ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ಬೆನ್ನಿಗಿರಿಯಲು ಬಂದ ಟರ್ಕಿಗೆ ʼಮೈಸೂರ್‌ ಗುನ್ನʼ

ಟರ್ಕಿಯ ಹೆಗಲ ಮೇಲೆ ಬಂದೂಕವನ್ನಿಟ್ಟು ಭಾರತದೆಡೆಗೆ ಗುರಿ ಮಾಡುವ ಮೂಲಕ ಪಾಕಿಸ್ತಾನವು ಭಾರತದ ಜತೆಗಿನ ಹಣಾಹಣಿಯಲ್ಲಿ ಇದೇ ಮೊದಲ ಬಾರಿಗೆ ವಿದೇಶವೊಂದರ ಸೇನಾಪಡೆಯ ನೇರ ಬೆಂಬಲವನ್ನು ಪಡೆದಂತಾಗಿದೆ. ಆದರೆ, ಈ ‘ಬುಗುರಿ ಆಟ’ದಲ್ಲಿ ತನಗೆ ಭಾರತ ಕಡೆಯಿಂದ ‘ಮೈಸೂರ್ ಗುನ್ನ’ ಬೀಳಲಿದೆ ಎಂಬುದು ಟರ್ಕಿಗೆ ಇನ್ನೂ ಅರಿವಾದಂತಿಲ್ಲ. ಏಕೆಂದರೆ, ಟರ್ಕಿಯ ಈ ವಿಶ್ವಾಸ ಘಾತುಕತನದಿಂದಾಗಿ ಭಾರತದ ಜತೆಗಿನ ಅದರ ದ್ವಿಪಕ್ಷೀಯ ಸಂಬಂಧಕ್ಕೆ ಭಾರಿ ಹೊಡೆತ ಬೀಳಲಿದೆ ಎನ್ನುತ್ತಿದ್ದಾರೆ ವಿಶ್ಲೇಷಕರು

ಬೆನ್ನಿಗಿರಿಯಲು ಬಂದ ಟರ್ಕಿಗೆ ʼಮೈಸೂರ್‌ ಗುನ್ನʼ

ಪಹಲ್ಗಾಮ್‌ನಲ್ಲಿ ಪಾಕ್-ಕೃಪಾಪೋಷಿತ ಉಗ್ರರು ನಡೆಸಿದ ಪೈಶಾಚಿಕ ಕೃತ್ಯಕ್ಕೆ ಭಾರತವು ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಹೆಸರಿನಲ್ಲಿ ತಡವರಿಸಿಕೊಳ್ಳುವಂಥ ಏಟು ನೀಡಿದ್ದು ಸರಿಯಷ್ಟೇ? ಆದರೆ ಈ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ‘ಟರ್ಕಿ’ ಎಂಬ ವಿಶ್ವಾಸಘಾತುಕ ರಾಷ್ಟ್ರವೂ ಕೈಜೋಡಿಸಿತ್ತು ಎಂಬ ಸಂಗತಿಯೀಗ ಬಯಲಾಗಿದೆ. ‘ಅಯ್ಯೋ ಪಾಪ ಅಂದ್ರೆ ಅರ್ಧ ಆಯಸ್ಸು’! ಎಂಬ ಮಾತಿಗೆ ಈಗ ಪುಷ್ಟಿ ಸಿಕ್ಕಂತಾಗಿದೆ.

ನಂಬಿಕೆ ದ್ರೋಹಿ ಟರ್ಕಿ

ಪಹಲ್ಗಾಮ್ ದಾಳಿಯ ಸಂಬಂಧ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ರೂಪು ಗೊಂಡಾಗ, ಟರ್ಕಿಯ ವಿಮಾನವೊಂದು ಒಂದಷ್ಟು ‘ಅಗತ್ಯ ಯುದ್ಧ ಸಾಮಗ್ರಿಗಳನ್ನು’ ಹೊತ್ತು ಪಾಕಿಸ್ತಾನದಲ್ಲಿ ಇಳಿದ ಬಗ್ಗೆ ಸುದ್ದಿಯಾಗಿತ್ತು. ಆದರೆ, ‘ಕೇವಲ ಇಂಧನ ತುಂಬಿಸಿಕೊಳ್ಳಲೆಂದು ಪಾಕಿಸ್ತಾನದಲ್ಲಿ ವಿಮಾನವನ್ನು ಇಳಿಸಲಾಗಿ ತ್ತಷ್ಟೇ’ ಎಂದು ಟರ್ಕಿಯ ವಕ್ತಾರರು ತೇಪೆ ಹಚ್ಚಿ ನುಣುಚಿಕೊಂಡಿದ್ದರು. ಆದರೀಗ ಟರ್ಕಿ ಮೆರೆದಿರುವ ವಿಶ್ವಾಸಘಾತುಕತನ ವನ್ನು ಕಂಡು ಅದರ ನಡೆಯನ್ನು ಅನುಮಾನದ ಕಂಗಳಿಂದ ನೋಡುವಂತಾಗಿದೆ. ಏಕೆಂದರೆ ತನ್ನ ಸಂಕಷ್ಟದ ಸಮಯ ದಲ್ಲಿ ಎರಡೂ ಕೈಗಳಿಂದ ಭಾರತದ ನೆರವನ್ನು ಬಾಚಿಕೊಂಡಿದ್ದ ಟರ್ಕಿ, ಭಾರತದ ಮೇಲಿನ ಪಾಕಿಸ್ತಾನದ ಪ್ರತಿದಾಳಿಯಲ್ಲಿ ಅದೇ ಎರಡು ಕೈಗಳಿಂದ ಡ್ರೋನ್ ಬಾಂಬ್‌ ಗಳನ್ನು ಎಸೆಯುವ ಮೂಲಕ ಬೆನ್ನಿಗಿರಿಯುವ ಕೆಲಸ ಮಾಡಿದೆ.

ಮರೆಗುಳಿ ಟರ್ಕಿ

ಟರ್ಕಿಗೆ ಸವಾಲು-ಸಂಕಷ್ಟ ಎದುರಾದಾಗಲೆಲ್ಲ, ಯಾವ ಭೂರಾಜಕೀಯ ಅಥವಾ ರಾಜತಂತ್ರದ ಲೆಕ್ಕಾಚಾರಕ್ಕೂ ಮುಂದಾಗದೆ, ಹಿಂದೆ-ಮುಂದೆ ನೋಡದೆ ಸಹಾಯಹಸ್ತ ಚಾಚಿದ ರಾಷ್ಟ್ರ ಭಾರತ. 2023ರಲ್ಲಿ ಟರ್ಕಿಯಲ್ಲಿ ಭೀಕರ ಭೂಕಂಪ ಸಂಭವಿಸಿದಾಗ, ‘ಆಪರೇಷನ್ ದೋಸ್ತ್’ ಎಂಬ ಹಣೆಪಟ್ಟಿಯಡಿ ಸಂಪನ್ಮೂಲ ಮತ್ತು ವೈದ್ಯಕೀಯ ನೆರವನ್ನು ಮೊಗೆಮೊಗೆದು ಕೊಟ್ಟ ರಾಷ್ಟ್ರ ಭಾರತ. ಆದರೆ, ‘ಆಪತ್ತಿಗಾದವನೇ ನೆಂಟ’ ಎಂಬ ಕೃತಜ್ಞತೆಯನ್ನು ತೋರುವ ಬದಲಿಗೆ, ಭಾರತದ ಮೇಲಿನ ಪಾಕಿಸ್ತಾನದ ದಾಳಿಗೆ ತನ್ನ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಕೊಡುಗೆಯಾಗಿತ್ತಿತು ಟರ್ಕಿ! ಈ ಬೆನ್ನಿಗಿರಿತದ ನಡೆಯೇ ಈಗ ಜಾಗತಿಕ ಸಮುದಾಯದಲ್ಲಿ ಚರ್ಚೆಗೆ ಒಳಗಾಗಿದೆ.

ಇದನ್ನೂ ಓದಿ: Yagati Raghu Naadig Column: ʼಯುಗʼ ಬದಲಾದರೂ, ʼಯುಗಧರ್ಮʼ ಬದಲಾಗಲಿಲ್ಲವೇ..?!

ವಾಸನೆ ಹೊಡೆದಿತ್ತು

ಹಾಗೆ ನೋಡಿದರೆ, ಪಾಕಿಸ್ತಾನಕ್ಕೆ ಒತ್ತಾಸೆಯಾಗಿ ನಿಂತ ಟರ್ಕಿ, ಡ್ರೋನ್ ಸೇರಿದಂತೆ ಹಲವು ಬಗೆಯ ಶಸ್ತ್ರಾಸ್ತ್ರಗಳನ್ನು ಅದಕ್ಕೆ ನೀಡಿರುವುದರ ಬಗ್ಗೆ ಭಾರತೀಯ ಸೇನಾಪಡೆಗಳಿಗೆ ವಾಸನೆ ಹೊಡೆದಿತ್ತು. ಈಗ ವಿಷಯದ ಆಳಕ್ಕಿಳಿದಂತೆ, ಭಾರತದ ವಿರುದ್ಧದ ದಾಳಿಗೆ ಅದು ಡ್ರೋನ್‌ಗಳನ್ನು ಒದಗಿಸಿದ್ದರ ಜತೆಗೆ, ಮಿಲಿಟರಿ ವಲಯದಲ್ಲಿ ಕಾರ್ಯ ನಿರ್ವಹಿಸುವ ತನ್ನ ಡ್ರೋನ್ ನಿರ್ವಾಹಕ ರನ್ನೂ ಒದಗಿಸಿರುವುದು ಅರಿವಾಗಿದೆ. ಟರ್ಕಿ ನಿರ್ಮಿತ ಡ್ರೋನ್‌ಗಳ ನೆರವಿನಿಂದ ಲೇಹ್‌ನಿಂದ ಶುರುವಾಗಿ ಸರ್ ಕ್ರೀಕ್‌ವರೆಗಿನ 36 ಭಾರತೀಯ ಸೇನಾನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿಗೆ ಪಾಕಿಸ್ತಾನ ಯತ್ನಿಸಿತ್ತು. ಪಾಕ್‌ನ ದಾಳಿಗೆ ಭಾರತ ನೀಡಿದ ಮಾರುತ್ತರಕ್ಕೆ ಟರ್ಕಿಯ ಇಬ್ಬರು ಯೋಧರು ಸತ್ತಿದ್ದು, ಇದು ಹಣಾಹಣಿಯಲ್ಲಿ ವಿಶ್ವಾಸದ್ರೋಹಿ ಟರ್ಕಿಯ ನೇರಭಾಗಿತ್ವಕ್ಕೆ ಸಾಕ್ಷಿ ಯಾಗಿದೆ. ಜತೆಗೆ, ಟರ್ಕಿಯ ಸಲಹೆಗಾರರು ಸದರಿ ಡ್ರೋನ್ ದಾಳಿಯ ಸಮನ್ವಯಕಾರರಾಗಿ ಕಾರ್ಯ ನಿರ್ವಹಿಸಿದ ಸಂಗತಿಯೂ ಬಯಲಾಗಿದೆ.

ಶುರುವಾಗಿದೆ ‘ಪೋಸ್ಟ್ ಮಾರ್ಟಮ್’!

ಭಾರತದ ಉತ್ತರ ಹಾಗೂ ಪಶ್ಚಿಮ ಭಾಗಗಳಲ್ಲಿ ನೆಲೆಗೊಂಡಿರುವ ವಿವಿಧ ಸ್ತರದ ಸೇನಾನೆಲೆಗಳ ಮೇಲೆ ದಾಳಿ ಮಾಡಲೆಂದು ಪಾಕಿಸ್ತಾನವು 350ಕ್ಕೂ ಹೆಚ್ಚು ಡ್ರೋನ್ ಗಳನ್ನು ಬಳಸಿದ್ದುಂಟು. ಇವೆಲ್ಲ ಟರ್ಕಿ ಮೂಲದವು ಎನ್ನಲಾಗಿದ್ದು, ಅವುಗಳ ಅವಶೇಷಗಳನ್ನೆಲ್ಲ ವಿಧಿ ವಿಜ್ಞಾನ ಇಲಾಖೆಯು ಹೆಕ್ಕಿ ಹೆಕ್ಕಿ ತೆಗೆದು ಕೂಲಂಕಷ ಪರೀಕ್ಷೆಯನ್ನು ಕೈಗೊಂಡಿದೆ. ಲಭ್ಯ ಸ್ಥೂಲ ಮಾಹಿತಿ ಯಂತೆ, ಇವು ‘ಟರ್ಕಿಶ್ ಆಸಿಸ್‌ಗಾರ್ಡ್ ಸೊನ್‌ಗರ್ ಡ್ರೋನ್’ ಪ್ರಭೇದಕ್ಕೆ ಸೇರಿದವಾಗಿದ್ದು, ರೋಟರ್‌ನಿಂದ ರೋಟರ್ ವರೆಗೆ 140 ಸೆಂ.ಮೀ.ನಷ್ಟು ಅಗಲವನ್ನು ಹೊಂದಿರುತ್ತವೆ ಮತ್ತು 45 ಕೆ.ಜಿ.ಯಷ್ಟು ಸ್ಫೋಟಕ ಸಾಮಗ್ರಿಯನ್ನು ಹೊತ್ತು ಹಾರಬಲ್ಲವಾಗಿರುತ್ತವೆ.

ದ್ವಿಪಕ್ಷೀಯ ಬಾಂಧವ್ಯಕ್ಕೆ ಪೆಟ್ಟು

ಟರ್ಕಿಯ ಹೆಗಲ ಮೇಲೆ ಬಂದೂಕವನ್ನಿಟ್ಟು ಭಾರತದೆಡೆಗೆ ಗುರಿ ಮಾಡುವ ಮೂಲಕ ಪಾಕಿಸ್ತಾನವು ಭಾರತದ ಜತೆಗಿನ ಹಣಾಹಣಿಯಲ್ಲಿ ಇದೇ ಮೊದಲ ಬಾರಿಗೆ ವಿದೇಶವೊಂದರ ಸೇನಾಪಡೆಯ ನೇರ ಬೆಂಬಲವನ್ನು ಪಡೆದಂತಾಗಿದೆ. ಆದರೆ, ಈ ‘ಬುಗುರಿ ಆಟ’ದಲ್ಲಿ ತನಗೆ ಭಾರತ ಕಡೆಯಿಂದ ‘ಮೈಸೂರ್ ಗುನ್ನ’ ಬೀಳಲಿದೆ ಎಂಬುದು ಟರ್ಕಿಗೆ ಇನ್ನೂ ಅರಿವಾದಂತಿಲ್ಲ. ಏಕೆಂದರೆ, ಟರ್ಕಿಯ ಈ ವಿಶ್ವಾಸಘಾತುಕತನದಿಂದಾಗಿ ಭಾರತದ ಜತೆಗಿನ ಅದರ ದ್ವಿಪಕ್ಷೀಯ ಸಂಬಂಧಕ್ಕೆ ಭಾರಿ ಹೊಡೆತ ಬೀಳಲಿದೆ ಎನ್ನುತ್ತಿದ್ದಾರೆ ವಿಶ್ಲೇಷಕರು. ಇದರ ಮೊದಲ ‘ಗುನ್ನ’ವಾಗಿ ಭಾರತವು ‘ಎಕ್ಸ್’ (ಟ್ವಿಟರ್) ಸಾಮಾಜಿಕ ಮಾಧ್ಯಮದಲ್ಲಿ ಟರ್ಕಿಶ್ ಸುದ್ದಿ ಪ್ರಸಾರಕ ‘ಟಿಆರ್‌ಟಿ ವರ್ಲ್ಡ್’ನ ಖಾತೆಯ ಪ್ರವೇಶಕ್ಕೆ ನಿರ್ಬಂಧವನ್ನು ವಿಧಿಸಿದೆ.

ಹೊತ್ತಿಕೊಂಡಿತು ಸುರ್‌ಸುರ್ ಬತ್ತಿ!

ಭಾರತದ ಮೇಲಿನ ಪ್ರತಿದಾಳಿಗೆ ಪಾಕಿಸ್ತಾನ ಬಳಸಿದ್ದು ಟರ್ಕಿ ನಿರ್ಮಿತ ಡ್ರೋನ್ ಎಂಬ ಸಂಗತಿ ಹೊರಬೀಳುತ್ತಿದ್ದಂತೆ ದೇಶದ ವಿವಿಧೆಡೆ ಆಕ್ರೋಶ-ಅಸಮಾಧಾನಗಳ ಅಲೆಯೆದ್ದಿದೆ. ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡ ಟರ್ಕಿ, ಅದಕ್ಕೀಗ ಭಾರಿ ಬೆಲೆಯನ್ನು ತೆರಬೇಕಾಗಿ ಬಂದಿದ್ದು, ಅದರ ಒಂದಿಷ್ಟು ಝಲಕ್ ಇಲ್ಲಿವೆ:

ಟರ್ಕಿಯಿಂದ ಭಾರತಕ್ಕೆ ಆಮದಾಗುವ ವಸ್ತುಗಳ ಮೇಲೆ ಕೇಂದ್ರ ಸರಕಾರವು ನಿಷೇಧ ಹೇರಬೇಕು ಎಂಬ ಆಗ್ರಹ ತೀವ್ರವಾಗುತ್ತಿದೆ.

ರಾಜಸ್ಥಾನ ರಾಜ್ಯದ ಉದಯಪುರದ ಅಮೃತಶಿಲೆ (ಮಾರ್ಬಲ್ ಮತ್ತಿತರ ದುಬಾರಿ ಮತ್ತು ಅಲಂಕಾರಿಕ ಕಲ್ಲುಗಳ) ಮಾರಾಟಗಾರರು ಟರ್ಕಿ ದೇಶದ ಮಾರ್ಬಲ್‌ಗಳ ಹಂಚಿಕೆ/ವಿತರಣೆಯನ್ನು ನಿಲ್ಲಿಸಿದ್ದಾರೆ. ಅಲ್ಲಿನ ಮಾರ್ಬಲ್ ಸಂಸ್ಕರಣೆಗಾರರ ಸಂಘವು ಟರ್ಕಿಯ ಅಮೃತಶಿಲೆಯ ಆಮದನ್ನು ಈಗಾಗಲೇ ಸ್ಥಗಿತಗೊಳಿಸಿದೆ.

ಮಹಾರಾಷ್ಟ್ರದ ಪುಣೆಯ ಹಣ್ಣಿನ ವ್ಯಾಪಾರಸ್ಥರು ಟರ್ಕಿ ಮೂಲದ ಸೇಬು ಹಣ್ಣಿನ ಮಾರಾಟಕ್ಕೆ ‘ತಾರಮ್ಮಯ್ಯ’ ಎಂದಿದ್ದಾರೆ.

ದೇಶದ ವಿವಿಧೆಡೆಯ ಟ್ರಾವೆಲ್ ಏಜೆಂಟರುಗಳು ಟರ್ಕಿ ದೇಶದೆಡೆಗಿನ ಪ್ರವಾಸದ ಪ್ರಸ್ತಾವಗಳನ್ನು ಈಗಾಗಲೇ ನಿಲ್ಲಿಸಿದ್ದಾರೆ. ‘ಈಸ್ ಮೈ ಟ್ರಿಪ್’ ಮತ್ತು ‘ಇಕ್ಸಿಗೊ’ ದಂಥ ಆನ್‌ಲೈನ್ ಪ್ರಯಾಣ/ಪ್ರವಾಸ ವೇದಿಕೆಗಳು, ಟರ್ಕಿ ಮತ್ತು ಅಜರ್‌ಬೈಜಾನ್‌ನಂಥ ತಾಣಗಳಿಗೆ ಪ್ರಯಾಣಿಸದಂತೆ ಮುನ್ನೆಚ್ಚರಿಕೆ ನೀಡುತ್ತಿವೆ.

ಟರ್ಕಿ ಮತ್ತು ಅಜರ್‌ಬೈಜಾನ್ ದೇಶಗಳಿಗೆ ಈಗಾಗಲೇ ಪ್ರವಾಸಕ್ಕೆ ಕಾದಿರಿಸಿದ್ದವರು ಭಾರಿ ಪ್ರಮಾಣ ದಲ್ಲಿ ಅದನ್ನು ರದ್ದುಗೊಳಿಸಿದ್ದಾರೆ. ಜತೆಗೆ, ಈ ಎರಡೂ ದೇಶಗಳಲ್ಲಿ ಯಾವುದೇ ಚಲನಚಿತ್ರಗಳ ಚಿತ್ರೀಕರಣಕ್ಕೆ ಯೋಜಿಸಬಾರದು ಎಂಬುದಾಗಿ ಭಾರತೀಯ ಚಲನಚಿತ್ರ ಕಲಾವಿದರ ಸಂಘಟನೆ ಯು ದೇಶದ ವಿವಿಧೆಡೆಗಳ ಚಿತ್ರನಿರ್ಮಾತಗಳನ್ನು ಕೋರಿದೆ.

‘ಟರ್ಕಿಯಲ್ಲಿ ಡೆಸ್ಟಿನೇಷನ್ ಮದುವೆ ಏರ್ಪಡಿಸುವ ಗೋಜಿಗೆ ಹೋಗಬೇಡಿ’ ಎಂದು ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಮತ್ತು ಶಿವಸೇನೆ ಪಕ್ಷದ ಉದ್ಧವ್ ಬಣದ ಸಂಸದೆ ಪ್ರಿಯಾಂಕಾ ಚತುರ್ವೇದಿ ಕರೆ ನೀಡಿದ್ದಾರೆ.

ವಹಿವಾಟಿನ ಪಕ್ಷಿನೋಟ

ಭಾರತವು ಟರ್ಕಿ ದೇಶಕ್ಕೆ ಇಂಧನ, ಖನಿಜ, ಸಾವಯವ ರಾಸಾಯನಿಕ ಗಳು, ಕಬ್ಬಿಣ ಮತ್ತು ಉಕ್ಕು, ಔಷಧೋತ್ಪನ್ನಗಳು, ಟ್ಯಾನಿಂಗ್ ಮತ್ತು ಡೈಯಿಂಗ್ ಸಾಮಗ್ರಿಗಳು, ಪ್ಲಾಸ್ಟಿಕ್, ರಬ್ಬರ್, ಹತ್ತಿ, ನಾರಿನ ಉತ್ಪನ್ನಗಳು, ವಿದ್ಯುತ್ ಸಾಧನ-ಸಲಕರಣೆಗಳು, ವಾಹನಗಳು ಮತ್ತು ಅದರ ಬಿಡಿಭಾಗಗಳು ಹೀಗೆ ವೈವಿಧ್ಯಮಯ ವಸ್ತುಗಳನ್ನು ರಫ್ತು ಮಾಡುತ್ತದೆ.

ಈ ಪ್ರಮಾಣವು ಭಾರತದ ಒಟ್ಟು ರಫ್ತಿನಲ್ಲಿ ಶೇ.105ರಷ್ಟು ಭಾಗವನ್ನು ಪ್ರತಿನಿಧಿಸುತ್ತದೆ. ಮತ್ತೊಂದೆಡೆ, ಬ್ಲಾಕ್‌ಗಳು ಮತ್ತು ಚಪ್ಪಡಿಗಳು ಸೇರಿದಂತೆ ವಿವಿಧ ಸ್ವರೂಪ ಮತ್ತು ಪ್ರಭೇದದ ಅಮೃತಶಿಲೆಗಳು, ಸೇಬುಹಣ್ಣು, ಸುಣ್ಣ ಮತ್ತು ಸಿಮೆಂಟ್, ಖನಿಜ ತೈಲ ಮುಂತಾದವನ್ನು ಟರ್ಕಿ ಯಿಂದ ಭಾರತ ಆಮದು ಮಾಡಿಕೊಳ್ಳುತ್ತದೆ.

ಇನ್ನು ಅಜರ್‌ಬೈಜಾನ್‌ಗೆ ಭಾರತದಿಂದ ತಂಬಾಕು ಮತ್ತು ತಂಬಾಕಿನ ಉತ್ಪನ್ನಗಳು, ಸೆರಾಮಿಕ್ ಉತ್ಪನ್ನಗಳು, ಚಹಾ-ಕಾಫಿ, ಧಾನ್ಯ, ಕಾಗದ ಮತ್ತು ಕಾಗದದ ಬೋರ್ಡ್ ಮುಂತಾದವು ರಫ್ತಾದರೆ, ಅಲ್ಲಿಂದ ಭಾರತಕ್ಕೆ ಸುಗಂಧ ದ್ರವ್ಯಗಳು, ಕಚ್ಚಾ ಚರ್ಮ ಮತ್ತು ಚರ್ಮದ ಉತ್ಪನ್ನಗಳು, ಪಶು ಆಹಾರ ಮುಂತಾದವು ಆಮದಾಗುತ್ತವೆ. ಭಾರತದ ಮೇಲೆ ಪಾಕಿಸ್ತಾನ ಕೈಗೊಂಡ ಪ್ರತಿದಾಳಿಯಲ್ಲಿ ಟರ್ಕಿ ಮತ್ತು ಅಜರ್‌ಬೈಜಾನ್ ಕೈಜೋಡಿಸಿದ್ದರ ಫಲವಾಗಿ ಮೇಲೆ ಉಲ್ಲೇಖಿಸಿರುವ ಆಮದು-ರಫ್ತುಗಳಿಗೆ ಕತ್ತರಿ ಬೀಳುವ ನಿರೀಕ್ಷೆಯಿದೆ.

ಮಾಲ್ಡೀವ್ಸ್‌ಗೂ ಮಾಂಜಾ!

ಹಿಂದೊಮ್ಮೆ ಬೇರೊಂದು ಕಾರಣಕ್ಕೆ ಹೀಗೆಯೇ ಕೊಬ್ಬು ತೋರಿಸಿ ಗುನ್ನಾ ಹೊಡೆಸಿಕೊಂಡಿತ್ತು ಮಾಲ್ಡೀವ್ಸ್. ಭಾರತ ಸೇರಿದಂತೆ ವಿವಿಧ ದೇಶಗಳಿಂದ ಬರುವ ಪ್ರವಾಸಿಗರನ್ನೇ ನೆಚ್ಚಿಕೊಂಡಿರು ವಂಥದ್ದು ಮಾಲ್ಡೀವ್ಸ್‌ನ ಪ್ರವಾಸೋದ್ಯಮ. ಆದರೆ ಅಲ್ಲಿನ ಸಚಿವರೊಬ್ಬರು ಭಾರತದ ಪ್ರಧಾನಿ ಮೋದಿಯವರ ವಿರುದ್ಧವೇ ಕಾರಣವಲ್ಲದ ಕಾರಣಕ್ಕೆ ಟೀಕಿಸಿದ್ದರು ಮತ್ತು ಅಲ್ಲಿನ ಸರಕಾರವೂ ಅದಕ್ಕೆ ಗಾಳಿ ಹಾಕಿತ್ತು.

ಇದಕ್ಕೆ ಪ್ರತಿಯಾಗಿ ಮಾಲ್ಡೀವ್ಸ್ ವಿರುದ್ಧ ಒಂದಿಷ್ಟು ‘ರಾಜತಾಂತ್ರಿಕ ಗೂಸಾ’ ನೀಡಲು ಭಾರತ ಮುಂದಾಗಿದ್ದಕ್ಕೆ ಸ್ಪಂದಿಸಿದ ಭಾರತೀಯರು ತಮ್ಮ ಪ್ರವಾಸ/ಹೋಟೆಲ್ ಕಾದಿರಿಸುವಿಕೆ ಇತ್ಯಾದಿ ಗಳನ್ನು ರದ್ದುಗೊಳಿಸಿದ್ದರು. ಇದರಿಂದಾಗಿ ತನ್ನ ಆರ್ಥಿಕತೆಗೆ ಪೆಟ್ಟುಬಿದ್ದಾಗ ಮಾಲ್ಡೀವ್ಸ್‌ಗೆ ಬುದ್ಧಿ ಬಂದು ಭಾರತದ ಮುಂದೆ ಮಂಡಿಯೂರಿ ಕ್ಷಮೆ ಕೇಳಿತ್ತು. ಪ್ರಾಯಶಃ, ಟರ್ಕಿ-ಅಜರ್‌ ಬೈಜಾನ್‌ ಗಳಿಗೂ ಇದೇ ಗತಿ ಒದಗುವ ಸಾಧ್ಯತೆಯಿದೆ.

*

“ಭಾರತವು ವಾರ್ಷಿಕ ಸುಮಾರು 18 ಲಕ್ಷ ಟನ್ ಗಳಷ್ಟು ಅಮೃತಶಿಲೆಯನ್ನು ಆಮದು ಮಾಡಿ ಕೊಳ್ಳುತ್ತಿದ್ದು ಇದರಲ್ಲಿ ಟರ್ಕಿ ದೇಶದ್ದೇ ಸಿಂಹಪಾಲು (ಶೇ.70ರಷ್ಟು) ಇದೆ ಮತ್ತು ಈ ವಹಿವಾಟಿನ ಮೌಲ್ಯ ಸುಮಾರು 3000 ಕೋಟಿ ರುಪಾಯಿಗಳವರೆಗಿದೆ. ಆದರೆ, ಯಾವುದೇ ವ್ಯಾಪಾರ ಅಥವಾ ಉದ್ಯಮವು ರಾಷ್ಟ್ರೀಯ ಹಿತಾಸಕ್ತಿಗಿಂತ ದೊಡ್ಡದೇನಲ್ಲ. ದೇಶದ ವ್ಯಾಪಾರ ಸಂಘಟನೆಗಳು ಒಗ್ಗಟ್ಟಾಗಿ ನಿಂತು ಟರ್ಕಿಯಿಂದಾಗುವ ಸರಕುಗಳ ಆಮದಿನ ವಿರುದ್ಧ ದನಿಯೆತ್ತಿದರೆ, ಅದುವೇ ರಾಷ್ಟ್ರೀಯ ಏಕತೆಯ ಸದೃಢ ಸಂಕೇತವಾಗುತ್ತದೆ. ಈ ಪರಿಪಾಠ ದಿಂದಾಗಿ ‘ಭಾರತೀಯ ಉದ್ಯಮ ಗಳು ಸಂಕಷ್ಟದ ಸಮಯದಲ್ಲಿ ಸರಕಾರವನ್ನು ಬೆಂಬಲಿಸುತ್ತವೆ’ ಎಂಬ ಸಂದೇಶವು ವಿಶ್ವಕ್ಕೆ ರವಾನೆಯಾದಂತಾಗುತ್ತದೆ"

- ಕಪಿಲ್ ಸುರಾನಾ (ಅಧ್ಯಕ್ಷರು) ಮತ್ತು ಹಿತೇಶ್

ಪಟೇಲ್ (ಕಾರ್ಯದರ್ಶಿ), ಉದಯಪುರ

ಮಾರ್ಬಲ್ ಪ್ರೊಸೆಸರ್ಸ್ ಅಸೋಸಿಯೇಷನ್