H R Shripada Bhaagi Column: ಬೂಕರ್ ಪ್ರಶಸ್ತಿಯಿಂದ ಕಳಂಕಿತವಾದ ಮೈಸೂರು ದಸರಾ
ಈ ವರ್ಷದ ದಸರಾ ಹಬ್ಬವನ್ನು ಉದ್ಘಾಟಿಸಲಿರುವ ಮುಖ್ಯ ಅತಿಥಿಗಳ ಆಯ್ಕೆಯ ಬಗ್ಗೆ ಎದ್ದಿರುವ ಅಪಸ್ವರ- ಅಸಮಾಧಾನ ಮತ್ತು ತಮ್ಮ ನಿರ್ಧಾರವನ್ನು ಸಮರ್ಥಿಸು ವುದಕ್ಕೆ ಕೆಲವರು ಕೊಡುತ್ತಿರುವ ಕಾರಣಗಳು. ಉದ್ಘಾಟನೆಗೆ ಆಯ್ಕೆಯಾಗಿರುವ ಅತಿಥಿಯು ಮುಸ್ಲಿಮರೆಂಬುದು ಈ ಅಪಸ್ವರಕ್ಕಿರುವ ಕಾರಣಗಳಲ್ಲೊಂದು. ಈ ಕಾರ್ಯಕ್ರಮವು ಸರಕಾರಿ ಖರ್ಚಿನಲ್ಲಿ ನಡೆಯುತ್ತಿದ್ದು, ಈ ಹಿಂದೆಯೂ ಹಿಂದೂಯೇತರ ಸಾಧಕರಿಂದ ಉದ್ಘಾಟನೆಯಾಗಿರುವ ಉದಾಹರಣೆಗಳಿವೆ.

-

ವಿವಾದ-ವಿಷಾದ
ಎಚ್.ಆರ್.ಶ್ರೀಪಾದ ಭಾಗಿ
ಬಾನು ಮುಷ್ತಾಕರ ಸಾಧನೆ, ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ದಸರೆಯ ಉದ್ಘಾಟನೆಗೆ ಆಹ್ವಾನಿಸಿದ್ದರೆ ಅದರಲ್ಲಿ ತಪ್ಪು ಹುಡುಕುವ ಅಗತ್ಯವಿರಲಿಲ್ಲ; ಆದರೆ ಅವರೀಗ ಈ ಗೌರವಕ್ಕೆ ಪಾತ್ರರಾಗುತ್ತಿರುವುದು ಅವರಿಗೆ ದಕ್ಕಿದ ಪ್ರಶಸ್ತಿಯ ಕಾರಣ ದಿಂದ ಎಂದಾಗಿದ್ದರೆ, ಅದು ದಕ್ಕಲು ಮುಖ್ಯ ಕಾರಣರಾದ ದೀಪಾ ಭಸ್ತಿಯವರನ್ನೂ ಆಹ್ವಾನಿಸಬಹುದಿತ್ತಲ್ಲವೇ?
ಮೈಸೂರು ದಸರಾ ಎಂದ ಕೂಡಲೇ ನಮ್ಮ ಕಣ್ಮುಂದೆ ಬರುವುದು ಮಹಾ ಉತ್ಸವ, ಉತ್ಸಾಹಭರಿತ ಜನಜಾತ್ರೆ ಮತ್ತು ಗಜಪಡೆಯ ರಾಜಗಾಂಭೀರ್ಯದ ನಡಿಗೆ. ಕರ್ನಾಟಕದ ಹೆಮ್ಮೆ ಎನಿಸಿರುವ ದಸರಾ ಆಚರಣೆ ಪ್ರಾರಂಭವಾಗಿದ್ದು ಸುಮಾರು 5 ಶತಮಾನಗಳ ಹಿಂದೆ. ಮೊದಲು ಧಾರ್ಮಿಕ ಕಾರ್ಯಕ್ರಮವಾಗಿದ್ದ ಇದು, ಇಂದು ಧಾರ್ಮಿಕ-ಸಾಂಸ್ಕೃತಿಕ-ಸಾಮಾಜಿಕ ಉತ್ಸವವಾಗಿ ವಿಶ್ವ ಪ್ರಸಿದ್ಧಿಯಾಗಿದೆ.
ಇದನ್ನು ಪ್ರಾರಂಭಿಸಿದವರು ಒಡೆಯರ್ ಅವರ ವಂಶದವರು. ದಸರಾ ಉತ್ಸವಕ್ಕೂ ಸನಾತನ ಹಿಂದೂ ಧರ್ಮಾನುಯಾಯಿಗಳಿಗೂ ಬಿಡಿಸಲಾರದ ಸಂಬಂಧವಿದೆ. ಮಹಾನವಮಿ, ದುರ್ಗಾ ಪೂಜೆ, ನವರಾತ್ರಿ ಅಥವಾ ದಸರಾ ಉತ್ಸವಕ್ಕೆ ಸನಾತನ ಹಿಂದೂ ಪವಿತ್ರ ಗ್ರಂಥ ರಾಮಾಯಣವೇ ಮೂಲ.
ರಾಕ್ಷಸರಾಜ ರಾವಣನ ಮೇಲೆ ಶ್ರೀರಾಮನು ವಿಜಯ ಸಾಧಿಸಿದ್ದನ್ನು ಸ್ಮರಿಸಲು, ಅನ್ಯಾಯದ ವಿರುದ್ಧ ನ್ಯಾಯಕ್ಕೆ ಜಯ ಸಿಕ್ಕಿದ್ದರ ಸಂಕೇತವಾಗಿ, ಕೆಟ್ಟದ್ದರ ಮೇಲೆ ಒಳ್ಳೆಯದು ವಿಜಯ ಸಾಧಿಸುತ್ತದೆ ಎಂಬ ನಂಬಿಕೆಯನ್ನು ನೆನಪಿಸಿಕೊಳ್ಳುವ ಸಲುವಾಗಿ ಈ ಉತ್ಸವವನ್ನು ಪ್ರತಿವರ್ಷ ಬೇರೆ ಬೇರೆ ಹೆಸರಿನಲ್ಲಿ ದೇಶದ ವಿವಿಧ ಭಾಗಗಳಲ್ಲಿ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ.

ಮೈಸೂರು ದಸರಾ ಮತ್ತು ಪಶ್ಚಿಮ ಬಂಗಾಳದ ದುರ್ಗಾಪೂಜೆ ಎರಡೂ ಲೋಕಪ್ರಸಿದ್ಧವೇ. ದೇವರ ಅಸ್ತಿತ್ವದ ಮೇಲಿನ ಜನರ ವಿಶ್ವಾಸ, ನಂಬಿಕೆ ಮತ್ತು ಭಕ್ತಿಯ ಭದ್ರಬುನಾದಿಯ ಮೇಲೆ ಈ ಉತ್ಸವ ಗಳ ಯಶಸ್ಸು ನಿಂತಿದೆ.
ಈ ಪೀಠಿಕೆಗೆ ಕಾರಣ, ಈ ವರ್ಷದ ದಸರಾ ಹಬ್ಬವನ್ನು ಉದ್ಘಾಟಿಸಲಿರುವ ಮುಖ್ಯ ಅತಿಥಿಗಳ ಆಯ್ಕೆಯ ಬಗ್ಗೆ ಎದ್ದಿರುವ ಅಪಸ್ವರ- ಅಸಮಾಧಾನ ಮತ್ತು ತಮ್ಮ ನಿರ್ಧಾರವನ್ನು ಸಮರ್ಥಿಸು ವುದಕ್ಕೆ ಕೆಲವರು ಕೊಡುತ್ತಿರುವ ಕಾರಣಗಳು. ಉದ್ಘಾಟನೆಗೆ ಆಯ್ಕೆಯಾಗಿರುವ ಅತಿಥಿಯು ಮುಸ್ಲಿಮರೆಂಬುದು ಈ ಅಪಸ್ವರಕ್ಕಿರುವ ಕಾರಣಗಳಲ್ಲೊಂದು. ಈ ಕಾರ್ಯಕ್ರಮವು ಸರಕಾರಿ ಖರ್ಚಿನಲ್ಲಿ ನಡೆಯುತ್ತಿದ್ದು, ಈ ಹಿಂದೆಯೂ ಹಿಂದೂಯೇತರ ಸಾಧಕರಿಂದ ಉದ್ಘಾಟನೆಯಾಗಿ ರುವ ಉದಾಹರಣೆಗಳಿವೆ.
ದಸರಾ ಕಾರ್ಯಕ್ರಮದ ಬಗ್ಗೆ ಆಗೊಮ್ಮೆ ಈಗೊಮ್ಮೆ ಅಪಸ್ವರ-ಅಪವಾದಗಳು ಬಂದಿದ್ದರೂ, ಅವು ನೆನಪಿನಂಗಳದಿಂದ ಮಾಸಲು ಬಹಳ ಕಾಲ ಬೇಕಾಗುವುದಿಲ್ಲ. ಆದರೆ ಈ ಬಾರಿ ಅತಿಥಿಗಳನ್ನು ಆಯ್ಕೆ ಮಾಡಿರುವುದು, ಬಾನು ಮುಷ್ತಾಕ್ ಅವರು ಸಾಹಿತಿಗಳು ಮತ್ತು ಅವರ ಕಥೆ-ಕವನಗಳಿಂದ ಸಮಾಜದಲ್ಲಿ ಸಕಾರಾತ್ಮಕ ಪರಿಣಾಮಗಳಾಗುತ್ತಿವೆ ಎಂಬ ಕಾರಣಕ್ಕಲ್ಲ.
ಕಾರಣ ಅದೇ ಆಗಿದ್ದರೆ, ಅವರನ್ನು ಆಯ್ಕೆ ಮಾಡಲು ಇಷ್ಟು ವರ್ಷ ಕಾಯಬೇಕಾಗಿರಲಿಲ್ಲ. ಅವರು ಹುಟ್ಟಿ ಬೆಳೆದು ವಾಸಿಸುತ್ತಿರುವುದು ಕರ್ನಾಟಕದಲ್ಲೇ. ಆದರೆ ಅವರ ಕಥಾಸಂಕಲನಕ್ಕೆ ‘ಬೂಕರ್ ಪ್ರಶಸ್ತಿ’ ಬಂದಿದೆ ಎಂಬುದೇ ನಿಜಕಾರಣ. ಅಂದರೆ, ಅವರನ್ನು ಆಹ್ವಾನಿಸಿರುವುದು ಬೂಕರ್ ಪ್ರಶಸ್ತಿ ಯನ್ನು ಗೌರವಿಸುವುದಕ್ಕಾಗಿಯೇ ಹೊರತು, ಅವರ ಶ್ರಮವನ್ನು ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರನ್ನು ಗೌರವಿಸುವ ಉದ್ದೇಶದಿಂದಲ್ಲ ಎಂಬುದು ಸ್ಪಷ್ಟ.
ಇದನ್ನೂ ಓದಿ: Banu Mushtaq: ಕೋಟಿ ಕನ್ನಡಿಗರ ಪ್ರೀತಿಯ ಮುಂದೆ ಟೀಕೆಗಳು ನಗಣ್ಯ: ಬಾನು ಮುಷ್ತಾಕ್
ಬಾನು ಮುಷ್ತಾಕರ ಕಥಾಸಂಕಲನಕ್ಕೆ ಬೂಕರ್ ಪ್ರಶಸ್ತಿ ಬಂದಿದ್ದರಿಂದ, ಅವರು ಮತ್ತೊಮ್ಮೆ ಬೆಳಕಿಗೆ ಬಂದಿದ್ದಾರೆ, ಮಾಧ್ಯಮಗಳಲ್ಲಿ ಪ್ರಚಾರ ಪಡೆಯುತ್ತಿದ್ದಾರೆ ಎಂಬುದನ್ನು ಅಲ್ಲಗಳೆಯು ವಂತಿಲ್ಲ. ಬಾನು ಮುಷ್ತಾಕ್‌ರನ್ನು ದಸರೆಯ ಉದ್ಘಾಟನೆಗೆ ಸರಕಾರವು ಅಹ್ವಾನಿಸುವಂತಾಗಲು ಈ ಪ್ರಶಸ್ತಿಯೇ ಕಾರಣವೆಂಬುದು ವಿವರಣೆ ಅಗತ್ಯವಿಲ್ಲದ ಸತ್ಯ.
ಬೂಕರ್ ಪ್ರಶಸ್ತಿಯೆಂದರೆ ಏನು, ಯಾರಿಗೆ, ಎಲ್ಲಿ, ಯಾವ ಕಾರಣಕ್ಕೆ ಕೊಡಮಾಡಲಾಗುತ್ತದೆ ಎಂಬುದನ್ನು ಈ ಸಂದರ್ಭದಲ್ಲಿ ಜನರಿಗೆ ತಿಳಿಸಬೇಕಿದೆ. ಇದು ಬ್ರಿಟನ್‌ನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿನ ಸಾಧಕರಿಗೆ ವಾರ್ಷಿಕವಾಗಿ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿ. ‘ಬೂಕರ್ ಪ್ರೈಜ್’ ಪ್ರತಿಷ್ಠಾನದವರು ಮೂಲ ಆಂಗ್ಲಭಾಷೆಯ ಉತ್ಕೃಷ್ಟ ಕಥೆ-ಕಾದಂಬರಿಗಳ ಲೇಖಕರಿಗೆ, ಅವರ ಸಾಧನೆಯನ್ನು ಮತ್ತು ಆಂಗ್ಲ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಇದನ್ನು ಪ್ರದಾನ ಮಾಡುತ್ತಾರೆ. ಈ ಪ್ರಶಸ್ತಿ ಪಡೆಯಲು ಲೇಖಕರು ಮೂಲ ಆಂಗ್ಲಭಾಷೆಯಲ್ಲೇ ತಮ್ಮ ಕೃತಿಯನ್ನು ಬರೆದಿರಬೇಕು ಮತ್ತು ಅದು ಬ್ರಿಟನ್ನಿನಲ್ಲೇ ಪ್ರಕಾಶಿತವಾಗಿರಬೇಕು ಎಂಬುದು ಇಲ್ಲಿ ನೆನಪಿಡ ಬೇಕಾದ ಸಂಗತಿ.
ಇದೇ ಪ್ರತಿಷ್ಠಾನದವರು ನೀಡುವ ಇನ್ನೊಂದು ಗೌರವ- ‘ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ’. ಈ ವಿಭಾಗದಲ್ಲಿ, ಬೇರೆ ಭಾಷೆಗಳಿಂದ ಆಂಗ್ಲಭಾಷೆಗೆ ಅನುವಾದಿತವಾದ ಉತ್ತಮ ಕೃತಿಗಳನ್ನು ಗುರು ತಿಸಿ, ಅದರ ಮೂಲ ಲೇಖಕರು ಮತ್ತು ಅನುವಾದಕರಿಗೆ ಪ್ರಶಸ್ತಿಯನ್ನು ಜಂಟಿಯಾಗಿ ನೀಡಲಾಗು ತ್ತದೆ. ಈ ಅನುವಾದಿತ ಗ್ರಂಥವೂ ಬ್ರಿಟನ್‌ನಲ್ಲೇ ಪ್ರಕಾಶಿತವಾಗಿರಬೇಕು. ಇದನ್ನು ಗಮನಿಸಿದರೆ ಬಾನು ಮುಷ್ತಾಕ್‌ರನ್ನು ಸಾಧಕಿಯಾಗಿ ಮತ್ತೊಮ್ಮೆ ಜನರ ಮುಂದೆ ನಿಲ್ಲಿಸಿದ್ದು ಈ ಪ್ರಶಸ್ತಿಯೇ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ.
ಕನ್ನಡದ ನೆಲಕ್ಕೆ, ಕನ್ನಡದ ಲೇಖಕಿ-ಅನುವಾದಕಿಯರಿಗೆ ಜಂಟಿಯಾಗಿ ಈ ಪ್ರಶಸ್ತಿ ಲಭಿಸಿರುವುದಕ್ಕೆ ಅವರ ಕಥಾಸಂಕಲನವೇ ಮೂಲ. ಅನುವಾದಕಿ ದೀಪಾ ಭಸ್ತಿಯವರ ಶ್ರಮ, ಅನುವಾದಿಸುವಾಗ ಮೂಲ ಆಶಯ ಮತ್ತು ಅಭಿಪ್ರಾಯಗಳಿಗೆ ಧಕ್ಕೆ ಬಾರದಂತೆ ಅವರು ನೋಡಿಕೊಂಡಿದ್ದು, ಈ ನಿಟ್ಟಿನಲ್ಲಿ ತಮ್ಮ ವಿದ್ಯೆ-ವಿವೇಕ-ಅನುಭವಗಳನ್ನು ಅವರು ಬಳಸಿದ್ದು ಕೂಡ ಈ ಪ್ರಶಸ್ತಿ ಬಂದಿರುವುದಕ್ಕೆ ಕಾರಣವಾಗಿವೆ.
ದೀಪಾ ಭಸ್ತಿಯವರು ಬಾನು ಮುಷ್ತಾಕ್‌ರ ಕೃತಿಯನ್ನು ಆಂಗ್ಲಭಾಷೆಗೆ ಅನುವಾದಿಸದಿದ್ದಿದ್ದರೆ ಅಥವಾ ಈ ಕಾರ್ಯದಲ್ಲಿ ಅವರು ತಮ್ಮ ವಿದ್ಯೆ, ವಿವೇಚನೆ, ಭಾಷಾ ಪ್ರೌಢಿಮೆ, ಸಾಹಿತ್ಯಿಕ ಆಸಕ್ತಿ ಮತ್ತು ಅನುಭವವನ್ನು ಸೂಕ್ತವಾಗಿ ಬಳಕೆ ಮಾಡಿರದ್ದಿದ್ದರೆ, ಬಾನು ಮುಷ್ತಾಕರಿಗೆ ಈ ಪ್ರಶಸ್ತಿಯ ಗೌರವ ದಕ್ಕುವುದು ಸಾಧ್ಯವಿರಲಿಲ್ಲ ಎಂಬುದು ಸತ್ಯ.
ಆದ್ದರಿಂದ, ಅವರು ಈ ಪ್ರಶಸ್ತಿಗೆ ಭಾಜನರಾಗುವಲ್ಲಿ ದೀಪಾ ಭಸ್ತಿಯವರ ಯೋಗದಾನ ಎಷ್ಟರ ಮಟ್ಟಿಗೆ ಕಾರಣ ಎಂಬುದನ್ನು ಪುನರುಚ್ಚರಿಸುವ ಅಗತ್ಯವಿಲ್ಲ. ಆದರೆ ಪ್ರಸ್ತುತ ದೀಪಾ ಭಸ್ತಿ ಯವರು ತೆರೆಮರೆಗೆ ಸರಿದಿದ್ದು, ಈ ಪ್ರಶಸ್ತಿಯು ಕೇವಲ ಬಾನು ಮುಷ್ತಾಕರ ಸಾಧನೆಗೆ ಸಂದ ಗೌರವ ಎಂಬಂತೆ ಬಿಂಬಿತವಾಗುತ್ತಿದೆ.
ಬಾನು ಮುಷ್ತಾಕರ ಸಾಧನೆ, ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ದಸರೆಯ ಉದ್ಘಾಟನೆಗೆ ಆಹ್ವಾನಿಸಿದ್ದರೆ ಅದರಲ್ಲಿ ತಪ್ಪು ಹುಡುಕುವ ಅಗತ್ಯವಿರಲಿಲ್ಲ; ಆದರೆ ಅವರೀಗ ಈ ಗೌರವಕ್ಕೆ ಪಾತ್ರರಾಗುತ್ತಿರುವುದು ಅವರಿಗೆ ದಕ್ಕಿದ ಪ್ರಶಸ್ತಿಯ ಕಾರಣದಿಂದ ಎಂದಾಗಿದ್ದರೆ, ಅದು ದಕ್ಕಲು ಮುಖ್ಯ ಕಾರಣರಾದ ದೀಪಾ ಭಸ್ತಿಯವರನ್ನೂ ಆಹ್ವಾನಿಸಬಹುದಿತ್ತಲ್ಲವೇ? ಅವರು ಕೂಡ ಕನ್ನಡದ ಮಣ್ಣಿನಲ್ಲೇ ಜನಿಸಿದವರು, ಕನ್ನಡವನ್ನು ಚೆನ್ನಾಗಿ ಬಲ್ಲವರು.
ಕನ್ನಡದ ಕಥೆ-ಕಾದಂಬರಿಗಳನ್ನು ತಮ್ಮ ಭಾಷಾ ಪ್ರೌಢಿಮೆ ಮತ್ತು ಸಾಹಿತ್ಯಿಕ ಜ್ಞಾನದ ನೆರವಿ ನಿಂದ ಆಂಗ್ಲಭಾಷೆಗೆ ಅನುವಾದಿಸಿ, ಕೇವಲ ಕನ್ನಡದ ಓದುಗರಿಗೆ ಸೀಮಿತವಾಗಿರ ಬಹುದಾಗಿದ್ದ ಕೃತಿಗಳನ್ನು ಜಾಗತಿಕ ಓದುಗರ ಮುಂದಿಡಲು ಯತ್ನಿಸುತ್ತಿರುವ ದೀಪಾ ಅವರೂ ಉತ್ಕೃಷ್ಟ ಬರಹಗಾರ್ತಿಯಲ್ಲವೇ? ಬಾನು ಮುಷ್ತಾಕರಿಗೆ ದಸರೆಯ ಉದ್ಘಾಟನೆಯ ಗೌರವವನ್ನು ಕೊಟ್ಟಿದ್ದ ರಲ್ಲಿ ತಪ್ಪಿಲ್ಲ; ಆದರೆ ಈ ಪ್ರಶಸ್ತಿಯ ಜಂಟಿ ವಿಜೇತೆ ಮತ್ತು ಪ್ರಶಸ್ತಿಗೆ ಕಾರಣೀಭೂತರಾದ ದೀಪಾ ಭಸ್ತಿಯವರನ್ನು ಮರೆತಿದ್ದೇಕೆ?
ಇನ್ನು, ಈ ಉತ್ಸವದ ಧಾರ್ಮಿಕ ವಿಧಿ-ವಿಧಾನಗಳ ಬಗ್ಗೆ ಹೇಳುವುದಾದರೆ, ಉತ್ಸವ ಪ್ರಾರಂಭ ವಾಗುವುದೇ ತಾಯಿ ಚಾಮುಂಡಿ ದೇವಿಯನ್ನು ಅರ್ಚಿಸುವ ಮೂಲಕ. ಈ ಅರ್ಚನೆ ನಡೆಯುವುದು ಸನಾತನ ಹಿಂದೂ ಸಂಪ್ರದಾಯದಂತೆ. ಬಾನು ಮುಷ್ತಾಕ್‌ರ ಮತವು ಮೂರ್ತಿಪೂಜೆಯನ್ನು ಒಪ್ಪುವುದಿಲ್ಲವಾದ್ದರಿಂದ, ಅವರು ಈ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಜನರಲ್ಲಿ/ಭಕ್ತರಲ್ಲಿ ಕುತೂಹಲ ಮತ್ತು ಅಪನಂಬಿಕೆ ಇರುವುದು ಸಹಜವೇ.
ಉದ್ಘಾಟನೆಯ ಬಗ್ಗೆ ಅಪಸ್ವರಗಳೆದ್ದಾಗ ಆಯೋಜಕರು, ಸರಕಾರದ ಸಂಬಂಧಿತ ಸಚಿವರು ಮತ್ತು ಉದ್ಘಾಟನೆಗೆ ಆಹ್ವಾನಿತರಾಗಿರುವ ಬಾನು ಮುಷ್ತಾಕರೇ ಸ್ಪಷ್ಟನೆ ನೀಡಬಹುದಿತ್ತಲ್ಲವೇ? ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಾದರೆ, ಅದರಿಂದ ಬಹುಸಂಖ್ಯಾತ ಭಕ್ತರಿಗೆ ಬೇಸರವಾಗುವುದಿಲ್ಲವೇ? ಹಿಂದೂ ಸಂಪ್ರದಾಯದ ಪ್ರಕಾರ ಪೂಜೆ ಮಾಡದೆಯೇ ದಸರಾ ಉತ್ಸವಕ್ಕೆ ಚಾಲನೆ ನೀಡುವಂತಿಲ್ಲ.
ಪೂಜೆಯಲ್ಲಿ ಪಾಲ್ಗೊಳ್ಳುವ ವಿವಾಹಿತೆಯರಿಗೆ ಅರಿಶಿನ, ಕುಂಕುಮ, ಹೂವು, ಕರಿಮಣಿ ಮತ್ತು ಕಾಲುಂಗುರ ಇವು ‘ಪಂಚ ಆಭರಣ’ಗಳು. ಇವು ಮುತ್ತೈದೆಯರ ಲಕ್ಷಣ ಮತ್ತು ಅವರಿಗೆ ಹಿಂದೂ ಧಾರ್ಮಿಕ ಪೂಜೆಯಲ್ಲಿ ಭಾಗವಹಿಸುವ ಹಕ್ಕು ಇರುತ್ತದೆ. ಹಾಗೆಯೇ ಅರಿಶಿನ, ಕುಂಕುಮ, ಪುಷ್ಪ ಗಳಿಲ್ಲದೆ ಅರ್ಚನೆ ಸಾಧ್ಯವಿಲ್ಲ.
ಸನಾತನ ಹಿಂದೂ ಸಂಪ್ರದಾಯದ ಪ್ರಕಾರ ಚಾಮುಂಡಿ ದೇವಿಯನ್ನು ಅರ್ಚಿಸುವುದಕ್ಕೆ ಬಾನು ಮುಷ್ತಾಕರಿಗೆ ಒಪ್ಪಿಗೆಯಿದ್ದರೆ ಮತ್ತು ಅದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಿದರೆ, ಅವರ ಆಯ್ಕೆಯ ಬಗ್ಗೆ ಎದ್ದಿರುವ ಅಪಸ್ವರಗಳು ತಗ್ಗುವ ಸಾಧ್ಯತೆಗಳಿವೆ.
ಇನ್ನು ಕೆಲವು ಮಹನೀಯರು, ಮಹಿಳೆಯರು, ತಥಾಕಥಿತ ಬುದ್ಧಿಜೀವಿಗಳು, “ದಸರಾ ಉತ್ಸವವು ಕರ್ನಾಟಕದ ನಾಡಹಬ್ಬ. ಇದು ಹಿಂದೂಧರ್ಮಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಚಾಮುಂಡಿ ಬೆಟ್ಟವು ಹಿಂದೂಗಳ ಆಸ್ತಿಯಲ್ಲ" ಎಂಬ ಆಣಿಮುತ್ತುಗಳನ್ನು ಉದುರಿಸಿದ್ದಾರೆ.
ದಸರಾ ಉತ್ಸವದ ಮೂಲಕಾರಣ, ಉದ್ದೇಶ ಮತ್ತು ಅದನ್ನು ಅನೂಚಾನವಾಗಿ ನಡೆಸಿಕೊಂಡು ಬಂದಿರುವ ಸಾಂಪ್ರದಾಯಿಕ ರೀತಿ-ನೀತಿಯನ್ನು ಬಲ್ಲವರಾರೂ ಇಂಥ ಬಾಲಿಶ ಹೇಳಿಕೆಯನ್ನು ನೀಡುವುದಿಲ್ಲ. ಇನ್ನು, ಚಾಮುಂಡಿ ಅಥವಾ ದುರ್ಗೆಯನ್ನು ತಾಯಿಯೆಂದು, ದೇವರೆಂದು ಪೂಜಿಸುವವರು ಭಕ್ತರು. ಆ ತಾಯಿಯ ಆವಾಸಸ್ಥಾನವನ್ನಾಗಲೀ ಅಥವಾ ಅದರ ಸುತ್ತಮುತ್ತಲಿನ ಭೂಮಿಯನ್ನಾಗಲೀ ತಮ್ಮ ಆಸ್ತಿ ಎಂದು ಭಾವಿಸುವಷ್ಟು ಕನಿಷ್ಠ ಮನಸ್ಥಿತಿ ಈ ತಾಯಿಯ ಭಕ್ತರಿಗಿಲ್ಲ.
ಇಲ್ಲಿ ಆ ಗೌರವಾನ್ವಿತ ಲೇಖಕಿಯನ್ನು ಉದ್ಘಾಟನೆಗೆ ಆಯ್ಕೆ ಮಾಡಿರುವುದರಲ್ಲಿ ತಪ್ಪಿಲ್ಲ; ಆದರೆ ಅದರ ಹಿಂದಿರುವ ಕಾರಣ ಮತ್ತು ಅವರು ಉದ್ಘಾಟನಾ ಸಂಬಂಧಿತ ಧಾರ್ಮಿಕ ಆಚರಣೆ-ಸಂಪ್ರದಾಯಗಳನ್ನು ಪಾಲಿಸಬಲ್ಲರೇ ಎಂಬುದು ಮಾತ್ರ ಜನರ ಪ್ರಶ್ನೆ. ದಸರಾ ಉತ್ಸವದ ಹೊಣೆ ಹೊತ್ತವರು ಇದಕ್ಕೆ ಉತ್ತರದಾಯಿಗಳಾಗುತ್ತಾರೆ.
ಉದ್ಘಾಟನೆಗೆ ಒಪ್ಪಿರುವ ಲೇಖಕಿಯೂ, ಧಾರ್ಮಿಕ ಮತ್ತು ಸಾಂಪ್ರದಾಯಿಕ ಆಚರಣೆಗಳಲ್ಲಿನ ತಮ್ಮ ಪಾಲ್ಗೊಳ್ಳುವಿಕೆಯನ್ನು ಸ್ಪಷ್ಟಪಡಿಸಿದರೆ, ಜನರ ಮನಸ್ಸಿನಲ್ಲಿ ಅವರ ಬಗೆಗಿನ ಗೌರವ ಹೆಚ್ಚಾಗುತ್ತದೆ. ಅವರನ್ನು ಧಾರ್ಮಿಕ ಹಿನ್ನೆಲೆಯಿಂದ ನೋಡುವ ಬದಲು, ಓರ್ವ ಲೇಖಕಿಯಾಗಿ, ಸಮಾಜ ಸುಧಾರಕಿಯಾಗಿ ನೋಡಲು ಅದು ಸಹಕಾರಿಯಾಗುತ್ತದೆ.
ಸರಕಾರಿ ಮಟ್ಟದಲ್ಲಿ ಸರಿಯಾಗಿ ಯೋಜಿಸಿ, ಸೂಕ್ತ ವ್ಯಕ್ತಿಯನ್ನು ಆಹ್ವಾನಿಸಿ, ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಯುವಂತೆ ಮಾಡಿದ್ದಿದ್ದರೆ, ಸರಕಾರಕ್ಕಾಗಲೀ ಆಹ್ವಾನಿತ ಅತಿಥಿಗಾಗಲೀ ಮುಜುಗರ ಉಂಟಾಗುವಂಥ ಸಂದರ್ಭವೇ ಬರುತ್ತಿರಲಿಲ್ಲ. ಆದರೀಗ ಬಹುತೇಕರಿಗೆ, ‘ಇದು ಮುಸ್ಲಿಮರನ್ನು ತುಷ್ಟೀಕರಿಸಿ, ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟುಮಾಡುವ ಹುನ್ನಾರ’ ಎಂದು ಅನಿಸುತ್ತಿದೆ.
ಈಗಲೂ ಕಾಲ ಮಿಂಚಿಲ್ಲ, ಸರಕಾರ ಮತ್ತು ಆಹ್ವಾನಿತ ಅತಿಥಿಗಳು ಈ ಬಗ್ಗೆ ಸ್ಪಷ್ಟೀಕರಣ ನೀಡಿ ದರೆ, ಮೈಸೂರು ದಸರಾ ಉತ್ಸವವು ಕಳಂಕರಹಿತವಾಗಿ ನಡೆದು, ಇತಿಹಾಸದ ಪುಟಗಳಲ್ಲಿ ಮತ್ತೊಂದು ಕಪ್ಪುಚುಕ್ಕೆ ಸೇರದಂತಾಗುತ್ತದೆ...
(ಲೇಖಕರು ಎಂಎಸ್‌ಎಂಇ ಸಪೋರ್ಟ್ ಆಂಡ್
ಡೆವಲಪ್‌ಮೆಂಟ್ ಆರ್ಗನೈಸೇಷನ್‌ನ ಸಹ-ಸಂಸ್ಥಾಪಕರು)