ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಪಂಚತಂತ್ರ ಕಥೆಗಳು: ಬ್ರಹ್ಮರಾಕ್ಷಸ, ಕಳ್ಳ ಮತ್ತು ಬ್ರಾಹ್ಮಣ

ಒಂದು ದಿನ ಅಮಾವಾಸ್ಯೆಯ ಕಗ್ಗತ್ತಲ ರಾತ್ರಿ, ಕಳ್ಳನು ಕರುಗಳನ್ನು ಕದಿಯಲು ಹಗ್ಗವನ್ನು ಹಿಡಿದು ಬ್ರಾಹ್ಮಣನ ಮನೆಯತ್ತ ಹೊರಟನು.ದಾರಿಯಲ್ಲಿ ಅವನಿಗೆ ಭಯಂಕರ ರೂಪದ, ಕೆಂಪು ಕಣ್ಣುಗಳ ಹಾಗೂ ಉದ್ದನೆಯ ಕೋರೆಹಲ್ಲುಗಳ ‘ಸತ್ಯ ವಚನ’ ಎಂಬ ಹೆಸರಿನ ಬ್ರಹ್ಮರಾಕ್ಷಸನೊಬ್ಬನು ಎದುರಾ ದನು. ಇಬ್ಬರೂ ಒಬ್ಬರನ್ನೊಬ್ಬರು ಕಂಡು ನಿಂತು, ನೀನು ಯಾರು ಮತ್ತು ಎಲ್ಲಿಗೆ ಹೋಗುತ್ತಿದ್ದೀಯಾ? ಎಂದು ಪ್ರಶ್ನಿಸಿದನು.

ಪಂಚತಂತ್ರ ಕಥೆಗಳು: ಬ್ರಹ್ಮರಾಕ್ಷಸ, ಕಳ್ಳ ಮತ್ತು ಬ್ರಾಹ್ಮಣ

-

ಒಂದೊಳ್ಳೆ ಮಾತು

ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಯಲ್ಲಿ ‘ದ್ರೋಣ’ ಎಂಬ ಬಡ ಸಾತ್ವಿಕ ಧರ್ಮನಿಷ್ಠ ಬ್ರಾಹ್ಮಣ ವಾಸವಾಗಿದ್ದನು. ಅವನು ಬಡತನದಲ್ಲಿದ್ದರೂ ನಿತ್ಯವೂ ತನ್ನ ಪೂಜೆ, ವ್ರತಗಳನ್ನು ತಪ್ಪದೆ ಆಚರಿಸುತ್ತಿದ್ದನು. ಅವನ ಸಜ್ಜನಿಕೆಗೆ ಮೆಚ್ಚಿದ ಯಜಮಾನನೊಬ್ಬನು ಅವನಿಗೆ ಎರಡು ಸುಂದರವಾದ, ದಷ್ಟಪುಷ್ಟವಾದ ಕರುಗಳನ್ನು ದಾನವಾಗಿ ನೀಡಿದನು. ಬ್ರಾಹ್ಮಣನು ಅವುಗಳನ್ನು ತನ್ನ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ, ಅತ್ಯಂತ ಪ್ರೀತಿಯಿಂದ ಹುಲ್ಲು, ನೀರು ಕೊಟ್ಟು ಸಲಹುತ್ತಿದ್ದನು. ಆ ಕೊಬ್ಬಿದ ಕರುಗಳನ್ನು ಕಂಡು ಅದೇ ಊರಿನ ‘ಕ್ರೂರಕರ್ಮ’ ಎಂಬ ಕಳ್ಳನಿಗೆ ಅವುಗಳನ್ನು ಕದಿಯ ಬೇಕೆಂಬ ದುರಾಸೆ ಹುಟ್ಟಿತು.

ಒಂದು ದಿನ ಅಮಾವಾಸ್ಯೆಯ ಕಗ್ಗತ್ತಲ ರಾತ್ರಿ, ಕಳ್ಳನು ಕರುಗಳನ್ನು ಕದಿಯಲು ಹಗ್ಗವನ್ನು ಹಿಡಿದು ಬ್ರಾಹ್ಮಣನ ಮನೆಯತ್ತ ಹೊರಟನು.ದಾರಿಯಲ್ಲಿ ಅವನಿಗೆ ಭಯಂಕರ ರೂಪದ, ಕೆಂಪು ಕಣ್ಣುಗಳ ಹಾಗೂ ಉದ್ದನೆಯ ಕೋರೆಹಲ್ಲುಗಳ ‘ಸತ್ಯ ವಚನ’ ಎಂಬ ಹೆಸರಿನ ಬ್ರಹ್ಮರಾಕ್ಷಸನೊಬ್ಬನು ಎದುರಾದನು. ಇಬ್ಬರೂ ಒಬ್ಬರನ್ನೊಬ್ಬರು ಕಂಡು ನಿಂತು, ನೀನು ಯಾರು ಮತ್ತು ಎಲ್ಲಿಗೆ ಹೋಗುತ್ತಿದ್ದೀಯಾ? ಎಂದು ಪ್ರಶ್ನಿಸಿದನು.

ಆಗ ಕಳ್ಳನು, ನಾನು ಕ್ರೂರಕರ್ಮ ಎಂಬ ಕಳ್ಳ. ದ್ರೋಣ ಎಂಬ ಬ್ರಾಹ್ಮಣನ ಮನೆಯ ಕೊಟ್ಟಿಗೆ ಯಲ್ಲಿರುವ ಎರಡು ಕರುಗಳನ್ನು ಕದಿಯಲು ಹೋಗುತ್ತಿದ್ದೇನೆ ಎಂದು ಹೆದರುತ್ತ ನುಡಿದನು. ಅದಕ್ಕೆ ರಾಕ್ಷಸನು ನಗುತ್ತಾ, ಆಹಾ! ಎಂತಹ ಕಾಕತಾಳೀಯ! ನಾನು ಸತ್ಯವಚನ ಎಂಬ ಬ್ರಹ್ಮ ರಾಕ್ಷಸ. ನಾನು ಕೂಡ ಆ ಬ್ರಾಹ್ಮಣನನ್ನೇ ತಿನ್ನಲು ಅವನ ಮನೆಗೆ ಹೋಗುತ್ತಿದ್ದೇನೆ.

ಇದನ್ನೂ ಓದಿ: Roopa Gururaj Column: ಪಂಚತಂತ್ರ ಕತೆಗಳು: ಕತ್ತೆ, ನರಿ ಮತ್ತು ಸಿಂಹ

ಇಬ್ಬರ ದಾರಿಯೂ ಒಂದೇ ಆಗಿರುವುದರಿಂದ ಜೊತೆ ಯ ಹೋಗೋಣ ಬಾ ಎಂದನು. ಇಬ್ಬರೂ ಸೇರಿ ಬ್ರಾಹ್ಮಣನ ಮನೆಯೊಳಗೆ ನುಗ್ಗಿದರು. ಬ್ರಾಹ್ಮಣನು ತನ್ನ ಕೋಣೆಯಲ್ಲಿ ಗಾಢ ನಿದ್ರೆಯಲ್ಲಿ ದ್ದನು. ಆಗ ರಾಕ್ಷಸನು ಮುಂದೆ ಹೆಜ್ಜೆಯಿಟ್ಟು, ಮೊದಲು ನಾನು ಈ ಬ್ರಾಹ್ಮಣನನ್ನು ತಿಂದು ಮುಗಿಸುತ್ತೇನೆ, ಆಮೇಲೆ ನೀನು ಕರುಗಳನ್ನು ಬಿಚ್ಚಿಕೊಂಡು ಹೋಗು ಎಂದನು. ತಕ್ಷಣ ಕಳ್ಳನು ತಡೆದು, ಇಲ್ಲ, ಹಾಗಾಗುವು ದಿಲ್ಲ! ನೀನು ಬ್ರಾಹ್ಮಣನನ್ನು ಹಿಡಿಯಲು ಹೋದಾಗ ಅವನು ಜೋರಾಗಿ ಕಿರುಚಿಕೊಂಡರೆ, ಊರವರೆ ಎಚ್ಚರಗೊಂಡು ಓಡಿಬರುತ್ತಾರೆ. ಆಗ ನನಗೆ ಕರುಗಳನ್ನು ಕದಿಯಲು ಸಾಧ್ಯವಾಗುವುದಿಲ್ಲ.

ಆದ್ದರಿಂದ ಮೊದಲು ನಾನು ಕರುಗಳನ್ನು ಬಿಚ್ಚಿಕೊಂಡು ಹೋಗುತ್ತೇನೆ, ಆಮೇಲೆ ನೀನು ಬ್ರಾಹ್ಮಣ ನನ್ನು ತಿನ್ನು ಎಂದು ವಾದಿಸಿದನು. ನಾನು ಮೊದಲು ತಿನ್ನುತ್ತೇನೆ ಎಂದು ರಾಕ್ಷಸನೂ, ಇಲ್ಲ, ನಾನು ಮೊದಲು ಕದಿಯು ತ್ತೇನೆ ಎಂದು ಕಳ್ಳನೂ ಮನೆಯಂಗಳದ ಜೋರಾಗಿ ಜಗಳವಾಡ ತೊಡಗಿದರು. ಇಬ್ಬರ ನಡುವಿನ ವಾಗ್ವಾದ ವಿಕೋಪಕ್ಕೆ ಹೋಗಿ, ದೊಡ್ಡದಾಗಿ ಕೂಗಾಡಲಾರಂಭಿಸಿದರು. ಆ ಗದ್ದಲಕ್ಕೆ ನಿದ್ರೆಯಿಂದ ಎಚ್ಚೆತ್ತ ಬ್ರಾಹ್ಮಣನು ಹೊರಬಂದು ನೋಡಿದಾಗ, ಅಲ್ಲಿ ಕಳ್ಳ ಮತ್ತು ರಾಕ್ಷಸ ಇಬ್ಬರೂ ನಿಂತಿರುವುದನ್ನು ಕಂಡನು. ಕಳ್ಳನು ರಾಕ್ಷಸನ ಕಡೆಗೆ ಬೆರಳು ತೋರಿಸಿ, ಬ್ರಾಹ್ಮಣೋ ತ್ತಮರೇ, ಈ ರಾಕ್ಷಸ ನಿಮ್ಮನ್ನು ತಿನ್ನಲು ಬಂದಿದ್ದಾನೆ! ಎಂದು ಕೂಗಿದರೆ, ರಾಕ್ಷಸನು ಕಳ್ಳನ ಕಡೆಗೆ ತೋರಿಸಿ, ಸ್ವಾಮಿ, ಈ ಕಳ್ಳ ನಿಮ್ಮ ಕರುಗಳನ್ನು ಕದಿಯಲು ಬಂದಿದ್ದಾನೆ! ಎಂದು ಅರಚಿದನು.

ತಕ್ಷಣವೇ ಎಚ್ಚೆತ್ತುಕೊಂಡ ಬ್ರಾಹ್ಮಣನು ತನ್ನ ಇಷ್ಟದೇವತೆಯ ಮಂತ್ರವನ್ನು ಜಪಿಸುತ್ತಾ ಪವಿತ್ರ ಮಂತ್ರೋದಕವನ್ನು ಎರಚಿ ಬ್ರಹ್ಮರಾಕ್ಷಸನನ್ನು ಓಡಿಸಿದನು; ಹಾಗೂ ಕೈ ಯಲ್ಲಿದ್ದ ದೊಡ್ಡ ದೊಣ್ಣೆ ಯನ್ನು ಎತ್ತಿಕೊಂಡು ಕಳ್ಳನನ್ನು ಅಟ್ಟಿಸಿಕೊಂಡು ಹೋಗಿ ಮನೆಯಿಂದ ಹೊರ ಹಾಕಿದನು. ಹೀಗೆ ಇಬ್ಬರು ದುಷ್ಟರ ಪರಸ್ಪರ ಕಲಹದಿಂದಾಗಿ ಬ್ರಾಹ್ಮಣನ ಪ್ರಾಣವೂ ಉಳಿ ಯಿತು ಮತ್ತು ಅವನ ಕರುಗಳೂ ಸುರಕ್ಷಿತವಾಗಿ ಉಳಿದವು. ದುಷ್ಟತನ ಮತ್ತು ಸ್ವಾರ್ಥಕ್ಕೆ ಎಂದಿಗೂ ನಿಜ ವಾದ ಒಗ್ಗಟ್ಟು ಇರುವುದಿಲ್ಲ.

ಕೆಟ್ಟ ಉದ್ದೇಶದಿಂದ ಒಂದಾದವರು ತಮಗೆ ಲಾಭ ಹಂಚಿಕೊಳ್ಳುವ ಸಮಯ ಬಂದಾಗ ಖಂಡಿತವಾ ಗಿಯೂ ಪರಸ್ಪರ ಕಚ್ಚಾಡಿಕೊಂಡು ನಾಶವಾಗುತ್ತಾರೆ. ಆದರೆ ಸತ್ಯ ಮತ್ತು ಧರ್ಮದ ಹಾದಿಯಲ್ಲಿ ನಡೆಯುವ ಸಜ್ಜನರಿಗೆ ಎಂತಹುದೇ ಕಠಿಣ ಪರಿಸ್ಥಿತಿಯಲ್ಲೂ ಯಾವುದೋ ಒಂದು ರೂಪದಲ್ಲಿ ರಕ್ಷಣೆ ದೊರೆತೇ ದೊರೆಯುತ್ತದೆ.

ಸಂಸ್ಕೃತದ ಸುಭಾಷಿತ ಹೇಳುವಂತೆ ‘ಶತ್ರುಣಾಪಿ ಹಿ ಸಂಧಾಯ ಶುದ್ಧೇನಾವಸರೇ ಸತಿ | ಕಾರ್ಯಂ ಸಾಧಯತೇ ಪ್ರಾಜ್ಞಃ ಕಾಷ್ಠಾಗ್ನಿ ವದವಸ್ಥಿತಃ’ ಹಾಗೂ ‘ಸತ್ಯಮೇವ ಜಯತೇ ನಾನೃತಮ’ (ದುಷ್ಟರ ಸಂಚುಗಳು ಅವರೊಳಗಿನ ಸ್ವಾರ್ಥದಿಂದಲೇ ವಿಫಲವಾಗುತ್ತವೆ; ಅಂತಿಮವಾಗಿ ಸತ್ಯ ಮತ್ತು ಧರ್ಮಕ್ಕೇ ಜಯ).

ಇಂದಿನ ಸಮಾಜದಲ್ಲಿ ಕೆಟ್ಟ ಜನರ ಗುಂಪು ಅಥವಾ ಅನ್ಯಾಯದ ಶಕ್ತಿಗಳು ಬಲಿಷ್ಠವಾಗಿ ಕಂಡಾಗ ಸಜ್ಜನರು ಎದೆಗುಂದಬಾರದು. ನಾವು ನಮ್ಮ ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಯಲ್ಲಿ ದೃಢ ವಾಗಿದ್ದರೆ, ಕೆಟ್ಟದ್ದು ತನ್ನ ಭಾರದಿಂದ ತಾನೇ ಕುಸಿದು ಒಳ್ಳೆಯದಕ್ಕೆ ದಾರಿ ಮಾಡಿಕೊಡುತ್ತದೆ.