Vishweshwar Bhat Column: ಆಪರೇಶನ್ ಸಿಂದೂರ ಮತ್ತು ತುಪ್ಪದಲ್ಲಿ ಬಿದ್ದ ಜಾರ್ಜಿಯಾದ ಒಣರೊಟ್ಟಿ
ಕೂರಾ ನದಿಯ ತೀರದಲ್ಲಿರುವ ಈ ನಗರ, ಪರ್ವತ, ಹಸಿರು ಬೆಟ್ಟ-ಗುಡ್ಡಗಳಿಂದ ಸುತ್ತುವರಿ ಯಲ್ಪಟ್ಟಿದೆ. ಸಮುದ್ರ ಮಟ್ಟದಿಂದ ಸುಮಾರು 400 ಮೀ. ಎತ್ತರದಲ್ಲಿರುವ ಈ ನಗರವು ವಿಶಿಷ್ಟ ಭೌಗೋಳಿಕ ರಚನೆ ಮತ್ತು ನೈಸರ್ಗಿಕ ಸೌಂದರ್ಯದಿಂದ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ.


ಇದೇ ಅಂತರಂಗ ಸುದ್ದಿ
vbhat@me.com
ಒಂದು ವಾರ ಜಾರ್ಜಿಯಾ ದೇಶದ ರಾಜಧಾನಿ ಟಿಬಿಲಿಸಿ, ಗುಡೌರಿ ಮುಂತಾದ ಪ್ರದೇಶಗಳಲ್ಲಿ ಸುತ್ತಾಡಿದ ಅನುಭವ ಅಮೋಘವಾದುದು. ಜಾರ್ಜಿಯಾ ದೇಶ ನನಗೆ ಹೊಸತಲ್ಲ. ಇದು ನನ್ನ ಎರಡನೇ ಭೇಟಿ. ಐದು ವರ್ಷಗಳ ಹಿಂದೆ, ನಾನು ಮೊದಲ ಬಾರಿಗೆ ಅಲ್ಲಿಗೆ ಹೋಗಿದ್ದೆ. ಆಗ 9 ದಿನ ಇಡೀ ದೇಶದಲ್ಲಿ ಸುತ್ತು ಹಾಕಿದ್ದೆ. ಇದು ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರಗಳ ಮಧ್ಯೆ ಇರುವ, ಕಾಕೇಷಸ್ ಪರ್ವತ ಶ್ರೇಣಿಗಳ ನಡುವಿನ ಸುಂದರ ನಗರ. ಈ ನಗರವು ತನ್ನ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಭೌಗೋಳಿಕ ಮಹತ್ವದಿಂದ ಗಮನ ಸೆಳೆದಿದೆ.
ಕೂರಾ ನದಿಯ ತೀರದಲ್ಲಿರುವ ಈ ನಗರ, ಪರ್ವತ, ಹಸಿರು ಬೆಟ್ಟ-ಗುಡ್ಡಗಳಿಂದ ಸುತ್ತುವರಿ ಯಲ್ಪಟ್ಟಿದೆ. ಸಮುದ್ರ ಮಟ್ಟದಿಂದ ಸುಮಾರು 400 ಮೀ. ಎತ್ತರದಲ್ಲಿರುವ ಈ ನಗರವು ವಿಶಿಷ್ಟ ಭೌಗೋಳಿಕ ರಚನೆ ಮತ್ತು ನೈಸರ್ಗಿಕ ಸೌಂದರ್ಯದಿಂದ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ.
ಜಾರ್ಜಿಯಾ ಒಂದು ವಿಶಿಷ್ಟವಾದ ಭೌಗೋಳಿಕ ಪ್ರದೇಶದಲ್ಲಿದೆ. ಪೂರ್ವ ಯುರೋಪ್ ಮತ್ತು ಪಶ್ಚಿಮ ಏಷ್ಯಾದ ಮಧ್ಯೆ ಇರುವ, ಕಪ್ಪು ಸಮುದ್ರ, ರಷ್ಯಾ, ಟರ್ಕಿ, ಅರ್ಮೇನಿಯ ಮತ್ತು ಅಜರ್ಬೈ ಜಾನ್ ಅನ್ನು ಗಡಿಗೆ ಕಟ್ಟಿಕೊಂಡಿರುವ ಜಾರ್ಜಿಯಾದ ಮೇಲೆ ಯುರೋಪ್ ಮತ್ತು ಏಷ್ಯಾದ ಗಾಢ ಪ್ರಭಾವ ಇರುವುದನ್ನು ಕಾಣಬಹುದು.
ಈ ನಗರ ಹಲವು ಶತಮಾನಗಳವರೆಗೆ ಪರ್ಷಿಯನ್, ಅರಬ್, ಮೊಂಗೋಲ್, ಓಟ್ಟೋಮನ್ ಮತ್ತು ರಷ್ಯನ್ ಸಾಮ್ರಾಜ್ಯಗಳ ಅಧೀನದಲ್ಲಿತ್ತು. ಇದರಿಂದ ಟಿಬಿಲಿಸಿಗೆ ಬಹುಸಾಂಸ್ಕೃತಿಕ ಆಯಾಮವಿದೆ. ಪ್ರತಿ ಆಳ್ವಿಕೆಯಿಂದಲೂ ಇಲ್ಲಿನ ಕಲೆ, ವಾಸ್ತುಶಿಲ್ಪ ಹಾಗೂ ಆಹಾರದ ವೈವಿಧ್ಯ ಶ್ರೀಮಂತವಾಗಿ ದ್ದನ್ನು ಕಾಣಬಹುದು. ಟಿಬಿಲಿಸಿಯ ಜನಸಂಖ್ಯೆ ಸುಮಾರು 12 ಲಕ್ಷ. ಜಾರ್ಜಿಯಾದ ಜನಸಂಖ್ಯೆ ಸುಮಾರು 37 ಲಕ್ಷ. ಜಾರ್ಜಿಯಾದಲ್ಲಿ ಬಹುಸಂಖ್ಯಾಕರು ಕ್ರಿಶ್ಚಿಯನ್ನರು. ಬಹುಪಾಲು ಜನ ಜಾರ್ಜಿಯನ್ ಭಾಷೆಯನ್ನೇ ಮಾತನಾಡುತ್ತಾರೆ.
ಜತೆಗೆ ರಷ್ಯನ್, ಇಂಗ್ಲಿಷ್ ಮತ್ತು ಅರ್ಮೇನಿಯನ್ ಭಾಷೆಗಳ ಬಳಕೆಯೂ ಇದೆ. ಇತ್ತೀಚಿನ ವರ್ಷ ಗಳಲ್ಲಿ ಪ್ರವಾಸೋದ್ಯಮದ ಬೆಳವಣಿಗೆಯು ಇಂಗ್ಲಿಷ್ ಭಾಷಾ ಬಳಕೆಯನ್ನು ಹೆಚ್ಚಿಸಿದೆ. ಸೋವಿ ಯತ್ ರಷ್ಯಾದ ಭಾಗವೇ ಆಗಿದ್ದ ಜಾರ್ಜಿಯಾ, 1991ರಲ್ಲಿ ರಷ್ಯಾದಿಂದ ಬೇರ್ಪಟ್ಟು ಸ್ವತಂತ್ರ ರಾಷ್ಟ್ರವಾಯಿತು. 1990ರ ದಶಕದ ಉದ್ದಕ್ಕೂ, ದೇಶವು ಅಂತರ್ಯುದ್ಧ, ಆರ್ಥಿಕ ಬಿಕ್ಕಟ್ಟುಗಳು, ರಾಜಕೀಯ ಅಸ್ಥಿರತೆ ಮತ್ತು ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿ ಸಂಘರ್ಷಗಳಿಂದ ಘಾಸಿ ಗೊಂಡಿತ್ತು.
ಜಾರ್ಜಿಯಾ ಆರಂಭದಲ್ಲಿ, ರಷ್ಯಾದೊಂದಿಗೆ ಆಳವಾದ ಸಂಬಂಧವನ್ನು ಹೊಂದಿತ್ತು. ಆದರೆ ಜಾರ್ಜಿಯಾದಲ್ಲಿ ಅಧಿಕಾರಕ್ಕೆ ಬಂದವರೆಲ್ಲ, ಅದರಲ್ಲೂ ವಿಶೇಷವಾಗಿ 2002ರ ನಂತರ ಬಂದವರು, ಅಧಿಕೃತವಾಗಿ ಪಾಶ್ಚಿಮಾತ್ಯ ಪರ ವಿದೇಶಾಂಗ ನೀತಿಯನ್ನು ಘೋಷಿಸಿದರು. 2003ರಲ್ಲಿ ನಡೆದ ಶಾಂತಿಯುತ ಕ್ರಾಂತಿಯಿಂದ ಜಾರ್ಜಿಯಾದ ನಾಗರಿಕರ ಒಕ್ಕೂಟ ಉರುಳಿತು. ನಂತರ ಮಿಖೈಲ್ ಸಾಕಾಶ್ವಿಲಿ ದೇಶದ ಅಧ್ಯಕ್ಷರಾದರು. ಅವರು ವಿವಿಧ ಆರ್ಥಿಕ ಮತ್ತು ಸರಕಾರಿ ಸುಧಾರಣೆಗಳನ್ನು ಜಾರಿಗೆ ತಂದರು ಮತ್ತು ಹೆಚ್ಚು ಪೂರ್ವಭಾವಿ ಪಾಶ್ಚಿಮಾತ್ಯ ಪರ ದೃಷ್ಟಿಕೋನವನ್ನು ಅನುಸರಿಸಿ ದರು.
ಇದನ್ನೂ ಓದಿ: Tamannaah Bhatia: ಮೈಸೂರು ಸ್ಯಾಂಡಲ್ ಸೋಪಿಗೆ ರಾಯಭಾರಿಯಾಗಿ ಮಿಲ್ಕಿ ಬ್ಯೂಟಿ ತಮನ್ನಾ ಆಯ್ಕೆ; ಕನ್ನಡಿಗರು ಗರಂ
ಇದರಿಂದ ರಷ್ಯಾದೊಂದಿಗಿನ ಸಂಬಂಧಗಳು ಹದಗೆಟ್ಟವು, ಇದು 2008ರ ರುಸ್ಸೋ-ಜಾರ್ಜಿಯನ್ ಯುದ್ಧದಲ್ಲಿ ಮತ್ತು ಜಾರ್ಜಿಯಾದ ಕೆಲವು ಭಾಗಗಳನ್ನು ರಷ್ಯಾ ಆಕ್ರಮಿಸಿಕೊಳ್ಳುವುದರಲ್ಲಿ ಕೊನೆ ಗೊಂಡಿತು. ಜಾರ್ಜಿಯಾ ಮತ್ತು ರಷ್ಯಾ ಇತಿಹಾಸವನ್ನು ನೋಡುತ್ತಾ ಬಂದವರಿಗೆ ಗೊಂದಲ ವಾಗುವುದು ಸಹಜ. ಕಾರಣ ಇವೆರಡು ರಾಷ್ಟ್ರಗಳ ಸಂಬಂಧ ಯಾವಾಗ ಬದಲಾಗುತ್ತದೆ, ಬಿಗಡಾ ಯಿಸುತ್ತದೆ, ಸುಧಾರಿಸುತ್ತದೆ ಎಂದು ಹೇಳುವುದು ಕಷ್ಟ.
ಜಾರ್ಜಿಯಾ ಒಂದು ಪ್ರತಿನಿಧಿ ಪ್ರಜಾಪ್ರಭುತ್ವವಾಗಿದ್ದು, ಏಕೀಕೃತ ಸಂಸದೀಯ ಗಣರಾಜ್ಯವಾಗಿ ರೂಪುಗೊಂಡಿದೆ. ಇದು ಅತಿ ಹೆಚ್ಚು ಮಾನವ ಅಭಿವೃದ್ಧಿ ಸೂಚ್ಯಂಕ ಮತ್ತು ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಯನ್ನು ಹೊಂದಿರುವ ಅಭಿವೃದ್ಧಿಶೀಲ ರಾಷ್ಟ್ರವಾಗಿದೆ. 2003ರಿಂದ ವ್ಯಾಪಕ ವಾದ ಆರ್ಥಿಕ ಸುಧಾರಣೆಗಳು ವಿಶ್ವದ ಅತ್ಯಂತ ಮುಕ್ತ ವ್ಯಾಪಾರ ವಾತಾವರಣಗಳಲ್ಲಿ ಒಂದು ಎಂಬ ಖ್ಯಾತಿಯನ್ನು ತಂದುಕೊಟ್ಟಿವೆ.
ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯ, ಪಾರದರ್ಶಕತೆ ಮತ್ತು ಜಿಡಿಪಿ ಬೆಳವಣಿಗೆಯ ವೇಗದ ದರಗಳಿಂದ ಇವೆಲ್ಲ ಸಾಧ್ಯವಾಗಿವೆ. 2018ರಲ್ಲಿ, ಜಾರ್ಜಿಯಾ ಗಾಂಜಾವನ್ನು ಕಾನೂನುಬದ್ಧಗೊಳಿಸಿದ ಎರಡನೇ ದೇಶ ಮತ್ತು ಹಾಗೆ ಮಾಡಿದ ಮೊದಲ ಹಿಂದಿನ ಸಮಾಜವಾದಿ ದೇಶ ಎಂದು ಕರೆಯಿಸಿಕೊಂಡಿತು. ಜಾರ್ಜಿಯಾ ಯುರೋಪ್ ಕೌನ್ಸಿಲ್, ಯೂರೋಕಂಟ್ರೋಲ್, ಬಿಎಸ್‌ಇಸಿ, ಜಿಯುಎಎಂ, ಎನರ್ಜಿ ಕಮ್ಯುನಿಟಿ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳ ಸದಸ್ಯ. ಅಸೋಸಿಯೇಷನ್ ಟ್ರಿಯೊದ ಭಾಗವಾಗಿ, ಜಾರ್ಜಿಯಾ ಯುರೋಪಿಯನ್ ಒಕ್ಕೂಟದಲ್ಲಿ ಸದಸ್ಯತ್ವಕ್ಕಾಗಿ ಅಧಿಕೃತ ಅಭ್ಯರ್ಥಿ ದೇಶವಾಗಿದೆ.

ಟಿಬಿಲಿಸಿ ಜಾರ್ಜಿಯಾದ ಆರ್ಥಿಕ, ಶೈಕ್ಷಣಿಕ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಬ್ಯಾಂಕುಗಳು, ಇನ್ಶುರೆ ಕಂಪನಿಗಳು ಮತ್ತು ಸ್ಟಾರ್ಟಪ್ ಕಂಪನಿಗಳು ಇಲ್ಲಿವೆ. ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ, ಶಿಕ್ಷಣ ಮತ್ತು ವಾಣಿಜ್ಯ ಕ್ಷೇತ್ರಗಳು ಇಲ್ಲಿನ ಆರ್ಥಿಕತೆಯ ಮುಖ್ಯ ಅಂಶಗಳು. ಟಿಬಿಲಿಸಿಯು ಬೃಹತ್ ಸಾಂಸ್ಕೃತಿಕ ಮೇಳವಾಗಿದೆ.
ಇಲ್ಲಿ ಅನೇಕ ನೃತ್ಯ, ಸಂಗೀತ, ಚಿತ್ರಕಲೆ ಹಾಗೂ ನಾಟಕ ಪ್ರದರ್ಶನಗಳು ನಿರಂತರ ನಡೆಯುತ್ತವೆ. ಈ ನಗರದಲ್ಲಿ ಪ್ರತಿವರ್ಷವೂ ಟಿಬಿಲಿಸಿ ಫಿಲ್ಮ್ ಫೆಸ್ಟಿವಲ್, ಜಾಜ್ ಫೆಸ್ಟಿವಲ್ ಮತ್ತು ಬೇರೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಟಿಬಿಲಿಸಿಯು ಜಾರ್ಜಿಯಾದ ಶೈಕ್ಷಣಿಕ ಕೇಂದ್ರವೂ ಆಗಿದೆ. ಟಿಬಿಲಿಸಿ ಸ್ಟೇಟ್ ಯೂನಿವರ್ಸಿಟಿ, ಜಾರ್ಜಿಯನ್ ಟೆಕ್ನಿಕಲ್ ಯುನಿವರ್ಸಿಟಿ ಮತ್ತು ಇನ್ನಷ್ಟು ಸಂಸ್ಥೆಗಳು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿವೆ.
ಬಹುಭಾಷಾ ಶಿಕ್ಷಣವು ಇಲ್ಲಿನ ವೈಶಿಷ್ಟ್ಯ. ಆಶ್ಚರ್ಯವೆಂದರೆ ಈ ನಗರದಲ್ಲಿ ಸುಮಾರು 25000 ಕನ್ನಡಿಗ ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲ ವೈದ್ಯಕೀಯ ವ್ಯಾಸಂಗಕ್ಕೆ ಬಂದವರು. ಟಿಬಿಲಿಸಿಯಲ್ಲಿ ನಡೆದಾಡುವಾಗ, ಕನ್ನಡಿಗ ವಿದ್ಯಾರ್ಥಿಗಳು, ಅವರನ್ನು ನೋಡಲು ಬರುವ ಪಾಲಕರನ್ನು ಕಾಣ ಬಹುದು. ಟಿಬಿಲಿಸಿ ಒಂದು ಚಲನಶೀಲ ಮತ್ತು ಕ್ರಿಯಾತ್ಮಕ ನಗರ. ಇಲ್ಲಿ ಪುರಾತನ ಇತಿಹಾಸವೂ ಇದೆ ಮತ್ತು ಆಧುನಿಕತೆಯ ಸ್ಪರ್ಶವೂ ಇದೆ. ಇಲ್ಲಿನ ಸಂಸ್ಕೃತಿ, ಆಹಾರ, ವಾಸ್ತುಶಿಲ್ಪ, ಜನಪದ, ನೃತ್ಯ ಮತ್ತು ಹಿತಕರ ಹವಾಮಾನ ಈ ನಗರದ ವೈಶಿಷ್ಟ್ಯ. ‘ಜಾರ್ಜಿಯಾದ ಅರಮನೆ’ ಎಂದೇ ಹೇಳಬಹುದಾದ ಈ ನಗರ, ಇಂದಿಗೂ ಅನೇಕರ ಕಲ್ಪನೆಗಳ ಮೇಲೆ ಸವಾರಿ ಮಾಡುತ್ತದೆ.
ಮೊನ್ನಿನ ‘ಆಪರೇಷನ್ ಸಿಂದೂರ’ ಬಳಿಕ, ಟರ್ಕಿ ಮತ್ತು ಅಜರ್ಬೈಜಾನ್ ಅನ್ನು ಭಾರತ ಕಪ್ಪು ಪಟ್ಟಿಗೆ ಸೇರಿಸಿದೆ. ಇದರಿಂದ ಅದರ ಪಕ್ಕದಲ್ಲಿರುವ ಜಾರ್ಜಿಯಾದ ಒಣರೊಟ್ಟಿ ತುಪ್ಪದಲ್ಲಿ ಬಿದ್ದಂತೆ ಆಗಿದೆ. ಭಾರತೀಯರು ಅದರಲ್ಲೂ ವಿಶೇಷವಾಗಿ ಕನ್ನಡಿಗರು ಈಗ ಜಾರ್ಜಿಯಾ ಕಡೆಗೆ ಮುಖ ಮಾಡಲಾರಂಭಿಸಿದ್ದಾರೆ.
ಆತಿಥ್ಯದ ತವರೂರು
ಜಾರ್ಜಿಯಾ ಜನರು ತಮ್ಮ ಅಪರೂಪದ ಆತಿಥ್ಯ, ಸತ್ಕಾರ, ಐತಿಹಾಸಿಕ ಪರಂಪರೆ, ಭಾಷಾಭಿಮಾನ ಮತ್ತು ಧಾರ್ಮಿಕ ನಿಷ್ಠೆಯಿಂದ ಪ್ರಸಿದ್ಧರಾಗಿದ್ದಾರೆ. ಆ ದೇಶದ ಸಂಸ್ಕೃತಿಯ ಹೃದಯವೇ‘ಅತಿಥಿ ದೇವೋ ಭವ’ ಎಂಬುದು. ಅತಿಥಿ ಸತ್ಕಾರದಲ್ಲಿ ಅವರದು ಎತ್ತಿದ ಕೈ. Guest is a gift from God ಎಂಬುದು ಅವರ ನಂಬಿಕೆ. ಇದು ಸಮಾಜದಲ್ಲಿ ಆಳವಾಗಿ ನೆಲೆಸಿದೆ.
ಜಾರ್ಜಿಯಾದಲ್ಲಿ 'A guest is a gift from God' ಎಂಬ ನಂಬಿಕೆ ಕೇವಲ ಮಾತಲ್ಲ, ಆದರೆ ಪ್ರತಿ ಮನೆಯ ಮೂರನೆಯ ತಲೆಮಾರಿಗೆ ಹರಿಯುತ್ತಿರುವ ಮನೋಭಾವ. ಅತಿಥಿಯು ಮನೆಗೆ ಬಂದ ಕೂಡಲೇ, ಆತ ಅವರೆಲ್ಲರ ಪಾಲಿಗೂ ಗೌರವಪಾತ್ರ ವ್ಯಕ್ತಿಯಾಗುತ್ತಾನೆ. ತಕ್ಷಣವೇ ತಿನಿಸು, ಪಾನೀಯ ಮತ್ತು ಆತ್ಮೀಯ ಮಾತುಗಳಿಂದ ಆತಿಥ್ಯ ನೀಡುವ ಸಂಸ್ಕೃತಿ ಸಾಮಾನ್ಯ. ಜಾರ್ಜಿಯಾದ ಜನರು ಅಪರಿಚಿತ ವ್ಯಕ್ತಿಯನ್ನೂ ಗೆಳೆಯನಂತೆ ನಡೆಸಿಕೊಳ್ಳುತ್ತಾರೆ.
ನಮ್ಮೊಂದಿಗಿದ್ದ ಗೈಡ್, “ನೀವು ಜಾರ್ಜಿಯಾದಲ್ಲಿ ಯಾರ ಮನೆಗೆ ತೆರಳಿದರೂ, ನಿಮ್ಮ ಕೈಯಲ್ಲಿ ವೈನ್, ಚಹಾ, ಕಾಫಿ, ಪಾನ್ ಅಥವಾ ಊಟ ನೀಡದೇ ಕಳಿಸುವುದಿಲ್ಲ. ಅತಿಥಿಯು ಕೂತಿದ್ದರೆ, ಅದು ಆಶೀರ್ವಾದವೆಂದು ಎಣಿಸುವ ಮನೋಭಾವ ಈ ದೇಶದ ಆಧ್ಯಾತ್ಮಿಕ ಧಾರಾಳತೆಯ ಪ್ರತೀಕ ವಾಗಿದೆ" ಎಂದು ಹೇಳಿದಾಗ ನನಗೆ ಆಶ್ಚರ್ಯವಾಯಿತು.
ಜಾರ್ಜಿಯಾದಲ್ಲಿ ಕುಟುಂಬ ಮತ್ತು ಸ್ನೇಹಿತರು ಎಂಬುದು ಸಾಂಸ್ಕೃತಿಕ ಕೇಂದ್ರಬಿಂದು. ಕುಟುಂಬ ದ ಸದಸ್ಯರ ಮಧ್ಯೆ ಏನಾದರೂ ಭಿನ್ನಾಭಿಪ್ರಾಯ, ಕಲಹವುಂಟಾದರೆ ತಕ್ಷಣ ಬಗೆಹರಿಸಿ ಕೊಳ್ಳಲಾಗುತ್ತದೆ. ದ್ವೇಷ, ಸಂಬಂಧ ಕಡಿದುಕೊಳ್ಳುವುದರಲ್ಲಿ ಅವರಿಗೆ ನಂಬಿಕೆ ಇಲ್ಲ. ಸಂಬಂಧಿಕ ರಲ್ಲಿ ಸಂಬಂಧ ಸರಿ ಇಟ್ಟುಕೊಳ್ಳದಿದ್ದರೆ ಆತ ನಿಷ್ಪ್ರಯೋಜಕ ಎಂಬ ಭಾವನೆ ಅವರಲ್ಲಿದೆ.
ಉಡುಗೆ-ತೊಡುಗೆ, ಭಾಷಾಶೈಲಿ, ಜೀವನ ಶೈಲಿಗಳಲ್ಲೂ ಅವರ ಕೌಟುಂಬಿಕ ಮೌಲ್ಯ, ಜೀವನ ದರ್ಶನದ ಅನಾವರಣವಾಗುತ್ತದೆ. ಸ್ನೇಹಿತರನ್ನು ಕೂಡ ಜಾರ್ಜಿಯನ್ನರು ತಮ್ಮ ಕುಟುಂಬದ ಭಾಗವಾಗಿಯೇ ಪರಿಗಣಿಸುತ್ತಾರೆ. ಒಮ್ಮೆ ಒಬ್ಬ ವ್ಯಕ್ತಿಯನ್ನು ಸ್ನೇಹಿತನಾಗಿ ಸ್ವೀಕರಿಸಿದರೆ, ಆತನ ಜೀವಮಾನದ ಸ್ನೇಹಿತ. ಜಾರ್ಜಿಯಾದ ನಿಜವಾದ ಶಕ್ತಿ ಅಲ್ಲಿನ ಬೆರಗಿನ ಪರ್ವತಗಳಲ್ಲಿ ಇಲ್ಲ, ಹಿಮ ಆವರಿಸಿದ ಗಿರಿ-ಶಿಖರಗಳಲ್ಲಿ ಇಲ್ಲ. ಅದು ಅಲ್ಲಿನ ಜನರ ಮನಸ್ಸುಗಳಲ್ಲಿ, ಅವರ ಆತ್ಮೀಯತೆ ಮತ್ತು ಸಂಸ್ಕೃತಿಯ ಮೇಲಿನ ಪ್ರೀತಿಯಲ್ಲಿ ಇದೆ.
ಅವರ ಜೀವನ, ಭಾಷೆ, ಭೋಜನ, ಧರ್ಮ, ಕಲಾಶಕ್ತಿ- ಇವೆಲ್ಲವೂ ಸೇರಿ ಜಾರ್ಜಿಯಾವನ್ನು ವಿಶ್ವದ ವಿನೂತನ ಸಾಂಸ್ಕೃತಿಕ ಹೆಜ್ಜೆಗಲ್ಲಾಗಿ ರೂಪಿಸಿವೆ. ಜಾರ್ಜಿಯಾದ ಇತಿಹಾಸ ಹಲವು ಆಕ್ರಮಣ ಗಳನ್ನು ಕಂಡಿದೆ. ಪರ್ಷಿಯಾ, ಟರ್ಕಿ, ಅರಬ್, ಸೋವಿಯತ್ ಒಕ್ಕೂಟ ಮತ್ತು ನಂತರ ರಷ್ಯಾ.. ಇವೆಲ್ಲ ಜಾರ್ಜಿಯಾ ಮೇಲೆ ಕಾಲಕಾಲಕ್ಕೆ ಆಕ್ರಮಣ ಮಾಡಿದರೂ, ಜಾರ್ಜಿಯಾ ತನ್ನ ಪರಂಪರೆ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡ ಅಪರೂಪದ ರಾಷ್ಟ್ರವಾಗಿದೆ.
ಜಾರ್ಜಿಯನ್ನರು ತಮ್ಮ ಇತಿಹಾಸವನ್ನು ಪುಸ್ತಕಗಳಲ್ಲಿ ಮಾತ್ರ ಅಲ್ಲ, ಜೀವನದ ಪ್ರತಿಯೊಂದು ಹಂತದಲ್ಲೂ ನೆನೆಸಿಕೊಳ್ಳುತ್ತಾರೆ. ಕುಟುಂಬದ ಹಿರಿಯರು ಮಕ್ಕಳಿಗೆ ಇತಿಹಾಸದ ಕಥೆಗಳನ್ನು ಹೇಳುತ್ತಾರೆ, ದೇಗುಲಗಳಲ್ಲಿ ಹಳೆಯ ಶಿಲಾಲೇಖಗಳನ್ನು ಉಳಿಸಿಕೊಂಡಿದ್ದಾರೆ ಮತ್ತು ಹಬ್ಬಗಳಲ್ಲಿ ಪುರಾತನ ಕಲೆಗಳನ್ನು ಜೀವಂತವಾಗಿಟ್ಟಿದ್ದಾರೆ. ಜಾರ್ಜಿಯಾ ದೇಶವು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ ಮೊದಲ ರಾಷ್ಟ್ರಗಳಲ್ಲಿ ಒಂದಾಗಿದೆ.
4ನೇ ಶತಮಾನದಲ್ಲಿ ಕ್ರೈಸ್ತ ಧರ್ಮವನ್ನು ರಾಷ್ಟ್ರೀಯ ಧರ್ಮವಾಗಿ ಅಂಗೀಕರಿಸಿದ ಜಾರ್ಜಿಯಾ, ಇದನ್ನು ತನ್ನ ಜೀವನದ ಭಾಗವಾಗಿ ತೆಗೆದುಕೊಂಡಿದೆ. ಜಾರ್ಜಿಯನ್ ಆರ್ಥಡಾಕ್ಸ್ ಚರ್ಚ್ ಈ ದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ಗುಣಪಾಲುಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಲ್ಲಿನ ಚರ್ಚುಗಳು- ಉದಾಹರಣೆಗೆ, ಸ್ವೇತಿತ್ಸಖೆ, ಮೊಟ್ಸಮೆತಾ, ಜೆಲಾಟಿ ಮುಂತಾದವು- ಶಿಲ್ಪಕಲೆ, ಧಾರ್ಮಿಕ ಭಕ್ತಿ ಮತ್ತು ಇತಿಹಾಸವನ್ನು ಪ್ರತಿಬಿಂಬಿಸುತ್ತವೆ.
ಜಾರ್ಜಿಯಾ ಇಂದಿನ ಜಾಗತೀಕರಣ ಯುಗದಲ್ಲೂ ತನ್ನ ಗುಣಸತ್ವವನ್ನು ಕಳೆದುಹೋಗದಂತೆ ಉಳಿಸಿಕೊಂಡ, ಸದಾ ಉಸಿರಾಡುವ ಒಂದು ಸಂಸ್ಕೃತಿಯ ಜೀವಂತ ಪುಸ್ತಕ. ಜಾರ್ಜಿಯಾ ತನ್ನ ಶಕ್ತಿ ಕೇವಲ ಭೌಗೋಳಿಕವಾಗಿ ಅಲ್ಲ, ಬೌದ್ಧಿಕವಾಗಿ ಹೇಗೆ ವ್ಯಕ್ತವಾಗಬೇಕು ಎಂಬುದನ್ನೂ ಪ್ರಪಂಚಕ್ಕೆ ತೋರಿಸಿದೆ. ಹಲವು ಕವಿಗಳು, ಚಿಂತಕರು, ಸಾಹಿತಿಗಳು ಈ ದೇಶದಲ್ಲಿ ಹುಟ್ಟಿ ಜಗತ್ತಿಗೆ ತಮ್ಮ ಕೊಡುಗೆ ನೀಡಿದ್ದಾರೆ.
ಪ್ರಸಿದ್ಧ ಕವಿ ಶೋತಾ ರುಸ್ತಾವೆಲಿಯ The Knight in the Panther's Skin ಎಂಬ ಮಹಾಕಾವ್ಯ ಜಾರ್ಜಿಯಾದ ಅಂತರಂಗಗೀತೆಯಾಗಿದೆ. ಅಷ್ಟೇ ಅಲ್ಲ, ಶೋತಾ ರುಸ್ತಾವೆಲಿ ಹೆಸರನ್ನು ರಾಜಧಾನಿ ಯಲ್ಲಿರುವ ಟಿಬಿಲಿಸಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡಲಾಗಿದೆ. ಜಾರ್ಜಿಯಾದಲ್ಲಿ ‘ಸುಪರಾ’ ಎಂಬುದು ಆತಿಥ್ಯದ ಪ್ರಮುಖ ಆಚರಣೆ. ಸುಪರಾ ಅಂದರೆ ಒಂದು ವಿಶಿಷ್ಟ ರೀತಿಯ ಭೋಜನ ಕೂಟ. ಇಡೀ ಕುಟುಂಬ, ಸ್ನೇಹಿತರು ಹಾಗೂ ಅತಿಥಿಗಳು ಸೇರಿ ಊಟ ಮಾಡುವ ಸಂಭ್ರಮ.
ಈ ಭೋಜನದ ವೇಳೆಯಲ್ಲಿ ಕೆಲವು ವಿಶಿಷ್ಟ ರೂಢಿಗಳಿರುತ್ತವೆ. ಎಲ್ಲರೂ ಒಂದಾಗಿ ಕುಳಿತು ಭೋಜನ ಮಾಡುವುದು- ಆತ್ಮೀಯತೆ ಮತ್ತು ಮಾನವೀಯತೆಯ ಸಂಕೇತ. ಸುಪರಾ ಒಂದು ಭೋಜನ ಕೂಟವಷ್ಟೇ ಅಲ್ಲ, ಅದು ಜಾರ್ಜಿಯಾದ ಸಂಸ್ಕೃತಿಯ ಬಿಂಬ ಮತ್ತು ಮಾನವೀಯತೆಯ ಪ್ರತಿಬಿಂಬ.
ಹದಿಮೂರು ಸ್ವಾರಸ್ಯಕರ ಸಂಗತಿಗಳು
ಜಾರ್ಜಿಯಾ ಬಗ್ಗೆ ಹೇಳಲು ಹಲವು ಕತೆಗಳಿವೆ, ರೋಚಕ ಸಂಗತಿಗಳಿವೆ. ಆ ಪೈಕಿ ಕೆಲವು..
ಜಾರ್ಜಿಯಾ ವೈನಿನ ಜನ್ಮಸ್ಥಳ. ವೈನ್ ಇಲ್ಲದ ಜಗತ್ತನ್ನು ಊಹಿಸಿಕೊಳ್ಳುವುದು ಕಷ್ಟ. ಅದರ ಸೃಷ್ಟಿಗೆ ಕಾರಣವಾದ ಜಾರ್ಜಿಯಾಕ್ಕೆ ಇಡೀ ಮನುಕುಲ ಉಪಕೃತವಾಗಿರಬೇಕಂತೆ. ಅವರು ಕನಿಷ್ಠ 8000 ವರ್ಷಗಳಿಂದ ಈ ಅದ್ಭುತ ಪಾನೀಯವನ್ನು ತಯಾರಿಸುತ್ತಿದ್ದಾರೆ ಮತ್ತು ಕಾಲಕಾಲಕ್ಕೆ ಅದನ್ನು ಪರಿಪೂರ್ಣಗೊಳಿಸುವುದರಲ್ಲಿ ನಿರತರಾಗಿದ್ದಾರೆ. ಕ್ವೆವ್ರಿ ಎಂಬ ಮಣ್ಣಿನ ಜಾಡಿಯನ್ನು ಒಳಗೊಂಡಿ ರುವ, ವೈನ್ ತಯಾರಿಕೆಗೆ ಅವರು ಬಳಸುವ ತಂತ್ರವನ್ನು ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಮಾನವೀಯತೆಯ ಪಟ್ಟಿಯಲ್ಲಿ ಸೇರಿಸಲಾಗಿದೆ.
ಜಾರ್ಜಿಯಾ ಮೊದಲ ಯುರೋಪಿಯನ್ನರಿಗೆ ನೆಲೆಯಾಗಿತ್ತು. ಕಾಕಸಸ್‌ನ ಅತ್ಯಂತ ಹಳೆಯ ಮಾನವ ತಲೆಬುರುಡೆಗಳು, 1.8 ದಶಲಕ್ಷ ವರ್ಷಗಳ ಹಳೆಯ ಜೆಜ್ವಾ ಮತ್ತು ಮ್ಜಿಯಾ ದಂಪತಿಗಳಿಗೆ ಸೇರಿದವು. ಅವು ಡ್ಮಾನಿಸಿಯಲ್ಲಿ ಪುರಾತತ್ತ್ವ ಶಾಸ್ತ್ರದ ಉತ್ಖನನದ ಸಮಯದಲ್ಲಿ ಪತ್ತೆಯಾಗಿವೆ. ಅವುಗಳನ್ನು ಆಫ್ರಿಕನ್ ಮತ್ತು ಯುರೋಪಿಯನ್ ಪೂರ್ವಜರ ನಡುವಿನ ಪ್ರಮುಖ ಕೊಂಡಿಯಾಗಿ ನೋಡಲಾಗುತ್ತದೆ.
ಜಾರ್ಜಿಯಾದಲ್ಲಿ 12 ವಿಭಿನ್ನ ಹವಾಮಾನ ವಲಯಗಳಿವೆ. ಉಷ್ಣವಲಯದಿಂದ ಅರೆ ಮರುಭೂಮಿಯವರೆಗೆ ಮತ್ತು ಆಲ್ಪೆ ನ್‌ನವರೆಗೆ ಹವಾಮಾನವನ್ನು ಹೊಂದಿರುವ ಜಾರ್ಜಿಯಾ, ಭೂಮಿಯ ಮೇಲಿನ ಅತ್ಯಂತ ಪರಿಸರ ವೈವಿಧ್ಯಮಯ ದೇಶಗಳಲ್ಲಿ ಒಂದಾಗಿದೆ.
ವಿಶ್ವದ ಅತ್ಯಂತ ಆಳವಾದ ಗುಹೆ ಜಾರ್ಜಿಯಾದಲ್ಲಿದೆ. ನೀವು ಗುಹೆಗಳಲ್ಲಿ ಆಸಕ್ತಿ ಹೊಂದಿದ್ದರೆ, ಪಶ್ಚಿಮ ಕಾಕಸಸ್ ಪ್ರದೇಶದ ಗಾಗ್ರಾ ಪರ್ವತ ಶ್ರೇಣಿಯ ನಡುವೆ ಅಡಗಿರುವ ವೆರಿಯೋವ್ಕಿನಾ ಗುಹೆಯನ್ನು ಇಷ್ಟಪಡುತ್ತೀರಿ. ಈ ಗುಹೆ 2212 ಮೀಟರ್ ಆಳವಾಗಿದ್ದು, ಭೂಮಿಯ ಮೇಲಿನ ಅತ್ಯಂತ ಆಳವಾದ ಗುಹೆಯಾಗಿದೆ!
ಕಾಕಸಸ್ ಯುರೋಪಿನ ಅತಿ ಎತ್ತರದ ಪರ್ವತ ಶ್ರೇಣಿಯಾಗಿದೆ. ಹೆಚ್ಚಿನ ಜನರು ಆಲ್ಪ್ಸ್ ಯುರೋ ಪಿನ ಅತಿ ಎತ್ತರದ ಪರ್ವತ ಶ್ರೇಣಿ ಎಂದು ಭಾವಿಸಿzರೆ. ಆದರೆ ಅದು ನಿಜವಲ್ಲ! ಜಾರ್ಜಿಯಾ ಮತ್ತು ರಷ್ಯಾದ ನಡುವಿನ ಗಡಿಯಲ್ಲಿ ವ್ಯಾಪಿಸಿರುವ ಕಾಕಸಸ್ ಪರ್ವತಗಳು ವಾಸ್ತವ ವಾಗಿ ಹೆಚ್ಚು ಎತ್ತರವಾಗಿವೆ. ಅತಿ ಎತ್ತರದ ಶಿಖರ ರಷ್ಯಾದಲ್ಲಿದೆ, ಆದರೆ ಜಾರ್ಜಿಯಾದ ಅತಿ ಎತ್ತರದ ಪರ್ವತ ವಾದ 5193 ಮೀಟರ್ ಎತ್ತರವಿರುವ ಶಖರಾ ಇನ್ನೂ ಫ್ರಾನ್ಸ್‌ನ ಮಾಂಟ್ ಬ್ಲಾಂಕ್ ಗಿಂತ ಸುಮಾರು 400 ಮೀಟರ್ ಎತ್ತರವಾಗಿದೆ.
ನೀವು ಇಲ್ಲಿ ಯುರೋಪಿನ ಅತಿ ಎತ್ತರದ ವಸಾಹತು ಪ್ರದೇಶದಲ್ಲಿ ವಾಸಿಸಬಹುದು. ಸ್ವಾನೆಟಿ ಪರ್ವತ ಪ್ರದೇಶದಲ್ಲಿ ನೆಲೆಗೊಂಡಿರುವ ಉಷ್ಗುಲಿಯನ್ನು ರೂಪಿಸುವ ಪ್ರಾಚೀನ ಹಳ್ಳಿಗಳು ಯುರೋಪಿನ ಅತಿ ಎತ್ತರದ ವಸಾಹತುಗಳಾಗಿವೆ, ಇವು ಸಮುದ್ರ ಮಟ್ಟದಿಂದ 2100 ಮೀಟರ್ ಎತ್ತರದಲ್ಲಿವೆ. ಬೆರಗುಗೊಳಿಸುವ ಭೂದೃಶ್ಯಗಳನ್ನು ನೋಡಿದರೆ, ಅವರು ಇಲ್ಲಿ ನೆಲೆಸಲು ಏಕೆ ನಿರ್ಧರಿಸಿದರು ಎಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
ಜಾರ್ಜಿಯಾ ತನ್ನದೇ ಆದ ವಿಶಿಷ್ಟ ಭಾಷೆಯನ್ನು ಹೊಂದಿದೆ. ಜಾರ್ಜಿಯನ್ ಭಾಷೆಯು ಗ್ರೀಕ್ ಮತ್ತು ಇರಾನಿನ ಭಾಷೆಗಳಿಂದ ವಿಶಿಷ್ಟ ಪ್ರಭಾವವನ್ನು ಹೊಂದಿದ್ದು, ಇದು ತನ್ನದೇ ಆದ ವರ್ಣ ಮಾಲೆ ಹೊಂದಿದೆ. ಇತಿಹಾಸದುದ್ದಕ್ಕೂ ಭಾಷೆಯ 3 ವಿಭಿನ್ನ ಪುನರಾವರ್ತನೆಗಳು ನಡೆದಿದ್ದು, ಇಂದು ಬಳಸಲಾಗುವ ಭಾಷೆಯಲ್ಲಿ 33 ಅಕ್ಷರಗಳಿವೆ. ಇದಲ್ಲದೇ, ಜಾರ್ಜಿಯನ್ ಭಾಷೆಯು ಲಿಂಗ ಅಥವಾ ಕ್ಯಾಪಿಟಲ್ ಅಕ್ಷರಗಳನ್ನು ಬಳಸುವುದಿಲ್ಲ. ಅದರ ದೀರ್ಘ ಇತಿಹಾಸ ದಲ್ಲಿ ಭಾಷೆ ಹೆಚ್ಚು ಬದಲಾಗಿಲ್ಲ. ಅದಕ್ಕಾಗಿಯೇ ಶಾಲೆಯಲ್ಲಿ ಮಕ್ಕಳು 15ನೇ ಶತಮಾನದ ಪಠ್ಯವನ್ನು ಸುಲಭವಾಗಿ ಓದುತ್ತಾರೆ. ಏಕೆಂದರೆ ಅವರಿಗೆ ಹಳೆಯ ಪದಗಳನ್ನು ಅರ್ಥಮಾಡಿ ಕೊಳ್ಳುವಲ್ಲಿ ಯಾವುದೇ ಸಮಸ್ಯೆ ಇಲ್ಲ.
ಜಾರ್ಜಿಯಾ ಜೋಸೆಫ್ ಸ್ಟಾಲಿನ್ ಜನಿಸಿದ ದೇಶ. 1878 ಸಮಯದಲ್ಲಿ ರಷ್ಯಾದ ಸಾಮ್ರಾಜ್ಯದ ಭಾಗವಾಗಿತ್ತು. ಈಗ ಗೋರಿಯಲ್ಲಿ ಸ್ಟಾಲಿನ್‌ಗೆ ಮೀಸಲಾಗಿರುವ ವಸ್ತು ಸಂಗ್ರಹಾಲಯವಿದೆ, ಅದು ಆತನ ಜೀವನವನ್ನು ಸಂಪೂರ್ಣವಾಗಿ ಪರಿಚಯಿಸುತ್ತದೆ.
ಜಾರ್ಜಿಯನ್ನರು ತಮ್ಮ ದೇಶಕ್ಕೆ ಬೇರೆ ಹೆಸರನ್ನು ಹೊಂದಿದ್ದಾರೆ. ಸ್ಥಳೀಯರು ಇದನ್ನು ಸಕಾ ರ್ಟ್ವೆಲೊ ಎಂದು ಕರೆಯುತ್ತಾರೆ ಮತ್ತು ತಮ್ಮನ್ನು ಕಾರ್ಟ್ವೆಲಿ ಎಂದು ಕರೆದುಕೊಳ್ಳುತ್ತಾರೆ, ಇದು ಬಹುಶಃ ಜಾರ್ಜಿಯಾದ ಮಧ್ಯ ಪ್ರದೇಶವಾದ ಕಾರ್ಟ್ಲಿಯಿಂದ ಬಂದಿದೆ. ಜಾರ್ಜಿಯಾ ಎಂಬ ಹೆಸರು ಎಲ್ಲಿಂದ ಬಂದಿದೆ ಎಂಬುದರ ಕುರಿತು ಕೆಲವು ಚರ್ಚೆಗಳಿವೆ. ಅದು ಈ ದೇಶದ ಪೋಷಕ ಸಂತ ಸೇಂಟ್ ಜಾರ್ಜ್‌ನಿಂದ ಬಂದಿದೆಯೇ ಅಥವಾ ಕೃಷಿ ಬುಡಕಟ್ಟುಗಳಿಗೆ ಗ್ರೀಕ್ ಹೆಸರಾದ ಜಾರ್ಜಿ ಯಿಂದ ಬಂದಿದೆಯೇ ಅಥವಾ ತೋಳಗಳ ಭೂಮಿ ಎಂದರ್ಥವಿರುವ ಪರ್ಷಿಯನ್-ಅರೇಬಿಕ್ ಪದ ಗುರ್ಗ್‌ನಿಂದ ಬಂದಿದೆಯೇ ಎಂಬುದು ಇನ್ನೂ ಚರ್ಚಾಸ್ಪದ.
ಜಾರ್ಜಿಯಾ ಭೇಟಿ ನೀಡಲು ಅತ್ಯಂತ ಸುರಕ್ಷಿತ ದೇಶ. 2017ರಲ್ಲಿ ವಿಶ್ವದಲ್ಲಿ ಭೇಟಿ ನೀಡಲು 7ನೇ ಸುರಕ್ಷಿತ ದೇಶವೆಂದು ರೇಟಿಂಗ್ ಪಡೆದಿತ್ತು. ಆದರೆ ರಷ್ಯಾದ ಗಡಿಯುದ್ದಕ್ಕೂ ಕೆಲವು ಪ್ರದೇಶ ಗಳಿಂದ ದೂರವಿರುವುದು ಕ್ಷೇಮ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ.
ಜಾರ್ಜಿಯಾ ಅತ್ಯಂತ ಹಳೆಯ ಕ್ರಿಶ್ಚಿಯನ್ ದೇಶಗಳಲ್ಲಿ ಒಂದಾಗಿದೆ. ನಾಲ್ಕನೇ ಶತಮಾನದ ಆರಂಭದಲ್ಲಿ ಕ್ರಿಶ್ಚಿಯನ್ ಧರ್ಮವನ್ನು ತನ್ನ ರಾಜ್ಯಧರ್ಮವಾಗಿ ಅಳವಡಿಸಿಕೊಂಡಿದೆ. ಜಾರ್ಜಿ ಯನ್ ಆರ್ಥೊಡಾಕ್ಸ್ ಚರ್ಚ್ ರಾಷ್ಟ್ರದ ಇತಿಹಾಸ ಮತ್ತು ಸಾಂಸ್ಕೃತಿಕ ಗುರುತಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸ್ವೆಟಿಟ್ಸ್ಖೋವೆಲಿ ಕ್ಯಾಥೆಡ್ರಲ್ ಮತ್ತು ಜ್ವಾರಿ ಮೊನಾಸ್ಟರಿ ಸೇರಿದಂತೆ ಅನೇಕ ಪ್ರಾಚೀನ ಚರ್ಚುಗಳು ಮತ್ತು ಧರ್ಮಶಾಲೆಗಳು ಜಾರ್ಜಿಯಾದಲ್ಲಿವೆ.
ಜಾರ್ಜಿಯಾ ವಿಶ್ವದ ಅತ್ಯಂತ ಹಳೆಯ ಯಹೂದಿ ಸಮುದಾಯಗಳಲ್ಲಿ ಒಂದನ್ನು ಹೊಂದಿದ್ದು, 2600 ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿದೆ. ಜಾರ್ಜಿಯಾದ ಯಹೂದಿ ಸಮುದಾಯವು ದೇಶದ ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಆ ಸಂಪ್ರದಾಯಗಳನ್ನು ಕಾಪಾಡಿಕೊಳ್ಳುವ ಮೂಲಕ ಜಾರ್ಜಿಯಾದ ವೈವಿಧ್ಯಮಯ ಸಾಂಸ್ಕೃತಿಕ ಆಯಾಮಕ್ಕೆ ತನ್ನದೇ ಕೊಡುಗೆ ನೀಡಿದೆ.
ಜಾರ್ಜಿಯನ್ ಪಾಲಿಫೋನಿಕ್ ಗಾಯನವು ಅದರ ಸಂಕೀರ್ಣ ಸಾಮರಸ್ಯ ಮತ್ತು ಶ್ರೀಮಂತ ಗಾಯನ ರಚನೆಗಳಿಂದ ಪ್ರಸಿದ್ಧವಾಗಿದೆ. ಇದು ದೇಶದ ಸಾಂಸ್ಕೃತಿಕ ಪರಂಪರೆಯ ವಿಶಿಷ್ಟ ಮತ್ತು ಅವಿಭಾಜ್ಯ ಅಂಗವೂ ಹೌದು. ಯುನೆಸ್ಕೋದಿಂದ ಅಮೂರ್ತ ಸಾಂಸ್ಕೃತಿಕ ಪರಂಪರೆಯೆಂದು ಪರಿಗಣಿತವಾಗಿರುವ ಈ ಪ್ರಾಚೀನ ಸಂಪ್ರದಾಯವನ್ನು ವಿವಿಧ ಪ್ರಾದೇಶಿಕ ಶೈಲಿಗಳಲ್ಲಿ ಪ್ರದರ್ಶಿಸ ಲಾಗುತ್ತದೆ. ಇದು ಜಾರ್ಜಿಯನ್ ಆಚರಣೆಗಳು ಮತ್ತು ಧಾರ್ಮಿಕ ಸಮಾರಂಭಗಳ ಅತ್ಯಗತ್ಯ ಅಂಶವಾಗಿದೆ.