ಹಿಂದಿರುಗಿ ನೋಡಿದಾಗ
ಪ್ರಾಚೀನ ಈಜಿಪ್ಷಿಯನ್ನರಿಗೆ ಅಪಸ್ಮಾರದ ಪರಿಚಯವಿತ್ತು. ಕ್ರಿ.ಪೂ.1700ರ ಕಾಲದ ‘ಸರ್ಜಿಕಲ್ ಪ್ಯಾಪಿರಸ್’ ಎಂಬ ವೈದ್ಯಕೀಯ ಗ್ರಂಥದಲ್ಲಿ, ತಲೆಯಲ್ಲಿ ಬಾಯಿ ಬಿಟ್ಟುಕೊಂಡಿ ರುವ ಗಾಯದ ವಿವರಣೆಯಿದೆ. ಈ ಗಾಯದ ಮೂಲಕ ಮಿದುಳು ಕಾಣುತ್ತಿತ್ತು, ಅದನ್ನು ಬೆರಳಿನಿಂದ ಮುಟ್ಟಿದಾಗ, ಸೆಳವು ಕಂಡುಬಂದಿತು ಎಂಬ ಉಲ್ಲೇಖವಿದೆ.
ಜೂಲಿಯಸ್ ಸೀಸರ್, ನೆಪೋಲಿಯನ್ ಬೊನಾಪಾರ್ಟೆ, ಕ್ಯಾಲಿಗುಲ, ಫ್ಯೋದೋರ್ ದಸ್ತೋವ್‌ಸ್ಕಿ, ಲೆವಿಸ್ ಕೆರೋಲ್, ಲಾರ್ಡ್ ಬೈರನ್, ಜೊನಾಥನ್ ಸ್ವಿಫ್ಟ್, ವಿನ್ಸೆಂಟ್ ವ್ಯಾನ್ ಗಾಗ್, ಜಾನ್ ಎಲ್ಟನ್, ಪೈಥಾಗೊರಾಸ್, ಆಲ್ ಫ್ರೆಡ್ ನೊಬೆಲ್, ಓಪನ್‌ಹೀಮರ್, ಥಿಯೋಡರ್ ರೂಸ್‌ವೆಲ್ಟ್, ಲೆನಿನ್, ಪಂಡಿತ್ ರವಿಶಂಕರ್, ಪೂಜಾ ಬೇಡಿ ಮುಂತಾದ ಪ್ರತಿಭಾವಂತರ ನಡುವೆ ಇರುವ ಸರ್ವೇ ಸಾಮಾನ್ಯ ಅಂಶ ಯಾವುದು ಎಂದರೆ, ಅದು ಅಪಸ್ಮಾರ (ಎಪಿಲೆಪ್ಸಿ).
ಬ್ಯಾಬಿಲೋನಿಯನ್ನರು ಮಿಕ್ತು, ಬೆನ್ನು ಎಂದೂ, ಗ್ರೀಕರು ಮಾರ್ಬಸ್ ಸೇಕರ್, ಎಪಿಲೆಪ್ಸಿಯ ಎಂದೂ, ರೋಮನ್ನರು ಮಾರ್ಬಸ್ ಕೊಮಿಟಾಲಿಸ್ ಎಂದೂ, ಮಧ್ಯಯುಗದ ಯುರೋಪಿಯನ್ನರು ಫಾಲಿಂಗ್ ಸಿಕ್ನೆಸ್ ಎಂದೂ, ಚೀನಿಯರು ಡಿಯಾನ್ ಷಿಯಾನ್ ಎಂದೂ ಇದನ್ನು ಕರೆದ ಉದಾಹರಣೆಗಳಿವೆ.
ಸಂಸ್ಕೃತದಲ್ಲಿ ಅಪಸ್ಮಾರ ಎಂದು ಹೆಸರಾಗಿರುವ ಈ ಕಾಯಿಲೆಗೆ ಕನ್ನಡದಲ್ಲಿ ಅಪಸ್ಮಾರ, ಮೂರ್ಛೆ ರೋಗ, ಮೊಲ್ಲಾಗರ, ಮಲರೋಗ ಎಂದು ಕರೆಯುವುದುಂಟು. ಮನುಕುಲವನ್ನು ‘ಚಿದಂಬರ ರಹಸ್ಯ’ವಾಗಿ ಕಾಡಿದ ಭೀಕರ ರೋಗಗಳಲ್ಲಿ ಅಪಸ್ಮಾರಕ್ಕೆ ಮೊದಲ ಸ್ಥಾನವಿದೆ. ಅಪಸ್ಮಾರದ ಬಗೆಗಿನ ಮೊದಲ ಲಿಖಿತ ದಾಖಲೆಯು ಇಂದಿಗೆ ಸುಮಾರು 4000 ವರ್ಷಗಳ ಹಿಂದೆ, ಮೆಸೊ ಪೊಟೋಮಿಯ ಸಂಸ್ಕೃತಿಗೆ ಸೇರಿದ ಒಂದು ಜೇಡಿಮಣ್ಣಿನ ಹಲಗೆಯ ಮೇಲೆ, ಅಕ್ಕಾಡಿಯನ್ ಭಾಷೆಯಲ್ಲಿ ಬರೆದಿದೆ.
ಇದನ್ನೂ ಓದಿ: Dr N Someshwara Column: ಅರೆಗಿವುಡರ ಬಾಳು ಬೆಳಗಿದ ಡಿಜಿಟಲ್ ಶ್ರವಣ ಸಾಧನಗಳು
ಅಲ್ಲಿರುವ ವರ್ಣನೆಯನ್ನು ‘ಅವನ ಕುತ್ತಿಗೆಯು ಎಡಗಡೆಗೆ ತಿರುಗಿದೆ. ಕೈ ಮತ್ತು ಕಾಲುಗಳು ಸೆಟೆದುಕೊಂಡಿವೆ. ಕಣ್ಣುಗಳು ಅಗಲವಾಗಿ ತೆರೆದುಕೊಂಡಿವೆ. ಬಾಯಿಂದ ನೊರೆಯು ಬರುತ್ತಿದೆ. ಅವನು ಪ್ರಜ್ಞೆಯನ್ನು ಕಳೆದುಕೊಂಡಿದ್ದಾನೆ’ ಎಂದು ಸಂಗ್ರಹಿಸಬಹುದು. ಇದಾದ ಒಂದು ಸಾವಿರದ ವರ್ಷಗಳ ನಂತರ ಬ್ಯಾಬಿಲೋನಿಯನ್ ಸಂಸ್ಕೃತಿಯಲ್ಲಿ ‘ಸಕೀಕ್ಕು’ ಎಂಬ ರೋಗನಿದಾನ ಗ್ರಂಥವೊಂದು ರಚನೆಯಾಯಿತು.
ಇದು 40 ಜೇಡಿಮಣ್ಣಿನ ಹಲಗೆಗಳ ಸಂಗ್ರಹ. ಇದರಲ್ಲಿರುವ 26ನೆಯ ಜೇಡಿಮಣ್ಣಿನ ಹಲಗೆಯು ಅಪಸ್ಮಾರದ ಬಗ್ಗೆ ವಿವರಣೆಯನ್ನು ನೀಡುತ್ತದೆ. ಇದು ಅಪಸ್ಮಾರದ ಬಗ್ಗೆ, ಅದರ ನಮೂನೆಗಳ ಬಗ್ಗೆ, ಅದರಲ್ಲಿ ಸುದೀರ್ಘ ಅಪಸ್ಮಾರದ (ಸ್ಟೇಟಸ್ ಎಪಿಲೆಪ್ಟಿಕಸ್, 5 ನಿಮಿಷಗಳಿಗಿಂತಲೂ ಹೆಚ್ಚಿನ ಕಾಲ ಸೆಳವು ಕಂಡುಬರುವುದು) ವಿವರಣೆಯೂ ಸೇರಿದೆ. ಹಾಗೆಯೇ ಸೆಳವೋತ್ತರ ಸ್ಥಿತಿಯ (ಪೋಸ್ಟ್-ಇಕ್ಟಲ್, ಸೆಳವಿನ ನಂತರ ತಲೆನೋವು, ತಲೆಸುತ್ತು, ಗೊಂದಲ, ಜೂಗರಿಕೆ, ಸುಸ್ತು, ನೆನಪಿನ ಏರುಪೇರು ಹಾಗೂ ಭಾವನಾತ್ಮಕ ಅಸ್ಥಿರತೆ ಇತ್ಯಾದಿ) ಬಗ್ಗೆ ಮಾಹಿತಿಯೂ ಇದೆ.
ಅಪಸ್ಮಾರ ಬಂದಾಗ ವ್ಯಕ್ತಿಯು ಕೆಳಕ್ಕೆ ಬೀಳುವುದನ್ನು ‘ಮಿಕ್ತು’ ಎಂದೂ, ಸೆಳವನ್ನು ‘ಹಯ್ಯಾತು’ ಎಂದೂ ಹಾಗೂ ಮೂರ್ಛೆಯನ್ನು ‘ಸಿಬ್ತು’ ಎಂದೂ ವಿಶೇಷ ಪದಗಳಿಂದ ಗುರುತಿಸಿರುವರು. ಇದರಿಂದ ಬ್ಯಾಬಿಲೋನಿಯನ್ ವೈದ್ಯರು ಅಪಸ್ಮಾರವನ್ನು ಚೆನ್ನಾಗಿ ಅರ್ಥಮಾಡಿ ಕೊಂಡಿದ್ದರೆಂದು ಕಾಣುತ್ತದೆ.

ದುಷ್ಟಶಕ್ತಿಗಳು/ ಶಿಷ್ಟಶಕ್ತಿಗಳು ದೇಹವನ್ನು ಪ್ರವೇಶಿಸಿದಾಗ ಅಪಸ್ಮಾರವು ಕಂಡು ಬರುತ್ತದೆ ಹಾಗೂ ದೈವೀಚಿಕಿತ್ಸೆಯಿಂದ ಇವನ್ನು ಗುಣಪಡಿಸ ಬೇಕು ಎಂದು ಅವರು ನಂಬಿದ್ದರು. ಪ್ರಾಚೀನ ಈಜಿಪ್ಷಿ ಯನ್ನರಿಗೆ ಅಪಸ್ಮಾರದ ಪರಿಚಯವಿತ್ತು. ಕ್ರಿ.ಪೂ.1700ರ ಕಾಲದ ಎಡ್ವಿನ್ ಸ್ಮಿತ್‌ನ ‘ಸರ್ಜಿಕಲ್ ಪ್ಯಾಪಿರಸ್’ ಎಂಬ ವೈದ್ಯಕೀಯ ಗ್ರಂಥವು ದೊರೆತಿದೆ.
ಇದರಲ್ಲಿ, ತಲೆಯಲ್ಲಿ ಬಾಯಿ ಬಿಟ್ಟುಕೊಂಡಿರುವ ಗಾಯದ ವಿವರಣೆಯಿದೆ. ಈ ಗಾಯದ ಮೂಲಕ ಮಿದುಳು ಕಾಣುತ್ತಿತ್ತು. ಆ ಮಿದುಳನ್ನು ಬೆರಳಿನಿಂದ ಮುಟ್ಟಿದಾಗ, ಸೆಳವು ಕಂಡುಬಂದಿತು ಎಂಬ ವಿವರಣೆಯು ಅದರಲ್ಲಿದೆ. ಮೆಸೊಪೊಟೋಮಿಯನ್ನರು ದೈವ ಅಥವಾ ದೆವ್ವದ ಪ್ರಕೋಪದಿಂದ ಅಪಸ್ಮಾರ ಬರುತ್ತದೆ ಎಂದು ನಂಬಿದ್ದರೆ, ಈಜಿಪ್ಷಿಯನ್ನರು ಮಿದುಳಿನ ಏರುಪೇರಿನಿಂದ ಅಪಸ್ಮಾರ ಬರುತ್ತದೆ ಎಂದು ಭಾವಿಸಿದ್ದರು.
ಕ್ರಿ.ಪೂ.770-2212ರ ನಡುವೆ ರಚನೆಯಾದ ಹಳದಿ ಚಕ್ರವರ್ತಿಯ ‘ಹ್ವಾಂಗ್ ಡಿ ನೀ ಜಿಂಗ್’ ಎಂಬ ಅಭಿಜಾತ ವೈದ್ಯಕೀಯ ಗ್ರಂಥದಲ್ಲಿ ಅಪಸ್ಮಾರ ಹಾಗೂ ಅದರ ನಮೂನೆಗಳ ವಿವರಗಳಿವೆ. ಮೂಲಿಕೆಗಳು, ಮಸಾಜು ಹಾಗೂ ಸೂಜಿಚಿಕಿತ್ಸೆ (ಆಕ್ಯುಪಂಕ್ಚರ್)ಗಳಿಂದ ಅಪಸ್ಮಾರವನ್ನು ನಿಯಂತ್ರಿಸಬಹುದು ಎನ್ನುತ್ತದೆ ಈ ಗ್ರಂಥದ ಉಲ್ಲೇಖ.
ಚರಕ ಸಂಹಿತೆಯು ‘ಅಪಸ್ಮಾರಃ ಸ್ಮೃತಿಬುದ್ಧಿಸಂಜ್ಞಾನಾಂ ಸದ್ಯಃ ಪ್ರಣಾಶಃ ಶರೀರಸ್ಯ ಪತನಂ ಚ’ ಎನ್ನುತ್ತದೆ. ಅಂದರೆ, ಅಪಸ್ಮಾರ ಬಂದಾಗ ವ್ಯಕ್ತಿಯು ಕೆಳಕ್ಕೆ ಬೀಳುತ್ತಾನೆ. ಅವನ ನೆನಪು, ಬುದ್ಧಿ ಮತ್ತು ಪ್ರeಯು ನಾಶವಾಗಿರುತ್ತದೆ ಎಂದರ್ಥ. ಸುಶ್ರುತ ಸಂಹಿತೆಯು ಅಪಸ್ಮಾರವನ್ನು ‘ಅಪಸ್ಮಾರೋ ಮಹಾಗದೋ ಭವತಿ’ ಎಂದಿದೆ. ಹಾಗೆಂದರೆ, ಅಪಸ್ಮಾರವು ಒಂದು ದೊಡ್ಡ ಹಾಗೂ ಭೀಕರ ರೋಗ ಎಂದರ್ಥ.
ವಮನ, ನಶ್ಯ ಹಾಗೂ ಬ್ರಾಹ್ಮಿ ಮತ್ತು ಶಂಖಪುಷ್ಪಗಳನ್ನೊಳಗೊಂಡ ಔಷಧಿಯ ಚಿಕಿತ್ಸೆಯನ್ನು ಇದಕ್ಕೆ ನೀಡಬೇಕು ಎನ್ನುತ್ತದೆ. ಜತೆಗೆ ಚರಕ ಸಂಹಿತೆಯು ‘ಮಾನಸಃ ಪ್ರಸಾದಃ ಸುಖಮಾಹಾರಃ ಸತ್ಮ್ಯಸೇವನಂ ಚ ರೋಗ ನಿವಾರಣಂ’ ಎಂದು ಅಪಸ್ಮಾರ ರೋಗಿಯು ತನ್ನ ಮನಸ್ಸಿನ ಆರೋಗ್ಯದ ಬಗ್ಗೆ ಹೆಚ್ಚು ಗಮನವನ್ನು ನೀಡಬೇಕು ಎನ್ನುತ್ತದೆ. ಗುರುಡಪುರಾಣವು ಮಾತ್ರ ‘ಅಪಸ್ಮಾರೋ ಗ್ರಹನಿರ್ಮಿತಿಃ’ ಅಂದರೆ ‘ಗ್ರಹಗಳ ಪ್ರಭಾವವು ಅಪಸ್ಮಾರಕ್ಕೆ ಕಾರಣ’ ಎನ್ನುತ್ತದೆ.
ಮಾನವ ಇತಿಹಾಸದಲ್ಲಿ ಬಹುಶಃ ಪ್ರಾಚೀನ ಗ್ರೀಸ್ ಸಾಮ್ರಾಜ್ಯದ ಹಿಪ್ಪೋಕ್ರೇಟಸ್ ಮಾತ್ರ ಅಪಸ್ಮಾರದ ಬಗ್ಗೆ ಮೊದಲ ಬಾರಿಗೆ ವೈಜ್ಞಾನಿಕ ವಿವರಣೆಯನ್ನು ನೀಡಿದ ಎನ್ನಬಹುದು. ಇವನು ಅಪಸ್ಮಾರಕ್ಕೆ ದೈವ ಅಥವಾ ದೈವ ಪ್ರಕೋಪ ಕಾರಣವಲ್ಲ ಎಂದ. ಇದು ಮಿದುಳಿನಲ್ಲಿಯೇ ಹುಟ್ಟುತ್ತದೆ ಎಂದ. ಇದು ಅಂಟುರೋಗವಲ್ಲ ಆದರೆ ಆನುವಂಶಿಕವಾಗಿ ಬರಬಹುದು ಎಂದ.
ಸೆಳವು ಬರುವ ಮೊದಲು ನಿರ್ದಿಷ್ಟ ಪೂರ್ವಸೂಚನೆಗಳನ್ನು ಕೊಡುವ ಕಾರಣ, ವ್ಯಕ್ತಿಯು ಕೂಡಲೇ ಸಾರ್ವಜನಿಕ ಪ್ರದೇಶದಿಂದ ದೂರಹೋಗಿ ಸುರಕ್ಷಿತ ಸ್ಥಳವನ್ನು ಸೇರಬೇಕು ಎಂಬ ಸಲಹೆಯನ್ನು ನೀಡಿದ. ಆದರೆ ಪ್ರಾಚೀನ ಗ್ರೀಸ್ ಜನತೆ ಹಿಪ್ಪೋಕ್ರೇಟಸನ ಸಲಹೆಯನ್ನು ಗಂಭೀರ ವಾಗಿ ಸ್ವೀಕರಿಸಲೇ ಇಲ್ಲ.
ಹಿಪ್ಪೋಕ್ರೇಟ್ಸ್ ವರ್ಣಿಸಿದ ಸೆಳವರಿವು ಅಥವಾ ಸೆಳವು ಪೂರ್ವ ಸೂಚನೆಗಳು (ಔರ) ಸತ್ಯವಾದದ್ದು. ಇದು ಅಪಸ್ಮಾರ ಪೀಡಿತ ವ್ಯಕ್ತಿಯ ಅನುಭವಕ್ಕೆ ಮಾತ್ರ ಬರುತ್ತದೆ. ಈ ಸೆಳವರಿವು ಎಲ್ಲ ಅಪಸ್ಮಾರ ರೋಗಿಗಳಲ್ಲಿ ಕಂಡುಬರುವುದಿಲ್ಲ. ಕೆಲವರಲ್ಲಿ ಮಾತ್ರ ಕಂಡುಬರುತ್ತದೆ. ಈ ಸೆಳವರಿವಿಗೆ ಮುಖ್ಯ ಕಾರಣ, ಮಿದುಳಿನ ಒಂದು ನಿರ್ದಿಷ್ಟ ಭಾಗದಲ್ಲಿ ‘ಸೆಳವಿನ ವಿದ್ಯುತ್ ಚಂಡಮಾರುತ’ದ ‘ಕಣ್ಣು’ ಹುಟ್ಟಿಕೊಂಡು, ಆನಂತರ ಮಿದುಳಿನಾದ್ಯಂತ ವ್ಯಾಪಿಸುತ್ತದೆ.
ಈ ಚಂಡ ಮಾರುತದ ಕಣ್ಣು ಮಿದುಳಿನ ಯಾವ ಭಾಗದಲ್ಲಿ ಆರಂಭವಾಗುತ್ತದೆಯೋ, ಆ ಭಾಗದ ಲಕ್ಷಣಗಳು ಸೆಳವರಿವಿನ ರೂಪದಲ್ಲಿ ಕಂಡುಬರುತ್ತವೆ. ಮಿದುಳಿನಲ್ಲಿ ವಾಸನೆಯನ್ನು ತಿಳಿಸುವ ಘ್ರಾಣಕ್ಷೇತ್ರದಲ್ಲಿ ಚಂಡಮಾರುತದ ಕಣ್ಣು ರೂಪುಗೊಂಡರೆ, ರಬ್ಬರ್ ಸುಟ್ಟ ವಾಸನೆ/ಸುಗಂಧ ದ್ರವ್ಯಗಳ ವಾಸನೆ ಅಥವ ಕೊಳೆತ ಮೊಟ್ಟೆಯ ವಾಸನೆಯು ಬರಬಹುದು. ಮಿದುಳಿನ ದೃಷ್ಟಿಕ್ಷೇತ್ರ ದಲ್ಲಿ ಆರಂಭವಾದರೆ ಕಣ್ಣಿನ ಮುಂದೆ ವಿವಿಧ ರೀತಿಯ ಬಣ್ಣಗಳು/ಬಣ್ಣದ ಗೆರೆಗಳು ಕಾಣಬಹುದು.
ಇಡೀ ದೃಷ್ಟಿ ಸಾಮರ್ಥ್ಯವು ಕುಗ್ಗಿ, ಒಂದು ಕೊಳವೆಯ ಮೂಲಕ ನೋಡಿದರೆ ಹೇಗೆ ಕಾಣಬಹುದೋ ಹಾಗೇ ‘ಕೊಳವೆ ನೋಟ’ವು (ಟನಲ್ ವಿಷನ್) ರೂಪುಗೊಳ್ಳಬಹುದು. ಶ್ರವಣ ಕ್ಷೇತ್ರದಲ್ಲಿ ಪ್ರಚೋದನೆಯಾದರೆ, ಯಾರಿಗೂ ಕೇಳಿಸದ ಸಂಗೀತವು ಅವರಿಗೆ ಕೇಳುತ್ತದೆ. ಹಾಗೆಯೇ ಜೇನುನೊಣದ ಝೇಂಕಾರವನ್ನು ಅವರು ಮಾತ್ರ ಆಲಿಸಬಲ್ಲರು. ಮುಖ ಅಥವಾ ಅವಯವ ಗಳನ್ನು ನಿಯಂತ್ರಿಸುವ ಮಿದುಳಿನ ಭಾಗದಲ್ಲಿ ಚಂಡಮಾರುತದ ಕಣ್ಣು ರೂಪುಗೊಂಡರೆ, ಚರ್ಮದಲ್ಲಿ ಮುಲುಗುಟ್ಟುವ ಅನುಭವವಾಗಬಹುದು.
ಮನಸ್ಸಿನ ವ್ಯಾಪಾರಗಳನ್ನು ನಿಯಂತ್ರಿಸುವ ಮಿದುಳಿನ ಭಾಗಗಳಲ್ಲಿ (ಹಿಪ್ಪೋಕ್ಯಾಂಪಸ್, ಅಮಿಗ್ಡಲ, ಪ್ಯಾರಾಹಿಪ್ಪೋಕ್ಯಾಂಪಲ್ ಗೈರಸ್, ಫ್ರಾಂಟಲ್ ಲೋಬ್, ಇನ್ಸ್ಯುಲಾರ್ ಕಾರ್ಟೆಕ್ಸ್ ಇತ್ಯಾದಿ) ವಿದ್ಯುತ್ ಚಟವಟಿಕೆಗಳ ಬಿರುಗಾಳಿಯೆದ್ದರೆ ಅಲೌಕಿಕ ಅನುಭೂತಿಯ ಅನುಭವ ವಾಗುತ್ತದೆ. ಆನಂದದ ಅಲೆಗಳಲ್ಲಿ ತೇಲಬಹುದು. ಇದು ವಿವರಣೆಗೆ ನಿಲುಕದ ಅನುಭವ. ಹಿಂದೆ ಯಾವಾಗಲೋ ಇಲ್ಲಿಗೆ ಬಂದಿದ್ದೆನಲ್ಲ ಎಂದು ಅನಿಸಬಹುದು.
ಅತ್ಯಂತ ಚಿರಪರಿಚಿತ ಸ್ಥಳವು ಅಪರಿಚಿತವಾಗಬಹುದು. ಹಠಾತ್ ತೀವ್ರ ಭಯವಾಗಬಹುದು. ದುಃಖವಾವರಿಸಬಹುದು. ಕಾಲ, ದೇಶಗಳು ತಿರುಚಿಕೊಳ್ಳಬಹುದು. ತನ್ನ ದೇಹವನ್ನು ಬಿಟ್ಟು ಗಾಳಿಯಲ್ಲಿ ತೇಲಿದ ಅನುಭವವಾಗಬಹುದು. ಕಪೋಲ ಹಾಲೆ ಅಪಸ್ಮಾರ (ಟೆಂಪೊರಲ್ ಲೋಬ್ ಎಪಿಲೆಪ್ಸಿ) ಯಲ್ಲಿ ಈ ರೀತಿಯಾದ ಮಾನಸಿಕ ಅನುಭವಗಳು ಹೆಚ್ಚು ಹೆಚ್ಚು ಆಗುತ್ತವೆ. ಆಗ ಅವರು ಇಷ್ಟರಲ್ಲಿಯೇ ಪೂರ್ಣ ಪ್ರಮಾಣದ ಅಪಸ್ಮಾರ ಸಂಭವಿಸಲಿದೆ ಎಂದು ಭಾವಿಸಿ, ಸುರಕ್ಷಿತ ಸ್ಥಳಕ್ಕೆ ಧಾವಿಸಬೇಕಾಗುತ್ತದೆ.
ಇಂಥ ಸೂಚನೆಯನ್ನು ಮೊದಲ ಬಾರಿಗೆ ಹಿಪ್ಪೋಕ್ರೇಟ್ಸ್ ಕೊಟ್ಟ ಎನ್ನುವುದು ಗಮನೀಯ. ರಷ್ಯನ್ ಕಾದಂಬರಿಕಾರ ಫ್ಯೋದರ್ ದಸ್ತೋವ್‌ಸ್ಕಿ (1821-1881) ಈ ಕಪೋಲ ಹಾಲೆಯ ಅಪಸ್ಮಾರದಿಂದ ಬಳಲುತ್ತಿದ್ದ. ಅವನು ತಾನು ಅನುಭವಿಸಿದ ಸೆಳವರಿವಿನ ವಿಚಾರವನ್ನೆಲ್ಲ ‘ದಿ ಈಡಿಯಟ್’ ಎನ್ನುವ ಕಥೆಯಲ್ಲಿ ವಿವರಿಸಿದ. ವಿನ್ಸೆಂಟ್ ವ್ಯಾನ್‌ಗಾಗ್ (1853-1890) ಪ್ರಖ್ಯಾತ ಚಿತ್ರಗಾರ. ಅವನು ತನ್ನ ಅದ್ಭುತ ಚಿತ್ರಗಳನ್ನು ಈ ಸೆಳವರಿವಿನ ಅವಧಿಯ ಅನುಭವಗಳನ್ನಾಧರಿಸಿಯೇ ಬರೆದ.
ನಮ್ಮ ದೇಶದ ಸಾಧು-ಸಂತರು ಅನುಭವಿಸುವ ‘ಸಚ್ಚಿದಾನಂದ’ ಅನುಭವವು ಬಹುಶಃ ಈ ಕಪೋಲ ಹಾಲೆಯ ಅಪಸ್ಮಾರದ ಅನುಭವಗಳಾಗಿರಬಹುದು ಎಂಬುದು ಕೆಲವರ ಅಭಿಮತ. 1849ರಲ್ಲಿ ರಾಬರ್ಟ್ ಬೆಂಟ್ಲೆ ಟಾಡ್ (1809-1860) ಸೆಳವಿಗೆ ಮಿದುಳಿನ ವಿದ್ಯುತ್ ವ್ಯವಸ್ಥೆಯಲ್ಲಿ ಆಗುವ ಏರುಪೇರೇ ಇದಕ್ಕೆ ಕಾರಣವೆಂದ.
ಜಾನ್ ಹ್ಯೂಲಿಂಗ್ಸ್ ಜಾಕ್ಸನ್ (1835-1911) ‘ಸ್ಟಡಿ ಆಫಗ್ ಕನ್ವಲ್ಷನ್’ ಎಂಬ ಗ್ರಂಥವನ್ನು ಬರೆದ. ಇದಾದ 80 ವರ್ಷಗಳ ನಂತರ ಹ್ಯಾನ್ಸ್ ಬರ್ಗರ್ (1873-1941) ಮಾನವ ವಿದ್ಯುನ್ ಮಸ್ತಿಷ್ಕ ಲೇಖನ ವನ್ನು (ಇಇಜಿ) ರೂಪಿಸಿದ. ಈ ಸಾಧನವು ಅಪಸ್ಮಾರಕ್ಕೆ ಮಿದುಳಿನ ವಿದ್ಯುತ್ ಸಂಜ್ಞೆಗಳ ಏರುಪೇರೇ ಕಾರಣವೆಂದಿತು. 1857ರಲ್ಲಿ ಚಾರ್ಲ್ಸ್ ಲೋಕಾಕ್ (1799-1875) ಎಂಬಾತ, ಪೊಟಾಷಿ ಯಮ್ ಬ್ರೋಮೈಡ್ ಕಾಮೋದ್ರೇಕವನ್ನು ನಿಗ್ರಹಿಸಿ ಮನಸ್ಸನ್ನು ಪ್ರಶಾಂತಗೊಳಿಸುವುದನ್ನು ಗಮನಿಸಿದ.
1868ರ ಆಸುಪಾಸಿನಲ್ಲಿ ಸರ್ ಥಾಮಸ್ ಸ್ಮಿಥ್ ಕ್ಲೌಸ್ಟನ್ (1840-1915) ಅಪಸ್ಮಾರವನ್ನು ನಿಯಂತ್ರಿಸ ಬಲ್ಲ ಪೊಟಾಷಿಯಂ ಬ್ರೋಮೈಡಿನ ಪ್ರಮಾಣವನ್ನು ನಿಗದಿಪಡಿಸಿದ. 1912ರಲ್ಲಿ ಆಲ್ಬರ್ಟ್ ಹಾಫ್ ಮನ್ (1906-2008) ಫೀನೋಬಾ ರ್ಬಿಟೋನ್ ಔಷಧವನ್ನು ಕಂಡು ಹಿಡಿಯುವವರೆಗೂ ಪೊಟಾಷಿಯಂ ಬ್ರೋಮೈಡನ್ನು ಯುರೋಪಿಯನ್ನರು ವಿಪುಲವಾಗಿ ಬಳಸಿದರು.
ಈಗ ಸುಮಾರು 20 ಬಗೆಯ ಅಪಸ್ಮಾರ ರೋಧಕ ಔಷಧಗಳು ದೊರೆಯುತ್ತಿವೆ. ಇಂದು ಜಗತ್ತಿನಲ್ಲಿ 50 ದಶಲಕ್ಷ ಅಪಸ್ಮಾರಿಗಳಲ್ಲಿ 2/3 ಜನರ ಅಪಸ್ಮಾರವನ್ನು ಈ 20 ಔಷಧಗಳು ನಿಯಂತ್ರಣ ದಲ್ಲಿಟ್ಟಿವೆ. ಉಳಿದ 1/3 ಅಪಸ್ಮಾರಿಗಳಿಗೆ ಉಪಯುಕ್ತವಾಗಬಹುದಾದ ಔಷಧಗಳು ಸಂಶೋಧನೆ ಯಲ್ಲಿವೆ. ಇವರಿಗೆ ಕೀಟೋಜೆನಿಕ್ ಡಯಟ್, ವೇಗಸ್ ನರ್ವ್ ಸ್ಟಿಮ್ಯುಲೇಶನ್ ಅಥವಾ ಶಸ್ತ್ರ ಚಿಕಿತ್ಸೆಯು ಉಪಶಮನವನ್ನು ನೀಡಬಹುದು. ಜೀನ್ ಥೆರಪಿಯು ಲಭ್ಯವಾಗುವ ಆಸೆಯಿದೆ.
ಅಪಸ್ಮಾರದಲ್ಲಿ ಹಲವು ಅಪರೂಪದ ನಮೂನೆಗಳಿವೆ. ಕೆಲವು ಮಕ್ಕಳ ತಲೆಯ ಮೇಲೆ ಬಿಸಿ ನೀರನ್ನು ಸುರಿದರೆ, ಬಿಸಿಲಿಗೆ ಹೋದರೆ, ದೊಡ್ಡ ಶಬ್ದಗಳನ್ನು ಕೇಳಿದರೆ, ಕೆಲವು ಸಂಗೀತವನ್ನು ಆಲಿಸಿದರೆ ಸೆಳವು ಕಂಡುಬರುತ್ತದೆ. ವಿಡಿಯೋ ಗೇಮ್ಸ್, ಡಿಸ್ಕೋ ಲೈಟ್ಸ್, ಮರಗಳ ನಡುವೆ ನುಸುಳಿ ಬರುವ ಬೆಳಕಿನ ಕೋಲುಗಳು ಸೆಳವಿಗೆ ಕಾರಣವಾಗಬಹುದು.
ಜಪಾನಿನ ಪೋಕೆಮಾನ್ ಧಾರಾವಾಹಿಯಲ್ಲಿ ಬರುವ ಪ್ರಜ್ವಲ ಕೆಂಪು-ನೀಲಿ ಬಣ್ಣದ ಬೆಳಕನ್ನು ನೋಡಿದ ಅಸಂಖ್ಯ ಮಕ್ಕಳು ಸೆಳವಿಗೆ ತುತ್ತಾದರು. ಇದ್ದಕ್ಕಿದ್ದ ಹಾಗೆ 5-15 ಸೆಕೆಂಡುಗಳ ಚಟುವಟಿಕೆಯನ್ನು ನಿಲ್ಲಿಸಿ, ಶೂನ್ಯ ಭಾವವನ್ನು ಬೀರಿ, ಪ್ರತಿಕ್ರಿಯೆಯಿಲ್ಲದೆ ಕಲ್ಲಿನಂತೆ ನಿಂತು ತಕ್ಷಣವೇ ಚೇತರಿಸಿ ಕೊಳ್ಳುವ ಅಪರೂಪದ ಸೈಲೆಂಟ್ ಎಪಿಲೆಪ್ಸಿ ಅಥವಾ ಆಬ್ಸೆನ್ಸ್ ಎಪಿಲೆಪ್ಸಿ ಎನ್ನುವ ಅಪರೂಪದ ನಮೂನೆಯುಂಟು ನಮ್ಮ ಸಮಾಜವು ಅಪಸ್ಮಾರಿಗಳನ್ನು ಬಹಳ ಕೆಟ್ಟದಾಗಿ ನಡೆಸಿಕೊಂಡಿದೆ.
ಅಮೆರಿಕದಲ್ಲಿ ಅಪಸ್ಮಾರಿಗಳು ಸಂತಾನ ವರ್ಧನೆಯನ್ನು ಮಾಡದಂತೆ ಅವರ ಸಂತಾನ ಶಕ್ತಿಯ ಹರಣ ಮಾಡುವ ಪದ್ಧತಿಯಿತ್ತು. ಭಾರತದ ‘ಹಿಂದು ಮ್ಯಾರೇಜ್ ಆಕ್ಟ್, 1955’ ಅಪಸ್ಮಾರ ವನ್ನು ಹುಚ್ಚಿನೊಡನೆ ಸಮೀಕರಿಸಿ, ಅಪಸ್ಮಾರದ ಆಧಾರದ ಮೇಲೆ ವಿವಾಹ ವಿಚ್ಛೇದನವನ್ನು ಪಡೆಯಲು ಅವಕಾಶವನ್ನು ಮಾಡಿಕೊಟ್ಟಿತು. ಇದಕ್ಕೆ 1999ರಲ್ಲಿ ತಿದ್ದುಪಡಿ ತಂದದ್ದು ಶ್ಲಾಘನೀಯ ವಿಚಾರ.
ಮೊದಲು ಅಪಸ್ಮಾರಿಗಳಿಗೆ ವೈದ್ಯಕೀಯ ವಿಮೆಯನ್ನು ನೀಡುತ್ತಿರಲಿಲ್ಲ. 2019ರಲ್ಲಿ ಅದು ಬದಲಾಗಿದೆ. ವಿದೇಶಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ನೀಡುವುದಿಲ್ಲ. ನಮ್ಮಲ್ಲೂ ನೀಡುವುದಿಲ್ಲ. ಅಪಸ್ಮಾರ ಇರುವವರಿಗೆ ಭಾರತೀಯ ಮಿಲಿಟರಿಯಲ್ಲಿ ಉದ್ಯೋಗಕ್ಕೆ ಅವಕಾಶವಿಲ್ಲ. ಹಾಗೆಯೇ ವಿಮಾನಯಾನ ಕ್ಷೇತ್ರದಲ್ಲಿ ಪೈಲಟ್ ಅಥವ ಕ್ಯಾಬಿನ್ ಕ್ರ್ಯೂನಲ್ಲಿ ಕೆಲಸವನ್ನು ಮಾಡಲು ಸಾಧ್ಯ ವಿಲ್ಲ.
ರೈಲ್ವೆ, ಪೊಲೀಸ್, ಅಗ್ನಿಶಾಮಕ ದಳಗಳಲ್ಲೂ ಕೆಲಸ ಮಾಡಲು ಅನುಮತಿಯು ದೊರೆಯುವುದಿಲ್ಲ. ‘10 ವರ್ಷಗಳ ಕಾಲ ಸೆಳವುಮುಕ್ತನಾಗಿದ್ದಾನೆ’ ಎಂದು ನರವೈದ್ಯರು ಪ್ರಮಾಣಪತ್ರವನ್ನು ನೀಡಿದರೆ ಈ ಕ್ಷೇತ್ರದಲ್ಲಿ ಉದ್ಯೋಗವನ್ನು ನೀಡಬಹುದು ಎಂಬ ಆಶಾಕಿರಣವುಂಟು. ಆದರೆ ಸಾಮಾನ್ಯವಾಗಿ ಕೆಲಸವನ್ನು ನಿರಾಕರಿಸುವುದೇ ಹೆಚ್ಚು. 2016 ರಲ್ಲಿ ‘ರೈಟ್ಸ್ ಆಫ್ ಪರ್ಸನ್ಸ್ ವಿತ್ ಡಿಸೆಬಲಿಟೀಸ್ ಆಕ್ಟ್’ ಬರುವವರಿಗೂ ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಕೆಲಸವನ್ನು ಮಾಡಲು ಅವಕಾಶ ವಿರಲಿಲ್ಲ. ಆದರೆ ಈಗ ಅವಕಾಶವಿದೆ.
ಆದರೂ ಅಪಸ್ಮಾರ ಇರುವವರನ್ನು ಎತ್ತರದಲ್ಲಿ, ಬೆಂಕಿಯ ಬಳಿ, ನೀರಿನ ಬಳಿ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಬಿಡುವುದಿಲ್ಲ. ಈ ಮುನ್ನೆಚ್ಚರಿಕೆಯು ಉತ್ತಮವಾಗಿದೆ. ಅಪಸ್ಮಾರಿಗಳು ಎಲ್ಲರಂತೆ ಮದುವೆಯಾಗಲು, ಎಲ್ಲರಂತೆ ಆರೋಗ್ಯ ವಿಮೆಯನ್ನು ಪಡೆಯಲು, ಸೀಮಿತ ಪ್ರಮಾಣದಲ್ಲಿ ಯಾದರೂ ಸರಿ ಉದ್ಯೋಗವನ್ನು ಮಾಡಲು ನಮ್ಮ ದೇಶದ ಕಾನೂನು ಅವಕಾಶವನ್ನು ಮಾಡಿ ಕೊಟ್ಟಿದೆ. ಇದರಿಂದಾಗಿ, ಅಪಸ್ಮಾರಿಗಳು ಸಹ ಎಲ್ಲರಂತೆ ನೆಮ್ಮದಿಯ ಬದುಕನ್ನು ನಡೆಸಲು ಸಾಧ್ಯವಾಗಿದೆ. ಇದಕ್ಕಾಗಿ ನಮ್ಮ ಸರಕಾರಕ್ಕೆ ನಾವು ಕೃತಜ್ಞರಾಗಿರಬೇಕು.