ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಪಂಚತಂತ್ರ ಕಥೆಗಳು: ದುಡುಕಿಗೆ ಬಲಿಯಾದ ಸ್ವಾಮಿನಿಷ್ಠ ಮುಂಗುಸಿ

ಒಂದು ದಿನ ಬ್ರಾಹ್ಮಣನ ಪತ್ನಿಯು ನೀರು ತರಲು ಕೊಳಕ್ಕೆ ಹೋಗಬೇಕಾಯಿತು. ಅವಳು ಮಲಗಿದ್ದ ಮಗುವಿನ ಪಕ್ಕದಲ್ಲಿ ಮುಂಗುಸಿಯನ್ನು ಕಂಡು, ತನ್ನ ಪತಿಗೆ, ಸ್ವಾಮಿ, ನಾನು ನೀರು ತರಲು ಹೋಗುತ್ತಿದ್ದೇನೆ. ನಾನು ಬರುವವರೆಗೂ ಈ ಮುಂಗುಸಿಯಿಂದ ಮಗುವಿಗೆ ಯಾವ ತೊಂದರೆಯಾಗ ದಂತೆ ಎಚ್ಚರದಿಂದ ನೋಡಿಕೊಳ್ಳಿ ಎಂದು ಹೇಳಿ ಹೊರಟಳು. ಅವಳು ಹೋದ ಸ್ವಲ್ಪ ಹೊತ್ತಿಗೇ, ಬ್ರಾಹ್ಮಣನಿಗೆ ರಾಜನ ಅರಮನೆಯಿಂದ ಪೂಜೆ ಹಾಗೂ ದಾನ ಸ್ವೀಕರಿಸಲು ತುರ್ತು ಕರೆ ಬಂದಿತು.

ಪಂಚತಂತ್ರ ಕಥೆಗಳು: ದುಡುಕಿಗೆ ಬಲಿಯಾದ ಸ್ವಾಮಿನಿಷ್ಠ ಮುಂಗುಸಿ

-

ಒಂದೊಳ್ಳೆ ಮಾತು

ದಕ್ಷಿಣಾಪಥದ ನಗರವೊಂದರಲ್ಲಿ ದೇವ ಶರ್ಮ ಎಂಬ ಬಡ ಆದರೆ ಸಜ್ಜನ ಬ್ರಾಹ್ಮಣನು ತನ್ನ ಪತ್ನಿಯೊಂದಿಗೆ ವಾಸವಾಗಿದ್ದನು. ಅವರಿಗೆ ಬಹುಕಾಲದ ನಂತರ ಒಂದು ಮುದ್ದಾದ ಗಂಡು ಮಗು ಜನಿಸಿತು. ಅದೇ ಸಮಯದಲ್ಲಿ ಆ ಮನೆಯ ಹಿತ್ತಲಲ್ಲಿ ಒಂದು ಪುಟ್ಟ ಮುಂಗುಸಿಯ ಮರಿಯೂ ಹುಟ್ಟಿತ್ತು. ಬ್ರಾಹ್ಮಣನ ಪತ್ನಿಯು ಆ ಮುಂಗುಸಿಯನ್ನು ತನ್ನ ಸ್ವಂತ ಮಗುವಿನಂತೆಯೇ ಪ್ರೀತಿಯಿಂದ ಸಾಕಿ ಸಲಹಿದ್ದಳು.

ಮಗು ಮತ್ತು ಮುಂಗುಸಿ ಒಟ್ಟಿಗೆ ಆಡುತ್ತಾ, ಒಂದೇ ತೊಟ್ಟಿಲಿನ ನೆರಳಲ್ಲಿ ಬೆಳೆಯತೊಡಗಿದವು. ಆದರೂ, ತಾಯಿಯ ಸಹಜ ಆತಂಕದಿಂದ ಬ್ರಾಹ್ಮಣನ ಪತ್ನಿಗೆ ಒಮ್ಮೊಮ್ಮೆ, ಈ ಮುಂಗುಸಿ ಪ್ರಾಣಿಯಲ್ಲವೇ? ನಮ್ಮ ಪುಟ್ಟ ಮಗುವಿಗೆ ಏನಾ ದರೂ ಅಪಾಯ ಮಾಡಿದರೆ ಗತಿಯೇನು? ಎಂಬ ಸಣ್ಣ ಭಯ ಕಾಡುತ್ತಿತ್ತು.

ಒಂದು ದಿನ ಬ್ರಾಹ್ಮಣನ ಪತ್ನಿಯು ನೀರು ತರಲು ಕೊಳಕ್ಕೆ ಹೋಗಬೇಕಾಯಿತು. ಅವಳು ಮಲಗಿದ್ದ ಮಗುವಿನ ಪಕ್ಕದಲ್ಲಿ ಮುಂಗುಸಿಯನ್ನು ಕಂಡು, ತನ್ನ ಪತಿಗೆ, ಸ್ವಾಮಿ, ನಾನು ನೀರು ತರಲು ಹೋಗುತ್ತಿದ್ದೇನೆ. ನಾನು ಬರುವವರೆಗೂ ಈ ಮುಂಗುಸಿಯಿಂದ ಮಗುವಿಗೆ ಯಾವ ತೊಂದರೆಯಾಗದಂತೆ ಎಚ್ಚರದಿಂದ ನೋಡಿಕೊಳ್ಳಿ ಎಂದು ಹೇಳಿ ಹೊರಟಳು. ಅವಳು ಹೋದ ಸ್ವಲ್ಪ ಹೊತ್ತಿಗೇ, ಬ್ರಾಹ್ಮಣನಿಗೆ ರಾಜನ ಅರಮನೆಯಿಂದ ಪೂಜೆ ಹಾಗೂ ದಾನ ಸ್ವೀಕರಿಸಲು ತುರ್ತು ಕರೆ ಬಂದಿತು.

ಇದನ್ನೂ ಓದಿ: Roopa Gururaj Column: ಪಂಚತಂತ್ರ ಕಥೆಗಳು: ಮಂಗನ ಹೃದಯ ಮರದ ಮೇಲಿದೆ

ದಾರಿದ್ರ್ಯದಲ್ಲಿದ್ದ ಬ್ರಾಹ್ಮಣನಿಗೆ ಆ ಅವಕಾಶವನ್ನು ಬಿಡಲು ಮನಸ್ಸಾಗಲಿಲ್ಲ. ಮುಂಗುಸಿ ಮಗುವನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತದೆ, ನಾನು ಬೇಗನೆ ಹೋಗಿ ಬರುತ್ತೇನೆ ಎಂದು ಭಾವಿಸಿ, ಮಗುವನ್ನು ಮುಂಗುಸಿಯ ಕಾವಲಿಗೆ ಬಿಟ್ಟು ಅರಮನೆಗೆ ತೆರಳಿದನು. ಬ್ರಾಹ್ಮಣನು ಹೋದ ಕೆಲವೇ ಕ್ಷಣಗಳಲ್ಲಿ, ಮನೆಯ ಮೂಲೆಯಲ್ಲಿದ್ದ ಬಿಲದಿಂದ ಒಂದು ವಿಷಪೂರಿತ ಕಪ್ಪು ಹಾವು ಹೊರಬಂದು, ತೊಟ್ಟಿ ಲಲ್ಲಿ ಮಲಗಿದ್ದ ಪುಟ್ಟ ಮಗುವಿನ ಕಡೆಗೆ ಸರಿಯ ತೊಡಗಿತು. ಇದನ್ನು ಕಂಡ ನಿಷ್ಠಾವಂತ ಮುಂಗುಸಿಯು ತನ್ನ ಜೀವದ ಹಂಗನ್ನೂ ತೊರೆದು ಹಾವಿನ ಮೇಲೆ ಎರಗಿತು.

ಭೀಕರ ಕಾದಾಟ ನಡೆದು, ಮುಂಗುಸಿಯು ತನ್ನ ಚೂಪಾದ ಹಲ್ಲುಗಳಿಂದ ಹಾವನ್ನು ತುಂಡು ತುಂಡಾಗಿ ಕತ್ತರಿಸಿ ಕೊಂದು, ಮಗುವಿನ ಪ್ರಾಣವನ್ನು ರಕ್ಷಿಸಿತು. ತನ್ನ ಒಡೆಯನ ಮಗುವನ್ನು ಉಳಿಸಿದ ಹೆಮ್ಮೆ ಮತ್ತು ಸಂಭ್ರಮದಿಂದ ಮುಂಗುಸಿಯು ಮನೆಯ ಬಾಗಿಲ ಬಳಿಗೆ ಓಡಿಬಂತು. ಅದರ ಬಾಯಿ ಮತ್ತು ಕಾಲುಗಳಿಗೆ ಹಾವಿನ ರಕ್ತ ಮೆತ್ತಿಕೊಂಡಿತ್ತು. ಅಷ್ಟರಲ್ಲಿ ಕೊಳದಿಂದ ನೀರಿನ ಕೊಡ ಹೊತ್ತು ಮರಳಿದ ಬ್ರಾಹ್ಮಣನ ಪತ್ನಿಯು, ಬಾಗಿಲ ರಕ್ತಸಿಕ್ತ ಮುಖದೊಂದಿಗೆ ನಿಂತಿದ್ದ ಮುಂಗುಸಿಯನ್ನು ಕಂಡಳು. ಅವಳ ಎದೆ ಧಸಕ್ಕೆಂದಿತು.

ಅಯ್ಯೋ! ನಾನು ಮೊದಲೇ ಊಹಿಸಿದಂತೆ ಈ ಕ್ರೂರ ಪ್ರಾಣಿ ನನ್ನ ಮಗುವನ್ನೇ ಕಚ್ಚಿ ಕೊಂದು ಬಿಟ್ಟಿದೆ! ಎಂದು ಒಳಹೋಗಿ ನೋಡುವ ತಾಳ್ಮೆ ಯನ್ನೂ ತೋರದೆ, ಆವೇಶ ಮತ್ತು ದುಃಖದಿಂದ ತನ್ನ ಕೈಯಲ್ಲಿದ್ದ ನೀರು ತುಂಬಿದ ಭಾರವಾದ ಕೊಡವನ್ನು ಮುಂಗುಸಿಯ ತಲೆಯ ಮೇಲೆ ಬಲವಾಗಿ ಎಸೆದಳು. ಮುಂಗುಸಿಯು ಅ ಪ್ರಾಣ ಬಿಟ್ಟಿತು. ಅಳುತ್ತಾ ಮನೆಯೊಳಗೆ ಓಡಿ ಬಂದ ತಾಯಿಗೆ ಅಲ್ಲಿ ಕಂಡ ದೃಶ್ಯದಿಂದ ಆಕಾ ಶವೇ ತಲೆಮೇಲೆ ಬಿದ್ದಂತಾಯಿತು!

ತೊಟ್ಟಿಲಲ್ಲಿ ಅವಳ ಮಗು ಸುರಕ್ಷಿತವಾಗಿ ನಗುತ್ತಾ ಮಲಗಿತ್ತು, ತೊಟ್ಟಿಲಿನ ಕೆಳಗೆ ವಿಷಸರ್ಪ ವೊಂದು ತುಂಡು ತುಂಡಾಗಿ ಸತ್ತು ಬಿದ್ದಿತ್ತು! ನಡೆದ ಸತ್ಯವನ್ನು ಅರಿತ ಅವಳು, ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮಗುವನ್ನು ಉಳಿಸಿದ ನಿಷ್ಠಾವಂತ ಮುಂಗುಸಿಯನ್ನು ತಾನೇ ಅವಿವೇಕದಿಂದ ಕೊಂದುಹಾಕಿದೆ ನ ಎಂದು ಎದೆಬಡಿದುಕೊಂಡು ರೋದಿಸಿ ದಳು. ಹಿಂದಿರು ಗಿದ ಬ್ರಾಹ್ಮಣನೂ ತನ್ನ ಆತುರದ ನಿರ್ಧಾರಕ್ಕೆ ಮರುಗಿ, ಇಬ್ಬರೂ ಜೀವನಪರ್ಯಂತ ಪಶ್ಚಾ ತ್ತಾಪದ ಬೆಂಕಿಯಲ್ಲಿ ಬೇಯುವಂತಾಯಿತು.

ನಮ್ಮ ಕಣ್ಣಿಗೆ ಕಾಣುವುದೆಲ್ಲವೂ ಸತ್ಯವಾಗಿರುವುದಿಲ್ಲ, ಕಿವಿಗೆ ಕೇಳು ವುದೆಲ್ಲವೂ ನಿಜವಾಗಿರು ವುದಿಲ್ಲ. ಯಾವುದೇ ಒಂದು ಘಟನೆ ಅಥವಾ ವ್ಯಕ್ತಿಯ ಬಗ್ಗೆ ನಿರ್ಧಾರಕ್ಕೆ ಬರುವ ಮುನ್ನ ಪೂರ್ವಾಪರಗಳನ್ನು ವಿಚಾರಿಸಿ, ಸತ್ಯಾಸತ್ಯತೆ ಯನ್ನು ಪರೀಕ್ಷಿಸುವ ಸಂಯಮ ನಮ್ಮಲ್ಲಿರ ಬೇಕು. ಆತುರದಲ್ಲಿ ತೆಗೆದುಕೊಂಡ ಒಂದು ತಪ್ಪು ನಿರ್ಧಾರ ನಮ್ಮ ಜೀವನವನ್ನೇ ಬದಲಾಯಿಸಿ ಬಿಡಬಹುದು. ಸಂಸ್ಕೃತದ ಸುಭಾಷಿತ ಹೇಳುವಂತೆ ‘ಸಹಸಾ ವಿದಧೀತ ನ ಕ್ರಿಯಾಮವಿವೇಕಃ ಪರಮಾಪದಾಂ ಪದಮ’ (ಯಾವುದೇ ಕೆಲಸವನ್ನೂ ವಿವೇಚನೆ ಯಿಲ್ಲದೆ ಆತುರದಿಂದ ಮಾಡಬಾರದು; ಅವಿವೇಕವು ಮಹಾ ಆಪತ್ತುಗಳಿಗೆ ದಾರಿ ಮಾಡಿ ಕೊಡುತ್ತದೆ).

ಇಂದಿನ ವೇಗದ ಜಗತ್ತಿನಲ್ಲಿ ಸಣ್ಣಪುಟ್ಟ ಅಪಾರ್ಥಗಳಿಗೆ ತಕ್ಷಣವೇ ಕೋಪಗೊಂಡು, ಪೂರ್ತಿ ವಿಷಯ ತಿಳಿಯದೆ ಸಂಬಂಧಗಳನ್ನು ಕಡಿದುಕೊಳ್ಳುವ ಅಥವಾ ದುಡುಕಿನ ನಿರ್ಧಾರ ತೆಗೆದು ಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಮಕ್ಕಳಿಗೆ ಬಾಲ್ಯದಿಂದಲೇ ‘ತಾಳ್ಮೆಯಿಂದ ಪರೀಕ್ಷಿಸಿ, ನಂತರ ಪ್ರತಿಕ್ರಿಯಿಸಿ’ ಎನ್ನುವ ಕಿವಿ ಮಾತನ್ನ ಮನವರಿಕೆ ಮಾಡಿಕೊಟ್ಟು ನಾವು ಕೂಡ ಪಾಲಿಸಬೇಕು.