ಮನಿ ಮೈಂಡೆಡ್
ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಮತ್ತೆ 25 ಪರ್ಸೆಂಟ್ ತನಕ ಟ್ಯಾರಿಫ್ (ಸುಂಕ) ವಿಧಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಇದಕ್ಕೆ ಅವರು ಕೊಟ್ಟಿರುವ ಸಮರ್ಥನೆ ನೋಡಿ- ಭಾರತವು ಅಗತ್ಯಕ್ಕಿಂತ ಹೆಚ್ಚಾಗಿ ಉತ್ಪಾದನೆ ಮಾಡುತ್ತಿದೆ. ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ. ಅದರ ರಫ್ತು ಜಾಸ್ತಿಯಾಗುತ್ತಿದೆ. ಇದರಿಂದ ಅಮೆರಿಕದ ವಹಿವಾಟುಗಳಿಗೆ ಮುಂದೊಂದು ದಿನ ಸವಾಲು ಎದುರಾದೀತು ಎಂದು ಆರೋಪಿಸಿದ್ದಾರೆ.
ಭಾರತದ ಉತ್ಪಾದನೆ ಆಧರಿತ ಇನ್ಸೆಂಟಿವ್ ಯೋಜನೆಗಳನ್ನು (ಪಿಎಲಐ), ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತ, ದೇಶೀಯ ಉದ್ದಿಮೆಗಳ ಬೆಳವಣಿಗೆ ಈಗ ಟ್ರಂಪ್ ಸರಕಾರದ ಕಣ್ಣು ಕುಕ್ಕುತ್ತಿದೆ. ಇದಕ್ಕೆ ಸಾಕ್ಷಿ ಇತ್ತೀಚಿನ ಯುಎಸ್ ಟ್ರೇಡ್ ರೆಪ್ರೆಸೆಂಟೇಟಿವ್ ವರದಿ. ಈ ನಡುವೆ ಜಾಗತಿಕ ಆರ್ಥಿಕತೆ ಯ ಅನಿಶ್ಚಿತತೆ, ಅಂತಾರಾಷ್ಟ್ರೀಯ ರಾಜಕೀಯ ಸಂಘರ್ಷಗಳು ಮತ್ತು ವ್ಯಾಪಾರ ಸಮರಗಳ ಕಾರ್ಮೋಡ ಕವಿದಿರುವ ಸಂದರ್ಭದಲ್ಲಿ, ಭಾರತದ ಆರ್ಥಿಕತೆಯಿಂದ ಹೊರ ಬಂದಿರುವ ಇತ್ತೀಚಿನ ಅಂಕಿ-ಅಂಶಗಳು ನಿಜಕ್ಕೂ ಆಶಾದಾಯಕವಾಗಿವೆ.
ಮುಖ್ಯವಾಗಿ ದಾಖಲೆಯ ಎತ್ತರದಲ್ಲಿದ್ದ ಕಚ್ಚಾ ತೈಲ ದರದ ಇಳಿಕೆ, ಜಾಗತಿಕ ಮಾರುಕಟ್ಟೆಯಲ್ಲಿ ಬಂಗಾರದ ದರ ಕುಸಿತ, ಡಾಲರ್ ಎದುರು ರುಪಾಯಿ ಮೌಲ್ಯದ ಗಮನಾರ್ಹ ವೃದ್ಧಿ, ಭಾರತೀಯ ಷೇರು ಮಾರುಕಟ್ಟೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (FII) ಮರಳುವಿಕೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ವಿದೇಶಗಳಲ್ಲಿದ್ದ ತನ್ನ ಬಂಗಾರದ ನಿಕ್ಷೇಪವನ್ನು ಸ್ವದೇಶಕ್ಕೆ ತಂದಿರುವ ಐತಿಹಾಸಿಕ ಬೆಳವಣಿಗೆ- ಇವೆಲ್ಲವೂ ಒಟ್ಟಾಗಿ ಭಾರತದ ಅರ್ಥವ್ಯವಸ್ಥೆಗೆ ಪಂಚಾಮೃತದಂತೆ ಒದಗಿ ಬಂದಿವೆ.
ಇದನ್ನೂ ಓದಿ: Keshav Prasad B Column: ಹಣ ಕೂಡಿಡುವುದಕ್ಕೂ, ಆದಾಯ ಗಳಿಕೆಗೂ ವ್ಯತ್ಯಾಸವಿದೆ ?
ಇದು ಕೇವಲ ಆರ್ಥಿಕ ಅಂಕಿ-ಅಂಶಗಳ ಏರಿಳಿತವಲ್ಲ. ಬದಲಾಗಿ ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕ ಸಾರ್ವಭೌಮತ್ವ ಮತ್ತು ಸ್ಥಿರತೆಯ ದ್ಯೋತಕ ಎಂದರೆ ಅತಿಶಯವಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ವಿದೇಶಿ ವಿನಿಮಯ ಮೀಸಲು ನಿರ್ವಹಣೆಯ ಇತ್ತೀಚಿನ ಅರ್ಧವಾರ್ಷಿಕ ವರದಿಯು (ಸೆಪ್ಟೆಂಬರ್ 2026ರ ಅಂತ್ಯಕ್ಕೆ) ಒಂದು ಐತಿಹಾಸಿಕ ಮೈಲಿಗಲ್ಲನ್ನು ದಾಖಲಿಸಿದೆ.
ಆರ್ಬಿಐ ಬಳಿಯಿರುವ ಒಟ್ಟು 880 ಮೆಟ್ರಿಕ್ ಟನ್ ಬಂಗಾರದ ನಿಕ್ಷೇಪದಲ್ಲಿ, ಬರೋಬ್ಬರಿ 740 ಟನ್ ಅಂದರೆ ಶೇಕಡಾ 84.05%ರಷ್ಟು ಬಂಗಾರವನ್ನು ಈಗ ಭಾರತದಲ್ಲಿಯೇ ಸುರಕ್ಷಿತ ತಿಜೋರಿ ಗಳಲ್ಲಿ ಸಂಗ್ರಹಿಸಿಡಲಾಗಿದೆ. ಕೇವಲ ಆರು ತಿಂಗಳ ಹಿಂದೆ, ಅಂದರೆ ಮಾರ್ಚ್ 2026ರಲ್ಲಿ ಈ ಪ್ರಮಾಣ ಶೇಕಡಾ 77ರಷ್ಟಿತ್ತು (680.05 ಟನ್).
ಕಳೆದ ಆರು ತಿಂಗಳ ಅವಧಿಯ ಸುಮಾರು 60 ಟನ್ ಬಂಗಾರವನ್ನು ಲಂಡನ್ನ ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ಸ್ (BIS) ನಿಂದ ಭಾರತಕ್ಕೆ ತರಲಾಗಿದೆ. ಈಗ ಕೇವಲ 140 ಟನ್ ಬಂಗಾರ ಮಾತ್ರ ವಿದೇಶಿ ಸುಪರ್ದಿಯಲ್ಲಿದೆ. ಈ ಬೆಳವಣಿಗೆಯ ಮಹತ್ವವನ್ನು ಅರಿಯಲು ನಾವು 1991ರ ಆರ್ಥಿಕ ಬಿಕ್ಕಟ್ಟನ್ನು ನೆನಪಿಸಿಕೊಳ್ಳಬೇಕು. ಅಂದು ವಿದೇಶಿ ವಿನಿಮಯ ಕೊರತೆಯಿಂದಾಗಿ ಭಾರತವು ತನ್ನ 46 ಟನ್ ಬಂಗಾರವನ್ನು ವಿದೇಶಿ ಬ್ಯಾಂಕ್ ಗಳಲ್ಲಿ ಅಡವಿಟ್ಟು ಸಾಲ ಪಡೆಯುವ ಅನಿವಾರ್ಯತೆಗೆ ಸಿಲುಕಿತ್ತು. ಆದರೆ ಇಂದು ಕಾಲ ಬದಲಾಗಿದೆ.
ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಪಾಶ್ಚಿಮಾತ್ಯ ದೇಶಗಳು ರಷ್ಯಾದ ವಿದೇಶಿ ಮೀಸಲು ನಿಧಿಯನ್ನು ಮುಟ್ಟುಗೋಲು ಹಾಕಿಕೊಂಡ ಘಟನೆಯು ಜಗತ್ತಿನ ಎ ಕೇಂದ್ರೀಯ ಬ್ಯಾಂಕ್ಗಳಿಗೆ ಎಚ್ಚರಿಕೆಯ ಗಂಟೆಯಾಯಿತು. ಅಂತಾರಾಷ್ಟ್ರೀಯ ಬಿಕ್ಕಟ್ಟುಗಳ ಸಮಯದಲ್ಲಿ ದೇಶದ ಅಮೂಲ್ಯ ಆಸ್ತಿಗಳು ಪರದೇಶಗಳ ನಿಯಂತ್ರಣದಲ್ಲಿರುವುದು ಅಪಾಯಕಾರಿ ಎಂಬುದನ್ನು ಮನಗಂಡ ಕೇಂದ್ರ ಸರ್ಕಾರ ಮತ್ತು ಆರ್ಬಿಐ, ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ 330 ಟನ್ಗೂ ಅಧಿಕ ಬಂಗಾರವನ್ನು ಸ್ವದೇಶಕ್ಕೆ ಮರಳಿ ತಂದಿವೆ.
2022-23ರಲ್ಲಿ ಕೇವಲ ಶೇ. 38ರಷ್ಟಿದ್ದ ದೇಶೀಯ ಬಂಗಾರದ ಸಂಗ್ರಹ ಇಂದು ಶೇ. 84ಕ್ಕೆ ತಲುಪಿರು ವುದು ಭಾರತದ ಆರ್ಥಿಕ ಸ್ವಾವಲಂಬನೆ ಮತ್ತು ಕಾರ್ಯತಂತ್ರದ ಗೆಲುವಾಗಿದೆ. ಇನ್ನೊಂದೆಡೆ, ಜಾಗತಿಕ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಇಳಿಕೆಯಾದ ಕಾರಣ, ಭಾರತದ ಒಟ್ಟು ವಿದೇಶಿ ವಿನಿಮಯ ಮೀಸಲಿನಲ್ಲಿ (Forex Reserves) ಬಂಗಾರದ ಮೌಲ್ಯದ ಪಾಲು ಮಾರ್ಚ್ 2026ರಲ್ಲಿದ್ದ ಶೇ. 16.70ರಿಂದ ಸೆಪ್ಟೆಂಬರ್ 2026ರ ವೇಳೆಗೆ ಶೇ. 14.38ಕ್ಕೆ ಇಳಿದಿದೆ. ಆದರೂ, ನಮ್ಮ ಒಟ್ಟು ವಿದೇಶಿ ವಿನಿಮಯ ಮೀಸಲು 737 ಬಿಲಿಯನ್ ಡಾಲರ್ ಎಂಬ ದಾಖಲೆಯ ಎತ್ತರಕ್ಕೆ ಏರಿರುವುದು ದೇಶದ ಆರ್ಥಿಕ ಶಕ್ತಿಗೆ ಸಾಕ್ಷಿಯಾಗಿದೆ.
ಡಾಲರ್ ಎದುರು ಭಾರತೀಯ ರುಪಾಯಿ ಕಳೆದ 8 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿ, ಒಂದೇ ದಿನದಲ್ಲಿ 70 ಪೈಸೆಗಳಷ್ಟು ಬಲಗೊಂಡು 92.18 – 92.21ರ ಆಸುಪಾಸಿನಲ್ಲಿ ವಹಿವಾಟು ನಡೆಸು ತ್ತಿರುವುದು ಏಷ್ಯಾದ ಅತ್ಯುತ್ತಮ ಪ್ರದರ್ಶನವಾಗಿದೆ. ಈ ಚೇತರಿಕೆಯ ಹಿಂದೆ ಎರಡು ಪ್ರಮುಖ ಆರ್ಥಿಕ ಶಕ್ತಿಗಳು ಕೆಲಸ ಮಾಡುತ್ತಿವೆ. ಕಚ್ಚಾ ತೈಲ ಬೆಲೆ ಇಳಿಕೆ ವರದಾನವಾಗಿದೆ.
ಭಾರತವು ತನ್ನ ಒಟ್ಟು ತೈಲ ಅಗತ್ಯದ ಶೇಕಡಾ 85ಕ್ಕಿಂತ ಹೆಚ್ಚಿನ ಭಾಗವನ್ನು ಆಮದು ಮಾಡಿ ಕೊಳ್ಳುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾದಾಗ, ತೈಲ ಖರೀದಿಗಾಗಿ ನಾವು ಪಾವತಿಸಬೇಕಾದ ಡಾಲರ್ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ಇದರಿಂದ ದೇಶದ ‘ಚಾಲ್ತಿ ಖಾತೆ ಕೊರತೆ’ (Current Account Deficit- CAD) ನಿಯಂತ್ರಣಕ್ಕೆ ಬರುತ್ತದೆ ಮತ್ತು ದೇಶದಿಂದ ಹೊರಹೋಗುವ ಡಾಲರ್ ಪ್ರಮಾಣ ತಗ್ಗುತ್ತದೆ.
ಎರಡನೆಯದಾಗಿ ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತದ ಸ್ಥಿರ ಆರ್ಥಿಕ ನೀತಿಗಳು, ನಿಯಂತ್ರಿತ ಹಣದುಬ್ಬರ ಮತ್ತು ಬಲಿಷ್ಠ ಜಿಡಿಪಿ ಬೆಳವಣಿಗೆಯ ದರವು ವಿದೇಶಿ ಸಾಂಸ್ಥಿಕ ಹೂಡಿಕೆದಾರರನ್ನು (FII) ಮತ್ತೆ ಭಾರತೀಯ ಷೇರು ಮತ್ತು ಬಾಂಡ್ ಮಾರುಕಟ್ಟೆಯತ್ತ ಸೆಳೆಯು ತ್ತಿದೆ. ದೇಶದಿಂದ ಹೊರಹೋಗುವ ಡಾಲರ್ಗಿಂತ ಒಳಬರುವ ಡಾಲರ್ ಪ್ರಮಾಣ ಹೆಚ್ಚಾದಾಗ ಸಹಜವಾಗಿಯೇ ರುಪಾಯಿ ಮೌಲ್ಯ ವೃದ್ಧಿಯಾಗುತ್ತದೆ. ಈ ಬೆಳವಣಿಗೆಗಳು ಕೇವಲ ಷೇರು ಮಾರುಕಟ್ಟೆ ಅಥವಾ ಆರ್ಬಿಐ ಕಚೇರಿಗಳಿಗೆ ಸೀಮಿತವಾಗಿಲ್ಲ; ಇವು ನೇರವಾಗಿ ಶ್ರೀಸಾಮಾನ್ಯನ ಜೇಬಿನ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತವೆ.
ಅದು ಹೇಗೆ ಎನ್ನುತ್ತೀರಾ? ನೋಡಿ, ರುಪಾಯಿ ಬಲ ವರ್ಧನೆಯಿಂದ ವಿದೇಶಿ ಶಿಕ್ಷಣದ ಶುಲ್ಕ/ಇಎಂಐ, ವಿದೇಶ ಪ್ರವಾಸ, ಹಾಗೂ ಆಮದು ಮಾಡಿಕೊಳ್ಳುವ ಚಿನ್ನ, ತೈಲ, ರಾಸಾಯನಿಕ, ಎಲೆಕ್ಟ್ರಾನಿಕ್ಸ್ ಮತ್ತು ಔಷಧಗಳ ವೆಚ್ಚ ಇಳಿಕೆಯಾಗುತ್ತದೆ. ಇದರಿಂದ ರಫ್ತುದಾರರಿಗೆ ಆದಾಯ ಇಳಿಯುತ್ತದೆ ಎಂಬುದು ಬೇರೆ ವಿಚಾರ, ಇರಲಿ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ವಾದರೆ ಭಾರತದಲ್ಲಿ ಸಾರಿಗೆ ವೆಚ್ಚ ನಿಯಂತ್ರಣ, ಸರಕು ಸಾಗಣೆ ದರ ಸ್ಥಿರತೆ ಹಾಗೂ ಹಣದುಬ್ಬರ ಇಳಿಕೆಗೆ ನೆರವಾಗುತ್ತದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಯಾದರೆ, ಮದುವೆ ಮತ್ತು ಹಬ್ಬಗಳ ಸೀಸನ್ ನಲ್ಲಿ ಆಭರಣ ಖರೀದಿಸುವ ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಮಟ್ಟದ ಆರ್ಥಿಕ ನಿರಾಳವಾಗು ತ್ತದೆ. ಭಾರತೀಯ ಮಾರುಕಟ್ಟೆಗೆ ವಿದೇಶಿ ಬಂಡವಾಳ ಹರಿವು ಹೆಚ್ಚಿದರೆ, ಷೇರು ಮಾರುಕಟ್ಟೆಯಲ್ಲಿ ಚೇತರಿಕೆ, ದೇಶೀಯ ಕಂಪನಿಗಳ ವಿಸ್ತರಣೆಗೆ ಬಂಡವಾಳ ಲಭ್ಯತೆ ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ವಾಗುತ್ತದೆ.
ಮೀಸಲು ಚಿನ್ನದ ಪ್ರಮಾಣ ಈಗ 740 ಟನ್ನಿಗೆ ಹೆಚ್ಚಳವಾಗಿದೆ. ಇದರಿಂದ ಜಾಗತಿಕ ನಿರ್ಬಂಧಗಳ ಭಯವಿಲ್ಲದ ಆರ್ಥಿಕ ಭದ್ರತೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಾಲದ ವಿಶ್ವಾಸಾರ್ಹತೆ ವೃದ್ಧಿಸುತ್ತದೆ. ಪ್ರಸ್ತುತ ಸನ್ನಿವೇಶವು ಭಾರತದ ಆರ್ಥಿಕತೆಗೆ ಅತ್ಯಂತ ಅನುಕೂಲ ಕರವಾಗಿದ್ದರೂ, ಅರ್ಥಶಾಸ್ತ್ರದಲ್ಲಿ ಯಾವುದೇ ಸ್ಥಿತಿ ಶಾಶ್ವತವಲ್ಲ.
ರುಪಾಯಿ ಮೌಲ್ಯ ಅತಿಯಾಗಿ ವೃದ್ಧಿಯಾದರೆ ಅದು ಭಾರತದ ರಫ್ತುದಾರರಿಗೆ (ವಿಶೇಷವಾಗಿ ಐಟಿ, ಜವಳಿ ಮತ್ತು ಔಷಧ ರಫ್ತು ವಲಯಕ್ಕೆ) ಅಲ್ಪ ಪ್ರಮಾಣದ ಸ್ಪರ್ಧಾತ್ಮಕ ಒತ್ತಡವನ್ನು ತರಬಹುದು. ಅಲ್ಲದೆ, ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ನ ಬಡ್ಡಿದರ ನೀತಿಗಳು ಮತ್ತು ಮಧ್ಯಪ್ರಾಚ್ಯ ಅಥವಾ ಪೂರ್ವ ಯುರೋಪಿನ ಭೌಗೋಳಿಕ ರಾಜಕೀಯ ಬೆಳವಣಿಗೆಗಳು ತೈಲ ಬೆಲೆ ಹಾಗೂ ವಿದೇಶಿ ಹೂಡಿಕೆಯ ದಿಕ್ಕನ್ನು ಬದಲಿಸಬಲ್ಲವು. ಆದರೆ, 737 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಮೀಸಲು ಮತ್ತು ಸ್ವದೇಶದ ಭದ್ರವಾಗಿರುವ 740 ಟನ್ಗೂ ಅಧಿಕ ಬಂಗಾರದ ಬಲ ಇರುವುದರಿಂದ, ಯಾವುದೇ ಜಾಗತಿಕ ಆರ್ಥಿಕ ಆಘಾತವನ್ನು ತಡೆದುಕೊಳ್ಳುವ ಶಕ್ತಿ ಇಂದಿನ ಭಾರತಕ್ಕಿದೆ.
ಕಳೆದ ಎರಡು ದಶಕಗಳಲ್ಲಿ ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಪಟ್ಟಿಯಲ್ಲಿ ಭಾರತವು 12ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿರುವುದು ಮತ್ತು ಮುಂದಿನ ಕೆಲವೇ ವರ್ಷಗಳಲ್ಲಿ 3ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿರುವುದು ಜಾಗತಿಕ ಆರ್ಥಿಕ ಇತಿಹಾಸದ ಒಂದು ಮಹತ್ವದ ಮೈಲಿಗಗಿದೆ. ಜಾಗತಿಕ ಆರ್ಥಿಕ ಭೂಪಟದಲ್ಲಿ ಭಾರತದ ಸ್ಥಾನಮಾನ ಕಳೆದ 20 ವರ್ಷಗಳಲ್ಲಿ ಅತ್ಯಂತ ವೇಗವಾಗಿ ಬದಲಾಗಿದೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಬಿಡುಗಡೆ ಮಾಡಿರುವ ದತ್ತಾಂಶಗಳ ಪ್ರಕಾರ, 2005ರಲ್ಲಿ ವಿಶ್ವದ 12ನೇ ಅತಿದೊಡ್ಡ ಆರ್ಥಿಕತೆಯಾಗಿದ್ದ ಭಾರತ, ಇಂದು ಬ್ರಿಟನ್ ಮತ್ತು ಫ್ರಾನ್ಸ್ ನಂತಹ ಮುಂದುವರಿದ ದೇಶಗಳನ್ನು ಹಿಂದಿಕ್ಕಿ 5ನೇ ಸ್ಥಾನದಲ್ಲಿದೆ. ಅಷ್ಟೇ ಅಲ್ಲ, 2027ರ ವೇಳೆಗೆ ಜಪಾನ್ ಅನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಮತ್ತು 2030ರ ವೇಳೆಗೆ ಜರ್ಮನಿಯನ್ನು ಹಿಂದಿಕ್ಕಿ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಿ (ಅಮೆರಿಕ ಮತ್ತು ಚೀನಾದ ನಂತರ) ಹೊರಹೊಮ್ಮಲಿದೆ ಎಂದು ಅಂದಾಜಿಸಲಾಗಿದೆ.
ವಿಶ್ವದ ಅತಿ ಹೆಚ್ಚು ಯುವ ಕಾರ್ಯಪಡೆಯನ್ನು ಹೊಂದಿರುವ ಭಾರತ, ಉತ್ಪಾದನೆ ಮತ್ತು ಸೇವಾ ವಲಯಕ್ಕೆ ಅಪಾರ ಮಾನವ ಸಂಪನ್ಮೂಲವನ್ನು ಒದಗಿಸುತ್ತಿದೆ. ಯುಪಿಐ, ಆಧಾರ್ ಮತ್ತು ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯು ದೇಶದ ಆರ್ಥಿಕತೆಯನ್ನು ಔಪಚಾರಿಕಗೊಳಿಸಿದೆ. ಮತ್ತು ವಹಿವಾಟಿನ ವೆಚ್ಚವನ್ನು ಕಡಿಮೆ ಮಾಡಿದೆ.
ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ಆಧುನೀಕರಣ, ಬಂದರುಗಳು ಮತ್ತು ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಸರ್ಕಾರ ಮಾಡುತ್ತಿರುವ ಬೃಹತ್ ಬಂಡವಾಳ ವೆಚ್ಚ ಆರ್ಥಿಕತೆಗೆ ದೀರ್ಘಕಾಲದ ಬಲ ನೀಡುತ್ತಿದೆ. ಜಾಗತಿಕ ಕಂಪನಿಗಳು ‘ಚೀನಾ ಪ್ಲಸ್ ಒನ್’ ಕಾರ್ಯತಂತ್ರದ ಭಾಗವಾಗಿ ಭಾರತವನ್ನು ಉತ್ಪಾದನಾ ಕೇಂದ್ರವಾಗಿ ಆಯ್ಕೆ ಮಾಡಿಕೊಳ್ಳುತ್ತಿವೆ.
ಆರ್ಥಿಕ ಚಟುವಟಿಕೆಗಳು ಹೆಚ್ಚಾದಂತೆ ಉದ್ಯೋಗಾವಕಾಶಗಳು ಸೃಷ್ಟಿಯಾಗಿ, ಮಧ್ಯಮ ವರ್ಗ ದವರ ಖರೀದಿ ಸಾಮರ್ಥ್ಯ ಹೆಚ್ಚಾಗುತ್ತದೆ. ಭಾರತ ಹೇಗೆ ಬಲಿಷ್ಠವಾಗುತ್ತಿದೆ ಎಂಬುದಕ್ಕೆ ಚಿಕ್ಕ ಉದಾಹರಣೆ. 2020ರ ಗಲ್ವಾನ್ ಸಂಘರ್ಷದ ನಂತರ ಚೀನಾ ತನ್ನ ಸಪ್ಲೈ ಚೈನ್ ಅನ್ನೇ ಒಂದು ಅಸ್ತ್ರವಾಗಿ ಬಳಸಿಕೊಂಡಿತು.
ಭಾರತದಲ್ಲಿ ಮೆಟ್ರೋ ರೈಲು ಯೋಜನೆಗಳು, ಹಿಮಾಲಯದ ಗಡಿ ರಸ್ತೆಗಳು ಮತ್ತು ಜಲವಿದ್ಯುತ್ ಯೋಜನೆಗಳಿಗೆ ಅತ್ಯಗತ್ಯವಾಗಿರುವ ಬೃಹತ್ ಸುರಂಗ ಕೊರೆಯುವ ಯಂತ್ರಗಳ ಪೂರೈಕೆಯಲ್ಲಿ ಚೀನಾ ಕಂಪನಿಗಳು ಉದ್ದೇಶಪೂರ್ವಕ ವಿಳಂಬ ಮಾಡಿದ್ದವು. ಯಂತ್ರಗಳನ್ನು ಜೋಡಿಸಲು ಮತ್ತು ದುರಸ್ತಿ ಮಾಡಲು ಬರಬೇಕಿದ್ದ ಚೀನಾದ ಎಂಜಿನಿಯರ್ಗಳಿಗೆ ವೀಸಾ ತೊಡಕುಗಳು ಹಾಗೂ ಚೀನಾ ಸರ್ಕಾರದ ಅಘೋಷಿತ ನಿರ್ಬಂಧಗಳಿಂದಾಗಿ ಭಾರತದ ಹಲವು ಮೆಟ್ರೋ ಮತ್ತು ಮೂಲ ಸೌಕರ್ಯ ಯೋಜನೆಗಳು ತಿಂಗಳುಗಟ್ಟಲೆ ಸ್ಥಗಿತಗೊಂಡಿದ್ದವು. ಆದರೆ ಇದೀಗ ಭಾರೀ ನಿರ್ಮಾಣ ಯಂತ್ರೋಪಕರಣಗಳ ಆಮದಿನಲ್ಲಿ ಚೀನಾ ಮೇಲಿನ ಅವಲಂಬನೆಯನ್ನು ತಗ್ಗಿಸಲು ಭಾರತ ಸರ್ಕಾರ 11000 ಕೋಟಿ ಮೊತ್ತದ ಯೋಜನೆಗೆ ಚಾಲನೆ ನೀಡಿದೆ.
ಅಗೆಯುವ ಯಂತ್ರಗಳು, ಬೃಹತ್ ಕ್ರೇನ್ಗಳು ಮತ್ತು ಸುರಂಗ ಕೊರೆಯುವ ಯಂತ್ರಗಳನ್ನು ದೇಶೀಯವಾಗಿಯೇ ತಯಾರಿಸುವ ಕಂಪನಿಗಳಿಗೆ ಮಾರಾಟ ಆಧಾರಿತ ಪ್ರೋತ್ಸಾಹಧನ ನೀಡುವ 8 ವರ್ಷಗಳ ಯೋಜನೆಗೆ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ. ಇಂಥ ಅನೇಕ ನಿದರ್ಶನಗಳಿವೆ.