ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Keshava Prasad B Column: ಟ್ರಂಪ್‌ ಹುಚ್ಚಾಟಕ್ಕೆ ಮೋದಿ ಬ್ರೇಕ್, ರಷ್ಯಾ-ಚೀನಾ-ಬ್ರೆಜಿಲ್‌ ಸಾಥ್‌ !

ಭಾರತ ಕೂಡ ಅಮೆರಿಕದಿಂದ ಇಲ್ಲಿಗೆ ಬರುವ ಎಲ್ಲ ಉತ್ಪನ್ನಗಳಿಗೂ ಸಾರಾಸಗಟಾಗಿ ಭಾರಿ ತೆರಿಗೆ ಯನ್ನು ವಿಧಿಸಿಲ್ಲ. ಕಚ್ಚಾ ತೈಲ, ಎಲ್‌ಎನ್‌ಜಿ, ಕಲ್ಲಿದ್ದಲು, ವಜ್ರ ಮತ್ತು ಏರೋಪ್ಲೇನ್ ಸೇರಿದಂತೆ 30 ವಸ್ತುಗಳಿಗೆ ಆಮದು ಸುಂಕವು ಕೇವಲ 7.5 ಪರ್ಸೆಂಟ್‌ಗಿಂತ ಕಡಿಮೆ ಇದೆ ಎಂದು ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯ ಚೇರ್‌ಮನ್ ಆಗಿರುವ ಸಂಜಯ್ ಕುಮಾರ್ ಅಗರ್‌ವಾಲ್ ಹೇಳಿzರೆ. ಸರಾಸರಿ ಕಸ್ಟಮ್ಸ್ ಶುಲ್ಕವನ್ನೂ 11.65 ಪರ್ಸೆಂಟ್‌ನಿಂದ 10.55 ಕ್ಕೆ ಇಳಿಸಿದೆ.

ಮನಿ‌ ಮೈಂಡೆಡ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಸಮರದ ಹುಚ್ಚಾಟಗಳು ಮತ್ತು ದ್ವಂದ್ವ ಧೋರಣೆಗಳ ಪರಿಣಾಮವಾಗಿ ಜಾಗತಿಕ ವಾಣಿಜ್ಯ ಬಿಕ್ಕಟ್ಟನ್ನು ಭಾರತ ಸೇರಿದಂತೆ ವಿಶ್ವ ಸಮುದಾಯ ಎದುರಿಸುತ್ತಿದೆ. ಈ ವಿಪತ್ತಿನ ಸಂದರ್ಭದಲ್ಲಿ ಪ್ರಗತಿಶೀಲ ರಾಷ್ಟ್ರಗಳ ನಾಯಕತ್ವ ವಹಿಸುವ ಸುವರ್ಣಾವಕಾಶ ಭಾರತಕ್ಕೆ ಲಭಿಸಿದೆ.

ಇದೆಲ್ಲ ಹೇಗಾಯಿತು ಎಂಬುದನ್ನು ನೋಡೋಣ. ಅಧ್ಯಕ್ಷೀಯ ಚುನಾವಣೆಯ ಸಂದರ್ಭ ಟ್ರಂಪ್ ಅವರು, ಹರ್ಲೆ ಡೇವಿಡ್‌ಸನ್ ಸೂಪರ್ ಬೈಕ್, ಐಷಾರಾಮಿ ಕಾರುಗಳಿಗೆ, ದುಬಾರಿ ಮದ್ಯಗಳಿಗೆ ಭಾರತವು 100 ಪರ್ಸೆಂಟಿಗಿಂತ ಹೆಚ್ಚು ಟ್ಯಾಕ್ಸ್ ಹಾಕುತ್ತಿದೆ ಎಂದು ಆಕ್ಷೇಪಿಸುತ್ತಿದ್ದರು. ಬಳಿಕ ಭಾರತವನ್ನು ‘ಟಾರಿಫ್ ಕಿಂಗ್’ ಎಂದು ಟೀಕಿಸಿದರು. ‘ಡೆಡ್ ಇಕಾನಮಿ’ ಎಂದು ನಿಂದಿಸಿದರು. ‌

ಅಂತಿಮವಾಗಿ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿರುವುದನ್ನೇ ನೆಪವಾಗಿಟ್ಟು ಕೊಂಡು, ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ವಸ್ತುಗಳ ಮೇಲಿನ ಟಾರಿಫ್ ಅನ್ನು ಶೇಕಡಾ 25ರಿಂದ 50ಕ್ಕೆ ಏರಿಸಿದರು! ಇದರೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ನಡೆದ ಮಾತುಕತೆಗಳೂ ನನೆಗುದಿಗೆ ಬಿದ್ದಿತು. ಆಗ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟ ದಿಟ್ಟ ಪ್ರತ್ಯುತ್ತರ ಚಾರಿತ್ರಿಕ. ‘ವ್ಯಕ್ತಿಗತವಾಗಿ ನನಗೆ ನಷ್ಟವಾದರೂ ಚಿಂತೆಯಿಲ್ಲ, ರೈತರು, ಸಣ್ಣ ವ್ಯಾಪಾರಿಗಳು ಮತ್ತು ಜನತೆಯ ಹಿತಾಸಕ್ತಿಗೆ ವಿರುದ್ಧವಾದ ನಿರ್ಧಾರವನ್ನು ಕೈಗೊಳ್ಳಲಾಗದು’ ಎಂದರು.

ಭಾರತವನ್ನು ‘ಟಾರಿಫ್ ಕಿಂಗ್’ ಎಂದು ಲೇವಡಿ ಮಾಡುವ ಟ್ರಂಪ್‌ಗೆ ತನ್ನ ದೇಶದ ತೆರಿಗೆ ನೀತಿಯೇ ಮರೆತು ಹೋಗಿದೆಯೇ? ನಿಜವಾದ ಟಾರಿಫ್ ಕಿಂಗ್ ಸ್ವತಃ ಅಮೆರಿಕವೇ ಆಗಿದೆ. ಉದಾಹರಣೆಗೆ ಅಮೆರಿಕವೇ ನಿರ್ದಿಷ್ಟ ಹಾಲು, ತಂಬಾಕು, ಹಣ್ಣು ಹಂಪಲುಗಳ ಆಮದಿಗೆ 350% ತೆರಿಗೆ ವಿಧಿಸು ತ್ತದೆ. ತನ್ನ ಕೆಲವು ಕ್ಷೇತ್ರಗಳ ರಕ್ಷಣೆಗೆ ಅಮೆರಿಕವೂ ದೊಡ್ಡ ಮೊತ್ತದ ಆಮದು ತೆರಿಗೆಯನ್ನು ಹಾಕುತ್ತದೆ.

ಇದನ್ನೂ ಓದಿ: Keshava Prasad B Column: ಕಸ ಗುಡಿಸುವವರಿಗೂ ಕಂಪನಿಯ ಷೇರು ಕೊಟ್ಟ ಆನಂದ್ ಮಹೀಂದ್ರಾ!

ಆದರೆ ಭಾರತ ತನ್ನ ಕೃಷಿಕರು, ಸಣ್ಣ ಉದ್ದಿಮೆಗಳ ರಕ್ಷಣೆಗೆ ಹಾಕಿದರೆ ಟಾರಿಫ್ ಕಿಂಗ್ ಹೇಗಾಗುತ್ತದೆ? ಅಮೆರಿಕದಲ್ಲಿ ದನಗಳಿಗೆ ಹಾಲಿನ ಉತ್ಪಾದನೆ ಹೆಚ್ಚಾಗಲು ಮಾಂಸ, ಮಾಂಸಭರಿತ ಆಹಾರಗಳನ್ನು ಕೊಡುತ್ತಾರೆ. ಅದು ಅಲ್ಲಿ ಸಾಮಾನ್ಯ. ಅಂಥ ದನಗಳ ಹಾಲನ್ನು ಭಾರತದಲ್ಲಿ ದಂಡಿಯಾಗಿ ಮಾರಾಟ ಮಾಡಲು ಬಯಸುತ್ತದೆ. ಇದನ್ನು ಒಪ್ಪಲು ಸಾಧ್ಯವೇ? ಭಾರತದಲ್ಲಿ ಇದು ಧಾರ್ಮಿಕ ನಂಬಿಕೆಯ, ಸಂಸ್ಕೃತಿಯ ಪ್ರಶ್ನೆಯೂ ಹೌದು. ‌ಮಾತ್ರವಲ್ಲದೆ ಭಾರತ ಇವತ್ತು ಜಗತ್ತಿನಲ್ಲಿಯೇ ಅತಿ ಹೆಚ್ಚು ಹಾಲು ಉತ್ಪಾದಕ ರಾಷ್ಟ್ರ. ಇಲ್ಲಿ ಕ್ಷೀರ ಕ್ರಾಂತಿಯೇ ಸಂಭವಿಸಿದೆ. ಜಗತ್ತಿನ 25 ಪರ್ಸೆಂಟ್ ಹಾಲು ಇಲ್ಲಿ ಉತ್ಪಾದನೆಯಾಗುತ್ತಿದೆ. ಲಕ್ಷಾಂತರ ಮಂದಿಗೆ ಪಶು ಸಂಗೋಪನೆಯೇ ಜೀವನಾಧಾರ. ಹೀಗಿರುವಾಗ ಅಮೆರಿಕದ ಇಂಥ ಹಾಲು ಯಾವ ಭಾರತೀಯರಿಗೆ ಬೇಕು? ನಮ್ಮ ಮದ್ಯದ ಉತ್ಪನ್ನಗಳಿಗೆ, ಸೂಪರ್ ಬೈಕ್‌ಗಳಿಗೆ, ಲಕ್ಸುರಿ ಕಾರುಗಳಿಗೆ ಭಾರತ 100 ಪರ್ಸೆಂಟ್ ಟ್ಯಾಕ್ಸ್ ಹಾಕುತ್ತಿದೆ ಎಂಬುದು ಟ್ರಂಪ್ ತಕರಾರು.

ಅಲ್ಲಿನ ದುಬಾರಿ ಮದ್ಯ, ಕಾರು-ಬೈಕ್‌ಗಳನ್ನು ಸಾಮಾನ್ಯ ಭಾರತೀಯ ಖರೀದಿಸಲ್ಲ. ಉಳ್ಳವರು ಬೇಕಾದರೆ ಟ್ಯಾಕ್ಸ್ ಕಟ್ಟಿ ಅವುಗಳನ್ನು ಖರೀದಿಸಲಿ. ಸರಕಾರದ ಬೊಕ್ಕಸಕ್ಕೆ ತೆರಿಗೆ ಮೂಲವಾಗು ತ್ತದೆ. ತಪ್ಪೇನು?

62 R

ಭಾರತ ಕೂಡ ಅಮೆರಿಕದಿಂದ ಇಲ್ಲಿಗೆ ಬರುವ ಎಲ್ಲ ಉತ್ಪನ್ನಗಳಿಗೂ ಸಾರಾಸಗಟಾಗಿ ಭಾರಿ ತೆರಿಗೆ ಯನ್ನು ವಿಧಿಸಿಲ್ಲ. ಕಚ್ಚಾ ತೈಲ, ಎಲ್‌ಎನ್‌ಜಿ, ಕಲ್ಲಿದ್ದಲು, ವಜ್ರ ಮತ್ತು ಏರೋಪ್ಲೇನ್ ಸೇರಿದಂತೆ 30 ವಸ್ತುಗಳಿಗೆ ಆಮದು ಸುಂಕವು ಕೇವಲ 7.5 ಪರ್ಸೆಂಟ್‌ಗಿಂತ ಕಡಿಮೆ ಇದೆ ಎಂದು ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯ ಚೇರ್‌ಮನ್ ಆಗಿರುವ ಸಂಜಯ್ ಕುಮಾರ್ ಅಗರ್‌ವಾಲ್ ಹೇಳಿzರೆ. ಸರಾಸರಿ ಕಸ್ಟಮ್ಸ್ ಶುಲ್ಕವನ್ನೂ 11.65 ಪರ್ಸೆಂಟ್‌ನಿಂದ 10.55 ಕ್ಕೆ ಇಳಿಸಿದೆ.

ಭಾರತವು ರಷ್ಯಾದಿಂದ ಅಗ್ಗದ ಕಚ್ಚಾ ತೈಲವನ್ನು ತರಿಸಿಕೊಂಡು, ಡೀಸೆಲ್, ಪೆಟ್ರೋಲ್, ಅನಿಲ ವಾಗಿ ಸಂಸ್ಕರಿಸಿ ಭಾರಿ ಲಾಭಕ್ಕೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತದೆ. ಇದರಿಂದಾಗಿ ರಷ್ಯಾಕ್ಕೆ ಉಕ್ರೇನ್ ವಿರುದ್ಧ ಯುದ್ಧ ಮಾಡಲು ಬೇಕಾದ ಆರ್ಥಿಕ ಸಂಪನ್ಮೂಲ ಸಿಗುತ್ತದೆ ಎಂದು ದೂರು ತ್ತಾರೆ ಟ್ರಂಪ್.

ಆದರೆ ಸ್ವತಃ ಅಮೆರಿಕವೇ ರಷ್ಯಾದಿಂದ ರಸಗೊಬ್ಬರ, ರಾಸಾಯನಿಕ ಮತ್ತು ಯುರೇನಿಯಂ, ಪಡಿಯಂ ಅನ್ನು ಆಮದು ಮಾಡಿಕೊಳ್ಳುತ್ತಿದೆ! ಅಮೆರಿಕವು ಯಾರಿಂದ ಬೇಕಾದರೂ ಏನ್ನಾದರೂ ತರಿಸಿಕೊಳ್ಳಬಹುದು, ಆದರೆ ಭಾರತಕ್ಕೆ ಸಲ್ಲದು ಎಂಬುದು ಯಾವ ಸೀಮೆ ನ್ಯಾಯ? ಟ್ರಂಪ್ ಮುಖ ವಾಡವನ್ನು, ದ್ವಂದ್ವಗಳನ್ನು ಭಾರತ ಈ ಸಲ ಲೀಲಾಜಾಲವಾಗಿ ಕಿತ್ತು ಹಾಕಿದೆ.

ಆಗಸ್ಟ್ 27ರಿಂದ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ವಸ್ತುಗಳ ಮೇಲೆ 50 ಪರ್ಸೆಂಟ್ ಸುಂಕ ವನ್ನು ಟ್ರಂಪ್ ವಸೂಲು ಮಾಡಲಿದ್ದಾರೆ. ಅಮೆರಿಕಕ್ಕೆ ಭಾರತದಿಂದ ರಫ್ತಾಗುವ ಸರಕುಗಳಲ್ಲಿ 55 ಪರ್ಸೆಂಟ್ ವಸ್ತುಗಳ ಮೇಲೆ ಟ್ರಂಪ್ ಸುಂಕ ಪರಿಣಾಮ ಬೀರಲಿದೆ. ಇತ್ತೀಚಿನ ಹೆಚ್ಚುವರಿ 25 ಪರ್ಸೆಂಟ್ ಸುಂಕ ಔಷಧಿಗಳು ಮತ್ತು ಎಲೆಕ್ಟ್ರಾನಿಕ್ಸ್ ರಫ್ತಿಗೆ ಅನ್ವಯವಾಗುವುದಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ.

ಭಾರತವು ವರ್ಷಕ್ಕೆ 6.74 ಲಕ್ಷ ಕೋಟಿ ರುಪಾಯಿ ಮೌಲ್ಯದ ರಫ್ತನ್ನು ಅಮೆರಿಕಕ್ಕೆ ಮಾಡುತ್ತದೆ. ಅದರಲ್ಲಿ 55 ಪರ್ಸೆಂಟ್ ಎಂದರೆ ಸುಮಾರು 3.70 ಲಕ್ಷ ಕೋಟಿ ರುಪಾಯಿ ಮೌಲ್ಯದ ರಫ್ತಿಗೆ ಹೊಡೆತ ಬೀಳಲಿದೆ. ಐಟಿ ಮೊದಲಾದ ಸೇವೆಗಳ ರಫ್ತಿಗೆ ಇದು ಅನ್ವಯಿಸುವುದಿಲ್ಲ. ಇದು ಕಡೆಗಣಿಸ ಬಹುದಾಗಿದ್ದ ಸಣ್ಣ ವಿಷಯವೂ ಅಲ್ಲ.

ಗುಜರಾತಿನ ಸೂರತ್‌ನಲ್ಲಿರುವ ವಜ್ರೋದ್ಯಮಕ್ಕೆ ಹೊಡೆತ ಬಿದ್ದಿದೆ. ತಮಿಳುನಾಡಿನ ತಿರುಪ್ಪೂರ್‌ ನಲ್ಲಿನ ಗಾರ್ಮೆಂಟ್ ಇಂಡಸ್ಟ್ರಿಗೆ ಕೂಡ ಆತಂಕ ಎದುರಾಗಿದೆ. ಮತ್ತೊಂದು ಕಡೆ ಪಾಕಿಸ್ತಾನ, ಬಾಂಗ್ಲಾದೇಶಕ್ಕೆ ಅನುಕೂಲವಾಗಲಿದೆ. ಪಾಕಿಸ್ತಾನಕ್ಕೆ ಟ್ರಂಪ್ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಇದು ಚೀನಾದ ಚಿಂತೆಗೂ ಕಾರಣವಾಗಿದೆ.

ಹಾಗಾದರೆ ಟ್ರಂಪ್‌ಗೆ ಏನಾಗಿದೆ? ಡಾಲರ್ ಪ್ರಾಬಲ್ಯದ ಅನುಕೂಲಗಳು, ಅಧಿಕಾರದ ಅಮಲು ಅವರ ಬೆನ್ನಿಗಿದೆ. ಹೀಗಾಗಿ ಎರಡನೇ ಸ್ಥಾನದಲ್ಲಿರುವ ಚೀನಾವನ್ನು ಬೆದರಿಸಲು ಪಾಕಿಸ್ತಾನಕ್ಕೆ ಹತ್ತಿರವಾಗುತ್ತಿzರೆಯೇ? ಅಥವಾ ತಮ್ಮ ವೈಯಕ್ತಿಕ ಬಿಸಿನೆಸ್ ಹಿತಾಸಕ್ತಿಯೇ ಟ್ರಂಪ್‌ಗೆ ಮುಖ್ಯ ವಾಗಿದೆಯೇ ?. ಇಂಥ ಪ್ರಶ್ನೆಗಳಿಗೆ ಹೌದು ಎಂಬಂತೆ ಟ್ರಂಪ್ ನಡವಳಿಕೆಗಳು ಪುಷ್ಟೀ ಕರಿಸುತ್ತಿವೆ.

ಇವೆಲ್ಲದಕ್ಕಿಂತ ಮುಖ್ಯವಾಗಿ ಬ್ರಿಕ್ಸ್ ರಾಷ್ಟ್ರಗಳು ದೊಡ್ಡಣ್ಣ ಅಮೆರಿಕದ ಸೊಕ್ಕು ಮುರಿಯಲು ಟೊಂಕ ಕಟ್ಟಿವೆ. ಭಾರತದ ಪ್ರಬಲ ನಾಯಕತ್ವಕ್ಕೆ ಸಾಥ್ ಕೊಡುತ್ತಿವೆ. ಇತ್ತೀಚೆಗೆ ಟ್ರಂಪ್, ‘ನನ್ನೊಡನೆ ಯಾವಾಗ ಬೇಕಾದರೂ ನೇರವಾಗಿ ಮಾತನಾಡಬಹುದು’ ಎಂದು ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾಗೆ ಆಫರ್ ಕೊಟ್ಟಿದ್ದರು.

ಆದರೆ ಬ್ರೆಜಿಲ್ ಅಧ್ಯಕ್ಷರು, ‘ನಾನು ಟ್ರಂಪ್ ಬದಲಿಗೆ ನರೇಂದ್ರ ಮೋದಿಯವರೊಡನೆ ಮಾತನಾ ಡುವೆ’ ಎಂದು ತಿರುಗೇಟು ಕೊಟ್ಟಿದ್ದರು. ಕೋವಿಡ್ ಬಿಕ್ಕಟ್ಟಿನ ಸಂದರ್ಭ ಭಾರತವು ನಾನಾ ದೇಶಗಳಿಗೆ ಲಸಿಕೆಯನ್ನು ಉಚಿತವಾಗಿ ವಿತರಿಸಿ ಔದಾರ್ಯವನ್ನು ಮೆರೆದಿತ್ತು. ಈಗ ಟ್ರಂಪ್ ಸೃಷ್ಟಿಸಿರುವ ವ್ಯಾಪಾರ-ವಿದೇಶಾಂಗ-ಆರ್ಥಿಕ-ರಾಜತಾಂತ್ರಿಕ ಬಿಕ್ಕಟ್ಟಿನ ಸಂದರ್ಭ ಭಾರತಕ್ಕೆ ಮತ್ತೊಮ್ಮೆ ನಾಯಕತ್ವ ವಹಿಸಲು ಸಂದರ್ಭ ಸನ್ನಿಹಿತವಾಗಿದೆ. ಇದನ್ನು ಚೆನ್ನಾಗಿ ಅರಿತುಕೊಂಡಿ ರುವ ಪ್ರಧಾನಿ ನರೇಂದ್ರ ಮೋದಿಯವರು ಟ್ರಂಪ್‌ಗೆ ಡೋಂಟ್ ಕೇರ್ ಎನ್ನದೆ ಸವಾಲನ್ನು ಸ್ವೀಕರಿಸಿದ್ದಾಗಿದೆ. ಹಾಗಂತ ಸದ್ಯದ ಸವಾಲುಗಳೇನೂ ಸಣ್ಣದಲ್ಲ. ಆದ್ದರಿಂದಲೇ ಭಾರತದ ವಿದೇಶಾಂಗ ವ್ಯಾಪಾರದ ತಂತ್ರಗಾರಿಕೆಯಲ್ಲಿ ಗಮನಾರ್ಹ ಬದಲಾವಣೆ ಸಂಭವಿಸುತ್ತಿದೆ. ಇದರ ಪರಿಣಾಮವಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು ಏಳು ವರ್ಷಗಳ ಬಳಿಕ ಮೊದಲ ಬಾರಿಗೆ ಚೀನಾಕ್ಕೆ ಭೇಟಿ ನೀಡುತ್ತಿದ್ದಾರೆ!

ಹಾಗಂತ ಬಹಿರಂಗವಾಗಿ ಮೋದಿ ಶಾಂತ ಸಾಗರವಾಗಿದ್ದಾರೆ. ಟ್ರಂಪ್ ಪಾಕಿಸ್ತಾನವನ್ನು ಹಾಡಿ ಹೊಗಳಿದರೂ, ಮೋದಿಯವರು ತಾಳ್ಮೆ ಕಳೆದುಕೊಂಡಿ ಲ್ಲ. ಆದರೆ ಟ್ರಂಪ್ ಸೊಕ್ಕಿಗೆ ಮೋದಿ ಬೆದರಿಲ್ಲ. ಭಾರತದ ರಾಷ್ಟ್ರೀಯ ಹಿತಕ್ಕಾಗಿ ರಷ್ಯಾದಿಂದ ಕಚ್ಚಾ ತೈಲ ಆಮದು ನಿಂತಿಲ್ಲ. ಚೀನಾದ ಕಟಪತನಗಳ ಅರಿವೇನೂ ಇಲ್ಲದವರಲ್ಲ. ಆದರೆ ವ್ಯಾಪಾರದಲ್ಲೂ ಶತ್ರುವಿನ ಶತ್ರು ಮಿತ್ರನಾಗು ವುದು ಸಾಮಾನ್ಯ. ಆದ್ದರಿಂದಲೇ ಅಮೆರಿಕದ ಜತೆಗೆ ಸುಂಕ ಕುರಿತ ಮಾತುಕತೆ ಮುಂದು ವರಿಯಲಿದೆ. ರಷ್ಯಾ-ಉಕ್ರೇನ್ ಕದನ ವಿರಾಮಕ್ಕೆ ಟ್ರಂಪ್ ಮಧ್ಯಸ್ಥಿಕೆ ವಹಿಸಿದರೆ ತಕ್ಷಣ ಅದನ್ನು ಸ್ವಾಗತಿಸಲು ಭಾರತ ಮರೆಯುವುದಿಲ್ಲ. ಆದರೆ ಟ್ರಂಪ್ ಹೇಳಿದ್ದಕ್ಕೆಲ್ಲ ಸಲಾಂ ಹೊಡೆಯುವುದಿಲ್ಲ!

ಮೋದಿಯವರು ಆಗಸ್ಟ್ 31-ಸೆಪ್ಟೆಂಬರ್ 1ರಂದು ನಡೆಯಲಿರುವ ಶಾಂಘೈ ಕೋಪರೇಷನ್ ಶೃಂಗ ದಲ್ಲಿ ಭಾಗವಹಿಸಲಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಶೃಂಗವನ್ನು ಆಯೋಜಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೂಡ ಬರಲಿದ್ದಾರೆ. ಈ ಹಿಂದೆ 2018ರಲ್ಲಿ ಇದೇ ಶೃಂಗಕ್ಕೆ ಮೋದಿ ಹೋಗಿದ್ದರು. ಆದರೆ ಈ ಸಲದ ಸಂದರ್ಭ ವಿಶೇಷವಾಗಿದೆ. ಟ್ರಂಪ್ ಅತಿರೇಕದ ವರ್ತನೆಯಿಂದಾಗಿ ಅಮೆರಿಕ-ಭಾರತ ನಡುವಣ ವ್ಯಾವಹಾರಿಕ ಸಂಬಂಧ ಹದಗೆಟ್ಟಿರುವ ಸಂದರ್ಭವಿದು.

2019ರಲ್ಲಿ ಕ್ಸಿ ಜಿನ್ ಪಿಂಗ್ ಭಾರತಕ್ಕೆ ಭೇಟಿ ಕೊಟ್ಟಿದ್ದರು. ಅದಾದ ಬಳಿಕ ಮೋದಿಯವರ ಜತೆಗೆ ಎರಡನೇ ಔಪಚಾರಿಕ ಭೇಟಿ ಇದಾಗಲಿದೆ. 2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಭೀಕರ ಸಂಘರ್ಷದ ಬಳಿಕ ಭಾರತವು ಚೀನಾದ ಜತೆಗೆ ವ್ಯಾಪಾರ ಸಂಬಂಧಗಳಿಗೆ ಕಡಿವಾಣಗಳನ್ನು ಹಾಕಿತ್ತು. ಈಗ ಟ್ರಂಪ್ ಸುಂಕ ಸಮರ ಸಾರಿದ ಬಳಿಕ ಭಾರತ-ಚೀನಾ ನಡುವಣ ವಾಣಿಜ್ಯ ಸಂಬಂಧಗಳು ಸುಧಾರಿಸಲು ಹಾದಿ ಸುಗಮವಾಗಲಿದೆ. ಅದರ ಲಕ್ಷಣಗಳು ಈಗಾಗಲೇ ಕಾಣಿಸುತ್ತಿದೆ.

ಉದಾಹರಣೆಗೆ ಭಾರತಕ್ಕೆ ಯೂರಿಯಾ ರಫ್ತಿಗೆ ವಿಧಿಸಿದ್ದ ನಿರ್ಬಂಧವನ್ನು ಚೀನಾ ತೆರವುಗೊಳಿಸಿದೆ. ಇದರಿಂದ ಭಾರತದ ರೈತರಿಗೆ ಅವಶ್ಯಕವಾದ ಯೂರಿಯಾ ಪೂರೈಕೆ ಸರಾಗವಾಗಲಿದೆ. ಸೆಪ್ಟೆಂಬರ್‌ ನಲ್ಲಿ ಉಭಯ ದೇಶಗಳ ನಡುವೆ ನೇರ ವಿಮಾನ ಹಾರಾಟ ಆರಂಭವಾಗಲಿದೆ ಎಂಬ ವರದಿಗಳಿವೆ. ರೇರ್ ಅರ್ತ್ ಪೂರೈಕೆಯೂ ಮತ್ತೆ ಶುರುವಾಗುವ ಸಾಧ್ಯತೆ ಇದೆ.

ಚೀನಾದ ವಿದೇಶಾಂಗ ಸಚಿವ ವಾಂಗ್ ಇ ಅವರು ಆಗಸ್ಟ್ 18ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಭಾರತ, ಬ್ರೆಜಿಲ್, ರಷ್ಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡಿರುವ ಬ್ರಿಕ್ಸ್ ಒಕ್ಕೂಟವು ಟ್ರಂಪ್ ಸುಂಕ ಸಮರವನ್ನು ಎದುರಿಸುವ ನಿಟ್ಟಿನಲ್ಲಿ ತಮ್ಮೆಲ್ಲ ಭಿನ್ನಮತಗಳನ್ನು ಬದಿಗೊತ್ತಿ ಸಂಘಟಿತವಾಗುತ್ತಿವೆ.

ಇದು ನಿಸ್ಸಂದೇಹವಾಗಿ ಟ್ರಂಪ್‌ಗೆ ತಲೆನೋವಾಗಿ ಪರಿಣಮಿಸಿದೆ. ಸದ್ಯಕ್ಕೆ ಡಾಲರ್‌ಗೆ ಸರಿಸಾಟಿ ಯಾಗಬಲ್ಲ ಕರೆನ್ಸಿ ಇಲ್ಲದಿರಬಹುದು. ಆದರೆ ಬ್ರಿಕ್ಸ್ ರಾಷ್ಟ್ರಗಳು ಮನಸ್ಸು ಮಾಡಿದರೆ, ಡಾಲರ್ ಪ್ರಾಬಲ್ಯಕ್ಕೆ ಭವಿಷ್ಯದಲ್ಲಿ ಅಪಾಯ ಎದುರಾದರೆ ಅಚ್ಚರಿಯಿಲ್ಲ. ಆಗ ಅಮೆರಿಕದ ನಿರ್ಬಂಧಗಳು ದುರ್ಬಲವಾಗಬಹುದು.

ಏಕೆಂದರೆ ಬ್ರಿಕ್ಸ್ ರಾಷ್ಟ್ರಗಳು ಜಗತ್ತಿನ ಜನಸಂಖ್ಯೆ ಮತ್ತು ಜಿಡಿಪಿಯಲ್ಲಿ ಗಣನೀಯವಾದ ಪಾಲನ್ನು ಹೊಂದಿವೆ. ಇತ್ತೀಚೆಗೆ ಬ್ರಿಕ್ಸ್ ಗ್ರೂಪಿಗೆ ಈಜಿಪ್ತ್, ಇಥಿಯೋಪಿಯಾ, ಇರಾನ್, ಯುಎಇ ಸೇರಿದೆ. ಇಂಡೊನೇಷ್ಯಾ ಕೂಡ ಪೂರ್ಣ ಪ್ರಮಾಣದ ಸದಸ್ಯತ್ವ ಪಡೆದಿದೆ. ಈ ಎಲ್ಲ ಕಾರಣಕ್ಕಾಗಿ ಟ್ರಂಪ್ ಅವರಿಗೆ ಬ್ರಿಕ್ಸ್ ಎಂದರೆ ನಡುಕ ಶುರುವಾಗಿರುವುದು ವಾಸ್ತವ.

ಕೇಶವ ಪ್ರಸಾದ್​ ಬಿ

View all posts by this author