ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shashidhara Halady Column: ಕೆರೆಯಲ್ಲಿ ನೀರು ತುಂಬಿತು! ಕಣ್ಣಲ್ಲಿ ನೀರು ಜಿನುಗಿತು !

ಸಂತಸದಲ್ಲಿ ಕೆಲವರು ‘ಗಂಗಮ್ಮನ ಪೂಜೆ’ ಮಾಡುತ್ತಿದ್ದರು; ಅಂದರೆ, ಕೆರೆಗೆ ಬಾಗಿನ ಕೊಡುತ್ತಿದ್ದರು. ಆ ವಿಶಾಲವಾದ ಕೆರೆ ಪೂರ್ತಿ ತುಂಬಿ ದಾಗ, ಅದನ್ನು ನೋಡುವುದೇ ಉಲ್ಲಾಸದ ಅನುಭವ. ಪ್ರತಿ ಸಂಜೆ ಏರಿ ಮೇಲೆ ವಾಕಿಂಗ್ ಬರಲು ಇನ್ನಷ್ಟು ಹುಮ್ಮಸ್ಸು ತುಂಬಿ ಬಂತು. ಅದೆಲ್ಲಿದ್ದವೋ, ನೂರಾರು ಹೆಬ್ಬಾತು, ಚಿಕ್ಕ ಬಾತು, ಗುಳಮುಳುಕ, ನೀರು ಕಾಗೆಗಳು, ಕೆರೆಯ ನೀರಿನಲ್ಲಿ ಈಜಾಡತೊಡಗಿದವು.

ಕೆರೆಯಲ್ಲಿ ನೀರು ತುಂಬಿತು! ಕಣ್ಣಲ್ಲಿ ನೀರು ಜಿನುಗಿತು !

-

ಬಯಲುಸೀಮೆಯಲ್ಲಿ ಕೆರೆ ಕೋಡಿ ಬೀಳುವುದು ಎಂದರೆ ಬಲು ಸಂಭ್ರಮದ ಸುದ್ದಿ; ಮುಂದಿನ ಒಂದೆರಡು ವರ್ಷಗಳ ಕಾಲ ಹಳ್ಳಿಗೆ ನೀರಿನ ಕೊರತೆಯಿಲ್ಲ ಎಂಬ ನೆಮ್ಮದಿಯ ಸುದ್ದಿ

ಮಲೆನಾಡಿನ ತಪ್ಪಲಿನಲ್ಲಿದ್ದ ನಮ್ಮ ಹಳ್ಳಿಯ ಸುತ್ತಮುತ್ತ ಕೆರೆಗಳು ಕಡಿಮೆ. ದೇವಾಲಯದ ಕಲ್ಯಾಣಿಗಳನ್ನೇ ‘ಕೆರೆ’ ಎಂದು ಕರೆಯುವ ರೂಢಿ. ಇನ್ನೂರು ಅಡಿ ಉದ್ದಗಲದ ಕಲ್ಯಾಣಿ ಎಂದರೆ ಬಹುದೊಡ್ಡ ಕೆರೆ ಎಂಬುದು ನಮ್ಮ ಗ್ರಹಿಕೆ. ನಮ್ಮ ಮನೆಯ ಹತ್ತಿರದ ಮಹಾಲಿಂಗೇಶ್ವರ ದೇವಸ್ಥಾನದ ಕೆಳಭಾಗ ದಲ್ಲಿ ಒಂದು ತುಸು ದೊಡ್ಡದಾದ ಕೆರೆ ಇದ್ದರೂ, ಅದರಲ್ಲಿ ಕೇದಗೆ ಗಿಡಗಳ ಪೊದೆ ಗಳು ಮತ್ತು ಇತರ ಹುಲ್ಲುಗಿಡಗಳು ಬೆಳೆದು, ಅದರ ವ್ಯಾಪ್ತಿಯನ್ನು ಕಡಿಮೆ ಮಾಡಿಬಿಟ್ಟಿವೆ. ಅದು ಬಿಟ್ಟರೆ, ಅದಕ್ಕಿಂತ ಚಿಕ್ಕದಾದ ಗುಮ್ಮಿ ಎಂಬ ನೀರಾಶ್ರಯವೂ ನಮ್ಮೂರಲ್ಲಿ ಇದೆ.

ಗುಮ್ಮಿಯ ವ್ಯಾಪ್ತಿ 20 ರಿಂದ 40 ಅಡಿ ಮಾತ್ರ. ವರ್ಷದಲ್ಲಿ ಮೂರರಿಂದ ನಾಲ್ಕು ತಿಂಗಳು ಮಳೆ ಸುರಿಯುತ್ತಿದ್ದ ಹಳ್ಳಿ ನಮ್ಮದಾಗಿದ್ದರಿಂದ, ಹಿಂದಿನವರಿಗೆ ವಿಶಾಲವಾದ ಕೆರೆಗಳನ್ನು ನಿರ್ಮಿಸುವ ಅನಿವಾರ್ಯತೆ ಇರಲಿಲ್ಲವೇನೋ!

ಜೊತೆಗೆ ನಮ್ಮ ಹಳ್ಳಿಯಲ್ಲಿ ಮನೆಗೆ ಒಂದೆರಡು ಬಾವಿ, ಹತ್ತು ಹೆಜ್ಜೆ ನಡೆದರೆ ನೀರು ಹರಿಯುವ ತೋಡು, ಬೇಸಿಗೆಯಲ್ಲಾದರೆ ಮನೆ ಮುಂದಿನ ಗದ್ದೆಯಲ್ಲಿ ಆರೆಂಟು ಅಡಿ ಗುಂಡಿ ತೋಡಿದರೆ ನೀರು ಸಿಗುತ್ತಿದ್ದರಿಂದ, ವಿಶಾಲ ಎನಿಸುವ ಜಲಾಶ್ರಯಗಳ ಅಗತ್ಯವೂ ಇರಲಿಲ್ಲ ಎನ್ನಿ. ಸದಾ ನೀರಿನಿಂದ ಜಿನುಗುವ ಇಂತಹ ಹಳ್ಳಿಯನ್ನು ತೊರೆದು, ಬಯಲು ಸೀಮೆಯ ಮಧ್ಯಭಾಗಲ್ಲಿದ್ದ ಒಂದು ಹಳ್ಳಿಗೆ ನಾನು ಉದ್ಯೋಗ ನಿಮಿತ್ತ ವಲಸೆ ಹೋಗಬೇಕಾಯಿತು. ತೀರ ಒಣ ಪ್ರದೇಶವೆಂದು ಕರೆಯಬಹು ದಾದ ಆ ಹಳ್ಳಿಗೆ ಬಂದಿಳಿದಾಗ, ಮೊದಲು ಗಮನ ಸೆಳೆದದ್ದು ಅಲ್ಲಿನ ವಿಶಾಲವಾದ ಕೆರೆ. ಅದೆಷ್ಟು ವಿಶಾಲವಾದ ಕೆರೆ ಎಂದರೆ, ಮೊದಲ ನೋಟಕ್ಕೆ ನನಗನಿಸಿದ್ದು- ಕಣ್ಣು ಹಾಯಿಸಿದಷ್ಟೂ ದೂರ ದುದ್ದಕ್ಕೂ ಆ ಕೆರೆ ಹರಡಿರಬೇಕು ಎಂದು!

ಆದರೇನು ಮಾಡುವುದು! ಆ ದೊಡ್ಡ ಕೆರೆಯಲ್ಲಿ ಒಂದು ಹನಿಯೂ ನೀರಿರಲಿಲ್ಲ! ‘ಎರಡು ವರ್ಷ ವಾಯಿತು ಮಳೆ ಬರದೆ, ಅದಕ್ಕೂ ಮುಂಚೆ ಸ್ವಲ್ಪ ಮಳೆ ಬಂದಿದ್ದರೂ, ಕೆರೆ ಅರ್ಧ ಮಾತ್ರ ತುಂಬಿತ್ತು’ ಎನ್ನುತ್ತಿ ದ್ದರು ಆ ಹಳ್ಳಿಯವರು. ಒಂದೂವರೆ ಕಿ. ಮೀ. ಉದ್ದವಿದ್ದ ಆ ಕೆರೆಯ ಏರಿ ಮೇಲೆ ಒಂದು ರಸ್ತೆ ಇತ್ತು; ಸಂಜೆ ಕೆಲಸ ಮುಗಿದ ತಕ್ಷಣ, ನಾವು ನಾಲ್ಕಾರು ಮಂದಿ ಸಹೋದ್ಯೋಗಿ ಗಳು ಕೆರೆಯ ಏರಿ ಮೇಲೆ ವಾಕಿಂಗ್ ಮಾಡುತ್ತಿದ್ದೆವು. ಆದರೆ, ಆಗಿನ ದಿನಗಳಲ್ಲಿ ಆ ಹಳ್ಳಿಯಲ್ಲಿ ವಾಕಿಂಗ್ ಎಂಬ ಪದ ರೂಢಿಯಲ್ಲಿರಲಿಲ್ಲ!

ನಾವು ವಾಕಿಂಗ್ ಮಾಡುವುದನ್ನು ನೋಡಿ, ಹಳ್ಳಿಯ ಜನರು ಮುಖವನ್ನು ಒಂದು ರೀತಿ ಮಾಡಿ ಕೊಂಡು, ಮುಸಿಮುಸಿ ನಗುತ್ತಿದ್ದರು. ಏಕೆ ಗೊತ್ತೇ? ಆ ಊರಿನ ವರ ಪ್ರಕಾರ ಕೆರೆ ಏರಿ ಮೇಲೆ ನಡೆಯು ವುದು ಒಂದೇ ಉದ್ದೇಶಕ್ಕೆ- ಬೆಳಗಿನ ಆ ಮೊದಲ ಕೆಲಸಕ್ಕೆ ಮಾತ್ರ. ಎಲ್ಲರೂ ಆ ಕೆಲಸಕ್ಕೆ ಅಲ್ಲಿಗೇ ಹೋಗುವುದರಿಂದಾಗಿ, ‘ಕೆರೆಕಡೆ ಹೋಗುವುದು’ ಎಂದರೆ, ಅದೊಂದೇ ಕೆಲಸಕ್ಕೆ ಎಂಬರ್ಥ ಚಾಲ್ತಿಯಲ್ಲಿತ್ತು. ಆದ್ದರಿಂದಲೇ ಇರಬೇಕು, ನಾವು ದಿನಾ ಸಂಜೆ ಆ ನೀರಿಲ್ಲದ ಕೆರೆ ಏರಿ ಮೇಲೆ ವಾಕಿಂಗ್ ಮಾಡುವುದನ್ನು ಕಂಡಾಕ್ಷಣ, ಅವರ ಮೂಗು ಅದೇನೋ ವಾಸನೆಯನ್ನು ಗ್ರಹಿಸಿದಂತೆ ತಾನೇ ಊಹಿಸಿಕೊಂಡು, ಸೊಟ್ಟಗಾಗಿ ಆಘ್ರಾಣಿಸು ವಂತೆ ವರ್ತಿಸುತ್ತಿತ್ತು!

ಆ ಊರಿನ ಕೆರೆ ಪೂರ್ತಿ ಒಣಗಿದ್ದರಿಂದ, ಊರಿನಲ್ಲಿದ್ದ ಆರೆಂಟು ಬಾವಿಗಳೂ ಬತ್ತಿದ್ದವು. ಕೆರೆಯ ಹೃದಯ ಭಾಗದಲ್ಲಿದ್ದ ಕಲ್ಯಾಣಿಯ ನಡುವೆಯಿದ್ದ ಒಂದು ಬಾವಿಯಲ್ಲಿ ಮಾತ್ರ ಸ್ವಲ್ಪ ನೀರಿತ್ತು. ಆ ಬಾವಿಗೆ ಜನರು ಸಾಲಾಗಿ ಹೋಗಿ, ಕೊಡ ದಲ್ಲಿ ನೀರನ್ನು ತರುತ್ತಿದ್ದುದನ್ನು ನೋಡಿದ ನನಗೆ, ನಮ್ಮ ಹಳ್ಳಿಯ ನೀರಿನ ಸಮೃದ್ಧತೆ ನೆನಪಾಗುತ್ತಿತ್ತು. ಆ ಹಳ್ಳಿಯಲ್ಲಿ, ಸಾರ್ವಜನಿಕನಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಲಾಗಿದ್ದರೂ, ಹಗಲಿಡೀ ವಿದ್ಯುತ್ ಕಡಿತದಿಂದಾಗಿ ಆ ನಲ್ಲಿಗಳಲ್ಲಿ ಅರ್ಧ ಗಂಟೆಯೋ, ಒಂದು ಗಂಟೆಯೋ ನೀರು ಬರುತ್ತಿದ್ದು, ಅದು ಯಾರಿಗೂ ಸಾಕಾಗುತ್ತಿರಲಿಲ್ಲ. ಒಟ್ಟಿನಲ್ಲಿ ಇಡೀ ಹಳ್ಳಿಯಲ್ಲಿ ನೀರಿಗಾಗಿ ಹಾಹಾಕಾರ!

ಇಂತಿರುವ ಸಂದರ್ಭದಲ್ಲಿ, ನಾನು ಆ ಊರಿಗೆ ಬಂದ ಒಂದೇ ತಿಂಗಳಲ್ಲಿ, ನಾಲ್ಕಾರು ದಿನ ಸಾಕಷ್ಟು ಮಳೆ ಬಂತು! ಕೆರೆಗೆ ಸ್ವಲ್ಪ ನೀರು ಹರಿದುಬಂತು. ಹಳ್ಳಿಯ ವರಿಗೆಲ್ಲ ಖುಷಿ. ಅದು ಪುಟ್ಟ ಊರಾಗಿದ್ದರಿಂದ, ನನಗೆ ಒಂದೇ ತಿಂಗಳಲ್ಲಿ ನನಗೆ ಹಲವರ ಪರಿಚಯವಾಗಿತ್ತು. ಅವರೆಲ್ಲ ನನ್ನನ್ನು ಕಂಡಾಕ್ಷಣ ನಗುನಗುತ್ತಾ ‘ನೀವು ಮಲೆಸೀಮೆಯವರು ನಮ್ಮೂರಿಗೆ ಬಂದ ಕೂಡಲೇ ಮಳೆ ಬಂತು. ಒಳ್ಳೆ ಘಳಿಗೆಯಲ್ಲಿ ಕಾಲಿಟ್ಟಿದ್ದೀರಿ’ ಎನ್ನುತ್ತಿದ್ದರು. ಅದರ ಮುಂದಿನ ವಾರಗಳಲ್ಲಿ ಮತ್ತಷ್ಟು ಮಳೆ ಬಂತು. ಆ ಹಳ್ಳಿಗೆ ಮಾತ್ರವಲ್ಲ ಅಲ್ಲಿನ ಕೆರೆಗೆ ನೀರು ತರುವ ಹಳ್ಳ ಹರಿದು ಬರುವ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಯಾಯಿತು. ಹಳ್ಳವು ರಭಸವಾಗಿ ಹರಿದು ಬಂತು; ಕೆರೆಯ ನೀರಿನ ಪ್ರಮಾಣ ಏರುತ್ತಾ ಹೋಯಿತು. ಪ್ರತಿದಿನ ಎಷ್ಟು ಮೆಟ್ಟಿಲು ನೀರು ಏರಿದೆ ಎಂದು ಹಳ್ಳಿಯ ವರು ನೋಡಿದ್ದೇ ನೋಡಿದ್ದು. ಒಂದೆರಡು ವಾರದಲ್ಲಿ ಕೆರೆ ತುಂಬಿ ಕಣ್ಣು ಹಾಯಿಸಿ ದಷ್ಟು ದೂರ ಬಣ್ಣದ ನೀರು!

ಎಲ್ಲರಿಗೂ ಭಲೇ ಖುಷಿ. ಒಂದು ಬೆಳಗ್ಗೆ ಎದ್ದು ‘ಕೆರೆ ಕಡೆ’ ಹೋಗಿ ನೋಡುತ್ತೇನೆ, ಕೆರೆ ಏರಿಯ ಮೇಲೆ ಜನರೆಲ್ಲಾ ಸಾಲಾಗಿ ನಿಂತಿದ್ದಾರೆ. ‘ಬನ್ನಿ ಸಾರ್, ಕೆರೆ ಕೋಡಿ ಬಿದ್ದಿದೆ ನೋಡಿ ಬನ್ನಿ’ ಎಂದು ಹಲವರು ಪರಿಚಿತರು ಕರೆದರು. ನಿಜ, ಕೆರೆ ಕೋಡಿ ಬಿದ್ದಿತ್ತು! ಕೆರೆಯ ಕೋಡಿ ಯಲ್ಲಿ ನೀರು ತುಂಬಿ ಹರಿದು ಹೋಗು ತ್ತಿದೆ. ಹಳ್ಳಿಯ ಜನರೆಲ್ಲ ಕೆರೆ ಏರಿ ಮೇಲೆ ನಿಂತು ತುಂಬಿದ ಕೆರೆಯನ್ನು ಮತ್ತು ಕೋಡಿಯಲ್ಲಿ ಹರಿಯುತ್ತಿರುವ ನೀರನ್ನು ನೋಡುತ್ತಾ ಗಲಗಲ ಎಂದು ಸಂತಸದಿಂದ ಪರಸ್ಪರ ಮಾತನಾಡಿಕೊಳ್ಳುತ್ತಿದ್ದಾರೆ; ಸಂತಸ ಹಂಚಿಕೊಳ್ಳುತ್ತಿದ್ದಾರೆ!

ಆ ಕೆರೆಗೆ ಎರಡು ಕೋಡಿಗಳಿವೆ - ಒಂದು ಊರ ಮುಂದಿನ ಚಿಕ್ಕ ಕೋಡಿ. ಇನ್ನೊಂದು, ಕೆರೆಯ ಏರಿಯ ತುದಿಯಲ್ಲಿ ರುವ ದೊಡ್ಡ ಕೋಡಿ. ಊರಮುಂದಿನ ಚಿಕ್ಕ ಕೋಡಿಯಲ್ಲಿ ಹರಿಯುತ್ತಿದ್ದ ನೀರನ್ನು ನೊಡಿದ ನಂತರ, ಹಳ್ಳಿಯ ಎಲ್ಲರಂತೆ, ನಾನೂ ಸಹ ದೊಡ್ಡ ಕೋಡಿ ನೋಡಲು ಹೊರಟೆ. ಕೆರೆಏರಿ ಯುದ್ದಕ್ಕೂ ನಡೆದು, ದೊಡ್ಡ ಕೋಡಿ ತಲುಪಿದಾಗ ಅಲ್ಲಿ ಜನ ಜಾತ್ರೆ! 100-200 ಅಡಿ ಅಗಲವಿದ್ದ ಆ ಕೋಡಿಯಲ್ಲಿ ನೀರು ಉಕ್ಕಿ, ಕೆಳಗಿನ ಹಳ್ಳ ದಲ್ಲಿ ಹರಿದುಹೋಗುತ್ತಿತ್ತು.

ಸಂತಸದಲ್ಲಿ ಕೆಲವರು ‘ಗಂಗಮ್ಮನ ಪೂಜೆ’ ಮಾಡುತ್ತಿದ್ದರು; ಅಂದರೆ, ಕೆರೆಗೆ ಬಾಗಿನ ಕೊಡುತ್ತಿದ್ದರು. ಆ ವಿಶಾಲವಾದ ಕೆರೆ ಪೂರ್ತಿ ತುಂಬಿ ದಾಗ, ಅದನ್ನು ನೋಡುವುದೇ ಉಲ್ಲಾಸದ ಅನುಭವ. ಪ್ರತಿ ಸಂಜೆ ಏರಿ ಮೇಲೆ ವಾಕಿಂಗ್ ಬರಲು ಇನ್ನಷ್ಟು ಹುಮ್ಮಸ್ಸು ತುಂಬಿ ಬಂತು. ಅದೆಲ್ಲಿದ್ದವೋ, ನೂರಾರು ಹೆಬ್ಬಾತು, ಚಿಕ್ಕ ಬಾತು, ಗುಳಮುಳುಕ, ನೀರು ಕಾಗೆಗಳು, ಕೆರೆಯ ನೀರಿನಲ್ಲಿ ಈಜಾಡತೊಡಗಿದವು.

ಕೆರೆ ತುಂಬಿ ಕೋಡಿ ಬಿದ್ದು ನಾಲ್ಕಾರು ದಿನ ಆಗಿತ್ತು. ಒಂದು ಸಂಜೆ ಕೆರೆಯ ಏರಿ ಮೇಲೆ ವಾಕಿಂಗ್ ಮುಗಿಸಿ, ಕೊಠಡಿಗೆ ವಾಪಸ್ ಆಗುತ್ತಿದ್ದೆ. ಬಿಳಿ ಪಂಚೆ, ಕರಿಕೋಟು ಧರಿಸಿದ್ದ ಹಿರಿಯರೊಬ್ಬರು ಎದುರಾದರು. ಅವರು ಆ ಊರಿನ ಪಟೇಲರು ಎಂದು ದೂರದಿಂದ ನೋಡಿ ಗೊತ್ತಿತ್ತು, ಹೊರತು ಇನ್ನೂ ಮುಖತಃ ಪರಿಚಯ ವಾಗಿರಲಿಲ್ಲ.

ಹತ್ತಿರ ಬಂದವರೇ ನಮಸ್ಕರಿಸುತ್ತಾ ‘ನಿಮಗೆ ಧನ್ಯವಾದ ಸರ್. ನೀವು ಬಂದ ಎರಡೇ ತಿಂಗಳಲ್ಲಿ ನಮ್ಮೂರಿನ ಕೆರೆ ಕೋಡಿ ಬಿತ್ತು; ಈ ವರ್ಷ ನಾವೆಲ್ಲರೂ ಭತ್ತ ಬೆಳೆಯುತ್ತೇವೆ; ಕೆರೆಯ ಕೆಳಭಾಗ ದಲ್ಲಿರುವ ಗದ್ದೆಯ ಎಲ್ಲವೂ ಈ ಹಳ್ಳಿಯ ವರದ್ದು. ಬತ್ತದ ಬೆಳೆಯಂತೂ ಚೆನ್ನಾಗಿ ಆಗುತ್ತದೆ. ಇನ್ನು ಒಂದೆರಡು ವರ್ಷ ನಮಗೆ ಊಟಕ್ಕೆ ತೊಂದರೆ ಇಲ್ಲ.

ಆದ್ದರಿಂದ ನೀವು ಇಲ್ಲೇ ಇನ್ನಷ್ಟು ವರ್ಷ ಇರಿ, ಎಲ್ಲಿಗೂ ವರ್ಗ ಮಾಡಿಕೊಂಡು ಹೋಗ ಬೇಡಿ; ನಿಮ್ಮಂತಹ ಮಲೆನಾಡಿನವರು ನಮ್ಮೂರಲ್ಲಿ ಇದ್ದರೆ, ನಮ್ಮೂರ ಕೆರೆಗೆ ನೀರು ಬರುತ್ತೆ’ ಎಂದು, ಕೈ ಕುಲುಕಿ, ಹರಸಿ ದರು. ಅವರ ಮಾತುಗಳಲ್ಲಿನ ಪ್ರಾಮಾಣಿ ಕತೆಯ ಕುರಿತು ಸಂಶಯವಿರಲಿಲ್ಲ; ಬಹುಗೌರವದಿಂದ ನನ್ನ ಕೈಯನ್ನು ತುಂಬಾ ಹೊತ್ತು ಕುಲುಕಿದರು. ಹಿರಿಯ ರಾದ ಪಟೇಲರೆಲ್ಲಿ, ಆಗ ತಾನೇ ಕೆಲಸಕ್ಕೆ ಸೇರಿದ್ದ ಎಳೆಯ ಯುವಕ ನಾನೆಲ್ಲಿ! ‘ನನ್ನ ದೇನೂ ಇಲ್ಲ ಸರ್, ಎಲ್ಲಾ ಆ ಮಳೆ ದೇವರ ಕೃಪೆ’ ಎಂದೆ ನಿಧಾನವಾಗಿ. ಆದರೆ ಅವರಾ ಡಿದ ಕೃತಜ್ಞತೆಯ ಮಾತುಗಳನ್ನು ಕೇಳಿ ನನ್ನ ಕಣ್ಣಲ್ಲಿ ನೀರು ಜಿನುಗಿದ್ದಂತೂ ನಿಜ.