ತುಂಟರಗಾಳಿ
ಸಿನಿಗನ್ನಡ
ಇಂದಿನ ಕೆಲವು ರಿಮೇಕ್ ಚಿತ್ರಗಳ ನಿರ್ದೇಶಕರು ಪಾಪ, ತಮಗೆ ಬೆಲೆ ಸಿಗುತ್ತಿಲ್ಲ ಅಂತ ಸಾಕಷ್ಟು ಬಾರಿ ಅಳಲು ತೋಡಿಕೊಳ್ಳುತ್ತಾರೆ. “ನಾನು 4 ಚಿತ್ರಗಳನ್ನು ಕೊಟ್ಟಿದ್ದರೂ ಜನ ನನ್ನನ್ನು ಗುರುತಿಸು ವುದೇ ಇಲ್ಲ. ಒಂದು ಸಿನಿಮಾ ಮಾಡಿದವರಿಗೆ ಬೆಲೆ ಕೊಡುವ ಜನ ನನಗೆ ಯಾಕೆ ಅದೇ ಬೆಲೆ ಕೊಡಲ್ಲ. ಜತೆಗೆ ನನ್ನನ್ನು ರಿಮೇಕ್ ಚಿತ್ರಗಳ ನಿರ್ದೇಶಕ ಎಂದೇ ಹೇಳುತ್ತಾರೆ. ಅದು ಬದಲಾಗ ಬೇಕು" ಎಂದು ಡಿಮ್ಯಾಂಡ್ ಮಾಡುತ್ತಾರೆ.
ರಿಮೇಕ್ ನಿರ್ದೇಶಕ ಎಂಬ ಪಟ್ಟದ ಬಗ್ಗೆ ಮಾತನಾಡುವುದಾದರೆ ಅದು ಸಹಜ. ಅವರು ಮಾಡಿರುವ ಎಲ್ಲಾ ಚಿತ್ರಗಳೂ ಬಹುತೇಕ ರಿಮೇಕ್. ಹಾಗಾಗಿ ಒಬ್ಬ ರಿಮೇಕ್ ನಿರ್ದೇಶಕನಿಗೆ ಸಿಗು ವಷ್ಟು ಮರ್ಯಾದೆ ಮಾತ್ರ ಅವರಿಗೆ ಸಿಗುತ್ತಿದೆ. ಅದರಲ್ಲಿ ತಪ್ಪೇನಿಲ್ಲ. ಆದರೆ ಇದರ ಬಗ್ಗೆ ಈ ನಿರ್ದೇಶಕರಿಗೆ ಅಸಮಾಧಾನ.
‘ನನ್ನ ಟ್ಯಾಲೆಂಟ್‌ಗೆ ಬೆಲೆ ಇಲ್ಲ’ ಅಂತ ಬೇಜಾರು. ಇಂಥವರಿಗೆ ನೆನಪಿದ್ದರೆ ನಿರ್ದೇಶಕ ಕೆ.ಮಾದೇಶ್ ಅನೇಕ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಆದರೆ ಅವೆಲ್ಲವೂ ರಿಮೇಕ್‌ಗಳೇ. ಅವೆಲ್ಲವೂ ಸಾಕಷ್ಟು ಹಣ ಮಾಡಿದರೂ, ಅವರು ಎಂದೂ ಗ್ರೇಟ್ ನಿರ್ದೇಶಕ ಎನಿಸಿಕೊಳ್ಳಲಿಲ್ಲ ಮತ್ತು ಇವತ್ತು ಮಾದೇಶ್ ಅವರನ್ನು ಚಿತ್ರರಂಗ ಹೆಚ್ಚು ಕಮ್ಮಿ ಮರೆತೇ ಬಿಟ್ಟಿದೆ.
ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರು ಅಂದಾಕ್ಷಣ ಕೆ.ಮಾದೇಶ್ ಖಂಡಿತಾ ಬಹುತೇಕರಿಗೆ ನೆನಪಾಗುವುದಿಲ್ಲ. ಅಷ್ಟೇ ಯಾಕೆ, ಹಿರಿಯ ನಿರ್ದೇಶಕರಾಗಿದ್ದ ಡಿ.ರಾಜೇಂದ್ರ ಬಾಬು ಎಷ್ಟೋ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟವರು. ಸ್ವಂತ ಕಥೆಗಳನ್ನು ಮಾಡಿಯೂ ಸಕ್ಸಸ್ ನೋಡಿದವರು. ಆದರೆ ಅವರು ರಿಮೇಕ್ ಮಾಡುತ್ತಿದ್ದುದು ಹೆಚ್ಚು ಎನ್ನುವ ಕಾರಣಕ್ಕೆ ಅವರಿಗೆ ಸಲ್ಲಬೇಕಾದ ಬೆಲೆ ಸಿಗಲಿಲ್ಲ.
ಇದನ್ನೂ ಓದಿ: Hari Paraak Column: ಬೀದಿನಾಯಿಗಳು: ನಮ್ಮ ವಿರುದ್ಧ ʼಶೆಡ್-ಯಂತ್ರʼ ನಡೀತಿದೆ
ಅವರೇ ಒಮ್ಮೆ, “ಜನ ನನ್ನನ್ನು ಸಿಂಗ್ ಬಾಬು ಜತೆ ಕನ್ ಫ್ಯೂಸ್ ಮಾಡಿಕೊಳ್ಳುತ್ತಾರೆ, ನನಗೊಂದು ಐಡೆಂಟಿಟಿನೇ ಇಲ್ಲ’ ಎಂದು ಬೇಸರಿಸಿಕೊಂಡಿದ್ದರು. ಇದರ ಮುಂದೆ ಇಂದಿನ ನಿರ್ದೇಶಕರ ಕೊರಗು ಏನೂ ಅಲ್ಲ. ಈ ಹೊಸ ನಿರ್ದೇಶಕರು ಸಾಧಿಸಬೇಕಾಗಿದ್ದು ಇನ್ನೂ ಬಹಳ ಇದೆ. ಅದನ್ನು ತಮ್ಮ ಸ್ವಂತ ಕಥೆಗಳ ಮೂಲಕ ಸಾಧಿಸಿ ಆಮೇಲೆ ಕ್ರೆಡಿಟ್ ಕೊಡ್ತಿಲ್ಲ ಅಂತ ಮಾತಾಡಿದರೆ ಅದಕ್ಕೆ ಬೆಲೆ ಇರುತ್ತೆ.
ಲೂಸ್ ಟಾಕ್ - ಪುಡಿ ರೌಡಿ
ಏನು ರೌಡಿ ಸಾಹೇಬ್ರೇ, ಬರ್ತ್‌ಡೇ ಭಾರಿ ಜೋರಾಗಿ ಸೆಲೆಬ್ರೇಟ್ ಮಾಡ್ಕೊತಾ ಇದ್ದೀರಾ?
- ಹೌದೌದು, ಅದರ ಜತೆಗೆ, ಇನ್ಮೇಲೆ ನನ್ನ ಹುಟ್ಟುಹಬ್ಬನ ‘ವೈಲೆಂಟೈ ಡೇ’ ಅಂತ ಸೆಲೆಬ್ರೇಟ್ ಮಾಡ್ಬೇಕು ಅಂತ ಮುಖ್ಯಮಂತ್ರಿಗಳಿಗೆ ಮನವಿ ಕೊಟ್ಟವ್ರೆ ನಮ್ಮುಡುಗ್ರು
ರೀ, ಈ ರೌಡಿಸಂನ ನೀವೇನ್ ಸರಕಾರಿ ನೌಕರಿ ಅಂದ್ಕೊಂಡಿದ್ದೀರಾ. ಇಷ್ಟೊಂದ್ ವೈಲೆಂಟ್ ಆಗಿದ್ರೆ, ಯಾವಾಗ ಪೊಲೀಸ್ನೋರು ನಿಮಗೆ ಲೈಫಿಂದಲೇ ವಾಲೆಂಟರಿ ರಿಟೈರ್‌ಮೆಂಟ್ ಕೊಡ್ತಾರೋ ಗೊತ್ತಾಗಲ್ಲ.
- ಅಯ್ಯೋ, ಅವರಿಗೆ ವಾರೆಂಟ್ ಇಲ್ದೆ ನಮ್ಮನ್ನ ಅರೆ ಮಾಡೋಕೇ ಆಗಲ್ಲ, ನೀವ್ ಹೇಳ್ದಂಗೆ ನಮ್ಗೆ ಅಷ್ಟು ಸುಲಭವಾಗಿ ‘ರೆಸ್ಟ್ ಇನ್ ಪೀಸ್’ ಎಲ್ಲ ಹೇಳೋಕಾಗಲ್ಲ, ಅರೆ ಮಾಡಿ ಜೈಲಿಗ್ ಹಾಕಿದ್ರೂ, ಒಳಗೂ ಆರಾಮಾಗಿ ರೆಸ್ಟ್ ತಗೋತೀವಿ.
ಅದಿರ‍್ಲಿ, ನಿಯತ್ತಾಗಿ ಬದುಕೋಕೆ ಏನ್ ಕಷ್ಟ ನಿಮಗೆ?
- ಹಲೋ, ಯಾಕ್ರೀ, ನಿಯತ್ತಾಗಿ ಬದುಕೋಕೆ, ನಾವೇನ್ ನಿಮ್ ಕಣ್ಣಿಗೆ ನಾಯಿಗಳ ಥರ ಕಾಣ್ತೀದೀವಾ?
ಥೋ, ಹಂಗಲ್ಲ, ಈ ರೌಡಿಸಂ ಮಾಡೋದೇನ್ ದೊಡ್ಡ ಕೆಲಸ ಅಂದ್ಕೊಂಡಿದ್ದೀರಾ ಅಂತ ಕೇಳಿದ್ದು?
- ಮತ್ತೆ, ಇನ್ನೇನು, ಈ ಕೆಲ್ಸ ಮಾಡೋಕೂ ‘ಚಾಕು’ಚಕ್ಯತೆ ಇರಬೇಕು ಗೊತ್ತಾ...
ಅಲ್ಲ ಕಣಪ್ಪಾ, ಎಲ್ಲರ ಹತ್ರ ಉಗಿಸ್ಕೊಂಡು ಬಾಳೋ ಈ ಥರ ಬಾಳು ಬೇಕಾ ನಿಮಗೆ?
- ಹಲೋ, ಯಾಕ್ರೀ, ನಾವೂ ಈ ಸಮಾಜದಲ್ಲಿ ‘ತಲೆ ಎತ್ಕೊಂಡೇ ಬದುಕ್ತಾ ಇರೋದು’ ಗೊತ್ತಾ ?
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಮತ್ತು ಖೇಮುಶ್ರೀ ಮದುವೆ ಆಗಿ 30 ವರ್ಷಗಳಾಗಿದ್ದವು. ಮಗ ಮತ್ತು ಮಗಳಿಗೆ ವಿದೇಶದಲ್ಲಿ ಕೆಲಸ ಸಿಕ್ಕಿದ್ದರಿಂದ ಅಲ್ಲಿಯೇ ವಾಸವಾಗಿದ್ದರು. ಒಮ್ಮೆ ಖೇಮು ಮಗನಿಗೆ ಕಾಲ್ ಮಾಡಿದ. ಮಗ ಕಾಲ್ ರಿಸೀವ್ ಮಾಡುತ್ತಿದ್ದಂತೆ, “ನೋಡಪ್ಪಾ, ಈ ವಿಷಯ ಹೇಳೋಕೆ ನನಗೆ ಕಷ್ಟ ಆಗ್ತಿದೆ, ನಿಂಗೂ ಬೇಜಾರಾಗಬಹುದು. ಬೆಳಗ್ಗೆ ಬೆಳಗ್ಗೆ ನಿನ್ನ ಮೂಡು ಹಾಳುಮಾಡುತ್ತಿರೋದಕ್ಕೆ ಸಾರಿ; ಆದರೆ ನಿನ ಗೊಂದು ವಿಷಯ ಹೇಳಲೇಬೇಕಿದೆ. ನಾನು ನಿಮ್ಮಮ್ಮನಿಗೆ ಡಿವೋರ್ಸ್ ಕೊಡ್ತಿದ್ದೀನಿ.
40 ವರ್ಷ ಅವಳನ್ನು ಸಹಿಸಿಕೊಂಡಿದ್ದು ಸಾಕಾಗಿದೆ" ಅಂದ. ಮಗನಿಗೆ ಆಶ್ಚರ್ಯ. “ಇ ದಿನ ಚೆನ್ನಾಗೇ ಇದ್ರಲ್ಲ, ಏನಾಯ್ತು?" ಅಂತ ಕೇಳಿದ. ಅದಕ್ಕೆ ಖೇಮು, “ನನಗೆ ನಿಮ್ಮಮ್ಮನ ಮುಖ ನೋಡಿದ್ರೆ ಆಗ್ತಾ ಇಲ್ಲ. ಅದ್ ಬಿಡು, ಈಗ ಅದನ್ನೆ ಮಾತಾಡೋಕೆ ನನಗೆ ಮೂಡಿಲ್ಲ, ನಾನು ನಾಳೆನೇ ಡಿವೋರ್ಸ್‌ಗೆ ಅಪ್ಲೈ ಮಾಡ್ತೀನಿ. ಅದನ್ನ ಮತ್ತೆ ನಿನ್ನ ತಂಗಿಗೆ ಹೇಳುವಷ್ಟು ಪೇಶ ನಂಗಿಲ್ಲ. ನೀನೇ ಅವಳಿಗೆ ಕಾಲ್ ಮಾಡಿ ಹೇಳು" ಅಂತ -ನಿಟ್ಟ. ಖೇಮು ಮಗ ತಕ್ಷಣ ತನ್ನ ತಂಗಿಗೆ ಕಾಲ್ ಮಾಡಿ “ಅಪ್ಪ, ಅಮ್ಮನಿಗೆ ಡಿವೋರ್ಸ್ ಕೊಡ್ತಾ ಇzರೆ. ನಾಳೆನೇ ಡಿವೋರ್ಸ್ ಫೈಲ್ ಮಾಡ್ತಿದ್ದಾರೆ" ಅಂದ. ಖೇಮು ಮಗಳಿಗೆ ಸಿಟ್ಟು ಬಂತು.
“ಅದೆಂಗಾಗುತ್ತೆ, ನಾನು ಅವರತ್ರ ಮಾತಾಡ್ತೀನಿ, ನೀನೂ ನನ್ನ ಜತೆ ಬಾ, ಯಾವುದೇ ಕಾರಣಕ್ಕೂ ನಾನು ಅಪ್ಪ ಡಿವೋರ್ಸ್ ಕೊಡೋಕೆ ಬಿಡಲ್ಲ" ಅಂತ ಹೇಳಿ ಮರುಕ್ಷಣವೇ ಅಪ್ಪನಿಗೆ ಫೋನ್ ಮಾಡಿ, “ನೋಡಪ್ಪಾ, ಈ ವಯಸ್ಸಲ್ಲಿ ಸುಮ್ನೆ ಹೆಂಗೆಂಗೋ ಆಡಬೇಡ. ನೀನು ನಮ್ಮ ಜತೆ ಮಾತಾಡದೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳೋಹಾಗಿಲ್ಲ,
ನಾವು ನಾಳೆನೇ ಇಂಡಿಯಾಗೆ ಬರ್ತಾ ಇದ್ದೀವಿ, ಅ ಕುಳಿತು ಮಾತಾಡೋಣ, ಅಷ್ಟೇ" ಅಂತ ಹೇಳಿ ಫೋನಿಟ್ಟಳು. ಈ ಕಡೆ ಕಾಲ್ ಕಟ್ ಮಾಡಿದ ಖೇಮು, ಖೇಮುಶ್ರೀ ಕಡೆ ತಿರುಗಿ ಹೇಳಿದ, “ಲೇ, ದಸರಾ ಹಬ್ಬಕ್ಕೇನೋ ವ್ಯವಸ್ಥೆ ಆಯ್ತು, ದೀಪಾವಳಿಗೆ ಏನ್ ಸುಳ್ ಹೇಳೋದು?".
ಲೈನ್ ಮ್ಯಾನ್
ಮನುಷ್ಯನ ದೇಹದಲ್ಲಿ ಕೋಪ ಹುಟ್ಟಿಸುವ ಅಂಗ
- ‘ಪಿತ್ತ’ ಜನಕಾಂಗ
ಕನ್ನಡಿಗರ ವಿಶಾಲ ಹೃದಯದ ಬಗೆಗಿನ ಮಾತು
- ಈ ಪ್ರಪಂಚ ‘ಕನ್ನಡಿ’ಗರಿದ್ದಂತೆ. ನೀವು ಅವರನ್ನ ಬೇರೆ ಭಾಷೆಯಲ್ಲಿ ಮಾತಾಡಿಸಿದ್ರೆ ಅವರೂ ಅದೇ ಭಾಷೆಯಲ್ಲಿ ಮಾತಾಡ್ತಾರೆ.
ಎಡಗಣ್ಣು ಹೊಡಕೊಂಡ್ರೆ ಏನ್ ಮಾಡಬೇಕು?
- ಮೊನ್ನೆ ಬಲಗಣ್ಣು ಹೊಡಕೊಂಡಾಗ ಯಾವ್ ಸೀಮೆಗಿಲ್ಲದ ಒಳ್ಳೇದೂ ಆಗಿರಲಿಲ್ಲ ಬಿಡು ಅಂತ ಸಮಾಧಾನ ಮಾಡ್ಕೋಬೇಕು.
-ಫುಡ್ ಮಾರುವ ಫುಟ್‌ಪಾತ್
- ‘ಫುಡ್’ ಪಾತ್
ನಿರ್ಮಾಪಕರ ಹತ್ರ ದುಡ್ಡು ಕಮ್ಮಿ ಇದ್ದಾಗ ಹೇಳೋ ಮಾತು
- ಚಿತ್ರೀಕರಣ ‘ಬರ’ದಿಂದ ಸಾಗುತ್ತಿದೆ
ಅಡುಗೆ ಭಟ್ರನ್ನ ಕನ್ ಫ್ಯೂಸ್ ಮಾಡೋದು ಹೇಗೆ?
-ಕಾಫಿ ಮಾಡುವಾಗ ಒಂದ್ ಟೀ ಸ್ಪೂನ್ ಕಾಫಿಪುಡಿ ಹಾಕಿ ಅಂತ ಹೇಳ್ಬೇಕು