ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಸದ್ವರ್ತನೆಯಿಂದ ಶಿವನನ್ನು ಮೆಚ್ಚಿಸಿದ ನಾಭಾಗ

ಸತ್ಯದ ಹಾದಿಯಲ್ಲಿ ಪ್ರಾಮಾಣಿಕವಾಗಿ ಬದುಕುವವರ ಜತೆ ಭಗವಂತನ ಅನುಗ್ರಹ ಸದಾ ಇರುತ್ತದೆ. ನಮ್ಮ ಪ್ರಯತ್ನಗಳಿಗೆ ಭಗವಂತನ ಆಶೀರ್ವಾದ, ಸ್ನೇಹಿತರ, ಹಿತೈಷಿಗಳ ಸಹಕಾರ ಖಂಡಿತ ಸಿಕ್ಕೇ ಸಿಗುತ್ತದೆ. ತುಳಿಯುವವರಿಗೆ ಒಂದು ದಾರಿಯಾದರೆ, ಬೆಳೆಯುವವರಿಗೆ ನೂರು ದಾರಿ ಇದ್ದೇ ಇರುತ್ತದೆ. ಆದ್ದರಿಂದ ಇಂಥ ವಿಷಯಗಳಿಗೆ ತಲೆ ಕೆಡಿಸಿಕೊಳ್ಳದೆ, ನಾವು ನಂಬಿರುವ ವಿದ್ಯೆ-ಬುದ್ಧಿಯಿಂದ ಬದುಕು ಕಟ್ಟಿಕೊಳ್ಳಬೇಕು.

ಒಂದೊಳ್ಳೆ ಮಾತು

rgururaj628@gmail.com

ಮಹಾರಾಜ ನಾಭಾಗ, ‘ನಾಭಾ’ ಹೆಸರಿನ ಮನುವಿನ ಪುತ್ರ. ಈತ ದೀರ್ಘಕಾಲದವರೆಗೆ ಗುರುಕುಲ ದಲ್ಲಿ ವ್ಯಾಸಂಗ ಮಾಡುತ್ತಿದ್ದ. ನಾಭಾಗನು ಬಹು ವರ್ಷವಾದರೂ ಮರಳಿಬಾರದಿದ್ದುದರಿಂದ, ಆತನೆ ಸಂನ್ಯಾಸಿಯಾಗುವ ವ್ರತ ಕೈಗೊಂಡಿರಬೇಕೆಂದು ತಿಳಿದ ಅವನ ಹಿರಿಯ ಸಹೋದರರು, ರಾಜ್ಯದಲ್ಲಿ ಅವನಿಗೆ ಪಾಲು ಕೊಡಬೇಕೆನ್ನುವುದನ್ನು ಪರಿಗಣಿಸದೆ, ಸ್ವಾರ್ಥದಿಂದ ಎಲ್ಲವನ್ನೂ ತಮ್ಮ ತಮ್ಮಲ್ಲೇ ಹಂಚಿಕೊಂಡುಬಿಟ್ಟರು.

ನಾಭಾಗ ಹಿಂದಿರುಗಿದಾಗ ಅವನ ಅಣ್ಣಂದಿರು, ತಂದೆಯನ್ನೇ ಅವನ ಪಾಲಿನ ಆಸ್ತಿ ಎಂದರು. ತಂದೆಯನ್ನು ನಾಭಾಗನ ಜತೆಯಲ್ಲಿ ರಾಜ್ಯದಿಂದ ಆಚೆ ಕಳುಹಿಸಿಕೊಟ್ಟರು. ತನ್ನ ಕಣ್ಣೆದುರೇ ನಾಭಾಗನನ್ನು ವಂಚಿಸಿದ ತನ್ನ ಇತರ ಮಕ್ಕಳ ಬಗ್ಗೆ ತಂದೆಗೆ ಬೇಸರವಾಯಿತು.

ಹೀಗಾಗಿ ಅವನ ಮೇಲೆ ಕರುಣೆ ತೋರಿ ಎರಡು ವಿಶೇಷ ಮಂತ್ರಗಳನ್ನು ಹೇಳಿಕೊಟ್ಟನು. ಜತೆಗೆ, “ಆಂಗೀರಸನ ವಂಶಸ್ಥರು ಈಗೊಂದು ಮಹಾಯಜ್ಞವನ್ನು ಕೈಗೊಂಡಿರುವರು. ಅವರೆಷ್ಟೇ ಬುದ್ಧಿಶಾಲಿಗಳಾಗಿದ್ದರೂ ಯಾಗದ ಪ್ರತಿ ಆರನೇ ದಿನ ಭ್ರಾಂತರಾಗಿ ಮಂತ್ರವನ್ನು ತಪ್ಪು ತಪ್ಪಾಗಿ ಹೇಳುವರು.

ಇದನ್ನೂ ಓದಿ: Roopa Gururaj Column: ಕೆಟ್ಟ ನೆನಪುಗಳ ದುರ್ಗಂಧ

ಆ ಸಮಯದಲ್ಲಿ ನೀನು ಅಲ್ಲಿ ಉಪಸ್ಥಿತನಿದ್ದು ಅದನ್ನು ಸರಿಪಡಿಸು. ಸಂತುಷ್ಟರಾಗುವ ಅವರು ಯಜ್ಞದ ನಂತರ ಉಳಿಯುವ ಸಂಪತ್ತನ್ನು ನಿನಗೆ ನೀಡುವರು" ಎಂದು ಕಿವಿಮಾತು ಹೇಳಿದನು. ಅದರಂತೆ ನಾಭಾಗನು ಯಜ್ಞಶಾಲೆಗೆ ಹೋಗಿ ವೈಶ್ವದೇವನನ್ನು ಕುರಿತ ಮಂತ್ರಗಳನ್ನು ಪಠಿಸಿದನು. ಆಂಗೀರಸನ ವಂಶಸ್ಥರು ಅವನಿಗೆ ಉಳಿದ ಸಂಪತ್ತನ್ನು ನೀಡುತ್ತಿರುವಾಗ ಉತ್ತರ ದಿಕ್ಕಿನಿಂದ ಕಪ್ಪು ಬಣ್ಣದ ವ್ಯಕ್ತಿಯೊಬ್ಬ ಅಲ್ಲಿಗೆ ಬಂದು, “ಈ ಯಜ್ಞಸ್ಥಳದ ಎಲ್ಲ ಸಂಪತ್ತೂ ನನಗೆ ಸೇರಬೇಕು" ಎಂದು ತಡೆದನು.

ಎಷ್ಟು ಚರ್ಚಿಸಿದರೂ ಪರಿಹಾರ ಸಿಗದಿದ್ದಾಗ ಅವರಿಬ್ಬರೂ ವ್ಯಾಜ್ಯ ಪರಿಹಾರಕ್ಕಾಗಿ ಅಲ್ಲಿಗೆ ಆಗಮಿಸಿದ್ದ ನಾಭಗನನ್ನು ಆಶ್ರಯಿಸಿದರು. ನಡೆದ ಎಲ್ಲವನ್ನೂ ಕೂಲಂಕಷವಾಗಿ ವಿಚಾರಿಸಿದ ನಾಭಾಗನು ಯಜ್ಞ ನಡೆಸುವಾಗ ಋಷಿಗಳು ಎಲ್ಲ ಸಂಪತ್ತನ್ನೂ ಅದಾಗಲೇ ಶಿವನಿಗೆ ಅರ್ಪಿಸಿದ್ದನ್ನು ಮನಗಂಡನು.

ಅದರಂತೆ, ಆ ಎಲ್ಲವನ್ನು ಶಿವನಿಗೇ ಅರ್ಪಿಸುವಂತೆ ಆಂಗೀರಸನ ವಂಶಸ್ಥರಿಗೆ ಹೇಳಿದನು. ಅದೃಷ್ಟ ವಶಾತ್ ಆ ಕಪ್ಪು ಬಣ್ಣದ ವ್ಯಕ್ತಿಯು ಶಿವನೇ ಆಗಿರಲು, ಸಹರ್ಷದಿಂದ ನಾಭಾಗನು ಸಂಪತ್ತನ್ನೆ ಶಿವನಿಗೆ ಅರ್ಪಿಸಿ ಕರುಣೆಗಾಗಿ ಯಾಚಿಸಿದನು. ನಾಭಾಗನ ಸದ್ವರ್ತನೆಯಿಂದ ಸಂತಸಗೊಂಡ ಪರಶಿವ ಆತನ ಮೇಲೆ ಕೃಪೆದೋರಿ ಎಲ್ಲ ಸಂಪತ್ತನ್ನೂ ನಾಭಾಗನಿಗೆ ಮರಳಿಸಿ, ಜತೆಗೆ ದಿವ್ಯಜ್ಞಾನ ವನ್ನೂ ಕರುಣಿಸಿ ಅಂತರ್ಧಾನನಾದನು.

ಭಾಗವತದ ಈ ಕಥೆಯಲ್ಲಿ ನಮಗೆ ದೊಡ್ಡ ಜೀವನಪಾಠಗಳು ಸಿಗುತ್ತವೆ. ಕೆಲವೊಮ್ಮೆ ಕುಟುಂಬ ದಲ್ಲಿಯೂ ಇಂಥ ಪರಿಸ್ಥಿತಿಗಳು ಎದುರಾಗುತ್ತವೆ. ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು, ಸಂಬಂಧ ವನ್ನು ಮರೆತು ಆಸ್ತಿಗಾಗಿ ಸ್ವಾರ್ಥದಿಂದ ಒಡಹುಟ್ಟಿದವರನ್ನೇ ವಂಚಿಸುತ್ತಾರೆ. ಜತೆಯಲ್ಲಿ ಹುಟ್ಟಿ ರಕ್ತ ಹಂಚಿಕೊಂಡು ಬೆಳೆದವರೇ ಈ ರೀತಿ ಮಾಡಿದಾಗ ಮನಸು ಒಡೆದು ಹೋಗುತ್ತದೆ.

ಎಲ್ಲರ ಮೇಲೂ ನಂಬಿಕೆ ಹೊರಟುಹೋಗುತ್ತದೆ. ಆದರೆ ನಮ್ಮ ವಿದ್ಯೆ, ಬುದ್ಧಿ, ಸಂಸ್ಕಾರಗಳನ್ನು ನೆಚ್ಚಿಕೊಂಡು ಬದುಕನ್ನು ಕಟ್ಟಿಕೊಂಡಿರುವಾಗ ಎಲ್ಲಿಂದಲೋ ಸಿಗುವ ಆಸ್ತಿ, ತೋರಿಕೆಗಾಗಿ ಜತೆಗಿ ರುವ ನೆಂಟರು ಇವರೆಲ್ಲರನ್ನೂ ಮೀರಿ ಬೆಳೆದುಬಿಡಬಹುದು. ಅನಗತ್ಯವಾಗಿ ಕಳೆದುಹೋದ ಆಸ್ತಿ-ದುಡ್ಡಿಗೆ ಬೇಸರಪಟ್ಟುಕೊಳ್ಳದೆ, ಸಮಾಜಮುಖಿಯಾಗಿ ಬದುಕಿ ನಾಲ್ಕು ಜನ ‘ಅಹುದು’ ಎನ್ನುವಂತೆ ಬೆಳೆದು ತೋರಿಸಬೇಕು.

ಸತ್ಯದ ಹಾದಿಯಲ್ಲಿ ಪ್ರಾಮಾಣಿಕವಾಗಿ ಬದುಕುವವರ ಜತೆ ಭಗವಂತನ ಅನುಗ್ರಹ ಸದಾ ಇರುತ್ತದೆ. ನಮ್ಮ ಪ್ರಯತ್ನಗಳಿಗೆ ಭಗವಂತನ ಆಶೀರ್ವಾದ, ಸ್ನೇಹಿತರ, ಹಿತೈಷಿಗಳ ಸಹಕಾರ ಖಂಡಿತ ಸಿಕ್ಕೇ ಸಿಗುತ್ತದೆ. ತುಳಿಯುವವರಿಗೆ ಒಂದು ದಾರಿಯಾದರೆ, ಬೆಳೆಯುವವರಿಗೆ ನೂರು ದಾರಿ ಇದ್ದೇ ಇರು ತ್ತದೆ. ಆದ್ದರಿಂದ ಇಂಥ ವಿಷಯಗಳಿಗೆ ತಲೆ ಕೆಡಿಸಿಕೊಳ್ಳದೆ, ನಾವು ನಂಬಿರುವ ವಿದ್ಯೆ-ಬುದ್ಧಿಯಿಂದ ಬದುಕು ಕಟ್ಟಿಕೊಳ್ಳಬೇಕು.

ನಮ್ಮನ್ನು ನಂಬಿದವರಿಗೆ ಎಂದಿಗೂ ನಮ್ಮ ಬಗ್ಗೆ ಭರವಸೆ ಇದ್ದೇ ಇರುತ್ತದೆ. ಅವರು ನಮ್ಮ ಬೆನ್ನಿಗೆ ಇದ್ದೇ ಇರುತ್ತಾರೆ. ನಂಬದವರು ಅದೆಷ್ಟೇ ಜನ್ಮ ಎತ್ತಿ ಬಂದರೂ ನಮ್ಮವರಾಗುವುದಿಲ್ಲ.

ರೂಪಾ ಗುರುರಾಜ್

View all posts by this author