ವೀಕೆಂಡ್ ವಿತ್ ಮೋಹನ್
ಅಂತಾರಾಷ್ಟ್ರೀಯ ಮಾದಕವಸ್ತು ಜಾಲದ ಎರಡು ಪ್ರಮುಖ ಭೌಗೋಳಿಕ ಪ್ರದೇಶಗಳು ‘ಗೋಲ್ಡನ್ ಕ್ರೆಸೆಂಟ್’ ಮತ್ತು ‘ಗೋಲ್ಡನ್ ಟ್ರಯಾಂಗಲ್’. ಈ ಪ್ರದೇಶಗಳು ವಿಶ್ವದ ಎರಡು ಅತ್ಯಂತ ಸಕ್ರಿಯ ಅಫೀಮು ಉತ್ಪಾದಕ ಪ್ರದೇಶಗಳಾಗಿವೆ. ಗೋಲ್ಡನ್ ಕ್ರೆಸೆಂಟ್ ಭಾಗವು ಇರಾನ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಪ್ರದೇಶಗಳನ್ನು ಒಳಗೊಂಡಿದ್ದರೆ, ಗೋಲ್ಡನ್ ಟ್ರಯಾಂಗ್ ಭಾಗವು ಬರ್ಮಾ, ಥಾಯ್ಲೆಂಡ್ ಮತ್ತು ಲಾವೋಸ್ ಪ್ರದೇಶಗಳನ್ನು ಒಳಗೊಂಡಿದೆ.
ಏಷ್ಯಾದ ಅತ್ಯಂತ ಹಳೆಯ ಮಾದಕವಸ್ತು ಪ್ರದೇಶವಾಗಿರುವ ಗೋಲ್ಡನ್ ಕ್ರೆಸೆಂಟ್ ಅನ್ನು ‘ಮಾದಕ ವಸ್ತುಗಳ ರೇಷ್ಮೆ ಮಾರ್ಗ’ ಎಂದೂ ಕರೆಯುತ್ತಾರೆ. ಈ ಪ್ರದೇಶದಲ್ಲಿ ಹೆಚ್ಚಿನ ಪರ್ವತ ಶ್ರೇಣಿಗಳನ್ನು ಕಾಣಬಹುದಾಗಿದ್ದು, ಮಾದಕ ವಸ್ತುಗಳ ಕಳ್ಳಸಾಗಣೆಯು ಈ ಪ್ರದೇಶದಲ್ಲಿ 1980ರ ದಶಕದಲ್ಲಿ ಹೆಚ್ಚಿನ ವೇಗ ಪಡೆದುಕೊಂಡಿತ್ತು ಮತ್ತು ದೊಡ್ಡ ಪ್ರಮಾಣದ ಅಫೀಮಿನ ಅಕ್ರಮ ಉತ್ಪಾದನೆಗೆ ಕಾರಣವಾಗಿತ್ತು.
ಅಫ್ಘಾನಿಸ್ತಾನವೊಂದೇ ವಿಶ್ವದ ಔಷಧೇತರ ದರ್ಜೆಯ ಅಫೀಮಿನ ಶೇ. 90ರಷ್ಟು ಪಾಲನ್ನು ಉತ್ಪಾ ದಿಸುತ್ತಿತ್ತು. 1990ರ ದಶಕದಲ್ಲಿ ಅಫ್ಘಾನಿಸ್ತಾನದಲ್ಲಿ ಅಫೀಮು ಕೃಷಿ ಪುನರುಜ್ಜೀವನಗೊಂಡಿತ್ತು. ಆದರೆ 2001ರಲ್ಲಿ ಮೊದಲ ಬಾರಿಗೆ ಅಮೆರಿಕದ ದಾಳಿಯಿಂದ ಕುಸಿತ ಕಂಡಿತ್ತು.
ಅಮೆರಿಕವು ಅಫ್ಘಾನಿಸ್ತಾನದ ಮೇಲೆ ನಡೆಸಿದ್ದ ದಾಳಿಯ ನಂತರ, ತಾಲಿಬಾನ್ ಸರಕಾರ ಪತನ ಗೊಂಡಿತ್ತು. ಅದಾದ ಕೆಲವು ವರ್ಷಗಳ ನಂತರ ಮತ್ತೊಮ್ಮೆ ದಿಢೀರ್ ಹೆಚ್ಚಳ ಕಂಡಿತ್ತು. 2007ರ ಹೊತ್ತಿಗೆ 1990ರ ದಶಕದ ನಂತರದ ಅಫೀಮು ಕೃಷಿ ದೊಡ್ಡ ಮಟ್ಟಕ್ಕೆ ತಲುಪಿತ್ತು. ಅಂದಿನಿಂದ, ಅಫ್ಘಾನಿಸ್ತಾನವು ಅಫೀಮು ಉತ್ಪಾದನೆಯ ಮೇಲೆ ಬಹುತೇಕ ಏಕಸ್ವಾಮ್ಯವನ್ನು ಹೊಂದಿತ್ತು.
ವಾರ್ಷಿಕವಾಗಿ 450 ಟನ್‌ಗಳಿಗಿಂತ ಹೆಚ್ಚು ಒಪಿಯಾಯ್ಡ್‌ಗಳು ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸುತ್ತವೆ. ಇವುಗಳಲ್ಲಿ 380 ಟನ್ ಅಫ್ಘಾನಿಸ್ತಾನ ಒಂದರಿಂದಲೇ ಬರುತ್ತವೆ. ಒಂದೆಡೆ ಅಫ್ಘಾನಿ ಸ್ತಾನದಲ್ಲಿ ಅಫೀಮು ಬೆಳೆಯುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನ ಮತ್ತು ಇರಾನ್‌ನಲ್ಲಿ ಹೆರಾಯಿನ್ ಅನ್ನು ಉತ್ಪಾದಿಸಲಾಗುತ್ತಿತ್ತು.
ಇದನ್ನೂ ಓದಿ: Mohan Vishwa Column: ಮೊಹಮ್ಮದ್ ಅಲಿ ಜಿನ್ನಾರ ಮುನ್ನಾ
ಅಫ್ಘಾನಿಸ್ತಾನದ ಮೂಲಕ ಅಕ್ರಮ ಮಾದಕವಸ್ತು ಸಾಗಣೆಗೆ ಮೂರು ಕಳ್ಳಸಾಗಣೆ ಮಾರ್ಗಗಳಿವೆ. ಮಧ್ಯ ಏಷ್ಯಾದ ಮೂಲಕ ಶೇ. 14ರಷ್ಟು ಅಫ್ಘನ್ ಓಪಿಯೇಟ್ ಮಾದಕ ವಸ್ತುಗಳು ಉತ್ತರ ಮಾರ್ಗ ವಾಗಿ ತುರ್ಕಮೆನಿಸ್ತಾನ್, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್ ಮತ್ತು ತಜಿಕಿಸ್ತಾನ್ʼಗಳನ್ನು ಪ್ರವೇಶಿಸುತ್ತವೆ. ಅಲ್ಲಿಂದ ಪ್ರಾಥಮಿಕವಾಗಿ ಯುರೋಪ್, ರಷ್ಯಾ ಮತ್ತು ಚೀನಾವನ್ನು ತಲುಪುತ್ತವೆ.
ಇರಾನ್ ದೇಶದ ಪಶ್ಚಿಮ ಮಾರ್ಗ ಅಥವಾ ಬಾಲ್ಕನ್ ಮಾರ್ಗದ ಮೂಲಕ ಅಫ್ಘನ್ ಓಪಿಯೇಟ್ ಗಳಲ್ಲಿ ಶೇ. 53ರಷ್ಟು ಸಾಗಾಣಿಕೆಯಾಗುತ್ತವೆ. ಅಫ್ಘಾನಿಸ್ತಾನದ ವಾಯವ್ಯ ಭಾಗದ ಮೂಲಕ ಟರ್ಕಿ, ಅಜರ್‌ಬೈಜಾನ್ ಮತ್ತು ಅರೇಬಿಯನ್ ಪೆನಿನ್ಸುಲಾಕ್ಕೆ ದಕ್ಷಿಣ ಬಂದರುಗಳ ಮಾರ್ಗವಾಗಿ ಅವನ್ನು ಸಾಗಿಸಲಾಗುತ್ತಿತ್ತು. ಪಾಕಿಸ್ತಾನದ ಮೂಲಕ ಶೇ.5ರಷ್ಟು ಅಫ್ಘನ್ ಓಪಿಯೇಟ್‌ಗನ್ನು ಸಾಗಿಸಲಾಗು ತ್ತಿತ್ತು.
ಇದರ ಜತೆಗೆ ಸರಂಧ್ರ ಗಡಿಯ ಮೂಲಕ ಬಲೂಚಿಸ್ತಾನ್ ಮತ್ತು ವಾಯವ್ಯ ಗಡಿ ಪ್ರಾಂತ್ಯಕ್ಕೆ ಅವು ಸಾಗಿಸಲ್ಪಡುತ್ತಿದ್ದವು. ಪಾಕಿಸ್ತಾನದ ಕರಾಚಿ ಮತ್ತು ಕ್ವೆಟ್ಟಾ ಭಾಗಗಳು, ಮಾದಕ ವಸ್ತುಗಳ ಜಾಗತಿಕ ಮಾರುಕಟ್ಟೆಗಳಿಗೆ ಓಪಿಯೇಟ್ʼಗಳನ್ನು ಸಾಗಿಸುವ ಪ್ರಮುಖ ಕೇಂದ್ರಗಳಾಗಿವೆ. ಅಫ್ಘಾನಿಸ್ತಾನದಲ್ಲಿ 1978ರ ಬರಗಾಲವು, ಗಸಗಸೆ ಕೃಷಿಯನ್ನು ಎತ್ತರಕ್ಕೆ ಕೊಂಡೊಯ್ದಿತು. ದಿನ ಕಳೆದಂತೆ, ಇದು ಅಲ್ಲಿನ ರೈತರ ಗಸಗಸೆ ಮೇಲಿನ ಅವಲಂಬನೆಯನ್ನು ಹೆಚ್ಚಿಸಿತು.
ನೀರಾವರಿ ಮೂಲಗಳಿಲ್ಲದ ಕಾರಣ, ಕಠಿಣ ಪರಿಸ್ಥಿತಿಗಳಲ್ಲಿ ಬೆಳೆಯಬಹುದಾದ ಏಕೈಕ ಬೆಳೆಗಳಲ್ಲಿ ಗಸಗಸೆ ಅಫೀಮು ಒಂದಾಗಿತ್ತು. ಸೋವಿಯತ್ ರಷ್ಯಾ 1990ರ ದಶಕದಲ್ಲಿ ಅಫ್ಘಾನಿಸ್ತಾನದಿಂದ ಹಿಂದೆ ಸರಿದ ನಂತರ ಗಸಗಸೆ ಉತ್ಪಾದನೆಯಲ್ಲಿ ಹೆಚ್ಚಳ ಕಂಡುಬಂದಿತು. ಅಫ್ಘಾನಿಸ್ತಾನವನ್ನು ತೊರೆದ ನಂತರ, ರಷ್ಯಾ ತನ್ನ ವ್ಯಾಪಾರ ಮಾರ್ಗಗಳನ್ನು ಸ್ಥಗಿತಗೊಳಿಸಿತು.
ಆದ್ದರಿಂದ ಅಫ್ಘಾನಿಸ್ತಾನವು ಆದಾಯಕ್ಕಾಗಿ ಯುರೋಪ್ ಮತ್ತು ಅಮೆರಿಕ ದೇಶಗಳಿಗೆ ತನ್ನ ಔಷಧ ಮಾರುಕಟ್ಟೆಯನ್ನು ವಿಸ್ತರಿಸಬೇಕಾಯಿತು. ನಂತರದ ದಿನಗಳಲ್ಲಿ ನಡೆದ ಅಂತರ್ಯುದ್ಧ ದಿಂದಾಗಿ ಅಫ್ಘಾನಿಸ್ತಾನದಲ್ಲಿ ಸ್ಥಿರ ಸರಕಾರ ಮತ್ತು ಔಪಚಾರಿಕ ಆರ್ಥಿಕತೆಯನ್ನು ಬೆಳೆಸದ ಕಾರಣ, ಅಫೀಮು ಅಲ್ಲಿನ ಮುಖ್ಯ ಆದಾಯ ಮತ್ತು ವಿದೇಶಿ ವಿನಿಮಯದ ಉತ್ಪಾದಕ ಕೇಂದ್ರ ವಾಯಿತು.
ಅಫ್ಘಾನಿಸ್ತಾನದ ಬಡತನ, ಗುಡ್ಡಗಾಡುಗಳು, ಅಫೀಮು ಬೆಳೆಯಲ್ಲಿನ ಲಾಭದಾಯಕತೆ, ನೀರಾವರಿ ಕೊರತೆ, ರಾಜಕೀಯ ಅಸ್ಥಿರತೆ, ಕಾನೂನಿನ ಅನುಪಸ್ಥಿತಿ ಮತ್ತು ಖಚಿತವಾದ ಮಾರುಕಟ್ಟೆ ಯಿಂದಾಗಿ ಅಲ್ಲಿನ ರೈತರು ಗಸಗಸೆ ಕೃಷಿಯತ್ತ ಹೆಚ್ಚಾಗಿ ಆಕರ್ಷಿತರಾದರು. ಅಫೀಮಿನ ಬೇಡಿಕೆ ಎಂದಿಗೂ ಕಡಿಮೆಯಾಗಲಿಲ್ಲದ ಕಾರಣ ಅಲ್ಲಿನ ರೈತರಿಗೆ, ಅದರ ಮಾರುಕಟ್ಟೆಯೊಂದಿಗೆ ತೊಡಗಿಸಿ ಕೊಳ್ಳುವುದು ಆಯ್ಕೆಯಾಗಿತ್ತು.
ಅಫ್ಘಾನಿಸ್ತಾನ ದೇಶವು ಮುಖ್ಯವಾಗಿ ಕೃಷಿ ಪ್ರಧಾನವಾಗಿರುವುದರಿಂದ, ಒಂದು ಕಾಲದಲ್ಲಿ ಗಸಗಸೆ ಕೃಷಿ ಮಾತ್ರ ಅಲ್ಲಿನ ಜಿಡಿಪಿಯ ಶೇ.40ವರೆಗೆ ತಲುಪಿತ್ತು. ಉತ್ಪಾದಕರು, ವಿತರಕರು, ಗ್ರಾಹಕರು, ಹಣ ಅಕ್ರಮ ವರ್ಗಾವಣೆ ಮಾಡುವವರು ಮತ್ತು ಮಿಲಿಟಂಟ್‌ಗಳು ಸೇರಿದಂತೆ ಹಲವರು ಮಾದಕ ವಸ್ತು ಆರ್ಥಿಕತೆಯಿಂದ ಪ್ರಯೋಜನ ಪಡೆಯುತ್ತಿದ್ದರು.
ಭ್ರಷ್ಟ ಸರಕಾರಿ ಅಧಿಕಾರಿಗಳು ಗಸಗಸೆ ಬೆಳೆಯುವ ರೈತರ ಹೊಲಗಳನ್ನು ಉಳಿಸುವ ಸಲುವಾಗಿ ಲಂಚವನ್ನು ಸ್ವೀಕರಿಸುವ ಮೂಲಕ ಹಣವನ್ನು ಗಳಿಸುತ್ತಿದ್ದರು. ಒಂದು ಕಾಲದಲ್ಲಿ ಅಫ್ಘಾನಿ ಸ್ತಾನದ ಗಡಿಯುದ್ದಕ್ಕೂ ಕಳ್ಳಸಾಗಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಅಫ್ಘಾನಿಸ್ತಾನದ ಶೇ. 1ರಷ್ಟು ಓಪಿಯೇಟ್‌ಗಳನ್ನು ಮಾತ್ರ ಅಂತಾರಾಷ್ಟ್ರೀಯ ಅಧಿಕಾರಿಗಳು ವಶಪಡಿಸಿಕೊಳ್ಳಲು ಸಾಧ್ಯವಾಗು ತ್ತಿತ್ತು.
‘ಗೋಲ್ಡನ್ ಕ್ರೆಸೆಂಟ್’ ಜಗತ್ತಿನ ಅತಿದೊಡ್ಡ ಅಫೀಮು ಉತ್ಪಾದಿಸುವ ಪ್ರದೇಶವಾಗಿರುವುದರಿಂದ, ಅಂತಾರಾಷ್ಟ್ರೀಯ ಸಂಘಟಿತ ಅಪರಾಧಗಳಲ್ಲಿ ಗಮನಾರ್ಹವಾಗಿ ಹೆಚ್ಚಳ ಕಂಡುಬಂದಿತ್ತು. ಗೋಲ್ಡನ್ ಕ್ರೆಸೆಂಟ್ ತನ್ನ ಸುತ್ತಲೂ ಹಂಚಿರುವ ಗಡಿಗಳಲ್ಲಿ ಹೆಚ್ಚಿದ ದುರ್ಬಲತೆಯನ್ನು ಸೃಷ್ಟಿಸಿದೆ.
ಇದು ಅಫ್ಘಾನಿಸ್ತಾನದ ನೆರೆಹೊರೆಯ ದೇಶಗಳ ಭದ್ರತೆಯ ಮೇಲೂ ಪರಿಣಾಮ ಬೀರಿತ್ತು. 2021ರ ಹೊತ್ತಿಗೆ ಜಾಗತಿಕವಾಗಿ ಸುಮಾರು 35 ಮಿಲಿಯನ್ ಜನರು ಮಾದಕ ವ್ಯಸನದಿಂದ ಬಳಲುತ್ತಿದ್ದಾರೆ. ಅಫ್ಘಾನಿಸ್ತಾನ ಉತ್ಪಾದಿತ ಒಪಿಯಾಯ್ಡ್‌ಗಳು ಮಾದಕ ವ್ಯಸನಿಗಳ ಆರೋಗ್ಯದ ಮೇಲೆ ದೊಡ್ಡ ಮಟ್ಟದ ದುಷ್ಪರಿಣಾಮವನ್ನು ಉಂಟುಮಾಡಿವೆ. ಅದರ ನೆರೆಹೊರೆಯಲ್ಲಿ ಮಾತ್ರವಲ್ಲದೆ ಸೋವಿ ಯತ್ ಮತ್ತು ಯುರೋಪಿಯನ್ ಪ್ರದೇಶಗಳು ಸೇರಿದಂತೆ ಪ್ರಪಂಚದಾದ್ಯಂತ ಮಾರುಕಟ್ಟೆ ಹೊಂದಿರುವ ಅನೇಕ ದೇಶಗಳಲ್ಲಿ, 2017ರ ಹೊತ್ತಿಗೆ ಗಸಗಸೆ ಕೃಷಿ ಮತ್ತು ಅದನ್ನು ಹೆರಾಯಿನ್ ಆಗಿ ಸಂಸ್ಕರಿಸುವುದು 6 ಬಿಲಿಯನ್ ಡಾಲರ್ ಮೌಲ್ಯದ ಮಾರುಕಟ್ಟೆಯಾಗಿತ್ತು.
ಗ್ರಾಮೀಣ ಮತ್ತು ನಗರ ಪ್ರದೇಶದ ಎರಡೂ ಭಾಗದ ಜನರು, ಮಾದಕ ವಸ್ತುಗಳ ಆರ್ಥಿಕತೆಯ ಕೊಡುಗೆದಾರರಾಗಿದ್ದಾರೆ. ಅಫ್ಘಾನಿಸ್ತಾನದಲ್ಲಿ ಉತ್ಪಾದನೆಯಾಗುವ ಮಾದಕ ವಸ್ತುಗಳ ಬೇಡಿಕೆ ಯನ್ನು ಕಡಿಮೆ ಮಾಡುವ ಪ್ರಯತ್ನಗಳ ಕೊರತೆಯಿಂದಾಗಿ, ಅದರ ಕೃಷಿಯನ್ನು ನಿಲ್ಲಿಸುವ ಎಲ್ಲಾ ಪ್ರಯತ್ನಗಳು ಈ ಹಿಂದೆ ವಿಫಲವಾಗಿವೆ.
ಪರ್ಯಾಯ ಜೀವನೋಪಾಯ ಪ್ರಯತ್ನಗಳು ವಿಫಲವಾಗಿದ್ದು ಮತ್ತು ನಿಷ್ಪರಿಣಾಮಕಾರಿ ಯಾಗಿದ್ದು, ಪರ್ಯಾಯವಾದ ಸುಸ್ಥಿರ ಆದಾಯವನ್ನು ಉತ್ಪಾದಿಸುವುದು ಸಾಧ್ಯವಾಗಿಲ್ಲ. ಅಮೆರಿಕನ್ನರು 2020ರಲ್ಲಿ ಅಫ್ಘಾನಿಸ್ತಾನದಿಂದ ತಮ್ಮ ಸೇನಾಪಡೆಗಳನ್ನು ವಾಪಸ್ ಕರೆಸಿಕೊಂಡ ನಂತರ, ಓಪಿಯಂ ಮಾರಾಟ ದೊಡ್ಡಮಟ್ಟದಲ್ಲಿ ಹೆಚ್ಚಾಗಿತ್ತು. ಆದರೆ 2022ರ ಏಪ್ರಿಲ್ 3ರಂದು ತಾಲಿಬಾನ್ ಆಡಳಿತ ಅದರ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಷೇಧಿಸಿತು.
ವಸಂತಕಾಲದ ಗಸಗಸೆ ಸುಗ್ಗಿಯ ಮಧ್ಯದಲ್ಲಿ ಅಲ್ಲಿನ ರೈತರಿಗೆ ನಿಷೇಧದ ಸುದ್ದಿ ಬಂದಿತ್ತು. ಆ ವರ್ಷ ಅವರು ಬೆಳೆದ ಬೆಳೆಗೆ ಬಂಪರ್ ವರ್ಷವಾಗುತ್ತಿತ್ತು. ಯುದ್ಧ ಮುಗಿದ ನಂತರ, ಹೆಚ್ಚಿನ ರೈತರು ತಮ್ಮ ಬೆಳೆಯ ಕನಿಷ್ಠ ಭಾಗವನ್ನು ಗಸಗಸೆಗೆ ಮೀಸಲಿಟ್ಟಿದ್ದರು. ಪ್ರಮುಖ ಆರ್ಥಿಕ ಬಿಕ್ಕಟ್ಟಿನ ಮಧ್ಯದಲ್ಲಿಯೂ ನಿಷೇಧ ಹೇರಲಾಗಿತ್ತು.
ನವೆಂಬರ್ 2022ರಲ್ಲಿ ‘ಯುನೈಟೆಡ್ ನೇಷ ಆಫೀಸ್ ಆನ್ ಡ್ರಗ್ಸ್ ಆಂಡ್ ಕ್ರೈಮ್’ (UNODC) ಪ್ರಕಟಿ ಸಿದ ವರದಿಯ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಅಫೀಮು ಕೃಷಿ 233000 ಹೆಕ್ಟೇರ್‌ಗಳಿಗೆ ವಿಸ್ತರಿಸಿತ್ತು. ಅಫೀಮು ಬೆಳೆ ರೈತರ ಆದಾಯವನ್ನು ಮೂರು ಪಟ್ಟು ಹೆಚ್ಚಿಸಿತ್ತು. 2021ರಲ್ಲಿ 425 ಮಿಲಿಯನ್ ಡಾಲರ್ ಇದ್ದ ಅಫೀಮಿನ ಆದಾಯ, 2022ರಲ್ಲಿ 1.4 ಬಿಲಿಯನ್ ಡಾಲರ್‌ಗೆ ತಲುಪಿತ್ತು.
ಅದು 2021ರ ಕೃಷಿ ವಲಯದ ಆದಾಯದ ಶೇ.29ರಷ್ಟು ಇತ್ತೆಂದು ಹೇಳಲಾಗಿತ್ತು. ಏಪ್ರಿಲ್ 2022 ರಲ್ಲಿ ನಿಷೇಧವನ್ನು ಜಾರಿಗೊಳಿಸಿದ ನಂತರ, ಅಫೀಮಿನ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ವಾಗಿ ಏರಿಕೆಯಾಯಿತು. 2023ರ ಒಂದು ವರದಿಯ ಪ್ರಕಾರ, ಅಫೀಮಿನ ಬಳಕೆಯನ್ನು ನಿಲ್ಲಿಸಲು ತಾಲಿಬಾನ್ ನಡೆಸಿದ ಅಭಿಯಾನಗಳ ಪರಿಣಾಮವಾಗಿ ದಕ್ಷಿಣ ಅಫ್ಘಾನಿಸ್ತಾನದಲ್ಲಿ ಗಸಗಸೆ ಕೃಷಿ ಶೇ.80ರಷ್ಟು ಕಡಿಮೆಯಾಗಿದೆ. ಇದರಲ್ಲಿ ಹೆಲ್ಮಂಡ್ ಪ್ರಾಂತ್ಯದಲ್ಲಿ ಬೆಳೆಯಲಾಗುತ್ತಿದ್ದ ಅಫೀಮಿನ ಬೆಳವಣಿಗೆಯಲ್ಲಿನ ಶೇ.99ರಷ್ಟು ಕಡಿತವೂ ಸೇರಿದೆ.
ನವೆಂಬರ್ 2023ರಲ್ಲಿ ವಿಶ್ವಸಂಸ್ಥೆಯು ನೀಡಿರುವ ವರದಿಯ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಗಸಗಸೆ ಕೃಷಿ ಶೇ.95ರಷ್ಟು ಕುಸಿದಿದೆ ಎಂದು ಹೇಳಲಾಗಿದೆ. ನಂತರ ಅಫ್ಘಾನಿಸ್ತಾನವನ್ನು ವಿಶ್ವದ ಅತಿ ದೊಡ್ಡ ಅಫೀಮು ಉತ್ಪಾದಕ ದೇಶದ ಸ್ಥಾನದಿಂದ ತೆಗೆದುಹಾಕಲಾಗಿತ್ತು.ಆದರೆ ಇರಾನಿನ ಅಧಿಕಾರಿಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಮಾದಕವಸ್ತು ಉತ್ಪಾದನೆಯಲ್ಲಿನ ಇಳಿಕೆಗೆ ಇನ್ನೂ ಯಾವುದೇ ದಾಖಲಿತ ಪುರಾವೆಗಳು ಸಿಕ್ಕಿಲ್ಲ.
ಮಾದಕವಸ್ತು ಉತ್ಪಾದನೆ ಮತ್ತು ಕಳ್ಳಸಾಗಣೆದಾರರ ಚಟುವಟಿಕೆಗಳು ಈ ಹಿಂದೆ ನಡೆಯುತ್ತಿದ್ದಂತೆ ಇಂದು ಕೂಡ ಮುಂದುವರಿದಿವೆ ಎಂದು ಇರಾನ್ ಹೇಳಿದೆ. ಅಫ್ಘಾನಿಸ್ತಾನದಲ್ಲಿ ಗಸಗಸೆ ಕೃಷಿ ಯನ್ನು ಸಂಪೂರ್ಣವಾಗಿ ನಿಷೇಽಸುವುದು ತಾಲಿಬಾನ್‌ನ ಸಾಮರ್ಥ್ಯವನ್ನು ಮೀರಿದೆ ಎಂದು ಇರಾನ್ ಅಧಿಕಾರಿಗಳು ಹೇಳುತ್ತಾರೆ. ಇದರ ನಡುವೆ 2025ರಲ್ಲಿ ಅಫೀಮು ಗಸಗಸೆ ಕೃಷಿಯನ್ನು ನಡೆಸುತ್ತಿದ್ದ ಅಫ್ಘಾನಿಸ್ತಾನದ ಪ್ರಾಂತ್ಯಗಳಾದ ಬಾಲ್ಖ, ಫರಾಹ್, ಲಗ್ಮನ್ ಮತ್ತು ಉರುಜ್ಗನ್‌ಗಳನ್ನು ಅಫೀಮು ಗಸಗಸೆ ಮುಕ್ತವೆಂದು ಘೋಷಿಸಲಾಗಿದೆ.