Vishweshwar Bhat Column: ನೆಹರು- ವಾಜಪೇಯಿ ಸ್ನೇಹ
ವಾಜಪೇಯಿ ಅವರ ಸರದಿ ಬಂದಿತು. ಆಗ ನೆಹರು ಕ್ರುಶ್ಚೇವ್ ಅವರಿಗೆ ವಾಜಪೇಯಿ ಅವರನ್ನು ಪರಿಚಯಿಸುತ್ತಾ, ‘ಇವರು ನಮ್ಮ ದೇಶದ ಭವಿಷ್ಯದ ಪ್ರಧಾನಿ’ ಎಂದು ಉದ್ಗರಿಸಿ, ಪರಿಚಯಿಸಿ ದರು. ನೆಹರು ಅವರಿಂದ ವಾಜಪೇಯಿ ಆ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ಆ ಮಾತುಗಳನ್ನು ಕೇಳಿ ಕ್ರುಶ್ಚೇವ್‌ಗೂ ಅಚ್ಚರಿಯಾಯಿತು


ಸಂಪಾದಕರ ಸದ್ಯಶೋಧನೆ
1957ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅಂದಿನ ಜನಸಂಘದ ಅಭ್ಯರ್ಥಿಯಾಗಿ ಮಥುರಾ ಮತ್ತು ಬಲರಾಮಪುರ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಮಥುರಾ ದಲ್ಲಿ ಕಾಂಗ್ರೆ ಸ್ಸಿನ ರಾಜ ಮಹೇಂದ್ರ ಪ್ರತಾಪ್ ವಿರುದ್ಧ ಸೋತುಹೋದರು. ಆದರೆ ಬಲರಾಮ ಪುರ ದಿಂದ ಆಯ್ಕೆಯಾದರು. ಮೊದಲ ಸಲ ಲೋಕಸಭೆಯನ್ನು ಪ್ರವೇಶಿಸಿದ ವಾಜಪೇಯಿ ಒಮ್ಮೆ ಭಾರತದ ವಿದೇಶಾಂಗ ನೀತಿಯ ಕುರಿತು ಸಂಸತ್ತಿನಲ್ಲಿ ಸುದೀರ್ಘವಾಗಿ ಮಾತಾಡಿ ದರು. ಆಗ ಸದನದಲ್ಲಿ ಪ್ರಧಾನಿ ನೆಹರು ಹಾಜರಿದ್ದರು. ವಾಜಪೇಯಿಯವರ ಮಾತು ಗಳಿಂದ ನೆಹರು ಸಂತುಷ್ಟರಾಗಿ, ತಮ್ಮ ಸಂತಸವನ್ನು ಚೀಟಿಯಲ್ಲಿ ಬರೆದು ವಾಜಪೇಯಿಗೆ ತಿಳಿಸಿದರು. ಪ್ರತಿಪಕ್ಷದ ಒಬ್ಬ ಯುವ ಸಂಸದ ವಿದೇಶಾಂಗ ವಿಷಯದ ಬಗ್ಗೆ ಇಷ್ಟೊಂದು ಪ್ರಬುದ್ಧವಾಗಿ ಮಾತಾಡಿದ್ದು ನೆಹರುಗೆ ಖುಷಿಕೊಟ್ಟಿತ್ತು.
ಇದನ್ನೂ ಓದಿ: Vinayaka M Bhatta Column: ಕನ್ನಡಿಗರಿಗೊಲಿದ ಅದಿಕಾವ್ಯದ ಅಧ್ಯಯನ ಸೌಲಭ್ಯ
1960ರಲ್ಲಿ ಸೋವಿಯತ್ ಅಧ್ಯಕ್ಷ ನಿಕಿತಾ ಕ್ರುಶ್ಚೇವ್ ಭಾರತಕ್ಕೆ ಭೇಟಿ ನೀಡಿದರು. ಇದು ರಷ್ಯಾ ಅಧ್ಯಕ್ಷರ ಮಹತ್ವದ ಭಾರತ ಭೇಟಿಯಾಗಿತ್ತು. ಆ ಭೇಟಿಗೆ ಅತಿ ಮಹತ್ವವನ್ನು ನೀಡ ಲಾಗಿತ್ತು. ಕ್ರುಶ್ಚೇವ್ ಗೌರವಾರ್ಥ ಏರ್ಪಡಿಸಿದ ಭೋಜನಕೂಟದಲ್ಲಿ ಅತಿಗಣ್ಯ ವ್ಯಕ್ತಿ ಗಳನ್ನು ಖುದ್ದಾಗಿ ನೆಹರು ಅವರೇ ಪರಿಚಯಿಸುತ್ತಿದ್ದರು.
ವಾಜಪೇಯಿ ಅವರ ಸರದಿ ಬಂದಿತು. ಆಗ ನೆಹರು ಕ್ರುಶ್ಚೇವ್ ಅವರಿಗೆ ವಾಜಪೇಯಿ ಅವರನ್ನು ಪರಿಚಯಿಸುತ್ತಾ, ‘ಇವರು ನಮ್ಮ ದೇಶದ ಭವಿಷ್ಯದ ಪ್ರಧಾನಿ’ ಎಂದು ಉದ್ಗ ರಿಸಿ, ಪರಿಚಯಿಸಿದರು. ನೆಹರು ಅವರಿಂದ ವಾಜಪೇಯಿ ಆ ಮಾತುಗಳನ್ನು ನಿರೀಕ್ಷಿಸಿರ ಲಿಲ್ಲ. ಆ ಮಾತುಗಳನ್ನು ಕೇಳಿ ಕ್ರುಶ್ಚೇವ್‌ಗೂ ಅಚ್ಚರಿಯಾಯಿತು.
ಒಮ್ಮೆ ವಾಜಪೇಯಿ ಅಮೆರಿಕಕ್ಕೆ ಭೇಟಿ ನೀಡಿದಾಗ, ಆ ದೇಶದಲ್ಲಿನ ಭಾರತದ ರಾಯ ಭಾರಿಗೆ, ಅಲ್ಲಿನ (ಅಮೆರಿಕ) ನಾಯಕರಿಗೆ ವಾಜಪೇಯಿ ಅವರನ್ನು ಸರಿಯಾಗಿ ಪರಿಚಯಿಸ ಬೇಕು ಎಂದು ಸೂಚನೆ ನೀಡಿದ್ದರು. ನೆಹರು ಅವರ ಕಾರ್ಯವೈಖರಿ ಮತ್ತು ನೀತಿ-ನಿರ್ಧಾರ ಗಳನ್ನು ಆಗಾಗ ವಾಜಪೇಯಿ ಟೀಕಿಸಿದರೂ, ನೆಹರು ಮಾತ್ರ ವಾಜಪೇಯಿ ಬಗ್ಗೆ ವಿಶೇಷ ಪ್ರೀತಿ, ಆದರಗಳನ್ನು ಹೊಂದಿದ್ದರು. ಆ ದಿನಗಳಲ್ಲಿ ಇದು ಚರ್ಚೆಯ ವಿಷಯವಾಗಿತ್ತು.
1962ರ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ನೆಹರು ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ವಾಜಪೇಯಿ ಹೋಗಿ ಪ್ರಧಾನಿ ಮತ್ತು ಕಾಂಗ್ರೆಸ್ಸಿನ ವಿರುದ್ಧ ಭಾಷಣ ಮಾಡಿದರು. ವಾಜ ಪೇಯಿ ಮಾತುಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಕ್ರುದ್ಧರಾಗಿದ್ದರು. ಈ ವಿಷಯ ನೆಹರು ಕಿವಿಗೂ ಬಿತ್ತು. ವಾಜಪೇಯಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಹರಿಹಾಯಲು ಮುಂದಾದಾಗ ನೆಹರು, ‘ಆನೇ ದೋ ನ.. ವೊ ಅಚ್ಛಾ ಬೋಲ್ತಾ ಹೈ.. ಬೋಲ್‌ನೇ ದೋ ನ..’ (ಅವರು ಬರಲಿ.. ಅವರು ಸೊಗಸಾಗಿ ಮಾತಾಡುತ್ತಾರೆ, ಮಾತಾಡಲಿ ಬಿಡಿ) ಎಂದು ತಮ್ಮ ಕಾರ್ಯಕರ್ತರನ್ನು ಸಮಾಧಾನಪಡಿಸಿದ್ದರು.
‘ಮತದಾರರು ನನಗೆ ಮತ ನೀಡ ಬಯಸಿದರೆ ಒಳ್ಳೆಯದು. ಇಲ್ಲವೇ, ಬೇರೆಯವರಿಗೆ ಮತ ನೀಡಲು ಬಯಸಿದರೂ ಒಳ್ಳೆಯದೇ’ ಎಂದು ನೆಹರು ಹೇಳಿದ್ದರು. ನೆಹರು ಅವರ ಈ ಮಾತುಗಳನ್ನು ವಾಜಪೇಯಿ ಅನೇಕ ಸಂದರ್ಭಗಳಲ್ಲಿ ಪುನರುಚ್ಚರಿಸಿದ್ದುಂಟು. 1996ರಲ್ಲಿ ಲಾತೂರು ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುವಾಗ, ಕಾಂಗ್ರೆಸ್ಸಿನ ಅಭ್ಯರ್ಥಿ ಶಿವ ರಾಜ ಪಾಟೀಲ್ ಅವರನ್ನುದ್ದೇಶಿಸಿ, ವಾಜಪೇಯಿ ಅದೇ ಮಾತನ್ನು ಹೇಳಿದ್ದರು. ಅದನ್ನು ಕೇಳಿದ ಶಿವರಾಜ್ ಪಾಟೀಲ್ ಪತ್ನಿ ವಿಜಯಾ ಪಾಟೀಲ್ ತಮ್ಮ ಪತಿಗೆ, ‘ವಾಜಪೇಯಿ ಅವರನ್ನು ನೀವು ಕರೆಯಿಸಿದ್ದೀರಾ ಅಥವಾ ಅವರ ಪಕ್ಷ ಕಳಿಸಿದೆಯಾ?’ ಎಂದು ಚಟಾಕಿ ಹಾರಿಸಿದ್ದರು.
ನೆಹರು ವಾಜಪೇಯಿ ಬಗ್ಗೆ ಯಾವ ಉದಾರಭಾವ ಹೊಂದಿದ್ದರೋ, ವಾಜಪೇಯಿ ಅವರು ತಮ್ಮ ರಾಜಕೀಯ ವಿರೋಧಿಗಳ ಬಗ್ಗೆಯೂ ಅದೇ ಉದಾರಭಾವವನ್ನು ಹೊಂದಿದ್ದರು. ಈ ವಿಷಯದಲ್ಲಿ ವಾಜಪೇಯಿ, ನೆಹರು ಅವರಿಂದ ಪ್ರಭಾವಿತರಾಗಿದ್ದರು. ‘ಚುನಾವಣಾ ಅಖಾಡದಲ್ಲಿ ಮಾತ್ರ ಪ್ರತಿಸ್ಪರ್ಧಿಗಳು, ಅದು ಮುಗಿದ ಬಳಿಕ ರಾಜಕಾರಣವನ್ನು ಹಿಂದಿನ ಸೀಟಿಗೆ ಕಳಿಸಬೇಕು’ ಎಂದು ವಾಜಪೇಯಿ ಅದೆಷ್ಟೋ ಬಾರಿ ಹೇಳಿದ್ದುಂಟು. ಅಷ್ಟೇ ಅಲ್ಲ, ಅವರು ಅದೇ ರೀತಿ ನಡೆದುಕೊಂಡರು ಕೂಡ.