ವಿದ್ಯಮಾನ
ಮೊಬೈಲ್ ಹಾಗೂ ಅಂತರ್ಜಾಲದ ಪ್ರಭುತ್ವವಿರುವ ಈ ಕಾಲದಲ್ಲಿ ಯುವಕರಲ್ಲಿ ಪುಸ್ತಕ ಓದುವ ಹವ್ಯಾಸವೇ ಇಲ್ಲದಾಗಿದೆ. ಹಾಗಾಗಿ ಬಹುತೇಕ ಯುವಜನತೆಗೆ ಗ್ರಂಥಾಲಯಗಳ ಬಗ್ಗೆಯೂ ದಿವ್ಯ ನಿರ್ಲಕ್ಷವೇ ಇದೆ. ನಮ್ಮ ಕಾಲದಲ್ಲಿ ಶಾಲೆ ಕಾಲೇಜುಗಳಲ್ಲಿ, ಆಟಕ್ಕೆ ಹಾಗೂ ದೈಹಿಕ ಶಿಕ್ಷಣಕ್ಕಿದ್ದಂತೆ, ಮಕ್ಕಳಿಗೆ ಓದುವ ಹವ್ಯಾಸವನ್ನು ಬೆಳೆಸಲು ವಾರಕ್ಕೆ ಒಂದು ಸಾರಿಯಾದರೂ ಗ್ರಂಥಾಲಯಕ್ಕೆ ಹೋಗಲು ಪ್ರತ್ಯೇಕ ಸಮಯವನ್ನು ಮೀಸಲಿಡಲಾಗುತ್ತಿತ್ತು. ಒಂದು ಸಮಯಕ್ಕೆ ಎರಡು ಪುಸ್ತಕ ಗಳನ್ನು ಮನೆಗೂ ಕೊಂಡೊಯ್ಯಬಹುದಿತ್ತು. ಆ ಕಾಲದಲ್ಲಿ ವಿದ್ಯಾರ್ಥಿಗಳು ಕಾಲೇಜಿನ ತರಗತಿಯ ಎಲ್ಲ ಪುಸ್ತಕಗಳನ್ನು ಕೊಂಡು ತಂದಿಟ್ಟುಕೊಳ್ಳುತ್ತಿದ್ದುದು ತುಂಬಾ ವಿರಳವಾಗಿತ್ತು.
ಗ್ರಂಥಾಲಯಕ್ಕೆ ಹೋಗಿ ಅಲ್ಲಿನ ಪುಸ್ತಕ ಗಳಿಂದ ಟಿಪ್ಪಣೆ ಮಾಡಿಕೊಳ್ಳುತ್ತಿದ್ದರು. ಆಗೆಲ್ಲ ಗ್ರಂಥಾ ಲಯ ಸೌಲಭ್ಯದ ಬಳಕೆಗೆ ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಠೇವಣಿ ತೆಗೆದುಕೊಳ್ಳುತ್ತಿರ ಲಿಲ್ಲ, ಶುಲ್ಕವೂ ಇರುತ್ತಿರಲಿಲ್ಲ. ಸಾರ್ವಜನಿಕ ಗ್ರಂಥಾಲಯ ಗಳಲ್ಲಿ ಹಾಗಲ್ಲ, ಒಂದು ನಿಶ್ಚಿತ ಮೊತ್ತವನ್ನು ಠೇವಣಿ ತೆಗೆದುಕೊಂಡು, ಪ್ರತಿ ಪುಸ್ತಕಕ್ಕೆ ಪ್ರತಿದಿನಕ್ಕೆ ಇಷ್ಟು ಅಂತ ಶುಲ್ಕವನ್ನು ವಿಧಿಸುವ ಪದ್ಧತಿ ಇರುತ್ತಿತ್ತು. ಹೊರನೋಟಕ್ಕೆ ವಾಚನಾಲಯದಲ್ಲಿ ಒಂದು ರೀತಿಯ ನೀರವ ದಿವ್ಯ ಮೌನ ಅಂತ ಅನಿಸಿದರೂ, ಅಲ್ಲಿನ ಓದುಗರ ಒಳಮನಸ್ಸಿನಲ್ಲಿ ಸಂತೆಯಲ್ಲಿ ನಡೆಯುವು ದಕ್ಕಿಂತ ಹೆಚ್ಚು ಗದ್ದಲ ಇರುತ್ತಿತ್ತು.
ಸಾನ್ಯವಾಗಿ ವಾಚನಾಲಯಗಳು ಪುಸ್ತಕ ಪ್ರೇಮಿಗಳಿಂದ ಸದಾ ತುಂಬಿದ್ದರೂ, ಅಲ್ಲಿ ಯಾರೂ ಇಲ್ಲವೇನೋ ಎನ್ನುವಷ್ಟು ಮೌನವಿರುತ್ತಿತ್ತು. ಗ್ರಂಥಾಲಯವು, ಬರೀ ಪುಸ್ತಕ ಹಾಗೂ ಪುಸ್ತಕ ಪ್ರೇಮಿಗಳ ಮಿಲನದ ಸ್ಥಾನ ಮಾತ್ರವಲ್ಲ, ಅದು ಬರೀ ಓದಲಿಕ್ಕಿರುವ ಜಾಗವಂತೂ ಅಲ್ಲವೇ ಅಲ್ಲ, ಅನೇಕ ಯಶಸ್ವೀ ಪ್ರೇಮ ಕಥೆಗಳು ಹುಟ್ಟಿದ್ದೇ ವಿಶ್ವವಿದ್ಯಾಲಯಗಳ ಗ್ರಂಥಾಲ ಯಗಳಲ್ಲಿ ಎಂದರೆ ತಪ್ಪಾಗಲಾರದು.
ಅನೇಕ ಸಾಹಿತಿಗಳ ಪುಸ್ತಕಗಳಿಗೆ ‘ ಶ್ರೀಗಣೇಶಾ ಯನಮಃ’ ಆಗಿದ್ದೂ ವಾಚನಾಲಯಗಳಲ್ಲೇ. ಹೊಸ ಸ್ನೇಹಿತರ ಉಗಮಸ್ಥಾನ, ತರಗತಿಯಲ್ಲಿ ಇಲ್ಲದಿದ್ದವನನ್ನು ಉಪನ್ಯಾಸಕರು ಎಲ್ಲಿ ಎಂದು ಕೇಳಿದರೆ ಸ್ನೇಹಿತರು ತೋರಿಸುವ ಜಾಗ, ತರಗತಿಯೆಲ್ಲ ಮುಗಿದು ತುಂಬಾ ಹೊತ್ತಾದರೂ ಮಗ ಮನೆಗೆ ಬರಲಿಲ್ಲ ಎಂದಾಗ ಮಗ ಎಲ್ಲಿದ್ದಾನೆ ಎಂದು ಊಹಿಸುವ ಜಾಗ, ಇವೆಲ್ಲ ಗ್ರಂಥಾಲಯವೇ ಆಗಿರುತ್ತಿತ್ತು. ಇನ್ನು, ಪುಸ್ತಕದ ವಿಷಯದಲ್ಲಿ ಅದರಲ್ಲೂ ವಾಚನಾಲಯದ ಪುಸ್ತಕಗಳ ವಿಷಯ ದಲ್ಲಿ ಲಕ್ಷಾಂತರ ಸೃಜನಶೀಲ ವಿಕೃತಿಗಳು ನಮಗೆ ನೋಡಲು ಸಿಗುತ್ತವೆ ಮತ್ತು ಅವು ಆ ಕಾಲದ ಜನರ ಮನಸ್ಥಿತಿಯನ್ನೂ ಹೇಳಿ ಬಿಡುತ್ತವೆ. ಪುಸ್ತಕದ ಮೇಲೆ ತಮ್ಮ ಪ್ರೇಮ ನಿವೇದನೆಯನ್ನು ಬರೆದಿಡುವುದು, ಮುಖ್ಯಪುಟದ ಹಾಳೆ ಯನ್ನೇ ಕಿತ್ತುಬಿಡುವುದು, ಮುಂದಿನ ಓದುಗರಿಗೆ ರಸಾಭಾಸ ವಾಗಲಿ ಎನ್ನುವ ವಿಕೃತ ಕಾಮನೆಯಿಂದ ಅದರಲ್ಲಿನ ಒಳ್ಳೆಯ ಸಾಲುಗಳನ್ನು ಶಾಯಿಯಿಂದ ಮಾಸ್ಕ್ ಮಾಡಿಬಿಡುವುದು ಹೀಗೆ ವಿಕೃತಿಗಳು ಒಂದೆರಡಲ್ಲ.
ಇದನ್ನೂ ಓದಿ: Vinayak M Bhat Column: ಮರೆತು ಹೋದ ಮಲೆನಾಡಿನ ಗತಕಾಲದ ವರ್ಷ ವೈಭವ
ವಾಚನಾಲಯದ ಪುಸ್ತಕಗಳ ಮೇಲಿನ ಅತ್ಯಾಚಾರಗಳ ಕುರಿತು ಸಂಶೋಧನಾ ಪ್ರಬಂಧವನ್ನೇ ಬರೆಯಬಹುದೇನೋ! ಅದಕ್ಕೇ ಸಂಸ್ಕೃತ ಸುಭಾಷಿತವೊಂದು ಹೇಳೋದು. ಪುಸ್ತಕಂ ವನಿತಾ ವಿತ್ತಂ ಪರಹಸ್ತಗತಂ ಗತಂ| ಅಥವಾ ಪುನರಾಯಾತಂ ಜೀರ್ಣಂ ಭ್ರಷ್ಟಾ ಚ ಖಂಡಶಃ|| ನಮ್ಮದಾದ ಪುಸ್ತಕ, ವನಿತಾ ಹಾಗೂ ಸಂಪತ್ತು ಎನ್ನುವುದು ಒಮ್ಮೆ ನಮ್ಮ ಕೈಬಿಟ್ಟು ಹೋದಮೇಲೆ ತಿರುಗಿ ಬರುವುದು ವಿರಳ. ಹಾಗೊಮ್ಮೆ ತಿರುಗಿ ಬಂದರೂ, ಹೋಗುವಾಗ ಹೇಗಿತ್ತೋ ಹಾಗೆ ಅಖಂಡವಾಗಿ ತಿರುಗಿ ಬರುವುದಿಲ್ಲ, ಜೀರ್ಣ-ಶೀರ್ಣವಾಗಿ ಅಥವಾ ಭ್ರಷ್ಟವಾಗಿಯೇ ಬರುತ್ತೆ ಎನ್ನುವುದು ಸುಭಾಷಿತ ಮಂಜರಿಯ ಈ ಶ್ಲೋಕದ ತಾತ್ಪರ್ಯ.
ಒಂದು ಪುಸ್ತಕವನ್ನು ಒಬ್ಬ ಇನ್ನೊಬ್ಬನಿಗೆ ಕೊಟ್ಟರೇ ಈ ಪರಿಸ್ಥಿತಿಯಾದರೆ, ನೂರಾರು ಜನರ ಕೈದಾಟುವ ವಾಚನಾಲಯದ ಪುಸ್ತಕದ ಕಥೆ ಹೇಗಾಗಿರಬೇಡ? ಈ ರೀತಿಯ ವಿಕೃತಿಗಳಿಗೆ ಉದಾ ಹರಣೆಯಾಗಿ, ಕನ್ನಡ ಸಾರಸ್ವತ ಲೋಕದ ಶ್ರೇಷ್ಠ ವಿಮರ್ಶಕರು ಹಾಗೂ ಸಾಹಿತಿಗಳಾದ ಧಾರವಾಡದ ಡಾ. ಗಿರಡ್ಡಿ ಗೋವಿಂದರಾಜ ಅವರು ಒಂದು ಕಡೆ ತಮ್ಮ ಅನುಭವವನ್ನು ಹೀಗೆ ಬರೆದುಕೊಂಡಿದ್ದಾರೆ. ಅವರು ಒಮ್ಮೆ ಗ್ರಂಥಾಲಯದಿಂದ ದಿ. ಗೌರಮ್ಮನವರ ಪುಸ್ತಕವೊಂದನ್ನು ಓದಲು ತಂದಿದ್ದರಂತೆ. ಅದರ ಪರಿವಿಡಿಯಲ್ಲಿ ಇಂಥಾ ಪುಟದಲ್ಲಿ ಗೌರಮ್ಮನವರ ಭಾವಚಿತ್ರ ಎಂದಿತ್ತು, ಅದನ್ನು ನೋಡುವ ಕುತೂಹಲದಿಂದ ಗಿರಡ್ಡಿಯವರು ಆ ಪುಟವನ್ನು ತಲುಪಿದರೆ ಅಲ್ಲಿ ಗೌರಮ್ಮನವರ ಫೋಟೋ ಇಲ್ಲ, ತಾನು ನೋಡಿದ ಪುಟ ಸಂಖ್ಯೆಯೇ ತಪ್ಪಾಯಿತಾ ಎಂದು ಹೊರಳಿ ಪರಿವಿಡಿಗೆ ಬಂದು ನೋಡುವಾಗ, ಪುಟ ಸಂಖ್ಯೆಯ ಮುಂದೆ ಗೌರಮ್ಮನವರ ಭಾವ ಚಿತ್ರ ಎಂದಿರುವುದರ ಮುಂದೆ ಒಂದು ’ಸ್ಟಾರ್ ಮಾರ್ಕ್’ ಹಾಕಲಾಗಿರುವುದು ಕಂಡಿತು.
ಆ ‘ಸ್ಟಾರ್ ಮಾರ್ಕ್’ಗೆ ವಿವರಣೆಯಾಗಿ ಅಡಿಟಿಪ್ಪಣೆಯಲ್ಲಿ ಮುದ್ದಾದ ಅಕ್ಷರಗಳಿಂದ ಹೀಗೆ ಬರೆಯಲಾಗಿತ್ತು. ‘ಗೌರಮ್ಮನವರ ಭಾವಚಿತ್ರ ನಿಮಗೆ ಹೇಗೆ ಸಿಗುತ್ತೆ ? ನಾನು ಹರಿದುಕೊಂಡಿಲ್ಲವೇ?’. ಓದುಗನದ್ದು ಎಂಥಾ ಪ್ರಾಮಾಣಿಕತೆ ನೋಡಿ ಎನ್ನುತ್ತಾರೆ ಗಿರಡ್ಡಿಯವರು. ಕಾಲೇಜಿನ ಗ್ರಂಥಾಲಯದ ಪರಿಸ್ಥಿತಿಯೇ ಹೀಗಾದ ಮೇಲೆ ಸಾರ್ವಜನಿಕ ಗ್ರಂಥಾಲಯದ ಪುಸ್ತಕಗಳ ಕಥೆಯನ್ನು ಕೇಳುವುದೇ ಬೇಡ. ನಾನು ಧಾರವಾಡದಲ್ಲಿ ಕಾಲೇಜಿನಲ್ಲಿ ಓದುತ್ತಿದ್ದ ಕಾಲ, ನಮ್ಮ ಕಾಲೇಜಿನಲ್ಲಿ ಒಂದು ಒಳ್ಳೆಯ ಗ್ರಂಥಾಲಯವಿತ್ತು, ಎಲ್ಲ ವಿದ್ಯಾರ್ಥಿಗಳಿಗೂ ಅಲ್ಲಿ ಸದಸ್ಯತ್ವ ಕಡ್ಡಾಯ. ಆ ಗ್ರಂಥಾಲಯದಲ್ಲಿ ಇದ್ದ ಸುಭಾಷಿತ ಮಂಜರಿ ಎನ್ನುವ ಪುಸ್ತಕವನ್ನು ತಂದು ಓದುತ್ತಿದ್ದೆ. ಅದು ಬಹಳ ಅಪರೂಪದ ಸುಭಾಷಿತಗಳ ಸಂಗ್ರಹವಾಗಿತ್ತು. ಆ ಪುಸ್ತಕವನ್ನು ಏನಾದರೂ ಮಾಡಿ ನಾನೂ ಖರೀದಿಸ ಬೇಕೆಂಬ ಆಸೆಯಾಯಿತು. ಹುಬ್ಬಳ್ಳಿ ಧಾರವಾಡದ ಯಾವ ಪುಸ್ತಕದ ಅಂಗಡಿಯಲ್ಲೂ ಅದು ಸಿಗದಾಗಿ ಏನು ಮಾಡುವುದು ಎನ್ನುವುದು ತಿಳಿಯಲಿಲ್ಲ. ಗ್ರಂಥಾಲಯದ ಜವಾಬ್ದಾರಿ ಹೊತ್ತಿದ್ದ ಸಂಸ್ಕೃತ ಉಪನ್ಯಾಸಕರಲ್ಲಿ ನನಗೆ ಈ ಪುಸ್ತಕ ಬೇಕು ಉಪಾಯವೇನು? ಎಂದು ಕೇಳಿದೆ, ನನ್ನ ನಿರೀಕ್ಷೆ, ಅವರು ಈ ಪುಸ್ತಕ ಎಲ್ಲಿ ಸಿಗಲಿಕ್ಕಿದೆ ಎಂದು ಸರಿಯಾಗಿ ಮಾರ್ಗದರ್ಶನ ಮಾಡುತ್ತಾರೆ ಎನ್ನುವುದಾಗಿತ್ತು. ಅದಕ್ಕೆ ಸಂಸ್ಕೃತ ಮಾಸ್ತರು ಏನು ಹೇಳಬೇಕು? ‘ನೀನು ಒಂದು ಕೆಲಸ ಮಾಡು, ಪುಸ್ತಕ ಕಳೆದುಹೋಯಿತು’ ಎಂದು ಬರೆದುಕೊಡು, ಅದಕ್ಕೆ ಅಷ್ಟೋ ಇಷ್ಟೋ ಅಂತ ಒಂದಷ್ಟು ದಂಡ ಕಟ್ಟಿದರಾಯಿತು, ನೀನು ಹೇಗಿದ್ದರೂ ದುಡ್ಡು ಕೊಟ್ಟು ಪುಸ್ತಕವನ್ನು ತೆಗೆದುಕೊಳ್ಳುವವನಿದ್ದೆ, ನಿನಗೆ ಪುಸ್ತಕವಾದಂತಾಯಿತು, ಈಗ ಇಂಥಾ ಪುಸ್ತಕಗಳನ್ನು ಓದುವವರೂ ಕಡಿಮೆಯೇ, ಹಾಗಾಗಿ ದಂಡವಾಗಿ ದುಡ್ಡು ಕೊಟ್ಟು ತೆಗೆದುಕೊಂಡು ಬಿಡು, ಶಾಲೆಗೂ ನೀನು ಮೋಸ ಮಾಡಿದ ಹಾಗಾಗುವುದಿಲ್ಲ’ ಎನ್ನುವ ಉಪಾಯ ಹೇಳಿದರು.
ವಾಚನಾಲಯದಿಂದ ಪುಸ್ತಕ ಒಯ್ಯುವ ಎಲ್ಲರೂ ಇದೇ ಉಪಾಯ ಮಾಡಿದರೆ, ವಾಚನಾಲಯ ಬರಿದಾಗಲು ಹೆಚ್ಚುಸಮಯ ಹಿಡಿಯದು ಎಂದೆನಿಸಿ ಅವರ ಸಲಹೆಯನ್ನು ಸವಿನಯವಾಗಿ ತಿರಸ್ಕರಿಸಿದೆ. ಆದರೆ ಅನೇಕ ಗ್ರಂಥಾಲಯಗಳಲ್ಲಿ ಆಗುತ್ತಿದ್ದುದು ಇದೇ ಕೆಲಸವಾಗಿತ್ತು. ಅಪರೂಪ ದಲ್ಲಿ ಅಪರೂಪದ ಪುಸ್ತಕಗಳು ಇದ್ದಕ್ಕಿದ್ದ ಹಾಗೆ ಕಾಣೆಯಾಗಿ ಬಿಡುತ್ತಿದ್ದವು. ಗ್ರಂಥಾಲಯಗಳ ಇತಿಹಾಸವು ಮಾನವನ ಲಿಪಿ ಮತ್ತು ಬರವಣಿಗೆಯ ಆವಿಷ್ಕಾರದಷ್ಟೇ ಹಳೆಯದು. ಇತಿಹಾಸದ ಮೊದಲ ಗ್ರಂಥಾಲಯಗಳು ಮೆಸೊಪಟೊಮಿಯಾದಲ್ಲಿ ಕಂಡುಬಂದವು.
ಈಜಿಪ್ಟ್‌ನ ಅಲೆಕ್ಸಾಂಡ್ರಿಯಾದಲ್ಲಿ ನಿರ್ಮಿಸಲಾದ ಗ್ರಂಥಾಲಯವು ಪ್ರಾಚೀನ ಜಗತ್ತಿನ ಅತಿ ದೊಡ್ಡ ಮತ್ತು ಪ್ರಸಿದ್ಧ ಗ್ರಂಥಾಲಯವಾಗಿತ್ತು. ಗ್ರಂಥಾಲಯಗಳು ಅವುಗಳ ಉದ್ದೇಶ ಮತ್ತು ಬಳಕೆದಾರರಿಗೆ ಅನುಗುಣ ವಾಗಿ ಸಾರ್ವಜನಿಕ ಗ್ರಂಥಾಲಯ, ಶೈಕ್ಷಣಿಕ ಗ್ರಂಥಾಲಯ ನಿರ್ದಿಷ್ಟ ವಿಷಯಗಳಿಗಾಗಿ, ಉದಾಹರಣೆಗೆ ವೈದ್ಯಕೀಯ, ಕಾನೂನು, ಸಂಶೋಧನೆಗಾಗಿನ ವಿಶೇಷ ಗ್ರಂಥಾಲಯ, ಹಾಗೂ ದೇಶದ ಒಟ್ಟು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಆಸ್ತಿಯನ್ನು ರಕ್ಷಿಸುವ ಕೇಂದ್ರವಾಗಿ ವರ್ತಿಸುವ ರಾಷ್ಟ್ರೀಯ ಗ್ರಂಥಾಲಯ ಹೀಗೆ ಅನೇಕ ಬಗೆಯ ಗ್ರಂಥಾಲಯಗಳಿವೆ. ಭಾರತದ ರಾಷ್ಟ್ರೀಯ ಗ್ರಂಥಾಲಯವು ಕೋಲ್ಕತ್ತಾದಲ್ಲಿದೆಯಂತೆ. ಸಾಮಾನ್ಯವಾಗಿ ಗ್ರಂಥಾಲಯಗಳು ಎಂದರೆ ಅದು ಜ್ಞಾನದ ಭಂಡಾರ ಮತ್ತು ಒಂದು ನಾಗರಿಕತೆಯ ಪ್ರತಿಬಿಂಬ. ಇವು ಪ್ರಾಚೀನ ಕಾಲದಿಂದಲೂ ಮಾನವನ ಬೌದ್ಧಿಕ ಬೆಳವಣಿಗೆಗೆ ಅಪಾರ ಕೊಡುಗೆ ನೀಡುತ್ತಾ ಬಂದಿವೆ. ಅವು ಕೇವಲ ಓದುವ ಕೋಣೆ ಮಾತ್ರ ಆಗಿರದೇ, ಸಂಸ್ಕೃತಿ, ಇತಿಹಾಸ ಮತ್ತು ನಿರಂತರ ಕಲಿಕೆಯ ಕೇಂದ್ರಗಳಾಗಿವೆ. ಎರಡು ಮೂರು ದಶಕಗಳ ಹಿಂದಿನವರೆಗೂ ಪ್ರತಿಯೊಬ್ಬ ವ್ಯಕ್ತಿಯ ಬೌದ್ಧಿಕ ಬೆಳವಣಿಗೆಗೆ ಮತ್ತು ಸಮಾಜದ ಉನ್ನತಿಗೆ ಗ್ರಂಥಾಲಯಗಳು ಅಮೂಲ್ಯ ಕೊಡುಗೆ ಕೊಟ್ಟಿದೆಯೆಂದರೆ ಅದು ಅತಿಶಯೋಕ್ತಿಯಾಗ ಲಾರದು. ಗ್ರಂಥಾಲಯಗಳು ಮಾನವ ನಾಗರಿಕತೆಯ ಬೌದ್ಧಿಕ ವಿಕಾಸದ ಜೀವಂತ ಸಾಕ್ಷಿಗಳು. ಅವು ಪ್ರಾಚೀನ ಕಾಲದಿಂದಲೂ ಸಮಾಜವನ್ನು ಮುನ್ನಡೆಸುತ್ತಿವೆ. ಕತ್ತಲೆಯಲ್ಲಿರುವ ಜಗತ್ತಿಗೆ ಅರಿವಿನ ಬೆಳಕನ್ನು ನೀಡುವ ಅಕ್ಷರ ಧಾಮಗಳೇ ಇವು. ಅಕ್ಷರ ಮತ್ತು ಲಿಪಿಯ ಆವಿಷ್ಕಾರದ ನಂತರ, ಮಾನವನು ತನ್ನ ಅನುಭವ, ಜ್ಞಾನ ಮತ್ತು ಚಿಂತನೆಗಳನ್ನು ಮುಂದಿನ ಪೀಳಿಗೆಗೆ ದಾಟಿಸಲು ಕಂಡುಕೊಂಡ ಅತ್ಯಂತ ಶ್ರೇಷ್ಠ ಮಾಧ್ಯಮವೇ ಗ್ರಂಥಾಲಯ. ಗ್ರಂಥಾಲಯಗಳು ಇತಿಹಾಸ, ವಿeನ, ಕಲೆ, ಸಾಹಿತ್ಯ ಹೀಗೆ ಎಲ್ಲಾ ಕ್ಷೇತ್ರಗಳ ಅಪಾರ ಜ್ಞಾನವನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿಡುತ್ತವೆ. ಗ್ರಂಥಾಲಯಗಳು ಎಲ್ಲರಿಗೂ ಉಚಿತವಾಗಿ ಅಥವಾ ಕಡಿಮೆ ವೆಚ್ಚದಲ್ಲಿ ಓದಲು ಪುಸ್ತಕಗಳನ್ನು ಒದಗಿಸುತ್ತವೆ, ಶ್ರೀಮಂತ-ಬಡವ ಎಂಬ ಭೇದವಿಲ್ಲದೆ ಎಲ್ಲರಿಗೂ ಓದುವ ಸಮಾನ ಅವಕಾಶವನ್ನು ನೀಡುತ್ತದೆ ಹಾಗೂ ವಿದ್ಯಾರ್ಥಿಗಳು, ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ತಮ್ಮ ಅಧ್ಯಯನಕ್ಕಾಗಿ ವಿವಿಧ ಆಕರ ಗ್ರಂಥಗಳು, ನಿಯತಕಾಲಿಕೆಗಳು ಮತ್ತು ಸಂಶೋಧನಾ ವರದಿಗಳು ಗ್ರಂಥಾಲಯದಲ್ಲಿ ಲಭ್ಯವಿರುತ್ತವೆ.
ಎಲ್ಲಕ್ಕಿಂತ ಹೆಚ್ಚಾಗಿ ಗ್ರಂಥಾಲಯಗಳು ಓದಲು ಅತ್ಯಂತ ಸೂಕ್ತವಾದ ಶಾಂತ ಮತ್ತು ಕೇಂದ್ರೀಕೃತ ವಾತಾವರಣವನ್ನು ಒದಗಿಸುತ್ತವೆ. ಭಾರತದಲ್ಲಿ ಜ್ಞಾನವನ್ನು ಪೂಜಿಸುವ ಸುದೀರ್ಘ ಸಂಪ್ರದಾಯ ವಿದೆ. ಪ್ರಾಚೀನ ಭಾರತದಲ್ಲಿ ತಾಳೆಗರಿಯ ಮೇಲೆ ವೇದ, ಪುರಾಣ, ವೈದ್ಯಕೀಯ ಮತ್ತು ವಿಜ್ಞಾನದ ವಿಷಯಗಳನ್ನು ಬರೆದಿಡಲಾ ಗುತ್ತಿತ್ತು. ಭಾರತದ ಹಳೆಯ ವಿಶ್ವವಿದ್ಯಾಲಯಗಳಾದ ನಳಂದಾ, ತಕ್ಷಶಿಲಾ ಮತ್ತು ವಿಕ್ರಮ ಶಿಲಾಗಳು ಜಗತ್ಪ್ರಸಿದ್ಧ ಗ್ರಂಥಾಲಯಗಳನ್ನು ಹೊಂದಿದ್ದವು. ನಳಂದಾ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ‘ಧರ್ಮಗಂಜ್’ ಎಂದು ಹೆಸರಿತ್ತು.
ಇದು ರತ್ನಸಾಗರ, ರತ್ನೋದಧಿ ಮತ್ತು ರತ್ನರಂಜಕ ಎಂಬ ಮೂರು ಬೃಹತ್ ಕಟ್ಟಡಗಳನ್ನು ಒಳಗೊಂಡಿತ್ತು. ಆಕ್ರಮಣಕಾರರು ಈ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದಾಗ, ಅಲ್ಲಿದ್ದ ಪುಸ್ತಕಗಳು ಸತತ ಮೂರು ತಿಂಗಳುಗಳ ಕಾಲ ಉರಿಯುತ್ತಿದ್ದವು ಎನ್ನಲಾಗುತ್ತದೆ. ತಾಳೆಗರಿಯ ಪುಸ್ತಕಗಳು ಸಂಪೂರ್ಣವಾಗಿ ಸುಟ್ಟು ಬೂದಿಯಾಗಲು ಮೂರು ತಿಂಗಳು ಹಿಡಿಯಿತು ಅಂತಾದರೆ, ಆ ಗ್ರಂಥಾಲಯದಲ್ಲಿ ಯಾವ ಪ್ರಮಾಣದಲ್ಲಿ ಪುಸ್ತಕ ಸಂಗ್ರಹವಿತ್ತು ಎನ್ನುವುದನ್ನು ಊಹಿಸಬಹುದು. ಭಾರತದಲ್ಲಿ ಆಧುನಿಕ ಗ್ರಂಥಾಲಯಗಳ ಬೆಳವಣಿಗೆಗೆ ಬ್ರಿಟಿಷರ ಆಡಳಿತಾವಧಿಯಲ್ಲಿ ಬುನಾದಿ ಬಿದ್ದರೂ, ಇದನ್ನು ಒಂದು ಸಾಮಾಜಿಕ ಚಳುವಳಿಯನ್ನಾಗಿ ಮಾಡಿದ್ದು ಭಾರತೀಯರೇ ಎನ್ನುವುದು ಹೆಮ್ಮೆ ಪಡುವ ಸಂಗತಿಯಾಗಿದೆ. ಬರೋಡಾದ ಮಹಾರಾಜರಾದ 3ನೇ ಸಯ್ಯಾಜಿ ರಾವ್ ಗಾಯಕ್ವಾಡ್ ಅವರು ಭಾರತದಲ್ಲಿ ಉಚಿತ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆಯನ್ನು ತಂದ ಮೊದಲ ರಾಜರಾಗಿದ್ದರಂತೆ. ಭಾರತದಲ್ಲಿ ಗ್ರಂಥಾಲಯಗಳನ್ನು ವೈಜ್ಞಾನಿಕವಾಗಿ ಸಂಘಟಿಸಿದ ಕೀರ್ತಿ ಡಾ. ಶಿಯಾಲಿ ರಾಮಾಮೃತ ರಂಗನಾಥನ್ ಅವರಿಗೆ ಸಲ್ಲುತ್ತದೆ. ಇವರು ಗ್ರಂಥಾಲಯ ವಿಜ್ಞಾನಕ್ಕೆ ಜಗತ್ತೇ ಒಪ್ಪಿಕೊಳ್ಳುವ ಐದು ಮೂಲತತ್ವಗಳನ್ನು ನೀಡಿದರು.
ಪುಸ್ತಕಗಳು ಬಳಕೆಗಾಗಿಯೇ ಇವೆ, ಪ್ರತಿಯೊಬ್ಬ ಓದುಗನಿಗೂ ವಾಚನಾಲಯದಲ್ಲಿ ಬೇಕಾದ ಪುಸ್ತಕ ಸುಲಭವಾಗಿ ಸಿಗುವಂತಿರಬೇಕು, ಅಲ್ಲಿರುವ ಪ್ರತಿಯೊಂದು ಪುಸ್ತಕಕ್ಕೂ ಅದರದೇ ಆದ ಓದುಗ ಸಿಗಬೇಕು, ಪುಸ್ತಕವನ್ನು ಹುಡುಕಲು ಓದುಗನ ಸಮಯ ವ್ಯರ್ಥವಾಗಬಾರದು ಹಾಗೂ ಗ್ರಂಥಾ ಲಯವು ನಿರಂತರವಾಗಿ ಬೆಳೆಯುತ್ತಿರಬೇಕು ಎನ್ನುವ ಐದು ತತ್ವಗಳನ್ನು ಅವರು ಹೇಳುತ್ತಾರೆ.
ವಾಚನಾಲಯ ಎನ್ನುವಂಥಾದ್ದು ಒಂದು ವಿಜ್ಞಾನ ಎಂದು ಪರಿಗಣಿಸುವ ಕಾಲವೊಂದಿತ್ತು, ಸರಕಾರೀ ಕಾಲೇಜುಗಳಲ್ಲಿ Library science ನಲ್ಲಿ ಡಿಪ್ಲೊಮಾ ಪದವಿ ನೀಡಲಾಗುತ್ತಿತ್ತು ಮತ್ತು Library science ಓದಿದವರಿಗೆ ಸಾರ್ವಜನಿಕ ಗ್ರಂಥಾಲಯ ಹಾಗೂ ಸರಕಾರಿ ಶಾಲೆ-ಕಾಲೇಜುಗಳಲ್ಲಿ ಉದ್ಯೋಗಾವಕಾಶವೂ ತಕ್ಕ ಮಟ್ಟಿಗೆ ಇತ್ತು. 21ನೇ ಶತಮಾನವು ಮಾಹಿತಿ ತಂತ್ರಜ್ಞಾನದ ಯುಗವಾಗಿದೆ. ಮೊಬೈಲ, ಇಂಟರ್ನೆಟ್ ಮತ್ತು ಕಂಪ್ಯೂಟರ್‌ಗಳ ಪ್ರಭಾವದಿಂದಾಗಿ ಗ್ರಂಥಾ ಲಯಗಳ ಸ್ವರೂಪವೂ ಬದಲಾಗಿದೆ.
ಸಾಂಪ್ರದಾಯಿಕ ಪುಸ್ತಕಗಳ ಜಾಗದಲ್ಲಿ ಈಗ ಇ-ಬುಕ್ಸ್ ಮತ್ತು ಆಡಿಯೋ ಬುಕ್ಸ್ ಸ್ಥಾನ ಪಡೆದಿವೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಪಾರಂಪರಿಕ ಗ್ರಂಥಾಲಯಗಳ ಮೌಲ್ಯ ಮತ್ತು ಪ್ರಾಮು ಖ್ಯತೆ ಎಂದಿಗೂ ಕಡಿಮೆಯಾಗುವುದಿಲ್ಲ. ತಂತ್ರಜ್ಞಾನವು ಎಷ್ಟೇ ಮುಂದುವರಿದು ‘ಗೂಗಲ್’ ನಮಗೆ ಅನಿಯಮಿತ ಮಾಹಿತಿಯನ್ನು ನೀಡಬಹುದಾದರೂ, ಪುಸ್ತಕದ ಪುಟಗಳನ್ನು ತಿರುವುದರಲ್ಲಿರುವ ಆನಂದ ಮತ್ತು ಅಲ್ಲಿ ಸಿಗುವ ಅಧೀಕೃತ ಜ್ಞಾನಕ್ಕೆ ಯಾವುದೂ ಸಾಟಿಯಲ್ಲ.
ಅದರಲ್ಲೂ ಗ್ರಂಥಾಲಯದಲ್ಲಿ ಕುಳಿತು ಓದುವ ಮಜವೇ ಬೇರೆ ಇರುತ್ತದೆ, ಆ ಸುಖ ಅನುಭವಿಸಿ ದವರಿಗೇ ಗೊತ್ತು. ನಮಗೆ ಬೇಕಾದ ಪುಸ್ತಕಗಳೆಲ್ಲವನ್ನೂ ತಂದಿಟ್ಟುಕೊಳ್ಳುವುದು ಪ್ರಾಚೀನಕಾಲ ದಲ್ಲೂ ಸಾಧ್ಯವಿರಲಿಲ್ಲ. ಸುಧಾರಿತ ಮುದ್ರಣದ ವ್ಯವಸ್ಥೆಯಿರುವ ಹಾಗೂ ಆರ್ಥಿಕಾಗಿ ಜನ ಸದೃಢವಾಗಿ ರುವ ಈ ಕಾಲದಲ್ಲೂ ಸಾಧ್ಯವಿಲ್ಲ. ಹಾಗಲ್ಲದಿದ್ದರೆ, ಇವತ್ತು ಎಲ್ಲರ ಮನೆಯಲ್ಲೂ ಒಂದು ಸಣ್ಣ ಗ್ರಂಥ ಸಂಗ್ರಹ ಇರುತ್ತಿತ್ತು. ಹಾಗಾಗಿ, ಪ್ರತಿಯೊಂದು ಗ್ರಾಮ, ಪಟ್ಟಣ ಅಥವಾ ಶಾಲೆಗಳಲ್ಲಿ ಸಣ್ಣದೊಂದು ಗ್ರಂಥಾಲಯವನ್ನು ಹೊಂದುವ ಮೂಲಕ ಅಥವಾ ಈಗಾಗಲೇ ಇರುವ ವಾಚನಾ ಲಯವನ್ನ ಹೆಚ್ಚು ಬಳಸುವ ಮೂಲಕ ನಾವು ಸುಜ್ಞಾನವಂತ ಸಮಾಜವನ್ನು ನಿರ್ಮಿಸಬೇಕಾಗಿದೆ ಹಾಗೂ ವೈಶ್ವಿಕವಾಗಿ ಗೌರವ ಸಂಪಾದಿಸಿದ ನಮ್ಮ ಜ್ಞಾನಪರಂಪರೆಯನ್ನು ಉಳಿಸಬೇಕಾಗಿದೆ.
ಗ್ರಂಥಾಲಯದ ವಿಷಯದಲ್ಲಿ ಆಲ್ಬರ್ಟ್ ಐನ್‌ಸ್ಟೈನ್‌ನ The only thing that you absolutely have to know, is the location of the library ಎನ್ನುವ ಮಾತು ನಿಜಕ್ಕೂ ಸ್ಮರಣೀಯವಾದದ್ದು.