ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Srivathsa Joshi Column: ನಂಜುಂಡಸ್ವಾಮಿಯವರ ಗಿನ್ನಡ ಮತ್ತು ಗಿಗೀ ಪದಗಳು

ಗಂಡಹೆಂಡಿರ ಜಗಳ ಬಹುಸ್ವೀಕೃತ ಲೋಕರೂಢಿಯೇ ತಾನೆ? ಅಂತಹ ಜಗಳಗಳು ಉಂಡು ಮಲಗುವ ತನಕ ಮಾತ್ರ ಇರುವುದು ಎನ್ನುವುದೂ ಗೊತ್ತಿದ್ದದ್ದೇ. ಹಾಗಾಗಿ ಜಗಳವನ್ನು ಬದಿಗಿಟ್ಟು ವಿಷಯ ವನ್ನಷ್ಟೇ ನೋಡಬೇಕು. ವಿಷಯ ಏನೆಂದರೆ ಮೇಲಿನ ಸಂಭಾಷಣೆಯಲ್ಲಿ ಬರುವ ಗಿಲ್ಯ, ಗಿದ್ನೇಕಾಯಿ, ಗೀಲಂಗಿ, ಗಿಂಕೆ, ಗೀರು ಮುಂತಾದ ಪದಗಳು.

ತಿಳಿರುತೋರಣ

ಅಡಿಗೆ ಏನು ಈವತ್ತು? ಪಲ್ಯ ಗಿಲ್ಯ ಮಾಡಿದ್ದೀಯೋ ಇಲ್ಲ ಯಥಾಪ್ರಕಾರ ಅನ್ನ ಸಾರೋ?" “ಈವತ್ತು ಅನ್ನ-ಸಾರನ್ನೇ ತಿನ್ನಬೇಕು. ಯಾಕಂದ್ರೆ ಬದ್ನೆಕಾಯ್ ತರೋಣಾಂತ ಗ್ರೋಸರಿ ಸ್ಟೋರ್‌ಗೆ ಹೋಗಿದ್ದೆ, ಆ ಅಂಗಡಿ ಮೂರು ಕಾಸಿನ ಪ್ರಯೋಜನವಿಲ್ಲದ್ದು. ಎಷ್ಟು ಹುಡುಕಿದ್ರೂ ಬದ್ನೇಕಾ ಯೂ ಇಲ್ಲ ಗಿದ್ನೇಕಾಯೂ ಇಲ್ಲ. ಬರಿಗೈಯಲ್ಲೇ ಬಂದೆ." “ಸರಿ. ನಿನಗೆ ಅಷ್ಟೇ ಸಾಕು ನೆಪ.

ಬದ್ನೇಕಾಯಿ ಇಲ್ದಿದ್ರೇನು? ಮೂಲಂಗೀನೋ ಗೀಲಂಗೀನೋ ತರಬಹುದಿತ್ತಲ್ವಾ? ನಿನಗೆ ಗೊತ್ತಿಲ್ವೇ ನನಗೆ ಮೂಲಂಗಿ ಹುಳಿ ಅಂದ್ರೆ ಪಂಚಪ್ರಾಣ ಅಂತ?" “ಓಹೋಹೋ... ಮೊನ್ನೆ ತಾನೆ ಹೇಳಿದ್ರಿ. ನನಗೆ ಎರಡೆರಡು ದಿನಕ್ಕೆ ಮೂಲಂಗಿ ಹುಳಿ ತಿಂದು ಬೇಸರವಾಗಿದೆ, ಇನ್ನು ಮೂರು ತಿಂಗಳು ಮೂಲಂಗಿ ಮುಟ್ಟೋದಿಲ್ಲ ಅಂತ? ಮಾತಿಗೆ ಅಂಕೆ ಗಿಂಕೆ ಏನೂ ಬೇಡ್ವೇ?" “ಸರಿ ಬಿಡು.

ಸಾರೋ ಗೀರೋ ಏನು ಮಾಡಿದ್ದೀಯೋ ತಿಂದು ಹೊಟ್ಟೆ ತುಂಬಿಸ್ಕೊಳ್ತೀನಿ." ಇದ್ಯಾವುದಿದು ಮುದ್ದಣ-ಮನೋರಮೆಯರ ಹೊಸ ಬಗೆಯ ಸಲ್ಲಾಪ? ಅಥವಾ ಮುದ್ದಣ ಮನೋರಮೆಯರ ಅಪರಾವತಾರ ಎಂಬಂತೆ ಹೊಸದೊಂದು ಸತಿ-ಪತಿ ಜೋಡಿ ಬಂದಿದೆಯೇ? ಇದು ಅವರ ಸಂವಾದವೇ? ಅಂತೆಲ್ಲ ನೀವು ಯೋಚಿಸತೊಡಗುವ ಮೊದಲೇ ತಿಳಿಸಿಬಿಡುತ್ತೇನೆ- ಇದು ಅಮೆರಿಕನ್ನಡಿಗ (ಹನ್ನೆರಡು ವರ್ಷಗಳ ಹಿಂದೆಯೇ ನಮ್ಮನ್ನಗಲಿದ) ಡಾ.ಎಚ್.ಕೆ ನಂಜುಂಡ ಸ್ವಾಮಿ ಅವರ ‘ಗಿನ್ನಡ’ ಎಂಬೊಂದು ಹಾಸ್ಯ ಲಹರಿಯಲ್ಲಿ ಬರುವ ಸಂವಾದ.

ಇದನ್ನೂ ಓದಿ: Srivathsa Joshi Column: ಗಣೇಶನಂತೆ ಗೌರಿಗೂ ಸಲ್ಲುತ್ತದೆ ವಿಡಂಬನಾ ಸಾಹಿತ್ಯ

ಆ ಕಿರುಬರೆಹ ಆರಂಭವಾಗುವುದೇ ಈ ಸಂವಾದದಿಂದ. ಕಾಲ್ಪನಿಕ ಇರಬಹುದಾದರೂ ನಂಜುಂಡ ಸ್ವಾಮಿ ಮತ್ತವರ ಪತ್ನಿ ಲೀಲಾ ಅವರ ನಡುವೆ ನಡೆದ ಮಾತುಕತೆ ಎಂಬಂತೆ ಚಿತ್ರಿಸಿದ್ದಾರೆ. ಮಾತುಕತೆಯೂ ಅಲ್ಲ ಜಗಳ ಎಂದೇ ಬರೆದಿದ್ದಾರೆ! ಆದರೆ ಉದ್ದೇಶ ಜಗಳವನ್ನು ಜಗಜ್ಜಾಹಿರು ಗೊಳಿಸುವುದು ಅಲ್ಲ.

ಗಂಡಹೆಂಡಿರ ಜಗಳ ಬಹುಸ್ವೀಕೃತ ಲೋಕರೂಢಿಯೇ ತಾನೆ? ಅಂತಹ ಜಗಳಗಳು ಉಂಡು ಮಲಗುವ ತನಕ ಮಾತ್ರ ಇರುವುದು ಎನ್ನುವುದೂ ಗೊತ್ತಿದ್ದದ್ದೇ. ಹಾಗಾಗಿ ಜಗಳವನ್ನು ಬದಿಗಿಟ್ಟು ವಿಷಯವನ್ನಷ್ಟೇ ನೋಡಬೇಕು. ವಿಷಯ ಏನೆಂದರೆ ಮೇಲಿನ ಸಂಭಾಷಣೆಯಲ್ಲಿ ಬರುವ ಗಿಲ್ಯ, ಗಿದ್ನೇಕಾಯಿ, ಗೀಲಂಗಿ, ಗಿಂಕೆ, ಗೀರು ಮುಂತಾದ ಪದಗಳು.

ಇವು ಎಲ್ಲಿಂದ ಬಂದವು? ಇದು ಯಾವ ಭಾಷೆ? ಇವುಗಳ ಅರ್ಥವೇನು? ಇದನ್ನು ನೀವು ಯಾವಾಗಾದರೂ ಗಮನಿಸಿದ್ದೀರಾ? ಇದರ ಬಗ್ಗೆ ಯೋಚಿಸಿದ್ದೀರಾ? ನಂಜುಂಡಸ್ವಾಮಿಯವರು ಮುಂದುವರೆಸುತ್ತಾರೆ: “ಈ ಪ್ರಶ್ನೆ ನನ್ನ ಮೆದುಳನ್ನು ಹೊಕ್ಕು ಧಾಂಧಲೆ ಎಬ್ಬಿಸಿದೆ. ದಿನಬೆಳಗೆದ್ದರೆ ನಾವು ಉಪಯೋಗಿಸುವ ‘ಗಿಂತ್ರಿ’ (ಮಂತ್ರಿಯ ಸಹೋದ್ಯೋಗಿ ಇರಬಹುದೇ?), ‘ಗೀಮಗೊಂಡ್ಲು’ (ತ್ಯಾಮಗೊಂಡ್ಲುವಿನ ಪಕ್ಕದ ಊರು?), ‘ಗಿಕ್ಷರ’ (ಅಕ್ಷರ ಬಾರದಿರುವವರ ಬರೆವಣಿಗೆ ವ್ಯವಸ್ಥೆ?) ಇತ್ಯಾದಿ ಪದಗಳು ಎಲ್ಲಿಂದ ಬಂದವು? ಅವುಗಳ ಅರ್ಥವೇನು? ಇದರ ಬಗ್ಗೆ ಯಾರೂ ಸಂಶೋಧನೆ ನಡೆಸಿದಂತೆ ಇಲ್ಲವಲ್ಲ!

S Joshi

ಈ ಘನಕಾರ್ಯಕ್ಕೆ ನಾನೇ ಏಕೆ ಮುಂದಾಗಬಾರದು!? ಯೋಚಿಸತೊಡಗಿದೆ. ಇದರ ಬುಡವನ್ನು ಪತ್ತೆ ಹಿಡಿದೇಬಿಡುವೆ ಎಂದು ಮನಸ್ಸು ಮಾಡಿದೆ. ನಮ್ಮನೆ ಮಹಡಿ ಮೇಲಿನ ಪುಟ್ಟ ಲೈಬ್ರರಿಗೆ ಹೋಗಿ ಅಲ್ಲಿದ್ದ ಕನ್ನಡ-ಕನ್ನಡ, ಕನ್ನಡ-ಇಂಗ್ಲಿಷ್, ಕನ್ನಡ-ಸಂಸ್ಕೃತ, ಕನ್ನಡ-ಎನ್ನಡ ನಿಘಂಟು ಗಳನ್ನೆಲ್ಲ ರಾಶಿ ಹಾಕಿದೆ.

ಅದರ ಮೇಲೇ ಆಸೀನನಾಗಿ ಒಂದೊಂದಾಗಿ ಆ ಪುಸ್ತಕಗಳನ್ನೆಳೆದು ಗಿ ಇಂದ ಶುರುವಾಗುವ ಪದಗಳನ್ನು ಓದತೊಡಗಿದೆ. ಗಿಜಿಗಿಜಿ, ಗಿಡುಗ, ಗಿಡ್ಡಿ, ಗಿಣಿಮೂಗು, ಗಿರಾಕಿ, ಗೀಜಗಗಳ ಹಿಂದೆ ಮುಂದೆ ಅಕ್ಕಪಕ್ಕಗಳಲ್ಲಿ ನೋಡಿದೆ. ಆದರೆ ಎಲ್ಲೂ ಮೇಲೆ ಹೇಳಿದ ಗಿಲ್ಯ, ಗಿದ್ನೇಕಾಯಿ, ಗಿಂಕೆ, ಗೀಲಂಗಿ, ಗೀಟ ಇತ್ಯಾದಿ ಪದಗಳು ಯಾವ ನಿಘಂಟುಗಳಲ್ಲೂ ಸಿಗಲಿಲ್ಲ. ಹಾಯ್ ಹಾಯ್ ಎನ್ನುತ್ತ ತಲೆ ಕೆರೆದೆ.

ಎಂಥೆಂಥ ವಿದ್ವಾಂಸರುಗಳು ಬರೆದ ಈ ಕನ್ನಡ ನಿಘಂಟುಗಳಲ್ಲಿ ಈ ಪದಗಳಿಲ್ಲದೇ ಇರುವುದರಿಂದ ಇವು ಕನ್ನಡದ ಪದಗಳಲ್ಲವೆಂಬ ನಿರ್ಧಾರಕ್ಕೆ ನಾನು ಬರಲೇಬೇಕಾಯಿತು. ಇವು ಮತ್ತೆಲ್ಲಿನ ಪದಗಳು? ಇವಕ್ಕೂ ಕನ್ನಡಕ್ಕೂ ಏನು ಸಂಬಂಧ? ಎಂಬಿತ್ಯಾದಿ ಹತ್ತಾರು ಪ್ರಶ್ನೆಗಳು ತಲೆ ತಿಂದವು." ಇಲ್ಲಿ ಇನ್ನೊಂದು ಕುತೂಹಲಕಾರಿ ಮತ್ತು ಗಹನವಾದ ಅಂಶವೂ ಇದೆ. ಏನೆಂದರೆ ಈ ಎಲ್ಲ ಪದಗಳೂ ಗಿ ಅಥವಾ ಗೀ ಇಂದಲೇ ಆರಂಭವಾಗುತ್ತವೆ! ಬೇಕಿದ್ದರೆ ಗಮನಿಸಿ: ನಾವು ಅನ್ನ-ಗಿನ್ನ ಅಂತೇವೆಯೇ ಹೊರತು ಅನ್ನ-ಗನ್ನ ಅನ್ನಲ್ಲ. ಮೂಲಂಗಿ-ಗೀಲಂಗಿ ಅಂತೇವೆಯೇ ಹೊರತು ಮೂಲಂಗಿ ಗೂಲಂಗಿ ಅನ್ನಲ್ಲ. ಮಂತ್ರಿ-ಗಿಂತ್ರಿ ಅಂತೇವೆಯೇ ಹೊರತು ಮಂತ್ರಿ ಗಂತ್ರಿ ಅನ್ನಲ್ಲ. ನಿಯಮ ಸರಳವಿದೆ.

ಮೊದಲ ಪದ ಹ್ರಸ್ವ ಅಕ್ಷರದಿಂದ ಆರಂಭವಾಗಿದ್ದರೆ ಜೋಡಿಪದ ‘ಗಿ’ ಇಂದ ಆರಂಭವಾಗುತ್ತದೆ. ಮೊದಲ ಪದ ದೀರ್ಘಾಕ್ಷರದಿಂದ ಆರಂಭವಾಗಿದ್ದರೆ ಜೋಡಿಪದ ‘ಗೀ’ ಇಂದ ಆರಂಭವಾಗುತ್ತದೆ. ಬೇರೆ ರೂಲ್ಸು ಗೀಲ್ಸು ಏನಿಲ್ಲ. ನೋಡಿ, ಮತ್ತೊಮ್ಮೆ ಗೀ ಬಂತು! “ಆದ್ದರಿಂದ, ಮತ್ತು ಈ ಪದಗಳು ಯಾವ ಭಾಷೆಯವು ಎಂದು ಗೊತ್ತಿಲ್ಲದೆ ಇರುವುದರಿಂದ, ನಾವು ಸದ್ಯಕ್ಕೆ ಇವುಗಳನ್ನು ಗಿನ್ನಡದ ಪದಗಳು ಮತ್ತು ಈ ಭಾಷೆಯನ್ನು ಗಿನ್ನಡ ಎನ್ನೋಣ. ಇದಕ್ಕೆ ನಿಮ್ಮ ಅಭ್ಯಂತರವೇನೂ ಇಲ್ಲ ತಾನೆ?" ಎಂದು ತೀರ್ಮಾನಿಸುತ್ತಾರೆ ನಂಜುಂಡಸ್ವಾಮಿ. ಮತ್ತೂ ಮುಂದುವರೆಸಿ ಹೀಗೆ ಬರೆಯು ತ್ತಾರೆ: “ಗಿನ್ನಡದ ಬಗ್ಗೆ ನಾನು ಗಾಢವಾಗಿ ಅಭ್ಯಸಿಸಲು ಪ್ರಾರಂಭಿಸಿದ ತರುಣದಲ್ಲೇ ನನಗೊಂದು ಗೂಢವಾದ ರಹಸ್ಯ ಕಂಡುಬಂದಿತು.

ಗಿನ್ನಡ ಭಾಷೆಗೆ ತನ್ನದೇ ಆದ ಸ್ವತಂತ್ರ ಅಸ್ತಿತ್ವ ಇಲ್ಲ. ಅದು ಕನ್ನಡದ ಬೆನ್ನು ಹತ್ತಿ ಸವಾರಿ ಮಾಡಬೇಕು. ಉದಾಹರಣೆಗೆ, ‘ನೀನು ಸಾಹೇಬರ ಹತ್ತಿರ ತಲೆಹರಟೆ ಗಿಲೆಹರಟೆ ಮಾಡಿಗೀಡಿ ಬಿಡಬೇಡ ಎನ್ನುವ ವಾಕ್ಯ ಎಷ್ಟು ಸೊಗಸಾಗಿದೆ! ಆದರೆ ಅದರಲ್ಲಿರುವ ಕನ್ನಡ ಪದಗಳನ್ನು ಕಿತ್ತೆಸೆದು ಬರೀ ಗಿನ್ನಡ ಉಳಿಸಿಕೊಂಡರೆ- ಗಿಲೆಹರಟೆ ಗೀಡಿಬಿಡಬೇಡ ಎಂದಾಗಿ ಅರ್ಥವಿಲ್ಲದ ಪದಸಮುದಾಯವಾಗಿ ಬಿಡುತ್ತದೆ.

ಅದೇ ಥರ, ‘ಊಟಗೀಟ ಮಾಡ್ತೀರೋ ಇಲ್ವೋ’ದಿಂದ ಕನ್ನಡವನ್ನು ಎತ್ತಿದರೆ ಅದು ಸುಮ್ಮನೆ ಗೀಟ ಆಗಿ ಕೂತುಬಿಡುತ್ತದೆ. ಹಾಗಂತ ಗಿನ್ನಡ ಕೇವಲ ಕನ್ನಡವನ್ನವಲಂಬಿಸಿದ ಪ್ಯಾರಸೈಟಲ್ಲ. ಅದು ಕನ್ನಡವನ್ನು ಸಂಪನ್ನಗೊಳಿಸುವ, ಕನ್ನಡಕ್ಕೆ ವಿಶಿಷ್ಟವಾದ ವರ್ಚಸ್ಸನ್ನು ಕೊಡುವ, ಕನ್ನಡದ ಗಳಸ್ಯ-ಕಂಠಸ್ಯವೇ ಆಗಿದೆ. ಉದಾಹರಣೆಗೆ, ‘ನಾನು ಪ್ರಾಣಹೋದರೂ ನಿನ್ನ ಸೀರೆ ಗೀರೆ ಒಗೆಯುವು ದಿಲ್ಲ’ ಎನ್ನುವ ವಾಕ್ಯದಿಂದ ಗಿನ್ನಡವನ್ನು ತೆಗೆದಾಗ ‘ನಾನು ಪ್ರಾಣಹೋದರೂ ನಿನ್ನ ಸೀರೆ ಒಗೆಯುವುದಿಲ್ಲ’ ಎಂಬ ಆತನ ಖಡಾಖಂಡಿತವಾದ ಪ್ರತಿಜ್ಞೆ ಕಂಡುಬಂದರೂ ಅದರ ಸಂದಿಯಲ್ಲೇ, ಆದರೆ ರವಿಕೆ, ಲಂಗ, ಇತ್ಯಾದಿಗಳನ್ನು ಒಗೆಯಲು ಅವನ ಅಭ್ಯಂತರವಿಲ್ಲ ಎನ್ನುವ ಅರ್ಥ ಬರುವುದಿಲ್ಲವೇ? ಈಗ ಗಿನ್ನಡವನ್ನು ಹಾಕಿನೋಡಿ.

ನಾನು ನಿನ್ನ ಸೀರೆ ಗೀರೆ ಒಗೆಯುವುದಿಲ್ಲ ಎನ್ನುವ ವಾಕ್ಯದಲ್ಲಿ ನಾನು ನಿನ್ನ ಸೀರೆ, ರವಿಕೆ, ಲಂಗ, ಟವಲ್ಲು, ಮಾತ್ರವಲ್ಲ ನಿನ್ನ ಯಾವ ವಸಗಳನ್ನೂ ಒಗೆಯುವುದಿಲ್ಲ ಎಂಬ ಅರ್ಥ ಬರುತ್ತದೆ. ನೋಡಿ, ಹೇಗೆ ಆ ಗಂಡನ ಮಾತಿಗೆ ಗಂಡುತನ ತುಂಬಿಸಿತು ಈ ಗಿನ್ನಡ ಪದ! ಹಾಗೆಯೇ, ‘ಹುಡುಗಿ ಯನ್ನು ನೋಡಲು ಬಂದ ಗಂಡಿಗೆ ಕೇಸರಿಭಾತು ಗೀಸರಿಭಾತು ಏನೂ ಕೊಡಲಿಲ್ಲ’ ಎನ್ನುವ ವಾಕ್ಯದಿಂದ ಗಿನ್ನಡವನ್ನು ತೆಗೆದರೆ ‘ಹುಡುಗಿಯನ್ನು ನೋಡಲು ಬಂದ ಗಂಡಿಗೆ ಕೇಸರಿಭಾತು ಕೊಡಲಿಲ್ಲ’ ಎಂದಾಗುತ್ತದೆ.

ಪಕೋಡ, ಮೈಸೂರು ಪಾಕು ಕೊಟ್ಟಿರಬಹುದು ಎಂಬ ಸಂಶಯವೂ ಹುಟ್ಟುತ್ತದೆ. ಆದರೆ ‘ಕೇಸರಿಭಾತು ಗೀಸರಿಭಾತು ಏನೂ ಕೊಡಲಿಲ್ಲ’ ಎಂದಾಗ ಆ ಗಂಡು ಬರಿ ಹೊಟ್ಟೆಯಲ್ಲಿ ವಾಪಸು ಹೊರಟ ಎನ್ನುವು ದರಲ್ಲಿ ಯಾರಿಗೂ ಯಾವ ಸಂಶಯವೂ ಇರಬೇಕಾಗಿಲ್ಲ." ಆಲೋಚಿಸಿದರೆ ನಂಜುಂಡಸ್ವಾಮಿಯವರ ವಾದದಲ್ಲಿ ಬಹಳವೇ ತಥ್ಯವಿದೆ ಅನಿಸಲ್ವಾ? ಸೂಕ್ಷ್ಮವಾಗಿ ಪರಿಶೀಲಿಸಿ ದರೆ ನಮಗೆ ಗಿನ್ನಡದ ಇನ್ನಷ್ಟು ಗುಣಧರ್ಮಗಳು ಗೋಚರಿಸುತ್ತವೆ.

ಗಿನ್ನಡವನ್ನು ಸಾಧಾರಣವಾಗಿ ಕನ್ನಡದ ಕರ್ಮಪದದೊಡನೆ ಬಳಸುತ್ತೇವೆ. ಕೆಲವೊಮ್ಮೆ ಕ್ರಿಯಾ ಪದ ದೊಟ್ಟಿಗೂ ಬಳಸುವುದುಂಟು. ಬೇರೆಡೆ ಅದರ ಉಪಯೋಗ ಅಷ್ಟಿಲ್ಲ. ಉದಾಹರಣೆಗೆ, ‘ಸತ್ಯಬೋಧಾ ಚಾರ್ಯರು ಬೀದಿಯಲ್ಲಿ ಮಾರುತ್ತಿದ್ದ ಪಕೋಡಗಳನ್ನು ತಿಂದು ಹೊಟ್ಟೆ ಕೆಡಿಸಿ ಕೊಂಡರು’ ಎನ್ನುವ ಶುದ್ಧ ಕನ್ನಡ ವಾಕ್ಯವನ್ನು ನೋಡೋಣ. ಅವರ ಜೊತೆ ಅನೇಕ ಇತರರು ಪಕೋಡ ತಿಂದಿರಬಹು ದಾದರೂ ಆತ್ಮಗೌರವವುಳ್ಳ ಯಾವ ಗಿನ್ನಡಪ್ರೇಮಿಯೂ ಸತ್ಯಬೋಧಾ ಚಾರ್ -ಗಿತ್ಯಬೋಧಾಚಾರ್ಯರು ಬೀದಿಯಲ್ಲಿ... ಎಂದು ಹೇಳುವುದಿಲ್ಲ. ಆದರೆ ಪಕೋಡ-ಗಿಕೋಡ ತಿಂದು ಹೊಟ್ಟೆ-ಗಿಟ್ಟೆ ಕೆಡಿಸಿಕೊಂಡರು ಎನ್ನುವ ಪದಸಮುದಾಯ ಸ್ವಾಭಾವಿಕವಾಗಿಯೇ ಬರುತ್ತದೆ.

ಹಾಗೆಯೇ, ‘ಬೀದಿಯಲ್ಲಿ ಮಾರುವ ತಿಂಡಿ ದೇಹಕ್ಕೆ ಒಳ್ಳೆಯದಲ್ಲ, ತಿಂದು ಗಿಂದು ಬಿಡಬೇಡ!’ ಎಂಬ ಅಮ್ಮನ ಎಚ್ಚರಿಕೆಯ ಮಾತಿನಲ್ಲಿ ಗಿನ್ನಡವು ಕನ್ನಡದ ಕ್ರಿಯಾಪದದ ಬೆನ್ನ ಮೇಲೇರಿರುವುದನ್ನು ಕಾಣಬಹುದು. ಇನ್ನು, ಗಿನ್ನಡದ ಪದಗಳ ಅರ್ಥದ ಬಗ್ಗೆ ಚಿಂತಿಸುವುದಾದರೆ... ಇಡ್ಲಿ-ಗಿಡ್ಲಿ ಎನ್ನು ವಾಗಿನ ಗಿಡ್ಲಿ ಏನು? ಇಡ್ಲಿಯಲ್ಲದ ಆದರೆ ಇಡ್ಲಿಯಂಥದೇ ಯಾವುದಾದರೂ ತಿಂಡಿ ಪದಾರ್ಥ ಎಂಬ ನಿರ್ಧಾರಕ್ಕೆ ನಾವು ಬರಬಹುದು. ಅದೇ ಥರ ‘ಗಿಕ್ಕಿ’ ಅಂದರೆ ಅಕ್ಕಿಯನ್ನು ಹೋಲುವ, ಬೇಯಿಸದೆ ತಿಂದರೆ ಹೊಟ್ಟೆ ನೋವು ಬರಿಸುವ ಧಾನ್ಯ! ‘ಗಿನ್ನ’ ಅಂದರೆ ಗಿಕ್ಕಿಯನ್ನು ಬೇಯಿಸಿದಾಗ ತಯಾರಾಗುವ ಊಟದ ಪದಾರ್ಥ. ‘ಗಿದರಾಸು’ ಅಂದರೆ ಮದರಾಸಿನ ಪಕ್ಕದಲ್ಲೇ ಒಂದು ತಮಿಳು ಊರು.

ಗಿನ್ನಡದ ಕೆಲವು ಪದಗಳು ದ್ವಂದ್ವಾರ್ಥದವೂ ಆದಾವು. ‘ಗಿಲಿ’ ಅಂದರೆ ಹುಲಿಯಂತಹ ದೊಡ್ಡ ಪ್ರಾಣಿಯೂ ಆದೀತು (ಕಾಡಿನ ದಾರಿಯಾಗಿ ಹೋಗ್ಬೇಡ, ಹುಲಿ-ಗಿಲಿ ಬಂದೀತು!), ಇಲಿಯಂತಹ ಚಿಕ್ಕದೊಂದು ಪ್ರಾಣಿಯೂ ಆದೀತು (ರೂಮಿನಲ್ಲಿ ಕೆಟ್ಟ ವಾಸ್ನೆ. ಇಲಿ-ಗಿಲಿ ಸತ್ತಿರ್ಬೇಕು!).

‘ಗಿಂಡೇಕಾಯಿ’ ಅಂದರೆ ಒಂದು ತರಕಾರಿಯೇನೋ ಹೌದು, ಹೋಲಿಕೆ ಬೆಂಡೆಕಾಯಿಯದೋ ತೊಂಡೆಕಾಯಿಯದೋ ಹೇಳಲಾರೆವು. ‘ಗಿಂಡಿ’ ಗಿನ್ನಡದಲ್ಲೂ ಕನ್ನಡದಲ್ಲೂ ಇರುವುದರಿಂದ ಕೊಂಚ ಕನ್ ಫ್ಯೂಷನ್ ಕಟ್ಟಿಟ್ಟ ಬುತ್ತಿ. ಗಿನ್ನಡದಲ್ಲಿ ಅದು ತಿಂಡಿಯಂತೆಯೇ ತಿನ್ನುವ ಪದಾರ್ಥ. ಆದರೆ ಕನ್ನಡದ ಗಿಂಡಿಯನ್ನು ತಿನ್ನಲಾಗದು. ‘ಗಿಣ್ಣು’ ತದ್ವಿರುದ್ಧ. ಗಿನ್ನಡದಲ್ಲಿ ಹೆಣ್ಣಿನ ಸವತಿ.

ಕನ್ನಡದಲ್ಲಿ ತಿನ್ನುವ ವಸ್ತು. ಇದಿಷ್ಟನ್ನು ಓದುವ ಹೊತ್ತಿಗೆ ನಿಮ್ಮ ತಲೆಯೊಳಗೂ ತನಗೆ ತುಸು ಜಾಗ ಗೀಗ ಸಿಕ್ಕೀತೇ ಎಂದು ಗಿನ್ನಡವು ಹವಣಿಸುತ್ತಿರಬಹುದು. ಅದಕ್ಕೆ ಮೊದಲು ಇಷ್ಟೊಂದು ಸ್ವಾರಸ್ಯಕರವಾದ ಈ ಗಿನ್ನಡವನ್ನು ನಮಗೆಲ್ಲ ಪರಿಚಯಿಸಿದ ಡಾ.ಎಚ್.ಕೆ.ನಂಜುಂಡ ಸ್ವಾಮಿಯವರ ಬಗ್ಗೆ ಇನ್ನೊಂದಿಷ್ಟು ಪರಿಚಯವಿವರ- ಎಚ್ಚೆಸ್ಕೆ ಬರೆಯುತ್ತಿದ್ದ ಶೈಲಿಯಲ್ಲಾ ದರೂ- ತಿಳಿದುಕೊಳ್ಳಲೇಬೇಕು.

ಮಾರ್ಚ್ 10, 1935ರಂದು ಮೈಸೂರಿನಲ್ಲಿ ಜನನ. ತಂದೆ ‘ಹಾಸನ ಕೃಷ್ಣಮೂರ್ತಿ’ (ಅದರಿಂದಾ ಗಿಯೇ ಎಚ್.ಕೆ ಎಂಬ ಇನಿಷಿಯಲ್ಸು), ತಾಯಿ ಚಿನ್ನಮ್ಮ. ವಿದ್ಯಾಭ್ಯಾಸವೆಲ್ಲ ಮೈಸೂರಲ್ಲೇ. ಮನೆಹತ್ತಿರದ ಕೃಷ್ಣಮೂರ್ತಿಪುರಂ ಪ್ರೈಮರಿ ಶಾಲೆ, ಲಕ್ಷ್ಮೀಪುರಂ ಬಾಯ್ಸ್ ಮಿಡಲ್ ಸ್ಕೂಲು, ಶಾರದಾವಿಲಾಸ ಹೈಸ್ಕೂಲು, ಯುವರಾಜಾ ಕಾಲೇಜು, ಮತ್ತು ಕಡೆಗೆ ಮೈಸೂರು ಮೆಡಿಕಲ್ ಕಾಲೇಜು. ದೊಡ್ಡ ಕುಟುಂಬ. ಒಟ್ಟು ಏಳು ಜನ ಒಡಹುಟ್ಟಿದವರು. ಅಣ್ಣ ಡಾ.ಎಚ್.ಕೆ ರಂಗನಾಥ್ ರಂಗಭೂಮಿ ಮತ್ತು ಆಕಾಶವಾಣಿಯಲ್ಲಿ ಹೆಸರು ಗಳಿಸಿದವರು.

ಇನ್ನೊಬ್ಬ ಸೋದರ ಎಚ್.ಕೆ ರಾಮಕೃಷ್ಣ ಸಹ ದಿಲ್ಲಿಯಿಂದ ಕನ್ನಡ ವಾರ್ತಾವಾಚಕ, ರೇಡಿಯೊ ಮಾಸ್ಕೊದಿಂದ ಕನ್ನಡ ಕಾರ್ಯಕ್ರಮ ಪ್ರಸಾರಕ ಆಗಿದ್ದವರು. ಸೋದರಿಯ ಗಂಡ ಸುಪ್ರಸಿದ್ಧ ಕನ್ನಡಕವಿ ವಿದ್ವಾಂಸ ಎಸ್.ವಿ. ಪರಮೇಶ್ವರ ಭಟ್ಟರು. 1961ರಲ್ಲಿ ನಂಜುಂಡಸ್ವಾಮಿ ಅಮೆರಿಕಕ್ಕೆ ಆಗಮನ. ನ್ಯೂಯಾರ್ಕ್, ಬಫೆಲೋ, ಪಿಟ್ಸಬರ್ಗ್, ಟೊರಾಂಟೋ ಮುಂತಾದೆಡೆ ವಿದ್ಯಾಭ್ಯಾಸ-ವೃತ್ತಿಶಿಕ್ಷಣ. ಕಡೆಗೆ -ರಿಡಾದ ಒಕಾಲಾದಲ್ಲಿ ವಾಸ.

ಉತ್ತಮ ಶಸ್ತ್ರಚಿಕಿತ್ಸಕ ಎಂದು ಹೆಸರು ಗಳಿಸಿ 2000ದಲ್ಲಿ ನಿವೃತ್ತಿ. ಶಸ್ತ್ರಚಿಕಿತ್ಸಾ ರಂಗದಲ್ಲಿ ಇವರಿಗಿದ್ದ ಅಪಾರ ಪರಿಣತಿಯನ್ನು ಗುರುತಿಸಿ ನ್ಯಾಷನಲ್ ಜಿಯೋಗ್ರಾಫಿಕ್ ಸಂಸ್ಥೆಯಿಂದ Man the Incredible Machineಎಂಬ ಸಾಕ್ಷ್ಯಚಿತ್ರ ನಿರ್ಮಾಣ. ನಿವೃತ್ತಿಯ ಬಳಿಕ ಕನ್ನಡ ಸಾಹಿತ್ಯಕೃಷಿ ಯಲ್ಲಿ ತೊಡಗಿದ ಡಾ.ನಂಜುಂಡಸ್ವಾಮಿ ಅವರಿಂದ ‘ನಿಶ್ಶಬ್ದ ಸಂಗೀತ’, ‘ಕಾನನದ ಮಲ್ಲಿಗೆ’, ‘ಕಲಸುಮೇಲೋಗರ’, ‘ಸುಶ್ರುತ ನಡೆದ ಹಾದಿಯಲ್ಲಿ’ ಮುಂತಾದ ಅನುಭವ ಕಥನ ಪ್ರಬಂಧ ಸಂಕಲನಗಳು ಪ್ರಕಟ. ಅಂತೆಯೇ ನಿಶ್ಶಬ್ದ ಸಂಗೀತದ ಇಂಗ್ಲಿಷ್ ಅನುವಾದ Silent Music, ಅಣ್ಣ ಎಚ್.ಕೆ ರಂಗನಾಥ್ ಬರೆದ ‘ನೆನಪಿನ ನಂದನ’ ಕೃತಿಯ ಇಂಗ್ಲಿಷ್ ಅನುವಾದ Where the Angels Roamed ಸಹ.

ಅಮೆರಿಕದ ಕನ್ನಡ ಸಾಹಿತ್ಯ ರಂಗವು 2007ರಲ್ಲಿ ಹೊರ ತಂದ ‘ನಗೆಗನ್ನಡಂ ಗೆಲ್ಗೆ’ ಉದ್ಗ್ರಂಥಕ್ಕೆ ಎಚ್.ವೈ ರಾಜಗೋಪಾಲ್ ಜೊತೆ ಸಹಸಂಪಾದಕತ್ವ (ಕನ್ನಡದಲ್ಲಿ ಹಾಸ್ಯಸಾಹಿತ್ಯ ಕುರಿತಾದ ಈ ಗ್ರಂಥದಲ್ಲಿ ನಾನು ಡುಂಡಿರಾಜ್ ಬಗ್ಗೆ ಸಂದರ್ಶನಾಧಾರಿತ ಲೇಖನ ಬರೆದಿದ್ದೇನೆ. ನನಗೆ ಡಾ.ನಂಜುಂಡಸ್ವಾಮಿಯವರ ಪರಿಚಯ, ಸ್ನೇಹ, ಮುಖತಃ ಭೇಟಿ ಇತ್ಯಾದಿ ಎಲ್ಲವೂ ಆಗಿದ್ದು ಆ ಸಂದರ್ಭದಲ್ಲೇ).

ರಾಜಗೋಪಾಲ್ ಮತ್ತು ನಂಜುಂಡಸ್ವಾಮಿ ಏಕವಚನಪ್ರಯೋಗದ ಬಾಲ್ಯಸ್ನೇಹಿತರು. 2014ರ ನವೆಂಬರ್ 30ರಂದು ನಂಜುಂಡಸ್ವಾಮಿ ಫ್ಲೋರಿಡಾದಲ್ಲಿ ಅಸುನೀಗಿದಾಗ ರಾಜಗೋಪಾಲ್ ಬಲುಭಾವನಾತ್ಮಕ ವಾದೊಂದು ಶ್ರದ್ಧಾಂಜಲಿಯಲ್ಲಿ “ನಂಜುಂಡಸ್ವಾಮಿಯದು ತೀಕ್ಷ್ಣ ಬುದ್ಧಿ, ಚುರುಕು ಮಾತು, ಹಾಸ್ಯ ಲವಲವಿಕೆಗಳಿಂದ ಗೆಳೆಯರನ್ನು ಮಾತ್ರವಲ್ಲ, ಯಾವ ಸಭೆಯಲ್ಲಿ ಮಾತಾಡಿದರೂ ಸಭಿಕರೆಲ್ಲರನ್ನೂ ಒಲಿಸಿಕೊಳ್ಳುತ್ತಿದ್ದ ಆಕರ್ಷಕ ವ್ಯಕ್ತಿತ್ವ. ಆತನ ಕನ್ನಡ ಎಂಥವರಿಗೂ ಮೆಚ್ಚಾಗುವಂಥದು.

ಯಾವ ಶ್ರೀಮದ್ಗಾಂಭೀರ್ಯಗಳೂ, ತೋರಿಕೆಯ ಥಳಕುಪಳಕುಗಳೂ ಇಲ್ಲದ ಸರಳವಾದ, ಲಲಿತವಾದ, ಆಪ್ತವಾದ, ಸರಸ ಕನ್ನಡ ಅದು. ನಿವೃತ್ತಿಯ ಬಳಿಕ ಪ್ರಪಂಚ ಪರ್ಯಟನೆಯಲ್ಲಿ ಹೆಚ್ಚುಹೆಚ್ಚು ತೊಡಗಿಸಿಕೊಂಡಿದ್ದ. ಮೂರು ವರ್ಷದ ಹಿಂದೆ ದಕ್ಷಿಣ ಅಮೆರಿಕಕ್ಕೆ ಪ್ರವಾಸ ಹೋಗಿದ್ದಾಗ ಅಲ್ಲಿನ ಆಹಾರದಲ್ಲಿ ಏನೋ ಪ್ರಮಾದವಾಗಿ ಅಲ್ಲಿಂದ ಬಂದ ಹತ್ತುದಿನಕ್ಕೆ ಜ್ಞಾನತಪ್ಪಿ ಬಿದ್ದು ಹತ್ತು ದಿನ ಕೋಮಾದಲ್ಲಿದ್ದು ಚೇತರಿಸಿಕೊಂಡ. ಮೆನಿಂಜೈಟಿಸ್ ಆಗಿತ್ತು. ಅದರ ಪರಿಣಾಮವಾಗಿ ಮಾತು ಓಡಾಟ ಓದು ಬರಹ ಎಲ್ಲವನ್ನೂ ಅವನು ಹೊಸದಾಗಿ ಕಲಿಯಬೇಕಾ ಯಿತು.

ಪತ್ನಿ ಲೀಲಾ (ಆಕೆಯೂ ವೈದ್ಯೆ, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಓದಿದ ಸಹಪಾಠಿ) ಅವನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ಆದರೆ ಇವನು ಗುಣವಾಗುತ್ತಿದ್ದಂತೆ ಆಕೆ ನ್ಯೂಮೋನಿಯಾಕ್ಕೆ ತುತ್ತಾಗಿ ಎರಡು ವರ್ಷದ ಹಿಂದೆ ತೀರಿಹೋದರು. ‘ನಾನು ಹೋದರೆ ನಿಮ್ಮನ್ನು ಯಾರು ನೋಡಿ ಕೊಳ್ಳುತ್ತಾರೆ?’ ಎಂದಿದ್ದರಂತೆ ಕೆಲವೇ ದಿನಗಳ ಮುಂಚೆ. ಆಕೆ ಹೋದ ಮೇಲಿಂದ ನಂಜುಂಡ ಸ್ವಾಮಿ ಹೆಚ್ಚಾಗಿ ಆರ್ಲ್ಯಾಂಡೊ ಬಳಿ ಇರುವ ಅವನ ಮಗಳು ಸೀತಾ ಮನೆಯಲ್ಲಿರುತ್ತಿದ್ದ. ಬರೆವಣಿಗೆ, ಪಿಯಾನೋ ಕಲಿಕೆ, ಚಿತ್ರ ಬಿಡಿಸುವುದು ಮುಂತಾದವನ್ನೆಲ್ಲ ಮಾಡಬೇಕೆಂದಿದ್ದ.

ಬಹುತೇಕ ಮಾಡಿದ್ದಾನೆ ಕೂಡ!" ಎಂದು ಆಪ್ತವಾಗಿ ಆರ್ದ್ರತೆಯಿಂದ ಬರೆದಿದ್ದರು. ಶಾಲಾದಿನ ಗಳಲ್ಲಿ ತಾವಿಬ್ಬರು ಜೊತೆಯಾಗಿ ಚರ್ಚಾಸ್ಪರ್ಧೆಗಳಲ್ಲಿ, ನಾಟಕಗಳಲ್ಲಿ ಭಾಗವಹಿಸುತ್ತಿದ್ದುದನ್ನೆಲ್ಲ ಸ್ಮರಿಸಿದ್ದರು. ಈಗ ರಾಜಗೋಪಾಲ್ ಸಹ ನಮ್ಮೊಂದಿಗಿಲ್ಲ. ‘ಗಿನ್ನಡ’ ಹಾಸ್ಯಲಹರಿಯಲ್ಲೇ ಗೊತ್ತಾಗುತ್ತದೆ ನಂಜುಂಡ ಸ್ವಾಮಿಯವರ ಬುದ್ಧಿತೀಕ್ಷ್ಣತೆ, ಮಾತಿನ ಚುರುಕು, ಹಾಸ್ಯ ಲವಲವಿಕೆ ಎಲ್ಲವೂ.

ನನಗಂತೂ ತುಂಬ ಇಷ್ಟದ ಪ್ರಬಂಧವದು. ಆಗಾಗ ಓದುತ್ತಿರುತ್ತೇನೆ. ಯಾರ ಬಾಯಿಂದಲಾದರೂ ಅವರಿಗೇ ಅರಿವಿಲ್ಲದೆ ಸ್ನಾನ-ಗೀನ, ಪಾಯ್ಸ-ಗೀಯ್ಸ, ಉಪ್ಪಿಟ್ಟು-ಗಿಪ್ಪಿಟ್ಟು ರೀತಿಯ ಗಿನ್ನಡದ ಪದಗಳು ಉದುರಿದ್ದನ್ನು ಕೇಳಿದಾಗೆಲ್ಲ ನಾನು ನಂಜುಂಡಸ್ವಾಮಿಯವರನ್ನು ನೆನಪಿಸಿಕೊಳ್ಳುತ್ತೇನೆ. ಅವರು ಆ ಪ್ರಬಂಧವನ್ನು ಮುಗಿಸಿದ ರೀತಿಯನ್ನು ಓದಿದರೆ ಬಹುಶಃ ನೀವೂ ಹಾಗೆಯೇ ಮಾಡುತ್ತೀರಿ.

ಆ ಉಪಸಂಹಾರ ಹೀಗಿದೆ: “ಊಟ ಗೀಟ ಮಾಡ್ತೀರೋ ಇಲ್ಲ ಹೀಗೇ ತೂಕಡಿಸ್ತಾ ಕೂತಿರ್ತೀರೋ? ಲೀಲಾ ಪುನಃ ಕೇಳಿದಳು. ಓಹ್! ಏನೋ ಯೋಚಿಸ್ತಾ ಹಾಗೆ ಕಣ್ಣಿಗೆ ಜೋಂಪು ಹಿಡಿಯಿತು. ಇದೋ ಬಂದೆ ಎಂದೆ. ಊಟ ಮಾಡ್ತಾ ಲೀಲಾಳ ಜೊತೆ ಗಿನ್ನಡದ ವಿಷಯದಲ್ಲಿ ನನ್ನ ಯೋಚನಾಲಹರಿ ಯನ್ನು ಪ್ರಸ್ತಾವಿಸುತ್ತ, ಗಿನ್ನಡದ ಬಗ್ಗೆ ನಾನೊಂದು ಪ್ರೌಢ ಪ್ರಬಂಧವೊಂದನ್ನು ಬರೆದು ಅದರ ಜೊತೆ ನನ್ನದೇ ಆದ ಗಿನ್ನಡ-ಕನ್ನಡ ನಿಘಂಟೊಂದನ್ನು ಅಂಟಿಸಿ ಕಳುಹಿಸಿದರೆ ಯಾವುದಾದರೂ ವಿಶ್ವವಿದ್ಯಾಲಯ ನನಗೊಂದು ಪಿಎಚ್‌ಡಿ ಪದವಿ ಕೊಡಬಹುದಲ್ಲವೇ? ಎಂದೆ. ಲೀಲಾ ಅರೆಕ್ಷಣ ಯೋಚನೆ ಮಾಡಿ ತಲೆಯಲ್ಲಾಡಿಸುತ್ತಾ, ನಿಮಗೆ ಪಿಎಚ್‌ಡಿ ಸಿಗುವ ಸಂಭವವಿಲ್ಲ. ಆದರೆ ಗಿಎಚ್‌ಡಿ ಸಿಗುವುದರಲ್ಲಿ ಯಾವ ಸಂದೇಹವೂ ಇಲ್ಲ ಎನ್ನುತ್ತಾ ನಕ್ಕಳು."

ಶ್ರೀವತ್ಸ ಜೋಶಿ

View all posts by this author