ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokesh Kaayarga Column: ಏನೇ ಇರಲಿ, ಬರುವುದೆಲ್ಲವನ್ನೂ ಎದುರಿಸಲೇಬೇಕು

ತಾನು ಅಧಿಕಾರಕ್ಕೆ ಬಂದ ಕೂಡಲೇ ಇಡೀ ವಿಶ್ವದಲ್ಲಿ ಶಾಂತಿ ಸ್ಥಾಪಿಸುತ್ತೇನೆ. ಇಸ್ರೇಲ್ -ಪ್ಯಾಲೆಸ್ತೀನ್, ರಷ್ಯಾ-ಉಕ್ರೇನ್ ಸಮರವನ್ನು ನೂರು ದಿನಗಳ ಒಳಗೆ ನಿಲ್ಲಿಸುವುದಾಗಿ ಹೇಳಿದ್ದ ಟ್ರಂಪ್‌ಗೆ ಇದಾವುದೂ ಸಾಧ್ಯವಾಗಿಲ್ಲ. ಈಗ ಈ ಯುದ್ಧದಲ್ಲಿ ಅಮೆರಿಕವೇ ಪರೋಕ್ಷವಾಗಿ ಭಾಗಿ ಯಾಗಿದೆ. ಇರಾನ್ ಮೇಲಿನ ಇಸ್ರೇಲ್ ದಾಳಿ ಅಮೆರಿಕದ ಕುಮ್ಮಕ್ಕಿನಿಂದಲೇ ನಡೆದಿರುವುದು ಜಗತ್ತಿಗೆ ಗೊತ್ತಿರುವ ವಿಚಾರ.

ಏನೇ ಇರಲಿ, ಬರುವುದೆಲ್ಲವನ್ನೂ ಎದುರಿಸಲೇಬೇಕು

-

ಲೋಕಮತ

kaayarga@gmail.com

ಯುದ್ಧ, ಅಂತರ್ಯುದ್ಧ, ಪ್ರತಿಭಟನೆ, ಶೀತಲ ಸಮರ ಏನೇ ಇರಲಿ ಅಂತಿಮವಾಗಿ ನೋವುಣ್ಣುವವರು ಆಯಾ ದೇಶಗಳ ಶ್ರೀಸಾಮಾನ್ಯರು. ಇಂದಿನ ಜಾಗತಿಕ ವಿದ್ಯಮಾನಕ್ಕೆ ಅನ್ವಯಿಸುವು ದಾದರೆ ದೊಡ್ಡವರ ಜಗಳದಲ್ಲಿ ನಮ್ಮಂತಹ ಜನಸಾಮಾನ್ಯರು ಬದುಕು ಏರುಪೇರಾಗುತ್ತಿದೆ.

ಇಡೀ ಜಗತ್ತು ತಾನು ಹೇಳಿದಂತೆ ಕೇಳಬೇಕೆಂಬ ಹುಂಬತನವಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಧೋರಣೆಯಿಂದ ಭಾರತ ಮಾತ್ರವಲ್ಲ ಇಡೀ ಜಗತ್ತು ಇಂದು ಸಂಕಷ್ಟಕ್ಕೆ ಸಿಲುಕಿದೆ. ದೀರ್ಘಾವಧಿಯಲ್ಲಿ ಇದರ ಪರಿಣಾಮ ಏನಾಗುತ್ತದೋ ಗೊತ್ತಿಲ್ಲ. ಆದರೆ ಸದ್ಯಕ್ಕೆ ವಿಶ್ವದ ಬಹುತೇಕ ರಾಷ್ಟ್ರಗಳು ‘ಟ್ರಂಪಾಘಾತ’ ಎದುರಿಸುತ್ತಿವೆ. ತಾನು ಇಡೀ ದೇಶದ ಉದ್ಧಾರಕನೆಂದು ಬಿಂಬಿಸಿ ಕೊಳ್ಳುವ ನಾಯಕರ ಕೈಗೆ ಪರಮಾಧಿಕಾರ ಸಿಕ್ಕರೆ, ಅವರು ಯಾವ ಮಟ್ಟಕ್ಕೆ ಹೋಗಬಲ್ಲರು ಎನ್ನುವುದಕ್ಕೆ ಟ್ರಂಪ್ ಇತ್ತೀಚಿನ ಉದಾಹರಣೆ.

ಇತಿಹಾಸದಲ್ಲಿ ಹಿಟ್ಲರ್, ಮುಸಲೋನಿಯಂತಹ ಅನೇಕ ನಾಯಕರನ್ನು ನಾವು ನೋಡಿದ್ದೇವೆ. ಅವರು ಮಾಡಿದ ತಪ್ಪಿಗೆ ಇಡೀ ಜಗತ್ತು ಅನುಭವಿಸಿದ ಸಂಕಷ್ಟವನ್ನು ಕೇಳಿದ್ದೇವೆ. ಟ್ರಂಪ್ ವರ್ತನೆ ಗಮನಿಸಿದರೆ ಅವರು ಯಾವ ಮಟ್ಟಕ್ಕೂ ಇಳಿಯಬಲ್ಲರು ಎನ್ನುವುದು ಸ್ಪಷ್ಟವಾಗಿದೆ. ಕೇವಲ ಏಳೆಂಟು ತಿಂಗಳ ಹಿಂದೆ, ಭಾರತ ಪರಮಾಪ್ತ ರಾಷ್ಟ್ರ, ಪ್ರಧಾನಿ ನರೇಂದ್ರ ಮೋದಿ ಆತ್ಮೀಯ ಗೆಳೆಯ ಎಂದು ಹೇಳಿಕೊಂಡಿದ್ದ ಟ್ರಂಪ್ ಇಂದು ಭಾರತವನ್ನು ಕೊಳಕು ಭಾಷೆಯಲ್ಲಿ ನಿಂದಿಸಲು ಮುಂದಾಗಿದ್ದಾರೆ.

ಈ ಹಿಂದೆ ಜೋ ಬೈಡನ್ ಎದುರು ಚುನಾವಣೆಗೆ ನಿಂತು ಸೋತಾಗ ಟ್ರಂಪ್ ನಡೆದುಕೊಂಡ ರೀತಿ ಯನ್ನು ಗಮನಿಸಿದವರಿಗೆ ಅವರ ನಡೆ ವಿಚಿತ್ರ ಎನಿಸದು. ಆದರೆ ಮಿತ್ರ ರಾಷ್ಟ್ರವೊಂದನ್ನು ಏಕಾಏಕಿ ದೂರ ಮಾಡಿ, ಇಲ್ಲ ಸಲ್ಲದ ಆರೋಪಗಳನ್ನು ಹೊರಿಸುವುದು ರಾಷ್ಟ್ರವೊಂದರ ಮುಖ್ಯಸ್ಥರು ಮಾಡುವ ಕೆಲಸವಲ್ಲ. ಅದರಲ್ಲೂ ಇತರ ದೇಶಗಳ ಸಾರ್ವಭೌಮತ್ವವನ್ನು ಕಿಂಚಿತ್ತೂ ಗೌರವಿಸದೆ, ಅಧೀನ ರಾಷ್ಟ್ರಗಳ ರೀತಿಯಲ್ಲಿ ನಡೆದುಕೊಳ್ಳುವ ಟ್ರಂಪ್ ಅವರ ನಡೆಯೇ ಅತಿರೇಕ ದ್ದು.

7 R

ತಾನು ಅಧಿಕಾರಕ್ಕೆ ಬಂದ ಕೂಡಲೇ ಇಡೀ ವಿಶ್ವದಲ್ಲಿ ಶಾಂತಿ ಸ್ಥಾಪಿಸುತ್ತೇನೆ. ಇಸ್ರೇಲ್ -ಪ್ಯಾಲೆಸ್ತೀನ್, ರಷ್ಯಾ-ಉಕ್ರೇನ್ ಸಮರವನ್ನು ನೂರು ದಿನಗಳ ಒಳಗೆ ನಿಲ್ಲಿಸುವುದಾಗಿ ಹೇಳಿದ್ದ ಟ್ರಂಪ್‌ಗೆ ಇದಾವುದೂ ಸಾಧ್ಯವಾಗಿಲ್ಲ. ಈಗ ಈ ಯುದ್ಧದಲ್ಲಿ ಅಮೆರಿಕವೇ ಪರೋಕ್ಷವಾಗಿ ಭಾಗಿ ಯಾಗಿದೆ. ಇರಾನ್ ಮೇಲಿನ ಇಸ್ರೇಲ್ ದಾಳಿ ಅಮೆರಿಕದ ಕುಮ್ಮಕ್ಕಿನಿಂದಲೇ ನಡೆದಿರುವುದು ಜಗತ್ತಿಗೆ ಗೊತ್ತಿರುವ ವಿಚಾರ.

ಇರಾನ್ ಮೇಲೆ ನೇರ ವೈಮಾನಿಕ ದಾಳಿಗೆ ಆದೇಶಿಸಿದ ಟ್ರಂಪ್, ಇದೀಗ ಈ ಯುದ್ಧವನ್ನು ತಾವೇ ನಿಲ್ಲಿಸಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ಹಾಗೂ ಭಾರತ- ಪಾಕಿಸ್ತಾನ ನಡುವಣ ಯುದ್ಧವನ್ನು ತಾನೇ ನಿಲ್ಲಿಸಿದ್ದಾಗಿ ಪದೇಪದೆ ಹೇಳಿಕೊಳ್ಳುವ ಟ್ರಂಪ್ ಮಾತಿನ ಹಿಂದೆ ನೊಬೆಲ್ ಶಾಂತಿ ಪ್ರಶಸ್ತಿ ಪಡೆದೇ ತೀರಬೇಕೆಂಬ ಹಪಾಹಪಿ ಇರುವುದು ಈಹ ಜಗಜ್ಜಾಹೀರಾಗಿದೆ.

ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥನನ್ನು ಎರಡೆರಡು ಬಾರಿ ಅಮೆರಿಕಕ್ಕೆ ಕರೆಸಿಕೊಂಡ ಟ್ರಂಪ್, ಆತನ ಕೈಯಲ್ಲಿ ಬಹುಪರಾಕು ಹೇಳಿಸಿ, ನೊಬೆಲ್ ಪ್ರಶಸ್ತಿಗೂ ಶಿಫಾರಸು ಮಾಡಿಸುವ ಮಟ್ಟಕ್ಕೆ ಇಳಿದ ಅಧ್ಯಕ್ಷ ಇನ್ನಾವ ಮಟ್ಟಕ್ಕೂ ಇಳಿಯಬಲ್ಲ ಎನ್ನುವುದು ಸ್ಪಷ್ಟ. ಭಾರತದ ಮೇಲಿನ ಟ್ರಂಪ್ ದ್ವೇಷವೂ ಇಲ್ಲಿಂದಲೇ ಆರಂಭವಾಗಿತ್ತೆನ್ನುವುದು ಗಮನಾರ್ಹ.

ಇದನ್ನೂ ಓದಿ: Lokesh Kaayarga Column: ಉಳ್ಳವರ ಪಾಲಾಗುತ್ತಿದೆಯೇ ನಮ್ಮ ಬೆಂಗಳೂರು ?

ಒಂದು ವೇಳೆ ಪಾಕ್ ಜತೆಗಿನ ಯುದ್ಧ ವಿರಾಮಕ್ಕೆ ಟ್ರಂಪ್ ಕಾರಣ ಎಂದು ಭಾರತ ಹೇಳಿದ್ದರೆ ಸಂಬಂಧ ಈ ಮಟ್ಟಕ್ಕೆ ಹದಗೆಡುತ್ತಿರಲಿಲ್ಲವೇನೋ? ಆದರೆ ಟ್ರಂಪ್ ಹೇಳಿಕೆಯನ್ನು ಭಾರತ ಅಂತಾ ರಾಷ್ಟ್ರೀಯ ವೇದಿಕೆಗಳಲ್ಲಿಯೇ ನಿರಾಕರಿಸಿದ್ದು ಟ್ರಂಪ್ ಪಿತ್ತ ನೆತ್ತಿಗೇರಲು ಕಾರಣವಾಗಿದೆ. ಅಂದರೆ ಟ್ರಂಪ್‌ಗೆ ತಮ್ಮ ದೇಶದ ಹಿತಾಸಕ್ತಿಗಿಂತಲೂ ತನ್ನ ವೈಯಕ್ತಿಕ ಪ್ರತಿಷ್ಠೆ ಮುಖ್ಯವಾಗಿದೆ.

ಇದಕ್ಕಾಗಿ ಆತ ಯಾವ ದಾರಿಯನ್ನು ಹಿಡಿಯಲೂ ಸಿದ್ಧರಿದ್ದಾರೆ. ಟ್ರಂಪ್ ಅವರ ಈ ವರ್ತನೆಯೇ ಭಾರತದ ಮಟ್ಟಿಗೆ ಆತಂಕದ ವಿಚಾರ. ಒಮ್ಮಿಂದೊಮ್ಮೆಗೇ ಭಾರತ ವಿರೋಧಿಯಾಗಿ ಬದಲಾದ ಟ್ರಂಪ್ ಸುಂಕಾಸದ ಮೂಲಕ ಭಾರತವನ್ನು ತನ್ನ ದಾರಿಗೆ ತರಬಹುದು ಎಂದು ಭಾವಿಸಿದ್ದರು. ಅಮೆರಿಕದ ಆಗ್ರಹಕ್ಕೆ ಗುರಿಯಾದ ಇರಾಕ್, ಇರಾನ್, ಪಾಕಿಸ್ತಾನ ಮೊದಲಾದ ಏಷ್ಯಾದ ರಾಷ್ಟ್ರಗಳು ಮತ್ತು ಆಫ್ರಿಕಾದ ರಾಷ್ಟ್ರಗಳು ಕೊನೆಗೆ ವಿಧಿ ಇಲ್ಲದೆ ಅಮೆರಿಕದ ಷರತ್ತಿನಂತೆ ನಡೆದುಕೊಂಡ ಉದಾಹರಣೆಗಳಿವೆ.

ಇದೇ ಮಾದರಿಯಲ್ಲಿ ಭಾರತದ ಮೇಲೆ ಶೇ.50ರಷ್ಟು ಪ್ರತಿ ಸುಂಕ ವಿಧಿಸಿದ್ದಾರೆ. ಆದರೆ ಈ ನಿರ್ಧಾರಕ್ಕೆ ಭಾರತ ಬಗ್ಗುವುದಿಲ್ಲ ಎಂದು ತಿಳಿದ ಬಳಿಕ ತಮ್ಮ ಹಿಂಬಾಲಕ ಅಧಿಕಾರಿಗಳ ಮೂಲಕ ಭಾರತವನ್ನು ಹೀಗಳೆಯಲು ಮುಂದಾಗಿದ್ದಾರೆ. ರಾಜತಾಂತ್ರಿಕತೆಯ ಬಗ್ಗೆ ಎಳ್ಳಷ್ಟೂ ಅರಿವಿಲ್ಲದ ಅಧಿಕಾರಿಯನ್ನು ಭಾರತದ ಹೊಸ ರಾಯಭಾರಿಯನ್ನು ನೇಮಿಸಿದ್ದಾರೆ.

ಭಾರತಕ್ಕೆ ಮದ್ದರೆಯುವುದೊಂದೇ ಸದ್ಯಕ್ಕೆ ಟ್ರಂಪ್ ಮುಂದಿನ ಏಕೈಕ ಗುರಿ. ಆರಂಭದಲ್ಲಿ ಅಮೆರಿಕ ಸರಕುಗಳಿಗೆ ಭಾರತ ಸುಂಕ ವಿನಾಯಿತಿ ನೀಡಿಲ್ಲವೆಂದು ಹೇಳಿ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಟ್ರಂಪ್, ಇದೀಗ ರಷ್ಯಾ- ಉಕ್ರೇನ್ ಯುದ್ಧಕ್ಕೂ ಭಾರತವೇ ಕಾರಣ ಎಂದು ಹೇಳತೊಡಗಿದೆ. ಭಾರತವನ್ನು ಕೆಣಕಲು ನಾನಾ ದಾರಿಗಳನ್ನು ಕಂಡುಕೊಳ್ಳತೊಡಗಿದೆ.

ರಷ್ಯಾದ ತೈಲ ಆಮದಿನಿಂದ ಭಾರತದ ‘ಬ್ರಾಹ್ಮಣರು’ ಶ್ರೀಮಂತರಾಗುತ್ತಿದ್ದಾರೆ ಎಂದು ದೂರುವ ಮೂಲಕ ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವರೋ ಇನ್ನೊಂದು ಹೆಜ್ಜೆ ಮುಂದೆ ಸಾಗಿದ್ದಾರೆ. ಭಾರತದಲ್ಲಿ ಈ ಹೇಳಿಕೆ ನಗೆಪಾಟಲಿಗೀಡಾದರೂ ಇದರಲ್ಲಿ ಜಾತಿ ವ್ಯವಸ್ಥೆಯನ್ನು ಪ್ರಸ್ತಾಪಿಸಿ ಭಾರತೀಯರೊಳಗೆ ಜಗಳ ತಂದಿಡುವ ಹುನ್ನಾರವಿದೆ.

ಇದು ಹಿಂದೆ ಬ್ರಿಟಿಷರು ಅನುಸರಿಸುತ್ತಿದ್ದ ವಿಭಜಿಸಿ ಆಳುವ ನೀತಿ. ದೇಶವೊಂದರ ಆಂತರಿಕ ಭಿನ್ನಾಭಿಪ್ರಾಯಗಳನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಇಲ್ಲವೇ ಅಲ್ಲಿ ಆಂತರಿಕ ಅಶಾಂತಿ ಸೃಷ್ಟಿಸುವ ಕೆಲಸವನ್ನು ಅಮೆರಿಕ ಶೀತಲ ಸಮರದ ಹಿಂದಿನ ದಿನಗಳಿಂದಲೂ ಮಾಡಿಕೊಂಡು ಬಂದಿದೆ. ತನ್ನ ಅಣತಿಯಂತೆ ನಡೆದುಕೊಳ್ಳದ ರಾಷ್ಟ್ರಗಳಲ್ಲಿ ಅಶಾಂತಿ ಹರಡಲು ಅಮೆರಿಕದ ಬಳಿ ನಾನಾ ಯೋಜನೆಗಳಿವೆ. ನಮ್ಮ ನೆರೆಯ ಪಾಕಿಸ್ತಾನ, ಅಘ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಗಳಲ್ಲಿ ಈ ನೀತಿ ಯಶಸ್ವಿಯೂ ಆಗಿದೆ. ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರಕಾರದ ಪದಚ್ಯುತಿ ಹಿಂದೆ ಅಮೆರಿಕದ ಕೈವಾಡವಿರುವುದು ಈಗ ಜಗತ್ತಿಗೇ ಗೊತ್ತಿರುವ ಸಂಗತಿ.

ಅಲ್ಲಿ ಸೇನಾ ನೆಲೆಗೆ ಅವಕಾಶ ಮಾಡಿಕೊಡದ ಬಗ್ಗೆ ಅಮೆರಿಕ ಸಿಟ್ಟಾಗಿತ್ತು. ಪಾಶ್ಚಾತ್ಯ ಚಿಂತನೆಯ ಹಾಲಿ ಉಸ್ತುವಾರಿ ಮೊಹಮ್ಮದ್ ಯೂನುಸ್ ಅಮೆರಿಕದ ಪಿತೂರಿಗೆ ದಾಳವಾದರು. ಆದರೆ ಅದೃಷ್ಟವಶಾತ್, ಭಾರತದ ಪ್ರಜಾಪ್ರಭುತ್ವದ ತಳಹದಿ ಗಟ್ಟಿಯಾಗಿದೆ. ಇಲ್ಲಿನ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನದ ಹೊರತಾಗಿಯೂ ಅಮೆರಿಕದ ಹುನ್ನಾರ ಸಫಲವಾಗಿಲ್ಲ.

ಅಲ್ಲಿನ ಪ್ರತಿಯೊಂದು ಸರಕಾರವೂ ಭಾರತದ ವಿಷಯದಲ್ಲಿ ಸಾಮ-ದಾನ-ದಂಡ-ಭೇದ ನೀತಿ ಯನ್ನು ಅನುಸರಿಸಿಕೊಂಡು ಬಂದಿದೆ. 1971ರ ಬಾಂಗ್ಲಾ ವಿಮೋಚನಾ ಸಮರದ ವೇಳೆ ಅಮೆರಿಕ ಬಂಗಾಳ ಕೊಲ್ಲಿಗೆ ಯುದ್ಧ ನೌಕೆ ಕಳುಹಿಸಲು ಮುಂದಾಗಿದ್ದನ್ನು ನಾವು ಮರೆ ಯುವಂತಿಲ್ಲ. ಇತ್ತೀಚೆಗೆ ನಡೆದ ಯುದ್ಧದಲ್ಲೂ ಭಾರತದ ಪರ ಎನ್ನುತ್ತಲೇ ದೊಡ್ಡಣ್ಣ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದ್ದು ಗೊತ್ತಿರುವ ಸಂಗತಿ.

ಚೀನಾದಲ್ಲಿ ನಡೆದ ಶಾಂಘೈ ಶೃಂಗ ಸಭೆಯಲ್ಲಿ ರಷ್ಯಾಮತ್ತು ಚೀನಾದ ಅಧ್ಯಕ್ಷರ ಜತೆ ಪ್ರಧಾನಿ ಮೋದಿ ವೇದಿಕೆ ಹಂಚಿಕೊಂಡ ಬಳಿಕ ಅಮೆರಿಕದ ಭಾಷೆ ಇನ್ನಷ್ಟು ವ್ಯಗ್ರವಾಗಿದೆ. ಟ್ರಂಪ್ ಅವರ ವ್ಯಾಪಾರ ಸಲಹೆಗಾರ ನವರೋ, ಪ್ರಧಾನಿ ಮೋದಿ ಅವರು ವಿಶ್ವದ ಇಬ್ಬರು ದೊಡ್ಡ ಸರ್ವಾಧಿಕಾರಿ ಗಳೊಂದಿಗೆ ವೇದಿಕೆಯನ್ನು ಹಂಚಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ. ಈ ಹಿಂದೆ ಬ್ರಿಕ್ಸ್ ಸಮಾವೇಶದಲ್ಲಿ ಭಾರತ ಭಾಗಿಯಾದ ಬಗ್ಗೆಯೂ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿ ದ್ದರು.

ಶಾಂಘೈ ಸಮಾವೇಶದಲ್ಲಿ ಭಾರತ, ರಷ್ಯಾ ಮತ್ತು ಚೀನಾ ಮತ್ತೆ ಒಂದಾಗಿವೆ. ವಿಶ್ವದ ಮೂರು ಅಗ್ರಮಾನ್ಯ ರಾಷ್ಟ್ರಗಳು ಒಂದಾಗಿ ನಿಂತರ ತನ್ನ ಬೇಳೆ ಬೇಯದು ಎನ್ನುವುದು ಟ್ರಂಪ್‌ಗೆ ಚೆನ್ನಾಗಿ ಗೊತ್ತು. ಇದಕ್ಕಾಗಿ ತನ್ನ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನು ಬಳಸಲು ಅಮೆರಿಕ ಮುಂದಾಗು ವುದು ಖಚಿತ. ಭಾರತ ಈಗ ಈ ಎಲ್ಲವನ್ನೂ ಎದುರಿಸಲು ಸಜ್ಜಾಗಬೇಕಿದೆ.

ಅಮೆರಿಕದ ಹಾಲಿ- ಮಾಜಿ ಅಧಿಕಾರಿ ವರ್ಗದಲ್ಲಿ ಈಗಲೂ ಭಾರತದ ಜತೆ ಸಂಬಂಧ ಕಾಯ್ದು ಕೊಳ್ಳಬೇಕೆಂಬ ಕಾಳಜಿ ಇದೆ. ಭಾರತೀಯ ಅಮೆರಿಕನ್ ಆಗಿದ್ದುಕೊಂಡು ಅಮೆರಿಕದ ಅಧ್ಯಕ್ಷರ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವೆಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಹೊಂದಿರುವ ನಿಕ್ಕಿ ರಾಂಧವ ಹ್ಯಾಲೆ ಚೀನಾವನ್ನು ಎದುರಿಸಬೇಕಾದರೆ ಭಾರತ ಸದಾ ನಮ್ಮ ಜತೆಗಿರಬೇಕೆಂದು ಈಗಲೂ ಪ್ರತಿಪಾದಿಸುತ್ತಿದ್ದಾರೆ.

ಆದರೆ ಟ್ರಂಪ್ ಇಂತಹ ಮಾತುಗಳಿಗೆ ಕಿವುಡಾಗಿದ್ದಾರೆ. ಭಾರತ ವಿರೋಧಿ ನಿಲುವನ್ನು ಟೀಕಿಸಿದ ಮಾಜಿ ಎನ್‌ಎಸ್‌ಎ ಮುಖ್ಯಸ್ಥ ಜಾನ್ ಬಾಲ್ಟನ್ ಮನೆಗೆ ಎಫ್‌ ಬಿಐ ಮೂಲಕ ದಾಳಿ ಮಾಡಿಸಿದ್ದಾರೆ. ಭಾರತ ಕುರಿತ ಟ್ರಂಪ್ ಅವರ ನಿಲುವಿನಲ್ಲಿ ಅಮೆರಿಕದ ಹಿತಾಸಕ್ತಿಗಿಂತ ವೈಯಕ್ತಿಕ ಸೇಡಿನ ಅಂಶವೇ ಎದ್ದು ಕಾಣುತ್ತಿದೆ.

ಜಿದ್ದಿಗೆ ಬಿದ್ದ ಟ್ರಂಪ್ ಭಾರತದ ಮೇಲೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲು ಮುಂದಾಗುವುದು ಖಚಿತ. ಅಮೆರಿಕದ ಸುಂಕ ನೀತಿಯಿಂದ ಮೊದಲು ಏಟು ಬಿದ್ದಿರುವುದು ರುಪಾಯಿ ಮೇಲೆ. ಇದರಿಂದ ಡಾಲರ್‌ನಲ್ಲಿ ವ್ಯವಹರಿಸುವ ಭಾರತದ ಆಮದುದಾರರಿಗೆ ಕಷ್ಟವಾಗಲಿದೆ. ರುಪಾಯಿ ಕುಸಿತದ ಬೆನ್ನಿಗೇ ಚಿನ್ನದ ಧಾರಣೆಯೂ ಏರಿಕೆ ಕಂಡಿದೆ.

ಚಿನ್ನ ನಮ್ಮಲ್ಲಿ ಜನಸಾಮಾನ್ಯರಿಗೂ ಅಗತ್ಯ ವಸ್ತು. 10 ಗ್ರಾಮಿಗೆ 1 ಲಕ್ಷ ರು.ಗಳ ಗಡಿ ದಾಟಿರುವ ಚಿನ್ನ ಇನ್ನು ಬಡವರ ಪಾಲಿಗೆ ಗಗನ ಕುಸಮವಾಗಬಹುದು. ಯುದ್ಧ, ಅಂತರ್ಯುದ್ಧ, ಪ್ರತಿಭಟನೆ, ಶೀತಲ ಸಮರ ಏನೇ ಇರಲಿ ಅಂತಿಮವಾಗಿ ನೋವುಣ್ಣುವವರು ಆಯಾ ದೇಶಗಳ ಶ್ರೀಸಾಮಾನ್ಯರು. ಇಂದಿನ ಜಾಗತಿಕ ವಿದ್ಯಮಾನಕ್ಕೆ ಅನ್ವಯಿಸುವುದಾದರೆ ದೊಡ್ಡವರ ಜಗಳದಲ್ಲಿ ನಮ್ಮಂತಹ ಜನಸಾಮಾನ್ಯರು ಬದುಕು ಏರುಪೇರಾಗುತ್ತಿದೆ. ಏನೇ ಇರಲಿ, ಬರುವುದೆಲ್ಲವನ್ನೂ ಎದುರಿಸಲೇ ಬೇಕು.