ಸಂಗತ
ವೀರರ ನಾಡು, ಪರ್ವತಗಳ ದೇಶವಾದ ನೇಪಾಳವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ದೊಡ್ಡ ದೊಡ್ಡ ಶಕ್ತಿಗಳು ಬಯಸುತ್ತಿವೆ. ಇದು ಭಾರತಕ್ಕೂ ದೊಡ್ಡ ಸವಾಲೇ ಆಗಿದೆ. ನನ್ನ ಪ್ರಶ್ನೆಯೇನೆಂದರೆ, ನೆರೆಯ ದೇಶಗಳಲ್ಲಿ ದಂಗೆಗಳು ರೂಪುಗೊಳ್ಳುವುದು ಭಾರತದ ಗುಪ್ತಚರ ದಳಕ್ಕೆ ಏಕೆ ತಿಳಿಯುವುದೇ ಇಲ್ಲ?
ಇಪ್ಪತ್ತನಾಲ್ಕು ವರ್ಷಗಳ ಹಿಂದೆ ನೇಪಾಳದಲ್ಲೊಂದು ದೊಡ್ಡ ದುರಂತ ನಡೆದಿತ್ತು, ನೆನಪಿದೆಯಾ? ಅಲ್ಲಿನ ಯುವರಾಜ ದೀಪೇಂದ್ರ ಗನ್ ತೆಗೆದುಕೊಂಡು ತನ್ನ ಮನೆಯವರನ್ನೆಲ್ಲಾ ಗುಂಡು ಹಾರಿಸಿ ಸಾಯಿಸಿದ್ದ. ಅವನ ತಂದೆ, ನೇಪಾಳದ ರಾಜ ಬೀರೇಂದ್ರ, ತಾಯಿ ಐಶ್ವರ್ಯ ಸೇರಿದಂತೆ ಬರೋಬ್ಬರಿ ಒಂಭತ್ತು ಮಂದಿ ಮೃತಪಟ್ಟಿದ್ದರು. ನಂತರ ದೀಪೇಂದ್ರ ತನಗೆ ತಾನೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದ. ಆ ಘಟನೆ ಇವತ್ತಿಗೂ ಬಗೆಹರಿದಿಲ್ಲ.
ಈಗಲೂ ಅದರ ಬಗ್ಗೆ ಪ್ರಶ್ನೆಗಳೇ ಇವೆಯೇ ಹೊರತು, ಉತ್ತರ ಸಿಕ್ಕಿಲ್ಲ. ಅದೇ ರೀತಿ, ಮೊನ್ನೆ ಮೊನ್ನೆ ನಡೆದ ನೇಪಾಳದ ಹಿಂಸಾಚಾರ ಮತ್ತು ರಕ್ತಪಾತಕ್ಕೂ ನಮಗೆ ಬಹುಶಃ ಪರಿಪೂರ್ಣ ಉತ್ತರ ಸಿಗುವುದಿಲ್ಲ. ಆ ದಂಗೆ ಏಕೆ ನಡೆಯಿತು? ಅದರಿಂದ ರಾಜಕೀಯ ಲಾಭ ಪಡೆದುಕೊಂಡವರು ಯಾರು? ನಿಜಕ್ಕೂ ಯುವಕರ ಸಿಟ್ಟೇ ಅದಕ್ಕೆ ಕಾರಣವಾ? ಮೇಲಿನ ಎರಡೂ ಘಟನೆಗಳಿಗೆ ನೇರ ವಾದ ಸಂಬಂಧ ಇಲ್ಲದೆ ಇರಬಹುದು.
ಶಾಂತ ದೇಶ ನೇಪಾಳ ಹೇಗೆ ದೊಡ್ಡ ದೊಡ್ಡ ಶಕ್ತಿಗಳ ಷಡ್ಯಂತ್ರಕ್ಕೆ ಬಲಿಯಾಗಿ ತನ್ನನ್ನು ತಾನು ಹಿಂಸಿಸಿಕೊಳ್ಳುತ್ತಿದೆ ಎಂಬುದನ್ನು ಹೇಳುವುದಕ್ಕಾಗಿ ಈ ಎರಡು ಘಟನೆಗಳನ್ನು ಪ್ರಸ್ತಾಪಿಸಿದೆ. ನೇಪಾಳ ಶಾಂತ ದೇಶವಾಗಿದ್ದರೂ ವೀರ ಪುರುಷರ ನಾಡು. ಅಲ್ಲಿನ ಜನ ಸಹಿಷ್ಣುಗಳು. ಆದರೆ ಹೊರಗಿನ ಶಕ್ತಿಗಳ ಆಟವನ್ನು ಎದುರಿಸುವಷ್ಟು ಬಲಿಷ್ಠ ದೇಶವಲ್ಲ.
ಕೆ.ಪಿ.ಶರ್ಮಾ ಓಲಿಯವರ ಸರಕಾರ ಸೋಷಿಯಲ್ ಮೀಡಿಯಾಗಳ ಮೇಲೆ ನಿರ್ಬಂಧ ಹೇರಿದ್ದಕ್ಕೆ ಯುವಕರು ಸಿಟ್ಟಾಗಿದ್ದು ಸಹಜವೇ. ಮೊದಲ ದಿನದ ಪ್ರತಿಭಟನೆ ಆ ನಿರ್ಬಂಧಗಳ ಪ್ರತಿಫಲವೇ ಆಗಿತ್ತು. ಆದರೆ, ಎರಡನೇ ದಿನವೂ ಹಿಂಸಾಚಾರ ಮುಂದುವರಿಯಿತಲ್ಲವೇ, ಅದು ಅನಿರೀಕ್ಷಿತ ವಾಗಿತ್ತು.
ಇದನ್ನೂ ಓದಿ: Dr Vijay Darda Column: ಅಮೃತಕ್ಕೆ ಸಮಾನ ರಾಮ ಮತ್ತು ಕೃಷ್ಣನ ಕತೆಗಳು
ಎರಡನೇ ದಿನದ ಪ್ರತಿಭಟನೆಗೆ ಹೋರಾಟಗಾರರು ಶಸ್ತ್ರಾಸ್ತ್ರಗಳನ್ನು ತಂದಿದ್ದರು. ಸಂಸತ್ ಭವನಕ್ಕೇ ಬೆಂಕಿ ಹಚ್ಚಿದರು. 112 ವರ್ಷಗಳ ವೈಭವೋಪೇತ ದರ್ಬಾರ್ ಹಾಲ್ ಧ್ವಂಸಗೊಳಿಸಿದರು. ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳ ನಿವಾಸದ ಮೇಲೂ ದಾಳಿ ನಡೆಸಿದರು. ಸುಪ್ರೀಂ ಕೋರ್ಟ್ ನ ಕಟ್ಟಡಕ್ಕೂ ಬೆಂಕಿ ಹಚ್ಚಲಾಯಿತು. ಇದು ಕೇವಲ ಸಿಟ್ಟಿಗೆದ್ದ ಯುವಕರ ಕೆಲಸವಾಗಿರುವುದಿಲ್ಲ.
ಅವರ ನಡುವೆ ಹಣ ಪಡೆದ ದುಷ್ಕರ್ಮಿಗಳು ಸೇರಿಕೊಂಡು ಹಿಂಸಾಚಾರ ನಡೆಸಿದರೇ? ಬಹುಶಃ ಹೌದು. ಆದರೆ ಸಾಕ್ಷ್ಯವಿಲ್ಲದೆ ಯಾರನ್ನೂ ಬೊಟ್ಟು ಮಾಡುವುದು ಸರಿಯಾಗುವುದಿಲ್ಲ. ನನ್ನ ಅಂದಾಜು ಏನೆಂದರೆ, ಹಿಂದೆ ಜಗತ್ತಿನ ಏಕೈಕ ಹಿಂದೂ ದೇಶವಾಗಿದ್ದ ನೇಪಾಳದ ರಾಜಮನೆತನ ವನ್ನು ಸಂಪೂರ್ಣ ನಾಶಪಡಿಸಿದ ಶಕ್ತಿಯೇ ಈಗಿನ ದಂಗೆಯ ಹಿಂದೆಯೂ ಇರಬಹುದು. ಇಂತಹ ಶಕ್ತಿಗಳಿಗೆ ದಂಗೆಗಳನ್ನು ಹುಟ್ಟುಹಾಕುವುದು ಹೇಗೆಂಬುದು ಚೆನ್ನಾಗಿ ಗೊತ್ತಿರುತ್ತದೆ.
ಹಿಂದೆ ನೇಪಾಳದಲ್ಲಿ 239 ವರ್ಷಗಳ ರಾಜಪ್ರಭುತ್ವ ಕೊನೆಗೊಂಡು ಪ್ರಜಾಪ್ರಭುತ್ವ ಬಂದಾಗ ಜಗತ್ತು ಸ್ವಾಗತಿಸಿತ್ತು. ನೇಪಾಳದ ಜನರಿಗೆ ಹೊಸ ಆಶಾಕಿರಣ ಕಾಣಿಸಿತ್ತು. ಬಡತನ ಹೋಗಿ ಸಮೃದ್ಧಿ ಬರಬಹುದು ಎಂದು ಅವರು ನಿರೀಕ್ಷಿಸಿದ್ದರು. ಏಕೆಂದರೆ ನೇಪಾಳದಲ್ಲಿ ಜನಸಾಮಾನ್ಯರ ಬದುಕು ಬಹಳ ಕಷ್ಟಕರವಾಗಿತ್ತು. ಈಗಲೂ ಪ್ರತಿ ವರ್ಷ ನಾಲ್ಕು ಲಕ್ಷ ನೇಪಾಳಿ ಯುವಕರು ವಿದೇಶಗಳಿಗೆ ವಲಸೆ ಹೋಗುತ್ತಾರೆ. ಅವರು ತಮ್ಮ ಮನೆಗಳಿಗೆ ಕಳುಹಿಸುವ ಹಣವೇ ದೇಶದ ಜಿಡಿಪಿಯ ಶೇ.25ರಷ್ಟಾಗುತ್ತದೆ.
ಕಡಿಮೆಯೆಂದರೂ 50 ಲಕ್ಷ ನೇಪಾಳಿಗಳು ಜಗತ್ತಿನಾದ್ಯಂತ ಬೇರೆ ಬೇರೆ ದೇಶಗಳಲ್ಲಿ ನೆಲೆಯೂರಿ ದ್ದಾರೆ. ಈ ಸಂಖ್ಯೆಯಲ್ಲಿ ಭಾರತದಲ್ಲಿ ಕೆಲಸ ಮಾಡುತ್ತಿರುವ ನೇಪಾಳಿಗಳು ಸೇರಿಲ್ಲ. ಏಕೆಂದರೆ ನೇಪಾಳ ಮತ್ತು ಭಾರತದ ನಡುವೆ ವಲಸೆ ಮತ್ತು ನೌಕರಿಯ ವಿಷಯದಲ್ಲಿ ತುಂಬಾ ಆಳವಾದ ನಂಟಿದೆ. ಜೀವನೋಪಾಯಕ್ಕಾಗಿ ಆ ಕಡೆ ಇರುವವರು ಈ ಕಡೆ ಬಂದು ಹೋಗುವುದು, ಇಲ್ಲಿನವರು ಅಲ್ಲಿಗೆ ಹೋಗಿಬರುವುದು ಸರ್ವೇಸಾಮಾನ್ಯ.
ಹೀಗಾಗಿ ಇವೆರಡು ದೇಶಗಳು ತಮ್ಮನ್ನು ಪರಸ್ಪರ ಪ್ರತ್ಯೇಕ ದೇಶಗಳೆಂದು ಪರಿಗಣಿಸಿಯೇ ಇಲ್ಲ. ನೇಪಾಳದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾದಾಗ ಭಾರತವೂ ಸ್ವಾಗತಿಸಿತ್ತು. ಆದರೆ ಅಲ್ಲೇ ಪಕ್ಕ ದಲ್ಲಿದ್ದ ಕಮ್ಯುನಿಸ್ಟ್ ಆಳ್ವಿಕೆಯ ಚೀನಾದ ನಾಯಕರು ನೇಪಾಳದ ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡಿದ್ದರು. ಅಲ್ಲಿನ ಪ್ರಧಾನ ಮಂತ್ರಿಯ ಕುರ್ಚಿ ಕೆ.ಪಿ.ಶರ್ಮಾ ಓಲಿ, ಪುಷ್ಪಕಮಲ್ ದಹಲ್ ಅಲಿಯಾಸ್ ಪ್ರಚಂಡ ಹಾಗೂ ಶೇರ್ ಬಹಾದೂರ್ ದೇವುಬಾ ನಡುವಿನ ಮ್ಯೂಸಿಕಲ್ ಚೇರ್ ಆಯಿತು. ಅದರ ನಡುವೆ, ಒಲಿ ಚೀನಾದ ರಾಯಭಾರಿ ಹೌ ಯಾಂಕಿಯನ್ನು ಓಲೈಸತೊಡಗಿ ದರು.
ರಾಜಕೀಯ ನಾಯಕರ ನಂದೋರಾ ಯತನವನ್ನು ನೋಡಿ ನೇಪಾಳದ ಜನರು ಕುದಿಯತೊಡಗಿ ದ್ದರು. ಕೆ.ಪಿ.ಶರ್ಮಾ ಓಲಿ ಮುಂತಾದ ನಾಯಕರ ಸಂಪತ್ತು ನೂರು ಪಟ್ಟು, ಸಾವಿರ ಪಟ್ಟು ಹೆಚ್ಚಾ ಯಿತು. ಅವರ ಮಕ್ಕಳು ರಾಜಕುಮಾರರಂತೆ ಐಷಾರಾಮಿ ಬದುಕು ನಡೆಸತೊಡಗಿದರು. ಅವೆಲ್ಲವೂ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸುದ್ದಿಯಾಗುತ್ತಿದ್ದವು.
ನೇಪಾಳದ ಅರ್ಧದಷ್ಟು ಜನಸಂಖ್ಯೆ 25 ವರ್ಷಕ್ಕಿಂತ ಕೆಳಗಿದೆ. ಹೀಗಾಗಿ, ಆಳುವವರ ಐಷಾರಾಮಿ ದರ್ಬಾರು ಮತ್ತು ಜನಸಾಮಾನ್ಯರ ಬಡತನ ಈ ಅಸಮಾನತೆಯು ಯುವಕರಲ್ಲಿ ಬೆಂಕಿಯ ಕಿಡಿ ಹೊತ್ತಿಸಿತ್ತು. ಅದು ಸ್ಫೋಟಿಸಲು ಸರಿಯಾದ ಸಮಯಕ್ಕಾಗಿ ಕಾಯುತ್ತಿತ್ತು. ಅದಕ್ಕೆ ಸರಿಯಾಗಿ ಸರ್ಕಾರ ಸೋಷಿಯಲ್ ಮೀಡಿಯಾಗಳನ್ನು ನಿಷೇಧಿಸಿತು.
ಅದು ಯುವಕರೊಳಗಿದ್ದ ಸುಪ್ತ ಬೆಂಕಿ ಭುಗಿಲೇಳಲು ಒಂದು ನೆಪವಾಯಿತು. ಇದಕ್ಕಾಗಿಯೇ ಕಾಯುತ್ತಿದ್ದ ಕೆಲ ವಿದೇಶಿ ಶಕ್ತಿಗಳು ಯುವಕರಲ್ಲಿದ್ದ ಸಿಟ್ಟಿನ ಜ್ವಾಲೆಗೆ ಪೆಟ್ರೋಲ್ ಸುರಿದವು. ಹೀಗಾಗಿ ಅದು ದಂಗೆಯಾಗಿ ಮಾರ್ಪಟ್ಟಿತು. ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ದಂಗೆಯೂ ಇದೇ ರೀತಿಯಲ್ಲೇ ನಡೆದಿತ್ತು.
ಬಾಂಗ್ಲಾ ದಂಗೆಗೆ ಭಾರತ ದುಬಾರಿ ಬೆಲೆ ತೆತ್ತಿದೆ. ಭಾರತದೊಂದಿಗೆ ಅತ್ಯಂತ ಸ್ನೇಹಶೀಲ ಸಂಬಂಧ ಹೊಂದಿದ್ದ ಆ ದೇಶವೀಗ ಪಾಕಿಸ್ತಾನದ ಜೊತೆಗೆ ಕೈಜೋಡಿಸಿದೆ. ಬಾಂಗ್ಲಾ ಮತ್ತು ಪಾಕಿಸ್ತಾನ ಗಳೆರಡೂ ಈಗ ಅಮೆರಿಕದ ಮಡಿಲಿನಲ್ಲಿ ಹೋಗಿ ಕುಳಿತಿವೆ. ಇದನ್ನೆಲ್ಲ ನೋಡಿದಾಗ ನನ್ನನ್ನು ಪದೇ ಪದೇ ಕಾಡುವ ಪ್ರಶ್ನೆ ಏನೆಂದರೆ, ನಮ್ಮ ದೇಶದ ಗುಪ್ತಚರ ಏಜೆನ್ಸಿಗಳಿಗೆ ಏಕೆ ಇದೆಲ್ಲ ಮೊದಲೇ ತಿಳಿಯುವುದಿಲ್ಲ? ಏಕೆ ಅವು ಮೇಲಿಂದ ಮೇಲೆ ಒಂದೇ ತಪ್ಪು ಮಾಡುತ್ತಿವೆ? ಕಾರ್ಗಿಲ್ ನಿಂದ ಹಿಡಿದು ಪಹಲ್ಗಾಮ್ ದಾಳಿಯವರೆಗೆ ಗುಪ್ತಚರ ದಳಗಳು ಮಾಡಿದ ತಪ್ಪು ಬೇಕಾದಷ್ಟಿವೆ. ಅದನ್ನು ನೋಡಿದರೆ ಆಘಾತವಾಗುತ್ತದೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ಷಡ್ಯಂತ್ರದ ಒಂದೇ ಒಂದು ಸುಳಿವು ಕೂಡ ಏಕೆ ನಮಗೆ ಮೊದಲೇ ಸಿಗಲಿಲ್ಲ? ಗುಪ್ತಚರ ಏಜೆನ್ಸಿಗಳ ಕೆಲಸವೇ ಅಕ್ಕಪಕ್ಕದ ದೇಶಗಳಲ್ಲಿ ನಡೆಯುವ ವ್ಯವಹಾರಗಳ ಮೇಲೆ ಕಣ್ಣಿಟ್ಟು, ಅದಕ್ಕೆ ತಕ್ಕಂತೆ ಅಜೆಂಡಾಗಳನ್ನು ರೂಪಿಸಿ, ನಮ್ಮ ದೇಶದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದು.
ನೇಪಾಳದಲ್ಲಿ ಅಲ್ಲಿನ ಸರಕಾರವನ್ನು ಚೀನಾ ದೇಶ ನೇರವಾಗಿ ನಿಯಂತ್ರಿಸುತ್ತಿತ್ತು. ಅದು ಹೇಳಿ ಕೊಟ್ಟ ಮಾತುಗಳನ್ನು ಕೆ.ಪಿ.ಶರ್ಮಾ ಆಡುತ್ತಿದ್ದರು. ಆದ್ದರಿಂದಲೇ ಅವರು ಶ್ರೀರಾಮ ಭಾರತದಲ್ಲಿ ಹುಟ್ಟಿಲ್ಲ, ನೇಪಾಳದಲ್ಲಿ ಹುಟ್ಟಿದ್ದಾನೆ ಎಂದು ಹೇಳಿದ್ದರು. ಆದ್ದರಿಂದಲೇ ಅವರು ಲಿಪುಲೇಖ್ ನೇಪಾಳಕ್ಕೆ ಸೇರಿದ್ದು ಎಂದರು. ಭಾರತದ ಭೂಪ್ರದೇಶಗಳನ್ನು ಸೇರಿಸಿಕೊಂಡು ನೇಪಾಳದ ನಕ್ಷೆ ಗಳನ್ನು ಅಚ್ಚು ಹಾಕಿಸಿದರು.
ಮಧೇಸಿ ಚಳವಳಿಯ ಸಮಯದಲ್ಲಿ ಭಾರತವು ಐತಿಹಾಸಿಕವಾಗಿ ನೇಪಾಳದ ಮೇಲೆ ದಬ್ಬಾಳಿಕೆ ನಡೆಸಿದೆ ಎಂಬ ಸುಳ್ಳನ್ನು ನೇಪಾಳಿಗಳ ತಲೆಯಲ್ಲಿ ಬಿತ್ತಲು ಚೀನಾ ಸಾಕಷ್ಟು ಪ್ರಯತ್ನಿಸಿತ್ತು. ಹಾಗಿದ್ದರೆ, ಮತ್ತದೇ ಪ್ರಶ್ನೆ ಕೇಳಬೇಕಾಗುತ್ತದೆ: ನಮ್ಮ ಗುಪ್ತಚರ ಏಜೆನ್ಸಿಗಳು ಏನು ಮಾಡುತ್ತಿವೆ? ಈ ಹಿಂದೆ ಡಾರ್ಜಿಲಿಂಗ್ ಪ್ರದೇಶವನ್ನು ಒಡೆದು ಪ್ರತ್ಯೇಕ ಗೋರ್ಖಾಲ್ಯಾಂಡ್ ರಚಿಸಲು ಭಾರತದ ಮೇಲೆ ಆ ಪ್ರದೇಶದ ಜನರು ಒತ್ತಡ ಹಾಕುವಂತೆ ಚೀನಾ ಸಂಚು ರೂಪಿಸಿತ್ತು.
ಪಟ್ಟಿ ಮಾಡುತ್ತಾ ಹೋದರೆ ನಮ್ಮ ಗುಪ್ತದಳದ ವೈಫಲ್ಯಗಳು ಸಾಲುಸಾಲು ಸಿಗುತ್ತವೆ. ಕಳೆದ ವರ್ಷ ಕಠ್ಮಂಡು ಮೇಯರ್ ಬಲೇಂದ್ರ ಶಾ ಮತ್ತು ಅಮೆರಿಕದ ರಾಯಭಾರಿ ನಡುವೆ ನಡೆದ ಭೇಟಿಯನ್ನು ನಮ್ಮ ಗುಪ್ತದಳ ಯಾವತ್ತಾದರೂ ಗಂಭೀರವಾಗಿ ಪರಿಗಣಿಸಿ ವಿಶ್ಲೇಷಿಸುವ ಕೆಲಸ ಮಾಡಿದೆಯೇ? ಅದೇ ಬಲೇಂದ್ರ ಶಾ ಈಗ ನೇಪಾಳದ ಯುವಕರ ಕಣ್ಮಣಿಯಾಗಿದ್ದಾರೆ.
ಅದು ಹೋಗಲಿ, ನೇಪಾಳ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡ ನಂತರ ಅಲ್ಲಿ ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳು ಅನಿರೀಕ್ಷಿತ ಪ್ರಮಾಣದಲ್ಲಿ ಬೆಳೆದಿವೆ ಎಂಬುದನ್ನಾದರೂ ನಾವು ಗಮನಿಸಿದ್ದೇವಾ? ಶತಮಾನಗಳ ಕಾಲ ಹಿಂದೂ ದೇಶವಾಗಿದ್ದ ನೇಪಾಳದಲ್ಲಿ ಅಷ್ಟೊಂದು ವೇಗವಾಗಿ ಮತಾಂತರಗಳು ನಡೆದಿದ್ದು ಹೇಗೆ? ಕೆ.ಪಿ.ಶರ್ಮಾ ಓಲಿಯನ್ನು ಅಪ್ಪಿಕೊಂಡ ಚೀನಾದ ಅದೇ ರಾಯಭಾರಿ ಹೌ ಯಾಂಕಿ ಅದಕ್ಕೂ ಮುಂಚೆ ಪಾಕಿಸ್ತಾನಕ್ಕೆ ರಾಯಭಾರಿಯಾಗಿದ್ದರು.
ಹೀಗಾಗಿ ನೇಪಾಳದಲ್ಲೂ ಆಕೆ ಪಾಕಿಸ್ತಾನದಲ್ಲಿ ಆಡಿದ ಆಟವನ್ನೇ ಆಡಿರುತ್ತಾಳೆ. ನಿಮಗೆ ಆಶ್ಚರ್ಯ ವಾಗಬಹುದು, 2018ರಲ್ಲಿ ಭಾರತ-ನೇಪಾಳದ ಗಡಿಯಲ್ಲಿ 760 ಇದ್ದ ಮಸೀದಿಗಳ ಸಂಖ್ಯೆ ಈಗ 1000 ದಾಟಿದೆ. ೫೦೮ ಇದ್ದ ಮದರಸಾಗಳ ಸಂಖ್ಯೆ ಈಗ 645ಕ್ಕೆ ಏರಿದೆ. ಅವುಗಳನ್ನೆಲ್ಲ ಟರ್ಕಿಯ ಹಣದಲ್ಲಿ ನಿರ್ಮಿಸಲಾಗಿದೆ.
ಅಷ್ಟು ಸಣ್ಣ ದೇಶದಲ್ಲಿ 8000 ಚರ್ಚುಗಳಿವೆ. ಮಸೀದಿ, ಚರ್ಚುಗಳನ್ನು ನಿರ್ಮಿಸುವುದಕ್ಕೆ ನನ್ನದೇನೂ ವಿರೋಧವಿಲ್ಲ. ಆದರೆ ಅವು ಭಾರತದ ಗಡಿಯಲ್ಲಿವೆ ಮತ್ತು ಬೇರೆ ದೇಶಗಳು ಅವುಗಳನ್ನು ನಿರ್ಮಿಸಿವೆ ಎಂಬುದು ಗಮನಾರ್ಹ ಸಂಗತಿ. ನೇಪಾಳವೇ ಅವುಗಳನ್ನು ನಿರ್ಮಿಸಿದ್ದರೆ ಪ್ರಶ್ನೆ ಬೇರೆ ಇತ್ತು.
ಇಂದು ಭಾರತದ ಜೊತೆಗೆ ಗಡಿ ಹಂಚಿಕೊಂಡಿರುವ ಹೆಚ್ಚುಕಮ್ಮಿ ಎಲ್ಲಾ ದೇಶಗಳೂ ಆಂತರಿಕ ರಾಜಕೀಯ ತುಮುಲಗಳಲ್ಲಿ ಮುಳುಗಿವೆ. ಎಲ್ಲೂ ಸ್ಥಿರವಾದ ಆಡಳಿತವಿಲ್ಲ. ಅದರ ಪರಿಣಾಮ ನಮ್ಮ ದೇಶದ ಮೇಲೆ ಆಗಿಯೇ ಆಗುತ್ತದೆ ಮತ್ತು ಆಗುತ್ತಿದೆ ಕೂಡ. ನಾವೀಗ ನೇಪಾಳದ ಯುವಕರಿಗೆ ಭಾರತ ನಿಮ್ಮೊಂದಿಗಿದೆ ಎಂಬ ಭರವಸೆ ಮೂಡಿಸಬೇಕಿದೆ. ಅವರು ತಮ್ಮ ದೇಶದ ಸಾರ್ವಭೌಮತೆ ಯನ್ನು ಕಾಯಾವಾಚಾಮನಸಾ ಗೌರವಿಸುವಂತೆ ಮಾಡಲು ಭಾರತ ಪ್ರಯತ್ನಿಸಬೇಕಿದೆ.
ಅದಕ್ಕೆ ಬೇಕಿರುವ ಸಂಪನ್ಮೂಲವನ್ನು ಭಾರತವೇ ಒದಗಿಸಬೇಕಿದೆ. ಈಗ ನೇಪಾಳಕ್ಕೆ ಅಲ್ಲಿನ ಸುಪ್ರೀಂಕೋಟ್ ನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕಾರ್ಕಿ ಮಧ್ಯಂತರ ಪ್ರಧಾನಿ ಯಾಗಿದ್ದಾರೆ. ಸರ್ಕಾರವನ್ನು ಸ್ಥಿರವಾಗಿ ಕಟ್ಟಿ ನಿಲ್ಲಿಸುವ ಪ್ರಯತ್ನದಲ್ಲಿ ಅವರಿದ್ದಾರೆ. ನೇಪಾಳದಲ್ಲಿ ಆದಷ್ಟು ಬೇಗ ಶಾಂತಿ ಸ್ಥಾಪನೆಯಾಗಿ, ಪುಟ್ಟ ಪರ್ವತರಾಷ್ಟ್ರ ಮತ್ತೆ ಪ್ರಗತಿಯ ದಾರಿಯಲ್ಲಿ ದಾಪುಗಾಲು ಹಾಕಲಿ ಎಂಬುದಷ್ಟೇ ನನ್ನ ಆಶಯ.