Gururaj Gantihole Column: ಆಧುನಿಕ ಮಂಗಳೂರು ನಿರ್ಮಾತೃ ಉಳ್ಳಾಲ ಶ್ರೀನಿವಾಸ ಮಲ್ಯ
ಮಂಗಳೂರು-ಉಡುಪಿ ಪ್ರದೇಶದ ಮೊದಲ ಸಂಸದ ಶ್ರೀನಿವಾಸ ಮಲ್ಯ ಆಧುನಿಕ ದಕ್ಷಿಣ ಕನ್ನಡ ಕ್ಷೇತ್ರದ ಅಭಿವೃದ್ಧಿಯ ಹರಿಕಾರ. ಇಂದಿನ ಮಂಗಳೂರು ನಗರವು ಒಂದು ನಿಶ್ಚಿತ ರೂಪು ತಳೆಯ ಬೇಕಿದ್ದರೆ ಅದಕ್ಕೆ ಅವರ ಕೊಡುಗೆಯೇ ಪ್ರಮುಖ ಕಾರಣ. ತಮ್ಮ 45 ವರ್ಷಗಳ ಸಾರ್ವಜನಿಕ ಜೀವನ ದಲ್ಲಿ ಒಬ್ಬ ಜನಪ್ರತಿನಿಽಯಾಗಿ ಹೇಗಿರಬೇಕೆಂಬುದಕ್ಕೆ ಇವರು ಆದರ್ಶಪ್ರಾಯರೂ ಹೌದು ಮತ್ತು ಮಾನದಂಡವೂ ಹೌದು!


ಗಂಟಾಘೋಷ
ಜಲಮಾರ್ಗ, ವಾಯುಮಾರ್ಗ ಮತ್ತು ರೈಲುಮಾರ್ಗ ಹೊಂದಿರುವ ರಾಜ್ಯದ ಏಕೈಕ ನಗರವಾಗಿರುವ ಮಂಗಳೂರು ಇಂದು ಆಧುನಿಕ ಸ್ಪರ್ಶ ಪಡೆಯಲು ಪ್ರಮುಖ ಕಾರಣ, ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರ ಸ್ಮಾರ್ಟ್ ಸಿಟಿಯ ಯೋಜನೆಗಳ ಕನಸಿನಂತೆ, ಅಂದು ಅಭಿವೃದ್ಧಿಯ ಆರಂಭಿಕ ಹೆಜ್ಜೆಗಳನ್ನು ಇಡಲು ಕಾರಣವಾದವರು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ, ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸಂಸದರಾಗಿ ಗೆಲ್ಲುವ ಮೂಲಕ, ಸತತ 18 ವರ್ಷಗಳ ಕಾಲ ಕೆನರಾ ಭಾಗದ ಅಭಿವೃದ್ಧಿಗೆ ಶ್ರಮಿಸಿದ ಧೀಮಂತ ನಾಯಕ ಉಳ್ಳಾಲ ಶ್ರೀನಿವಾಸ ಮಲ್ಯ. ಆಧುನಿಕ ದಕ್ಷಿಣ ಕನ್ನಡ ಕ್ಷೇತ್ರದ ಅಭಿವೃದ್ಧಿಯ ಹರಿಕಾರ. ಇಂದಿನ ಮಂಗಳೂರು ನಗರವು ಒಂದು ನಿಶ್ಚಿತ ರೂಪು ತಳೆಯಬೇಕಿದ್ದರೆ ಅದಕ್ಕೆ ಯು.ಶ್ರೀನಿವಾಸ ಮಲ್ಯ ಅವರ ಕೊಡುಗೆಯೇ ಕಾರಣ. ತಮ್ಮ 45 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಒಬ್ಬ ಜನಪ್ರತಿನಿಧಿಯಾಗಿ ಹೇಗಿರ ಬೇಕೆಂಬುದಕ್ಕೆ ಇವರು ಆದರ್ಶಪ್ರಾಯರೂ ಹೌದು ಮತ್ತು ಮಾನದಂಡವೂ ಹೌದು!
ಸಮರ್ಪಿತ ಸ್ವಾತಂತ್ರ್ಯ ಹೋರಾಟಗಾರರಾಗಿ ಗಮನ ಸೆಳೆದಿದ್ದ ಇವರು, ಗಾಂಧೀಜಿಯ ಸತ್ಯಾಗ್ರಹದ ಕರೆಗೆ ಓಗೊಟ್ಟು, ತಮ್ಮ ಕುಟುಂಬ ನಡೆಸುತ್ತಿದ್ದ ವ್ಯಾಪಾರ ನೋಡಿಕೊಳ್ಳುವುದನ್ನು ಮದ್ಯ ದಲ್ಲಿಯೇ ಬಿಟ್ಟು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು. ಈ ಮೂಲಕ, ಹಲವು ಬಾರಿ ಜೈಲಿಗೆ ಹೋಗಿಬಂದ ಶ್ರೀನಿವಾಸ ಮಲ್ಯ ಅವರು, ಗಾಂಧೀಜಿಯ ಪ್ರಭಾವಕ್ಕೊಳಗಾಗಿ ಕಾಂಗ್ರೆಸ್ ಪಕ್ಷ ದೊಡನೆ ತಮ್ಮ ನಂಟು ಬೆಳೆಸಿಕೊಂಡಿದ್ದರು.
ಮುಂದೆ ದೇಶವು ಸ್ವಾತಂತ್ರ್ಯಗೊಂಡ ನಂತರ, ಭಾರತದ ಸಂವಿಧಾನ ರಚನೆಗೆ ರಚಿಸಲಾದ ಭಾರತದ ಸಂವಿಧಾನ ಸಭೆಯ ಗೌರವಾನ್ವಿತ ಸದಸ್ಯರಾಗಿದ್ದರು. 1950ರ ಜನವರಿ 26ರಂದು ಭಾರತವು ಔಪ ಚಾರಿಕವಾಗಿ ಗಣರಾಜ್ಯವೆಂದು ಘೋಷಿಸಿಕೊಂಡ ನಂತರ, ಶ್ರೀನಿವಾಸ ಮಲ್ಯ ಅವರು 1952ರಲ್ಲಿ ಮೊದಲ ಲೋಕಸಭಾ ಚುನಾವಣೆಯಲ್ಲಿ ಯಶಸ್ವಿಯಾಗಿ ಸ್ಪರ್ಧಿಸಿದರು. ಈ ಮೂಲಕ, 1952, 1957 ಮತ್ತು 1962ರಲ್ಲಿ ಆಯ್ಕೆಯಾಗುವ ಮೂಲಕ, ಮಂಗಳೂರು-ಉಡುಪಿ ಪ್ರದೇಶದ ಮೊದಲ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇದನ್ನೂ ಓದಿ: Gururaj Gantihole Column: ಆಯುಷ್ಮಾನ್: ಆರ್ಥಿಕ ಕಾಳಜಿಯೋ, ಆರೋಗ್ಯ ಕಾಳಜಿಯೋ ?
ಅಂದಿನ ಪ್ರಧಾನಿ ನೆಹರು ಅವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದ ಮಲ್ಯ ಅವರು, ಇದನ್ನೇ ಒಂದು ಅವಕಾಶವನ್ನಾಗಿ ಬಳಸಿಕೊಂಡು ಜನರ ಮತ್ತು ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಇವರು ತೋರಿದ ಶ್ರದ್ಧೆಯ ಫಲವಾಗಿ ಇಂದು ಮಂಗಳೂರು ನಗರವು ದೇಶ ಮತ್ತು ಅಂತರಾ ಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಲು ಸಾಧ್ಯವಾಗಿದೆ ಎನ್ನಬಹುದು.
ತಮ್ಮ ವ್ಯಕ್ತಿತ್ವದ ಸಂಪೂರ್ಣ ಬಲವನ್ನು ಬಳಸಿಕೊಂಡು, ಅವರು ಪ್ರಮುಖ ಮೂಲಸೌಕರ್ಯ ಮತ್ತು ಅದ್ಭುತ ಸಂಸ್ಥೆಗಳನ್ನು ನಿರ್ಮಿಸಲು ಮುಂದಾಲೋಚನೆ ಮಾಡಿದರು. ಒಬ್ಬ ದೂರ ದೃಷ್ಟಿಯ ನಾಯಕನಿಂದಾಗಿ, ಒಂದು ನಗರದ ಭವಿಷ್ಯದ ಕಾರ್ಯಸೂಚಿ ಹೇಗೆ ಬದಲಾಗುತ್ತದೆ, ಅದರ ಭವಿಷ್ಯತ್ತು ಹೇಗೆ ಬದಲಾಯಿಸುತ್ತದೆ ಎನ್ನುವುದನ್ನು ನಾವು ಮನಗಾಣಬಹುದು. ಇಂತಹ ದೂರದೃಷ್ಟಿ ಹೊಂದಿದ್ದ ಶ್ರೀನಿವಾಸ ಮಲ್ಯ ಅವರು, ಅಂದೇ ಹಲವು ಕೊಡುಗೆಗಳನ್ನು ಕ್ಷೇತ್ರಕ್ಕೆ ನೀಡುತ್ತ ಬಂದರು.

ಉಳ್ಳಾಲದಿಂದ ಮಲ್ಯರ ಪೋಷಕರು ವ್ಯಾಪಾರದ ಕಾರಣದಿಂದ ಮಂಗಳೂರಿಗೆ ಬಂದು ನೆಲೆಸಿ ದ್ದರು. ಮಂಗಳೂರು ರಥಬೀದಿ ಸಮೀಪದ ಬಜಿಲುಕೇರಿ ಎಂಬಲ್ಲಿ ಗೌಡಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಶ್ರೀನಿವಾಸ ಮಲ್ಯ ಅವರು 1902, ನವೆಂಬರ್ 21ರಂದು ಜನಿಸಿದರು. ತಾಯಿ ಸರಸ್ವತಿ (ರುಕ್ಮಾಬಾಯಿ), ತಂದೆ ಮಂಜುನಾಥ ಮಲ್ಯರು. ಸಾಮಾಜಿಕ ಕಾರ್ಯಕರ್ತ ಡಾ.ಉಳ್ಳಾಲ ಪದ್ಮನಾಭ ಮಲ್ಯ ಸೇರಿದಂತೆ ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಹೊಂದಿದ್ದಾರೆ.
ನಗರದ ಸಂತ ಎಲೋಶಿಯಸ್ ಕಾಲೇಜಿನಲ್ಲಿ ಎಂಟನೇ ತರಗತಿಯವರೆಗೆ ಕಲಿತು ಮುಂದಿನ ವಿದ್ಯಾ ಭ್ಯಾಸವನ್ನು ಕೆನರಾ ಹೈಸ್ಕೂಲಿನಲ್ಲಿ ಮೆಟ್ರಿಕ್ ಮುಗಿಸಿದರು. ನಂತರ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಇಂಟರ್ ಮಿಡಿಯಟ್ ತರಗತಿಗೆ ಸೇರಿದರು. ಸ್ವಾತಂತ್ರ್ಯ ಹೋರಾಟದ ಪ್ರಭಾವಕ್ಕೆ ಒಳಗಾದ ಶ್ರೀನಿವಾಸ ಮಲ್ಯರು 18ನೇ ವಯಸ್ಸಿನಲ್ಲಿ ಕಾಲೇಜು ಶಿಕ್ಷಣ ಮೊಟಕುಗೊಳಿಸಿ ಚಳುವಳಿ ಯಲ್ಲಿ ಪಾಲ್ಗೊಂಡರು.
ಗಾಂಧೀಜಿಯವರ ಕರೆಯಂತೆ ಖಾದಿಧಾರಣೆಗೆ ತೊಡಗಿದ್ದರು. ಸ್ಥಳೀಯ ಮತ್ತು ಪ್ರಾಂತೀಯ ಸಂಘಟನೆಯಲ್ಲಿ ಸಕ್ರಿಯರಾದರು. ಕ್ವಿಟ್ ಇಂಡಿಯಾ ಚಳುವಳಿ, ವೈಯಕ್ತಿಕ ಸತ್ಯಾಗ್ರಹದಂತಹ ರಾಷ್ಟ್ರೀಯ ಆಂದೋಲನಗಳಲ್ಲಿ ಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡರು. 1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಬಂಧನಕ್ಕೊಳಗಾದಾಗ, ಕಾಮರಾಜ ನಾಡಾರ್, ಪಿ.ಸುಬ್ರಹ್ಮಣ್ಯ, ಡಾ. ವೆಂಕಟರಾಮನ್ ಮತ್ತಿತರರು ಸೆರೆವಾಸದ ವೇಳೆ ಮಲ್ಯರ ಸಹವರ್ತಿಗಳಾಗಿದ್ದರು.
ಮುಂದೆ, ಬಂಟ್ವಾಳದ ಸಾಹುಕಾರ್ ದಾಮೋದರ ಪ್ರಭುಗಳ ಮಗಳಾದ ಇಂದಿರಾಬಾಯಿ ಅವರನ್ನು ವಿವಾಹವಾದರು. ಬಳಿಕ, ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ರಾಷ್ಟ್ರೀಯ ಪಕ್ಷ ದೊಂದಿಗೆ ಸ್ಥಳೀಯ ವಿಚಾರಗಳನ್ನು, ಸಮಸ್ಯೆಗಳನ್ನು ಸರಿಪಡಿಸುವತ್ತ ಗಮನಕೊಟ್ಟ ಮಲ್ಯರು, ಆರಂಭದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಕಾಂಗ್ರೆಸ್ ಕಮಿಟಿಯ ಕಾರ್ಯದರ್ಶಿಯಾಗಿ ಆಯ್ಕೆಯಾದರು.
1946ರಲ್ಲಿ ಭಾರತ ಸ್ವತಂತ್ರಗೊಳ್ಳುವ ಪೂರ್ವಭಾವಿಯಾಗಿ ಏರ್ಪಟ್ಟ ನಡುಗಾಲದ ಸರಕಾರ ಹಾಗೂ ಸಂವಿಧಾನ ರಚನಾ ಮಂಡಳಿಯ ಸದಸ್ಯರಾಗಿದ್ದ ಮಲ್ಯರು, 1947ರಲ್ಲಿ ರಾಷ್ಟ್ರ ಸ್ವಾತಂತ್ರ್ಯ ಗಳಿಸಿದಾಗ ದೇಶದ ಪ್ರಥಮ ಗೃಹಸಮಿತಿಯ ಸದಸ್ಯರಾದರು. ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯ ದರ್ಶಿಯಾಗಿ ನಿಯುಕ್ತರಾದರಲ್ಲದೇ, ಪಕ್ಷದ ಮುಖ್ಯ ಸಚೇತಕರಾದರು.
1952, 1957 ಹಾಗೂ 1962ರಲ್ಲಿ ಜರುಗಿದ ಸಾರ್ವತ್ರಿಕ ಚುನಾವಣೆಗಳಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಮಲ್ಯರು ನಿರಂತರವಾಗಿ ಚುನಾಯಿತರಾಗಿದ್ದರು. ಕೇಂದ್ರ ಸರಕಾರದ ಮುಖ್ಯ ಸಚೇತಕರಾಗಿದ್ದುಕೊಂಡು, ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಹತ್ತಾರು ಯೋಜನೆಗಳನ್ನು ರೂಪಿಸಿ, ಅವುಗಳ ಅನುಷ್ಠಾನಕ್ಕಾಗಿ ಪಣತೊಟ್ಟರು. ಮುಂದೆ 1951ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಎಐಸಿಸಿಯ ಅಧ್ಯಕ್ಷರಾಗಿzಗ ಶ್ರೀನಿವಾಸ ಮಲ್ಯರು ಪಕ್ಷದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು.
ಆಧುನಿಕ ಕೆನರಾ ಭಾಗದ ಪಿತಾಮಹ, ಸುಧಾರಣೆಯ ಹರಿಕಾರರೆಂದೇ ಜನಜನಿತರಾಗಿರುವ ಮಲ್ಯರ ದೂರದೃಷ್ಟಿಯ ಫಲವಾಗಿ ಇವರು ನೀಡಿದ ಕೊಡುಗೆಗಳಲ್ಲಿ 1960ರಲ್ಲಿ ಸ್ಥಾಪಿಸಲ್ಪಟ್ಟ ಕರ್ನಾಟಕ ರೀಜನಲ್ ಎಂಜಿನಿಯರಿಂಗ್ ಕಾಲೇಜು ( KREC) ಈಗ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ, ಸುರತ್ಕಲ್ ಒಂದಾಗಿದ್ದು, ಉನ್ನತ ಶಿಕ್ಷಣಕ್ಕಾಗಿ ಇಂದುರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದೆ.
’ಗ್ರೀನ್ಟೆಕ್ ಎನ್ವಿರಾನ್ಮೆಂಟ್ ಅವಾರ್ಡ್ 2014’ ಪ್ರಶಸ್ತಿ ಪಡೆಯುವ ಮೂಲಕ, ದೇಶದ ಬಂದರುಗಳಲ್ಲಿ ತನ್ನದೇ ಛಾಪು ಮೂಡಿಸಿರುವ ನವ ಮಂಗಳೂರು ಬಂದರು, ಮಂಗಳೂರಿನ ಪಣಂಬೂರ್ ನಲ್ಲಿರುವ ಪಶ್ಚಿಮ ಕರಾವಳಿಯಲ್ಲಿ ಆಳವಾದ ಒಳ ಬಂದರಾಗಿದೆ. ಇದು ಕರ್ನಾಟಕದ ಏಕೈಕ ಪ್ರಮುಖ ಬಂದರು ಮತ್ತು ಭಾರತದ ಏಳನೇ ಅತಿ ದೊಡ್ಡ ಬಂದರಾಗಿದ್ದು, ಸದ್ಯಕ್ಕೆ ಈ ಬಂದರನ್ನು ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ನಿರ್ವಹಿಸುತ್ತಿದೆ. ಇದು ಅರಬ್ಬಿ ಸಮುದ್ರಕ್ಕೆ ಗುರುಪುರ (ಫಲ್ಗುಣಿ)ನದಿಯ ಸಂಗಮಕ್ಕೆ ಉತ್ತರವಾಗಿದೆ.
ಇದು ಮರ್ಮುಗೊವಪೋರ್ಟ್ ದಕ್ಷಿಣಕ್ಕೆ 310 ಕಿ.ಮಿ ಮತ್ತು ಕೊಚ್ಚಿ ಬಂದರಿನ ಉತ್ತರಕ್ಕೆ 191 354 ಕಿ.ಮಿ ನಷ್ಟಿದೆ. ಜತೆಗೆ, ಸರ್ ಅರ್ಥರ್ ಲಾವ್ಲೇ ಮೂಲಕ, 1907ರಲ್ಲಿ ಆರಂಭಗೊಂಡ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಅವಿಭಜಿತ ಭಾರತದಲ್ಲಿ ಮಂಗಳೂರಿನಿಂದ ಪೇಷಾವರಕ್ಕೆ ಅತಿ ಉದ್ದ ರೈಲು ಪ್ರಯಾಣದ ವ್ಯವಸ್ಥೆ ಇದ್ದದ್ದು ಅಂದಿನ ಮಂಗಳೂರು ನಗರದ ಪ್ರಾಮುಖ್ಯತೆ ತೋರಿಸುತ್ತದೆ. ಇಂತಹ ಒಂದು ನಗರಕ್ಕೆ ಮಂಗಳೂರು - ಹಾಸನ- ಬೆಂಗಳೂರು ರೈಲು ಮಾರ್ಗದ ಕನಸು ಕಂಡು ಸಾಕಾರಗೊಳಿಸಿದವರು ಶ್ರೀ ಮಲ್ಯರು.
ಜನಸಾಮಾನ್ಯರ ನಿತ್ಯ ಜೀವನ ಸರಿಯಾಗಿರಬೇಕೆಂದರೆ, ಅಭಿವೃದ್ಧಿಗಳು ಅಲ್ಲಿಗೆ ತಲುಪಬೇಕೆಂದರೆ
ಮೊದಲು ರಸ್ತೆಗಳು, ಸಂಪರ್ಕಜಾಲಗಳು ಸಮರ್ಪಕವಾಗಿರಬೇಕೆಂದು ಅರಿತು, ರಾಷ್ಟ್ರೀಯ ಹೆದ್ದಾರಿ ಗಳಾದ ಎನ್‌ಎಚ್-17(ಇಂದಿನ 66)ಮತ್ತು ಎನ್‌ಎಚ್-48(ಇಂದಿನ 75) ಸ್ಥಾಪಿಸುವಲ್ಲಿ ಮಾಡಿದ ಅವಿರತ ಪ್ರಯತ್ನ ಜನಪರತೆಗೆ ಕಾಳಜಿ.
ಪ್ರಸ್ತುತ, ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣವಾದರು ಸಹ ಶ್ರೀನಿವಾಸ ಮಲ್ಯ. ಇವರ ಪ್ರಯತ್ನದ ಫಲವಾಗಿ 1951ರ ಡಿಸೆಂಬರ್ 25ರಂದು ಪ್ರಾರಂಭವಾದ ಬಜ್ಪೆ ವಿಮಾನ ನಿಲ್ದಾಣ ಸೇವೆಯು ದೇಶದ ಆಂತರಿಕ ಬಳಕೆಗೆ ಸೀಮಿತವಾಗಿತ್ತು. ಅಕ್ಟೋಬರ್ 4ರ 2012ರಂದು ಅಧಿಕೃತವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಉನ್ನತ ದರ್ಜೆಗೆ ಏರಿಸಲ್ಪಟ್ಟಿತು.
ಕರ್ನಾಟಕದಲ್ಲಿರುವ ಒಟ್ಟು ದೇಶಿಯ ಬಳಕೆಯ 19 ವಿಮಾನ ನಿಲ್ದಾಣಗಳಲ್ಲಿ, ಎರಡು ಅಂತರಾಷ್ಟ್ರೀಯ ನಿಲ್ದಾಣಗಳೂ ಸೇರಿವೆ. ಇವುಗಳಲ್ಲಿ ಮಂಗಳೂರು ಬಜ್ಪೆ ಸಹ ಒಂದಾಗಿರುವುದು ಕರಾವಳಿ ಭಾಗಕ್ಕೆ ಒಂದು ಹೆಮ್ಮೆ. ಈ ಮೂಲಕ, ಮಂಗಳೂರು ನಗರವು ರಾಜ್ಯದ ಏಕೈಕ ಮತ್ತು ವಿಶಿಷ್ಟ ರೀತಿಯ ಸಾರಿಗೆ ಸಂಪರ್ಕ ವ್ಯವಸ್ಥೆ ಹೊಂದಿದ್ದು, ರಾಷ್ಟ್ರಾದ್ಯಂತ ಸಂಪರ್ಕಕ್ಕೆ ರೈಲು ಮಾರ್ಗವಿದ್ದರೆ, ದೇಶ- ವಿದೇಶಗಳಿಗೆ ಪ್ರಯಾಣಿಸಲು ವಿಮಾನಯಾನದ ಸೌಲಭ್ಯವಿದೆ.
ಜೊತೆಗೆ, ಕೊಚಿ, ಮರ್ಮಗೋವಾ ಅಲ್ಲದೆ ಸೌತ್ ಆಫ್ರಿಕಾ, ಯುಎಇ ಗಳಿಗೆ ಜಲಸಾರಿಗೆ ವ್ಯವಸ್ಥೆ ಯಿದೆ. ಜೊತೆಗೆ, ನೇತ್ರಾವತಿ ನದಿಯ ಮೇಲಿನ ಸೇತುವೆ ಸೇರಿದಂತೆ ಇತರ ಅನೇಕ ನದಿ ಸೇತುವೆಗಳ ನಿರ್ಮಾಣಕ್ಕೆ ಚಾಲನೆಗೊಂಡವು ಎಂದು ಹೇಳಬಹುದು. ನಗರದಲ್ಲಿ ಅಂದಿನ ಅಗತ್ಯ ವಾಗಿದ್ದ ಸರ್ಕ್ಯೂಟ್ ಹೌಸ್ ನಿರ್ಮಾಣವಿರಬಹುದು, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ತುಳು ನಾಡಿನ, ಯಕ್ಷಗಾನ ಸಂಸ್ಕೃತಿ, ಕಲೆ ಪ್ರದರ್ಶನ ಸೇರಿದಂತೆ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳಿಗೆ ಕೇಂದ್ರ ಬಿಂದುವಿನಂತಿದ್ದ ಮಂಗಳೂರು ಟೌನ್ ಹಾಲ್ ನಿರ್ಮಾಣದ ಹಿಂದಿನ ಕನಸು ಶ್ರೀ ಮಲ್ಯ ರದ್ದು.
ಮಂಗಳೂರಿನಲ್ಲಿ ಆಕಾಶವಾಣಿ ಕೇಂದ್ರ ಸ್ಥಾಪನೆ ಸೇರಿದಂತೆ ಇವರು ಕೈಗೊಂಡ ಕಾರ್ಯಗಳನ್ನು ನೋಡಿದರೆ, ಮಂಗಳೂರಿನ, ದಕ್ಷಿಣಕನ್ನಡದ ಜನರು ದಶಕಗಳೂ ಕಳೆದರೂ ಸ್ಮರಿಸುತ್ತಿರುವ ಕಾರಣ ನಮಗೆ ತಿಳಿಯುತ್ತದೆ. ಇಂತಹ ಒಂದು ಘನ ವ್ಯಕ್ತಿತ್ವ ಹೊಂದಿದ್ದ ಶ್ರೀನಿವಾಸ ಮಲ್ಯರು ನೆಪ ಮಾತ್ರಕ್ಕೆ ಅಂದಿನ ರಾಜಕೀಯ ಕಾರಣಕ್ಕೆ ಒಂದು ಪಕ್ಷಕ್ಕೆ ಪ್ರತಿನಿಧಿಯಾಗಿದ್ದದ್ದು ಹೊರತುಪಡಿಸಿ ದರೆ, ಮಲ್ಯರು ಇಡೀ ಮಂಗಳೂರು ಜನತೆಯನ್ನು ತಮ್ಮ ಮನೆಯವಂತೆ ಪ್ರೀತಿಸಿದವರು. ಇಂದಿನ ದಕ್ಷಿಣಕನ್ನಡದ ಅಭಿವೃದ್ಧಿಗೆ ಅಡಿಪಾಯ ಹಾಕಿಕೊಟ್ಟವರು.
ಇವರನ್ನು ರಾಜಕಾರಣಿಗಿಂತ, ಯಾವುದೋ ಒಂದು ಪಕ್ಷಕ್ಕೆ ಸೀಮಿತಗೊಳಿಸುವುದಕ್ಕಿಂತ ಸಾಮಾಜಿಕ ಸುಧಾರಣೆಯ ಹರಿಕಾರ ಎಂದು ಒಪ್ಪಿಕೊಳ್ಳುವುದು ನಮ್ಮೆಲ್ಲರ ದೊಡ್ಡತನ ಮತ್ತು ಹೊಣೆಗಾರಿಕೆಯೂ ಹೌದು. ಶ್ರೀನಿವಾಸ ಮಲ್ಯರು, ದೆಹಲಿಯಿಂದ ಮಂಗಳೂರಿಗೆ ಬರುವ ಉದ್ದೇಶ ದಿಂದ ಕಾರಿನಲ್ಲಿ ಹೊರಟಾಗ 1965ರ ಡಿಸೆಂಬರ್ 19ರಂದು ಬೆ.7.45ಕ್ಕೆ ಹೃದಯಾಘಾತದಿಂದ ಮರಣ ಹೊಂದಿದರು.
ವಿಶೇಷ ವಿಮಾನದಲ್ಲಿ ಮಲ್ಯರ ಪಾರ್ಥಿವ ಶರೀರವನ್ನು ಮಂಗಳೂರಿಗೆ ತರಲಾಯಿತು. ಪಾರ್ಥಿವ ಶರೀರವನ್ನು ನೆಹರೂ ಮೈದಾನದ ಪೆವಿಲಿಯನ್‌ಲ್ಲಿ ಸ್ವಲ್ಪ ಹೊತ್ತು ಸಾರ್ವಜನಿಕ ವೀಕ್ಷಣೆಗೆ ಇರಿಸಿ, ನಂತರ ಅಂತಿಮ ಕ್ರಿಯೆಗಳನ್ನು ನಡೆಸಲಾಯಿತು. ಯು.ಶ್ರೀನಿವಾಸ ಮಲ್ಯರ ಶಾಶ್ವತ ನೆನಪಿಗಾಗಿ ನವಮಂಗಳೂರು ಬಂದರು ಪ್ರವೇಶ ದ್ವಾರದಲ್ಲಿ, ಪದುವಾಹೈಸ್ಕೂಲು ಮುಂಭಾಗದಲ್ಲಿ ಮುಂತಾ ದೆಡೆ ಅವರ ಪ್ರತಿಮೆಗಳಿವೆ. ಸುರತ್ಕಲ್ ಎನ್‌ಐಟಿಕೆ ಸ್ಮಾರಕ ಭವನ ಮುಂತಾದವು ನಿರ್ಮಾಣ ಗೊಂಡಿವೆ.
2002ರಲ್ಲಿ ಮಲ್ಯ ಶತಮಾನೋತ್ಸವವನ್ನು ದ.ಕ. ಜಿಲ್ಲಾಡಳಿತದ ನೇತೃತ್ವದಲ್ಲಿ ಅದ್ಧೂರಿಯಾಗಿ ಆಚರಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಪಡೀಲ್ ಪಂಪ್‌ವೆಲ್ ರಸ್ತೆಗೆ ಯು.ಶ್ರೀನಿವಾಸ ಮಲ್ಯ ರಸ್ತೆ ಎಂಬುದಾಗಿ ನಾಮಕರಣ ಮಾಡಿ ಶ್ರೀನಿವಾಸ ಮಲ್ಯ ಸ್ಮಾರಕ ರಚಿಸಲಾಗಿದೆ. ಈ ಕಾರಣ ಕ್ಕಾಗಿಯೇ, ನಗರದ ಜನತೆ ಇವರನ್ನು ಮರೆಯದೆ ಗಲ್ಲಿಗಲ್ಲಿಯಲ್ಲೂ, ನಗರದ ಪ್ರಮುಖ ವೃತ್ತ ಗಳಿಗೂ, ಆಸ್ಪತ್ರೆ ಇತರೆ ಕಟ್ಟಡಗಳಿಗೂ ಇವರ ಹೆಸರನ್ನಿಟ್ಟು ಸ್ಮರಿಸುತ್ತಿದ್ದಾರೆನ್ನಬಹುದು. ಜನಮೆಚ್ಚಿದ ಜನಪ್ರತಿನಿಧಿಗಳು ಮತ್ತು ಅವರ ಶಾಶ್ವತ ಯೋಜನೆಗಳು ಯಾವತ್ತು ಅಮರ ಎಂಬು ದಕ್ಕೆ ಇವರು ಮತ್ತು ಇವರ ಕಾರ್ಯಗಳು ಸಾಕ್ಷಿ.