ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Srivathsa Joshi Column: ಗಣೇಶನಂತೆ ಗೌರಿಗೂ ಸಲ್ಲುತ್ತದೆ ವಿಡಂಬನಾ ಸಾಹಿತ್ಯ

ಬೇರೆ ಭಕ್ತರು ತನ್ನ ಮೇಲೆ ಹರಿಹಾಯದಿರಲಿ ಎಂದು. ಗೌರಿಯ ಸಂಸಾರತಾಪತ್ರಯಗಳನ್ನು ಬಣ್ಣಿಸುವ ಇನ್ನೊಂದು ತಮಾಷೆ ಶ್ಲೋಕವೂ ಇದೆ. ಈ ಹಿಂದೆಯೂ ಒಮ್ಮೆ ತಿಳಿರುತೋರಣದಲ್ಲಿ ಇದರ ಪ್ರಸ್ತಾವ ವಾಗಿತ್ತು. “ಅತ್ತುಂ ವಾಂಛತಿ ವಾಹನಂ ಗಣಪತೇರಾಖುಂ ಕ್ಷುಧಾರ್ತಃ ಫಣೀ| ತಂ ಚ ಕ್ರೌಂಚಪತೇಃ ಶಿಖೀ ಚ ಗಿರಿಜಾ ಸಿಂಹೋಪಿ ನಾಗಾನನಮ್| ಗೌರೀ ಜಹ್ನುಸುತಾಮಸೂಯತಿ ಕಲಾನಾಥಂ ಕಪಾಲಾನಲೋ| ನಿರ್ವಿಣ್ಣಃ ಸ ಪಪೌ ಕುಟುಂಬಕಲಹಾದೀಶೋಪಿ ಹಾಲಾಹಲಮ್||" ಶಿವನ ಕೊರಳಲ್ಲಿರುವ ಹಾವು ಗಣಪತಿಯ ವಾಹನವಾದ ಇಲಿಯನ್ನು ತಿನ್ನಲು ಹವಣಿಸುತ್ತಿದೆ.

ಗಣೇಶನಂತೆ ಗೌರಿಗೂ ಸಲ್ಲುತ್ತದೆ ವಿಡಂಬನಾ ಸಾಹಿತ್ಯ

-

ತಿಳಿರುತೋರಣ

ಅಪಹಾಸ್ಯ ಅಥವಾ ಗೇಲಿ ಎನ್ನಲಾಗದು, ಎನ್ನಬಾರದು; ಮತ್ತೆ ಅದು ನಿಂದಾಸ್ತುತಿಯೂ ಅಲ್ಲ. ಆರೋಗ್ಯ ವಂತ ಮನಸ್ಸಿನಿಂದಲೇ ಮೂಡಿದ ಗೌರವಪೂರ್ಣ ವಿಡಂಬನೆ ಅಷ್ಟೇ. ನಾವು ಶ್ರದ್ಧಾಭಕ್ತಿ ಗಳಿಂದ ಆರಾಧಿಸುವ ದೇವದೇವತೆಗಳನ್ನೂ ಒಂದೊಮ್ಮೆಗೆ ಸಾಮಾನ್ಯ ಮನುಷ್ಯರೆಂದೇ ಪರಿಗಣಿಸಿ ಅವರ ಪಡಿಪಾಟಲು ಪೇಚಾಟಗಳನ್ನು ಕಲ್ಪಿಸಿ ಮುದ ತಂದುಕೊಳ್ಳುವುದು.

ತನ್ಮೂಲಕ ಅವರನ್ನು ಮತ್ತಷ್ಟು ಆಪ್ತರನ್ನಾಗಿಸಿಕೊಳ್ಳುವುದು. ಅದರಲ್ಲೂ ಗಣೇಶನೆಂದರೆ ಎಲ್ಲರಿಗೂ ಹೆಚ್ಚು ಸಲುಗೆ, ಹೆಚ್ಚಿನ ಸದರ. ಆನೆ ಮುಖ, ಡೊಳ್ಳು ಹೊಟ್ಟೆ, ಹೊಟ್ಟೆಗೆ ಬೆಲ್ಟ್‌ನಂತೆ ಬಿಗಿದುಕೊಂಡ ಹಾವು, ಅಷ್ಟು ದೊಡ್ಡ ಶರೀರವು ಇಲಿಯ ಮೇಲೆ ಕುಳಿತು ಸಂಚರಿಸುವುದು- ಈ ದೃಶ್ಯವನ್ನು ನೋಡಿ ಆಕಾಶದಲ್ಲಿ ಚಂದ್ರನೇ ನಕ್ಕಿದ್ದಾನಂತೆ ಇನ್ನು ಭೂಲೋಕದಲ್ಲಿ ನಮ್ಮಂಥ ಹುಲುಮಾನವರಿಗೆ ನಗು ಬಾರದಿರುತ್ತದೆಯೇ? ಚಂದ್ರ ನಕ್ಕಾಗ ಅವನ ಮೇಲೆ ಸಿಟ್ಟಿನಿಂದ ಗಣೇಶ ತನ್ನದೊಂದು ದಾಡೆಯನ್ನು ಮುರಿದು ಚಂದ್ರನಿಗೆ ಹೊಡೆಯಲಿಕ್ಕೆ ಹೊರಟನಲ್ಲವೇ? ಹಾಗೆ ಗಣಪನು ದಾಡೆ ‘ಮುರಿದದ್ದೇ’ ಪ್ರಪಂಚದ ಮೊತ್ತಮೊದಲ ‘ಬ್ರೇಕಿಂಗ್’ ನ್ಯೂಸ್ ಎನ್ನಲಾಗಿದೆ!

ಗಣೇಶ ಹಾವಿನ ಬೆಲ್ಟ್ ಹಾಕ್ಕೊಂಡವನು ಎಂದು ಕಲ್ಪಿಸುತ್ತ ಜಿ.ಪಿ.ರಾಜರತ್ನಂ ಪಕ್ಕಾ ಭಾಮಿನಿ ಷಟ್ಪದಿ ಛಂದಸ್ಸಿನಲ್ಲಿ, ಪಕ್ಕಾ ಬೆಂಗ್ಳೂರ್-ಕನ್ನಡ ಭಾಷೆಯಲ್ಲಿ ಬರೆದ ಭಲೇ ತಮಾಷೆಯ ಪದ್ಯವೂ ಇದೆಯಲ್ಲ- “ಕಲ್ಟು ಕಾವ್ಯದ ಮಸಿಯ ಕುಡಿಕೆಯ| ಟಿಲ್ಟು ಮಾಡುವ ಮೊದಲು ಹಾವಿನ| ಬೆಲ್ಟು ಹಾಕಿದ ಗಣಪನನು ಹಾಡುವುದು ನಮ್ಮವರ| ಫಾಲ್ಟು ಮೀರಿದರದನು ಸಿವಿಯರ್| ಜೋಲ್ಟು ತಪ್ಪದು ಸತ್ಯ ಥಂಡರ್| ಬೋಲ್ಟು ಬಿದ್ದಂತೆಂದು ದೇರ್ಫೋರ್ ಗಣಪತಿಯ ನೆನೆವೆ||" ಹೀಗೆ ಗಣಪತಿಯನ್ನು ನೆನೆದು, ಇಂತಹದೇ ವಿಡಂಬನಾ ಸಾಹಿತ್ಯದ ಮೇಲೊಂದು ವಿಹಂಗಮ ನೋಟಕ್ಕೆ ಮುಂದಡಿಯಿಡೋಣ.

ಇದನ್ನೂ ಓದಿ: Srivathsa Joshi Column: ಬದುಕಲ್ಲಿ ಸೋಲೊಪ್ಪದೆ ಗೆದ್ದ ಪ್ರೇರಣಾದಾಯಿ ಪ್ರಸಿದ್ಧರು

ಈ ಬಾರಿಯೇನೋ ಗೌರಿ ಮತ್ತು ಗಣೇಶ ಹಬ್ಬಗಳೆರಡೂ ಓವರ್‌ಲ್ಯಾಪ್ ಆಗಿ ಒಂದೇ ದಿನ ಬಂದಿವೆ ಯಾದರೂ ಸಾಮಾನ್ಯವಾಗಿ ಗೌರಿಯ ಗೌಜಿಯೇ ಮೊದಲಿಗೆ ಆದ್ದರಿಂದ ಮತ್ತು ಗಣೇಶನನ್ನು ಕುರಿತ ತಮಾಷೆ ಹಾಸ್ಯ ಸರಕು ಹಳಸಲು ಎನ್ನುವಷ್ಟು ಜನಜನಿತ ಆದ್ದರಿಂದ, ಗೌರಿಯನ್ನು ಕುರಿತಾದ ಅಪರೂಪದ, ಸಂಸ್ಕೃತದಲ್ಲಿ ಪುಷ್ಕಳವಾಗಿ ಇರುವ, ಒಂದಷ್ಟು ವಿಡಂಬನೆಗಳ ಕಜ್ಜಾಯವನ್ನು ಸವಿಯೋಣ.

‘ಗಂಡಸರಿಗ್ಯಾಕೆ ಗೌರೀದುಃಖ?’ ಅಂತೊಂದು ಗಾದೆಮಾತು ಇದೆಯಷ್ಟೆ? ಗೌರೀದುಃಖ ಎಂದರೇನು? ಗೌರಿಯ ದುಃಖಕ್ಕೆ ಅಸಲಿ ಕಾರಣಗಳೇನು? ವಿವರಿಸುವ ಒಂದು ಶ್ಲೋಕವಿದೆ: “ಸಂಧ್ಯಾರಾಗವತೀ ಸ್ವಭಾವಕುಟಿಲಾ ಗಂಗಾ ದ್ವಿಜಿಹ್ವಃ ಫಣೀ| ವಕ್ರಾಂಗೈರ್ಮಲಿನಃ ಶಶೀ ಕಪಿಮುಖೋ ನಂದೀಚ ಮೂರ್ಖೋ ವೃಷಃ| ಇತ್ಥಂ ದುರ್ಜನ ಸಂಕಟೇ ಪತಿಗೃಹೇ ವಸ್ತವ್ಯಮೇತತ್ಕಥಂ| ಗೌರೀತ್ಥಂ ನೃಕಪಾಲಪಾಣಿಕಮಲಾ ಚಿಂತಾನ್ವಿತಾ ಪಾತು ವಃ||" ಗೌರಿಗೆ ಗಂಡನ ಮನೆಯಲ್ಲಿ ಬಾಳಲಿಕ್ಕಾಗ ದಷ್ಟು ಕಷ್ಟಕಾರ್ಪಣ್ಯಗಳು. ಯಾವುವು ಅವು? ಮುಸ್ಸಂಜೆಯ ಆಗಸದ ಬಣ್ಣಗಳಂತೆ ಸದಾ ಚಂಚಲ ಸ್ವಭಾವದ ಮತ್ತು ಅಂಕುಡೊಂಕಾಗಿಯೇ ಹರಿಯುವ ಗಂಗೆಯೆಂಬ ಸವತಿ; ಗಂಡನ ಕೊರಳಲ್ಲಿ ಎರಡೆಳೆ ನಾಲಗೆಯ ವಿಷಸರ್ಪ; ಗಂಡನ ತಲೆಯ ಮೇಲೆ ವಕ್ಕರಿಸಿದ್ದಾನೆ ಮುಖವೆಲ್ಲ ಕಲೆಗಳಿಂದ ತುಂಬಿರುವ ಚಂದ್ರ; ಗಂಡನ ವಾಹನವಾದರೂ ಎಂಥದ್ದು? ಮೊದ್ದು ಮುಖದ ಒಂದು ಮುದಿ ಎತ್ತು!

ಹೀಗೆ ಸುತ್ತಮುತ್ತಲೆಲ್ಲ ವ್ಯಾಪಿಸಿರುವ ಕಂಟಕ-ಸಂಕಟಗಳನ್ನು ತಾಳಲಾರದೆ ಗೌರಿಯು ತಾನೂ ಕೈಯಲ್ಲೊಂದು ಕಪಾಲ ಹಿಡಿದು ಚಿಂತಿಸುತ್ತ ಕುಳಿತಳಂತೆ. ಅಂತಹ ಗೌರಿಯು ನಮ್ಮನ್ನು ಕಾಪಾ ಡಲಿ. ಈ ಕೊನೆಯ ವಾಕ್ಯ ಇಂಪಾರ್ಟೆಂಟು. ಸಾಮಾನ್ಯವಾಗಿ ದೇವದೇವತೆಗಳನ್ನು ವಿಡಂಬಿಸುವ ಪದ್ಯದಲ್ಲಿ ಕವಿಯು ನಿರೀಕ್ಷಣಾ ಜಾಮೀನಿನಂತೆ ಸೇರಿಸುವ ವಾಕ್ಯವಿದು. ಮಿಕ್ಕ ಸಾಲುಗಳಲ್ಲೆಲ್ಲ ಭರಪೂರ ತಮಾಷೆ ಮಾಡಿ, ಕಾಲೆಳೆದು, ಕೊನೆಯಲ್ಲಿ ಭಕ್ತಿಯಿಂದ ಕೈಮುಗಿಯುವುದು!

62 ok

ಬೇರೆ ಭಕ್ತರು ತನ್ನ ಮೇಲೆ ಹರಿಹಾಯದಿರಲಿ ಎಂದು. ಗೌರಿಯ ಸಂಸಾರತಾಪತ್ರಯಗಳನ್ನು ಬಣ್ಣಿಸುವ ಇನ್ನೊಂದು ತಮಾಷೆ ಶ್ಲೋಕವೂ ಇದೆ. ಈ ಹಿಂದೆಯೂ ಒಮ್ಮೆ ತಿಳಿರುತೋರಣದಲ್ಲಿ ಇದರ ಪ್ರಸ್ತಾವ ವಾಗಿತ್ತು. “ಅತ್ತುಂ ವಾಂಛತಿ ವಾಹನಂ ಗಣಪತೇರಾಖುಂ ಕ್ಷುಧಾರ್ತಃ ಫಣೀ| ತಂ ಚ ಕ್ರೌಂಚಪತೇಃ ಶಿಖೀ ಚ ಗಿರಿಜಾ ಸಿಂಹೋಪಿ ನಾಗಾನನಮ್| ಗೌರೀ ಜಹ್ನುಸುತಾಮಸೂಯತಿ ಕಲಾನಾಥಂ ಕಪಾಲಾನಲೋ| ನಿರ್ವಿಣ್ಣಃ ಸ ಪಪೌ ಕುಟುಂಬಕಲಹಾದೀಶೋಪಿ ಹಾಲಾಹಲಮ್||" ಶಿವನ ಕೊರಳಲ್ಲಿರುವ ಹಾವು ಗಣಪತಿಯ ವಾಹನವಾದ ಇಲಿಯನ್ನು ತಿನ್ನಲು ಹವಣಿಸುತ್ತಿದೆ.

ಶಿವನ ಮತ್ತೊಬ್ಬ ಮಗ ಷಣ್ಮುಖನ ವಾಹನವಾದ ನವಿಲು, ಶಿವನ ಕೊರಳಲ್ಲಿರುವ ಸರ್ಪವನ್ನು ತಿನ್ನಲಿಕ್ಕೆ ಹೊಂಚುಹಾಕುತ್ತಿದೆ. ಗೌರಿಯ ವಾಹನ ಸಿಂಹವಾದರೋ ಆನೆಗೆ ಬದ್ಧವೈರಿ ಆದ್ದರಿಂದ ಅದು ಗಜಮುಖ ನನ್ನೇ ತಿನ್ನಲು ಯತ್ನಿಸುತ್ತಿದೆ. ಶಿವನ ತೊಡೆ ಮೇಲೆ ಕೂತಿರುವ ಗೌರಿಯು ಶಿವನ ತಲೆಮೇಲೆ ಕುಳಿತಿರುವ ಗಂಗೆಯನ್ನು ಮತ್ಸರದಿಂದ ನೋಡುತ್ತಿರುತ್ತಾಳೆ.

ಗಂಗೆಗೂ ಗೌರಿಯ ಮೇಲೆ ಸವತಿಮಾತ್ಸರ್ಯ. ಶಿವನ ಕೈಯಲ್ಲಿರುವ ಕಪಾಲದಲ್ಲಿ ಉರಿಯುತ್ತಿರುವ ಬೆಂಕಿಗೆ ಶಿವನ ಜಟೆಯಲ್ಲಿರುವ ಚಂದ್ರನನ್ನು ಕರಗಿಸುವ ಹುನ್ನಾರ. ಹೀಗೆ ಕುಟುಂಬದಲ್ಲಿ ಕ್ಷಣ ಕ್ಷಣಕ್ಕೂ ಜಗಳವೇ ನಡೆಯುತ್ತಿದ್ದರೆ ಇನ್ನೇನಾಗಬೇಕು? ಗೌರಿಯೇನೋ ದುಃಖ ಸಹಿಸಿಕೊಂಡಳು; ರೋಸಿಹೋದ ಶಿವ ದಾರಿ ಕಾಣದೆ ಕೊನೆಗೆ ಹಾಲಾಹಲವನ್ನೇ ಕುಡಿದುಬಿಟ್ಟನಂತೆ!

ತನ್ನಿಬ್ಬರು ಮಕ್ಕಳಾದ ಗಣೇಶ ಮತ್ತು ಷಣ್ಮುಖರ ಕಿತಾಪತಿಗಳನ್ನು ತಂಟೆ ಪೋಕ್ರಿಗಳನ್ನು ಕಂಟ್ರೋಲ್ ಮಾಡುವಾಗ ಗೌರಿಗೆ ಹೇಗೆ ಸಾಕುಸಾಕೆನಿಸುತ್ತದೆ ಎಂದು ಬಣ್ಣಿಸುವ ಒಂದು ಶ್ಲೋಕ ವಿದೆ. “ಹೇ ಹೇರಂಬ ಕಿಮಂಬ ರೋದಿಷಿ ಕಥಂ ಕರ್ಣೌ ಲುಠತ್ಯಗ್ನಿಭೂಃ| ಕಿಂ ತೇ ಸ್ಕಂದ ವಿಚೇಷ್ಟಿತಂ ಮಮ ಪುರಾ ಸಂಖ್ಯಾ ಕೃತಾ ಚಕ್ಷುಷಾಮ್|| ನೈತತ್ತೇತ್ಯುಚಿತಂ ಗಜಾಸ್ಯ ಚರಿತಂ ನಾಸಾಂ ಮಿಮೀತೇಂಬ ಮೇ| ತಾವೇವಂ ಸಹಸಾ ವಿಲೋಕ್ಯ ಹಸಿತವ್ಯಗ್ರಾ ಶಿವಾ ಪಾತು ನಃ||" ಒಮ್ಮೆ ಬಾಲ ಗಣೇಶನು ಅಳುತ್ತಿರುವುದನ್ನು ನೋಡಿ ತಾಯಿ ಗೌರಿಯು, “ಹೇ ಗಣೇಶ, ಯಾಕೆ ಅಳುತ್ತಿದ್ದೀಯಾ?" ಎಂದು ಕೇಳುತ್ತಾಳೆ. ಅದಕ್ಕೆ ಗಣೇಶನು, “ಅಮ್ಮಾ, ಈ ಷಣ್ಮುಖನು ನನ್ನ ಅಗಲ ವಾದ ಕಿವಿಗಳನ್ನು ಹಿಡಿದು ಎಳೆಯುತ್ತಿದ್ದಾನೆ" ಎಂದು ದೂರುತ್ತಾನೆ.

ಆಗ ಗೌರಿ ಷಣ್ಮುಖನ ಕಡೆ ತಿರುಗಿ, “ಸ್ಕಂದ, ಇದೇನಿದು ನಿನ್ನ ತುಂಟಾಟ?" ಎಂದು ಗದರಿಸಿದಾಗ, ಷಣ್ಮುಖನು “ಅಮ್ಮಾ, ಇವನು ಮೊದಲು ನನ್ನ ಕಣ್ಣುಗಳನ್ನು (ಷಣ್ಮುಖನಿಗೆ 12 ಕಣ್ಣುಗಳು) ಎಣಿಸಿ ಚೇಷ್ಟೆ ಮಾಡುತ್ತಿದ್ದ" ಎನ್ನುತ್ತಾನೆ. ಅದಕ್ಕೆ ಗೌರಿ ಮತ್ತೊಮ್ಮೆ ಗಣೇಶನಿಗೆ, “ಗಜಮುಖನೇ, ನೀನು ಹಾಗೆ ಮಾಡಬಾರದಿತ್ತು" ಅಂದಾಗ, ಗಣೇಶನು ಕೂಡಲೇ “ಹಾಗಾದರೆ ಇವನು ನನ್ನ ಸೊಂಡಿಲನ್ನು ಅಂಗುಲ ಎಣಿಸಿ ಅಳೆಯುತ್ತಿರುವುದೇಕೆ?" ಎಂದು ಮರುದೂರು ನೀಡುತ್ತಾನೆ.

ಮಕ್ಕಳ ಈ ಮುದ್ದಾದ ಮತ್ತು ಚತುರತೆಯ ಜಗಳವನ್ನು ಕಂಡು ಗೌರಿಗೆ ತಲೆಚಿಟ್ಟು ಹಿಡಿದರೂ ನಗುವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಅಂತಹ ಜಗನ್ಮಾತೆ ದೇವಿಯು ನಮ್ಮೆಲ್ಲರನ್ನು ರಕ್ಷಿಸಲಿ. ಗೌರಿಗೆ ಗಂಗೆಯ ಮೇಲೆ ಸವತಿಮಾತ್ಸರ್ಯ ಇದ್ದದ್ದು ಗುಟ್ಟೇನಲ್ಲ. ಅದನ್ನು ಮಗ ಷಣ್ಮುಖನೂ ಗಮನಿಸಿದ್ದನು. ಒಮ್ಮೆ ಬಾಲ ಷಣ್ಮುಖನು ತನ್ನ ತಂದೆಯ ಹತ್ತಿರ ಬಂದು, “ತಂದೆಯೇ, ನಿನ್ನ ತಲೆಯ ಮೇಲಿರುವ ಗಂಗೆಯನ್ನು ನೋಡಿ ಅಮ್ಮನಿಗೆ ತುಂಬಾ ಕೋಪ ಬರುತ್ತಿದೆ.

ದಯವಿಟ್ಟು ಆ ಗಂಗೆಯನ್ನು ನಿನ್ನ ತಲೆಯಿಂದ ಕೆಳಗೆ ಇಳಿಸಿಬಿಡು" ಎನ್ನುತ್ತಾನೆ. ಅದಕ್ಕೆ ಶಿವನು ಉಪಾಯದಿಂದ, “ಓ ಜ್ಞಾನಿ ಷಣ್ಮುಖನೇ, ಯುಗಗಳಿಂದಲೂ ನನ್ನ ತಲೆಯ ಮೇಲೆಯೇ ಆಶ್ರಯ ಪಡೆದಿರುವ ಆಕೆಯನ್ನು ನಾನು ಬಿಟ್ಟರೆ ಅವಳು ಎಲ್ಲಿಗೆ ಹೋಗಬೇಕು? ಅವಳಿಗೆ ಬೇರೆ ಗತಿ ಎಲ್ಲಿದೆ? ನೀನೇ ಒಂದು ದಾರಿ ಹೇಳು" ಎಂದು ಮಗನನ್ನೇ ಕೇಳುತ್ತಾನೆ.

ತಂದೆಯ ಈ ಜಾಣ್ಮೆಯ ಪ್ರಶ್ನೆಯಿಂದ ಷಣ್ಮುಖನಿಗೆ ಸಿಟ್ಟು ಬರುತ್ತದೆ. ಗಂಗೆಯು ಹೋಗಿ ಸೇರಬೇಕಾದ ಸ್ಥಳ ‘ಸಮುದ್ರ’ ಎಂಬ ಒಂದೇ ಉತ್ತರವನ್ನು, ಆತ ತನ್ನ ಕೋಪದ ಆವೇಶದಲ್ಲಿ ತನ್ನ ಆರೂ ಮುಖಗಳಿಂದ ಒಟ್ಟಿಗೆ ಸಮುದ್ರದ ಆರು ವಿಭಿನ್ನ ಪರ್ಯಾಯ ಪದಗಳನ್ನು (ಅಂಭೋಧಿ, ಜಲಧಿ, ಪಯೋಧಿ, ಉದಧಿ, ವಾರಾನ್ನಿಧಿ, ವಾರಿಧಿ) ಬಳಸಿ ಪ್ರತ್ಯುತ್ತರ ನೀಡುತ್ತಾನೆ! “ಅಂಬಾ ಕುಪ್ಯತಿ ತಾತ ಮೂಧಿ ವಿಧೃತಾ ಗಂಗೇಯಮುತ್ಸೃಜ್ಯತಾಂ| ವಿದ್ವನ್ ಷಣ್ಮುಖ ಕಾ ಗತಿರ್ಮಮ ಚಿರಂ ಮೂಧಿ ಸ್ಥಿತಾಯಾ ವದ| ಕೋಪಾವೇಶವಶಾದಶೇಷವದನೈಃ ಪ್ರತ್ಯುತ್ತರಂ ದತ್ತವಾನ್| ಅಂಭೋಧಿ ರ್ಜಲಧಿಃ ಪಯೋಧಿರುದಧಿರ್ವಾರಾಂ ನಿಧಿರ್ವಾರಿಧಿಃ||" ಗೌರಿಯ ಸವತಿಮಾತ್ಸರ್ಯದ್ದೇ ಇನ್ನೊಂದು ಶ್ಲೋಕ ಹೀಗಿದೆ: “ಕಾತ್ವಂ ಕಾಮಿನಿ ಜಾಹ್ನವೀ ಕಿಮು ಜಲಂ ಸಂಲಪ್ಯತೇ ಜಾಡ್ಯವತ್| ಕಿಂ ತೇ ನಾಸ್ತಿ ಪತಿಃ ಸ ಚಾಸ್ತಿ ಭಗವಾನ್ ನೂನಂ ಪ್ರಭುಃ ಶೂಲಭೃತ್| ತಸ್ಯ ತ್ವಂ ಕಿಮು ಲಜ್ಜಿತಾ ನಹಿ ಜಗನ್ನಾಥೋ ಸಖೀ ಮೇ ಇತಿ| ಪ್ರತ್ಯುಕ್ತ್ಯಾ ಜಗದೀಶ್ವರೋ ಹಿ ಜಯತಿ ಪ್ರೋತ್ಸಾಹಿತಃ ಪಾರ್ವತ್ಯಾ||" ಗೌರಿಯು ತನ್ನ ಗಂಡನ ಜಟೆಯಲ್ಲಿ ಮತ್ತೊಬ್ಬ ಹೆಣ್ಣು ಇರುವುದನ್ನು ನೋಡಿ, ಅಸೂಯೆಯಿಂದ ಪ್ರಶ್ನಿಸುತ್ತಾಳೆ.

ಅದಕ್ಕೆ ಶಿವನು ತನ್ನ ಜಟೆಯಲ್ಲಿರುವ ಗಂಗೆಯನ್ನು ಮರೆಮಾಚಲು ಚತುರ ಉತ್ತರ ಕೊಡುತ್ತಾನೆ. ಆ ಸಂಭಾಷಣೆ ಹೀಗೆ ನಡೆಯುತ್ತದೆ. ಗೌರಿ: “ಈ ಸುಂದರಿ ಯಾರು? ಜಾಹ್ನವಿಯೇ?" ಶಿವ: (ತನ್ನ ತಲೆಯ ಮೇಲಿರುವುದು ಹೆಣ್ಣಲ್ಲ, ಕೇವಲ ನೀರು ಎಂದು ತೋರ್ಪಡಿಸಲು) “ಇದು ಬರೀ ಜಡವಾದ ನೀರು, ನೀನೇಕೆ ಇದರೊಂದಿಗೆ ಮಾತನಾಡುತ್ತಿದ್ದೀಯೆ?" ಗೌರಿ: “ಹಾಗಾದರೆ ಈಕೆಗೆ ಪತಿ ಇಲ್ಲವೇ?" ಶಿವ: “ಇದ್ದಾನಲ್ಲ, ಅವನೇ ತ್ರಿಶೂಲಧಾರಿಯಾದ ಭಗವಂತ!" ಗೌರಿ: “ಹಾಗಿದ್ದರೆ ಆಕೆಗೆ ನಿನ್ನನ್ನು ನೋಡಿ ನಾಚಿಕೆಯಾಗುತ್ತಿಲ್ಲವೇ?" ಶಿವ (ಗಂಗೆಯೇ ಮಾತಾಡುತ್ತಿದ್ದಾಳೇನೋ ಎಂಬಂತೆ): “ಇಲ್ಲ, ಆ ಜಗನ್ನಾಥನು ಕೇವಲ ನನ್ನ ಗೆಳೆಯ ಅಷ್ಟೇ!" ಗೌರಿಯ ಜೊತೆಗಿನ ಈ ಸಂಭಾಷಣೆಯಲ್ಲಿ ಜಗದೀಶ್ವರ ನಾದ ಶಿವನು ಆಕೆಯ ಪ್ರಶ್ನೆಗಳಿಗೆ ತಕ್ಕ ಚತುರ ಉತ್ತರ ನೀಡಿ ಜಯಶಾಲಿಯಾಗುತ್ತಾನೆ ಎಂಬುದು ಶ್ಲೋಕದ ಸಾರಾಂಶ.

ಇನ್ನೊಂದು ಸನ್ನಿವೇಶದಲ್ಲಿ ಗೌರಿಯ ಚತುರ ಪ್ರಶ್ನೆಗಳಿಗೆ ಪರಶಿವನೇ ಸೋಲೊಪ್ಪಿಕೊಳ್ಳ ಬೇಕಾಗು ತ್ತದೆ. ಆ ಸಂದರ್ಭ ಮತ್ತು ಶ್ಲೋಕ ಹೀಗಿದೆ. “ಕಸ್ತ್ವಂ ಶೂಲೀ ಮೃಗಯ ಭಿಷಜಂ ನೀಲಕಂಠಃ ಪ್ರಿಯೇಹಂ| ಕೇಕಾಮೇಕಾಂ ಕುರು ಪಶುಪತಿರ್ನೈವ ದೃಶ್ಯೇ ವಿಷಾಣೇ| ಸ್ಥಾಣುರ್ಮುಗ್ಧೇ ನ ವದತಿ ತರುರ್ಜೀವಿತೇಶಃ ಶಿವಾಯಾ| ಗಚ್ಛಾಟವ್ಯಾಮಿತಿ ಹತವಚಾಃ ಪಾತುವಶ್ಚಂದ್ರಚೂಡಃ||" ಪರಶಿವನು ಸಂಜೆ ವಾಕಿಂಗ್‌ಗಂತ ಒಬ್ಬನೇ ಹೊರಗೆ ಹೋಗಿದ್ದವನು ಮನೆಗೆ ಹಿಂದಿರುಗಿದಾಗ ಕಿಚನ್‌ನಲ್ಲಿದ್ದ ಗೌರಿಯು ಬೇಕಂತಲೇ ಬಾಗಿಲು ತೆರೆಯದೆ ಸತಾಯಿಸುತ್ತಾಳೆ. “ಯಾರು ನೀನು?" ಎಂದು ಕೇಳುತ್ತಾಳೆ. “ನಾನು ಶೂಲಿ (ಕೈಯಲ್ಲಿ ತ್ರಿಶೂಲ ಹಿಡಿದವನು)" ಎಂದು ಶಿವ ಹೊರಗಿಂದಲೇ ಉತ್ತರಿಸುತ್ತಾನೆ.

ಸಂಸ್ಕೃತದಲ್ಲಿ ಶೂಲ ಎಂದರೆ ಹೊಟ್ಟೆನೋವು ಥರದ ಯಾವುದೇ ದೈಹಿಕ ಬೇನೆ ಎಂದೂ ಅರ್ಥ ವಿದೆ. “ನಿನಗೆ ಹೊಟ್ಟೆನೋವಿದ್ದರೆ ಇಲ್ಲಿಗೇಕೆ ಬಂದೆ, ವೈದ್ಯರ ಬಳಿ ಹೋಗು!" ಎಂದು ಗೌರಿ ಕಿಚಾಯಿಸುತ್ತಾಳೆ. “ಪ್ರಿಯೇ ನಾನು ನೀಲಕಂಠ" ಎಂದು ಶಿವನ ಉತ್ತರ. ನೀಲಕಂಠ ಎಂದರೆ ನವಿಲು ಎಂದೂ ಅರ್ಥವಿದೆ. “ನೀನು ನವಿಲಾಗಿದ್ದರೆ ಮಳೆ ಬಂದಾಗ ನವಿಲು ಕೂಗಿದಂತೆ ಕೂಗು!" ಎನ್ನುತ್ತಾಳೆ.

ಆಗ ಶಿವ “ಅಯ್ಯೋ ನಾನು ನವಿಲಲ್ಲ. ಪಶುಪಕ್ಷಿಗಳಿಗೆಲ್ಲ ಒಡೆಯ" ಎನ್ನುತ್ತಾನೆ. ಪಶುಪತಿ ಎಂದರೆ ಎತ್ತು ಎಂಬ ಅರ್ಥವೂ ಇದೆ. “ಹಾಗಿದ್ದರೆ ನಿನಗೆ ಕೊಂಬುಗಳಿರಬೇಕಿತ್ತಲ್ವಾ?" ಗೌರಿ ಮತ್ತೊಮ್ಮೆ ಪೇಚಿಗೆ ಸಿಲುಕಿಸುತ್ತಾಳೆ. “ಎಲೈ ಮುಗ್ಧೆಯೇ, ನಾನು ಸ್ಥಾಣು ಅಂದರೆ ಸ್ಥಿರನಾದವನು, ಶಾಶ್ವತ ಪುರುಷ" ಎನ್ನುತ್ತಾನೆ ಶಿವ. ಸ್ಥಾಣು ಎಂದರೆ ಒಣಗಿದ ಮರ ಅಥವಾ ಮರದ ಮಂಡೆ ಅಂತಲೂ ಅರ್ಥವಿದೆ.

“ಮರಗಳು ಎಂದಿಗೂ ಮಾತನಾಡುವುದಿಲ್ಲವಲ್ಲ!?" ಗೌರಿ ಉವಾಚ. “ನಾನು ಶಿವೆಯರ (ದೇವತೆಗಳ ಅಥವಾ ಮಂಗಳಕರ ಶಕ್ತಿಗಳ) ಪ್ರಾಣನಾಥ" ಎಂದು ಶಿವ ಹೇಳುತ್ತಾನೆ ಹಣೆ ಬಡಿದುಕೊಳ್ಳುತ್ತ. ಸಂಸ್ಕೃತ ದಲ್ಲಿ ಶಿವಾ ಎಂದರೆ ನರಿ ಎಂದೂ ಆರ್ಥವಿದೆ. “ಓಹೋ ನೀನು ಗಂಡು ನರಿಯೇ? ಹಾಗಿದ್ದರೆ ಹೋಗಿಲ್ಲಿಂದ ಕಾಡಿಗೆ!" ಎನ್ನುತ್ತಾಳೆ ಗೌರಿ. ಹೀಗೆ ಶಿವನು ತನ್ನನ್ನು ಗುರುತಿಸಿಕೊಳ್ಳಲು ಹೇಳಿದ ಪ್ರತಿಯೊಂದು ಹೆಸರಿಗೂ ಗೌರಿಯು ಚಮತ್ಕಾರವಾಗಿ ಬೇರೆ ಅರ್ಥವನ್ನು ಕಲ್ಪಿಸಿ, ಶಿವನಿಗೆ ಉತ್ತರಿಸಲಾಗದಂತೆ ಮಾಡುತ್ತಾಳೆ.

ಕೊನೆಗೆ ಶಿವನು ನಾಚಿ ತಲೆ ತಗ್ಗಿಸುತ್ತಾನೆ. ಈ ಸಂಭಾಷಣೆಯು ಅವರಿಬ್ಬರ ದಾಂಪತ್ಯದಲ್ಲಿ ಮಧುರವಾದ ಹಾಸ್ಯ ಎಷ್ಟಿತ್ತೆಂದು ತೋರಿಸುತ್ತದೆ. ಗೌರಿಯೊಡನೆ ವಿವಾಹಕ್ಕೆ ಮೊದಲು ಮನ್ಮಥನ ಬಾಣಗಳಿಗೆ ಗುರಿಯಾಗಿದ್ದ ಶಿವನು ವಿನಮ್ರನಾಗಿ ಗೌರಿಯ ಚರಣಾರವಿಂದಗಳಲ್ಲಿ ತಲೆಯಿಟ್ಟಿದ್ದ ನಂತೆ. ವಿವಾಹಾ ನಂತರ ಆಗಾಗ ಮೇಲಿನಂತೆ ವಾದಗಳಲ್ಲಿ ಸೋತಾಗಲೂ ಅದೇ ನಮ್ರತೆಯಿಂದ ಗೌರಿಯ ಚರಣಗಳಿಗೆ ತನ್ನ ಹಣೆ ಮುಟ್ಟಿಸುತ್ತಿದ್ದನು (ಕಾಲು ಹಿಡೀತಿದ್ದನು) ಎನ್ನೋಣ. ಅಂತಹದೇ ಸಂದರ್ಭದ್ದೊಂದು ತಮಾಷೆ ಶ್ಲೋಕ ಹೀಗಿದೆ: “ಅನಂಗಬಾಣಾಕುಲಿತಸ್ಯ ಶಂಭೋಃ| ಶಿರೋ ಭವಾನೀಚರಣೇ ತಿನಮ್ರಮ್| ವಿಲೋಕ್ಯ ಕಾಚಿಚ್ಚರಣೇ ಚರಂತೀ| ಪಿಪೀಲಿಕಾ ಚುಂಬತಿ ಚಂದ್ರಬಿಂಬಮ್||" ಶಿವನು ನಮ್ರತೆಯಿಂದ ಗೌರಿಯ ಚರಣಾರವಿಂದಗಳಲ್ಲಿ ತಲೆಯನ್ನಿಡುತ್ತಾನೆ.

ಆಗ ಏನಾಗುತ್ತದೆ? ಅಲ್ಲೇ ಹರಿದಾಡುತ್ತಿದ್ದ ಒಂದು ಇರುವೆಯು ಚಂದ್ರಬಿಂಬವನ್ನು ಚುಂಬಿಸು ತ್ತದೆ! ಭೂಮಿಯ ಮೇಲೆ ಹರಿದಾಡುವ, ಹಾರಾಡಲಿಕ್ಕಾಗದ ಇರುವೆ, ಎಂದಾದರೂ ಚಂದ್ರನನ್ನು ಚುಂಬಿಸು ವುದು ಸಾಧ್ಯವುಂಟೇ? ಖಂಡಿತ ಇಲ್ಲ. ಆದರೆ ಶಿವನು ಗೌರಿಯ ಗೌರವದಲ್ಲಿ ನತಮಸ್ತಕ ನಾದಾಗ ಅವನ ತಲೆಯಲ್ಲಿರುವ ಚಂದ್ರನನ್ನು ಇರುವೆ ಸ್ಪರ್ಶಿಸುವುದು, ಚುಂಬಿಸುವುದು ಸಾಧ್ಯವಾಗುತ್ತದೆ! ಶಿವನ ತಲೆಯಲ್ಲಿರುವ ಚಂದ್ರನಷ್ಟೇ ಕಾಂತಿಯುತವಾಗಿ ಗೌರಿಯ ಕಾಲ್ಬೆರಳು ಗಳೂ ಶೋಭಿಸುತ್ತವೆ, ಅವುಗಳನ್ನೂ ಇರುವೆಗಳು ಚುಂಬಿಸಿರಬಹುದು ಎಂದು ಕವಿಯ ಕುಚೋದ್ಯ.

ಅಂತಹ ಅಪ್ರತಿಮ ಚೆಲುವೆ, ಚತುರೆ ಗೌರಿಯನ್ನು ಮೈಯೆಲ್ಲ ಬೂದಿ ಬಳೆದುಕೊಂಡ ಭಿಕ್ಷುಕನಿಗೆ ಮದುವೆ ಮಾಡಿಕೊಡಲಿಕ್ಕೆ ಹಿಮವಂತ-ಮೇನೆ ದಂಪತಿಗೆ ಮನಸ್ಸಾದರೂ ಹೇಗೆ ಬಂತೋ ಎಂದು ಆ ಕಾಲದ ಹೆಂಗಸರು ಬಾವಿಕಟ್ಟೆಯ ಬಳಿ ಲೋಕಾಭಿರಾಮ ಗುಸುಗುಸು ಹರಟೆಯಲ್ಲಿ ಮಾತಾಡಿ ಕೊಳ್ಳುತ್ತಿದ್ದರಂತೆ.

“ಕಥಯತ ಕಥಮೇಷಾ ಮೇನಯಾ ವಿಪ್ರದತ್ತಾ| ಶಿವ ಶಿವ ಗಿರಿಪುತ್ರೀ ವೃದ್ಧಕಾಪಾಲಿಕಾಯ| ಇತಿ ವದತಿ ಪುರಂಽಮಂಡಲೇ ಸಿದ್ಧಿಲೇಶ| ವ್ಯಯಕೃತವರವೇಷಃ ಪಾತು ವಃ ಶ್ರೀಮಹೇಶಃ||" ಆ ಬಗ್ಗೆ ಮೇನೆಗೂ ಬಹಳವೇ ಪಶ್ಚಾತ್ತಾಪ ಇತ್ತಂತೆ. “ನೀನು ತನ್ನ ಅಳಿಯ ಎಂದು ನಾಲ್ಕು ಜನರ ಮುಂದೆ ಹೇಳಿಕೊಳ್ಳಲು ನನಗೆ ಮುಜುಗರ ಮತ್ತು ನಾಚಿಕೆ ಆಗುತ್ತದೆ. ನಾನೇನು ಮಾಡಲಿ? ನೀನು ಕೈಯಲ್ಲಿ ಕಪಾಲ(ಬುರುಡೆ) ಹಿಡಿದುಕೊಂಡು ಊರೂರು ಅಲೆಯುವ ಒಬ್ಬ ನಿರ್ಗತಿಕ ಭಿಕ್ಷುಕ. ನನ್ನ ಮುದ್ದಿನ ಮಗಳು ಗೌರಿ ಕೋಟಿ ಸೂರ್ಯರ ಪ್ರಭೆಯುಳ್ಳವಳು. ಅಂತಹ ಶ್ರೀಮಂತ ಮಗಳನ್ನು ನಿನಗೆ ಕೊಟ್ಟೆನಲ್ಲಾ!" ಎಂದು ಶಿವನಲ್ಲೇ ಹೇಳಿ ಪರಿತಪಿಸುತ್ತಿದ್ದಳಂತೆ. ಕೊನೆಯಲ್ಲೊಂದು ಲೆಕ್ಕದ ಶ್ಲೋಕವನ್ನೂ ಉಲ್ಲೇಖಿಸಿ ಈ ಗೌರೀಪುರಾಣಕ್ಕೆ ಮಂಗಳ ಹಾಡೋಣ.

ಲೆಕ್ಕ ಕಷ್ಟದ್ದೇನಲ್ಲ, ಕೌತುಕ ತುಂಬಿರುವುದು ಅಷ್ಟೇ. “ಪಂಚಾಸ್ಯ ಪಂಚದಶ ನೇತ್ರಪಿಧಾನದಕ್ಷಾ| ದಾಕ್ಷಾಯಣೀ ಮೃದುಕರಾಃ ಕೃತಿನಃ ಪುನಂತು| ದ್ವೌ ವಲ್ಲಕೀಂ ಕಥಮಕೇತಿ ಚ ವಾದಯಂತಾ| ವಷ್ಟಾದಶೋಪಿ ಘಟಯನ್ಸ್ತುತಿ ಮೌನಮುದ್ರಾಮ್||" ಒಮ್ಮೆ ಗೌರಿಯು ಕಣ್ಣಾಮುಚ್ಚೇ ಕಾಡೇ ಗೂಡೇ ಎಂದು ತನ್ನ ಪತಿ ಶಿವನ ಕಣ್ಣುಗಳನ್ನು ಹಿಂದಿನಿಂದ ಬಂದು ಮುಚ್ಚಲು ಯತ್ನಿಸುತ್ತಾಳೆ. ಆದರೆ ಶಿವನಿಗೆ ಐದು ಮುಖಗಳು ಮತ್ತು ಒಟ್ಟು ಹದಿನೈದು ಕಣ್ಣುಗಳಿವೆ! ತನ್ನ ಎರಡು ಮೃದುವಾದ ಹಸ್ತಗಳಿಂದ ಆ ಹದಿನೈದು ಕಣ್ಣುಗಳನ್ನು ಒಟ್ಟಿಗೆ ಮುಚ್ಚಲು ಗೌರಿ ಹೆಣಗಾಡುತ್ತಿರು ತ್ತಾಳೆ.

ಈ ಪ್ರಣಯ ದೃಶ್ಯವನ್ನು ನೋಡುತ್ತಿದ್ದ ಸರಸ್ವತಿ ದೇವಿಗೆ ಆಶ್ಚರ್ಯವಾಗಿ, ಅವಳ ಕೈಯಲ್ಲಿದ್ದ ವೀಣೆಯ ಸ್ವರ ತಪ್ಪಿ ಅಪಸ್ವರ ಹೊರಡುತ್ತದೆ. ಅಷ್ಟೇ ಅಲ್ಲದೆ, ಅಲ್ಲಿಯೇ ಇದ್ದ ಬ್ರಹ್ಮ, ಗಣೇಶ, ಷಣ್ಮುಖ ಮತ್ತು ಸ್ವತಃ ಶಿವ-ಗೌರಿಯ ರನ್ನೊಳಗೊಂಡ ಒಟ್ಟು ಹದಿನೆಂಟು ಮುಖಗಳು ಈ ಸುಂದರ ಕೌತುಕವನ್ನು ಕಂಡು ಆಶ್ಚರ್ಯದಿಂದ ಹದಿನೆಂಟು ಮೂಗುಗಳ ಮೇಲೆ ಬೆರಳಿಟ್ಟುಕೊಂಡು ಮೌನಮುದ್ರೆಯನ್ನು ಧರಿಸುತ್ತವೆ! ಅಂತಹ ಶಿವನ ಹದಿನೈದು ಕಣ್ಣುಗಳನ್ನು ಮುಚ್ಚಲು ಯತ್ನಿಸುತ್ತಿರುವ ಗೌರಿಯ ಮೃದು ಹಸ್ತಗಳು ನಮ್ಮನ್ನು ಸದಾ ಪವಿತ್ರಗೊಳಿಸಲಿ ಮತ್ತು ರಕ್ಷಿಸಲಿ. ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಸಿಹಿಸಿಹಿ ಶುಭಾಶಯಗಳು.