ ಆಗಿರುವ ದುರಂತಕ್ಕಾಗಿ ಸಂತಾಪಗಳನ್ನು ಸೂಚಿಸುತ್ತಲೇ, ಅಲ್ಲಿ ಸಂಭವಿಸಿದ ನಷ್ಟದ ಪ್ರಮಾಣವನ್ನು ಗಮನಿಸಿದರೆ, (ಇನ್ನೂ ಪೂರ್ತಿ ವಿವರ ಬಂದಿಲ್ಲವಾದರೂ), ಇಂತಹ ಒಂದು ಭೀಕರ ಅನಾಹುತವು, ನಿರೀಕ್ಷಿತ ಪ್ರಮಾಣದಲ್ಲಿ ಜಗತ್ತಿನ ಗಮನವನ್ನು ಸೆಳೆದಿಲ್ಲವೆಂದೇ ಹೇಳಬೇಕು. ದುರಂತ ಗಳು ಪ್ರಚಾರವನ್ನು ಬಯಸುವುದಿಲ್ಲ, ಆದರೆ, ದುರಂತದ ಪ್ರಮಾಣವು ಗೊತ್ತಾದರೆ, ಬೇರೆ ದೇಶಗಳಿಂದ ಕೊನೆಯ ಪಕ್ಷ ಸಹಾಯವನ್ನಾದರೂ ಪಡೆಯಲು ಸಾಧ್ಯವಾಗ ಬಲ್ಲದು.

ಶಶಾಂಕಣ

ತನ್ನದಲ್ಲ‌ದ ತಪ್ಪಿನಿಂದಾಗಿ, ನೇಪಾಳ ದೇಶವು ಕಳೆದ ಎರಡು ವಾರಗಳಿಂದ ಅನುಭವಿಸುತ್ತಿರುವ ಭೀಕರ ಪ್ರಾಕೃತಿಕ ವಿಕೋಪದ ವ್ಯಾಪ್ತಿ, ನಷ್ಟದ ಪ್ರಮಾಣ ಇನ್ನೂ ಪೂರ್ತಿಯಾಗಿ ಬೆಳಕಿಗೆ ಬಂದಿಲ್ಲ! ಬೆಟ್ಟಗುಡ್ಡಗಳಿಂದ ಆವೃತವಾದ ಆ ದೇಶದ ಜನರು, ಜಗತ್ತಿನ ಮುಂದುವರಿದ ದೇಶದ ಜನರಿಗೆ ಹೋಲಿಸಿದರೆ, ಅಮಾಯಕರು, ಸರಳ ಬದುಕನ್ನು ಕಟ್ಟಿಕೊಂಡವರು. ಹೊರಜಗತ್ತಿನ ಪ್ರವಾಸಿಗರು, ಪರ್ವತಾರೋಹಿಗಳು ನೇಪಾಳಕ್ಕೆ ಬರುವುದು ಜಾಸ್ತಿಯಾಗುತ್ತಿದ್ದರೂ, ನೇಪಾಳದ ಜನರು ಹೊರ ಜಗತ್ತನ್ನು ಕಂಡವರಲ್ಲ ಎಂದೇ ಹೇಳಬಹುದು. ಹೆಚ್ಚೆಂದರೆ, ಭಾರತ ಮೊದಲಾದ ದೇಶಗಳಲ್ಲಿ ಕೆಲಸವನ್ನು ಅರಸುತ್ತಾ ಬಂದಿರುವವರೇ ಅಧಿಕ.

ನೇಪಾಳದಲ್ಲಿ ಆಗಿರುವ ದುರಂತಕ್ಕಾಗಿ ಸಂತಾಪಗಳನ್ನು ಸೂಚಿಸುತ್ತಲೇ, ಅಲ್ಲಿ ಸಂಭವಿಸಿದ ನಷ್ಟದ ಪ್ರಮಾಣವನ್ನು ಗಮನಿಸಿದರೆ, (ಇನ್ನೂ ಪೂರ್ತಿ ವಿವರ ಬಂದಿಲ್ಲವಾದರೂ), ಇಂತಹ ಒಂದು ಭೀಕರ ಅನಾಹುತವು, ನಿರೀಕ್ಷಿತ ಪ್ರಮಾಣದಲ್ಲಿ ಜಗತ್ತಿನ ಗಮನವನ್ನು ಸೆಳೆದಿಲ್ಲವೆಂದೇ ಹೇಳಬೇಕು. ದುರಂತಗಳು ಪ್ರಚಾರವನ್ನು ಬಯಸುವುದಿಲ್ಲ, ಆದರೆ, ದುರಂತದ ಪ್ರಮಾಣವು ಗೊತ್ತಾದರೆ, ಬೇರೆ ದೇಶಗಳಿಂದ ಕೊನೆಯ ಪಕ್ಷ ಸಹಾಯವನ್ನಾದರೂ ಪಡೆಯಲು ಸಾಧ್ಯವಾಗ ಬಲ್ಲದು.

ನೇಪಾಳದಲ್ಲಿ ಕಂಡುಬಂದ ನೆರೆಯಿಂದಾಗಿ, ಸತ್ತವರ ಮತ್ತು ಕಣ್ಮರೆಯಾದವರ ಸಂಖ್ಯೆ 5000 ದಾಟಿದೆ; ಕೇವಲ ಒಂದು ದಿನದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಇದು. ದುರಂತಗಳನ್ನು ಹೋಲಿಸಬಾರದು ಎನ್ನುವರು; ಆದರೂ ಒಂದು ಉದಾಹರಣೆಯನ್ನು ನೋಡುವುದಾದರೆ, ಕಳೆದ ಹತ್ತು ವರ್ಷಗಳಲ್ಲಿ ಅಮೆರಿಕ (ಯುಎಸ್) ದೇಶದಲ್ಲಿ ನೆರೆಯಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ ಸುಮಾರು 1300. ನೇಪಾಳದ ಪಕ್ಕದ ದೇಶವಾದ ಚೀನಾದಂತಹ ಅಧಿಕ ಜನಸಂಖ್ಯೆಯ ದೇಶದಲ್ಲಿ ಕಳೆದ ಒಂದು ವರ್ಷದಲ್ಲಿ ನೆರೆಯಿಂದಾದ ಜೀವಹಾನಿಯು ಸುಮಾರು 770. ಆದರೆ ನೇಪಾಳದಲ್ಲಿ ಒಂದೇ ದಿನ ಸುಮಾರು 5000ಕ್ಕೂ ಅಧಿಕ ಜನರು ನೆರೆಯಲ್ಲಿ ಕೊಚ್ಚಿಹೋದರು!

ಮಾತ್ರವಲ್ಲ, ಆ ಭೀಕರ ಪ್ರವಾಹದ ನಂತರವೂ, ಮತ್ತಷ್ಟು ಪ್ರವಾಹಗಳು ಅಲ್ಲಿ ಒಂದರ ಹಿಂದೆ ಒಂದರಂತೆ ಹರಿದುಬರುತ್ತಿದ್ದು ಇನ್ನಷ್ಟು ಜನರು ಅದರಲ್ಲಿ ಸಿಲುಕಿಹಾಕಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗುತ್ತಿದೆ.

ಇದನ್ನೂ ಓದಿ; Shashidhara Halady Column: ಕೆರೆಯಲ್ಲಿ ನೀರು ತುಂಬಿತು! ಕಣ್ಣಲ್ಲಿ ನೀರು ಜಿನುಗಿತು !

ತ್ರಿಶೂಲಿ ನದಿಯಲ್ಲಿ ಒಮ್ಮೆಗೇ ಪ್ರವಾಹ ಉಕ್ಕಿ ಬರಲು, ಚೀನಾ ದೇಶದಲ್ಲಿ ಹಿಮನೀರ್ಗಲ್ಲ ನದಿಯು ಕರಗಿ, ಜಾರಿ ಬಂದದ್ದು ಮತ್ತು ಅದರಿಂದಾಗಿ, ತಾತ್ಕಾಲಿಕ ಸರೋವರವು ಪರ್ವತಗಳ ನಡುವೆ ನಿರ್ಮಾಣ ಗೊಂಡು, ಆ ಸರೋವರವು ಒಮ್ಮೆಗೇ ಒಡೆದು ಅಪಾರ ಪ್ರಮಾಣದ ನೀರು ಬರಿದು ಬಂದದ್ದು ಕಾರಣ ಎಂದು ಈಗಿನ ವರದಿಗಳು ಹೇಳುತ್ತಿವೆ. ದುರ್ದೈವದ ಸಂಗತಿ ಎಂದರೆ, ಇತಿಹಾಸದಲ್ಲಿ ಇಷ್ಟೊಂದು ಪ್ರಮಾಣದ ನೀರು, ಇಷ್ಟು ಎತ್ತರದ ಪ್ರವಾಹವು ತ್ರಿಶೂಲಿ ನದಿಯಲ್ಲಿ ಬಂದ ವರದಿಗಳಿಲ್ಲ!

ಕಳೆದ ಹಲವು ನೂರು ವರ್ಷಗಳಲ್ಲಿ ಇಂತಹ ಅನಿರೀಕ್ಷಿತ ಪ್ರವಾಹವು ಅಲ್ಲಿ ಬಂದಿಲ್ಲ. ಆದ್ದರಿಂದಲೇ, ತ್ರಿಶೂಲಿ ಊರಿನಲ್ಲಿ ನದಿಯುದ್ದಕ್ಕೂ ಜನವಸತಿ ಇತ್ತು, ಮನೆಗಳಿದ್ದವು; ನದಿಯ ಪಕ್ಕದಲ್ಲಿ ಈ ಹಿಂದಿನ ನೆರೆಯ ಪ್ರಮಾಣವನ್ನು ಕಂಡು, ಅಷ್ಟು ಜಾಗ ಬಿಟ್ಟು, ಜನರು ಮನೆಗಳನ್ನು ಕಟ್ಟಿಕೊಂಡಿದ್ದರು. ನೇಪಾಳಕ್ಕೆ ನೆರೆ ಹೊಸದೇನಲ್ಲ; ಪ್ರತಿವರ್ಷದ ನೆರೆಗಳು ಆ ಬದುಕನ್ನು ಹೆಚ್ಚಿನ ಹಾನಿಗೆ ಒಳಪಡಿಸಿರಲಿಲ್ಲ. ಹಾಗಾದರೆ, ಎಂದೂ ಹರಿದುಬರದಂತಹ ಪ್ರವಾಹವು ತ್ರಿಶೂಲಿ ನದಿಯಲ್ಲಿ ಹರಿದು ಬರಲು ಕಾರಣವೇನು?

ಇದೇ ಹಿನ್ನೆಲೆಯಲ್ಲಿ, ನೇಪಾಳ ದೇಶವು ಈಗ ಒಂದು ತಗಾದೆಯನ್ನು ಜಗತ್ತಿನ ದೇಶಗಳ ಮುಂದೆ ಇಟ್ಟಿದೆ. 5000 ಕ್ಕೂ ಅಧಿಕ ಜನರನ್ನು ಕೊಚ್ಚಿಕೊಂಡು ಹೋಗಿದ್ದಲ್ಲದೇ, 500 ಕೋಟಿ ಡಾಲರುಗಳಿ ಗಿಂತಲೂ ಅಧಿಕ ನಷ್ಟವನ್ನುಂಟುಮಾಡಿದ ಈ ಪ್ರವಾಹದಿಂದಾದ ಹಾನಿಯನ್ನು, ಅಮೆರಿಕ, ಚೀನಾ, ಭಾರತ ಮೊದಲಾದ ದೇಶಗಳು ತುಂಬಿಕೊಡಬೇಕು ಎಂಬ ತಗಾದೆ ಅದು! ಇಲ್ಲಿ, ಅದರ ನೆರೆಯ ದೇಶ ಚೀನಾ ಹೆಸರು ಬಂದಿದ್ದರ ಕುರಿತು ಸಮಜಾಯಷಿ ನೀಡಬಹುದು. ಆದರೆ, ಭಾರತ ಮತ್ತು ಅಮೆರಿಕದ ಹೆಸರನ್ನು ನೇಪಾಳ ಎತ್ತಿದ್ದಾದರೂ ಏಕೆ?

ಇದಕ್ಕೆ ಒಂದು ಉತ್ತರ ಎಂದರೆ, ಹವಾಮಾನ ಬದಲಾವಣೆ, ಅದಕ್ಕೆ ಕಾರಣಗಳು ಮತ್ತು ಪರಿಸರ ರಕ್ಷಣೆ. ಕಳೆದ ಹಲವು ದಶಕಗಳಿಂದ, ಅಮೆರಿಕವೂ ಸೇರಿದಂತೆ ಜಗತ್ತಿನ ಅಧಿಕ ಜನಸಂಖ್ಯೆ ಹೊಂದಿ ದ ದೇಶಗಳು ಹೆಚ್ಚಿನ ಕಾರ್ಬನ್ ಫೂಟ್‌ಪ್ರಿಂಟ್ಸ್‌ನ್ನು ಮೂಡಿಸಿವೆ, ಅದರಿಂದಾಗಿ, ಭೂಮಿಯ ತಾಪಮಾನವು ನಿಧಾನವಾಗಿ ಹೆಚ್ಚಳಗೊಂಡಿದೆ. ಆದರೆ ನೇಪಾಳದಿಂದಾಗುತ್ತಿರುವ ಪರಿಸರ ಹಾನಿ ಬಹಳ ಕಡಿಮೆ ಪ್ರಮಾಣದ್ದು.

71Ok

ಆದರೆ, ದೂರದ ಹಲವು ದೇಶಗಳು ಪೆಟ್ರೋಲ್ ಸುಟ್ಟಿದ್ದರಿಂದ, ಅಪಾರ ಪ್ರಮಾಣದ ಕಾಡನ್ನು ಕಡಿದಿದ್ದರ ಪರಿಣಾಮವಾಗಿಯೇ, ಹಿಮಾಲಯದಲ್ಲಿನ ಬಹುಎತ್ತರದ ಪರ್ವತ ಕಮರಿಗಳಲ್ಲಿ ಸಂಗ್ರಹಗೊಂಡಿರುವ ಹಿಮದ ಬಂಡೆಗಳು ವೇಗವಾಗಿ ಕರಗುತ್ತಿವೆ, ಕರಗಿ ಜಾರಿ ಕೆಳಗಿನ ಕಣಿವೆಗೆ ಬಂದು, ನೀರಾಗಿ ಹರಿದುಬರುತ್ತಿವೆ, ಅಂತಹ ಹಿಮನದಿಗಳು ಕರಗಿದಾಗ ಅಲ್ಲಲ್ಲಿ ಕೃತಕ ಸರೋವರ ಗಳುಂಟಾಗಿ, ಅವು ಒಡೆದಾಗ, ತ್ರಿಶೂಲಿ ನದಿಯಲ್ಲಿ ಬಂದಂತಹ ಪ್ರವಾಹ ಬರುತ್ತವೆ, ಆದ್ದರಿಂದ, ತನ್ನ ದೇಶದಲ್ಲಿ ನಡೆದ ಭೀಕರ ದುರಂತಕ್ಕೆ, ಪ್ರವಾಹಕ್ಕೆ ಮುಂದುವರಿದ ದೇಶಗಳೇ ಕಾರಣ ಎಂಬುದು ನೇಪಾಳದ ತಗಾದೆ.

ಹಿಮಾಲಯದ ಮಡಿಲಲ್ಲಿರುವ ಪುಟ್ಟ ದೇಶ ನೇಪಾಳದ ಈ ತಗಾದೆಯು, ತರ್ಕಸಹಿತವಾದುದು. ಏಕೆಂದರೆ, ಕಳೆದ ಹಲವು ದಶಕಗಳಿಂದ, ಜಗತ್ತಿನ ವಿವಿಧ ಭಾಗದ ವಿಜ್ಞಾನಿಗಳು, ಈ ರೀತಿಯ ಅನಿರೀಕ್ಷಿತ ಪ್ರವಾಹ ಬರುವ ಸಾಧ್ಯತೆಯನ್ನು ಊಹಿಸಿದ್ದರು. ಊಹೆ ಅನ್ನುವುದಕ್ಕಿಂತ, ಖಚಿತವಾಗಿ ಇಂತಹದ್ದೇ ನಡೆಯುತ್ತದೆ ಎಂದು ಪುರಾವೆ ಸಹಿತ ಹೇಳಿದ್ದರು. ಭೂಮಿಯ ತಾಪಮಾನವು ಒಂದು ಡಿಗ್ರಿ ಜಾಸ್ತಿಯಾದರೆ ಎಷ್ಟು ಹಿಮ ಕರಗುತ್ತದೆ, ಎರಡು ಡಿಗ್ರಿ ಜಾಸ್ತಿಯಾದರೆ ಎಷ್ಟು ಹಿಮ ಕರಗುತ್ತದೆ ಎಂಬುದನ್ನು ವಿವರವಾಗಿ ಲೆಕ್ಕ ಹಾಕಿ ಹೇಳಿದ್ದರು.

ವಿಜ್ಞಾನಿಗಳ ಈ ಮುನ್ಸೂಚನೆಗೆ ಹಲವು ದಶಕಗಳ ಹವಾಮಾನದ ದಾಖಲೆಗಳ ಆಧಾರವಿದೆ, ವೈಜ್ಞಾನಿಕ ಚಿಂತನೆಯ ತಳಹದಿಯೂ ಇದೆ. ಹಿಮಾಲಯದಲ್ಲಿನ ಹಿಮ, ಜಗತ್ತಿನ ಇತರ ಪ್ರದೇಶ ಗಳಲ್ಲಿರುವ ಪರ್ವತದಲ್ಲಿನ ಹಿಮ, ಧ್ರುವ ಪ್ರದೇಶದ ಹಿಮ ಎಲ್ಲವೂ, ಭೂತಾಪಮಾನ ಏರಿಕೆಗೆ ಪಕ್ಕಾಗುವಂತಹವು ಗಳೇ. ಇಲ್ಲೆಲ್ಲಾ ಕಳೆದ ಸಾವಿರಾರು ವರ್ಷಗಳಿಂದ ಸಂಗ್ರಹಗೊಂಡ ಹಿಂದ ಬಂಡೆಗಳು ಮೌನವಾಗಿ ಕುಳಿತಿವೆ, ಅಂದರೆ ಕರಗಿಲ್ಲ.

ಒಮ್ಮೆ ಅವುಗಳ ತಳಪಾಯ ಅಥವಾ ಒಂದು ಭಾಗವು ನಿಧಾನವಾಗಿ ಕರಗಿ, ಸಡಿಲಗೊಂಡಿತು ಎಂದರೆ, ಕರಗಿದ ನೀರಿನ ಜತೆಯಲ್ಲೇ, ಬೃಹದಾಕಾರದ ಹಿಮದ ಬಂಡೆಗಳು ಕುಸಿದು ಬರುತ್ತವೆ. ವರ್ಷಕ್ಕೆ ಕೆಲವೇ ಇಂಚು ಅಥವಾ ಕೆಲವೇ ಅಡಿಗಳಷ್ಟು ಮಾತ್ರ ಕೆಳಗೆ ಸರಿಯುತ್ತಿದ್ದ ಹಿಮನೀರ್ಗಲ್ಲ ನದಿಗಳು (ಗ್ಲೇಷಿಯರ್), ಒಮ್ಮೆಗೇ ತಮ್ಮ ಕುಸಿತಕ್ಕೆ ವೇಗೋತ್ಕರ್ಷ ಪಡೆದು, ಸರಸರನೆ ಹರಿದು ಕೆಳಭಾಗಕ್ಕೆ ಬರುತ್ತವೆ. ಕಳೆದ ಆಗಸ್ಟ್ 26ರಂದು ತ್ರಿಶೂಲಿ ನದಿಯಲ್ಲಿ ಹತ್ತಾರು ಅಡಿ ಎತ್ತರದ ನೀರಿನ ಪ್ರವಾಹ ಒಮ್ಮೆಗೇ ಹರಿದು ಬರಲು, ಇಂತಹದ್ದೇ ಒಂದು ಬೃಹತ್ ಹಿಮ ಕುಸಿತ ಕಾರಣ.

ಈ ಭೀಕರ ದುರಂತದಲ್ಲಿ ನೇಪಾಳದ ಹಲವು ಪಟ್ಟಣಗಳು, ಹಳ್ಳಿಗಳು ಕೊಚ್ಚಿಹೋಗಿವೆ; ಕೆಲವು ಹಳ್ಳಿಗಳಂತೂ ಪೂರ್ತಿ ನೆಲಸಮವಾಗಿವೆ. ತ್ರಿಶೂಲಿ ಮೊದಲಾದ ಪಟ್ಟಣಗಳ ಅರ್ಧಕ್ಕರ್ಧ ಭಾಗವು ನೀರಿಗೆ ಆಹುತಿಯಾಗಿದೆ. ಅಲ್ಲಿದ್ದ ಜನರು ಭೀಕರ ಪ್ರಾಕೃತಿಕ ಪ್ರಕೋಪಕ್ಕೆ ಬಲಿಯಾಗಿದ್ದಾರೆ. ಅಧಿಕೃತ ಸಂಖ್ಯೆಯ ಜತೆಯಲ್ಲೇ, ಕೆಸರಿನಲ್ಲಿ ಅವೆಷ್ಟೋ ಜನರು ಹೂತುಹೋಗಿದ್ದಾರೆ ಎಂಬ ವರದಿಗಳೂ ಬರುತ್ತಿದ್ದು, ಅವರನ್ನು ಕೆಸರಿನಿಂದ ಹೊರತೆಗೆಯುವ ಕೆಲಸಕ್ಕೂ ವಿಘ್ನಗಳಾಗುತ್ತಿವೆ. ಸ್ಥಳೀಯ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು, ನೇಪಾಳ ಸರಕಾರವು ಪರಿಹಾರ ಕಾರ್ಯ ನಡೆಸುತ್ತಿದೆ; ಅಂತಾರಾಷ್ಟ್ರೀಯ ನೆರವನ್ನು ಪಡೆಯುವಾಗ ಎಚ್ಚರಿಕೆಯ ನಡೆಯನ್ನು ಸಹ ಇಡುತ್ತಿದೆ.

ಅಲ್ಲಿನ ಹಲವು ಸೇತುವೆಗಳು ಕೊಚ್ಚಿಹೋಗಿದ್ದು, ನದಿಯ ಒಂದು ದಡದಿಂದ ಇನ್ನೊಂದು ದಡಕ್ಕೆ ಪರಿಹಾರವನ್ನು ಒದಗಿಸುವಲ್ಲೂ ಬಹಳ ತೊಡಕುಂಟಾಗಿದೆ. ಒಂದು ದಡದಿಂದ ಇನ್ನೊಂದು ದಡಕ್ಕೆ ಜನರು ಹೋಗಲು ಸಂಪರ್ಕ ಸಾಧನವಿಲ್ಲದೇ, ಹಗ್ಗದಿಂದ ಎಳೆಯುವ ಪುಟ್ಟ ಪಂಜರದಲ್ಲಿ ಮನುಷ್ಯರನ್ನು ಮತ್ತು ಆಹಾರ ಧಾನ್ಯವನ್ನು ಸಾಗಿಸುವ ಕೆಲಸ ನಡೆದಿದೆ. ಪದೇ ಪದೇ ಪ್ರವಾಹಗಳು ಉಕ್ಕಿ ಬರುತ್ತಲೇ ಇರುವುದರಿಂದಾಗಿ, ದೋಣಿಯನ್ನು ಸಹ ಸಮರ್ಪಕವಾಗಿ ಬಳಸದೇ ಇರುವಂತಹ ಇಕ್ಕಟ್ಟಿನ ಸ್ಥಿತಿಯಲ್ಲಿ ನೇಪಾಳ ಇದೆ.

ಆದರೆ, ನೇಪಾಳದ ಈ ಭೀಕರ ದುರಂತವು, ಪಡೆಯಬೇಕಾದಷ್ಟು ಪ್ರಚಾರವನ್ನು (ಒಂದರ್ಥದಲ್ಲಿ ಪ್ರಚಾರ ಬೇಕಿಲ್ಲ ನಿಜ) ಮತ್ತು ಅಂತಾರಾಷ್ಟ್ರೀಯ ಮಟ್ಟದ ನೆರವನ್ನು ಪಡೆಯುತ್ತಿಲ್ಲವೆಂದೇ ನನ್ನ ಅನಿಸಿಕೆ. ನೇಪಾಳದ ಸಾವಿರಾರು ಜನರು ಕಣ್ಮರೆಯಾಗಿದ್ದರ ಜತೆಯಲ್ಲೇ, ನೂರಾರು ಪ್ರವಾಸಿಗರು ಸಹ ಆ ನೆರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಮಾನಸ ಸರೋವರ, ಕೈಲಾಸ ಪರ್ವತಕ್ಕೆ ಹೊರಟಿದ್ದ, ಹೋಗಿದ್ದ ಯಾತ್ರಿಕರು, ಪ್ರವಾಸಿಗರು, ನೇಪಾಳಕ್ಕೆ ಬಂದ ಇತರ ಪ್ರವಾಸಿಗರು ಸಹ ಪ್ರವಾಹಕ್ಕೆ ಸಿಲುಕಿಕೊಂಡಿದ್ದರು. ಅವರಲ್ಲಿ ಎಷ್ಟೋ ಜನರ ಮಾಹಿತಿಯು, ಇಂದಿಗೂ, ಅಂದರೆ ಸುಮಾರು ಎರಡು ವಾರಗಳಾದರೂ ದೊರಕುತ್ತಿಲ್ಲ!

ಅಂದಾಗ, ಅಲ್ಲಿನ ಇಂದಿನ ದುಸ್ಥಿತಿಯನ್ನು ಸ್ವಲ್ಪವಾದರೂ ಊಹಿಸಬಹುದು. ಅಂತಾರಾಷ್ಟ್ರೀಯ ಗಮನದ ವಿಚಾರಕ್ಕೆ ಬಂದರೆ, ಈಗ ಕಂಡುಬಂದಿರುವ ಜಾಗತಿಕ ನಿರ್ಲಕ್ಷ್ಯದಂತಹ ಸನ್ನಿವೇಶಕ್ಕೆ, ನೇಪಾಳವು ಪಾಶ್ಚಾತ್ಯ ಜಗತ್ತಿನಿಂದ ಬಹು ದೂರವಿರುವುದೂ ಒಂದು ಕಾರಣವಿರಬಹುದು. ಇಂತಹದ್ದೇ ದುರಂತಗಳು ಆಫ್ರಿಕಾದಲ್ಲೋ, ಯುರೋಪಿನಲ್ಲೋ, ಕ್ಯೂಬಾದಂತಹ ದೇಶಗಳಲ್ಲೋ ನಡದಿದ್ದರೆ, ಇದಕ್ಕೂ ಬಹುಪಾಲು ಜಾಗತಿಕ ಗಮನವನ್ನು ಸೆಳೆಯುತ್ತಿದ್ದವು. ಈ ರೀತಿ ಗಮನ ಸೆಳೆಯುವುದರಿಂದಾಗಿ, ಸೂಕ್ತ ನೆರವನ್ನು ಪಡೆಯಲು ಸಹಾಯವಾಗುತ್ತದೆ. ಆದರೆ, ನೇಪಾಳವನ್ನು ದೊಡ್ಡ ದೊಡ್ಡ ದೇಶಗಳು ಅದೇನೋ ಕಾರಣದಿಂದಾಗಿ ದೂರವಿಟ್ಟಿವೆ ಎಂಬ ಭಾವನೆ ಮೂಡು ತ್ತಿರುವುದಂತೂ ನಿಜ.

ನೇಪಾಳದ ಒಂದು ಪಕ್ಕದಲ್ಲಿ ಭಾರತ, ಇನ್ನೊಂದು ಪಕ್ಕದಲ್ಲಿ ಚೀನಾ ಇರುವುದರಿಂದಾಗಿ, ಇವೆರ ಡೂ ದೇಶಗಳನ್ನು ನೇಪಾಳವು ವಿವಿಧ ಸಂದರ್ಭಗಳಲ್ಲಿ ನೆಚ್ಚಿಕೊಂಡಿರಬೇಕಾದ ಅನಿವಾರ್ಯತೆ ಇದೆ. ಭಾರತವು ಮೊದಲಿನಿಂದಲೂ ನೇಪಾಳಕ್ಕೆ ಹಲವು ರೀತಿಯಲ್ಲಿ ಸಹಕರಿಸುತ್ತಿದೆ; ಜತೆಗೆ, ಪುರಾತನ ಕಾಲದಿಂದಲೂ ಪರಸ್ಪರ ಬಾಂಧವ್ಯ ಹೊಂದಿರುವ ದೇಶಗಳು ಇವು. ಇಂದಿಗೂ ನೇಪಾಳದ ಹಲವರು ವೃತ್ತಿಯನ್ನು ಅರಸುತ್ತಾ ಭಾರತಕ್ಕೆ ಬರುತ್ತಿರುವುದು, ಇಂತಹ ಒಂದು ಬಾಂಧವ್ಯದ ಪ್ರತೀಕ ಎಂದೇ ಗುರುತಿಸಲು ಸಾಧ್ಯ.

ಆದರೆ, ಚೀನಾದೊಂದಿಗಿನ ನೇಪಾಳದ ಬಾಂಧವ್ಯವನ್ನು ಬೇರೆಯದೇ ರೀತಿಯಲ್ಲಿ ಗುರುತಿಸಬೇಕಾ ದೀತು. ನೇಪಾಳದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಚೀನಾವು ಹಲವು ಸನ್ನಿವೇಶಗಳಲ್ಲಿ ಸಹಾಯ ಮಾಡಿರುವುದು ವರದಿಯಾಗಿದೆ. ಮುಖ್ಯವಾಗಿ, ನೇಪಾಳದಲ್ಲಿ ಅಽಕಾರವನ್ನು ಹಿಡಿದ ಪಕ್ಷಗಳು ಚೀನಾದೊಂದಿಗೆ ಹೆಚ್ಚಿನ ಗೆಳೆತನವನ್ನು ಬಯಸಿದಾಗ, ಇಂತಹ ನೆರವನ್ನು ಚೀನಾ ನೀಡಿದೆ. ಈ ರೀತಿ ಚೀನಾವು ಹೊರದೇಶಗಳಿಗೆ ನೆರವನ್ನು ನೀಡಿದರೆ, ಅದರ ಹಿಂದೆ ರಾಜಕೀಯ ಉದ್ದೇಶಗಳಿವೆ ಎಂಬ ವಿಶ್ಲೇಷಣೆಗಳಿದ್ದರೂ, ಹಲವು ಆಯಾಮಗಳಲ್ಲಿ ಸಾಕಷ್ಟು ಹಿಂದುಳಿದಿರುವ ನೇಪಾಳವು, ಅಗತ್ಯ ಎನಿಸುವ ನೆರವನ್ನು ಪಡೆದಾಗ ಕೊಂಕು ನುಡಿಯುವುದು ಸಮಂಜಸವಲ್ಲ.

ಆದರೆ, ಎರಡು ವಾರಗಳ ಹಿಂದೆ ತ್ರಿಶೂಲಿ ನದಿಯಲ್ಲಿ ಉಕ್ಕಿಬಂದ ಭೀಕರ ಪ್ರವಾಹದ ವಿಚಾರದಲ್ಲಿ, ಇಂತಹದ್ದೇ ನಿರ್ಲಿಪ್ತ ವಿಶ್ಲೇಷಣೆಯನ್ನು ಮಾಡುವಂತಿಲ್ಲ. ಅದಕ್ಕೇ ಇರಬೇಕು, ನೇಪಾಳವು ತನಗಾದ ನಷ್ಟವನ್ನು ಜಗತ್ತಿನ ವಿವಿಧ ದೇಶಗಳು ತುಂಬಿಕೊಡಬೇಕು ಎನ್ನುವಾಗ, ಚೀನಾದ ಹೆಸರನ್ನು ಪ್ರಧಾನವಾಗಿ ಪ್ರಸ್ತಾಪಿಸಿದ್ದು! ತ್ರಿಶೂಲಿ ನದಿಯಲ್ಲಿ ನುಗ್ಗಿಬಂದ ಮೃತ್ಯುಸ್ವರೂಪಿ ಪ್ರವಾಹದ ಮೂಲ ಚೀನಾ ದೇಶ ದಲ್ಲಿತ್ತು ಎಂಬ ವಿಚಾರವನ್ನೂ ಇಲ್ಲಿ ಗಮನಸಿಬೇಕು.

ಭೂತಾಪಮಾನ ಏರಿಕೆಯಿಂದಾಗಿ ಚೀನಾದಲ್ಲಿದ್ದ ಹಿಮನೀರ್ಗಲ್ಲ ನದಿ ಕುಸಿತ ಉಂಟಾಗಿರುವು ದರಿಂದ, ಇದರಲ್ಲಿ ಚೀನಾ ದೇಶದ ನೇರ ಹಸ್ತಕ್ಷೇಪ ಇಲ್ಲದೇ ಇರಬಹುದು; ಆದರೆ, ಚೀನಾವು ಆ ಪ್ರದೇಶದಲ್ಲಿ ಅಪಾರ ಪ್ರಮಾಣದ ಕಾಮಗಾರಿ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದೆ ಎಂದಾಗ, ತನ್ನ ನೆರೆಯ ದೇಶದ ಕುರಿತ ಕಾಳಜಿಯನ್ನು ಹೊಂದಿರುವುದು ಚೀನಾದ ಕರ್ತವ್ಯವೇ ಸರಿ. ತನ್ನ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಕೃತಕ ಸರೋವರ ಕರಗಿ, ನೆರೆ ನುಗ್ಗುತ್ತಿರುವ ವಿಚಾರವನ್ನು ಮುಂಚಿತವಾಗಿ ಚೀನಾವು ನೇಪಾಳಕ್ಕೆ ತಿಳಿಸಬೇಕಿತ್ತು ಎಂಬ ವಾದವೂ ಇದೆ; ಆ ಕೆಲಸವನ್ನು ಚೀನಾ ಮಾಡಿತ್ತು, ಆದರೆ ಒಂದೆರಡು ಗಂಟೆಗಳ ಅವಧಿಯಲ್ಲಿ ಸೂಕ್ತ ಎಚ್ಚರಿಕೆ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂಬ ವರದಿಗಳೂ ಬಂದಿವೆ.

ಈ ರೀತಿ ನೆರೆ ನುಗ್ಗಿ ಬರುತ್ತಿದೆ ಎಂಬ ಸುದ್ದಿ ತಿಳಿದು, ಒಂದೆರಡು ಶಾಲೆಗಳ ಮುಖ್ಯೋಪಾಧ್ಯಾ ಯರು, ನದಿಯ ಸನಿಹದಲ್ಲಿದ್ದ ಶಾಲಾ ಕಟ್ಟಡದಿಂದ ಮಕ್ಕಳನ್ನು ಎತ್ತರದ ಜಾಗಕ್ಕೆ ಸ್ಥಳಾಂತರಿಸಿ, ಸಾವಿರಾರು ಪ್ರಾಣಗಳನ್ನು ಉಳಿಸಿದ ವರದಿಗಳನ್ನು ಕಂಡಾಗ, ಚೀನಾದಿಂದ ಅಂತಹ ಸಂದೇಶ ಬಂದಿತ್ತು, ಆದರೆ ಪ್ರಾಯೋಗಿಕ ತೊಡಕುಗಳಿಂದಾಗಿ ಆ ನೆರೆಯ ಭೀಕರತೆ ಯನ್ನು ಮುಂಚಿತವಾಗಿ ಜನಸಾಮಾನ್ಯರೆಲ್ಲರಿಗೂ ತಿಳಿಸಲು ಸಾಧ್ಯವಾಗಲಿಲ್ಲ ಎಂಬುದನ್ನೂ ಗಮನಿಸಬಹುದು.

ಆದ್ದರಿಂದ, ಇಂತಹದೊಂದು ಭೀಕರ ನೆರೆಯ ಹಾನಿಯನ್ನು ಕಡಿಮೆಗೊಳಿಸಲು, ಅಕ್ಕಪಕ್ಕದ ದೇಶದ ಸಹಕಾರಕ್ಕಿಂತಲೂ, ಜಗತ್ತಿನ ಎಲ್ಲಾ ದೇಶಗಳ ಸಾಮೂಹಿಕ ಜವಾಬ್ದಾರಿಯೇ ಮುಖ್ಯ ಎಂಬುದನ್ನು ಎತ್ತಿಹೇಳಬೇಕಾಗಿದೆ. ಇದು ಈಗಿನ ತ್ರಿಶೂಲಿ ಪ್ರವಾಹಕ್ಕೂ ಅನ್ವಯ ಮತ್ತು ಅದಕ್ಕಿಂತ ಮಿಗಿಲಾಗಿ ಭವಿಷ್ಯದಲ್ಲಿ ಇಂತಹ ಪ್ರವಾಹಗಳನ್ನು ಕಡಿಮೆಗೊಳಿಸಲು ಸಹ ಅಗತ್ಯ.

ನೇಪಾಳದಲ್ಲಿ ನಡೆದ ಈ ಭೀಕರ ದುರಂತವು, ನಮ್ಮ ದೇಶವನ್ನೂ ಸೇರಿದಂತೆ, ಹಲವು ದೇಶಗಳಿಗೆ ಪಾಠವಾಗಬೇಕಿದೆ. ನಮ್ಮ ದೇಶದ ಉತ್ತರಾಂಚಲ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಅಂತಹದ್ದೇ ವಾತಾವರಣವಿದೆ, ಅದೇ ರೀತಿ ಎತ್ತರದ ಹಿಮಾಲಯಗಳಿಂದ ಹರಿದು ಬರುವ ಹಲವು ನದಿಗಳಿವೆ, ಅವುಗಳ ಉಗಮ ಸ್ಥಾನದಲ್ಲಿ ಸಾವಿರಕ್ಕೂ ಅಧಿಕ ಹಿಮ ನೀರ್ಗಲ್ಲ ನದಿಗಳಿವೆ. ಭೂತಾಪಮಾನ ಏರಿಕೆಯಾದಂತೆಲ್ಲಾ, ಅವು ವೇಗವಾಗಿ ಕರಗುತ್ತಿವೆ ಎಂದು ವಿಜ್ಞಾನಿಗಳು ಈಗಾಗಲೇ ಖಚಿತವಾಗಿ ತರ್ಕಬದ್ಧವಾಗಿ ಲೆಕ್ಕಹಾಕಿ, ತಮ್ಮ ಅಧ್ಯಯನದ ವಿವರಗಳನ್ನು ಪ್ರಕಟಿಸಿದ್ದಾರೆ.

ಅಂತಹ ಹಿಮನೀರ್ಗಲ್ಲ ನದಿಗಳು ಕರಗಿ ಆಗುವ ಪ್ರವಾಹವನ್ನು ಎದುರಿಸಲು ಸಿದ್ಧತೆ ನಡೆಸುವುದು ಒಂದೆಡೆಯಾದರೆ, ಜಾಗತಿಕವಾಗಿ ಭೂತಾಪಮಾನ ತಡೆಯಲು ಸೂಕ್ತ ಕ್ರಮವನ್ನು ಕೈಗೊಳ್ಳುವುದು ಸಹ ಅಗತ್ಯವಿದೆ. ಮೊದಲನೆಯದು ನಮ್ಮ ದೇಶದ ಜವಾಬ್ದಾರಿ, ಎರಡನೆಯದು ಜಗತ್ತಿನ ಎಲ್ಲಾ ದೇಶಗಳ ಜವಾಬ್ದಾರಿ. ಆದರೆ, ಹೆಚ್ಚು ವಿವರವಾಗಿ ಯೋಚಿಸುತ್ತಾ ಹೋದರೆ, ಇದು ಪರಿಹಾರ ದೊರಕದೇ ಇರುವಂತಹ ಪ್ರಶ್ನೆಯಾಗಿ ನಮ್ಮೆಲ್ಲರನ್ನೂ ಕಾಡಿದರೆ ಅಚ್ಚರಿಯಿಲ್ಲ!

ಶಶಿಧರ ಹಾಲಾಡಿ

View all posts by this author