ಗಂಟಾಘೋಷ
ಇನ್ನೇನು ಮುಗಿದೆ ಹೊಯಿತು ಎನ್ನುವ ಸಂದರ್ಭದಲ್ಲಿ 2024-25ರ ಚುನಾವಣೆಯಲ್ಲಿ ಮತ್ತೆ ಅಮೇರಿಕ ಅಧ್ಯಕ್ಷ ಗಾದಿ ಏರಿದ ಡೋನಾಲ್ಡ್ ಟ್ರಂಪ್ ಎಂಬ ಉದ್ಯಮಿ, ಅಧಿಕಾರಕ್ಕೆ ಬರುವ ಮೊದಲು ಮತ್ತು ನಂತರ ಭಾರತದೊಂದಿಗೆ ಚೆನ್ನಾಗಿಯೇ ಗೆಳೆತನ ಬಾಂಧವ್ಯ ಹೊಂದಿದ್ದರು.
ಯಾವಾಗ, ಗೆಲುವು ಮತ್ತು ಜನಪ್ರಿಯತೆಯಲ್ಲಿ ವಿಶ್ವ ನಾಯಕನಂತೆ ಹೊಮ್ಮತೊಡಗಿದರೋ ಆಗ ಟ್ರಂಪ್ ಅಮೆರಿಕ ಮೊದಲು ಎಂಬ ನೀತಿಯನ್ನು ಕಠೋರ ರೀತಿಯಲ್ಲಿ ಜಾರಿಗೆ ತರಲು ನಿರ್ಧರಿಸಿ ದರು. ಇದರ ಪರಿಣಾಮವಾಗಿ, ಬಹುತೇಕ ಗೆಳೆತನದ ದೇಶಗಳು, ಅವುಗಳ ಮುಖ್ಯಸ್ಥರು ಗೊಂದಲಕ್ಕೆ ಬಿದ್ದರು.
ವಿಶ್ವದ ಆರ್ಥಿಕತೆಯಲ್ಲಿ ವ್ಯಾಪಾರ ಮತ್ತು ತೆರಿಗೆ ನೀತಿಗಳು ದೇಶಗಳ ನಡುವಿನ ಸಂಬಂಧವನ್ನು ನಿರ್ಧರಿಸುವ ಪ್ರಮುಖ ಅಸ್ತ್ರಗಳಾಗಿವೆ. ವಿಶೇಷವಾಗಿ ಅಮೆರಿಕದಂತಹ ಮಹಾಶಕ್ತಿಗಳು ಟ್ಯಾರಿಫ್ (ಆಮದು ಸುಂಕ) ಮೂಲಕ ಇತರ ದೇಶಗಳ ಮೇಲೆ ಒತ್ತಡ ತರುತ್ತವೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷ ತ್ವದ ಅವಧಿಯಲ್ಲಿ ಅನೇಕ ದೇಶಗಳ ಮೇಲೆ ಟ್ಯಾರಿಫ್ ನೀತಿ ಜಾರಿಗೊಳಿಸಿದ್ದರು.
ಇತ್ತೀಚಿನ ವರ್ಷಗಳಲ್ಲಿ ಭಾರತ-ಅಮೆರಿಕ ವ್ಯಾಪಾರ ಸಂಬಂಧಗಳಲ್ಲಿ ಹೊಸ ಒತ್ತಡ ಮೂಡಿದ್ದು, ಟ್ರಂಪ್ ಅವರು ಭಾರತವನ್ನು ಸತ್ತ ಆರ್ಥಿಕತೆ ಎಂದು ಕರೆಯುವಂತಹ ವಿವಾದಾತ್ಮಕ ಹೇಳಿಕೆ ನೀಡಿದ್ದು ದೊಡ್ಡ ಚರ್ಚೆಗೆ ಕಾರಣವಾಯಿತು. ಇದರ ಜೊತೆಗೆ ಭಾರತದಿಂದ ಅಮೆರಿಕಕ್ಕೆ ಹೋಗುವ ವಸ್ತುಗಳ ಮೇಲೆ 25% + 25% ಸೇರಿ 50% ಮಟ್ಟದ ಟ್ಯಾರಿಫ್ ವಿಧಿಸಿರುವುದು ಭಾರತದ ರಫ್ತು ಕ್ಷೇತ್ರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತು.
ಇದನ್ನೂ ಓದಿ: Gururaj Gantihole Column: ದ್ವೇಷ ಭಾಷಣದ ಹೆಸರಿನಲ್ಲಿ ಸಂವಿಧಾನದ ಅಡಿಪಾಯಕ್ಕೆ ಧಕ್ಕೆ ?!
ಕೆಲವು ಮಾಧ್ಯಮ ಹಾಗೂ ಕೆಲವು ರಾಜಕೀಯ ಚರ್ಚೆಗಳಲ್ಲಿ ಟ್ರಂಪ್ ಭಾರತದ ಮೇಲೆ 100% ಟ್ಯಾರಿಫ್ ಘೋಷಿಸಿದ್ದಾರೆ ಎಂಬ ಮಾತು ಹರಿದಾಡಿತು. ಆದರೆ ಜನವರಿ 2026ರ ತನಕ ಲಭ್ಯವಿರುವ ವಿಶ್ವಾಸಾರ್ಹ ವರದಿಗಳ ಪ್ರಕಾರ, ಅಮೆರಿಕವು ಭಾರತ ಮೇಲೆ ಅಧಿಕೃತವಾಗಿ 100% ಟ್ಯಾರಿಫ್ ಘೋಷಿಸಿಲ್ಲ. ಆದರೆ ಕೆಲವು ವಸ್ತುಗಳ ಮೇಲೆ ಸುಮಾರು 50% ಮಟ್ಟದ ದಂಡಾತ್ಮಕ ಟ್ಯಾರಿಫ್ ಜಾರಿ ಮಾಡಲಾಯಿತು.
ಇದೆಲ್ಲಕ್ಕಿಂತಲೂ ದೊಡ್ಡ ಸುದ್ಧಿಯಾಗಿದ್ದು, ಭಾರತವನ್ನು ಸತ್ತ ಆರ್ಥಿಕತೆಯುಳ್ಳ ದೇಶವೆಂದು ಕರೆದದ್ದು. ಯಾಕೆಂದರೆ, ಆಡಳಿತಾತ್ಮಕ ವಿಚಾರದಲ್ಲಿ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಹುದ್ದೆಯಲ್ಲಿದ್ದು ಅನುಭವ ಹೊಂದಿರುವ, ಒಬ್ಬ ಚಾಣಾಕ್ಷ ರಾಜಕಾರಣಿಯ ಚುಕ್ಕಾಣಿಯಲ್ಲಿ ಭಾರತ ಸತತವಾಗಿ ತನ್ನ ಆರ್ಥಿಕತೆ ಏರಿಕೆಯ ನಾಗಾಲೋಟದಲ್ಲಿ ಓಡುತ್ತಿತ್ತು!
ಇದನ್ನು ಅರಿತುಕೊಂಡೇ ಟ್ರಂಪ್, ಮೋದಿ ಮತ್ತು ಅವರ ತಂಡವನ್ನು ಮಾನಸಿಕವಾಗಿ ಕುಗ್ಗಿಸಲು ಮತ್ತು ಜಾಗತಿಕವಾಗಿ ಅವಮಾನಿಸಲು ಇಂತಹ ಒಂದು ರಾಜಕೀಯ ಹೇಳಿಕೆ ನೀಡಿದ್ದರು. ಯಾವೊಬ್ಬ ಆರ್ಥಿಕ ತಜ್ಞ ವರದಿ-ಆಧಾರ ಸಮೇತ ಹೇಳಿದ್ದರೆ ಚಿಂತಿಸಬಹುದಾಗಿತ್ತು. ವಿದೇಶಿ ರಾಜಕಾರಣಿಯ ಮಾತನ್ನು ಯಥಾವತ್ತಾಗಿ ತೆಗೆದುಕೊಂಡು ಈ ದೇಶದ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿಯವರೂ ಕೂಡ ಭಾರತವನ್ನು ಡೆಡ್ ಎಕಾನಮಿ ಎಂದು ಹೀಯಾಳಿಸಿದ್ದರು.
ಟ್ರಂಪ್ ಭಾರತ ಮತ್ತು ರಷ್ಯಾವನ್ನು 2025ರಲ್ಲಿ ಸತ್ತ ಆರ್ಥಿಕ ದೇಶಗಳು ಎಂದು ಕರೆದಿದ್ದರು. ಇದಕ್ಕೆ ಮುಖ್ಯ ಕಾರಣ, ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿರುವುದು, ಭಾರತದಲ್ಲಿ ಅಮೆರಿಕ ಉತ್ಪನ್ನ ಗಳ ಮೇಲೆ ಹೆಚ್ಚು ತೆರಿಗೆ ಇದೆ ಎಂಬ ಆರೋಪ, ವ್ಯಾಪಾರ ಅಸಮತೋಲನದ ಜೊತೆಗೆ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ, ದೊಡ್ಡ ಮಾರುಕಟ್ಟೆ, ಉತ್ಪಾದನಾ ಹಾಗೂ ಸೇವಾ ಕ್ಷೇತ್ರದಲ್ಲಿ ಬಲಿಷ್ಠ ಹಿಡಿತವುಳ್ಳ ದೇಶ ಭಾರತವಾದ್ದರಿಂದ, ಸಹಜವಾಗೇ ಟ್ರಂಪ್‌ಗೆ ಅಸಹನೆ ಹುಟ್ಟು ಹಾಕಿತ್ತು.
ಈ ಮಾತು ಅಕ್ಷರಶಃ ಸುಳ್ಳಾಗಿದ್ದರೂ, ಒಂದು ಕ್ಷಣ ಆರ್ಥಿಕ ಜಗತ್ತು ಬೆಚ್ಚಿತ್ತು. ಭಾರತವನ್ನು ಹೀಗಳೆಯಬಾರದಿತ್ತು ಎಂದರು ಕೆಲ ವಿದೇಶಿ ನಾಯಕರು. ಸ್ವತಃ ಮೋದಿಯವರೇ ಟ್ಯಾರಿಫ್ ವಿಚಾರದಲ್ಲಿ ಬಂದಿದ್ದನ್ನು ಎದುರಿಸೋಣ, ನಾನು ಸಿದ್ದನಿದ್ದೇನೆ, ದೇಶದ ಜನರ ಹಿತಕ್ಕಾಗಿ, ಈ ನಿರ್ಧಾರ ತಳೆದಿದ್ದೇನೆ ಎಂದರು.
ಟ್ರಂಪ್ ಟ್ಯಾರಿಫ್ ನೀತಿಯಿಂದಾಗಿ, ಭಾರತದ ಉದ್ಯಮಗಳ ಮೇಲೆ ವಿಪರೀತ ಒತ್ತಡ ತರುವ ಪ್ರಯತ್ನ ನಡೆಸಲಾಯಿತು. ಭಾರತದ ಬಟ್ಟೆ ರಫ್ತು ಕ್ಷೇತ್ರಕ್ಕೆ ಅಮೆರಿಕ ದೊಡ್ಡ ಮಾರುಕಟ್ಟೆ ಯಾದ್ದರಿಂದ ಜವಳಿ ಉದ್ಯಮಕ್ಕೆ ಹೊಡೆತ, ಗುಜರಾತ್ ಮತ್ತು ಮಹಾರಾಷ್ಟ್ರದ ಡೈಮಂಡ್ ಉದ್ಯಮಕ್ಕೆ ಟ್ಯಾರಿಫ್ ದೊಡ್ಡ ಹೊಡೆತ, ತಮಿಳುನಾಡು, ಉತ್ತರಪ್ರದೇಶದ ಚರ್ಮ ಉದ್ಯಮಕ್ಕೆ ತೊಂದರೆ ಹಾಗೂ ಕೃಷಿ ಉತ್ಪನ್ನಗಳಾದ ಮಸಾಲೆ, ಸಮುದ್ರ ಆಹಾರ ರಫ್ತು ಕ್ಷೇತ್ರದಲ್ಲೂ ಬೆಲೆ ಏರಿಕೆಯ ಸಮಸ್ಯೆ ಸೇರಿದಂತೆ ಹತ್ತಾರು ವಲಯಗಳಲ್ಲಿ ಇದರ ಗಂಭೀರ ವ್ಯತಿರಿಕ್ತ ಪರಿಣಾಮದ ಲಕ್ಷಣ ಕಾಣತೊಡಗಿತು.
ಮದರ್ ಆಫ್ ಆಲ್ ಡೀಲ್ಸ್ ಎಂಬ ಪದವನ್ನು ಬಳಸಿಕೊಂಡು ಭಾರತ- ಐರೋಪ್ಯ ಕೂಟದ ನಡುವೆ ನಡೆಯುತ್ತಿರುವ ಫ್ರೀ ಟ್ರೇಡ್ ಅಗ್ರೀಮೆಂಟ್ (ಎಫ್ʼಟಿಎ) ಹಾಗೂ ವ್ಯಾಪಕ ತಂತ್ರಾತ್ಮಕ ಒಪ್ಪಂದ ಇಡೀ ಜಗತ್ತನ್ನೇ ತುದಿಗಾಲಲ್ಲಿ ನಿಲ್ಲಿಸಿದಂತಿದೆ. ಅಮೆರಿಕ ಮತ್ತು ಬ್ರಿಟನ್ ಈ ಒಪ್ಪಂದ ವನ್ನು ಅರಗಿಸಿಕೊಳ್ಳುವುದಕ್ಕೇ ಕೆಲ ವಾರಗಳು ಬೇಕಾದೀತು ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
21ನೇ ಶತಮಾನದಲ್ಲಿ ಜಗತ್ತಿನ ರಾಜತಾಂತ್ರಿಕ ಹಾಗೂ ಆರ್ಥಿಕ ವ್ಯವಸ್ಥೆ ಬಹಳ ವೇಗವಾಗಿ ರೂಪಾಂತರಗೊಳ್ಳುತ್ತಿದೆ. ಅಮೆರಿಕ-ಚೀನಾ ಶಕ್ತಿ ಸ್ಪರ್ಧೆ, ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಗಳು, ಜಾಗತಿಕ ಸರಬರಾಜು ಸರಪಳಿ ಬದಲಾವಣೆ, ಇಂಧನ ಸಂಕಷ್ಟ, ತಂತ್ರಜ್ಞಾನ ನಿಯಂತ್ರಣ, ಹವಾಮಾನ ಬದಲಾವಣೆ ಮುಂತಾದ ಕಾರಣಗಳಿಂದ ಜಾಗತಿಕ ವ್ಯಾಪಾರ ವ್ಯವಸ್ಥೆ ಹೊಸ ಹಂತಕ್ಕೆ ಪ್ರವೇಶಿಸಿದೆ.
ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಮುಕ್ತವ್ಯಾಪಾರ ಒಪ್ಪಂದವನ್ನು ಕೆಲವರು ಒಪ್ಪಂದಗಳ ಮಹಾತಾಯಿ (ಮದರ್ ಆಫ್ ಆಲ್ ಡೀಲ್ಸ್) ಎಂದು ಕರೆಯುತ್ತಿದ್ದಾರೆ. ಇದಕ್ಕೆ ಕಾರಣ, ಇದು ಕೇವಲ ವ್ಯಾಪಾರ ಒಪ್ಪಂದವಲ್ಲ; ಇದು ಜಗತ್ತಿನ ಎರಡು ದೊಡ್ಡ ಆರ್ಥಿಕ ಘಟಕಗಳ ನಡುವಿನ ತಂತ್ರಾತ್ಮಕ, ರಾಜತಾಂತ್ರಿಕ, ತಾಂತ್ರಿಕ ಮತ್ತು ಭದ್ರತಾ ಸಹಕಾರದ ಮಹಾಸಂಧಿಯಾಗಿದೆ.
ಮದರ್ ಆಫ್ ಆಲ್ ಡೀಲ್ ಎಂಬ ಪದಪ್ರಯೋಗವು ಸಾಮಾನ್ಯವಾಗಿ ಅತ್ಯಂತ ದೊಡ್ಡ, ವ್ಯಾಪಕ ಮತ್ತು ದೀರ್ಘಕಾಲೀನ ಪರಿಣಾಮ ಬೀರುವ ಒಪ್ಪಂದಗಳಿಗೆ ಬಳಸಲಾಗುತ್ತದೆ. ಐರೋಪ್ಯ ಕೂಟವು ವಿಶ್ವದ ಅತಿದೊಡ್ಡ ವ್ಯಾಪಾರ ಬ್ಲಾಕ್ ಆಗಿದ್ದು, ಭಾರತ ವಿಶ್ವದ ಅತಿದೊಡ್ಡ ಬೆಳೆಯುತ್ತಿರುವ ಮಾರುಕಟ್ಟೆ, ಎರಡೂ ಸೇರಿ ಸುಮಾರು 2 ಬಿಲಿಯನ್ ಜನಸಂಖ್ಯೆ, ಜಾಗತಿಕ ಜಿಡಿಪಿಯ ದೊಡ್ಡ ಪಾಲು, ತಂತ್ರಜ್ಞಾನ, ಹಸಿರು ಶಕ್ತಿ, ಡಿಜಿಟಲ್ ವ್ಯಾಪಾರ, ಹೂಡಿಕೆ, ಉದ್ಯೋಗ, ಭದ್ರತೆ ಎಲ್ಲ ಕ್ಷೇತ್ರ ಗಳನ್ನೂ ಒಳಗೊಂಡ ಒಪ್ಪಂದ ಇದಾಗಿರುವುದರಿಂದ ಭಾರತ-ಐರೋಪ್ಯ ಒಕ್ಕೂಟದ ಒಪ್ಪಂದ ವನ್ನು ಈ ರೀತಿ ಕರೆಯಲು ಕಾರಣಗಳು ಎನ್ನಬಹುದು.
2004ರಲ್ಲಿ ಭಾರತ-ಐರೋಪ್ಯ ಕೂಟದ ಸಂಬಂಧಗಳು ಸ್ಟಾಟೆಜಿಕ್ ಪಾರ್ಟನರ್‌ಶಿಪ್ ಆಗಿ ಘೋಷಿತ ವಾಗಿದ್ದವು. ಇದರಿಂದ ವ್ಯಾಪಾರ ಮಾತ್ರವಲ್ಲದೆ, ಹವಾಮಾನ, ತಂತ್ರಜ್ಞಾನ, ಶಿಕ್ಷಣ, ಭದ್ರತೆ, ಮಾನವ ಹಕ್ಕುಗಳು ಇವುಗಳಲ್ಲಿಯೂ ಸಹಕಾರ ಹೆಚ್ಚಾಯಿತು.
ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಫ್ರೀಟ್ರೇಡ್ ಅಗ್ರೀಮೆಂಟ್(ಎಫ್ʼಟಿಎ) ಕುರಿತು ಮಾತು ಕತೆ 2007ರಲ್ಲಿ ಆರಂಭವಾಯಿತು. ಕೆಲವು ವಿಷಯಗಳಲ್ಲಿ ಒಮ್ಮತಕ್ಕೆ ಬರಲಾಗದೆ 2013ರಲ್ಲಿ ಮಾತುಕತೆ ಸ್ಥಗಿತವಾಯಿತು. ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಮೇಲೆ 2022ರಲ್ಲಿ ಮತ್ತೆ ಮಾತುಕತೆ ಪುನರಾರಂಭಗೊಂಡಿತು.
ಜಾಗತಿಕ ಪರಿಸ್ಥಿತಿಯ ಬದಲಾವಣೆ ಇದಕ್ಕೆ ಪ್ರಮು ಕಾರಣವಾಯಿತು. ಅಷ್ಟಕ್ಕೂ ಯುರೋಪಿಯನ್ ಯುನಿಯನ್ ಅಂದರೆ, 27 ದೇಶಗಳು ಸೇರಿಕೊಂಡು ಯುರೋ ಎಂಬ ಒಂದೇ ಕರೆನ್ಸಿ ಅಡಿಯಲ್ಲಿ ಆರ್ಥಿಕ, ರಾಜಕೀಯ ಸ್ಥಿರತೆ ಕಾಪಾಡಿಕೊಳ್ಳಲು ಮಾಡಿಕೊಂಡು ಒಂದು ಸಹಭಾಗಿತ್ವ. ಜಗತ್ತಿನ ಅತಿದೊಡ್ಡ ಸಿಂಗಲ್ ಮಾರ್ಕೆಟ್ ಎಂದೇ ಈ ಕೂಟವನ್ನು ಕರೆಯಲಾಗುತ್ತದೆ.
ಪ್ರಾರಂಭಿಕ ಸಂಸ್ಥಾಪಕ ಸದಸ್ಯ ರಾಷ್ಟ್ರಗಳಾಗಿ ಬೆಲ್ಜಿಯಂ, ಫ್ರಾನ್ಸ್, ಜರ್ಮನಿ, ಇಟಲಿ, ಲಕ್ಸಂಬರ್ಗ್, ನೆದರ್‌ಲ್ಯಾಂಡ್ ಸೇರಿಕೊಂಡು ಯುರೋಪಿಯನ್ ಯುನಿಯನ್ ಸ್ಥಾಪನೆ ಮಾಡಿದ್ದವು. ಮುಖ್ಯ ಕಛೇರಿಗಳು ಬ್ರಸೆಲ್ಸ್, ಲಕ್ಸಂಬರ್ಗ್ ಮತ್ತು ಫ್ರಾನ್ಸ್‌ಗಳಲ್ಲಿವೆ.
ಐರೋಪ್ಯ ಕೂಟವು ವಿಶ್ವದ ಅತಿದೊಡ್ಡ ವ್ಯಾಪಾರಿ ಬ್ಲಾಕ್, ನಿಯಂತ್ರಣ ವ್ಯವಸ್ಥೆ, ಹಸಿರು ಆರ್ಥಿಕ ಮಾದರಿ ಇದರ ಮಾರುಕಟ್ಟೆ ಭಾರತಕ್ಕೆ ಬಹಳ ಆಕರ್ಷಕವಾಗಿದೆ. ಭಾರತಕ್ಕೆ ಐರೋಪ್ಯ ಕೂಟ ದಿಂದ ಮಹತ್ವದ ಕಾರಣಗಳೆಂದರೆ, ಐರೋಪ್ಯ ಕೂಟವು ಭಾರತದ ಅತಿದೊಡ್ಡ ವ್ಯಾಪಾರ ಪಾಲು ದಾರರಲ್ಲಿ ಒಂದಾಗಿದೆ. ಭಾರತದ ರಫ್ತಿಗೆ ದೊಡ್ಡ ಮಾರುಕಟ್ಟೆ, ತಂತ್ರಜ್ಞಾನ ಮತ್ತು ಹೂಡಿಕೆ ಮೂಲ, ಹಸಿರು ಶಕ್ತಿ ಮತ್ತು ಪರಿಸರ ಸಹಕಾರ ಮತ್ತು ಉದ್ಯೋಗ ಅವಕಾಶಗಳಾಗಿವೆ.
ಒಪ್ಪಂದದ ಪ್ರಮುಖ ಅಂಶಗಳೆಂದರೆ, ಮುಕ್ತ ವ್ಯಾಪಾರ ಒಪ್ಪಂದ-(ಭಾರತದಿಂದ ಐರೋಪ್ಯ ಕೂಟಕ್ಕೆ ರಫ್ತು, ಐರೋಪ್ಯ ಕೂಟದಿಂದ ಭಾರತಕ್ಕೆ ರಫ್ತು ಸೇರಿವೆ) ಹೂಡಿಕೆ ಒಪ್ಪಂದ (ಇನ್ವೆಸ್ಟ್ ಮೆಂಟ್ ಪ್ರೊಟೆಕ್ಷನ್ ಅಗ್ರೀಮೆಂಟ್) ಡಿಜಿಟಲ್ ಮತ್ತು ತಂತ್ರeನ ಸಹಕಾರ (ಐರೋಪ್ಯ ಕೂಟವು ಡಿಜಿಟಲ್ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿದ್ದು, ಈ ಒಪ್ಪಂದದ ಮೂಲಕ ಡಾಟಾ ಪ್ರೊಟೆಕ್ಷನ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಸೆಮಿಕಂಡಕ್ಟರ್ ಸಹಭಾಗಿತ್ವ ಮತ್ತು ಸೈಬರ್ ಸೆಕ್ಯುರಿಟಿ ತಂತ್ರ ಜ್ಞಾನಗಳಿಂದ ಭಾರತಕ್ಕೆ ಹೆಚ್ಚಿನ ಲಾಭವಾಗಲಿದೆ.
ಹಸಿರು ಶಕ್ತಿ ಮತ್ತು ಹವಾಮಾನ ಸಹಕಾರ (ಐರೋಪ್ಯ ಕೂಟ ಗ್ರೀನ್ ಡೀಲ್ ನೀತಿ ಮೂಲಕ ಕಾರ್ಬನ್ ಕಡಿತಕ್ಕೆ ಒತ್ತಡ ನೀಡುತ್ತಿದೆ. ಇವುಗಳ ಮೂಲಕ, ಸೋಲಾರ್ ಎನರ್ಜಿ, ಹೈಡ್ರೋಜನ್ ಎಕಾನಮಿ, ಎಲೆಕ್ಟ್ರಿಕ್ ಮೊಬಲಿಟಿ, ಕಾರ್ಬನ್ ಟ್ರೇಡಿಂಗ್ ಮೆಕಾನಿಸಂ ತಂತ್ರeನಗಳು ಪರಸ್ಪರ ವಿನಿಮಯವಾಗಲಿವೆ.) ಸರಬರಾಜು ಸರಪಳಿ ಪುನರ್ರಚನೆ (ಚೀನಾದ ಮೇಲೆ ಜಗತ್ತಿನ ಅವಲಂಬನೆ ಕಡಿಮೆ ಮಾಡಲು ಐರೋಪ್ಯ ಕೂಟವು ಭಾರತವನ್ನು ಪರ್ಯಾಯ ಕೇಂದ್ರವಾಗಿ ನೋಡುತ್ತಿದೆ.
ಇದರಡಿಯಲ್ಲಿ, ಮ್ಯಾನುಫ್ಯಾಕ್ಚರಿಂಗ್ ಶಿಫ್ಟ್, ಮೇಕ್ ಇನ್ ಇಂಡಿಯಾಗೆ ಬಲವರ್ಧನೆ, ಸ್ಪರ್ಧಾತ್ಮಕ ರಫ್ತು ವ್ಯವಹಾರಗಳನ್ನು ಒಳಗೊಂಡಿದೆ) ಭಾರತಕ್ಕೆ ಸಾಧ್ಯವಾಗುವ ಲಾಭಗಳು:
1. ರಫ್ತು ಹೆಚ್ಚಳ: ಎಫ್ʼಟಿಎ ನಂತರ ಭಾರತದಿಂದ ಐರೋಪ್ಯ ಕೂಟಕ್ಕೆ ರಫ್ತು ಹೆಚ್ಚಬಹುದು.
ವಿಶೇಷವಾಗಿ, ಎಮಎಸ್‌ಎಮಇ ಉತ್ಪನ್ನಗಳು, ಕೃಷಿ ಉತ್ಪನ್ನಗಳು ಹಾಗೂ ಸೇವಾ ರಫ್ತು ಸೇರಿವೆ.
2.ಉದ್ಯೋಗ ಸೃಷ್ಟಿ: ಹೂಡಿಕೆ ಹೆಚ್ಚಿದರೆ, ಹೊಸ ಕಾರ್ಖಾನೆಗಳು, ಸ್ಟಾರ್ಟಪ್‌ಗಳಿಗೆ ಅವಕಾಶ, ಉದ್ಯೋಗ ಸೃಷ್ಟಿ.
3. ತಂತ್ರಜ್ಞಾನ ಪ್ರವೇಶ: ಎಲ್ಲ ಮಾದರಿಯ ಐರೋಪ್ಯ ಕೂಟದ ಮುಂದುವರಿದ ಅತ್ಯಾಧುನಿಕ ತಂತ್ರಜ್ಞಾನ ಭಾರತಕ್ಕೆ ಸಿಗುವ ಸಾಧ್ಯತೆ ಹೆಚ್ಚಾಗಿದೆ.
4. ಜಾಗತಿಕ ಸ್ಥಾನಮಾನ: ಐರೋಪ್ಯ ಕೂಟ ಜೊತೆ ಒಪ್ಪಂದವು ಭಾರತವನ್ನು ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ಸ್ಥಾಪಿಸುವಲ್ಲಿ ಅತಿದೊಡ್ಡ ಸಹಕಾರವಾಗಲಿದೆ.
ಈ ಒಪ್ಪಂದದಿಂದ ಐರೋಪ್ಯ ಒಕ್ಕೂಟಕ್ಕೂ ಭಾರತದಿಂದಲೂ ಹೇರಳ ಲಾಭವಾಗಲಿದ್ದು, ಭಾರತದ ದೊಡ್ಡ ಮಾರುಕಟ್ಟೆ ಪ್ರವೇಶ, ಚೀನಾದ ಪರ್ಯಾಯ ವ್ಯಾಪಾರ ಕೇಂದ್ರ, ಕೌಶಲ್ಯಯಕ್ತ ಕಾರ್ಮಿಕ ವರ್ಗ, ಗ್ರೀನ್ ಟ್ರಾನ್ಸಿಷನ್ ಪಾರ್ಟನರ್ ಶಿಪ್ ಮುಂತಾದವುಗಳನ್ನು ಒಳಗೊಂಡಿರಲಿವೆ.
ಭಾರತ ಈ ಒಪ್ಪಂದವನ್ನು ಕೇವಲ ವ್ಯಾಪಾರ ದೃಷ್ಟಿಯಿಂದಲ್ಲ, ಜಾಗತಿಕ ರಾಜಕೀಯ ದೃಷ್ಟಿ ಯಿಂದಲೂ ನೋಡುತ್ತಿದೆ. ಮಲ್ಟಿ ಅಲೈನ್ಮೆಂಟ್ ಫಾರಿನ್ ಪಾಲಿಸಿ, ಇಂಡೋ-ಪೆಸಿಫಿಕ್ ಕೋ-ಆಪರೇಷನ್, ಚೀನಾ ಕೌಂಟರ್ ಬ್ಯಾಲನ್ಸ್, ಮತ್ತು ಗ್ಲೋಬಲ್ ಸೌಥ್ ಲೀಡರ್‌ಶಿಪ್ ಸ್ಥಾಪನೆಯ ಕನಸುಗಳು ಹೇರಳವಾಗಿವೆ.
ಭವಿಷ್ಯದ ಪರಿಣಾಮಗಳನ್ನು ವಿವೇಚಿಸಿದರೆ, ಹೊಸ ವ್ಯಾಪಾರ ಬ್ಲಾಕ್ ನಿರ್ಮಾಣ, ಚೀನಾದ ಪ್ರಭಾವ ಕಡಿತ, ಹಸಿರು ಆರ್ಥಿಕ ಸಹಕಾರದ ಮಾದರಿ, ಭಾರತಕ್ಕೆ ಐರೋಪ್ಯ ಕೂಟದೊಂದಿಗೆ ಸ್ಟ್ರಾಟಜಿಕ್ ಸಹಭಾಗಿತ್ವ ಸದಾ ದೊರೆಯಲಿದೆ. ಭಾರತ- ಐರೋಪ್ಯ ಒಕ್ಕೂಟ ಒಪ್ಪಂದವು 21ನೇ ಶತಮಾನದ ಅತ್ಯಂತ ಮಹತ್ವದ ಜಾಗತಿಕ ಒಪ್ಪಂದಗಳಲ್ಲಿ ಒಂದಾಗುವ ಸಾಧ್ಯತೆ ಹೊಂದಿದೆ.
ತಂತ್ರಜ್ಞಾನ, ಹೂಡಿಕೆ, ಹಸಿರುಶಕ್ತಿ, ಭದ್ರತೆ ಮತ್ತು ರಾಜತಾಂತ್ರಿಕ ಶಕ್ತಿ ಸಮೀಕರಣಗಳನ್ನು ಒಳಗೊಂಡಿರುವ ಮಹಾ ಸಹಕಾರ ಸಂಧಿಯಾಗಿದೆ. ಭಾರತಕ್ಕೆ ಹೊಸ ಅವಕಾಶಗಳ ಬಾಗಿಲು ತೆರೆದರೂ, ದೇಶೀಯ ಕೈಗಾರಿಕೆ, ರೈತರು ಮತ್ತು ಡಿಜಿಟಲ್ ಸ್ವಾಯತ್ತತೆಯ ರಕ್ಷಣೆಯೊಂದಿಗೆ ಸಮತೋಲನ ಸಾಧಿಸುವುದು ಅತ್ಯಗತ್ಯ. ಒಟ್ಟಿನಲ್ಲಿ, ಭಾರತ-ಐರೋಪ್ಯ ಕೂಟದ ಮದರ್ ಆಫ್ ಆಲ್ ಡೀಲ್ಸ ಒಪ್ಪಂದವು ಭಾರತದ ಜಾಗತಿಕ ಭವಿಷ್ಯವನ್ನು ರೂಪಿಸುವ ಪ್ರಮುಖ ಮೈಲಿಗಲ್ಲಾ ಗಲಿದೆ.