ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vinayak M Bhat Column: ಮರೆತು ಹೋದ ಮಲೆನಾಡಿನ ಗತಕಾಲದ ವರ್ಷ ವೈಭವ

ಮಲೆನಾಡಿನ ಮಳೆಗಾಲವೆಂದರೆ ಅದು ಎಡಬಿಡದ ಕುಂಭ ದ್ರೋಣ ವರ್ಷಧಾರೆ, ಸೂರ್ಯನಿಗೂ ಮಲೆ ನಾಡಿಗೂ ಮೂರು ತಿಂಗಳು ಸಂಬಂಧವೇ ಇರುತ್ತಿರಲಿಲ್ಲ. ಒಂದು ಸಣ್ಣ ಮಳೆ, ಇನ್ನೊಂದು ದೊಡ್ಡ ಮಳೆ, ಅಷ್ಟೇ ಬಿಟ್ಟರೆ ಮಳೆಯಂತೂ ನಿರಂತರವಾಗಿ ಇರುತ್ತಿತ್ತು. ಮಲೆನಾಡಿನಲ್ಲಿ ಮಳೆಗಾಲ ಎಂದರೆ ಪ್ರಕೃತಿಯ ಒಂದು ಅದ್ಭುತವಾದ ಸೌಂದರ್ಯಪೂರ್ಣ ಹಬ್ಬ. ಕರ್ನಾಟಕದ ಪಶ್ಚಿಮ ಘಟ್ಟಗಳ ಸಾಲಿ ನಲ್ಲಿ ಬರುವ ಈ ಪ್ರದೇಶವು ತನ್ನ ದಟ್ಟವಾದ ಹಸಿರು, ಧುಮ್ಮಿಕ್ಕುವ ಜಲಪಾತಗಳು ಮತ್ತು ಮಳೆಗಾಲದ ವಿಶೇಷ ಜೀವನಶೈಲಿಗೆ ಹೆಸರುವಾಸಿಯಾಗಿದೆ

ಮರೆತು ಹೋದ ಮಲೆನಾಡಿನ ಗತಕಾಲದ ವರ್ಷ ವೈಭವ

-

ವಿದ್ಯಮಾನ

ಈ ವರ್ಷ ಮುಂಗಾರು ಸರಿಯಾದ ಸಮಯಕ್ಕೆ ಪ್ರಾರಂಭವೇನೋ ಆಯಿತು, ಆದರೆ ಜೂನ್ ತಿಂಗಳು ಕಳೆಯುತ್ತ ಬಂದರೂ ಕರಾವಳಿ, ಮಲೆನಾಡಿನಲ್ಲಿ ಇನ್ನೂ ನೆಲ ಪೂರ್ತಿ ಒದ್ದೆಯಾಗಿಲ್ಲ, ಇನ್ನು ಉತ್ತರಕರ್ನಾಟಕದ ಕಥೆಯನ್ನಂತೂ ಕೇಳುವುದೇ ಬೇಡ. ಕರಾವಳಿ ಮಲೆನಾಡಿನ ಜಿಲ್ಲೆಗಳಲ್ಲಿಯೇ ವಾಡಿಕೆಗಿಂತ ಶೇ.50ರಷ್ಟು ಕಡಿಮೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಮುಂದೆ ಬರಬಹುದಾದ ಬರಗಾಲಕ್ಕೆ ಕರ್ನಾಟಕ ಸರಕಾರ ಈಗಾಗಲೇ ತಯಾರಿ ಮಾಡಿಕೊಳ್ಳುತ್ತಿದೆ. ಇಷ್ಟೊತ್ತಿಗೆ ಅರ್ಧಕ್ಕಿಂತ ಹೆಚ್ಚು ತುಂಬಿರುತ್ತಿದ್ದ ನಮ್ಮ ಅಣೆಕಟ್ಟುಗಳು ಬರಿದಾಗಿ ನಿಂತಿವೆ. ಮಳೆ ಅವಲಂಬಿತ ಕೃಷಿ ಕೆಲಸಗಳು ಇನ್ನೂ ಆರಂಭವಾಗಿಲ್ಲ. (ಕರ್ನಾಟಕದ ಕೆಲವು ಭಾಗಗಳಲ್ಲಿ ಕೃಷಿ ಕೆಲಸಕ್ಕೆ ‘ಆರಂಭ’ ಎಂದು ಕರೆಯುವ ರೂಢಿಯೂ ಇದೆ) ಈ ಸಂದರ್ಭದಲ್ಲಿ, ಮಲೆನಾಡಿನ ಪರಿಸರದಲ್ಲಿ ಹುಟ್ಟಿ ಬೆಳೆದ ನನಗೆ ಚಿಕ್ಕವನಿದ್ದಾಗಿನ ಮಳೆಗಾಲ ನೆನಪಾಯಿತು.

ಮಲೆನಾಡಿನ ಮಳೆಗಾಲವೆಂದರೆ ಅದು ಎಡಬಿಡದ ಕುಂಭ ದ್ರೋಣ ವರ್ಷಧಾರೆ, ಸೂರ್ಯನಿಗೂ ಮಲೆನಾಡಿಗೂ ಮೂರು ತಿಂಗಳು ಸಂಬಂಧವೇ ಇರುತ್ತಿರಲಿಲ್ಲ. ಒಂದು ಸಣ್ಣ ಮಳೆ, ಇನ್ನೊಂದು ದೊಡ್ಡ ಮಳೆ, ಅಷ್ಟೇ ಬಿಟ್ಟರೆ ಮಳೆಯಂತೂ ನಿರಂತರವಾಗಿ ಇರುತ್ತಿತ್ತು. ಮಲೆನಾಡಿನಲ್ಲಿ ಮಳೆಗಾಲ ಎಂದರೆ ಪ್ರಕೃತಿಯ ಒಂದು ಅದ್ಭುತವಾದ ಸೌಂದರ್ಯಪೂರ್ಣ ಹಬ್ಬ. ಕರ್ನಾಟಕದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುವ ಈ ಪ್ರದೇಶವು ತನ್ನ ದಟ್ಟವಾದ ಹಸಿರು, ಧುಮ್ಮಿಕ್ಕುವ ಜಲಪಾತಗಳು ಮತ್ತು ಮಳೆಗಾಲದ ವಿಶೇಷ ಜೀವನಶೈಲಿಗೆ ಹೆಸರುವಾಸಿಯಾಗಿದೆ. ಈ ಋತು ಇಲ್ಲಿನ ಜನರಿಗೆ ಕೇವಲ ಒಂದು ಕಾಲವಲ್ಲ, ಅದೊಂದು ಸಂಭ್ರಮ, ತಪಸ್ಸು, ಏಕಾಂತ ಹಾಗೂ ಕಂಬಳಿಯ ಬೆಚ್ಚನೆಯ ಆಹ್ಲಾದ.

ಇದನ್ನೂ ಓದಿ: Vinayaka M Bhat Column: ಒಂದು ಕಾಲದಲ್ಲಿ ಹೋಮ್‌ ಮಿನಿಸ್ಟ್ರೇ ಸ್ಟ್ರಾಂಗು ಗುರು !

ಅಲ್ಲಿಯ ಮಳೆಯ ಆರ್ಭಟ ಹೇಗಿರುತ್ತಿತ್ತೆಂದರೆ, ಮನೆಯೊಳಗೆ ಅಕ್ಕ-ಪಕ್ಕ ಕುಳಿತು ಮಾತನಾಡಿ ದರೂ ಒಬ್ಬರಿಗೊ ಬ್ಬರಿಗೆ ಕೇಳಿಸುತ್ತಿರಲಿಲ್ಲ. ಕಪ್ಪೆ ಹಾಗೂ ಮರಜಿರಳೆಗಳ ಗೌಜು, ಮಳೆಯ ಸದ್ದಿಗೆ ಸಾಥ್ ನೀಡುತ್ತಿತ್ತು. ಆರ್ದ್ರಾ, ಸ್ವಾತಿ, ಪುನರ್ವಸು ಮುಂತಾದ ಮಳೆಯ ಒಂದೊಂದು ನಕ್ಷತ್ರಗಳಿಗೆ ಒಂದೊಂದು ಫಲಗಳನ್ನು ಹೇಳಲಾಗುತ್ತಿತ್ತು. ಈ ನಕ್ಷತ್ರದಲ್ಲಿ ಹೆಚ್ಚು ಮಳೆಯಾದರೆ ಬೆಳೆ ನಾಶಕ್ಕೆ ಕಾರಣವಾಗುವ ಕ್ರಿಮಿ ಕೀಟಗಳು ನಾಶವಾಗುತ್ತವೆ,

ಇನ್ನೊಂದು ನಕ್ಷತ್ರದ ಮಳೆ ಭೂಮಿಗೆ ಹೆಚ್ಚು ಫಲವತ್ತತೆಯನ್ನು ತರುತ್ತದೆ, ಆರ್ದ್ರಾ ನಕ್ಷತ್ರದಲ್ಲಿ ಮಳೆ ಆರದೇ ಹೊಯ್ಯುತ್ತದೆ ಹೀಗೆ ಒಂದೊಂದು ಮಳೆಗೆ ಒಂದೊಂದು ಪ್ರಯೋಜನವನ್ನು ಗುರುತಿ ಸಲಾಗುತ್ತಿತ್ತು. ದಟ್ಟವಾದ ಕಾಡುಗಳು, ಬೆಟ್ಟ-ಗುಡ್ಡಗಳು ಮತ್ತು ಕಣಿವೆಗಳಿಂದ ಕೂಡಿರುವ ಮಲೆನಾಡಿನ ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಳೆಗಾಲವು ಸರಿಯಾಗಿ ಜೂನ್ ತಿಂಗಳಲ್ಲಿ ಆರಂಭವಾಗಿ ಸೆಪ್ಟೆಂಬರ್ ವರೆಗೂ ಮುಂದುವರೆಯುವ ಕಾಲವಿತ್ತು.

ಮಲೆನಾಡಿನ ಮಳೆಗಾಲದ ಪ್ರಮುಖ ಆಕರ್ಷಣೆ ಎಂದರೆ ಅಲ್ಲಿನ ಜೋಗ್, ಉಂಚಳ್ಳಿ, ಅಬ್ಬೆ, ಮುಂತಾದ ಪ್ರಮುಖ ಜಲಪಾತಗಳು. ಅವು ಮಳೆಗಾಲದಲ್ಲಿ ಮೈದುಂಬಿ ವಿಜೃಂಭಿಸುತ್ತವೆ. ಈ ಪ್ರಸಿದ್ಧ ಜಲಪಾತಗಳನ್ನು ಹೊರತುಪಡಿಸಿ, ಪ್ರತಿ ಮನೆಯ ಹತ್ತಿರ, ತೋಟ ಬೆಟ್ಟ ಗುಡ್ಡಗಳ ಹತ್ತಿರ, ಸಹಜವಾಗಿ ಸಣ್ಣ-ಸಣ್ಣ ಜಲಪಾತಗಳುಂಟಾಗುತ್ತಿದ್ದವು ಕೂಡಾ. ಆಗೆಲ್ಲ ಮಣ್ಣು ರಸ್ತೆಯಿದ್ದ ಕಾಲ, ಆ ರಸ್ತೆಯ ಅಕ್ಕ-ಪಕ್ಕದ ಸಣ್ಣ ಕಾಲುವೆ ಗಳಲ್ಲೂ ಶುದ್ಧ ನೀರಿನ ಓರತೆ/ನೀರಿನ ಬುಗ್ಗೆ ಏಳುತ್ತಿತ್ತು, ಮತ್ತು ನಮಗೆಲ್ಲ ಅದು ಅತ್ಯಂತ ಸೋಜಿಗದ ಸಂಗತಿಯಾಗಿರುತ್ತಿತ್ತು.

71 ಒಕ

ಪ್ರತಿಮನೆಯಲ್ಲಿರುವ ತೆರೆದ ಬಾವಿಗಳು ಮೊದಲ ಮಳೆಗೇ ತುಂಬಿ, ನೀರು ಭೂಮಿಯ ಮಟ್ಟಕ್ಕೆ ಬಂದುಬಿಡುತ್ತಿತ್ತು. ಇನ್ನು ಊರ ತುದಿಯ ಸಣ್ಣ ಹೊಳೆ ಹಳ್ಳಗಳಿಂದ ಹಿಡಿದು ದೊಡ್ಡ ನದಿಗಳು ತುಂಬಿ ಭೋರ್ಗರೆಯುತ್ತಾ ಹರಿಯುತ್ತಿತ್ತು. ಆಗ ಸಣ್ಣ-ಸಣ್ಣ ಹೊಳೆ ಹಳ್ಳಗಳನ್ನು ದಾಟಲು ಹರಸಾಹಸ ಪಡಬೇಕಾಗುತ್ತಿತ್ತು, ಈಗಿನಂತೆ ಸೇತುವೆಗಳಿರಲಿಲ್ಲ, ಮರದ ತಾತ್ಕಾಲಿಕ ಸೇತುವೆಯೇ ಹೊಳೆದಾಟಲು ಆಧಾರವಾಗಿರುತ್ತಿತ್ತು, ಮಲೆನಾಡಿನಲ್ಲಂತೂ ಅಡಿಕೆ ಮರದ ‘ಸಂಕ’, (‘ಸಂಕ’ ಎಂದರೆ ಹೊಳೆ ದಾಟಲು ಬಳಸುತ್ತಿದ್ದ ಒಂದು ರೀತಿಯ ತಾತ್ಕಾಲಿಕ ಸೇತುವೆ) ಈಗ ಇವುಗಳನ್ನು ನೋಡಲೂ ಸಿಗಲಿಕ್ಕಿಲ್ಲ. ಈ ಅಡಿಕೆ ಮರದ ಸಂಕವನ್ನು ಬಳಸಿ ತುಂಬಿ ಹರಿಯುವ ಹಳ್ಳಗಳನ್ನು ದಾಟಿ ಹೋಗುವುದೆಂದರೆ ಅದೊಂದು ರೋಚಕ ಸಾಹಸವೇ ಸರಿ. ಕಾರಣ, ಐದಾರು ಅಡಿಕೆ ಮರಗಳನ್ನು ಬಳಸಿ ನಿರ್ಮಿಸುವ ಸಂಕ ಸ್ಥಾಯಿ ಯಾಗಿ ಇರುತ್ತಿರಲಿಲ್ಲ, ಮಧ್ಯಕ್ಕೆ ಹೋದಾಗ ಅದು ‘ಕುಶನ್’ನ ಥರಹ ಮೇಲೆ ಕೆಳಗೆ, ಅತ್ತ-ಇತ್ತ ಓಲಾಡುತ್ತಿತ್ತು, ದಾಟುವಾಗ ಜೀವ ಬಾಯಿಗೆ ಬರುವು ದೊಂದು ಬಾಕಿ ಎನ್ನುವಷ್ಟರ ಮಟ್ಟಿಗಾಗು ತ್ತಿತ್ತು, ಇನ್ನು ಮರದ ಅಥವಾ ಅಡಿಕೆ ಮರದ ಸಂಕ ವನ್ನು ಬಳಸಿ ಅಭ್ಯಾಸವಿಲ್ಲದವರಿ ಗಂತೂ ಕೇಳುವುದೇ ಬೇಡ. ಕುಳಿತು ಹೋಗುವುದು, ತೆವಳುತ್ತ ಹೋಗುವುದು ಎಲ್ಲ ಇರುತ್ತಿತ್ತು.

ಅದು ಒಂದು ರೀತಿಯ ಮರೆಯಲಾರದ ದುಸ್ವಪ್ನ, ಅದರಲ್ಲೂ ನೀರಿನ ಫೋಬಿಯಾ ಇರುವ ವರಿಗಂತೂ ಸಂಕ ದಾಟುವುದು ಎಂದರೆ ಅದು ಯಾವ ಆಧುನಿಕ ಸಾಹಸ ಕ್ರೀಡೆಗೂ ಕಮ್ಮಿಯದಲ್ಲ. ಇನ್ನು ಯಾವುದೋ ಕೆಲಸಕ್ಕಾಗಿಯೋ ಅಥ ವಾ ಶಾಲೆ ಕಾಲೇಜುಗಳಿಗಾಗಿಯೋ ಸಂಕ ದಾಟಿ ಹೊಳೆಯ ಈಚೆ ಬಂದು ಮತ್ತೆ ತಿರುಗಿ ಮನೆಕಡೆ ಹೋಗುವಾಗ ಅಲ್ಲಿ ಸಂಕವೇ ಇರುತ್ತಿರಲಿಲ್ಲ, ಹೊಳೆಯ ನೀರಿನ ರಭಸಕ್ಕೆ, ಸಂಕವನ್ನೂ ತನ್ನಜ ತೆಗೆ ಕರೆದುಕೊಂಡು ಹೋಗಿ ಬಿಡುತ್ತಿತ್ತು, ಅಲ್ಲಿಂದ ನಾಲ್ಕು ದಿನ ಆ ಕಡೆಯವರು ಆ ಕಡೆಗೇ ಈ ಕಡೆಯವರು ಈ ಕಡೆಗೇ, ಏನೂ ಮಾಡುವ ಹಾಗಿರಲಿಲ್ಲ.

ಮಲೆನಾಡಿನಲ್ಲಿ ಮಳೆಗಾಲವು ರೈತರಿಗೆ ಅತ್ಯಂತ ಬಿಡುವಿಲ್ಲದ ಕಾಲ. ಇಲ್ಲಿನ ರೈತರು ಭತ್ತದ ಬೇಸಾಯವನ್ನು ಪ್ರಮುಖವಾಗಿ ಅವಲಂಬಿಸಿದ್ದಾರೆ. ಮಳೆ ಶುರುವಾಗುತ್ತಿದ್ದಂತೆ ರೈತರು ತಮ್ಮ ಗzಗಳನ್ನು ಹದಗೊಳಿಸಿ, ನಾಟಿ ಮಾಡಲು ಸಿದ್ಧರಾಗುತ್ತಾರೆ. ಮಳೆಗಾಲದ ವಾತಾವರಣಕ್ಕೆ ತಕ್ಕಂತೆ ಮಲೆನಾಡಿನ ಜನರು ತಮ್ಮದೇ ಆದ ವಿಶೇಷ ಆಹಾರ ಪದ್ಧತಿಯನ್ನು ರೂಢಿಸಿಕೊಂಡಿರುತ್ತಾರೆ.

ತಂಬುಳಿ, ಪತ್ರೊಡೆ (ಕೆಸುವಿನ ಎಲೆಯ ಖಾದ್ಯ), ಕರಕಲಿ, ಕಟ್ನೆ ಮತ್ತು ಹಲಸಿನ ಹಣ್ಣಿನ ಕಡುಬು ಮಳೆಗಾಲದ ಸವಿಯನ್ನು ಹೆಚ್ಚಿಸುತ್ತವೆ. ಮಲೆನಾಡಿನ ಮನೆಗಳಲ್ಲಿ ಮಳೆಗಾಲಕ್ಕಾಗಿ ವಿಶೇಷವಾಗಿ ಉಪ್ಪಿನಕಾಯಿ, ಹಪ್ಪಳ, ಮತ್ತು ಸಂಡಿಗೆಗಳನ್ನು ಬೇಸಿಗೆಯ ತಯಾರಿಸಿ ಸಂಗ್ರಹಿಸಿಡಲಾಗುತ್ತದೆ. ಈ ಕಾಲದಲ್ಲಿ ಮನೆಯ ಸುತ್ತಮುತ್ತ ಬೆಳೆಯುವ ಸೊಪ್ಪು ತರಕಾರಿಗಳೇ ಅಡಿಗೆಗೆ ಆಧಾರ.

ಪೇಟೆ, ಪಟ್ಟಣಗಳಿಂದ ತರುವ ಪ್ರಶ್ನೆಯೇ ಇರುತ್ತಿರಲಿಲ್ಲ. ಬಿಡದೇ ಸುರಿಯುವ ಮಳೆಯಿಂದಾಗಿ ಆಚೆ ಹೋಗುವುದೂ ಕಷ್ಟವಾಗುತ್ತಿತ್ತು ಬಿಡಿ. ಪ್ರಕೃತಿ ಸೌಂದರ್ಯದ ಜತೆಗೆ ಮಳೆಗಾಲವು ಮಲೆನಾಡಿನ ಜನರಿಗೆ ಕೆಲವು ಸವಾಲುಗಳನ್ನು ತಂದೊಡ್ಡುತ್ತದೆ. ನಿರಂತರ ಮಳೆಯಿಂ ದಾಗಿ ರಸ್ತೆಗಳು ಹಾಳಾಗು ವುದು, ಗುಡ್ಡ ಕುಸಿಯುವುದು, ಹತ್ತಿರದ ನದಿಗಳು ಕೃಷಿಭೂಮಿಯನ್ನು ಅತಿಕ್ರಮಿಸುವುದು ಮತ್ತು ತಗ್ಗು ಪ್ರದೇಶಗಳು ಜಲಾವೃತವಾಗುವುದು ಸಾಮಾನ್ಯ.

ವಿದ್ಯುತ್ ಕಡಿತವು ಮಳೆಗಾಲದಲ್ಲಿ ದಿನನಿತ್ಯದ ಸಮಸ್ಯೆಯಾಗಿರುತ್ತದೆ. ಮಲೆನಾಡಿನಲ್ಲಿ ಮಳೆಗಾಲ ದ ಸಂದರ್ಭದಲ್ಲಿ ಅನೇಕ ಹಬ್ಬಗಳು ಮತ್ತು ಸಂಪ್ರದಾಯಗಳು ಆಚರಿಸಲ್ಪಡುತ್ತವೆ. ಈ ಹಬ್ಬಗಳು ಕುಟುಂಬದವರನ್ನು ಮತ್ತು ಸ್ನೇಹಿತರನ್ನು ಒಗ್ಗೂಡಿಸುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ, ಮಲೆನಾಡಿನ ಮಳೆಗಾಲವು ಪ್ರಕೃತಿಯ ಒಂದು ಅದ್ಭುತವಾದ ವಿಸ್ಮಯ. ನಗರದ ಗಲಭೆಗಳಿಂದ ದೂರವಿರುವ ಮಲೆನಾಡಿನ ಹಳ್ಳಿಗಳಲ್ಲಿ ಮಳೆಯ ಸೌಂದರ್ಯವನ್ನು ಅನುಭವಿಸುವುದೇ ಒಂದು ಭಾಗ್ಯ.

ವರ್ಷದಿಂದ ವರ್ಷಕ್ಕೆ ಮಳೆಗಾಲ ಎನ್ನುವುದು ಸಂಕುಚಿತವಾಗುತ್ತ ಸಾಗಿದೆ. ನಾಲ್ಕು ತಿಂಗಳುಗಳಲ್ಲಿ ಬರಬೇಕಾಗಿದ್ದ ಮಳೆ, ಹವಾಮಾನ ವ್ಯತ್ಯಾಸದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಎರಡೇ ತಿಂಗಳು ಗಳಲ್ಲಿ ಸುರಿದು ಬರಿದಾಗುತ್ತಿದೆ. ಈ ವರ್ಷವಂತೂ ಎಲ್ಲಿ ನೋಡಿದರೂ ‘ಎಲ್ ನಿನೋ’ದ್ದೇ ಸುದ್ದಿ, ಮೂಲತಃ ಇದೊಂದು ಸ್ಪ್ಯಾನಿಶ್ ಶಬ್ದ, ಅದರರ್ಥ ‘ಲಿಟಲ್ ಬಾಯ್ ಚೈಲ್ಡ್’ ಅಂತೆ.

ಎಲ್ ನಿನೋ ಎನ್ನುವ ಪ್ರಾಕೃತಿಕ ಕಾರಣದಿಂದ ಈ ಬಾರಿ ಹೆಚ್ಚಾಗಿ ದುರ್ಬಲ ಮಾನ್ಸೂನ್ʼ ನೊಂದಿಗೆ ಶುಷ್ಕ ಹವಾಮಾನ, ಸಂಭಾವ್ಯ ಬರಗಾಲಗಳು ಕೃಷಿ ಉತ್ಪಾದನೆಯ ಮೇಲಿನ ಒತ್ತಡಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಸಮಭಾಜಕ ರೇಖೆಯ ಸಮೀಪವಿರುವ ಸಾಗರದ ನೀರಿನ ಮೇಲ್ಮೈ ಸಾಮಾ ನ್ಯಕ್ಕಿಂತ ಬೆಚ್ಚಗಾದಾಗಿನ ಪರಿಸ್ಥಿತಿಯನ್ನು ‘ಎಲ್ ನಿನೋ’ ಎಂದು ಕರೆದರೆ, ಇದಕ್ಕೆ ವಿರುದ್ಧವಾದ ಪರಿಸ್ಥಿತಿಯನ್ನು ‘ಲಾ ನಿನೋ’ ಅಂತ ಕರೆಯಲಾಗುತ್ತದೆ.

ಆಗ ಸಮಭಾಜಕದ ಸಮೀಪವಿರುವ ಸಾಗರದ ನೀರು ಸಾಮಾನ್ಯಕ್ಕಿಂತ ಹೆಚ್ಚು ತಂಪಾಗಿರುತ್ತದೆ. ‘ಎಲ್ ನಿನೋ’ ಸಾಮಾನ್ಯವಾಗಿ ಪ್ರತಿ ಮೂರರಿಂದ ಏಳು ವರ್ಷಗಳಿಗೊಮ್ಮೆ ಸಂಭವಿಸುವ ಸಹಜ ಪ್ರಾಕೃತಿಕ ಪರಿಸ್ಥಿತಿ. ಇದರ ಪರಿಣಾಮ ಸಾಮಾನ್ಯವಾಗಿ 9 ರಿಂದ 12 ತಿಂಗಳುಗಳವರೆಗೆ ಇರುತ್ತದೆ.

ಎಲ್ ನಿನೋ ವಾತಾವರಣಕ್ಕೆ ಅಪಾರ ಪ್ರಮಾಣದ ಶಾಖವನ್ನು ಬಿಡುಗಡೆ ಮಾಡುವುದರಿಂದ, ಅವು ಹೆಚ್ಚಾಗಿ ಜಾಗತಿಕ ತಾಪ ಮಾನವನ್ನು ಹೆಚ್ಚಿಸುತ್ತವೆ. 2026ರ ಎಲ್ ನಿನೋ, ನೈಋತ್ಯ ಮಾನ್ಸೂನ್ ಅನ್ನು ದುರ್ಬಲಗೊಳಿಸುವ ಮೂಲಕ ಭಾರತದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಿರುವುದಂತೂ ಸತ್ಯ.

ನಾವು ಕನ್ನಡಿಗರು ಇದಕ್ಕಿಂತ ಭೀಕರ ನೈಸರ್ಗಿಕ ವಿಕೋಪದ ಪರಿಸ್ಥಿತಿಯನ್ನು ನೋಡಿದ್ದೇವೆ, 1983 ರಿಂದ 89ರ ವರೆಗಿನದ್ದು, ನಮ್ಮ ಕಾಲದ ಜನರು ನೋಡಿದ ಭೀಕರ ಬರಗಾಲ, ರಾಮಕೃಷ್ಣ ಹೆಗಡೆ ಯವರು ಮುಖ್ಯಮಂತ್ರಿಗಳಾಗಿದ್ದ ಕಾಲ ಅದು. ಅದು ಎಷ್ಟು ಭೀಕರವಾಗಿತ್ತೆಂದರೆ, ಉತ್ತರ ಕರ್ನಾಟಕದಲ್ಲಿ ಸಾವಿರಾರು ದನಕರುಗಳು ಮೇವಿಲ್ಲದೇ ಸತ್ತುಹೋಗಿದ್ದವು. ಅನ್ಯರಾಜ್ಯಗಳಿಂದ ಮೇವನ್ನು ತರಿಸಲಾಗುತ್ತಿತ್ತು, ಮನೆ-ಮಠಗಳನ್ನು ತೊರೆದು ಜೀವನ ನಿರ್ವಹಣೆಗಾಗಿ ಉತ್ತರ ಕರ್ನಾಟಕದ ಊರಿಗೆ ಊರೇ ಗುಳೆ ಹೊರಟು ಬಿಡುತ್ತಿತ್ತು.

ಆ ಸಂದರ್ಭದಲ್ಲಿ ಬಾಗಲ ಕೋಟೆ ಬಿಜಾಪುರದ ಕೆಲವು ಹಳ್ಳಿಗಳಲ್ಲಿ ನಾನು ಓಡಾಡಿದ್ದೇನೆ. ಕುಡಿಯಲು ಒಂದು ಲೋಟ ನೀರು ಕೇಳಿದರೆ, ನಾವೇ ಕಷ್ಟಪಟ್ಟು ಹತ್ತಾರು ಮೈಲು ಆಚೆಯಿಂದ ಒಂದು ಬಿಂದಿಗೆ ನೀರು ತಂದಿಟ್ಟುಕೊಂಡಿದ್ದೇವೆ, ನಿಮಗೆ ನೀರು ಕೊಡಲು ಆಗಲ್ಲ ಎಂದು ಖಡಾಖಂಡಿತವಾಗಿ ಹೇಳಿ ಬಿಡುತ್ತಿದ್ದರು. ಉತ್ತರಕರ್ನಾಟಕದ ಜನರಿಗೆ ಒಂದು ಬಿಂದಿಗೆ ನೀರಿಗೆ ಅಷ್ಟು ಪರದಾಟವಾಗುತ್ತಿತ್ತು ಪಾಪ. ಅದೇ ಸಂದರ್ಭ ದಲ್ಲಿಯೇ ನಜೀರ್ ಸಾಬ್ ಅವರು ಕೊಳವೆ ಬಾವಿಗಳ ಕ್ರಾಂತಿ ಮಾಡಿದ್ದು. ಆ ಪರಿಸ್ಥಿತಿ ಈಗ ಬರಲಿಕ್ಕಿಲ್ಲ ಎನ್ನುವುದು ಹವಾ ಮಾನ ಇಲಾಖೆಯ ಅಭಿಪ್ರಾಯ-ಅಂಬೋಣ.

ಎಷ್ಟು ಜನರಿಗೆ ನೆನಪಿದೆಯೋ ಗೊತ್ತಿಲ್ಲ, ಆ ಬರಗಾಲದ ಸಂದರ್ಭಗಳಲ್ಲಿ ನಡೆಯುತ್ತಿದ್ದ ಒಂದು ವಿಶಿಷ್ಟ ಆಚರಣೆಯ ಬಗ್ಗೆ ಹೇಳಬೇಕು, ಕಾಲಕ್ಕೆ ಸರಿಯಾಗಿ ಮಳೆ ಬರದಿದ್ದಾಗ, ಊರ ಜನರೆಲ್ಲ ಸೇರಿ ಗ್ರಾಮದ ದೇವರಿಗೆ ‘ಪರ್ಜನ್ಯ’ ಮಾಡುತ್ತಿದ್ದರು. ಪರ್ಜನ್ಯ ಮಾಡುವುದು ಎಂದರೆ, ಊರಜನರೆಲ್ಲ ಸೇರಿ ಊರ ಗ್ರಾಮದ ದೇವರಿಗೆ ವಿಶೇಷವಾಗಿ ಶಿವನಿಗೆ ಸತತವಾಗಿ ಅಭಿಷೇಕ ಮಾಡುತ್ತಿದ್ದರು, ನಿತ್ಯದಲ್ಲಿ ಅಭಿಷೇಕ ತಂಬಿಗೆಯಿಂದಾದರೆ, ಪರ್ಜನ್ಯದ ಅಭಿಷೇಕ ಕೊಡಪಾನದಿಂದ (ಬಿಂದಿಗೆ) ಆಗುತ್ತಿತ್ತು, ಹತ್ತಿರದ ಕೆರೆ ಭಾವಿಗಳಿಂದ ಮಾನವ ಸರಪಳಿಯಂತೆ ಊರ ಜನರೆಲ್ಲ ಸಾಲಾಗಿ ನಿಲ್ಲುವುದು, ಕೆರೆ ಬಾವಿಯಿಂದ ನೀರು ಸೇದುವವನೊಬ್ಬ, ಹಾಗೆ ತುಂಬಿದ ಕೊಡ ಒಬ್ಬರ ಕೈಯಿಂದ ಇನ್ನೊಬ್ಬರ ಕೈದಾಟಿ ದೇವರವರೆಗೆ ತಲುಪುತ್ತಿತ್ತು, ಹೀಗೆ ಸಾವಿರಾರು ಬಿಂದಿಗೆ ನೀರಿನ ಅಭಿಷೇಕ ವಾಗುತ್ತಿತ್ತು, ಶಿವನಿಗೆ ಅಭಿಷೇಕ ಮಾಡಿದ ನೀರು ಮತ್ತೆ ಮೂಲ ಕೆರೆ ಬಾವಿಯವರೆಗೆ ಹರಿಯಬೇಕು ಎನ್ನುವುದು ಗುರಿಯಾಗಿರುತ್ತಿತ್ತು, ಹಾಗಾದಾಗ ಮಳೆ ಹಿಡಿ ಯುವುದು ಪಕ್ಕಾ ಎನ್ನುವ ನಂಬಿಕೆ.

ವಿಚಿತ್ರ ಅಂದರೆ, ಪರ್ಜನ್ಯ ಮಾಡಿದ ದಿನ ನಾಲ್ಕು ಹನಿಯಾದರೂ ಮಳೆ ಬರುತ್ತಿತ್ತು. ಹೀಗೆ ಮಳೆ ಬರದಿದ್ದಾಗ ಆಚರಿಸುವ ಬೇರೇ ಬೇರೆ ಪ್ರದೇಶಗಳಲ್ಲಿ ಕ್ರೂಡ್ ಆದ ಅನೇಕ ಪದ್ಧತಿಗಳಿತ್ತು ಎನ್ನು ವುದು ನಮ್ಮ ಜಾನಪದ ಸಾಹಿತ್ಯವನ್ನು ನೋಡಿದರೆ ತಿಳಿದು ಬರುತ್ತೆ, ಕಪ್ಪೆಗೆ ಮದುವೆ ಮಾಡಿಸು ವುದು, ಪ್ರಾಣಿಬಲಿ ಕೊಡುವುದು, ಇನ್ನೂ ಮುಂದೆ ಹೋಗಿ, ಊರಿನ ಯಾವುದಾದರೂ ಮುತ್ತೈದೆ ಯನ್ನು ಬಲಿ ಕೊಡಲಾಗುತ್ತಿತ್ತು ಎನ್ನುವುದು ನಮಗೆ ತಿಳಿದು ಬರುತ್ತವೆ.

‘ಕೆರೆಗೆ ಹಾರ’ ಎನ್ನುವ ಪ್ರಸಿದ್ಧ ಜನಪದ ಸಾಹಿತ್ಯ ಇಂಥದ್ದೇ ಕಥೆಯನ್ನು ಹೇಳುತ್ತೆ. ಆದರೆ, ಋಗ್ವೇದದ ಪರ್ಜನ್ಯ ಸೂಕ್ತದಿಂದ ಅಥವಾ ರುದ್ರಮಂತ್ರಗಳಿಂದ ಶಿವನಿಗೆ ಸತತವಾಗಿ ಅಭಿಷೇಕ ಮಾಡುವ ಕ್ರಮ ಋಷಿಪರಂಪರೆಯಿಂದ ಬಂದ ಅತ್ಯಂತ ಸುಸಂ ಸ್ಕೃತ ಪದ್ಧತಿ ಅಂತ ಹೇಳಬಹುದು. ಕಳೆದ ಮೂವತ್ತು ನಲವತ್ತು ವರ್ಷದಿಂದೀಚೆಗೆ ಪರ್ಜನ್ಯ ಪೂಜೆ ಮಾಡುವ ಅಗತ್ಯ ಬಂದಿರದಿದ್ದ ಕಾರಣಕ್ಕೆ ನಮಗೆ ಈ ಆಚರಣೆ ಮರೆತು ಹೋಗಿದೆ.

ಹಾಗಾದರೆ ಈ ‘ಎಲ್ ನಿನೋ’ ವಿಕೋಪದಿಂದ ತಪ್ಪಿಸಿಕೊಳ್ಳಲು ಏನೂ ಉಪಾಯವಿಲ್ಲವಾ? ಅಂತ ಕೇಳಿದರೆ, ಇಲ್ಲ ಎನ್ನುವುದೇ ಉತ್ತರವಾಗಿದೆ, ಇದು ಪ್ರಕೃತಿಯ ಒಂದು ಸ್ವಾಭಾವಿಕವಾದ ಅಪರಿಹಾರ್ಯ ಪ್ರಕ್ರಿಯೆಯಾಗಿದೆ. ಸರಕಾರ ವನ್ನೂ ಸೇರಿ ಯಾರನ್ನೂ ದೂರುವ ಹಾಗೂ ಇಲ್ಲ, ಅನುಭವಿ ಸಬೇಕಷ್ಟೇ. ಹಾಗಂತ ಇದೇನು ಹೊಸ ಮಾರಿಯಲ್ಲ, ಹಿಂದೆ 2012, 2015-16 ಹಾಗೂ 2023ರಲ್ಲಿ ನಾವು ಈ ಪರಿಸ್ಥಿತಿಯನ್ನು ಎದುರಿಸಿದ್ದೇವೆ, ಆದರೆ ಈ ಬಾರಿ ಅದರ ತೀವ್ರತೆ ಸ್ವಲ್ಪ ಹೆಚ್ಚು ಅಷ್ಟೇ.

ಜೂನ್ ತಿಂಗಳಿನ ಅಂತ್ಯದಿಂದ ಮತ್ತೆ ‘ಮಾಯದಂತಾ ಮಳೇ ಬಂತಣ್ಣಾ’ ಎಂದು ಸಂಭ್ರಮಿಸುವ ಕಾಲ ಬರಲಿದೆ ಎನ್ನುವ ಮುನ್ಸೂಚನೆಯನ್ನೂ ಹವಾಮಾನ ಇಲಾಖೆ ನೀಡುತ್ತಿದೆ. ಹಾಗಾಗಿ ಭಯ ಬೀಳುವ ಪ್ರಮೇಯವಿಲ್ಲ. ‘ಸಸ್ಯಾನಾಂಚ ಸಮೃದ್ಧಯೇ ಜಲಮುಚೋ ಸಿಂಚಂತು ಕಾಲೇ ರಸಾನ್, ಸಪ್ತಾಂಗಃಪ್ರಕೃತಿಪ್ರಕರ್ಷರುಚಿರಂ ರಾಷ್ಟ್ರಂ ಚಿರಂ ವರ್ಧತಾಂ’. ಎಂದು ಆಶಿಸಬಹುದು.