ಒಂದೊಳ್ಳೆ ಮಾತು
ಒಂದಾನೊಂದು ಕಾಲದಲ್ಲಿ ಮಿತ್ರಶರ್ಮ ಎಂಬ ಹೆಸರಿನ ನಿಷ್ಠಾವಂತ ಹಾಗೂ ಸಾಧು ಸ್ವಭಾವದ ಬ್ರಾಹ್ಮಣನಿದ್ದನು. ಅವನು ಒಂದು ಯಜ್ಞವನ್ನು ಮಾಡಲು ಸಂಕಲ್ಪಿಸಿ, ಪಕ್ಕದ ಹಳ್ಳಿಯ ಯಜಮಾನನೊಬ್ಬನ ಮನೆಯಿಂದ ದಷ್ಟಪುಷ್ಟವಾದ, ಸುಂದರವಾದ ಆಡೊಂದನ್ನು ದಾನವಾಗಿ ಪಡೆದನು. ಅದನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ತನ್ನ ಗ್ರಾಮದತ್ತ ನಡೆಯತೊಡಗಿದನು.
ದಾರಿಯಲ್ಲಿ ಅವನನ್ನು ಗಮನಿಸಿದ ಮೂವರು ವಂಚಕರು ಆ ಕೊಬ್ಬಿದ ಆಡನ್ನು ಹೇಗಾದರೂ ಮಾಡಿ ಅಪಹರಿಸಿ ತಿನ್ನಬೇಕೆಂದು ಸಂಚು ಹೂಡಿದರು. ಬ್ರಾಹ್ಮಣನು ಧರ್ಮಭೀರು ಮತ್ತು ಮುಗ್ಧನೆಂದು ಅರಿತಿದ್ದ ಅವರು, ತಮ್ಮ ಬಾಹುಬಲದಿಂದ ಕಿತ್ತುಕೊಳ್ಳುವ ಬದಲು ವಂಚನೆಯಿಂದ ಅದನ್ನು ಪಡೆದುಕೊಳ್ಳಲು ನಿರ್ಧರಿಸಿದರು. ಯೋಜನೆಯಂತೆ, ಆ ಮೂವರು ದಾರಿಯ ಬೇರೆ ಬೇರೆ ಸ್ಥಳಗಳಲ್ಲಿ ಸ್ವಲ್ಪ ಅಂತರದಲ್ಲಿ ನಿಂತುಕೊಂಡರು. ಬ್ರಾಹ್ಮಣನು ಸ್ವಲ್ಪ ದೂರ ನಡೆದ ನಂತರ ಮೊದಲನೇ ವಂಚಕನು ಎದುರಾಗಿ, ಆಶ್ಚರ್ಯದಿಂದ ಬ್ರಾಹ್ಮಣನ ಹೆಗಲ ಮೇಲಿದ್ದ ಆಡನ್ನು ನೋಡಿ ನಗುತ್ತಾ, ಅಯ್ಯೋ ಬ್ರಾಹ್ಮಣೋತ್ತಮರೇ, ಇದೇನು ವಿಪರ್ಯಾಸ!
ಶಾಸ್ತ್ರಗಳನ್ನು ಅರಿತ ತಾವು ಹೆಗಲ ಮೇಲೆ ಅಪವಿತ್ರವಾದ ಕಪ್ಪು ನಾಯಿಯನ್ನು ಹೊತ್ತುಕೊಂಡು ಹೋಗುತ್ತಿದ್ದೀರಲ್ಲ? ಎಂದು ಕೇಳಿ ಮುಂದೆ ಸಾಗಿದನು. ಬ್ರಾಹ್ಮಣನಿಗೆ ತಕ್ಷಣ ಕೋಪ ಬಂತು. ಮೂರ್ಖ, ನಿನಗೆ ಕಣ್ಣು ಕಾಣುವುದಿಲ್ಲವೇ? ಇದು ಪವಿತ್ರ ಯಜ್ಞದ ಆಡು, ನಾಯಿಯಲ್ಲ! ಎಂದು ಬೈದು ಮುಂದೆ ನಡೆದನು.
ಇದನ್ನೂ ಓದಿ: Roopa Gururaj Column: ಪಂಚತಂತ್ರ ಕಥೆಗಳು: ದುಡುಕಿಗೆ ಬಲಿಯಾದ ಸ್ವಾಮಿನಿಷ್ಠ ಮುಂಗುಸಿ
ಇನ್ನೂ ಸ್ವಲ್ಪ ನಮ್ಮ ವಿಳಾಸ ದೂರ ಸಾಗಿದಾಗ, ಎರಡನೇ ವಂಚಕನು ಎದುರಾಗಿ ದುಃಖದಿಂದ ಎದೆಬಡಿದುಕೊಳ್ಳುತ್ತಾ, ಅಯ್ಯೋ ಕಲಿಯುಗದ ಮಹಿಮೆಯೇ! ನಿಷ್ಠಾವಂತ ಬ್ರಾಹ್ಮಣರೊಬ್ಬರು ಸತ್ತ ಕರುವನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿದ್ದಾರಲ್ಲ, ಎಂತಹ ಅಪಚಾರ! ಎಂದು ಉದ್ಗರಿಸಿ ಹೊರಟುಹೋದನು. ಈಗ ಬ್ರಾಹ್ಮಣನ ಮನಸ್ಸಿನಲ್ಲಿ ಸಣ್ಣದೊಂದು ಅನುಮಾನದ ಬೀಜ ಮೊಳಕೆಯೊಡೆಯಿತು. ಅವನು ಆಡನ್ನು ಕೆಳಗಿಳಿಸಿ, ಅದರ ಕಿವಿ, ಬಾಲ, ಕೊಂಬುಗಳನ್ನು ಮುಟ್ಟಿ ಪರೀಕ್ಷಿಸಿ, ಇದು ಆಡೇ ಹೌದು, ಆ ಇಬ್ಬರಿಗೆ ಕಣ್ಣು ಮಂಜಾಗಿರಬೇಕು ಎಂದು ಸಮಾಧಾನಪಟ್ಟು ಮತ್ತೆ ಹೆಗಲ ಮೇಲಿಟ್ಟುಕೊಂಡು ನಡೆದನು.
ಅಂತಿಮವಾಗಿ, ನಿರ್ಜನ ಪ್ರದೇಶದಲ್ಲಿ ಮೂರನೇ ವಂಚಕನು ಎದುರಾದನು. ಅವನು ಬ್ರಾಹ್ಮಣ ನನ್ನು ಕಂಡು ಅಸಹ್ಯದಿಂದ ಮೂಗು ಮುಚ್ಚಿಕೊಂಡು, ಸ್ವಾಮಿ, ತಾವು ದೊಡ್ಡ ವಿದ್ವಾಂಸರಂತೆ ಕಾಣುತ್ತೀರಿ. ಆದರೆ ತಮ್ಮ ಹೆಗಲ ಮೇಲೆ ಕತ್ತೆಯನ್ನ ಹೊತ್ತುಕೊಂಡು ಊರಿನೊಳಗೆ ಹೋದರೆ ಜನರು ನಿಮ್ಮನ್ನು ಬಹಿಷ್ಕರಿಸುವುದಿಲ್ಲವೇ? ಎಂದು ಗಂಭೀರವಾಗಿ ಹೇಳಿದನು.
ಮೂವರು ಬೇರೆ ಬೇರೆ ವ್ಯಕ್ತಿಗಳು ಒಂದೇ ಮಾತನ್ನು ಹೇಳಿದ್ದನ್ನು ಕೇಳಿದ ಬ್ರಾಹ್ಮಣನಿಗೆ ತನ್ನದೇ ಕಣ್ಣುಗಳ ಮೇಲೆ ನಂಬಿಕೆ ಹೊರಟುಹೋಯಿತು. ಒಬ್ಬರು ಸುಳ್ಳು ಹೇಳಬಹುದು, ಇಬ್ಬರು ಭ್ರಮೆಗೊಳಗಾಗಬಹುದು; ಆದರೆ ಮೂವರೂ ಒಂದೇ ರೀತಿ ಹೇಳುತ್ತಿದ್ದಾರೆಂದರೆ, ಖಂಡಿತ ವಾಗಿಯೂ ಇದು ಮಾಯಾವಿ ರಾಕ್ಷಸನಾಗಿರಬೇಕು, ಕ್ಷಣಕ್ಷಣಕ್ಕೂ ರೂಪ ಬದಲಿಸುತ್ತಿದೆ! ಎಂದು ಭಯಭೀತನಾದ ಬ್ರಾಹ್ಮಣನು, ಆಡನ್ನು ಅ ನೆಲಕ್ಕೆ ಎಸೆದು, ಹಿಂತಿರುಗಿಯೂ ನೋಡದೆ ಮನೆಗೆ ಓಡಿಹೋದನು. ಕಾದು ಕುಳಿತಿದ್ದ ಮೂವರು ವಂಚಕರು ಆಡನ್ನು ತೆಗೆದುಕೊಂಡು ಸಂಭ್ರಮದಿಂದ ಹೊರಟುಹೋದರು.
ನಮ್ಮ ಸ್ವಂತ ವಿವೇಚನೆ ಮತ್ತು ಸತ್ಯದ ಅರಿವಿನ ಮೇಲೆ ನಮಗೆ ದೃಢವಾದ ನಂಬಿಕೆ ಇಲ್ಲದಿದ್ದರೆ, ಸುತ್ತಲಿನ ಜನರು ಹಬ್ಬಿಸುವ ಸುಳ್ಳು ವದಂತಿಗಳು ನಮ್ಮನ್ನು ಸುಲಭವಾಗಿ ದಾರಿತಪ್ಪಿಸುತ್ತವೆ. ಒಂದೇ ಸುಳ್ಳನ್ನು ಹಲವರು ಸೇರಿ ಪದೇ ಪದೇ ಹೇಳಿದಾಗ, ಅದು ಸತ್ಯದಂತೆ ಭಾಸವಾಗುವ ಭ್ರಮೆಯನ್ನು ಸೃಷ್ಟಿಸುತ್ತದೆ.
ಸಂಸ್ಕೃತದ ಸುಭಾಷಿತ ಹೇಳುವಂತೆ ‘ಯಃ ಪಠತಿ ಲಿಖತಿ ಪಶ್ಯತಿ ಪರಿಪೃಚ್ಛತಿ ಪಂಡಿತಾನುಪಾ ಶ್ರಯತಿ | ತಸ್ಯ ದಿವಾಕರಕಿರಣೈರ್ನಳಿನೀವ ವಿಬುಧ್ಯತೇ ಬುದ್ಧಿಃ’ (ಯಾರು ಸ್ವತಃ ಪರಿಶೀಲಿಸಿ, ವಿಚಾರಿಸಿ, ಸತ್ಯವನ್ನು ಅರಿಯುತ್ತಾರೋ ಅವರ ಬುದ್ಧಿ ಸೂರ್ಯ ಕಿರಣಕ್ಕೆ ಅರಳುವ ಕಮಲದಂತೆ ವಿಕಸಿತವಾಗುತ್ತದೆ; ಪರರ ಮಾತನ್ನೇ ಕುರುಡಾಗಿ ನಂಬುವವನು ವಂಚನೆಗೆ ಒಳಗಾಗುತ್ತಾನೆ).
ಇಂದಿನ ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಸುಳ್ಳು ಸುದ್ದಿಗಳು ಮತ್ತು ಗುಂಪುಗಾರಿಕೆಯ ಅಭಿಪ್ರಾಯಗಳು ಕ್ಷಣಾರ್ಧದಲ್ಲಿ ಹರಡುತ್ತವೆ. ಅಂತಹ ಸಮಯದಲ್ಲಿ ಗುಂಪಿನ ಮಾತಿಗೆ ಮರುಳಾಗದೆ, ನಮ್ಮ ಕಣ್ಣಾರೆ ಕಂಡ ಸತ್ಯ ಮತ್ತು ಆತ್ಮಸಾಕ್ಷಿಯ ಮೇಲೆ ಅಚಲ ವಿಶ್ವಾಸವಿಟ್ಟು ನಿರ್ಧಾರ ತೆಗೆದುಕೊಳ್ಳುವ ಆತ್ಮಸ್ಥೈರ್ಯ ನಮ್ಮಲ್ಲಿರಬೇಕು.