Kiran Upadhyay Column: ಬಾಳಬುತ್ತಿ ಕಟ್ಟಿಕೊಡುವ ಗುರುವಿಗೊಂದು ನಮನ
ಇಬ್ಬರಿಗೂ ಮೇಜಿನ ಕಡೆ ಮುಖ ಮಾಡಿ ಈಗ ಚೆಂಡು ಯಾವ ಬಣ್ಣದ್ದೆಂದು ಕೇಳಿದರು. ಈ ಬಾರಿ, ಮೊದಲು ಕಪ್ಪು ಎಂದಿದ್ದ ವಿದ್ಯಾರ್ಥಿ ಚೆಂಡು ಬಿಳಿಯ ಬಣ್ಣದ್ದೆಂದೂ, ಬಿಳಿಯದು ಎಂದಿದ್ದವ ಕಪ್ಪು ಬಣ್ಣದ್ದೆಂದೂ ವಾದ ಆರಂಭಿಸಿದರು. ಗುರುಗಳು ಇಬ್ಬರನ್ನೂ ಶಾಂತವಾಗಿಸಿ, ಚೆಂಡನ್ನು ನಿಧಾನವಾಗಿ ಗೋಲಾಕಾರವಾಗಿ ತಿರುಗಿಸಿದರು.

-

ವಿದೇಶವಾಸಿ
dhyapaa@gmail.com
ಅದೊಂದು ಕಾಲೇಜಿನ ತರಗತಿ. ಕೀಟಲೆ, ಗದ್ದಲ ಮಾಡುತ್ತಿದ್ದ ಒಂದಷ್ಟು ಮಕ್ಕಳು. ಅವರಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಇಬ್ಬರೂ ತಾವು ಹೇಳಿದ್ದೇ ಸರಿ ಎಂದು ವಾದಿಸುತ್ತಿದ್ದರು. ಆ ಸಂದರ್ಭದಲ್ಲಿ ತರಗತಿಗೆ ಗುರುಗಳ ಆಗಮನ. ವಾದಕ್ಕಿಳಿದಿದ್ದ ಇಬ್ಬರ ಮಾತನ್ನೂ ಕೇಳಿದ ಗುರುಗಳು ವಿಷಯ ತಿಳಿದರು. ಎಲ್ಲರೂ ಐದು ನಿಮಿಷ ಶಾಂತವಾಗಿ ಕುಳಿತುಕೊಳ್ಳುವಂತೆ ಹೇಳಿ ಸ್ಟಾಫ್ ರೂಮಿಗೆ ನಡೆದರು.
ಹಿಂತಿರುಗಿ ಬರುವಾಗ ಗುರುಗಳ ಕೈಯಲ್ಲಿ ಒಂದು ಚೀಲವಿತ್ತು. ವಾದಕ್ಕಿಳಿದಿದ್ದ ಇಬ್ಬರನ್ನೂ ತಮ್ಮ ಮೇಜಿನ ಬಳಿ ಕರೆದು, ಮೇಜಿನ ಇಕ್ಕೆಲದಲ್ಲಿ ನಿಲ್ಲಿಸಿದರು. ಇಬ್ಬರಿಗೂ ಗೋಡೆಯ ಕಡೆ ಮುಖ ಮಾಡಿ ನಿಲ್ಲುವಂತೆ ಹೇಳಿದರು. ಇಬ್ಬರೂ ಗುರುಗಳ ಮಾತು ಪಾಲಿಸಿ ತಿರುಗಿ ನಿಂತಾಗ ತಾವು ತಂದಿದ್ದ ಚೀಲದಿಂದ ಒಂದು ಚೆಂಡನ್ನು ತೆಗೆದು ಮೇಜಿನ ಮೇಲಿಟ್ಟರು.
ಇಬ್ಬರನ್ನೂ ಮೇಜಿನ ಕಡೆ ಮುಖ ಮಾಡಿ ಚೆಂಡನ್ನು ನೋಡುವಂತೆ ಹೇಳಿದರು. ಚೆಂಡಿನ ಬಣ್ಣ ಯಾವುದು ಎಂದು ಇಬ್ಬರನ್ನೂ ಕೇಳಿದರು. ಒಬ್ಬ ವಿದ್ಯಾರ್ಥಿ ಚೆಂಡಿನ ಬಣ್ಣ ಕಪ್ಪು ಎಂದರೆ ಇನ್ನೊಬ್ಬ ಬಿಳಿ ಎಂದನು. ಈಗ ಇಬ್ಬರೂ ಚೆಂಡಿನ ಬಣ್ಣದ ವಿಷಯದಲ್ಲಿ ವಾದ ಆರಂಭಿಸಿದರು. ಗುರುಗಳು ಇಬ್ಬರನ್ನೂ ಪುನಃ ಗೋಡೆಯ ಕಡೆ ಮುಖ ಮಾಡಲು ಹೇಳಿದರು. ಇಬ್ಬರೂ ತಿರುಗಿ ನಿಂತ ನಂತರ ಚೆಂಡನ್ನು ತಿರುಗಿಸಿ ಇಟ್ಟರು.
ಇಬ್ಬರಿಗೂ ಮೇಜಿನ ಕಡೆ ಮುಖ ಮಾಡಿ ಈಗ ಚೆಂಡು ಯಾವ ಬಣ್ಣದ್ದೆಂದು ಕೇಳಿದರು. ಈ ಬಾರಿ, ಮೊದಲು ಕಪ್ಪು ಎಂದಿದ್ದ ವಿದ್ಯಾರ್ಥಿ ಚೆಂಡು ಬಿಳಿಯ ಬಣ್ಣದ್ದೆಂದೂ, ಬಿಳಿಯದು ಎಂದಿದ್ದವ ಕಪ್ಪು ಬಣ್ಣದ್ದೆಂದೂ ವಾದ ಆರಂಭಿಸಿದರು. ಗುರುಗಳು ಇಬ್ಬರನ್ನೂ ಶಾಂತವಾಗಿಸಿ, ಚೆಂಡನ್ನು ನಿಧಾನವಾಗಿ ಗೋಲಾಕಾರವಾಗಿ ತಿರುಗಿಸಿದರು.
ಇದನ್ನೂ ಓದಿ: Kiran Upadhyay Column: ಇಷ್ಟು ಮಾಡಿ ಅಮೆರಿಕ ಸಾಧಿಸಿದ್ದಾದರೂ ಏನು ?
ಇಬ್ಬರೂ ಚೆಂಡನ್ನು ಮೊದಲ ಬಾರಿ ಪೂರ್ತಿಯಾಗಿ ನೋಡಿದರು. ಚೆಂಡು ಅರ್ಧ ಕಪ್ಪು, ಅರ್ಧ ಬಿಳಿಯ ಬಣ್ಣದ್ದಾಗಿತ್ತು. ಟೀಚರ್ ಸ್ಟಾಫ್ ರೂಮ್‌ನಿಂದ ಕ್ಲಾಸ್‌ರೂಮ್‌ಗೆ ತರುವ ಪೂರ್ವದಲ್ಲಿ ಬಿಳಿಯ ಚೆಂಡಿನ ಅರ್ಧ ಭಾಗಕ್ಕೆ ಕಪ್ಪು ಬಣ್ಣ ಹಚ್ಚಿದ್ದರು. ಅದನ್ನೇ ಮೇಜಿನ ಮೇಲೆ ಇಟ್ಟಾಗ ಒಂದು ಕಡೆ ನಿಂತವನಿಗೆ ಕಪ್ಪಾಗಿಯೂ, ಇನ್ನೊಂದು ಕಡೆ ನಿಂತವನಿಗೆ ಬಿಳಿಯದಾಗಿಯೂ ಕಂಡಿತ್ತು. ಅದೇ ಚೆಂಡನ್ನು ತಿರುಗಿಸಿ ಇಟ್ಟಾಗ ಇಬ್ಬರಿಗೂ ಬೇರೆ ಬಣ್ಣ ಕಂಡಿತ್ತು. ಅಸಲಿಗೆ ಚೆಂಡು ಒಂದೇ ಆಗಿದ್ದರೂ, ವಿದ್ಯಾರ್ಥಿಗಳಿಬ್ಬರೂ ಗುರುಗಳು ತಮ್ಮ ಮುಖ ತಿರುಗಿಸಲು ಹೇಳಿ, ಬೇರೆ ಚೆಂಡು ಇಟ್ಟಿzರೆಂದೇ ಭಾವಿಸಿದ್ದರು.
ಗುರುಗಳು ಇಬ್ಬರನ್ನೂ ಉದ್ದೇಶಿಸಿ ಹೇಳಿದರು- ‘ನಮ್ಮ ಜೀವನದಲ್ಲಿ ನಾವು ಬಹಳಷ್ಟು ವಿಷಯ ಗಳನ್ನು ನಾವು ಕಂಡ ರೀತಿಯಲ್ಲಿ, ನಮಗೆ ಸರಿ ಎನಿಸಿದ ರೀತಿಯಲ್ಲಿ ನಂಬುತ್ತೇವೆ. ನಾವು ಬೇರೆಯ ವರಿಗೂ ಅದನ್ನೇ ಹೇಳುತ್ತೇವೆ. ನಾವು ಕಂಡದ್ದೇ ಸರಿ ಎಂದು ವಾದಿಸುತ್ತೇವೆ. ಅನೇಕ ಸಲ ನಮ್ಮ ಅನಿಸಿಕೆಗಳಿಗೆ ಬೇರೆಯವರು ಸಮ್ಮತಿ ಸೂಚಿಸದ, ನಮ್ಮ ಮಾತನ್ನು ಬೇರೆಯವರು ಒಪ್ಪದ ಸಂದರ್ಭ ಒದಗಿಬರುತ್ತದೆ.
ನಮ್ಮ ಅಭಿಪ್ರಾಯವೇ ನೂರಕ್ಕೆ ನೂರು ಸರಿ ಎಂದು ನಾವು ನಂಬಿದರೆ ಕೆಲವರು ನಮ್ಮ ವಿರುದ್ಧ ವಾಗಿ ತಮ್ಮ ಅಭಿಪ್ರಾಯವೇ ನೂರಕ್ಕೆ ನೂರು ಸತ್ಯ ಎಂದು ನಂಬಿರುತ್ತಾರೆ. ಇದಕ್ಕೆ ಕಾರಣ ಏನು? ನಮಗೆ ಕಂಡ ಸತ್ಯ ಅವರಿಗೆ ಕಾಣುವುದಿಲ್ಲವೇ? ಇಂಥ ಸಂದರ್ಭದಲ್ಲಿ ನಾವು ಹತಾಶ ರಾಗಬ ಹುದು, ಅಂಥವರ ಮೇಲೆ ನಮಗೆ ಸಿಟ್ಟು ಬರಬಹುದು. ಕೆಲವೊಮ್ಮೆ ನಾವು ಅಂಥವರಿಂದ ದೂರವೂ ಆಗಬಹುದು. ಅದೇ ಕಾರಣದಿಂದ ಕೆಲವು ಸಂಬಂಧಗಳೂ ಕಳಚಿಕೊಳ್ಳಬಹುದು.
ಆದರೆ ಒಮ್ಮೆ ಶಾಂತಚಿತ್ತರಾಗಿ ಯೋಚಿಸಿ. ಅವರ ಜಾಗದಲ್ಲಿ ನೀವು ನಿಂತು ನೋಡಿ. ಆಗ ಅವರು ಏಕೆ ಆ ರೀತಿಯಾಗಿ ಯೋಚಿಸುತ್ತಿದ್ದಾರೆ ಎಂದು ಅರ್ಥವಾಗುತ್ತದೆ. ಕೆಲವೊಮ್ಮೆ ನಿಮ್ಮ ಸ್ಥಾನದಲ್ಲಿ ನೀವು ಸರಿಯಾಗಿದ್ದರೆ ಅವರ ಸ್ಥಾನದಲ್ಲಿ ಅವರು ಸರಿಯಾಗಿರುತ್ತಾರೆ. ಒಂದೇ ವಿಷಯ ಇಬ್ಬರಿಗೆ ಬೇರೆ ಬೇರೆಯಾಗಿ ಕಾಣುವುದು ಇದೇ ಕಾರಣಕ್ಕೆ. ಕೆಲವೊಮ್ಮೆ ಇಬ್ಬರೂ ಒಬ್ಬರಿಗೊಬ್ಬರು ತದ್ವಿರುದ್ಧವಾಗಿ, ತಾವು ಕಂಡದ್ದೇ ಸತ್ಯ ಎಂದು ತಿಳಿದಿದ್ದರೂ ವಾಸ್ತವಿಕವಾಗಿ ಇಬ್ಬರ ಸತ್ಯವೂ ಸುಳ್ಳಾಗಿರುವ ಸಾಧ್ಯತೆಯೂ ಇರುತ್ತದೆ".
ಇನ್ನೊಂದು ದಿನ ತರಗತಿಯಲ್ಲಿ ತಮ್ಮ ಚೀಲದಿಂದ ನಿಧಾನವಾಗಿ ಪೆನ್ಸಿಲ್ ಹೊರಗೆ ತೆಗೆಯುತ್ತಾ ಗುರುಗಳು ವಿದ್ಯಾರ್ಥಿಗಳಿಗೆ ಹೇಳಿದರು- “ಪ್ರಪಂಚಕ್ಕೆ ನಿಮ್ಮನ್ನು ನೀವು ತೆರೆದುಕೊಳ್ಳುವುದಕ್ಕೂ ಮೊದಲು ೩ ವಿಷಯಗಳನ್ನು ತಿಳಿದುಕೊಳ್ಳಬೇಕು. ಹಾಗೆ ತಿಳಿದುಕೊಂಡರೆ ನೀವು ಉತ್ತಮ ವ್ಯಕ್ತಿ ಗಳಾಗಿ ಬದುಕುತ್ತೀರಿ.
ಈ ಪೆನ್ಸಿಲ್ ನೋಡಿ, ಬಳಕೆಗೆ ಬರಬೇಕಾದರೆ ಇದು ಮೊನಚುಗೊಳ್ಳ ಬೇಕು. ಅದೂ ಒಮ್ಮೆಯಲ್ಲ, ಆಗಾಗ ಮೊನಚುಗೊಳ್ಳುತ್ತಲೇ ಇರಬೇಕು. ಈ ಮೊನಚುಗೊಳಿಸುವ ಪ್ರಕ್ರಿಯೆಯಲ್ಲಿ ಅದು ಎಷ್ಟು ನೋವು ಅನುಭವಿಸುತ್ತದೆ ಅಲ್ಲವೇ? ಹಾಗಂತ ನೋವು ಅನುಭವಿಸದೆ ಇದ್ದರೆ ಈ ಪೆನ್ಸಿಲ್ ನಿಷ್ಪ್ರಯೋಜಕ ಅಲ್ಲವೇ? ಹಾಗೆಯೇ ನೀವೂ ಜೀವನದಲ್ಲಿ ಬರುವ ಕಷ್ಟಕ್ಕೆ ಅಥವಾ ಅನುಭವಿ ಸುವ ನೋವಿಗೆ ಅಂಜಬಾರದು.
ಅದರಿಂದ ನೀವು ಪಾಠ ಕಲಿಯಬೇಕು, ಅದು ನಿಮ್ಮ ಏಳ್ಗೆಗೆ ಸಿದ್ಧತೆ ಎಂದು ತಿಳಿಯಬೇಕು. ಆಗ ಮಾತ್ರ ನೀವು ಜೀವನದಲ್ಲಿ ಮುಂದುವರಿಯಲು ಸಾಧ್ಯ. ಎರಡನೆಯದಾಗಿ, ಪೆನ್ಸಿಲ್‌ನ ಹಿಂದೆ ಒಂದು ಇರೇಸರ್ ಇರುವುದು ನಿಮಗೆ ಗೊತ್ತಲ್ಲ. ಪೆನ್ಸಿಲ್‌ನಿಂದ ಬರವಣಿಗೆಯಲ್ಲಿ ತಪ್ಪಾದಾಗ ಇರೇಸರ್ ತನ್ನ ಕೆಲಸ ಮಾಡುತ್ತದೆ.
ತಪ್ಪುಗಳನ್ನು ಅಳಿಸಿ ಸರಿಯಾದ ಬರಹ ಬರೆಯಲು ಅನುಕೂಲ ಆಗುವಂತೆ ಮಾಡಿಕೊಡುತ್ತದೆ. ಹಾಗೆಯೇ ನಮ್ಮ ತಪ್ಪುಗಳನ್ನು ತಪ್ಪೆಂದು ತಿಳಿಯದೇ, ಸುಧಾರಿಸಿಕೊಳ್ಳುವ ಅವಕಾಶ ಎಂದರಿತು ತಪ್ಪನ್ನು ತಿದ್ದಿಕೊಂಡು ಮುಂದುವರಿಯಬೇಕು. ನೆನಪಿರಲಿ, ನಿಮ್ಮ ಬದುಕಿನಲ್ಲಿ ನಿಮ್ಮ ಕಥೆಯನ್ನು ನೀವೇ ಬರೆಯಬೇಕು. ಆದ್ದರಿಂದ ನಿಮ್ಮ ಜೀವನದಲ್ಲಿ ಆದಷ್ಟು ತಪ್ಪುಗಳಾಗದಂತೆ ಬರೆಯಿರಿ.
ಒಂದು ವೇಳೆ ತಪ್ಪುಗಳಾದರೂ ಅದನ್ನು ಸರಿಪಡಿಸಿಕೊಂಡು ಪುನಃ ಅದೇ ತಪ್ಪಾಗದಂತೆ ಮುನ್ನಡೆ ಯಿರಿ. ಕೊನೆಯದಾಗಿ, ಒಂದು ಪೆನ್ಸಿಲ್ ಹೊರಗಡೆಯಿಂದ ನೋಡಲು ಎಷ್ಟೇ ಚೆಂದವಾಗಿ ಕಂಡರೂ, ಅದರ ಸತ್ವ ಇರುವುದು ಒಳಭಾಗದಲ್ಲಿ. ಒಳಗೆ ಪೊಳ್ಳಾಗಿದ್ದು ಹೊರಗೆ ಎಷ್ಟೇ ಸೊಗಸಾಗಿದ್ದರೂ ಏನು ಪ್ರಯೋಜನ? ನಮ್ಮ ಜೀವನವೂ ಅಷ್ಟೇ ನಾವು ಒಳಗಿನಿಂದ ಸದೃಢ ರಾಗಿರಬೇಕು, ಒಳ್ಳೆಯ ಗುಣಗಳನ್ನು ಹೊಂದಿರಬೇಕು".
ಇದು ಸೆಪ್ಟೆಂಬರ್ ೫ರ ಶಿಕ್ಷಕರ ದಿನಾಚರಣೆಯಂದು ಸ್ನೇಹಿತರೊಬ್ಬರು ಕಳಿಸಿದ ವಿಡಿಯೋ ತುಣುಕಿನ ಜೀವಾಳ. ಬಹಳ ಇಷ್ಟವಾದದ್ದರಿಂದ ಹಂಚಿಕೊಳ್ಳುತ್ತಿದ್ದೇನೆ. ನಮ್ಮ ಜೀವನದಲ್ಲಿ ಒಂದು ಅಕ್ಷರ, ಒಂದು ಪಾಠ ಕಲಿಸಿದವರೂ, ಒಂದು ವರ್ಷ ಕಲಿಸಿದವರೂ ಗುರುಗಳೇ. ಅದೆಲ್ಲ ಶೈಕ್ಷಣಿಕವಾಗಿ. ಅದರ ಜತೆಗೆ, ಜೀವನದ ಪಾಠ ಕಲಿಸಿಕೊಡುವವರೂ ಗುರುಗಳೇ ಅಲ್ಲವೇ? ಅವರು ಇತಿಹಾಸ, ವಿಜ್ಞಾನ, ಭಾಷೆ ಹೇಳಿಕೊಡದೆ ಇರಬಹುದು, ಆದರೆ ಬದುಕುವ ಪಾಠ ಹೇಳಿ ಕೊಡು ತ್ತಾರಲ್ಲ. ಅದು ಯಾವುದಕ್ಕೂ ಕಮ್ಮಿಯೇನಲ್ಲ. ಅದೇ ಸಂದೇಶದಲ್ಲಿ ಬಂದ ಇನ್ನೊಂದು ಪಾಠ ಹೇಳಿಬಿಡುತ್ತೇನೆ.
ಗುರುಗಳು ಒಂದು ದಿನ ತರಗತಿಗೆ ಬಂದು, ತಮ್ಮ ಚೀಲದಿಂದ ಒಂದು ಪಾರದರ್ಶಕ ಭರಣಿ ತೆಗೆದು ಮೇಜಿನ ಮೇಲಿಡುತ್ತಾರೆ. ಒಂದಷ್ಟು ಸಣ್ಣ ಚೆಂಡನ್ನು ಅದರಲ್ಲಿ ತುಂಬಿಸಿ, “ಈ ಭರಣಿ ತುಂಬಿತು ಅಲ್ಲವೇ?" ಎಂದು ಮಕ್ಕಳನ್ನು ಪ್ರಶಿಸುತ್ತಾರೆ. ಮಕ್ಕಳು “ಹೌದು" ಎನ್ನುತ್ತಾರೆ. ನಂತರ ಮೇಷ್ಟ್ರು ಒಂದಷ್ಟು ಸಣ್ಣ ಕಲ್ಲಿನ ಚೂರುಗಳನ್ನು ಅದೇ ಭರಣಿಯಲ್ಲಿ ಸುರಿಯುತ್ತಾರೆ. ಚೆಂಡಿನ ನಡುವೆ ಇರುವ ಜಾಗದಲ್ಲಿ ಆ ಚೂರುಗಳು ಸೇರಿಕೊಳ್ಳುತ್ತವೆ. ಮೇಷ್ಟ್ರು ಪ್ರಶ್ನಿಸುತ್ತಾರೆ, “ಈಗ ತುಂಬಿತಾ?". ಮಕ್ಕಳು “ಹೌದು" ಎನ್ನುತ್ತಾರೆ.
ಆ ಭರಣಿಗೆ ಮೇಷ್ಟ್ರು ಒಂದಷ್ಟು ಮರಳು ಸುರಿಯುತ್ತಾರೆ. ಚೆಂಡು ಮತ್ತು ಕಲ್ಲಿನ ಚೂರುಗಳ ನಡುವಿನ ಜಾಗದಲ್ಲಿ ಮರಳಿನ ಕಣಗಳು ತೂರಿಕೊಳ್ಳುತ್ತವೆ. ಈ ಬಾರಿಯೂ ಗುರುಗಳ ಅದೇ ಪ್ರಶ್ನೆ, ವಿದ್ಯಾರ್ಥಿಗಳ ಅದೇ ಉತ್ತರ. ಕೊನೆಯದಾಗಿ ಗುರುಗಳು ತಮ್ಮ ಚೀಲದಿಂದ ಥರ್ಮಾಸ್ ತೆಗೆದು ಅದರಲ್ಲಿರುವ ಕಾಫಿಯನ್ನು ಭರಣಿಯೊಳಕ್ಕೆ ಸುರಿಯುತ್ತಾರೆ.
“ಈಗ ನಿಜವಾಗಿಯೂ ಡಬ್ಬಿ ತುಂಬಿತಲ್ಲವೇ?" ಎಂದು ಪ್ರಶ್ನಿಸಿದಾಗ ಮಕ್ಕಳು ಪುನಃ “ಹೌದು" ಎಂದರೂ ಗುರುಗಳು ಇದನ್ನೆಲ್ಲ ಏಕೆ ಮಾಡುತ್ತಿದ್ದಾರೆ ಎಂದರಿಯದೇ ಮುಖಮುಖ ನೋಡಿಕೊಳ್ಳು ತ್ತಾರೆ. ಗುರುಗಳು ವಿವರಿಸುತ್ತಾರೆ: “ನಿಮ್ಮ ಜೀವನವನ್ನು ಮೇಜಿನ ಮೇಲಿರುವ ಭರಣಿ ಎಂದು ಊಹಿಸಿಕೊಳ್ಳಿ. ಇದರಲ್ಲಿರುವ ಚೆಂಡುಗಳು ನಿಮ್ಮ ಜೀವನದಲ್ಲಿ ಪ್ರಮುಖ ಅಂಶಗಳಾದ ನಿಮ್ಮ ಸಂಸಾರ, ಆರೋಗ್ಯ, ನಿಮ್ಮ ಅತಿ ಇಷ್ಟದ ಕೆಲಸ ಇತ್ಯಾದಿ. ಕಲ್ಲಿನ ಚೂರುಗಳು ಇತರ ಅವಶ್ಯಕತೆ ಗಳು- ನಿಮ್ಮ ನೌಕರಿ, ಮನೆ, ವಾಹನ ಇತ್ಯಾದಿ.
ಮರಳಿನ ಕಣಗಳು ಉಳಿದ ಸಣ್ಣ ಪುಟ್ಟ ಆಸೆಗಳು. ನೀವು ಪಾತ್ರೆಯಲ್ಲಿ ಮೊದಲೇ ಮರಳನ್ನು ತುಂಬಿಸಿದರೆ ಚೆಂಡನ್ನಾಗಲೀ, ಕಲ್ಲಿನ ಚೂರನ್ನಾಗಲೀ ತುಂಬಿಸಲು ಸಾಧ್ಯವಾಗುತ್ತಿರಲಿಲ್ಲ. ಬದುಕಿನಲ್ಲಿಯೂ ಅಷ್ಟೇ, ನಿಮ್ಮ ಆದ್ಯತೆ ಏನು ಎಂಬುದನ್ನರಿತು, ಕ್ರಮವಾಗಿ ಅದನ್ನು ನಿಮ್ಮ ಜೀವನದ ಜೋಳಿಗೆಯಲ್ಲಿ ಮೊದಲು ತುಂಬಿಸಿಕೊಳ್ಳಬೇಕು. ಸಣ್ಣ ಸಣ್ಣ ಆಸೆಗಳನ್ನು ಮೊದಲು ಈಡೇರಿಸಿಕೊಳ್ಳುವ ಭರದಲ್ಲಿ ನಿಮ್ಮ ಸಮಯ, ಶ್ರಮವನ್ನು ವ್ಯಯಿಸಿದರೆ ಅತ್ಯವಶ್ಯಕವಾದದ್ದನ್ನು ಗಳಿಸಲು ಸಾಧ್ಯವಾಗದೇ ಹೋದೀತು.
ಆದ್ದರಿಂದ ಜೀವನದಲ್ಲಿ ಸಂತೋಷವಾಗಿರಲು ಬೇಕಾದ, ಅತ್ಯವಶ್ಯಕವಾದದ್ದನ್ನು ಗಳಿಸುವ ಕಡೆಗೆ ಮೊದಲು ಗಮನ ಕೊಡಿ. ಚಿಕ್ಕ ಪುಟ್ಟ ಆಸೆಗಳನ್ನು ಹೇಗೋ ಈಡೇರಿಸಿಕೊಳ್ಳಬಹುದು". “ಹಾಗಾದರೆ ಕೊನೆಯಲ್ಲಿ ಸುರಿದ ಕಾಫಿ ಏನು?"- ವಿದ್ಯಾರ್ಥಿಯೊಬ್ಬ ಪ್ರಶ್ನಿಸುತ್ತಾನೆ. ಅದಕ್ಕೆ ಗುರುಗಳು ಉತ್ತರಿಸು ತ್ತಾರೆ, “ಜೀವನದಲ್ಲಿ ನೀವು ಎಷ್ಟೇ ಸಂತೃಪ್ತರು ಎಂದೆನಿಸಿದರೂ ಅಥವಾ ನಿಮ್ಮದು ಬಿಡುವಿಲ್ಲದ ಜೀವನ ಎನಿಸಿದರೂ, ಸ್ನೇಹಿತರೊಂದಿಗೆ ಒಂದೆರಡು ಗುಟುಕು ಕಾಫಿ ಹೀರಲು ಅವಕಾಶ ಇದ್ದೇ ಇರುತ್ತದೆ".