ಸಂಪಾದಕರ ಸದ್ಯಶೋಧನೆ
1851ರಲ್ಲಿ ಆರಂಭದ ಅಮೆರಿಕದ ‘ದಿ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ತಾನು 150 ವರ್ಷಗಳಲ್ಲಿ ಪ್ರಕಟಿಸಿದ ಮುಖಪುಟಗಳನ್ನು ಸೇರಿಸಿ ಒಂದು ಪುಸ್ತಕವನ್ನು ಪ್ರಕಟಿಸಿದೆ. ಇದನ್ನು ಪತ್ರಿಕೆಯೊಂದರ ಮುಖಪುಟಗಳ ಸಂಗ್ರ ಇನ್ನುವುದಕ್ಕಿಂತ ಇತಿಹಾಸದ ನೆನಪುಗಳ ಸಂಗ್ರಹ ಎಂದು ಕರೆಯಬಹುದು. ಈ ಪುಸ್ತಕವನ್ನು ತೆರೆದರೆ ನೀವು 1851ಕ್ಕೆ ಮರಳುತ್ತೀರಿ. ಅಲ್ಲಿಂದ 150 ವರ್ಷಗಳ ಕಾಲದ ಪ್ರತಿ ಪ್ರಮುಖ ಘಟನೆಯೂ ಇಲ್ಲಿ ದಾಖಲಾಗಿದೆ.
ಇದು ಪತ್ರಿಕೆಯ ಸಂಗ್ರಹಕ್ಕಿಂತ ಹೆಚ್ಚಾಗಿ ಒಂದು ’ಕಾಲಯಂತ್ರ’ (Time Machine) ಎನಿಸಿ ಕೊಳ್ಳುತ್ತದೆ. ಓದುಗನಿಗೆ ತಾನು ಆಯಾ ಕಾಲಘಟ್ಟದ ಬದುಕುತ್ತಿದ್ದೇನೆ ಎಂಬ ಭ್ರಮೆ ಹುಟ್ಟಿಸು ವಷ್ಟು ಇದು ಶಕ್ತಿಶಾಲಿಯಾಗಿದೆ. ಆ ಪುಸ್ತಕವು ಕೇವಲ ಕಾಗದದ ಹಾಳೆಗಳಲ್ಲ. ಅದು ಮನುಕುಲದ ಏಳುಬೀಳುಗಳ ದೈತ್ಯ ದಾಖಲೆ. ಅದು ಕಾಲದ ಹೆಜ್ಜೆಗುರುತುಗಳನ್ನು ಹಿಡಿದಿಟ್ಟಿರುವ ಒಂದು ‘ಲಿಖಿತ ಸ್ಮಾರಕ’.
ಈ ಸಂಗ್ರಹದಲ್ಲಿ ನಾವು ಕಾಣುವ ಕೆಲವು ಅತ್ಯಂತ ‘ತಲ್ಲಣ’ ಮತ್ತು ‘ವಿಸ್ಮಯ’ ಮೂಡಿಸುವ ಮುಖ ಪುಟಗಳೆಂದರೆ, ಅಬ್ರಹಾಂ ಲಿಂಕನ್ ಹತ್ಯೆ (1865 ರಲ್ಲಿ ), ನಮ್ಮ ತಾಂತ್ರಿಕತೆಗಿಂತ ಪ್ರಕೃತಿ ದೊಡ್ಡದು ಎಂಬ ಸತ್ಯ ಸಾರಿದ ಟೈಟಾನಿಕ್ ಮುಳುಗಡೆ (1912), ಚಂದಿರನ ಮೇಲೆ ಮನುಷ್ಯ ಕಾಲಿಟ್ಟ (ಶೀರ್ಷಿಕೆ MEN WALK ON MOON) ಘಟನೆ, ಜಪಾನ್ ಮೇಲೆ ಅಣುಬಾಂಬ್ ದಾಳಿ (ಆಗಸ್ಟ್ 7, 1945), ಆಧುನಿಕ ಜಗತ್ತನ್ನು ತಲ್ಲಣಗೊಳಿಸಿದ ಭಯೋತ್ಪಾದನೆಯ ಕರಾಳ ಮುಖ (ಸೆಪ್ಟೆಂಬರ್ 11ರ ದಾಳಿ (2001).. ಇತ್ಯಾದಿ. ಈ ಪುಸ್ತಕವು ಕೇವಲ ಸುದ್ದಿಯನ್ನು ಮಾತ್ರವಲ್ಲ, ಸಂವಹನ ಕಲೆ ಹೇಗೆ ಬದಲಾಯಿತು ಎಂಬುದನ್ನೂ ತೋರಿಸುತ್ತದೆ.
ಇದನ್ನೂ ಓದಿ: Vishweshwar Bhat Column: ಇನ್ನಷ್ಟು ಚೆಂದಗೊಳಿಸಲು ಸುಂದರ ಹೂವಿಗೆ ಬಣ್ಣ ಹಚ್ಚಬಾರದು !
ಸಾಮಾನ್ಯವಾಗಿ ಇತಿಹಾಸದ ಪುಸ್ತಕಗಳನ್ನು ಇತಿಹಾಸಕಾರರು ನಂತರ ಬರೆಯುತ್ತಾರೆ. ಆದರೆ ಈ ಮುಖಪುಟಗಳ ಸಂಗ್ರಹವುರ ‘ಇತಿಹಾಸವು ಸಂಭವಿಸುತ್ತಿರುವಾಗಲೇ ದಾಖಲಾದ’ ರೂಪವಾಗಿದೆ. ಇಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಘಟನೆ ನಡೆದ ಮರುದಿನದ ಆಘಾತ, ಆವೇಶ ಮತ್ತು ಸತ್ಯಗಳು ಇಲ್ಲಿ ಹಸಿರಾಗಿವೆ.
ಒಂದು ದೇಶದ ನೋವು, ನಲಿವು ಮತ್ತು ಸಂಘರ್ಷಗಳು ಈ ಪುಟಗಳಲ್ಲಿ ಅಡಕವಾಗಿರುವುದರಿಂದ ಇದು ಒಂದು ಜನಾಂಗದ ‘ಸಾಮೂಹಿಕ ಸ್ಮೃತಿ’ (Collective Memory) ಆಗಿ ಮಾರ್ಪಟ್ಟಿದೆ. ಈ 150 ವರ್ಷಗಳ ಮುಖಪುಟಗಳನ್ನು ಒಂದೇ ಕಡೆ ನೋಡಿದಾಗ ನಮಗೆ ತಿಳಿಯುವ ಸತ್ಯವೇನೆಂದರೆ-ಜಗತ್ತು ನಿರಂತರವಾಗಿ ಬದಲಾಗುತ್ತಿದೆ.
ಹಳೆಯ ತಲ್ಲಣಗಳು ಹೋಗಿ ಹೊಸ ತಲ್ಲಣಗಳು ಹುಟ್ಟುತ್ತಿವೆ. ಈ ಪುಸ್ತಕವು ನಮಗೆ ನೀಡುವ ಪಾಠವೆಂದರೆ, ‘ಇಂದು ನಮಗೆ ಅತೀ ದೊಡ್ಡದು ಎನಿಸುವ ಸಮಸ್ಯೆಯೂ ನಾಳೆ ಇತಿಹಾಸದ ಒಂದು ಪುಟವಷ್ಟೇ.’ ಪತ್ರಿಕೆಯು ಇತಿಹಾಸದ ಮೊದಲ ಕರಡು ಪ್ರತಿಯಿದ್ದಂತೆ ಎಂಬ ಮಾತು ಈ ಪುಸ್ತಕಕ್ಕೆ ಅನ್ವರ್ಥವಾಗಿದೆ. ಯುದ್ಧಗಳು ನಡೆದಾಗ, ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಅಥವಾ ಅಧ್ಯಕ್ಷರು ಹತ್ಯೆಯಾದಾಗ ಈ ಪತ್ರಿಕೆಯು ಅಬ್ಬರದ ಶೀರ್ಷಿಕೆಗಳಿಗಿಂತ ಹೆಚ್ಚಾಗಿ ಸಂಯಮ ಮತ್ತು ಸತ್ಯಕ್ಕೆ ಒತ್ತು ನೀಡಿದ್ದನ್ನು ಈ ಮುಖಪುಟಗಳಲ್ಲಿ ಕಾಣಬಹುದು. ಈ ಒಂದೂವರೆ ಶತಮಾನದ ಪುಟಗಳನ್ನು ತಿರುವಿದಾಗ, ನಾವು ಕೇವಲ ಸುದ್ದಿಯನ್ನು ನೋಡುವುದಿಲ್ಲ, ಬದಲಿಗೆ ಮನುಷ್ಯನ ಸಂವೇದನೆಗಳು ಹೇಗೆ ಬದಲಾದವು ಎಂಬುದನ್ನೂ ಗಮನಿಸುತ್ತೇವೆ.
1850ರ ದಶಕದಲ್ಲಿ ಅಕ್ಷರಗಳಿಗೆ ಹೆಚ್ಚಿನ ಪ್ರಾಮುಖ್ಯ ಇತ್ತು. ಓದುಗನಿಗೆ ತಾಳ್ಮೆ ಇತ್ತು. 1900ರ ದಶಕದ ನಂತರ ಚಿತ್ರಗಳು ಕಥೆ ಹೇಳಲು ಆರಂಭಿಸಿದವು. ದೃಶ್ಯ ಮಾಧ್ಯಮದ ಪ್ರಭಾವ ಮುಖಪುಟ ಗಳ ಮೇಲೆ ಢಾಳಾಗಿ ಕಾಣುತ್ತಿತ್ತು. ಈಗ ಮಾಹಿತಿ ಸ್ಫೋಟದ ನಡುವೆ ಅತ್ಯಂತ ಮುಖ್ಯವಾದುದನ್ನು ಆರಿಸುವ ಜವಾಬ್ದಾರಿ ಪತ್ರಿಕೆಯ ಮೇಲೆ ಬಿದ್ದಿತು. ಈ ಪುಸ್ತಕದಲ್ಲಿ ಕೆಲವು ಪುಟಗಳು ವಿನ್ಯಾಸದ ದೃಷ್ಟಿಯಿಂದಲೇ ನಮ್ಮನ್ನು ಬೆರಗುಗೊಳಿಸುತ್ತವೆ.
ಉದಾಹರಣೆಗೆ, ಸೆಪ್ಟೆಂಬರ್ 12, 2001 ರ ಮುಖಪುಟ. ಅಲ್ಲಿ ಯಾವುದೇ ದೊಡ್ಡ ಅಲಂಕಾರಗಳಿಲ್ಲ. ಅವಳಿ ಗೋಪುರಗಳು ಉರಿಯುತ್ತಿರುವ ಆ ಒಂದು ಭಯಾನಕ ಚಿತ್ರ ಮತ್ತು ಸಣ್ಣದಾಗಿ ಕೆತ್ತಿದ ಅಕ್ಷರ ಗಳು ಆ ಕ್ಷಣದ ತೀವ್ರತೆಯನ್ನು ವಿವರಿಸುತ್ತವೆ. ಈ ಪುಸ್ತಕವು ಒಂದು ವಿಶೇಷ ಪಾಠವನ್ನು ಹೇಳು ತ್ತದೆ. ಅದು ‘ಸುದ್ದಿಯು ಇತಿಹಾಸವಾಗುವ ಪ್ರಕ್ರಿಯೆ’. ಒಂದು ದಿನದ ಮುಖಪುಟದಲ್ಲಿ ಯಾವುದೋ ಒಂದು ಸುದ್ದಿ ‘ಅತೀ ದೊಡ್ಡದು’ ಎಂದು ಅಚ್ಚಾ ಗಿರುತ್ತದೆ. ಆದರೆ ಹತ್ತು ವರ್ಷಗಳ ನಂತರದ ಪುಟಗಳನ್ನು ನೋಡಿದಾಗ ಆ ಸುದ್ದಿ ಅಪ್ರಸ್ತುತವಾಗಿ ಕಾಣಬಹುದು. ಇದು ನಮಗೆ ‘ವರ್ತಮಾನದ ಅನಿಶ್ಚಿತತೆ’ಯನ್ನು ನೆನಪಿಸುತ್ತದೆ.
ಇತಿಹಾಸದ ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಇದು ಕೇವಲ ಪುಸ್ತಕವಲ್ಲ, ಇದೊಂದು ‘ದತ್ತಾಂಶದ ಗಣಿ’ (ಈZಠಿZ Iಜ್ಞಿಛಿ). ಅಂದಿನ ಕಾಲದ ಜಾಹೀರಾತುಗಳು, ಭಾಷಾ ಶೈಲಿ, ಮತ್ತು ಸುದ್ದಿಯ ಆದ್ಯತೆಗಳನ್ನು ಅಧ್ಯಯನ ಮಾಡಲು ಇದು ಅದ್ಭುತ ಆಕರವಾಗಿದೆ.