ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಪಂಚತಂತ್ರ ಕಥೆಗಳು: ಬ್ರಾಹ್ಮಣನ ಶ್ರೀಮಂತನಾಗುವ ಹಗಲುಗನಸು

ಒಂದು ದಿನ ಅವನಿಗೆ ಭಿಕ್ಷೆಯಲ್ಲಿ ಯಥೇಚ್ಛವಾಗಿ ಅಕ್ಕಿ ಹಿಟ್ಟು (ಸಕ್ತು) ದೊರೆಯಿತು. ಅದರಲ್ಲಿ ಸ್ವಲ್ಪ ಭಾಗವನ್ನು ತಿಂದ ಅವನು, ಉಳಿದ ಹಿಟ್ಟನ್ನು ಒಂದು ಮಣ್ಣಿನ ಮಡಕೆಯಲ್ಲಿ ತುಂಬಿ, ಅದನ್ನು ತನ್ನ ಮಂಚದ ಪಕ್ಕದ ಗೋಡೆಯ ಗೂಟಕ್ಕೆ ನೇತುಹಾಕಿದನು. ರಾತ್ರಿ ಊಟವಾದ ನಂತರ ಮಂಚದ ಮೇಲೆ ಮಲಗಿದ ಅವನ ದೃಷ್ಟಿ ಆ ಮಡಕೆಯ ಮೇಲೆಯೇ ನೆಟ್ಟಿತ್ತು.

ಒಂದೊಳ್ಳೆ ಮಾತು

ವರ್ತಮಾನದ ಪರಿಶ್ರಮವನ್ನು ಮರೆತು, ಕೇವಲ ಭವಿಷ್ಯದ ಅತಿಯಾದ ಆಸೆ ಮತ್ತು ಹಗಲು ಗನಸಿನ ಲೋಕದಲ್ಲಿ ತೇಲಾಡಿದರೆ ಕೈಯಲ್ಲಿರುವ ಅಲ್ಪ ಸಂಪತ್ತೂ ಹೇಗೆ ನಾಶವಾಗುತ್ತದೆ ಎಂಬುದನ್ನು ಸ್ವಭಾವಕೃಪಣ ಕಥೆ ಮನೋಜ್ಞವಾಗಿ ನಿರೂಪಿಸುತ್ತದೆ. ಒಂದಾನೊಂದು ಕಾಲದಲ್ಲಿ ಒಂದು ನಗರದಲ್ಲಿ ‘ಸ್ವಭಾವಕೃಪಣ’ ಎಂಬ ಹೆಸರಿನ ಬಡ ಬ್ರಾಹ್ಮಣನೊಬ್ಬ ವಾಸವಾಗಿದ್ದನು. ಅವನು ನಿತ್ಯವೂ ಭಿಕ್ಷೆ ಬೇಡಿ ತಂದ ಹಿಟ್ಟಿನಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದನು.

ಒಂದು ದಿನ ಅವನಿಗೆ ಭಿಕ್ಷೆಯಲ್ಲಿ ಯಥೇಚ್ಛವಾಗಿ ಅಕ್ಕಿ ಹಿಟ್ಟು (ಸಕ್ತು) ದೊರೆಯಿತು. ಅದರಲ್ಲಿ ಸ್ವಲ್ಪ ಭಾಗವನ್ನು ತಿಂದ ಅವನು, ಉಳಿದ ಹಿಟ್ಟನ್ನು ಒಂದು ಮಣ್ಣಿನ ಮಡಕೆಯಲ್ಲಿ ತುಂಬಿ, ಅದನ್ನು ತನ್ನ ಮಂಚದ ಪಕ್ಕದ ಗೋಡೆಯ ಗೂಟಕ್ಕೆ ನೇತುಹಾಕಿದನು. ರಾತ್ರಿ ಊಟವಾದ ನಂತರ ಮಂಚದ ಮೇಲೆ ಮಲಗಿದ ಅವನ ದೃಷ್ಟಿ ಆ ಮಡಕೆಯ ಮೇಲೆಯೇ ನೆಟ್ಟಿತ್ತು.

ನಿದ್ರೆ ಬಾರದೆ ಅವನ ಮನಸ್ಸು ಕಲ್ಪನೆಯ ರೆಕ್ಕೆಗಳನ್ನು ಕಟ್ಟಿಕೊಂಡು ಹಾರತೊಡಗಿತು: ಈ ಮಡಕೆಯಲ್ಲಿ ಹಿಟ್ಟು ತುಂಬಿದೆ. ಮುಂದೆ ಈ ದೇಶದಲ್ಲಿ ಭೀಕರ ಬರಗಾಲ ಬರುತ್ತದೆ. ಆಗ ಈ ಒಂದು ಮಡಕೆ ಹಿಟ್ಟಿಗೆ ನೂರು ರೂಪಾಯಿ ಬೆಲೆ ಬರುತ್ತದೆ! ಆ ಹಣದಿಂದ ನಾನು ಎರಡು ಆಡುಗಳನ್ನು ಕೊಳ್ಳುತ್ತೇನೆ. ಅವು ಆರು ತಿಂಗಳಿಗೊಮ್ಮೆ ಮರಿ ಹಾಕಿ, ಕೆಲವೇ ವರ್ಷಗಳಲ್ಲಿ ನನ್ನ ಬಳಿ ದೊಡ್ಡ ಆಡುಗಳ ಹಿಂಡೇ ಸೇರುತ್ತದೆ. ನಂತರ ಆ ಆಡುಗಳನ್ನು ಮಾರಿ ನಾನು ಅನೇಕ ಹಸುಗಳನ್ನು ಕೊಳ್ಳುತ್ತೇನೆ. ಆ ಹಸುಗಳ ಹಾಲು, ಮೊಸರು, ಬೆಣ್ಣೆ, ತುಪ್ಪವನ್ನು ಮಾರಿ ನಾನು ಅಪಾರ ಶ್ರೀಮಂತನಾಗುತ್ತೇನೆ!

ಇದನ್ನೂ ಓದಿ: Roopa Gururaj Column: ಪಂಚತಂತ್ರ ಕಥೆಗಳು: ಬ್ರಹ್ಮರಾಕ್ಷಸ, ಕಳ್ಳ ಮತ್ತು ಬ್ರಾಹ್ಮಣ

ಅವನ ಹಗಲುಗನಸು ಇಲ್ಲಿಗೇ ನಿಲ್ಲಲಿಲ್ಲ: ಆ ಸಂಪತ್ತಿನಿಂದ ನಾನು ನಾಲ್ಕು ಅಂತಸ್ತಿನ ಭವ್ಯವಾದ ಅರಮನೆಯನ್ನು ಕಟ್ಟಿಸುತ್ತೇನೆ. ಆಗ ನನ್ನ ಶ್ರೀಮಂತಿಕೆಯನ್ನು ಕಂಡು ಒಬ್ಬ ಶ್ರೀಮಂತ ಬ್ರಾಹ್ಮಣನು ತನ್ನ ಸುಂದರ ಕನ್ಯೆಯನ್ನು ನನಗೆ ಮದುವೆ ಮಾಡಿಕೊಡುತ್ತಾನೆ. ನಮಗೊಂದು ಮುzದ ಗಂಡು ಮಗು ಹುಟ್ಟುತ್ತದೆ. ನಾನು ಆ ಮಗುವಿಗೆ ‘ಸೋಮಶರ್ಮ’ ಎಂದು ಹೆಸರಿಡುತ್ತೇನೆ!

ಕಲ್ಪನೆಯ ಅಲೆಯಲ್ಲಿ ಮುಳುಗಿದ್ದ ಅವನು ಮುಂದುವರಿದು, ಒಂದು ದಿನ ನಾನು ಅಂಗಳದಲ್ಲಿ ಕುಳಿತು ಶಾಸ ಗ್ರಂಥಗಳನ್ನು ಓದುತ್ತಿರುವಾಗ, ಪುಟ್ಟ ಸೋಮಶರ್ಮನು ಆಟವಾಡುತ್ತಾ ಕುದುರೆ ಲಾಯದ ಕಡೆಗೆ ಹೋಗುತ್ತಾನೆ. ಕುದುರೆಗಳು ಅವನನ್ನು ತುಳಿಯುವ ಅಪಾಯವನ್ನು ಕಂಡು ನಾನು ನನ್ನ ಹೆಂಡತಿಗೆ, ‘ಹೇಯ, ಮಗುವನ್ನು ಹಿಡಿ!’ ಎಂದು ಕೂಗುತ್ತೇನೆ. ಅವಳು ಮನೆಗೆಲಸದಲ್ಲಿ ಮುಳುಗಿ ನನ್ನ ಮಾತು ಕೇಳಿಸಿಕೊಳ್ಳದಿದ್ದರೆ, ನಾನು ಕೋಪದಿಂದ ಎದ್ದು ಹೋಗಿ ಅವಳಿಗೆ ಕಾಲಿನಿಂದ ಹೀಗೆ ಒದೆಯುತ್ತೇನೆ! ಎಂದು ಕಲ್ಪಿಸಿಕೊಂಡು, ಮಂಚದ ಮೇಲೆ ಮಲಗಿದ್ದವನು ನಿಜವಾಗಿಯೂ ತನ್ನ ಕಾಲನ್ನು ಜೋರಾಗಿ ಮೇಲಕ್ಕೆ ಬೀಸಿದನು! ಅವನ ಕಾಲು ನೇರವಾಗಿ ಗೋಡೆಯ ಗೂಟಕ್ಕೆ ನೇತುಹಾಕಿದ್ದ ಮಣ್ಣಿನ ಮಡಕೆಗೆ ಬಲವಾಗಿ ತಗುಲಿತು.

‘ಢಮಾರ್’ ಎಂಬ ಶಬ್ದದೊಂದಿಗೆ ಮಡಕೆ ಒಡೆದು ಚೂರಾಯಿತು; ಅದರಲ್ಲಿದ್ದ ಬಿಳಿ ಹಿಟ್ಟೆ ಅವನ ಮೈಮೇಲೆ ಸುರಿದು ಅವನನ್ನು ಬಿಳಿಯ ಭೂತದಂತೆ ಮಾಡಿತು. ಕ್ಷಣಾರ್ಧದಲ್ಲಿ ಅವನ ಅರಮನೆ, ಸಂಪತ್ತು, ಹೆಂಡತಿ, ಮಗು ಎಲ್ಲವೂ ಕಣ್ಮರೆಯಾಗಿ, ಮತ್ತೆ ಅದೇ ಬಡತನದ ಗುಡಿಸಿಲಿನ ವಾಸ್ತವ ಎದುರಾಯಿತು.

ನಿಜವೇ ಅಲ್ಲವೇ ನಾವು ಕೂಡ ಇದೇ ರೀತಿ ಇಂದಿಗೆ ಆದ ಚಿಕ್ಕ ಯಶಸ್ಸನ್ನ ದೊಡ್ಡದಾಗಿ ಆಚರಿಸು ತ್ತಾ ನಾಳೆ ಬರುವ ನೂರು ಸವಾಲುಗಳನ್ನ ಹೇಗೆ ಎದುರಿಸುವುದು ಎಂದು ಮರೆತೇ ಬಿಡುತ್ತೇವೆ. ಹಗಲುಗನಸು ಕಾಣುತ್ತಾ ಕುಳಿತರೆ ಎಂದಿಗೂ ಕೂಡ ಯಶಸ್ಸು ಸಿಗುವುದಿಲ್ಲ. ಅದಕ್ಕಾಗಿ ಪಡುವ ಪರಿಶ್ರಮವನ್ನು ನಾವು ಪಡಲೇಬೇಕು. ವಿಷ್ಣುಶರ್ಮನ ‘ಪಂಚತಂತ್ರ’ ಮತ್ತು ಸೋಮ ದೇವನ ‘ಕಥಾಸರಿತ್ಸಾಗರ’ದ ಈ ನೀತಿಕ ಥೆಗಳು ಕೇವಲ ಪ್ರಾಣಿ-ಪಕ್ಷಿಗಳ ರಂಜನೀಯ ಕಥೆಗಳಲ್ಲ; ಅವು ಮನುಷ್ಯನ ಮನೋವಿಜ್ಞಾನ, ರಾಜನೀತಿ ಮತ್ತು ನಿತ್ಯ ಬದುಕಿನ ವ್ಯಾವಹಾರಿಕ ಜ್ಞಾನದ ವಿಶ್ವಕೋಶಗಳಾಗಿವೆ.

ಇಂತಹ ಕಥೆಗಳನ್ನು ಓದಿ ಮನೆಯ ಮಕ್ಕಳಿಗೂ ತಲುಪಿಸಿ ಮುಂದೆ ಅವರು ಒಳ್ಳೆಯ ಬೌದ್ಧಿಕ ಧೈರ್ಯ ವಿವೇಚನೆ ಮತ್ತು ಮಾನವೀಯ ಮೌಲ್ಯಗಳೊಂದಿಗೆ ಬದುಕನ್ನು ಎದುರಿಸಲು ಹುರಿದುಂಬಿಸೋಣ. ಇಂದಿಗೆ ಪಂಚತಂತ್ರದ ಕಥೆಗಳು ಮುಗಿದವು.

ರೂಪಾ ಗುರುರಾಜ್

View all posts by this author