ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gururaj Gantihole Column: ಆಯುಷ್ಮಾನ್: ಆರ್ಥಿಕ ಕಾಳಜಿಯೋ, ಆರೋಗ್ಯ ಕಾಳಜಿಯೋ ?

ಯೂರೋಪಿಯನ್ನರಿಂದ ಬಂದ ಅಲೋಪತಿ ಪದ್ಧತಿಯತ್ತ ನಾವು ದಾಪುಗಾಲು ಹಾಕುತ್ತಿದ್ದರೆ, ಪಾಶ್ಚಾ ತ್ಯರು ನಮ್ಮ ಆಯುರ್ವೇದ ಪದ್ಧತಿಯನ್ನು ಗಂಭೀರವಾಗಿ ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುತ್ತ ಸಾಗುತ್ತಿದ್ದಾರೆ. ಇಂತಹ ಆಯುರ್ವೇದವನ್ನು ಸಾಮಾನ್ಯ ಜನರು ತಮ್ಮ ನಿತ್ಯ ಬದುಕಿನಲ್ಲಿ ಅಳವಡಿಸಿ ಕೊಳ್ಳುವತ್ತ ಇದಕ್ಕೆ ಸಂಬಂಧಿಸಿದ ರಾಜ್ಯ ಸರಕಾರದ ಇಲಾಖೆಗಳು, ಅಧಿಕಾರಿಗಳು ಜಾಗೃತಿ ಮೂಡಿಸಲು ಕಾರ್ಯ ಪ್ರವೃತ್ತರಾಗಬೇಕಿತ್ತು

ಆಯುಷ್ಮಾನ್: ಆರ್ಥಿಕ ಕಾಳಜಿಯೋ, ಆರೋಗ್ಯ ಕಾಳಜಿಯೋ ?

ಅಂಕಣಕಾರ ಗುರುರಾಜ್‌ ಗಂಟಿಹೊಳೆ

ಗಂಟಾಘೋಷ

‘ಅತಿ ಶಂಕಸ್ಯ ನಿವಾರಣಂ ರೋಗಸ್ಯ ಉಪಚಾರಸ್ಯ ಶ್ರೇಯಃ’ ಎಂದು ಸಂಸ್ಕೃತದಲ್ಲಿ ಮತ್ತು ಇಂಗ್ಲೀ ಷಿನ ‘ಪ್ರಿವೆನ್ಷನ್ ಈಸ್ ಬೆಟರ್ ದ್ಯಾನ್ ಕ್ಯೂರ್’ ಎಂದು ಗಾದೆಮಾತುಗಳು ಬಳಕೆಯಲ್ಲಿವೆ. ಇದು ವೈದ್ಯಲೋಕದಲ್ಲಿ ಅತಿಹೆಚ್ಚು ಬಳಸಲ್ಪಡುವ ಹೇಳಿಕೆಯೂ ಹೌದು! ಪ್ರಾರಂಭಿಕ ಹಂತದಲ್ಲಿ ಮನುಷ್ಯನ ಜೀವಿತಾವಧಿ ಸರಾಸರಿ 80-90ರ ಆಚೀಚೆ ಇತ್ತು. ಇಂದು ನವಯುವಕರೇ ಹೆಚ್ಚಾಗಿ ಸಾವಿಗೀಡಾಗುತ್ತಿರುವುದು ಆಹಾರ ಸೇವನಾ ಪದ್ಧತಿಯ ಜತೆಗೆ, ಬದಲಾದ ಜೀವನಶೈಲಿಯಿಂದಾಗಿ ಕಾಯಿಲೆ, ಬದುಕಿನೊತ್ತಡ, ಅಲ್ಪಾಯುಷ್ಯದ ಕಡೆಗೆ ಸಾಗುತ್ತಿರುವ ಲಕ್ಷಣಗಳು ಗೋಚರವಾಗುತ್ತಿವೆ. ಬಿಪಿ ಎಂಬುದು ಕೇವಲ ಒಂದು ಊಹಾತ್ಮಕ ದೋಷವಾಗಿದ್ದು, ಮುಂದೆ ಇದು ಮಾರಕ ಕಾಯಿಲೆ ಪಟ್ಟಿಗೆ ಸೇರಲಿದೆ.

ನಾಲ್ಕರಿಂದ ಆರು ವಯಸ್ಸಿನ ಮಕ್ಕಳಿಗೆ ಶುಗರ್, ಫ್ಯಾಟಿ ಲೀವರ್ ಸಮಸ್ಯೆಗಳು ಬರುತ್ತಿವೆ. ನಮ್ಮ ಪೂರ್ವಜರ ವೈದ್ಯಪದ್ಧತಿ ಮತ್ತು ಆಯುರ್ವೇದ ವಿಜ್ಞಾನವು ಇಂದಿನ ಎಲ್ಲ ಆರೋಗ್ಯ ಸಮಸ್ಯೆ ಗಳಿಗೆ ಸರ್ವ ವಿಧದಲ್ಲೂ ಪರಿಹಾರ ಕೊಡಬಲ್ಲದು.

ಯೂರೋಪಿಯನ್ನರಿಂದ ಬಂದ ಅಲೋಪತಿ ಪದ್ಧತಿಯತ್ತ ನಾವು ದಾಪುಗಾಲು ಹಾಕುತ್ತಿದ್ದರೆ, ಪಾಶ್ಚಾತ್ಯರು ನಮ್ಮ ಆಯುರ್ವೇದ ಪದ್ಧತಿಯನ್ನು ಗಂಭೀರವಾಗಿ ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುತ್ತ ಸಾಗುತ್ತಿದ್ದಾರೆ. ಇಂತಹ ಆಯುರ್ವೇದವನ್ನು ಸಾಮಾನ್ಯ ಜನರು ತಮ್ಮ ನಿತ್ಯ ಬದುಕಿ ನಲ್ಲಿ ಅಳವಡಿಸಿಕೊಳ್ಳುವತ್ತ ಇದಕ್ಕೆ ಸಂಬಂಧಿಸಿದ ರಾಜ್ಯ ಸರಕಾರದ ಇಲಾಖೆಗಳು, ಅಧಿಕಾರಿಗಳು ಜಾಗೃತಿ ಮೂಡಿಸಲು ಕಾರ್ಯ ಪ್ರವೃತ್ತರಾಗಬೇಕಿತ್ತು. ಬದಲಾಗಿ, ದೇಹ ಜರ್ಜರಿತ ವಾಗಿ, ಹಿರಿಯಣ್ಣ ದೊಡ್ಡಣ್ಣನಂತಹ ಕಾಯಿಲೆಗಳು ಬಂದಾಗ, ಜನರು ರೋಗಿಗಳಾಗಿ ಆಸ್ಪತ್ರೆಗೆ ಎಡತಾಕುತ್ತಾರೆ. ಆಗ, ದೊಡ್ಡ ದೊಡ್ಡ ಕಾಯಿಲೆಗಳಿಗೆ ದೊಡ್ಡ ದೊಡ್ಡ ಚಿಕಿತ್ಸೆ ಎಂಬಂತೆ, ಲಕ್ಷಾಂತರ ಹಣವನ್ನು ಕೇವಲ ದೈಹಿಕ ಆರೋಗ್ಯ ಸುಧಾರಣೆಗೆ ಸುರಿಯಬೇಕಾಗುತ್ತದೆ.

ಇದನ್ನೂ ಓದಿ: Gururaj Gantihole Column: ಪಂಚಾಯತ್‌ ವ್ಯವಸ್ಥೆಗೆ ಶಕ್ತಿ ತುಂಬಿದ ಹಣಕಾಸು ಆಯೋಗ

ಒಂದೊತ್ತಿನ ಊಟಕ್ಕೆ ಅಂತ ದುಡಿಮೆಯ ನಂಬಿ ಬದುಕು ಕಟ್ಟಿಕೊಳ್ಳುವ ಜನಸಾಮಾನ್ಯರಿಗೆ ಗಂಭೀರ ಕಾಯಿಲೆಗಳು ಬಂದರೆ, ವಿಧಿಯಿಲ್ಲದೇ ಸಾಲ ಮಾಡಿಯಾದರೂ, ಹತ್ತಿರದ ಸುಸಜ್ಜಿತ ಆಸ್ಪತ್ರೆಗಳಿಗೆ ಸೇರಬೇಕಾಗುತ್ತಿದೆ. ಕಿಡ್ನಿ ಸಮಸ್ಯೆ, ಡಯಾಲಿಸಿಸ್, ಹೃದಯ ಶಸಚಿಕಿತ್ಸೆ, ಕ್ಯಾನ್ಸರ್‌ ನಂತಹ ಗಂಭೀರ ಸಮಸ್ಯೆಗಳು ಜನರ ಬದುಕನ್ನೇ ಕಸಿದುಕೊಂಡು ಬಿಡುತ್ತಿವೆ. ಇನ್ನು ಇವುಗಳಿಂದ ಮುಕ್ತಿ ಪಡೆಯುವ ದಾರಿಯಂತೂ ಆಧುನಿಕ ವೈದ್ಯಕೀಯ ಎಷ್ಟೇ ಮುಂದುವರೆದಿದ್ದರೂ ಸಮರ್ಪಕ ಮತ್ತು ಶಾಶ್ವತ ಪರಿಹಾರ ಅಷ್ಟು ಸರಳವಾದುದಲ್ಲ.

ಲಕ್ಷಗಟ್ಟಲೆ ಹಣಕಟ್ಟಿ ಚಿಕಿತ್ಸೆ ಪಡೆದ ಬಳಿಕ, ಸಾಲದ ಹಣವನ್ನು ತೀರಿಸಲು ಸಾಯುವವರೆಗೆ ಮತ್ತೆ ದುಡಿದು ಸಾಲ ಕಟ್ಟುವಷ್ಟರ ಆಯುಷ್ಯವೇ ಮುಗಿದು ಹೋಗಿರುತ್ತದೆ. ಇನ್ನು ಕೆಲವರು, ಇನ್ನೇ ನಾದರೂ ಮಾಡುವಂತೆ ಸ್ಥಳೀಯ ಶಾಸಕರ ಮನೆ ತಾಕುವುದು, ಶಾಸಕರು ಜನರ ಸಮಸ್ಯೆ ಕೇಳುತ್ತ, ಅವರು ಚಿಕಿತ್ಸೆ ಪಡೆದ ದಾಖಲೆ ಪಡೆದುಕೊಂಡು ಯಾವ ಮೂಲದಿಂದಾದರೂ ಅವರ ಮನವಿ ಯನ್ನು ಸರಿಮಾಡಬೇಕಾದ ಸ್ಥಿತಿ. ಈಗಲೂ ಈ ದೃಶ್ಯ ಸರ್ವೇ ಸಾಮಾನ್ಯ.

ಆಯುಷ್ಮಾನ್‌ನಂತಹ ಕೇಂದ್ರದ ಆರೋಗ್ಯ ವಿಮಾ ಯೋಜನೆಗಳು ಬರುವ ಮೊದಲಿನ ಪರಿಸ್ಥಿತಿ. ಆಯುಷ್ಮಾನ್ ಆರೋಗ್ಯ ವಿಮೆ, ಕಡುಬಡವನಿಗೂ ನಗದುರಹಿತ ಚಿಕಿತ್ಸೆ ದೊಡ್ಡ ಆಸ್ಪತ್ರೆಗಳಲ್ಲಿ ಸಿಗುವಂತೆ ಮಾಡಿದ್ದು ಸಾಮಾನ್ಯ ಕೆಲಸವೇನಲ್ಲ! ದುಡಿಮೆಯ ನಂಬಿ ಬದುಕುವ ಜನರಿಗೆ ಮಾತ್ರ ವೇ ಇದರ ಬೆಲೆ ಅರಿವಾದೀತು.

ಇಂತಹ ಸಂದರ್ಭಗಳಲ್ಲಿ ವಿವಿಧ ರಾಜ್ಯಗಳಲ್ಲಿನ ಆಳುವ ಸರಕಾರಗಳು ಕಾಯಿಲೆಯ ಮೂಲ ಗಳನ್ನು ಮೊದಲು ಅರಿಯಬೇಕಿತ್ತು. ಇವುಗಳಿಗಾಗಿ, ಸಂಶೋಧನಾ ಕೇಂದ್ರಗಳನ್ನು ಯುವ ವಿಜ್ಞಾನಿ ಗಳಿಗೆ, ವೈದ್ಯರಿಗೋಸ್ಕರ ತೆರೆದು ಶಾಶ್ವತ ಪರಿಹಾರ ಕಂಡುಕೊಳ್ಳಬಹುದಿತ್ತು. ಬದಲಾಗಿ, ಇಡೀ ಇಲಾಖೆಗಳೇ ಮುಂದೆ ನಿಂತು ಫಾರ್ಮಾ ಕಂಪನಿಗಳ ಔಷಧ ವಿತರಣೆಯಲ್ಲಿ ತೊಡಗಿದೆಯೋ ಎಂಬ ಭಾವನೆ ಜನಸಾಮಾನ್ಯರಲ್ಲಿ ಬರುತ್ತಿದೆ.

ಕಾಯಿಲೆ ಬರದಂತೆ ತಡೆಯುವ ಮತ್ತು ಸ್ಥಳೀಯ ಪಾರಂಪರಿಕ ವಿಜ್ಞಾನವನ್ನು ಹೆಚ್ಚು ಬಳಸು ವಂತೆ ಮಾರ್ಗದರ್ಶನ ಮಾಡಬೇಕಾದ ಆರೋಗ್ಯ ಇಲಾಖೆ, ಅಧಿಕಾರಿ ವರ್ಗ ಮತ್ತು ಆಡಳಿತದಲ್ಲಿ ರುವ ಸರಕಾರಗಳು ಕೇವಲ ಇಂಗ್ಲೀಷ್ ಮೆಡಿಸಿನ್ ವಿತರಣೆಯಲ್ಲಿ, ಸಬ್ಸಿಡಿ ಕೊಡುವಲ್ಲಿ, ಆರೋಗ್ಯ ವಿಮೆ ಜಾರಿಗೊಳಿಸುವಲ್ಲಿ ನಿರತವಾಗಿವೆ.

ಆಶ್ಚರ್ಯವೆಂದರೆ, ಆರೋಗ್ಯ ಇಲಾಖೆಯ ಕಾರ್ಯವೇ ಇದು ಎಂಬಂತಹ ಮಾನಸಿಕತೆಯನ್ನು ತುಂಬಿಕೊಂಡುಬಿಟ್ಟಿವೆ. ದೇಶದಲ್ಲಿನ ಬಹುತೇಕ ರಾಜ್ಯಗಳು ಇದನ್ನೇ ಅನುಸರಿಸುತ್ತ, ಸರಕಾರಿ ನೌಕರರಿಗೆ ಹೊಂದುವ ವಿಮಾ ಪಾಲಸಿಗಳು, ಸಾರ್ವಜನಿಕರಿಗೆ ಹೊಂದುವ ವಿಮಾ ಪಾಲಸಿಗಳು ವಿವಿಧ ಹೆಸರಿನಲ್ಲಿ ಜಾರಿಯಲ್ಲಿವೆ. ಇನ್ನು ಖಾಸಗಿ ಕಂಪನಿಗಳು ಆರೋಗ್ಯ ವಿಮೆಗಳ ಸಂಖ್ಯೆಯೋ ಅಗಣಿತ!

ದೇಶದ ಜನರೆಲ್ಲ ಒಂದೇಯಾಗಿರುವುದರಿಂದ, ಹೇಗೂ ಕೇಂದ್ರ ಜಾರಿಗೆ ತಂದಿರುವ ಆಯುಷ್ಮಾನ್ ಆರೋಗ್ಯ ಯೋಜನೆಯನ್ನು ಆಮೂಲಾಗ್ರವಾಗಿ ಎಲ್ಲ ರಾಜ್ಯಗಳು ಸೇರಿ, ಇದೇ ಯೋಜನೆಯನ್ನು ಇನ್ನೂ ಬಲಪಡಿಸಿ, ಏಕರೂಪ ಆರೋಗ್ಯ ವಿಮಾ ಯೋಜನೆಯಾಗಿ ಜಾರಿಗೆ ತರಬಹುದಿತ್ತು. ಯಾವುದೇ ಯೋಜನೆಯಲ್ಲಿ ಚಿಕ್ಕಪುಟ್ಟ ದೋಷಗಳಿರುವುದು ಸಹಜ. ಅದನ್ನು ಸರಿಪಡಿಸಿ ಜನರಿಗೆ ರಾಜ್ಯ ಸರಕಾರಗಳು ತಲುಪಿಸಲು ಯತ್ನಿಸಿದ್ದಲ್ಲಿ ಯೋಜನೆ ಭಾರೀ ಮಟ್ಟದಲ್ಲಿ ದೇಶದ ಎಲ್ಲ ಆಸ್ಪತ್ರೆಗಳಲ್ಲಿ ಏಕರೂಪದಲ್ಲಿ ಸಮವಾಗಿ ಸಿಗುವಂತಾಗುತ್ತಿತ್ತು.

ಜೊತೆಗೆ, ಆರ್ಥಿಕ ಲಾಭಗಳನ್ನು ರಾಜ್ಯಮಟ್ಟದಲ್ಲಿ ಪಡೆಯಬಹುದಾಗಿತ್ತು. ಇದನ್ನು ಬಿಟ್ಟು, ಹಲವು ರಾಜ್ಯಗಳು ತಮಗೆ ತಿಳಿದಂತೆ ಹಲವು ಯೋಜನೆಗಳನ್ನು ರಾಜ್ಯವ್ಯಾಪಿ ಜಾರಿಗೆ ತಂದಿವೆ. ಇವುಗಳನ್ನು ಜಾರಿಗೆ ತರುವಲ್ಲಿ ಹಲವು ಅಡೆತಡೆಗಳು, ನಿಯಮ ನೂರಾರು. ಇನ್ನು, ಜನರಲ್ಲಿ ಕೇಂದ್ರ ಯೋಜನೆ ಮತ್ತು ರಾಜ್ಯ ಯೋಜನೆ ಬಗ್ಗೆ ಯಾವಾಗಲೂ ಗೊಂದಲ, ಯಾವುದನ್ನು ಹೇಗೆ ಪಡೆಯಬೇಕೆಂದು ಅರಿಯದಂತಾಗಿದೆ.

ಇಡೀ ದೇಶದಲ್ಲಿ ಆಯಾ ರಾಜ್ಯ ಸರಕಾರಿ ಪ್ರಯೋಜಿತ ಆರೋಗ್ಯ ವಿಮಾ ಯೋಜನೆಗಳನ್ನು ಗಮನಿಸುವುದಾದರೆ, ಸುಮಾರು 17ಕ್ಕೂ ಹೆಚ್ಚು ವಿವಿಧ ಹೆಸರಿನಲ್ಲಿ ಆರೋಗ್ಯ ವಿಮಾ ಯೋಜನೆ ಗಳನ್ನು ಹಲವು ರಾಜ್ಯಗಳು ಜಾರಿಗೊಳಿಸಿದ್ದು, ಅವುಗಳಲ್ಲಿ ಆಯುಷ್ಮಾನ್ ಭಾರತ್ ಜತೆಗೆ ಅವಾಜ್ ಹೆಲ್ತ್ ವಿಮಾ, ಆಮ್ ಆದ್ಮಿ ಬಿಮಾ ಯೋಜನಾ, ಭಾಮಾಶಾಹಾ ಸ್ವಾಸ್ಥ್ಯ ಬಿಮಾ, ಕೇಂದ್ರ ಸರಕಾರ ಆರೋಗ್ಯ ಯೋಜನೆ, ಮುಖ್ಯಮಂತ್ರಿ ಸಮಗ್ರ ವಿಮಾ, ಎಂಪ್ಲಾಯಿಸ್ ಸ್ಟೇಟ್ ಬಿಮಾ, ಕಾರುಣ್ಯ ಆರೋಗ್ಯ ವಿಮಾ, ಮಹಾತ್ಮ ಜ್ಯೋತಿಬಾ ಪುಲೆ ಜನ್ ಆರೋಗ್ಯ ಯೋಜನಾ, ಮುಖ್ಯಮಂತ್ರಿ ಅಮೃತ ಯೋಜನಾ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನಾ, ಡಾ.ವೈ.ಎಸ್. ಆರ್. ಆರೋಗ್ಯಶ್ರೀ ಆಂಧ್ರ ಹೆಲ್ತ್ ಕೇರ್, ತೆಲಂಗಾಣ ಸರಕಾರದ ನೌಕರರು ಮತ್ತು ಪತ್ರಕರ್ತರ ಆರೋಗ್ಯ ಯೋಜನಾ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನಾ, ಯಶಸ್ವಿನಿ ಹೆಲ್ತ್ ವಿಮಾ, ಪಶ್ಚಿಮ ಬಂಗಾಳ ಆರೋಗ್ಯ ಬಿಮಾ ಸೇರಿದಂತೆ 17ಕ್ಕೂ ವಿಮಾ ಯೋಜನೆಗಳನ್ನು ಜಾರಿಗೆ ತಂದಿವೆ.

ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು, ಮೂಲಸೌಕರ್ಯ ಖಚಿತಪಡಿಸಿ‌ ಕೊಳ್ಳುವುದು ಮತ್ತು ಆರೋಗ್ಯ ವಿಮೆಯನ್ನು ಉತ್ತೇಜಿಸುವುದು ಕೂಡ ಒಂದು ಬಗೆಯ ಜನರ ಕಲ್ಯಾಣಕ್ಕಾಗಿ ಅಧಿಕಾರಿಗಳು ನಡೆಸುವ ಉತ್ಪಾದಕ ಚಟುವಟಿಕೆಗಳ ಭಾಗವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ಇಂತಹ ಕ್ರಮಗಳನ್ನು ಕೈಗೊಳ್ಳುತ್ತವೆ. ಪ್ರಧಾನಮಂತ್ರಿ ಆರೋಗ್ಯ ವಿಮಾ ಯೋಜನೆ 2018 (ಮೋದಿ ಆರೋಗ್ಯ ವಿಮಾ-18 ಎಂದೇ ಪ್ರಚಲಿತ) ದೇಶಾದ್ಯಂತ ಜಾರಿ ಯಲ್ಲಿದ್ದರೆ, ರಾಜ್ಯಗಳ ಸ್ಥಳೀಯ ಯೋಜನೆಗಳಲ್ಲಿ ದೊಡ್ಡ ಮೊತ್ತದ ವಿಮೆಯೊಂದಿಗೆ ಕಡಿಮೆ ಬೆಲೆಯ ವಿಮಾ ಪಾಲಿಸಿಗಳನ್ನು ನೀಡುವಂತವುಗಳಾಗಿವೆ.

ಕೇಂದ್ರದ ಆಯುಷ್ಮಾನ್ ಯೋಜನೆಯನ್ನೇ ಗಮನಿಸುವುದಾದರೆ, ರಾಷ್ಟ್ರೀಯ ಆರೋಗ್ಯ ನೀತಿಯ ಶಿಫಾರಸುಗಳಿಂದಾಗಿ ಈ ಯೋಜನೆ ಅಸ್ತಿತ್ವಕ್ಕೆ ಬಂದಿದೆ. ಆಯುಷ್ಮಾನ್ ಭಾರತ್ ಯೋಜನೆಯನ್ನು ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಆಯು ಷ್ಮಾನ್ ಭಾರತ್‌ಗೆ ಸಂಬಂಧಿಸಿದ ಎರಡು ಪ್ರಮುಖ ಅಂಶಗಳಿದ್ದು, ಆರೋಗ್ಯ ಹಾಗೂ ಸ್ವಾಸ್ಥ್ಯ ಕೇಂದ್ರ ಮತ್ತು ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ. ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಖಚಿತಪಡಿಸಿಕೊಳ್ಳಲು ಒಂದು ಲಕ್ಷದ ಐವತ್ತು ಸಾವಿರ ಆರೋಗ್ಯ ಹಾಗೂ ಸ್ವಾಸ್ಥ್ಯ ಕೇಂದ್ರಗಳನ್ನು ರಚಿಸಲಾಗಿದ್ದು, ಇವುಗಳ ಮೂಲಕ ಬಡವರಿಗೆ ಆರೋಗ್ಯ ವಿಮಾ ಯೋಜನೆಯನ್ನು ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರು.ಗಳ ಆರೋಗ್ಯ ರಕ್ಷಣೆಯನ್ನು ನೀಡುತ್ತದೆ.

ಕೇಂದ್ರ ಸರಕಾರ ಆರಂಭಿಸಿರುವ ಆರೋಗ್ಯ ಯೋಜನೆಗೆ ಕೇಂದ್ರ ಸರಕಾರಿ ನೌಕರರು ಅರ್ಹರು. ಉದಾಹರಣೆಗೆ, ಸುಪ್ರೀಂಕೋರ್ಟ್ ನ್ಯಾಯಾಧೀಶರು, ರೈಲ್ವೆ ಮಂಡಳಿಯ ನೌಕರರು, ಇತ್ಯಾದಿ. 50 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು ಪಿಂಚಣಿದಾರರನ್ನು ಒಳಗೊಂಡಿದೆ. ಅಲೋಪತಿ ಮತ್ತು ಹೋಮಿಯೋಪತಿಯನ್ನು ಸಹ ಒಳಗೊಂಡಿದ್ದು, ಸುಮಾರು 90ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯ ವಿದೆ.

ಆಸ್ಪತ್ರೆಗೆ ದಾಖಲು ಮತ್ತು ಮನೆ ಆರೈಕೆಯನ್ನು ನಿಯಮ ಮತ್ತು ಷರತ್ತುಗಳ ಪ್ರಕಾರ ಈ ಯೋಜನೆ ಒಳಗೊಂಡಿದೆ. ಜೊತೆಗೆ, ಆಮ್ ಆದ್ಮಿ ಬಿಮಾ ಯೋಜನೆ ಭಾರತ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪ್ರಾರಂಭಿಸಿದ ಮತ್ತು ಎಲ್‌ಐಸಿ ಮೂಲಕ ಜಾರಿಗೊಳಿಸಲಾದ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಕೇರಳ ರಾಜ್ಯವು ಅವಾಜ್ ಆರೋಗ್ಯ ವಿಮಾ ಯೋಜನೆ ಯನ್ನು 2017ರಲ್ಲಿ ಜಾರಿಗೆ ತಂದಿದ್ದು, ವಿಶೇಷವಾಗಿ ಕೇರಳದಲ್ಲಿ ಕೆಲಸ ಮಾಡುವ 5 ಲಕ್ಷಕ್ಕೂ ಅಧಿಕ ಅಂತಾರಾಜ್ಯ ವಲಸೆ ಕಾರ್ಮಿಕರಿಗೆ ಸಂಬಂಧಿಸಿದ್ದಾಗಿದೆ.

ಇನ್ನು, ಕರ್ನಾಟಕದಲ್ಲಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಸಹಕಾರಿ ಸಂಘಕ್ಕೆ ಸಂಬಂಧಿಸಿದ ರೈತರು ಮತ್ತು ರೈತರಿಗಾಗಿ ರಾಜ್ಯ ಸರಕಾರವು ಪ್ರಾರಂಭಿಸಿದ್ದು, 800ಕ್ಕೂ ಹೆಚ್ಚು ಚಿಕಿತ್ಸೆಗಳನ್ನು (ಮೂಳೆ ಚಿಕಿತ್ಸೆ, ನರವಿಜ್ಞಾನ, ಆಂಜಿಯೋಪ್ಲ್ಯಾಸ್ಟಿ, ಇತ್ಯಾದಿ) ಒಳಗೊಳ್ಳುತ್ತದೆ. ಈ ಯೋಜನೆಯು ಮುಖ್ಯ ಫಲಾನುಭವಿಯ ಜತೆಗೆ ಕುಟುಂಬ ಸದಸ್ಯರೂ ಇದರ ಪ್ರಯೋಜನ ಪಡೆಯಬಹುದಾಗಿದೆ.

ಇಷ್ಟೆಲ್ಲದರ ನಡುವೆ, ಕರ್ನಾಟಕ ಸರಕಾರವು 2025ರ ಬಜೆಟ್ ಅಧಿವೇಶನದಲ್ಲಿ ರಾಜ್ಯ ಸರಕಾರಿ ನೌಕರರಿಗೆ ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನೂತನ ಭಿಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿತು. ಈ ಯೋಜನೆಯ ಕಾರ್ಯನೀತಿ ನಡೆದದ್ದು, 2020 ರ ಆಸುಪಾಸಿನಲ್ಲಿ ಎನ್ನಬಹುದು.

ಕರ್ನಾಟಕ ಸರಕಾರಿ ನೌಕರರ(ವೈದ್ಯಕೀಯ ಹಾಜರಾತಿ)ನಿಯಮಗಳು 1963 The Karnataka Govt Servants(Medical Attendance)Rules 1963 ರ ಅನ್ವಯ 1963ರ ನಿಯಮಗಳಂತೆ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸರಕಾರಿ ನೌಕರರು ಮಾನ್ಯತೆ ಹೊಂದಿರುವ ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಯಾಗಿ ಪಡೆದ ವೈದ್ಯಕೀಯ ವೆಚ್ಚದ ಮರು ಪಾವತಿಯನ್ನು ದರಪಟ್ಟಿ ಯನ್ವಯ ಆಯಾ ಇಲಾಖಾ ಹಂತದ ನಿಯಂತ್ರಣಾಧಿಕಾರಿಗೆ (ನೋಂದಾಯಿತವಲ್ಲದ ಖಾಸಗಿ ಆಸ್ಪತ್ರೆಯಲ್ಲೂ ತುರ್ತುಚಿಕಿತ್ಸೆ ಪಡೆಯಲು ಅನುವಾಗುವಂತೆ ನಿಯಮ ಸಡಿಲಿಸಿ) ಮಂಜೂರು ಮಾಡಲು ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸರಕಾರಿ ನೌಕರರು ಮತ್ತು ಅವರ ಅವಲಂಬಿತರು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಏಳು ಗಂಭೀರ ಕಾಯಿಲೆಗಳಿಗೆ ನಗದುರಹಿತ ಚಿಕಿತ್ಸೆ ನೀಡುವ ಜ್ಯೋತಿ ಸಂಜೀವಿನಿ ಯೋಜನೆ ಮತ್ತು ನಗದು ರಹಿತ ಆರೋಗ್ಯ ಸೇವೆಗಳನ್ನು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ.

ಇದರಲ್ಲಿ ಜ್ಯೋತಿ ಸಂಜೀವಿನಿ ಯೋಜನೆ, ರಾಜ್ಯ ಸರಕಾರಿ ನೌಕರರು ಮತ್ತು ಅವರ ಕುಟುಂಬಗಳಿಗೆ ನಗದು ರಹಿತ ಆರೋಗ್ಯ ಸೇವೆಗಳನ್ನು ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಜಾರಿಗೆ ತಂದಿದ್ದು, ಸರಕಾರಿ ನೌಕರರು ಮತ್ತು ಅವರ ಕುಟುಂಬಗಳು ಆರ್ಥಿಕ ಹೊರೆಯಿಲ್ಲದೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಯೋಜನೆ ಹೊಂದಿದೆ.

ಇಷ್ಟೆಲ್ಲ ಯೋಜನೆಗಳಿದ್ದೂ, ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರುವ ಉದ್ದೇಶಗಳನ್ನು ನೋಡಿ ದರೆ, ಜನರ ಆರೋಗ್ಯ ಕಾಳಜಿಯ ಬದಲು, ಆರ್ಥಿಕ ಕಾಳಜಿಯನ್ನಿಟ್ಟುಕೊಂಡು ರೂಪಿಸುತ್ತಿರು ವಂತೆ ಕಂಡು ಬರುತ್ತಿದೆ. ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿಯವರೆಗೆ ಒಂದೇ ಒಂದು ಇಲಾಖೆ ಯಿಲ್ಲದಿರುವುದು ಆಶ್ಚರ್ಯಕರ.

‘ಆರೋಗ್ಯ ಮತ್ತು ಜೀವನ ಪದ್ಧತಿ ಇಲಾಖೆ’ ಎಂಬ ಸರಕಾರಿ ಇಲಾಖೆಯನ್ನು ಇದಕ್ಕಾಗಿ ಪ್ರಾರಂಭಿಸಿ, ಅನಾರೋಗ್ಯ ಬರದಂತೆ ಸ್ವಸ್ಥ ಜೀವನ ಕಾಯ್ದುಕೊಳ್ಳಲು ಹಣ್ಣುಗಳ ಬಳಕೆ, ಆಹಾರಗಳ ಸೇವನಾ ತರಬೇತಿ, ದಿನದ ಆರೋಗ್ಯಯುಕ್ತ ವೇಳಾಪಟ್ಟಿ, ಇತರೆ ಮಾರ್ಗದರ್ಶನ ನೀಡುವಂತಹ ವಿಶೇಷ ಮತ್ತು ಹೊಸತು ಜನಜೀವನಕ್ಕೆ ಬೇಕಿದೆ. ದೂರದೃಷ್ಟಿ ಇರುವ ನಾಯಕರು, ಸರರ್ಕಾರಗಳು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ.