ಒಂದೊಳ್ಳೆ ಮಾತು
ಸಮುದ್ರ ತೀರದಲ್ಲಿದ್ದ ಬೃಹತ್ ನೇರಳೆ ಮರವೊಂದರಲ್ಲಿ ‘ರಕ್ತಮುಖ’ ಎಂಬ ಹೆಸರಿನ ಚತುರ ಮಂಗವೊಂದು ವಾಸವಾಗಿತ್ತು. ಆ ಮರ ದಲ್ಲಿ ಅಮೃತದಂತೆ ಸಿಹಿಯಾದ ನೇರಳೆ ಹಣ್ಣು ಗಳು ಸದಾ ಬಿಡುತ್ತಿದ್ದವು. ಒಂದು ದಿನ ‘ಕರಾಲ ಮುಖ’ ಎಂಬ ಹೆಸರಿನ ಮೊಸಳೆಯೊಂದು ಆ ಮರದ ನೆರಳಿಗೆ ವಿಶ್ರಮಿಸಲು ಬಂತು. ಅತಿಥಿಯಾಗಿ ಬಂದ ಮೊಸಳೆಯನ್ನು ಕಂಡ ಮಂಗವು ಪ್ರೀತಿಯಿಂದ ಸಿಹಿಯಾದ ನೇರಳೆ ಹಣ್ಣುಗಳನ್ನು ಕಿತ್ತು ಕೆಳಗೆ ಎಸೆಯಿತು.
ಹಣ್ಣುಗಳನ್ನು ತಿಂದ ಮೊಸಳೆಗೆ ಅವುಗಳ ರುಚಿ ಬಹಳ ಹಿಡಿಸಿತು. ಅಂದಿನಿಂದ ಪ್ರತಿದಿನವೂ ಮೊಸಳೆ ಮರದ ಬಳಿ ಬರುವುದು, ಮಂಗವು ಹಣ್ಣು ಗಳನ್ನು ಕೊಡುವುದು, ಇಬ್ಬರೂ ಸುಖ-ದುಃಖಗಳನ್ನು ಹಂಚಿಕೊಳ್ಳುತ್ತಾ ಗೆಳೆತನ ಬೆಳೆಸುವುದು ನಿತ್ಯದ ಕ್ರಮವಾಯಿತು.
ಒಂದು ದಿನ ಮೊಸಳೆಯು ತನ್ನ ಪತ್ನಿಗೂ ಈ ರುಚಿಯಾದ ಹಣ್ಣುಗಳನ್ನು ಕೊಡಬೇಕೆಂದು ಕೆಲವು ಹಣ್ಣುಗಳನ್ನು ಮನೆಗೆ ಕೊಂಡೊಯ್ದಿತು. ಅವುಗಳನ್ನು ತಿಂದ ಮೊಸಳೆಯ ಪತ್ನಿಗೆ ದುರಾಸೆ ಹುಟ್ಟಿತು. ಅವಳು ತನ್ನ ಗಂಡನಿಗೆ, ಪ್ರತಿದಿನ ಇಂತಹ ಅಮೃತದಂತಹ ಹಣ್ಣುಗಳನ್ನು ತಿನ್ನುವ ಆ ಮಂಗನ ಹೃದಯ ಇನ್ನೆಷ್ಟು ಸಿಹಿಯಾಗಿರ ಬೇಡ! ನನಗೆ ಆ ಮಂಗನ ಹೃದಯವನ್ನು ತಿನ್ನಬೇಕೆಂಬ ಬಯಕೆಯಾಗಿದೆ, ಅದನ್ನು ತಂದು ಕೊಡು ಎಂದು ಹಠ ಹಿಡಿದಳು.
ಇದನ್ನೂ ಓದಿ: Roopa Gururaj Column: ಪಂಚತಂತ್ರ ಕಥೆಗಳು: ಹಂಸಗಳು ಮತ್ತು ದುಡುಕು ಸ್ವಭಾವದ ಆಮೆ
ಮೊದಲು ಮೊಸಳೆ ಅವನು ನನ್ನ ಆಪ್ತ ಮಿತ್ರ, ನಂಬಿಕೆದ್ರೋಹ ಮಾಡಲಾರೆ ಎಂದು ನಿರಾಕರಿ ಸಿತು. ಆದರೆ ಪತ್ನಿಯ ನಿರಂತರ ಒತ್ತಾಯ ಮತ್ತು ಮುನಿಸಿಗೆ ಮಣಿದ ಮೊಸಳೆ, ತನ್ನ ಗೆಳೆಯನನ್ನೇ ಬಲಿ ಕೊಡಲು ನಿರ್ಧರಿಸಿತು. ಮರುದಿನ ಮೊಸಳೆ ಮರದ ಬಳಿಗೆ ಬಂದು, ಮಿತ್ರನೇ, ನಿನ್ನ ಅತ್ತಿಗೆಯು ನಿನ್ನನ್ನು ಊಟಕ್ಕೆ ಆಹ್ವಾನಿಸಿದ್ದಾಳೆ. ನನ್ನ ಬೆನ್ನ ಮೇಲೆ ಕುಳಿತುಕೋ, ಸಮುದ್ರದ ಆಚೆ ದಡದಲ್ಲಿರುವ ನಮ್ಮ ಮನೆಗೆ ಕರೆದೊಯ್ಯುತ್ತೇನೆ ಎಂದು ನಯವಾಗಿ ನುಡಿಯಿತು.
ಗೆಳೆಯನ ಮಾತನ್ನು ಸಂಪೂರ್ಣವಾಗಿ ನಂಬಿದ ಮಂಗವು ಮೊಸಳೆಯ ಬೆನ್ನ ಮೇಲೆ ಕುಳಿತು ಪ್ರಯಾಣ ಬೆಳೆಸಿತು. ನೀರಿನ ಮಧ್ಯಭಾಗಕ್ಕೆ ಬಂದಾಗ, ಇನ್ನು ಮಂಗ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ವೆಂದು ಖಚಿತಪಡಿಸಿ ಕೊಂಡ ಮೂರ್ಖ ಮೊಸಳೆ ನಿಜಾಂಶವನ್ನು ಬಾಯಿ ಬಿಟ್ಟಿತು: ಮಿತ್ರನೇ, ಕ್ಷಮಿಸು. ಸಿಹಿಯಾದ ನೇರಳೆ ಹಣ್ಣುಗಳನ್ನು ತಿನ್ನುವ ನಿನ್ನ ಹೃದಯವನ್ನು ತಿನ್ನ ಬೇಕೆಂದು ನಿನ್ನ ಅತ್ತಿಗೆ ಬಯಸಿದ್ದಾಳೆ. ಅದಕ್ಕಾಗಿಯೇ ನಿನ್ನನ್ನು ಕರೆದೊಯ್ಯುತ್ತಿದ್ದೇನೆ ಎಂದಿತು.
ಸಾವಿನ ದವಡೆಯಲ್ಲಿದ್ದರೂ ಮಂಗವು ಎಳ್ಳಷ್ಟೂ ಅಂಜದೆ, ತಕ್ಷಣವೇ ಒಂದು ಅದ್ಭುತ ಉಪಾಯ ಹೂಡಿತು. ಅದು ನಗುತ್ತಾ, ಅಯ್ಯೋ ಮಿತ್ರನೇ, ಇದನ್ನೇ ಮೊದಲೇ ಹೇಳಬಾರದಿತ್ತೇ? ನನ್ನ ಹೃದಯವನ್ನು ನಾನು ಮರದ ಪೊಟರೆಯ ಸುರಕ್ಷಿತವಾಗಿ ಇಟ್ಟು ಬಂದಿದ್ದೇನೆ! ನನ್ನ ಅತ್ತಿಗೆಗೆ ನನ್ನ ಹೃದಯವನ್ನು ಅರ್ಪಿಸಲು ನನಗೆ ಅತೀವ ಸಂತೋಷವಿದೆ. ಬೇಗನೆ ಮರದ ಬಳಿಗೆ ಹಿಂತಿರುಗು, ಹೃದಯವನ್ನು ತೆಗೆದುಕೊಂಡು ಬರೋಣ ಎಂದಿತು.
ಮಂಗನ ಮಾತನ್ನು ನಂಬಿದ ದಡ್ಡ ಮೊಸಳೆ ತಕ್ಷಣವೇ ಹಿಂದಿರುಗಿ ಮರದ ದಡಕ್ಕೆ ಬಂತು. ದಡ ಕಂಡ ಮರುಕ್ಷಣವೇ ಮಂಗವು ಒಂದೇ ಜಿಗಿತಕ್ಕೆ ಮರದ ಎತ್ತರದ ಕೊಂಬೆಯನ್ನು ಏರಿ ಕುಳಿತು ಕೊಂಡಿತು. ಕೆಳಗೆ ಕಾಯುತ್ತಿದ್ದ ಮೊಸಳೆಯನ್ನು ನೋಡಿ, ಮೂರ್ಖನೇ, ದೇಹದಿಂದ ಬೇರ್ಪಟ್ಟ ಹೃದಯ ಎಲ್ಲಿಯಾದರೂ ಇರುತ್ತದೆಯೇ? ನಿನ್ನ ನಂಬಿಕೆದ್ರೋಹಕ್ಕೆ ತಕ್ಕ ಪಾಠ ಕಲಿತೆ. ಇನ್ನು ಮುಂದೆ ನನ್ನ ಹತ್ತಿರವೂ ಸುಳಿಯಬೇಡ ಎಂದು ಹೇಳಿ ಗೆಳೆತನಕ್ಕೆ ವಿದಾಯ ಹೇಳಿತು. ಕೈಗೆ ಸಿಕ್ಕಿದ್ದನ್ನು ಕಳೆದುಕೊಂಡ ಮೊಸಳೆ ಪೆಚ್ಚುಮೋರೆ ಹಾಕಿಕೊಂಡು ನೀರಿನಲ್ಲಿ ಮುಳುಗಿತು.
ಬದುಕಿನಲ್ಲಿ ನಾವು ಎಲ್ಲರನ್ನೂ ನಂಬುತ್ತೇವೆ, ಆದರೆ ಕೆಲವೊಮ್ಮೆ ಆಪ್ತರೇ ಸ್ವಾರ್ಥಕ್ಕೆ ಬಲಿಯಾಗಿ ನಮಗೆ ದ್ರೋಹ ಬಗೆಯುವ ಸಂದರ್ಭಗಳು ಎದುರಾಗಬಹುದು. ಅಂತಹ ಅನಿರೀಕ್ಷಿತ ಆಪತ್ತು ಎದುರಾದಾಗ ಭಯದಿಂದ ಕಂಗಾಲಾಗಿ ಯೋಚನಾಶಕ್ತಿಯನ್ನು ಕಳೆದುಕೊಳ್ಳಬಾರದು. ಸಂಕಷ್ಟದ ಸುಳಿಯಲ್ಲೂ ಮನಸ್ಸನ್ನು ಶಾಂತವಾಗಿಟ್ಟು ಕೊಂಡರೆ ಹೊರಬರುವ ದಾರಿ ತಾನಾಗಿಯೇ ಗೋಚರಿಸುತ್ತದೆ.
ಸಂಸ್ಕೃತದ ಸುಭಾಷಿತ ಹೇಳುವಂತೆ ‘ಸಮಯೇನ ಧಿಯಾ ಪ್ರಾಜ್ಞಃ ಶತ್ರುಮಪಿ ವಶಂ ನಯೇತ್’ (ಬುದ್ಧಿವಂತನು ಸಮಯಪ್ರಜ್ಞೆ ಮತ್ತು ವಿವೇಕದಿಂದ ಎಂತಹ ದೊಡ್ಡ ಶತ್ರುವನ್ನೂ ತನ್ನ ಹಿಡಿತಕ್ಕೆ ತೆಗೆದುಕೊಂಡು ಪಾರಾಗುತ್ತಾನೆ). ಇಂದಿನ ದಿನಗಳಲ್ಲಿ ಯಾರನ್ನೂ ಕುರುಡಾಗಿ ನಂಬದೆ ವಿವೇಚನೆಯಿಂದ ವರ್ತಿಸುವು ದನ್ನು, ಹಾಗೂ ಎಂತಹುದೇ ಒತ್ತಡದ ಪರಿಸ್ಥಿತಿಯಲ್ಲೂ ಧೃತಿಗೆಡದೆ ಉಪಾಯದಿಂದ ಅದರಿಂದ ಪಾರಾಗುವ ಸಮಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಜಾಣತನ.