ಪ್ರತಿಕ್ರಿಯೆ
ಗ.ನಾ.ಭಟ್ಟ
ಇಂದಿನ ಕಾಲಘಟ್ಟದಲ್ಲಿ ನಾವಿಂದು ಯಾವ ಸ್ಥಿತಿಯಲ್ಲಿದ್ದೇವೆ ಎಂದರೆ ನಿಜಕ್ಕೂ ನಾವು ನಾಚಿಕೆ ಪಟ್ಟುಕೊಳ್ಳಬೇಕು. ಎಗ್ಗಿಲ್ಲದೆ ಮೆರೆಯುತ್ತಿರುವ ನಮ್ಮ ಸಾಮಾಜಿಕ ಜಾಲತಾಣವೇ ಇದಕ್ಕೆ ಮುಖ್ಯ ಕಾರಣ ಎಂದರೆ ಸತ್ಯವನ್ನು ಬಿಟ್ಟು ಬೇರೆ ಹೇಳಿದಂತಾಗದು. ಎಲ್ಲರಿಗೂ ತಾನು ಜಗತ್ತಿಗೆ ಕಾಣಿಸಿ ಕೊಳ್ಳಬೇಕೆಂಬ ಧಾವಂತದಲ್ಲಿ ಮನಸ್ಸಿಗೆ ತೋಚಿದ್ದೆಲ್ಲವನ್ನೂ ಆತುರಾತುರದಲ್ಲಿ ಹಂಚಿಕೊಳ್ಳುವ ಈ ವಿಚಿತ್ರ ಮನಃಸ್ಥಿತಿಯೇ ಅನೇಕ ಅಪಸವ್ಯಗಳಿಗೆ ಕಾರಣವಾಗಿವೆ. ಅದು ಅಕ್ಷರ ಪ್ರಪಂಚಕ್ಕೂ ಚಾಚಿರುವುದು ಅಕ್ಷರಪ್ರೇಮಿಗಳೆಲ್ಲ ತಲೆತಗ್ಗಿಸುವಂತಾಗಿದೆ. ಉದಾಹರಣೆಗೆ ಕಳೆದ 3ನೇ ತಾರೀಕು ವಿಶ್ವವಾಣಿಯ ಮುಖಪುಟದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರರ ಶಿವನ ವೇಷದ ವ್ಯಂಗ್ಯಚಿತ್ರವೊಂದು ಪ್ರಕಟಗೊಂಡಿದ್ದೇ ತಡ!
ಸಾಮಾಜಿಕ ಜಾಲತಾಣದಲ್ಲಿ ಕೆಲವರು ವಿಶ್ವವಾಣಿ ಸಂಪಾದಕರ ಮೇಲೆ ಮುಗಿಬಿದ್ದರು. ಅವರ ಮುಖ್ಯ ಪುಕಾರು ಏನೆಂದರೆ-ಡಿಕೆಶಿಯವರನ್ನು ದೇವರನ್ನಾಗಿ ಚಿತ್ರಿಸಿ ಬಿಟ್ಟಿದ್ದಾರೆ. ಇದರ ಪರಿಣಾಮ ವಾಗಿ ನಮ್ಮ ದೇವಾನುದೇವತೆಗಳನ್ನು ಅವಹೇಳನ ಮಾಡಿದಂತಾಗಿದೆ; ಇದು ಸಲ್ಲದು ಎನ್ನುವುದೇ ಅವರ ಆಕ್ರೋಶಭರಿತ ಅಳಲು.
ಫೇಸ್‌ಬುಕ್ ಮೊದಲಾದ ಜಾಲತಾಣಗಳಲ್ಲಿ ಇವರ ಈ ಹೇಳಿಕೆ ಹರಿದಾಡುತ್ತಿದೆ. ಅವರ ಮಾತಿಗೆ ಸಾಥ್ ಕೊಡುವ ಕೆಲವು ಆತುರಗಾರರ ಹೇಳಿಕೆಗಳೂ ಹರಿದಾಡುತ್ತಿವೆ. ಇವರೆಲ್ಲರ ಶೋಚನೀಯ ಸ್ಥಿತಿಯೇನೆಂದರೆ ಸಾಹಿತ್ಯ ಪ್ರಪಂಚದ ರಸದೃಷ್ಟಿ ಮರೆಯಾಗಿರುವುದು ಮತ್ತು ಪತ್ರಿಕೋದ್ಯಮದ ವಿರಾಟ್ ಸ್ವರೂಪಗಳಲ್ಲಿ ಒಂದಾದ ವ್ಯಂಗ್ಯ, ವಿನೋದ, ತಮಾಷೆ, ವಿಡಂಬನೆ, ಅಣಕ, ಕುಚೋದ್ಯ, ಹಾಸ್ಯ, ಪರಿಹಾಸ್ಯ ಅರ್ಥವಾಗದಿರುವುದು. ವಿಶ್ವವಾಣಿಯಲ್ಲಿ ಪ್ರಕಟಗೊಂಡಿದ್ದು ಅದೊಂದು ಕೇವಲ ಅಣಕ ಅಥವಾ ವಿಡಂಬನೆ ಅಷ್ಟೇ! ಅಲ್ಲಿ ಪ್ರಕಟಗೊಂಡಿದ್ದಾದರೂ ಏನು? ಡಿಕೆಶಿಯವರ ಬಾಹ್ಯವ್ಯಕ್ತಿತ್ವಕ್ಕೆ ಶಿವನ ರೂಪವನ್ನು ಅಂಟಿಸಿದ್ದು ಅಥವಾ ಜೋಡಿಸಿದ್ದು.
ಅದಕ್ಕನುಗುಣವಾಗಿ ರಾಜ್ಯದಲ್ಲಿನ್ನು ಶಿವಡಂಗುರ ಎಂಬ ಶೀರ್ಷಿಕೆಯನ್ನು ಬರೆದದ್ದು. ಅದನ್ನು ನೋಡಿದ ಯಾರಿಗೂ ಅದೊಂದು ತಮಾಷೆಯ, ವ್ಯಂಗ್ಯದ, ಲಘುವಿನೋದದ ಚಿತ್ರವೆಂದು ಅನ್ನಿಸದೇ ಇರದು. ಡಿಕೆಶಿಯವರನ್ನು ಅವಹೇಳನ ಮಾಡುವುದೇ ಆಗಿದ್ದರೆ ಅವರ ಶರೀರಕ್ಕೆ ಡಿಟ್ಟೋ ಶಿವನ ಚಿತ್ರವನ್ನೇ ಆರೋಪಿಸಿ, ಬಹುಸುಂದರವಾಗಿ, ಚೇತೋಹಾರಿಯಾಗಿ ಮಾರ್ಪಡಿಸಿ ಜಗತ್ತಿಗೆ ಸಾರಬಹುದಿತ್ತು.
ಇದನ್ನೂ ಓದಿ: G N Bhat Column: ಸುವೇಂದು ದ್ವೇಷ ರಾಜಕೀಯ ಮಾಡುತ್ತಿದ್ದಾರೆಯೆ ?
ಅವರು ಹಾಗೆ ಮಾಡಲೇ ಇಲ್ಲ. ಅವರ ಮುಖವನ್ನು ಯಥಾವತ್ ಉಳಿಸಿಕೊಂಡು ಉಳಿದ ಎಲ್ಲದಕ್ಕೂ ಶಿವನ ವೇಷವನ್ನು ಲೇಪಿಸಿದ್ದಾರೆ. ಡಿಕೆಶಿಯವರ ಶರೀರವಂತೂ ಖಂಡಿತಕ್ಕೂ ಉಕ್ಕಿನ ಸ್ನಾಯುಗಳಿಂದ ಮಿರಿಮಿರಿ ಮಿಂಚುವ ಶರೀರವಲ್ಲ. ಅಲ್ಲಿ ಹಾಗೆಯೇ ಚಿತ್ರಿತವಾಗಿದೆ. ಜಟಾ ಜೂಟದ ಮುಂಭಾಗದಲ್ಲಿ ಅವರ ಕ್ರಾಪನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.
ಕೈಗಳಲ್ಲಿ ಢಕ್ಕೆ, ತ್ರಿಶೂಲಗಳಿವೆ. ಒಟ್ಟಿನಲ್ಲಿ ಡಿಕೆಶಿಯವರ ಮುಖವೊಂದನ್ನು ಹೊರತುಪಡಿಸಿ ಉಳಿದಿದ್ದೆಲ್ಲವೂ ಕೃತಕವಾಗಿ ನಿರ್ಮಿಸಿದ ಶಿವನ ಚಿತ್ರ ಎಂದು ಎಲ್ಲರಿಗೂ ಗೊತ್ತಾಗುತ್ತದೆ. ಕೆಲವರು, ಅವನ ಕೈಯಲ್ಲಿರುವುದು ಡಮರುಗವೇ ವಿನಾ ಡಂಗುರ ಅಲ್ಲ ಅಂತ ಹೇಳಿದ್ದಾರೆ. ವಾಸ್ತವಿಕವಾಗಿ ಶಿವನ ಕೈಯಲ್ಲಿರುವುದು ಡಂಗುರವೂ ಅಲ್ಲ; ಡಮರುಗವೂ ಅಲ್ಲ.
ಅದು ಢಕ್ಕೆ. ಇವು ಸಣ್ಣಪುಟ್ಟ ವ್ಯತ್ಯಾಸಗಳೊಡನೆ ಇರುವ ಚರ್ಮವಾದ್ಯಗಳು. ಇಂತಹ ಚರ್ಮ ವಾದ್ಯಗಳು ಅನೇಕ ಇವೆ. ಭಗವದ್ಗೀತೆಯಲ್ಲಿ ‘ತತಃ ಶಂಖಾಶ್ಚ ಭೇರ್ಯಶ್ಚ ಪಣವಾನಕಗೋ ಮುಖಾಃ’-(1-13) ಎಂಬ ಮಾತು ಬರುತ್ತದೆ. ‘ಶಂಖ- ಭೇರಿ, ತಮಟೆ-ಡೋಲು-ಮುಂತಾದ ರಣಕಹಳೆಗಳು ಮೊಳಗಿದವು’ ಅಂತ ಇದಕ್ಕೆ ಅರ್ಥ.
ಇಲ್ಲಿ ಶಂಖವೊಂದನ್ನು ಹೊರತುಪಡಿಸಿದರೆ ಭೇರಿ, ಪಣವಗಳು ಚರ್ಮವಾದ್ಯಗಳೇ ಆಗಿವೆ. ಆನಕ ಮತ್ತು ಗೋಮುಖ ಅಂದರೆ ಕೊಂಬು ಅಥವಾ ಕಹಳೆಯಾಗಿವೆ. ಒಟ್ಟಿನಲ್ಲಿ ಇವು ಬೇರೆ ಬೇರೆ ಹೆಸರಿನ ಚರ್ಮವಾದ್ಯಗಳು. ತಬಲಾ, ಚಂಡೆ, ಮೃದಂಗ, ಮದ್ದಳೆ ಇವೂ ಚರ್ಮವಾದ್ಯಗಳೇ ಆಗಿವೆ. ಹೆಸರು ಮಾತ್ರ ಬೇರೆ. ಕೆಲವರು ಆವೇಶಭರಿತರಾಗಿ ವಿಶ್ವವಾಣಿಯ ಶಿವನ (ಶಿವಕುಮಾರರ) ಚಿತ್ರ ವನ್ನು ಇಟ್ಟುಕೊಂಡು ಅಂಗುಲ ಅಂಗುಲ ಕತ್ತರಿಸಬೇಕೆಂದು ತೀರ್ಮಾನಿಸಿದಂತಿದೆ.
ಇನ್ನೂ ಒಂದು ಸಂಗತಿ. ಡಂಗುರವನ್ನು ಡಂಗುರ ಅಂತಲೂ ಡಂಗೂರ ಅಂತಲೂ ಹೇಳುವುದು ರೂಢಿಯಲ್ಲಿದೆ. ಅದು ನಾಮಪದವಾಗಿರುವಂತೆ ಕ್ರಿಯಾಪದವೂ ಹೌದು. ‘ವಿಷಯವನ್ನು ಡಂಗುರ ಹೊಡೆಯಬೇಡ’ ಎಂದರೆ ವಿಷಯವನ್ನು ಘೋಷಿಸಿ ಬಹಿರಂಗ ಮಾಡಬೇಡ ಅಂತ ಅರ್ಥ ವಾಗುತ್ತದೆ.
ವಿಶ್ವವಾಣಿಯ ತಲೆಬರಹದಂತೆ ‘ರಾಜ್ಯದಲ್ಲಿನ್ನು ಶಿವಡಂಗುರ’ ಎಂದರೆ ಇನ್ನು ಮುಂದೆ ಡಿ.ಕೆ.ಶಿವಕುಮಾರರ ಆಳ್ವಿಕೆ ಜರ್ಬಾಗಿ, ಲಂಗುಲಗಾಮಿಲ್ಲದೆ ಸಾಗುತ್ತದೆ ಅಂತಲೋ, ಅವರದೇ ಸರ್ವಾಧಿಕಾರ ಅಂತಲೋ, ಶಿವನ ತಾಂಡವ ನೃತ್ಯದಂತೆಯೇ ಜಗತ್ಪ್ರಳಯಕಾರಿಯಾಗುತ್ತದೆ ಅಂತಲೋ ಎಂಬಿತ್ಯಾದಿ ಅನೇಕ ಅರ್ಥಗಳಾಗಬಹುದು.
ಈ ಚಿತ್ರ ಮತ್ತು ತಲೆಬರಹದ ಧ್ವನಿ ಅಥವಾ ಸೂಚ್ಯಾರ್ಥವನ್ನು ಗ್ರಹಿಸದಿದ್ದುದರ ಫಲವೇ ಇಂತಹ ಅವಿವೇಕ- ಆತುರ- ಆವೇಶ-ಅತಿರೇಕದ ಹೇಳಿಕೆಗೆ ಕಾರಣವಾಗಿದೆ.ಜೊತೆಗೆ ಅವರು ಇನ್ನೂ ಒಂದು ಸೂಕ್ಷ್ಮವನ್ನು ಗಮನಿಸಿದಂತಿಲ್ಲ. ಶಿವಕುಮಾರ ಅಂದರೆ ಈಶ್ವರನೂ ಅಥವಾ ಶಿವನೂ ಅಲ್ಲ. ಅವನ ಮಗ ಕುಮಾರ ಅಷ್ಟೇ!
ಅಂದರೆ ಷಡಾನನ, ಸುಬ್ರಹ್ಮಣ್ಯ, ಅಂತ ಅರ್ಥವಾಗುತ್ತದೆ. ಅವನನ್ನೇ ಕಾರ್ತಿಕೇಯ, ಸ್ಕಂದ ಎಂದೆಲ್ಲಾ ಕರೆಯುತ್ತಾರೆ. ಇವೆಲ್ಲದರ ಹಿನ್ನೆಲೆಯಲ್ಲಿ ವಿಶ್ವವಾಣಿಯ ಶಿವನ ಚಿತ್ರ ಡಿಕೆಶಿಯವರನ್ನು ದೇವರನ್ನಾಗಿ ಮಾಡುವುದಕ್ಕೆ ಹೊರಟಿದ್ದಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅವರನ್ನು ಕೇವಲ ವಿಡಂಬಿಸುವುದಕ್ಕೆ ಹೊರಟಿದ್ದು. ಅದು ಕೇವಲ ಒಂದು ಸ್ಥೂಲ ನೋಟದ ಚಿತ್ರವಾಗಿ, ಧ್ವನಿಯಾಗಿ ಹೊರಟಿದೆ. ಅದಕ್ಕೆ ಸಂಬಂಧಪಪಟ್ಟ ಇಡೀ ಬರಹದಲ್ಲಿ ಎಲ್ಲಿಯೂ ಕೂಡಾ ಡಿಕೆಶಿಯವರನ್ನು ಅವಮಾನಿಸಿದ, ಅವಹೇಳನ ಮಾಡಿದ ಅಥವಾ ಅವರನ್ನು ವೈಭವೀಕರಿಸಿದ, ಪಕ್ಷಪಾತ ತೋರಿಸಿದ ಒಂದೇ ಒಂದು ಒಕ್ಕಣೆಯಿಲ್ಲ.
ಅಲ್ಲಿರುವುದು ಕೇವಲ ಪ್ರಮಾಣವಚನ ಸ್ವೀಕಾರ ಮತ್ತು ಮಂತ್ರಿ ಸಂಪುಟದ ವಿಸ್ತರಣೆ ವಿಷಯದ ಕುರಿತಾಗಿದೆಯೇ ವಿನಾ ಇನ್ನೇನೂ ಇಲ್ಲ. ಹೀಗಿರುವಾಗ ಅವರನ್ನು ದೇವರು ಮಾಡುವುದು ಹೇಗೆ? ಪತ್ರಿಕೆಯೆಂಬುದು ಹಲವು ವಿಷಯಗಳ ಭಂಡಾರ. ವ್ಯಂಗ್ಯ ಚಿತ್ರವೆಂಬುದು ಪತ್ರಿಕೆಯವರ ಬ್ರಹ್ಮಾಸ್ತ್ರ. ಅದು ಧ್ವನಿಸುವ ಧ್ವನಿಗಳೂ ಅನಂತ. ನಾವು ಅವನ್ನು ಗ್ರಹಿಸಿ ಆನಂದಪಡಬೇಕೇ ವಿನಾ ರಂಧ್ರಾನ್ವೇಷಿಗಳಾಗಿ ತಾವೇ ಬುದ್ಧಿವಂತರು ಎಂದು ಜಗತ್ತಿಗೆ ಸಾರಬಾರದು. ತಲೆಯಿಲ್ಲದವರು ಯಾರನ್ನೂ ಪ್ರೋತ್ಸಾಹಿಸಿಯಾರು!
ಅಂತಹವರನ್ನು ಮೆಚ್ಚಿಸುವುದಕ್ಕೆ ಹೋಗಬಾರದು. ಕೆಲವರು ಮಾಡುತ್ತಿರುವುದು ಅದನ್ನು. ನಮ್ಮ ಕಾಲದ ಇಂದಿನ ದುರದೃಷ್ಟವೆಂದರೆ ಜನರಲ್ಲಿ ರಸದೃಷ್ಟಿ ನಶಿಸಿರುವುದು. ಅದು ವಿಜ್ಞಾನ ವಿದ್ಯೆಯ ಪ್ರಭಾವ, ಸಾಮಾಜಿಕ ಜಾಲತಾಣದ ಅಟ್ಟಹಾಸ, ಧಾವಂತದ ಬದುಕು, ಜೀವನ ಮೌಲ್ಯವೇ ಪಲ್ಲಟ ಗೊಂಡಿರುವುದು, ಸಾಧನೆಯಿಲ್ಲದ ಪ್ರಸಿದ್ಧಿ ಪಡೆಯುವ ಆತುರ- ಹೀಗೆ ಏನೇನೋ ಕಾರಣಗಳಿರ ಬಹುದು.
ವಾಕ್ಯವೊಂದರ ಧ್ವನಿ ಕಿವಿಗೆ ಗೋಚರಿಸದೆ ಅದರ ಶಬ್ದಾರ್ಥ ಮಾತ್ರ ಮನಸ್ಸನ್ನು ಹಿಡಿಯುವ ದುಃಸ್ಥಿತಿಗೆ ಬಂದು ತಲುಪಿದ್ದೇವೆ ನಾವು. ‘ಭೀಮನಿಗೆ ಕೋಪ ಬಂದು ಅವನ ಕಣ್ಣಿನಿಂದ ಕಿಡಿಯು ಹೊರಟಿತು’ ಅಂದರೆ ‘ಆ ಕಿಡಿಯಲ್ಲಿ ಸಿಗರೇಟು ಹಚ್ಚಬಹುದೇ’ ಎಂದು ಕೇಳುವ ಶೋಚನೀಯ ಸ್ಥಿತಿಯಲ್ಲಿದ್ದೇವೆ ನಾವು.
ಕಿಡಿ ಎಂದರೆ ಮನಮುಟ್ಟುವ ಕಾವು ಎಂದು ಅರ್ಥವಾಗದೆ ತೊಗಲು ಮುಟ್ಟುವ ಬೆಂಕಿ ಎಂದು ಮಾತ್ರ ಅರ್ಥವಾಗುತ್ತದೆ. ಇದು ಅಂತರಂಗ ದಾರಿದ್ರ್ಯ. ತುಂಬಾ ನೆಗಡಿ ಹಿಡಿದವನಿಗೆ ಘ್ರಾಣೇಂದ್ರಿಯ ನಷ್ಟವಾಗಿರುವಂತೆ ನಮ್ಮ ಜನಕ್ಕೆ ರಸದೃಷ್ಟಿ ಮಂದವಾಗಿ ಹೋಗಿದೆ. ಅಂತಹವರಿಗೆ ಮಲ್ಲಿಗೆಯ ಹೂವು ಒಂದು ಬಿಳಿಯ ಸಾಮಗ್ರಿಯಾಗಿ ಕಾಣುತ್ತದೆಯೇ ಹೊರತು ಅವರಿಗೆ ಅದರಲ್ಲಿರುವ ಸೌರಭ, ಕೋಮಲತೆ, ಸೌಂದರ್ಯ ಗೋಚರಿಸುವುದಿಲ್ಲ. ಅಂತಹ ದರಿದ್ರ ಸ್ಥಿತಿಯಲ್ಲಿ ನಾವಿದ್ದೇವೆ ಇಂದು.
ಕೈಗೆ ಸಿಗುವ ಹೂವಿನಲ್ಲಿ ಕೈಗೆ ಸಿಗದ ಸುವಾಸನೆಯಿರುವಂತೆ, ಕ್ಯಾಮರಾಕ್ಕೆ ಸಿಗುವ ಮನುಷ್ಯನ ಆಕೃತಿಯಲ್ಲಿ ಅದರ ಕೈಗೆ ಸಿಗದ ಮನುಷ್ಯನ ಮನೋಬುದ್ಧಿಗಳು ಇರುವಂತೆ, ಭಾಷೆಗಳಲ್ಲಿ, ಚಿತ್ರ ಗಳಲ್ಲಿ, ಶಿಲ್ಪಗಳಲ್ಲಿ ವ್ಯಾಕರಣ-ನಿಘಂಟುಗಳಿಗೆ ಸಿಗುವ ಅರ್ಥಗಳಲ್ಲಿ ವ್ಯಾಕರಣ-ನಿಘಂಟು ಗಳಿಂದ ಚೆನ್ನಾಗಿ ವಿವರಿಸಲಾಗದ ಭಾವವಿಶೇಷಗಳಿರುತ್ತವೆ; ಧ್ವನಿ-ಸೂಚಕ ಶಕ್ತಿಗಳಿರುತ್ತವೆ ಎಂಬುದನ್ನು ಅರಿಯುವವರೆಗೆ ಇಂತಹ ಅವಘಡಗಳು ಸಂಭವಿಸುತ್ತಲೇ ಇರುತ್ತವೆ.