ಪ್ರತಿಕ್ರಿಯೆ
ಲೀನಾ ಜೋಶಿ
ರಾಮಾಯಣವನ್ನು ರಾಮನು ಬರೆಯಲಿಲ್ಲ. ಮಹಾಭಾರತವನ್ನು ಕೃಷ್ಣನು ಬರೆಯಲಿಲ್ಲ. ಮೊರಾರ್ಜಿಯನ್ನು ಹತ್ತಿರದಿಂದ ಕಂಡವರೇ ಅವರ ಬಗ್ಗೆ ಬರೆದಿದ್ದಾರೆ. ನಾವು ಓದುತ್ತಿರುವ ಇತಿಹಾಸ, ಎಲ್ಲಿಂದಲೋ ಭಾರತಕ್ಕೆ ಬಂದ ಪ್ರವಾಸಿಗಳು ಬರೆದ ಪುಸ್ತಕದ ಆಧಾರದ ಮೇಲೆಯೇ. ನಮಗೆ ಬೇಕಾದ್ದನ್ನು ಮಾತ್ರ ತಿರುಚಿ ಉಳಿದಿದ್ದನ್ನು ಬಿಸಾಡುವುದು ಒಳ್ಳೆಯ ಜಾಯಮಾನವಲ್ಲ.
ನಾನು ಕಳೆದ ವಾರ ಸ್ವಮೂತ್ರಪಾನಿ ಪ್ರಧಾನಿ ಮೊರಾರ್ಜಿ ದೇಸಾಯಿ ಬಗ್ಗೆ ಲೇಖನ ಬರೆದಾಗ, ಬಹಳಷ್ಟು ಜನ ಪ್ರತಿಕ್ರಿಯೆ ನೀಡಿ, ಈ ಲೇಖನ ಅಪೂರ್ಣವಾಗಿದೆ, ನೀವು ಇನ್ನಷ್ಟು ಇದರ ಬಗ್ಗೆ ಬರೆಯಬೇಕಿತ್ತು ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದರು. ವಿಶೇಷವಾಗಿ ಚಂದ್ರಮೌಳಿ ಅವರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಅವರು ನೀಡಿದ ಪ್ರತಿಕ್ರಿಯೆಯಿಂದಾಗಿ ವಿಷಯವನ್ನು ಇನ್ನಷ್ಟು ವಿಸ್ತಾರವಾಗಿ ಓದುಗರ ಮುಂದೆ ಇಡುವ ಅವಕಾಶ ಲಭಿಸಿದೆ.
ನಾನು ಎಲ್ಲೂ ಮೊರಾರ್ಜಿ ದೇಸಾಯಿಯನ್ನು ಭೇಟಿಯಾಗಲು ಪ್ರಯತ್ನಿಸಿದ ಬಗ್ಗೆ ಕಾವ್ ಬಾಯ್ಸ ಕೃತಿಯಲ್ಲಿ ಉಲ್ಲೇಖವಾಗಿದೆ ಎಂದು ಹೇಳಿಲ್ಲ. RAW ನಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ಆರ್.ಕೆ. ಯಾದವ್, ‘ Mission RAW ’ ಪುಸ್ತಕ ಬರೆದಿದ್ದಾರೆ. ಅವರಿಗೆ ನೀಡಿದ ಸಂದರ್ಶನದಲ್ಲಿ ಆರ್.ಎನ್. ಕಾವ್ ಹೇಳಿದ್ದು, ಸಾಮಾನ್ಯವಾಗಿ ಪ್ರಧಾನಮಂತ್ರಿಗಳಾಗಲಿ ಅಥವಾ ಯಾವುದೇ ಮಂತ್ರಿಗಳಾಗಲಿ ಅವರನ್ನು ಭೇಟಿಯಾಗಲು ಬಯಸುವವರು ಮೊದಲು ಅವರ ಕಾರ್ಯದರ್ಶಿಯನ್ನು ಭೇಟಿ ಮಾಡುವುದು ಒಂದು ಆಡಳಿತಾತ್ಮಕ ನಿಯಮವಾಗಿದೆ.
ಯಾರೂ ನೇರವಾಗಿ ಸಚಿವರ ಅಥವಾ ಪ್ರಧಾನಮಂತ್ರಿಯವರ ಕ್ಯಾಬಿನ್ ಒಳಗೆ ಪ್ರವೇಶಿಸಲು ಸಾಧ್ಯವಿಲ್ಲ. Appointment ಕೊಟ್ಟಿದ್ದ ನಿಗದಿತ ಸಮಯಕ್ಕೆ, ಕಾವ್ ಪ್ರಧಾನಮಂತ್ರಿ ಕಾರ್ಯಾ ಲಯಕ್ಕೆ ಪ್ರವೇಶಿಸಿದಾಗ, ವ್ಯಕ್ತಿಯೊಬ್ಬ ಕಿಲ್ಲರ್ ಆಫ್ ಎಮರ್ಜೆನ್ಸಿ ಎಂದು ಕೂಗುತ್ತಾ ಅವರ ಮೇಲೆ ದೈಹಿಕ ಹಗೆ ಯತ್ನಿಸಿದ.
ಅಲ್ಲಿದ್ದ ಪ್ರೈವೇಟ್ ಸೆಕ್ರೆಟರಿ ತಕ್ಷಣ ಮಧ್ಯಪ್ರವೇಶ ಮಾಡಿ, ಆ ವ್ಯಕ್ತಿಯನ್ನು ತಡೆದು, ಕಾವ್ ಅವರಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಂಡರು. ನಂತರ ಅವರನ್ನು ಪ್ರಧಾನಮಂತ್ರಿಯವರ ಬಳಿಗೆ ಕರೆದುಕೊಂಡು ಹೋಗಲಾಯಿತು. ಕಾವ್, ಪ್ರಧಾನಮಂತ್ರಿಗೆ ಹೊರಗಡೆ ನಡೆದ ಘಟನೆ ಯನ್ನು ವಿವರಿಸಿದಾಗ, ಮೊರಾರ್ಜಿ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ತೋರಿಸಲಿಲ್ಲ. ಆವಾಗ ಕಾವ್‌ಗೆ ಅರ್ಥವಾಗುತ್ತದೆ, ಇದೆಲ್ಲಾ ಪ್ರೀ-ಪ್ಲಾನ್ಡ್ ಎಂದು.
ಇದನ್ನೂ ಓದಿ: Leena Joshi Column: ಸ್ವಮೂತ್ರ ಪಾನಿ ಪ್ರಧಾನಿಯಿಂದಾದ ಪ್ರಮಾದಗಳು
‘ಕೈ ತಪ್ಪಿ ಹೋಗುತ್ತಿದ್ದ ಸಿಕ್ಕಿಂ’ ಅನ್ನು ಭಾರತದಲ್ಲಿ ವಿಲೀನಗೊಳಿಸಿದ, ಬಾಂಗ್ಲಾದೇಶ ಉದ್ಭವಕ್ಕೆ ಕಾರಣವಾದ ಒಬ್ಬ ಪ್ರಾಮಾಣಿಕ ಅಧಿಕಾರಿಗೆ ಮೊರಾರ್ಜಿ ಹೇಳುತ್ತಾರೆ, ‘ಎಮರ್ಜೆನ್ಸಿ’ ಟೈಮ್‌ನಲ್ಲಿ ನೀವು ನಿಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದೀರಿ. ನಿಮ್ಮ ಗುಪ್ತಚರ ಮಾಹಿತಿ ಗಳಿಂದಾಗಿಯೇ ಎಮರ್ಜೆನ್ಸಿಯಲ್ಲಿ ಅನಾಚಾರಗಳು ನಡೆದವು.
ಇಂದಿರಾ ಗಾಂಧಿಗೆ ನಿಷ್ಠವಾಗಿರೋ ನಿಮ್ಮ ಅವಶ್ಯಕತೆ ದೇಶಕ್ಕಿಲ್ಲ, ನಿಮ್ಮನ್ನು ಕೆಲಸದಿಂದ ವಜಾ ಮಾಡುತ್ತಿದ್ದೇವೆ, ಆಗ ಕಾವ್ ಹೇಳುತ್ತಾರೆ, ನಾನೇ ರಾಜೀನಾಮೆ ಕೊಡುತ್ತೇನೆ, ನನ್ನ ಮೇಲೆ ಯಾವುದೇ ಆರೋಪಗಳಿದ್ದರೆ ತನಿಖೆ ನಡೆಸಿ. ಗೃಹಮಂತ್ರಿ ಚೌಧರಿ ಚರಣ್ ಸಿಂಗ್ ಆದೇಶದ ಮೇಲೆ, ಎಸ್.ಪಿ. ಸಿಂಗ್ ನೇತೃತ್ವದಲ್ಲಿ ಒಂದು ಕಮಿಟಿಯನ್ನು ರಚಿಸಲಾಗುತ್ತದೆ.
ಸುಮಾರು ಆರು ತಿಂಗಳ ಕಾಲ ನಡೆದ ಪರಿಶೀಲನೆಯ ನಂತರ, ಎಸ್.ಪಿ. ಸಿಂಗ್ ಸಮಿತಿ ತನ್ನ ಅಂತಿಮ ವರದಿಯನ್ನು ಸರಕಾರಕ್ಕೆ ಸಲ್ಲಿಸಿತು. ವರದಿಯ ಪ್ರಮುಖ ಅಂಶವೆಂದರೆ ಆರ್.ಎನ್. ಕಾವ್ ಅವರ ವಿರುದ್ಧ ಗಂಭೀರವಾದ ವೈಯಕ್ತಿಕ ದೋಷಾರೋಪಣೆಗಳನ್ನು ದೃಢಪಡಿಸುವಂತಹ ಸ್ಪಷ್ಟ ಸಾಕ್ಷ್ಯಗಳು ದೊರಕಲಿಲ್ಲ ಎಂಬ ನಿರ್ಣಯ.
ಸಮಿತಿಯ ವರದಿಯ ಪ್ರಕಾರ, ತುರ್ತು ಪರಿಸ್ಥಿತಿ ಅವಧಿಯಲ್ಲಿ ತೆಗೆದುಕೊಳ್ಳಲಾದ ಕೆಲವು ಕ್ರಮ ಗಳು ಆಡಳಿತಾತ್ಮಕ ನಿರ್ಧಾರಗಳಾಗಿದ್ದು, ಅವುಗಳನ್ನು ವೈಯಕ್ತಿಕ ದುರುಪಯೋಗ ಎಂದು ಪರಿಗಣಿಸಲು ಸೂಕ್ತವಾದ ಸಾಕ್ಷ್ಯಗಳು ಲಭ್ಯವಾಗಲಿಲ್ಲ. 6 ತಿಂಗಳಲ್ಲಿ ಎಸ್.ಪಿ. ಸಿಂಗ್ ಕಮಿಟಿ ಎಲ್ಲ ವಿಚಾರಣೆ ಮುಗಿಸಿ ‘ಕಾವ್ ದೋಷಮುಕ್ತ’ ಎಂದು ರಿಪೋರ್ಟ್ ಅನ್ನು ನೀಡುತ್ತದೆ.
‘ಎಸ್.ಪಿ. ಸಿಂಗ್ ಸಮಿತಿಯ ತನಿಖೆ’ ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ಜವಾಬ್ದಾರಿತ್ವ ( accountability) ಮತ್ತು ಪಾರದರ್ಶಕತೆ (transparency) ಕುರಿತು ನಡೆದ ಪ್ರಮುಖ ಪ್ರಯತ್ನಗಳಲ್ಲಿ ಒಂದು. ‘ಕಾವ್’ ಅಂಥಹ ಅಧಿಕಾರಿ ಭಾರತ ದೇಶಕ್ಕೆ ಸಿಕ್ಕಿದ್ದು ನಮ್ಮ ಸುದೈವ. ಜನಪ್ರಿಯತೆಯಿಂದ ಕಾವ್ ಎಷ್ಟು ದೂರ ಅನ್ನುವುದಕ್ಕೆ ಇದೊಂದೇ ಘಟನೆ ಸಾಕ್ಷಿ.
1996ರಲ್ಲಿ ದೆಹಲಿಯಲ್ಲಿ ನಡೆದ ಬಾಂಗ್ಲಾದೇಶದ ಸ್ವಾತಂತ್ರ್ಯದ 25ನೇ ವರ್ಷದ ಸಮಾರಂಭದ ಸಂದರ್ಭದಲ್ಲಿ ನಡೆದ ಒಂದು ಘಟನೆ ಕಾವ್ ಅವರ ವಿನಯಶೀಲತೆಯನ್ನು ಪ್ರತಿಬಿಂಬಿಸುತ್ತದೆ. ವೇದಿಕೆಯಲ್ಲಿ ಗಣ್ಯರು ಕುಳಿತಿದ್ದಾಗ, ಕೊನೆಯ ಸಾಲಿನಲ್ಲಿ ಕುಳಿತಿದ್ದ ಕಾವ್ ಅವರನ್ನು ಒಬ್ಬ ಬಾಂಗ್ಲಾದೇಶಿ ಪತ್ರಕರ್ತ ಗುರುತಿಸಿ, ಸರ್, ನೀವು ಇರಬೇಕಾಗಿದ್ದು ವೇದಿಕೆ ಮೇಲೆ, ಇಲ್ಲಲ್ಲ , ನಿಮ್ಮಿಂದಲೇ ನಾವು ಸ್ವಾತಂತ್ರ್ಯವನ್ನು ಕಾಣುವಂತಾಯಿತು ಎಂದು ಕೃತಜ್ಞತೆ ವ್ಯಕ್ತಪಡಿಸಿದ.
ಕಾವ್‌ಗೆ ತುಂಬಾ ಮುಜುಗರವಾಗುತ್ತೆ, ಸಂಕೋಚದಿಂದಲೇ ಕಾವ್ ಅವರು, ನಾನು ವಿಶೇಷವಾಗಿ ಏನೂ ಮಾಡಿಲ್ಲ; ವೇದಿಕೆಯಲ್ಲಿ ಕುಳಿತಿರುವವರ ಕೊಡುಗೆ ಬಹಳ ದೊಡ್ಡದು ಎಂದು ಹೇಳಿ, ಬೇರೆ ಯಾರಾದರೂ ಅವರನ್ನು ನೋಡುವುದುಕ್ಕಿಂತ ಮುಂಚೆ ಮೆಲ್ಲನೆ ಹೊರಗಡೆ ಹೊರಟು ಹೋಗು ತ್ತಾರೆ.
1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಆರ್.ಎನ್. ಕಾವ್ ಅವರು ನಿರ್ವಹಿಸಿದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರು ಸಂಗ್ರಹಿಸಿದ ಗುಪ್ತಚರ ಮಾಹಿತಿಗಳು ಅತ್ಯಂತ ನಿಖರ ವಾಗಿದ್ದವು. ಪಾಕಿಸ್ತಾನ ಯಾವ ಸಮಯದಲ್ಲಿ ದಾಳಿ ನಡೆಸಬಹುದು, ಅವರ ಮುಂದಿನ ಸೈನಿಕ ಚಲನವಲನಗಳು ಯಾವ ದಿಕ್ಕಿನಲ್ಲಿ ಇರಬಹುದು ಎಂಬ ವಿಷಯಗಳ ಕುರಿತು ಮುಂಚಿತ ಮಾಹಿತಿ ಗಳನ್ನು ಸಂಗ್ರಹಿಸುವಲ್ಲಿ ರಾ ಏಜೆಂಟ್‌ಗಳ ಪಾತ್ರ ಮಹತ್ವದ್ದಾಗಿತ್ತು.
ಪಾಕಿಸ್ತಾನದ ವಿವಿಧ ಪ್ರದೇಶಗಳಲ್ಲಿ ನೆಲೆಸಿದ್ದ ರಾ ಏಜೆಂಟ್‌ಗಳು ಸಂಗ್ರಹಿಸಿದ ಮಾಹಿತಿಗಳು ಯುದ್ಧ ತಂತ್ರ ರೂಪಿಸುವಲ್ಲಿ ಪ್ರಮುಖ ಸಹಾಯ ಮಾಡಿದ್ದವು. ಅವರು ತಮ್ಮ ಜೀವಿತಾವಧಿಯಲ್ಲಿ ಇಂಟರ್‌ವ್ಯೂ ಕೊಟ್ಟಿದ್ದು ಒಂದೇ ಒಂದು ಸಾರಿ. ಯಾವುದೇ ರೀತಿಯ ವೈಯಕ್ತಿಕ ಕ್ರೆಡಿಟ್ ಪಡೆಯುವ ಆಸೆಯೂ ಅವರಿಗೆ ಇರಲಿಲ್ಲ.
ಅವರ ಗೌಪ್ಯ ದಾಖಲೆಗಳು ( Secret Papers ) ದೆಹಲಿಯ ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿಯಲ್ಲಿವೆ. ಕಾವ್ ಅವರು ತಮ್ಮ ಜೀವನದಲ್ಲಿ ಸಂಗ್ರಹಿಸಿದ ಕೆಲವು ಮಹತ್ವದ ದಾಖಲೆಗಳು ಹಾಗೂ ಧ್ವನಿ ಮುದ್ರಿತ ದಾಖಲೆಗಳನ್ನು ಭವಿಷ್ಯದಲ್ಲಿ ಸಾರ್ವಜನಿಕರಿಗೆ ಲಭ್ಯವಾಗು ವಂತೆ ಮಾಡುವ ಉದ್ದೇಶದಿಂದ, ಅವುಗಳನ್ನು ನಿರ್ದಿಷ್ಟ ಅವಧಿಯ ನಂತರ ಪ್ರಕಟಿಸ ಬೇಕು ಎಂಬ ಸೂಚನೆಯನ್ನು ತಮ್ಮ ಇಚ್ಛಾಪತ್ರ (ವಿಲ್)ದಲ್ಲಿ ದಾಖಲಿಸಿದ್ದಾರೆ.
ಈ ದಾಖಲೆಗಳ ಸಂರಕ್ಷಣೆಯ ಜವಾಬ್ದಾರಿಯನ್ನು ‘ನೆಹರು ಮೆಮೊರಿಯಲ’ ಸಂಸ್ಥೆ ವಹಿಸಿ ಕೊಂಡಿದೆ. 2002ರಲ್ಲಿ ನಿಧನರಾಗುವ ಮುನ್ನ ತಮ್ಮ ಆತ್ಮಕಥೆಯನ್ನು ರೆಕಾರ್ಡ್ ಮಾಡಿದ್ದರು, ಅದನ್ನು ಏಳು ಕಡತಗಳಾಗಿ ವಿಭಜಿಸಿ, ನೆಹರೂ ಮೆಮೋರಿಯಲ್ ಲೈಬ್ರರಿಯಲ್ಲಿ ಇರಿಸಲಾಗಿದೆ.
ಏಳು ಫೈಲ್‌ಗಳ ಪೈಕಿ ನಾಲ್ಕು ಫೈಲ್‌ಗಳನ್ನು ಈಗಾಗಲೇ ಸಾರ್ವಜನಿಕ/ಸಂಶೋಧಕರಿಗೆ ಬಿಡುಗಡೆ ಮಾಡಲಾಗಿದೆ. ಅವರು ಮರಣ ಹೊಂದಿದ 25 ವರ್ಷಗಳ ನಂತರ (ಅಂದರೆ 2027ರ ಸುಮಾರಿಗೆ) ಬಿಡುಗಡೆ ಮಾಡಬೇಕೆಂದು ಮೂರು ಪ್ರಮುಖ ಕಡತಗಳ ಮೇಲೆ ಸೂಚನೆ ನೀಡಿದ್ದಾರೆ.
ಬಾಂಗ್ಲಾದೇಶ ವಿಮೋಚನೆ, ಸಿಕ್ಕಿಂ ವಿಲೀನ, ಇಂದಿರಾ ಗಾಂಧಿ ಹತ್ಯೆಗೆ ಸಂಬಂಧಿಸಿದ ಸೂಕ್ಷ್ಮ ಸಂಗತಿಗಳು ಹೊರಬರಲು ಇನ್ನು ಕೆಲವೇ ತಿಂಗಳುಗಳಿವೆ. ಮೊರಾರ್ಜಿ ದೇಸಾಯಿ, ಸ್ಪೆಷಾಲಿಟಿ ಏನಂದ್ರೆ ಅವರಿಗೆ ಏನಾದರೂ ಪ್ರಶ್ನೆ ಕೇಳಿದರೆ, ಉತ್ತರವನ್ನು ಪ್ರಶ್ನೆ ರೂಪದ ಕೊಡುತ್ತಿದ್ದರು. ಅವರು ಹೇಳಿದ ಒಂದು ಧ್ವನಿ ಮುದ್ರಿಕೆ ಇದೆ, ಆದರೆ ಧ್ವನಿ ಮುದ್ರಿಕೆಯನ್ನು ಲೇಖನದಲ್ಲಿ ಪ್ರಕಟಿ ಸಲು ಸಾಧ್ಯವಿಲ್ಲ, ಚಂದ್ರಮೌಳಿಯವರು ಆ ಧ್ವನಿ ಮುದ್ರಿಕೆಯನ್ನು ಹುಡುಕಿ ತೆಗೆದು ಕೇಳಬ ಹುದು. ಅದರಲ್ಲಿ ಅವರು ಹೇಳುತ್ತಾರೆ, ಭಾರತ ಸಮೃದ್ಧ ದೇಶ ವಾಗಬೇಕೆಂದು ನಾನು ಬಯಸುವು ದಿಲ್ಲ, ಭಾರತ ಸುಖಮಯ ದೇಶವಾಗಿರಬೇಕು, ಸುಖಪಡಲು ಸಮೃದ್ಧಿಯ ಅವಶ್ಯಕತೆ ಇಲ್ಲ, ಸಮೃದ್ಧಿತನ ಅಸೂಯೆಯನ್ನು ತನ್ನ ಜತೆಗೆ ತರುತ್ತದೆ. ಇದು ಭಾರತದ ಬಗ್ಗೆ ಮೊರಾರ್ಜಿಗೆ ಇದ್ದ Vision !
ಮೊರಾರ್ಜಿಗೆ ಪ್ರಧಾನಮಂತ್ರಿಯಾಗಬೇಕೆಂಬ ಆಸೆ ಸ್ವಾತಂತ್ರ್ಯ ಬಂದಾಗಿನಿಂದಲೂ ಇತ್ತು. ತಮ್ಮ ಬಯಕೆಯನ್ನು ಬಹಳ ಬಾರಿ ವ್ಯಕ್ತಪಡಿಸಿದ್ದರು ಕೂಡ. ನೆಹರು ನಿಧನದ ನಂತರ, ಪ್ರಧಾನಮಂತ್ರಿ ಯಾಗಲು ಪ್ರಯತ್ನಪಟ್ಟರು ಕೂಡ, ಕುರ್ಚಿ ಸಿಗಲಿಲ್ಲ. ಶಾಸ್ತ್ರೀ ಪ್ರಧಾನಿಯಾದರು. ಶಾಸ್ತ್ರೀಯವರ ಚಿತೆಯ ಬೆಂಕಿ ಕೂಡ ಆರಿರಲಿಲ್ಲ, ಮೊರಾರ್ಜಿ ಪ್ರಧಾನಮಂತ್ರಿಯ ಚೇರ್ ಮೇಲೆ ಟವಲ್ ಹಾಕಿ ತಾನೇ ಪ್ರಧಾನಮಂತ್ರಿಯಾಗಬೇಕೆಂಬ ಕನಸು ಕಾಣಲು ಶುರುಮಾಡಿದ್ದರು.
ಆದರೆ ಕಾಂಗ್ರೆಸ್ ಪಕ್ಷದ ಮೊರಾರ್ಜಿಯನ್ನು ದ್ವೇಷಿಸುವ ಒಂದು ಗುಂಪಿತ್ತು. ಕಾಮರಾಜ್ ಸಹಾಯ ದಿಂದ ಇಂದಿರಾ ಗಾಂಧಿ ಪ್ರಧಾನಮಂತ್ರಿಯಾದರು. ಇಂದಿರಾ ಗಾಂಧಿಗೆ ಮೊರಾರ್ಜಿಯ ಬಯಕೆಯ ಬಗ್ಗೆ ಗೊತ್ತಿತ್ತು. ಮೊರಾರ್ಜಿಗೆ ಉಪ ಪ್ರಧಾನಮಂತ್ರಿ ಪಟ್ಟ ಮತ್ತು ವಿತ್ತ ಮಂತ್ರಿಯ ಸ್ಥಾನವನ್ನು ನೀಡಿದರು. ಮೊರಾರ್ಜಿ ಕನಸು ಕಾಣುತ್ತಿದ್ದರು, ಒಂದಲ್ಲ ಒಂದು ದಿನ ಇಂದಿರಾ ಗಾಂಧಿ ಫೇಲ್ ಆಗಬಹುದು ಮತ್ತು ತಾನು ಪ್ರಧಾನಮಂತ್ರಿ ಆಗಬಹುದು ಅಂತ.
ದಿಲ್ಲಿಯಲ್ಲಿ ಪ್ಲಾನಿಂಗ್ ಕಮಿಷನ್‌ನ ಮೀಟಿಂಗ್ ಇತ್ತು, ಅದರಲ್ಲಿ ದೇಶದ ಎಲ್ಲ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಒಬ್ಬ ಮುಖ್ಯಮಂತ್ರಿ ಇಂದಿರಾ ಗಾಂಧಿಯವರಿಗೆ ಒಂದು ಕ್ಲಿಷ್ಟಕರವಾದ ಪ್ರಶ್ನೆ ಯನ್ನು ಕೇಳಿದ. ಆಗ ಮೊರಾರ್ಜಿ ಮಧ್ಯದಲ್ಲಿ ಬಾಯಿ ಹಾಕಿ ಇಂದಿರಾ ಬೆನ್, ನೀವು ಸುಮ್ಮನಿರಿ, ‘ಲೆಟ್ ಮಿ ಹ್ಯಾಂಡಲ್ ದಿಸ್ ಕ್ವಶ್ಚನ್’ ಅಂತ ಹೇಳಿದರು.
ಇಂದಿರಾ ಗಾಂಧಿಗೆ ಎಲ್ಲ ಮುಖ್ಯಮಂತ್ರಿಗಳ ಎದುರು ಅವಮಾನವಾಯಿತು. ಅದೇ ದಿನ ಅವರು ಡಿಸೈಡ್ ಮಾಡಿದ್ದು, ಈ ಮನುಷ್ಯನನ್ನ ದೂರ ಇಡಬೇಕು ಅಂತ. ಇಂದಿರಾ ಗಾಂಧಿ ಭಾರತದ ಬ್ಯಾಂಕುಗಳ ರಾಷ್ಟ್ರೀಕರಣ ಮಾಡುವ ನಿರ್ಣಯವನ್ನು ತೆಗೆದುಕೊಂಡರು. ಇದಕ್ಕೆ ಮೊರಾರ್ಜಿಯ ವಿರೋಧವಿತ್ತು. ನೀಲಂ ಸಂಜೀವ್ ರೆಡ್ಡಿಯನ್ನು ರಾಷ್ಟ್ರಪತಿ ಮಾಡಲು ಕೂಡ ಅವರಿಬ್ಬರಲ್ಲಿ ಹೊಂದಾಣಿಕೆ ಇರಲಿಲ್ಲ. ಇಬ್ಬರ ವೈಮನಸ್ಯ ತಾರಕಕ್ಕೇರಿತ್ತು.
ಇಂದಿರಾ ಗಾಂಧಿ ಒಂದು ಪತ್ರವನ್ನು ಬರೆದರು ಮೊರಾರ್ಜಿಗೆ. ನಾನು ಯೋಜಿಸುತ್ತಿರುವ ಹೊಸ ಹಣಕಾಸು ನೀತಿ ನಿಮಗೆ ಇಷ್ಟವಾಗಿರಲಿಕ್ಕಿಲ್ಲ, I am taking over your portfolio of finance. ಈ ಅವಮಾನದಿಂದ ಮೊರಾರ್ಜಿ ಕೊನೆವರೆಗೂ ಇಂದಿರಾರನ್ನು ನಖಶಿಖಾಂತ ದ್ವೇಷಿಸಿದರು.
ಸ್ವಮೂತ್ರ ಪಾನಿ ಪ್ರಧಾನಿಯ ಮತ್ತೊಂದು ಘಟನೆ, ಆ.ಎ. ‘ Verghese ಬರೆದ First Draf’ ಪುಸ್ತಕ ದಲ್ಲಿ ದಾಖಲಾಗಿದೆ. ಎಕನಾಮಿ ‘ಲಕ್ಷ್ಮೀಕಾಂತ್ ಝಾ’ ಜತೆಗೆ ಮೊರಾರ್ಜಿ ದೇಸಾಯಿ ಕೆನಡಾಗೆ ಹೋಗಿದ್ದರು. ಮೊರಾರ್ಜಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾಗ ‘ಪಾನ್ ನಿಷೇಧ’ ಕಾಯ್ದೆ ಯನ್ನು ತಂದಂತಹ ವ್ಯಕ್ತಿ. ಅವರು ಸಾರಾಯಿಯನ್ನ ಕುಡಿಯುತ್ತಿರಲಿಲ್ಲ.
ಸಾರಾಯಿ ಕುಡಿಯುವವರನ್ನು ಕೂಡ ಇಷ್ಟಪಡುತ್ತಿರಲಿಲ್ಲ. ನಿಮ್ಮ ‘ಸಾರಾಯಿ ದ್ವೇಷ’ ಗೊತ್ತು. ಸಾರಾಯಿಯನ್ನು ಕುಡಿಯದೆ ಅದನ್ನು ದ್ವೇಷಿಸುವುದು ಹೇಗೆ ಸಾಧ್ಯ ಅಂತ ಅವರ ಮನವೊಲಿಸಿ ಝಾ, ಮೊರಾರ್ಜಿಯನ್ನು ಒಂದು ನೈಟ್ ಕ್ಲಬ್‌ಗೆ ಕರೆದುಕೊಂಡು ಹೋಗುತ್ತಾರೆ. ಕ್ಲಬ್‌ನಲ್ಲಿ ಒಂದು ಹುಡುಗಿ ಬಂದು ಮೊರಾರ್ಜಿಗೆ ಕೇಳುತ್ತಾರೆ,
ವಾಟ್ ಡು ಯು ವಾಂಟ್ ಟು ಡ್ರಿಂಕ್? ಆಗ ಮೊರಾರ್ಜಿ ಹೇಳುತ್ತಾರೆ, ಐ ಡೋಂಟ್ ಡ್ರಿಂಕ್ ಅಂತ. ಎಷ್ಟೇ ಸಾಗಿ ಹಾಕಿದರೂ, ಹುಡುಗಿ ಕದಲದಿದ್ದಾಗ, ಮೊರಾರ್ಜಿ ಗುಡುಗುತ್ತಾರೆ. I dont like girls . ಅವಾಗ ಆ ಹುಡುಗಿ ಹೇಳುತ್ತಾಳೆ, ಹುಡುಗಿಯರನ್ನು ಇಷ್ಟಪಡದೆ ಇರುವವನು ಜೆಂಟಲ್ ಮ್ಯಾನ್ ಆಗಲು ಸಾಧ್ಯವೇ ಇಲ್ಲ ಅಂತ. ಇದು ಕೆನಡಾದ ನೈಟ್‌ಕ್ಲಬ್‌ನಲ್ಲಿ ನಡೆದ ಘಟನೆ. ಇದನ್ನು ಬೇಕಾ ದರೆ ಚಂದ್ರಮೌಳಿಯವರು ವರ್ಗೀಸ್ ಬರೆದ ‘ಫಸ್ಟ್ ಡ್ರಾಫ್ಟ್’ ಪುಸ್ತಕ ಓದಿ ಪರಾಮರ್ಶಿಸ ಬಹುದು.
ಮೊರಾರ್ಜಿಯ ಬಗ್ಗೆ ಹೇಳುವಂತಹ ತುಂಬಾ ಘಟನೆಗಳಿವೆ. ಅವರು ಕೂಡ ನೆಹರುವಿನಂತೆ nominated ಪ್ರಧಾನ ಮಂತ್ರಿ because of ಆಚಾರ್ಯ ಕೃಪಲಾನಿ ಮತ್ತು ಜೆಪಿ (ಜಯಪ್ರಕಾಶ). ಮೊರಾರ್ಜಿಯ ಪುತ್ರಮೋಹದ ಬಗ್ಗೆ ಒಂದು ಪುಸ್ತಕವಷ್ಟು ದಾಖಲೆಯಿದೆ. ಜಗಜೀವನ ರಾಮ್ ಮತ್ತು ಚೌಧರಿ ಚರಣ್ ಸಿಂಗ್ ಜತೆ ಪ್ರತಿ ದಿನವೂ argument ಮಾಡುತ್ತಿದ್ದ ಸ್ವಮೂತ್ರ ಪಾನಿಯ ಬಗ್ಗೆ ನಾನು ಪ್ರತಿವಾರವೂ ಕೂಡ ಬರೆಯಬಹುದು.
"But it is waste of my time and readers' time! ಕೊನೆಯದಾಗಿ, ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ನಿಶಾನ್-ಎ-ಪಾಕಿಸ್ತಾನ್ (ನಮ್ಮ ಭಾರತ ರತ್ನಕ್ಕೆ ಸಮಾನ) ಪ್ರಶಸ್ತಿಯನ್ನು ಭಾರತ ದೇಶದ 3 ವ್ಯಕ್ತಿಗಳಿಗೆ ನೀಡಲಾಗಿದೆ ಎಂಬುದು ಗಮನಾರ್ಹ ಸಂಗತಿ.
ಒಂದು ಮೊರಾರ್ಜಿ ದೇಸಾಯಿ, ಮತ್ತೊಬ್ಬರು ಕಾಶ್ಮೀರ ಪ್ರತ್ಯೇಕತೆ ಹೋರಾಟಗಾರ Syde Ali Shah Geelani, ಮತ್ತೊಬ್ಬರು ಬೋಹ್ರಾ ಪಂಥದ ಧರ್ಮ ಗುರು Syedna Mufaddal Saifuddinn. ಇವಿಷ್ಟ ರಿಂದಲೇ ನಿಮಗೆ ಅರ್ಥವಾಗಬಹುದು, ಆ ಪಟ್ಟಿಯಲ್ಲಿ ಮೊರಾರ್ಜಿ ದೇಸಾಯಿ ಅವರ ಹೆಸರು ಯಾಕಿದೆ? ಈ ವಿಷಯವನ್ನು ಹಿಂದಿನ ಲೇಖನದೊಂದಿಗೆ ಹೋಲಿಕೆ ಮಾಡಿದರೆ ಓದುಗರಿಗೆ ಹೆಚ್ಚಿನ ಸ್ಪಷ್ಟತೆ ದೊರಕುತ್ತೆ.ರಾಮಾಯಣವನ್ನು ರಾಮನು ಬರೆಯಲಿಲ್ಲ.
ಮಹಾಭಾರತ ವನ್ನು ಕೃಷ್ಣನು ಬರೆಯಲಿಲ್ಲ. ಮೊರಾರ್ಜಿಯನ್ನು ಹತ್ತಿರದಿಂದ ಕಂಡವರೇ ಅವರ ಬಗ್ಗೆ ಬರೆದಿದ್ದಾರೆ. ನಾವು ಓದುತ್ತಿರುವ ಇತಿಹಾಸ, ಎಲ್ಲಿಂದಲೋ ಭಾರತಕ್ಕೆ ಬಂದ ಪ್ರವಾಸಿಗಳು ಬರೆದ ಪುಸ್ತಕದ ಆಧಾರದ ಮೇಲೆಯೇ. ನಮಗೆ ಬೇಕಾದ್ದನ್ನು ಮಾತ್ರ ತಿರುಚಿ ಉಳಿದಿದ್ದನ್ನು ಬಿಸಾಡುವುದು ಒಳ್ಳೆಯ ಜಾಯಮಾನವಲ್ಲ.