Hari Paraak Column: ಮೋದಿ: ಇನ್ಮೇಲೆ ʼಡೊಲಾಂಡ್ʼ ಟ್ರಂಪ್ ಅಂತ ಯಾರನ್ನ ಕರೀಲಿ ?
ನಿರ್ದೇಶಕ ರವಿ ಶ್ರೀವತ್ಸ ಮೊನ್ನೆ ಪ್ರೆಸ್‌ಮೀಟ್ ಕರೆದು ತಮ್ಮ ‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರಕ್ಕೆ ಸೆನ್ಸಾರ್ ನವರು ಅಡ್ಡಗಾಲು ಹಾಕಿದ್ದಾರೆ. ಸಿನಿಮಾವನ್ನ ಸಾರಾಸಗಟಾಗಿ ನಿರಾಕರಿಸಿದ್ದಾರೆ ಅಂತ ಹೇಳಿಕೊಂಡು ‘ನನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯ ಇದು’ ಅಂತ ಗೋಳೋ ಅಂತ ಅತ್ತಿದ್ದರು. ಅದಕ್ಕೆ ಅವರಿಗೆ ಉಪೇಂದ್ರ ಅವರಂಥ ದೊಡ್ಡ ಹೆಸರುಗಳೂ ಸಪೋರ್ಟ್ ಮಾಡಿದ್ದವು.

-

ತುಂಟರಗಾಳಿ
ಸಿನಿಗನ್ನಡ
ನಿರ್ದೇಶಕ ರವಿ ಶ್ರೀವತ್ಸ ಮೊನ್ನೆ ಪ್ರೆಸ್‌ಮೀಟ್ ಕರೆದು ತಮ್ಮ ‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರಕ್ಕೆ ಸೆನ್ಸಾರ್ ನವರು ಅಡ್ಡಗಾಲು ಹಾಕಿದ್ದಾರೆ. ಸಿನಿಮಾವನ್ನ ಸಾರಾಸಗಟಾಗಿ ನಿರಾಕರಿಸಿದ್ದಾರೆ ಅಂತ ಹೇಳಿಕೊಂಡು ‘ನನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯ ಇದು’ ಅಂತ ಗೋಳೋ ಅಂತ ಅತ್ತಿದ್ದರು. ಅದಕ್ಕೆ ಅವರಿಗೆ ಉಪೇಂದ್ರ ಅವರಂಥ ದೊಡ್ಡ ಹೆಸರುಗಳೂ ಸಪೋರ್ಟ್ ಮಾಡಿದ್ದವು. ಅದೇ ರವಿ ಶ್ರೀವತ್ಸ ಈಗ ತಮ್ಮ ಚಿತ್ರದ ಟ್ರೈಲರ್ ಅನ್ನು ಯುಟ್ಯೂಬ್‌ನಲ್ಲಿ ಬಿಟ್ಟಿದ್ದಾರೆ.
ಅದನ್ನು ನೋಡಿದವರಿಗೆ ಒಂದು ಕ್ಷಣ ಬದುಕಿನ ಮೇಲೆ ಅಸಹ್ಯ ಬಂದರೂ ತಪ್ಪಿಲ್ಲ. ‘ನಾನು ಹೆಣ್ಣಿನ ಅಂಗಾಂಗಗಳನ್ನು ತೋರಿಸಿಲ್ಲ ಸರ್’ ಅಂತ ಸಿಂಪತಿ ಗಿಟ್ಟಿಸುವ ಮಾತಾಡಿದ್ದ ರವಿ ಶ್ರೀವತ್ಸ ಅವರು, ಈ ಟ್ರೈಲರ್‌ನಲ್ಲಿ ಗಂಡಸರ ಅಂಗಾಂಗಗಳನ್ನು ಗಂಡಸರೇ ಕಿತ್ತು ತಿನ್ನುವ ದೃಶ್ಯಗಳನ್ನು ಇಟ್ಟಿದ್ದಾರೆ. ಬಾಡಿಯೊಳಗೆ ಕೈ ಹಾಕಿ ಗುಂಡಿಗೆ ಸಮೇತ ಎಲ್ಲ ಸ್ಪೇರ್ ಪಾರ್ಟ್‌ಗಳನ್ನು ಕಿತ್ತು, ‘ನೋಡೋರಿಗೆ ಏಳು ಗುಂಡಿಗೆ ಬೇಕು’ ಅಂತಾವೆ ಇಲ್ಲಿನ ಪಾತ್ರಗಳು.
ಕುತ್ತಿಗೆಗೆ ಬಾಯಿ ಹಾಕಿ ಮಾಂಸ ಕೀಳುತ್ತವೆ. ಕಿವಿಯಲ್ಲಿ ಕಬ್ಬಿಣದ ಕಂಬಿ ನೆಡುತ್ತವೆ. ಹೇಳುತ್ತಾ ಹೋದರೆ ಈ ಪಾಟಿ ಅಸಹ್ಯ ಟ್ರೈಲರ್ ಅನ್ನು ನೋಡಿದ ಮೇಲೆ ಸೆನ್ಸಾರ್‌ನವರು ರಿಜೆಕ್ಟ್ ಮಾಡದೇ ಇನ್ನೇನು ಮಾಡಲು ಸಾಧ್ಯ ಅನಿಸೋದು ಸಹಜ. ಯುಟ್ಯೂಬ್‌ನಲ್ಲಿ ಸೆನ್ಸಾರ್ ಇಲ್ಲ ಅಂತ ಇದನ್ನೆಲ್ಲ ತೋರಿಸಿರೋ ಅವರು ಸಿನಿಮಾದಲ್ಲಿ ಸೆನ್ಸಾರ್‌ನವರಿಗೆ ಇನ್ನೇನೆ ತೋರಿಸಿ ಹೆದರಿಸಿರ ಬಹುದು ಅಂತ ಅನುಮಾನ ಬರುತ್ತದೆ.
ಇದನ್ನೂ ಓದಿ: Hari Paraak Column: ಕೋಪ ಹುಟ್ಟಿಸುವ ಅಂಗ: ಪಿತ್ತ- ಜನಕಾಂಗ
ನೈಜ ಘಟನೆ, ಕ್ರೌರ್ಯದ ಹೆಸರಿನಲ್ಲಿ ಅಸಹ್ಯವನ್ನು ತೋರಿಸಿದ್ದಾರೆ ನಿರ್ದೇಶಕರು ಅಂತ ಟ್ರೈಲರ್ ನೋಡಿದವರಿಗೆ ಅನಿಸುತ್ತದೆ. ಆ ಲೆಕ್ಕದಲ್ಲಿ ಇದು ಹೃದಯವಿದ್ರಾವಕ ಸಿನಿಮಾ. ಇದನ್ನು ನೋಡಿದ ಮೇಲೆ ಕೇವಲ ಸೆನ್ಸಾರ್‌ನವರಷ್ಟೇ ಅಲ್ಲ, ಜನಸಾಮಾನ್ಯರೂ ಇಂಥ ಸಿನಿಮಾಗಳು ನಾಗರಿಕ ಸಮಾಜದಲ್ಲಿ ಬರದೇ ಇರೋದೇ ಕ್ಷೇಮ ಅಂತ ಹೇಳಿದರೆ ತಪ್ಪೇನಿಲ್ಲ.
ಲೂಸ್ ಟಾಕ್ -ಡೊನಾಲ್ಡ್ ಟ್ರಂಪ್
ಏನ್ ಸರ್, ಮೊನ್ನೆ ನೀವು ಸತ್ತೇಹೋದ್ರಿ ಅಂತ ಸುದ್ದಿ ಆಗಿತ್ತಲ್ಲ?
- ಹೌದು, ನನಗಾಗದವರು ಅದನ್ನ ನಂಬಿ, ಇವನಿಗೆ ನೊಬೆಲ್ ಶಾಂತಿ ಪ್ರಶಸ್ತಿ ಅಂತೂ ಸಿಗಲಿಲ್ಲ, ಇವನ ಆತ್ಮಕ್ಕಾದರೂ ಶಾಂತಿ ಸಿಗಲಿ ಅಂತ ಶ್ರದ್ಧಾಂಜಲಿ ಕೂಡಾ ಕೋರಿ ಬಿಟ್ರು.
ಈ ಸುದ್ದಿಗೆ ನಿಮ್ಮ ಸ್ನೇಹಿತ ಮೋದಿ ಅವರ ರಿಯಾಕ್ಷನ್ ಏನಿತ್ತು?
- ಇನ್ನೇನಿರುತ್ತೆ, ‘ಅಯ್ಯೋ, ಇನ್ಮೇಲೆ ಡೊಲಾಂಡ್ ಟ್ರಂಪ್ ಅಂತ ಯಾರನ್ನ ಕರೀಲಿ’ ಅಂತ ಗೋಳಾಡಿದ್ರಂತೆ.
ಅಂದ ಹಾಗೆ, ಫೇಸ್‌ಬುಕ್‌ನ ಜುಕರ್‌ಬರ್ಗ್ ಅವರನ್ನ ರಾಜಕೀಯಕ್ಕೆ ಬನ್ನಿ ಅಂತ ಆಹ್ವಾನ ಮಾಡಿದ್ರಂತೆ?
- ಹೌದು. ಅವರ ಫೇಸ್‌ಬುಕ್ ಸ್ಟೈಲ್ ರಾಜಕೀಯಕ್ಕೆ ಬನ್ನಿ ಅಂತ ರಿಕ್ವೆಸ್ಟ್ ಕಳಿಸಿದೆ. ಆದರೆ ಅವರು ಅಕ್ಸೆಪ್ಟ್ ಮಾಡಲಿಲ್ಲ.
ಮೋದಿ ಅವರನ್ನ ಕಳಕೊಂಡೆ ಅಂತ ಪೋಸ್ಟ್ ಹಾಕಿದ್ದೀರಂತೆ. ಅವರು ಮೊದಲೇ ಚಾಯ್‌ವಾಲಾ, ಟೀಗೆ ಕರೆದು ಚರ್ಚೆ ಮಾಡಬಹುದಿತ್ತಲ್ಲ?
- ಅಯ್ಯೋ, ಟೀಗೆ ಬಂದಾಗೆ ‘ಚೀನೀ ಕಮ’ ಅಂತಿದ್ದ ಮೋದಿ ಈಗ ‘ಚೀನೀ’ ಜ್ಯಾದಾ ಅನ್ನೋ ಮಟ್ಟಕ್ಕೆ ಬಂದಿದ್ದಾರೆ. ಮಾತಾಡಿ ಉಪಯೋಗ ಇಲ್ಲ.
ಸರಿ ಹಂಗಾದ್ರೆ, ನಿಮ್ಮ ಹಾಗೂ ಮೋದಿ ಅವರ ಸ್ನೇಹದ ಕಥೆಯೇನು ಈಗ?
- ಅಯ್ಯೋ, ಅದೊಂಥರಾ ದರ್ಶನ್ ಮತ್ತು ಸುದೀಪ್ ಸ್ನೇಹ ಇದ್ದಂಗೆ. ಯಾವಾಗ ಇರುತ್ತೆ, ಯಾವಾಗ ಇರಲ್ಲ ಅಂತ ಹೇಳಕಾಗಲ್ಲ.
(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್
ಚರ್ಚ್ ಒಂದರಲ್ಲಿ ಕೆಲಸ ಮಾಡುತ್ತಿದ್ದ 18 ವರ್ಷದ ಹುಡುಗ ತಾನು ಮಾಡಿದ ಒಂದು ತಪ್ಪನ್ನು ಕನ್ ಫ್ಯೂಸ್ ಮಾಡಿಕೊಳ್ಳಲು ಚರ್ಚಿಗೆ ಹೋದ. ಅಲ್ಲಿ ಫಾದರ್ ಅವರನ್ನು ಕಂಡು “ಫಾದರ್, ನಾನು ಒಂದು ಹುಡುಗಿಯ ಜತೆ ದೈಹಿಕ ಸಂಬಂಧ ಬೆಳೆಸಿದ್ದೇನೆ. ನನ್ನ ತಪ್ಪಿನ ಅರಿವಾಗಿದೆ, ನಾನು ಅದನ್ನು ಕನ್ ಫ್ಯೂಸ್ ಮಾಡಿಕೊಳ್ಳುತ್ತಿದ್ದೇನೆ" ಅಂದ. ಕನ್ ಫ್ಯೂಷನ್ ಫಾರ್ಮಾಲಿಟಿಗಳನ್ನೆ ಮುಗಿಸುವ ಮುಂಚೆ ಫಾದರ್ “ಸರಿ ಕಣಪ್ಪಾ, ನಿನ್ನ ಕನ್ ಫ್ಯೂಷನ್‌ಗೆ ವ್ಯವಸ್ಥೆ ಮಾಡುತ್ತೇನೆ. ಆದರೆ ನೀನು ಸಂಬಂಧ ಬೆಳೆಸಿದ ಆ ಹುಡುಗಿಯ ಹೆಸರೇನು?" ಅಂತ ಕೇಳಿದರು. ಅದಕ್ಕೆ ಹುಡುಗ ಉತ್ತರಿಸಿದ “ಸಾರಿ ಫಾದರ್, ನಾನು ಅದನ್ನು ಡಿಸ್‌ಕ್ಲೋಸ್ ಮಾಡೋಕಾಗಲ್ಲ".
ಫಾದರ್ ಕೇಳುತ್ತಲೇ ಹೋದರು, ಹುಡುಗ ಉತ್ತರಿಸುತ್ತಲೇ ಹೋದ. “ಅದ್ಸರಿ, ನಮ್ಮ ಏರಿಯಾದಲ್ಲಿ ಅಂಥ ಹುಡುಗಿಯರು ಯಾರಿದ್ದಾರೆ?" “ಸಾರಿ ಫಾದರ್, ನಾನು ಅದನ್ನು ಡಿಸ್‌ಕ್ಲೋಸ್ ಮಾಡೋಕಾ ಗಲ್ಲ" “ಚರ್ಚ್ ಹಿಂದಿನ ರೋಡಿನ ತೆರೆಸಾನಾ?" “ಸಾರಿ ಫಾದರ್, ನಾನು ಅದನ್ನು ಡಿಸ್‌ಕ್ಲೋಸ್ ಮಾಡೋಕಾಗಲ್ಲ" “ಲೈಬ್ರೆರಿಯನ್ ಕ್ಯಾಥಿನಾ?" “ಸಾರಿ ಫಾದರ್, ನಾನು ಅದನ್ನು ಡಿಸ್‌ಕ್ಲೋಸ್ ಮಾಡೋಕಾಗಲ್ಲ" “ಫ್ಲವರ್ ಶಾಪ್‌ನಲ್ಲಿ ಕೆಲಸ ಮಾಡೋ ರೋಸಿ?" “ಸಾರಿ ಫಾದರ್, ನಾನು ಅದನ್ನು ಡಿಸ್‌ಕ್ಲೋಸ್ ಮಾಡೋಕಾಗಲ್ಲ" ಇವನು ಬಾಯಿಬಿಡಲ್ಲ ಅಂತ ಅರಿತ ಫಾದರ್ ಕನ್ ಫ್ಯೂಷನ್ ಮುಗಿಸಿ, “ನೀನು ಯಾರ ಹೆಸರನ್ನೂ ಹೇಳಲಿಲ್ಲ. ಅದನ್ನು ನಾನು ಮೆಚ್ಚಿದ್ದೇನೆ. ಆದರೆ ತಪ್ಪಿಗೆ ಶಿಕ್ಷೆ ಆಗಲೇಬೇಕು. ಹಾಗಾಗಿ ನೀನು 4 ವಾರಗಳ ಕಾಲ ಚರ್ಚಿಗೆ ಬರುವಂತಿಲ್ಲ" ಅಂತ ಹೇಳಿ ಕಳುಹಿಸಿದರು. ಹೊರಗೆ ಬಂದ ಹುಡುಗನನ್ನು ಅವನ ಸ್ನೇಹಿತ ಕೇಳಿದ, “ನೋಡಿದ್ಯಾ ಸತ್ಯ ಹೇಳಿ ಏನ್ ಉಪಯೋಗ? ಅದರಿಂದ ನಿಂಗೇನ್ ಸಿಕ್ತು?". ಅದಕ್ಕೆ ಕಿಲಾಡಿ ಹುಡುಗ ತುಂಟತನದಿಂದ ಹೇಳಿದ “ನಾಲ್ಕು ವಾರಗಳ ರಜೆ ಮತ್ತು ನನ್ನಂಥ ಹುಡುಗರ ಬಲೆಗೆ ಬೀಳುವಂಥ ೩ ಹುಡುಗಿಯರ ಡೀಟೇಲ್ಸ್".
ಲೈನ್ ಮ್ಯಾನ್
ಕಾವೇರಿ ನದಿ ದಡದಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್ ಅನ್ನು ಏನಂತಾರೆ?
- ಕಾವೇರಿ ‘ಬ್ಯಾಂಕ್’
ವಿದ್ಯೆ, ಕೆಲಸ ಇಲ್ಲದೆ ಮನೆಗೆ ದೊಡ್ಡ ತಲೆನೋವಾಗಿರುವ ಮಗ
- ಅಮೃತಾಂಜನೀಪುತ್ರ
ವಿವಾದಿತ ಪುಸ್ತಕ ಬರೆದು ಜೈಲು ಸೇರಿದವನು
- ‘ಬುಕ್ಡ್’
ಕುಡುಕನ ಹಾಡು
- ಪಬ್ಬಿಗರ ಕಾವ್ಯ
ನಿಮ್ಮ ಮೇಲೆ ಯುದ್ಧ ಮಾಡ್ತೀವಿ ಅಂತ ಮೊದಲೇ ಕೊಡುವ ಎಚ್ಚರಿಕೆ
- ‘ವಾರ್’ ನಿಂಗ್
ಶಿವ ಅರ್ಧನಾರೀಶ್ವರ ಅನ್ನೋದನ್ನ ಹೇಳೋದು ಹೇಗೆ?
- SHE ವ
ಯಾರ ಮುಡಿ ಸೇರುತ್ತೆ ಅನ್ನೋದು ಗೊತ್ತಿಲ್ಲದ ಪುಷ್ಪ
- Who ವು
ಇಂಗ್ಲಿಷ್‌ಗೂ ಕನ್ನಡಕ್ಕೂ ಅಂಥ ವ್ಯತ್ಯಾಸ ಏನಿಲ್ಲ
- ಕನ್ನಡದ ‘ಹಟ್ಟಿ’ಯಲ್ಲಿ ಇಂಗ್ಲಿಷಿನ ‘ಹಟ್’ಗಳು ಇರುತ್ತವೆ ದೇವಸ್ಥಾನದಲ್ಲಿ ತಾಯಿತ ಕಟ್ಟೋನು
- ‘ಯಂತ್ರ’ಮಾನವ
‘ಅಂಡು ಮುಚ್ಕೊಂಡಿರು’ ಅಂತ ಯಾರಿಗಾದ್ರೂ ಬೈದ ಮೇಲೆ ನನ್ನ ಮಾತನ್ನ ವಾಪಸ್ ತಗೋತೀನಿ ಅಂತ ಹೇಳೋದು
- ‘ Undoʼ