Hari Paraak Column: ಜನರಿಗೆ ಬೇರೆಯದೊಂದು ʼಆಪ್ʼಶನ್ ಬೇಕಿತ್ತು !
ಅದರಲ್ಲೂ ಈ ದುಬಾರಿ ದುನಿಯಾದಲ್ಲಿ ಒಂದ್ ಫ್ಯಾಮಿಲಿ ಒಂದ್ ಸಿನಿಮಾ ನೋಡಬೇಕು ಅಂದರೆ ಸಾವಿರಾರು ರುಪಾಯಿ ಖರ್ಚು ಮಾಡಬೇಕಾಗುತ್ತೆ. ಹಾಗಾಗಿ ಸಾಮಾನ್ಯ ಪ್ರೇಕ್ಷಕ, ಒಂದು ಚಿತ್ರದ ಬಗ್ಗೆ ತುಂಬಾ ಒಳ್ಳೆ ಒಪೀನಿಯನ್ ಬಂದರೆ ಮಾತ್ರ ಥಿಯೇಟರ್ ಕಡೆ ಮುಖ ಹಾಕುತ್ತಾನೆ. ಇನ್ನು, ಜನ ಬರಲ್ಲ ಅಂತ ಚಿತ್ರಮಂದಿರಗಳಿಂದ ಬೇಗನೆ ಸಿನಿಮಾಗಳನ್ನ ತೆಗೀತಾರೆ. ಆದರೆ, ನಾವ್ ನೋಡಬೇಕು ಅಂದ್ರೆ ಆಗ್ಲೇ ಥಿಯೇಟರ್‌ನಿಂದ ತೆಗೆದುಬಿಟ್ಟಿದ್ದಾರೆ ಅಂತಾರೆ ಜನ.

ಅಂಕಣಕಾರ ಹರಿ ಪರಾಕ್

ತುಂಟರಗಾಳಿ
ಸಿನಿಗನ್ನಡ
ಚಿತ್ರಮಂದಿರ ತುಂಬಿದೆ ಅಥವಾ ಹೌಸ್ ಫುಲ್, ಇದು ಸಾಮಾನ್ಯವಾಗಿ ಚಿತ್ರರಂಗದವರಿಗೆ ಖುಷಿ ಕೊಡುವ ಬೋರ್ಡ್. ಆದರೆ ಇತ್ತೀಚೆಗೆ ಈ ರೀತಿಯ ಬೋರ್ಡುಗಳು ಬೋರ್ಡಿಗೇ ಇಲ್ಲದಂತಾಗಿವೆ. ಎಲ್ಲಾ ಕೆಲವು ಸ್ಟಾರ್‌ಗಳ ಸಿನಿಮಾಗೆ ಮೊದಲೆರಡು ದಿನ ಇಂಥ ಬೋರ್ಡ್ ಬೀಳಬಹುದೇನೋ ಅಷ್ಟೇ. ಇದಕ್ಕೆ ಕಾರಣ ಏನು ಅಂತ ಹೇಳೋದು ಕಷ್ಟ. ಬಿಡುಗಡೆ ಆಗುತ್ತಿರುವ ಚಿತ್ರಗಳ ಸಂಖ್ಯೆ ಮಿತಿಮೀರುತ್ತಿದ್ದು, ವಾರಕ್ಕೆ ಏಳೆಂಟು ಸಿನಿಮಾಗಳನ್ನು ಬಿಡುಗಡೆ ಮಾಡಿ, ಅದ್ಯಾವ ಮುಖ ಇಟ್ಕೊಂಡು ನಮ್ಮ ಸಿನಿಮಾಗೆ ಬನ್ನಿ ಅಂತ ಜನರನ್ನ ಕರೆಯೋಕೆ ಆಗುತ್ತೆ ಹೇಳಿ.
ಅದರಲ್ಲೂ ಈ ದುಬಾರಿ ದುನಿಯಾದಲ್ಲಿ ಒಂದ್ ಫ್ಯಾಮಿಲಿ ಒಂದ್ ಸಿನಿಮಾ ನೋಡಬೇಕು ಅಂದರೆ ಸಾವಿರಾರು ರುಪಾಯಿ ಖರ್ಚು ಮಾಡಬೇಕಾಗುತ್ತೆ. ಹಾಗಾಗಿ ಸಾಮಾನ್ಯ ಪ್ರೇಕ್ಷಕ, ಒಂದು ಚಿತ್ರದ ಬಗ್ಗೆ ತುಂಬಾ ಒಳ್ಳೆ ಒಪೀನಿಯನ್ ಬಂದರೆ ಮಾತ್ರ ಥಿಯೇಟರ್ ಕಡೆ ಮುಖ ಹಾಕುತ್ತಾನೆ. ಇನ್ನು, ಜನ ಬರಲ್ಲ ಅಂತ ಚಿತ್ರಮಂದಿರಗಳಿಂದ ಬೇಗನೆ ಸಿನಿಮಾಗಳನ್ನ ತೆಗೀತಾರೆ. ಆದರೆ, ನಾವ್ ನೋಡಬೇಕು ಅಂದ್ರೆ ಆಗ್ಲೇ ಥಿಯೇಟರ್‌ನಿಂದ ತೆಗೆದುಬಿಟ್ಟಿದ್ದಾರೆ ಅಂತಾರೆ ಜನ.
ಇದೊಂಥರಾ, ಮದ್ವೆ ಆಗದೆ ಹುಚ್ಚು ಬಿಡಲ್ಲ, ಹುಚ್ಚು ಬಿಡದೆ ಮದುವೆ ಆಗಲ್ಲ ಅನ್ನೋ ಥರ. ಇದರ ಜತೆಗೆ, ಚಿತ್ರಮಂದಿರಕ್ಕಂತೂ ಜನ ಬರಲಿಲ್ಲ ಅಂತ ಸಿನಿಮಾದವರು ಸಿನಿಮಾ ರಿಲೀಸಾಗಿ ತಿಂಗಳಾಗುವ ಮೊದಲೇ ಓಟಿಟಿಗೆ ಸಿನಿಮಾ ಬಿಡ್ತಾರೆ. ಅಯ್ಯೋ, ರಿಲೀಸಾಗಿ ತಿಂಗಳಿಗೆ ಮುಂಚೆ ಓಟಿಟಿಗೆ ಬರುತ್ತೆ, ಇಲ್ಲೇ ನೋಡೋಣ ಬಿಡು, ಥಿಯೇಟರ್‌ಗೆ ಯಾಕ್ ಹೋಗೋದು ಅಂತ ಜನರೂ ಫಿಕ್ಸ್ ಆಗಿಬಿಟ್ಟಿದ್ದಾರೆ. ಹಾಗಾಗಿ ಈಗೀಗ ಕೇವಲ ಅಭಿಮಾನಿ ದೇವರುಗಳು ಮಾತ್ರ ತಮ್ಮ ನೆಚ್ಚಿನ ನಟನ ಸಿನಿಮಾ ಬಿಡುಗಡೆ ಇದ್ರೆ ಮಾತ್ರ ಮೊದಲ ದಿನ ಥಿಯೇಟರ್ ಕಡೆ ತಲೆ ಹಾಕೋದು ಅನ್ನೋ ಥರ ಆಗಿದೆ. ಉಳಿದವರ ಪಾಲಿಗಂತೂ ಮನೆಯೇ ಚಿತ್ರಾಲಯ.
ಲೂಸ್ ಟಾಕ್ -ಅರವಿಂದ ಕೇಜ್ರಿವಾಲ್
ಏನ್ ಕೇಜ್ರಿವಾಲ್ ಅವರೇ, ದೆಹಲಿಯಲ್ಲಿ ಕೊನೆಗೂ ‘ಆಪ್’ ಕಥೆ ಮುಗೀತಲ್ಲ?
- ಏನ್ ಮಾಡೋದು, ‘ಆಪ್’ತರು ಅನ್ನಿಸಿಕೊಂಡವರೇ ಕೈ ಕೊಟ್ರು, ಅದಕ್ಕೇ ಸೋಲಾಯ್ತು.
ಓಹ್, ಹೌದಾ.. ಆದ್ರೆ ದೆಹಲಿ ಜನ ನಿಮ್ಮನ್ನ ಮರೆತು ಯಾಕೆ ಉಲ್ಟಾ ಹೊಡೆದ್ರು?
- ಯಾಕೆ ಮರೆತ್ರು ಅಂತ ಗೊತ್ತಿಲ್ಲ, ಆದ್ರೆ ಮುಂದೆ ಬಿಜೆಪಿ ಆಡಳಿತ ನೋಡಿದ್ಮೇಲೆ ಈ ‘ಆಪ’ ತ್ಬಾಂಧವನ ಖಂಡಿತಾ ನೆನಪಿಸಿಕೊಳ್ತಾರೆ.
ಚುನಾವಣಾ ಫಲಿತಾಂಶದ ಬಗ್ಗೆ ನಿಮ್ಮ ವ್ಯಾಖ್ಯಾನ ಏನು?
- ಜನರನ್ನ ಶೋಷಣೆ ಮಾಡೋ ಪಕ್ಷನಾ ಆಯ್ಕೆ ಮಾಡಿ, ‘ಆಪ’ತ್ತಿಗಾದ ನೆಂಟನನ್ನ, ಜನರನ್ನ ಪೋಷಣೆ ಮಾಡಿದ ಪಕ್ಷನ ‘ಆಪೋ’ಷಣೆ ತಗೊಂಡ್‌ಬಿಟ್ರು ಜನ.
ಆದ್ರೂ ನೀವು ಜೈಲಿಗೆ ಹೋಗಿ ಬಂದಿದ್ದೂ ವರ್ಕ್ ಔಟ್ ಆಗಲಿಲ್ಲವಲ್ಲ. ಅನುಕಂಪದ ಅಲೆ ಯಾಕೆ ಕೆಲಸ ಮಾಡ್ಲಿಲ್ಲ?
- ಗೊತ್ತಿಲ್ಲ. ಆದ್ರೆ ಇದೊಂದು ‘ಆಪ್’ರೂಪದ ಪ್ರಕರಣ ಅಂತ ಹೇಳಬಹುದು ಅಷ್ಟೇ.
ಸರಕಾರ ಬದಲಾಯಿಸಿದ ದೆಹಲಿ ಜನರ ಮೈಂಡ್ ಸೆಟ್‌ನ ನೀವು ಹೇಗೆ ವಿಶ್ಲೇಷಣೆ ಮಾಡ್ತೀರ?
- ಅದರಲ್ಲಿ ವಿಶೇಷ ಏನಿಲ್ಲ, ಒಂದೇ ಪಕ್ಷದ ಸರಕಾರ ನೋಡಿದ ಜನರಿಗೆ ಬೇರೆ ‘ಆಪ್’ಶನ್ ಬೇಕಿತ್ತು ಅಷ್ಟೇ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಒಂದು ಗಿಣಿ ಅಂಗಡಿಗೆ ಹೋದ. ಪಂಜರದಲ್ಲಿರೋ ಎರಡು ಮಾತಾಡೋ ಗಿಣಿಗಳನ್ನು ನೋಡಿದ. ತುಂಬಾ ಇಷ್ಟ ಆಯ್ತು ಅವನಿಗೆ. ಆ ಎರಡೂ ಹೆಣ್ಣು ಗಿಣಿಗಳಾಗಿದ್ವು. ಅವನ್ನು ಮಾತಾ ಡಿಸೋಕೆ ಅಂತ, “ಹಾಯ್, ಹ್ಯಾವಿಂಗ್ ಫನ್?" ಅಂತ ಕೇಳಿದ ಖೇಮು.
ಅದಕ್ಕೆ ಆ ಗಿಣಿಗಳು, “ಲೋ ಮಚ್ಚಾ,, ನಾವಿಲ್ಲಿ ನಮಗೆ ಬಾಯ್ ಫ್ರೆಂಡ್ ಇಲ್ಲ ಅಂತ ಬರಗೆಟ್ಟು ಕೂತಿದ್ದೀವಿ, ಹ್ಯಾವಿಂಗ್ ಫನ್ ಅಂತ ಕೇಳ್ತೀಯಾ, ನಿನ್ ಮುಖ ಮುಚ್ಚಾ" ಅಂತ ಬೈದ್ವು. ಅಂಗಡಿ ಯವನು “ಬ್ಯಾಡ ಸರ್, ಅವು ತುಂಬಾ ಮಾಡರ್ನ್ ಗಿಣಿಗಳು, ಸುಮ್ನೆ ಏನೇನೋ ತರ್ಲೆ ಮಾತಾ ಡ್ತವೆ" ಅಂತ ಹೇಳ್ದ. ಆದ್ರೂ ಖೇಮು ಬಿಡಲಿಲ್ಲ. ಇಲ್ಲ ನಂಗೇ ಅವೇ ಬೇಕು ಅಂತ ಹಠ ಹಿಡಿದು ಗಿಣಿಗಳನ್ನು ಖರೀದಿಸಿ ಮನೆಗೆ ತಂದು ಪಂಜರದಲ್ಲಿಟ್ಟು ನೇತು ಹಾಕಿದ. ಆದ್ರೆ ಆ ಗಿಣಿಗಳು ಯಾವಾ ಗ್ಲೂ “ಅಯ್ಯೋ, ನಮಗೆ ಈ ಜನ್ಮದಲ್ಲಿ ಬಾಯ್ ಫ್ರೆಂಡ್ ಸಿಗಲ್ಲ, ಇವ್ರ್ ನೋಡಿದ್ರೆ ನಮ್ಮನ್ನ ಇಲ್ಲಿ ತಂದು ಕೂಡಿಹಾಕಿದ್ದಾರೆ, ನಮ್ಮ ಹಣೆಬರಹ" ಅಂತ ವಟವಟ ಅಂತಾನೇ ಇದ್ವು. ಖೇಮುಗೂ ದಿನಾ ಇದನ್ನೇ ನೋಡಿ ನೋಡಿ ಸಾಕಾಯ್ತು.
ಫ್ರೆಂಡ್ ಹತ್ರ ವಿಷ್ಯ ಹೇಳಿದ. ಅವನು, ‘ಬಾ ನನ್ನ ಜತೆ’ ಅಂತ ಒಂದು ಆಶ್ರಮಕ್ಕೆ ಕರ್ಕೊಂಡು ಹೋದ. ಅಲ್ಲಿನ ಸ್ವಾಮೀಜಿಗೆ ಸಮಸ್ಯೆ ಹೇಳಿಕೊಂಡ ಖೇಮು. ಅದಕ್ಕೆ ಸ್ವಾಮೀಜಿ, “ನೋಡಪ್ಪಾ, ಮನುಷ್ಯ ಆಗ್ಲಿ ಗಿಣಿ ಆಗ್ಲಿ, ಅವು ಬೆಳೆದಿರೋ ವಾತಾವರಣದ ಮೇಲೆ ಅವರ ವರ್ತನೆ ಡಿಪೆಂಡ್ ಆಗುತ್ತೆ. ಅದೇ ನಮ್ಮ ಆಶ್ರಮದಲ್ಲೂ ಎರಡು ಗಂಡು ಗಿಣಿ ಇವೆ.
ಗಂಡು ಗಿಣಿಗಳಾದ್ರೂ ‘ಗರ್ಲ್ ಫ್ರೆಂಡ್ ಬೇಕು’ ಅನ್ನದೆ ಯಾವಾಗ ನೋಡಿದರೂ ಮಾಲೆ ಹಿಡ್ಕೊಂಡು ಜಪ ಮಾಡ್ತಾ ಪ್ರಾರ್ಥನೆ ಮಾಡ್ತಾ ಇರ್ತವೆ. ಅವುಗಳ ಜತೆ ನಿನ್ನ ಗಿಣಿಗಳನ್ನು ತಂದು ಬಿಡು. ತಾವಾ ಗೇ ಸರಿಹೋಗ್ತವೆ" ಅಂದ್ರು. ಸರಿ ಅಂತ ಹೇಳಿ ಖೇಮು ತನ್ನ ಗಿಣಿಗಳನ್ನು ತಂದು ಆಶ್ರಮದ ಗಿಣಿಗಳ ಜತೆ ಬಿಟ್ಟ. ಆಶ್ರಮದ ಗಿಣಿಗಳನ್ನು ನೋಡಿ, ಖೇಮು ಮನೆ ಗಿಣಿಗಳು, “ನಾವಿಲ್ಲಿ ಬಾಯ್ ಫ್ರೆಂಡ್ ಇಲ್ಲ ಅಂತ ಸಾಯ್ತಾ ಇದ್ರೆ, ಈ ನನ್ಮಕ್ಕಳು ಜಪ ಮಾಡ್ತಾ ಕುಂತವ್ರೆ" ಅಂತ ಎಂದಿನಂತೆ ಬೈಕೊಂ ಡ್ವು. ಅದನ್ನು ಕೇಳಿದ ಆಶ್ರಮದ ಒಂದು ಗಿಣಿ ತನ್ನ ಕೈಯಲ್ಲಿದ್ದ ಜಪಮಾಲೆಯನ್ನು ಪಕ್ಕಕ್ಕಿಡ್ತಾ ಇನ್ನೊಂದು ಗಿಣಿಗೆ ಹೇಳಿತು, “ಬ್ರದರ್, ಕೊನೆಗೂ ದೇವರು ನಮ್ಮ ಪ್ರಾರ್ಥನೆಗೆ ಪ್ರತಿಫಲ ಕೊಟ್ಟ".
ಲೈನ್ ಮ್ಯಾನ್
ಕೂಲ್ ಕಸ್ಟಮರ್ ಅಂದ್ರೆ ಯಾರು?
- ಐಸ್‌ಕ್ರೀಮ್ ಅಂಗಡಿಯ ಗ್ರಾಹಕ
ಸಿನಿಮಾ ರಂಗದಲ್ಲಿ ಸಂಭಾವಿತರು ಅಂದ್ರೆ ಯಾರು?
- ಸಂಭಾವನೆ ಕೇಳದೇ ಇರೋರು
ಸಿಗರೇಟು ಸೇದೋದನ್ನ ಬಿಡಲಾಗದವನಿಗೆ ಏನು ಹೇಳಬೇಕು?
- ‘ಸುಟ್ಟು’ ಗುಣ ಸುಟ್ಟರೂ ಹೋಗಲ್ಲ
ಎಣ್ಣೆ ಹೊಡೆದು ಮಾಡೋ ವಿಡಿಯೋ ಕಾಲ್
- ‘ಝೂಮ್’ ಕಾಲ್
ಸೋಡಾ ಕುಡಿಯೋಕೆ ಕಂಪನಿ ಕೊಡೋ ‘ಗೆಳೆಯ’
- ಸೋಡಾ ‘ಬಡ್ಡಿ’
ಕೆಲವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ರಬ್ಬರ್ ಟ್ಯೂಬ್‌ನಲ್ಲಿ ಕುಳಿತು ಕುಡಿಯೋದು ಯಾಕೆ?
- ತೇಲುತ್ತಾ ತೇಲೋಕೆ
ಇಬ್ಬನಿ ಬಿದ್ದ ಕಾರಣಕ್ಕೆ ಕ್ರಿಕೆಟ್ ಮ್ಯಾಚ್ ಸೋತ ಕ್ಯಾಪ್ಟನ್ ಏನು ಹೇಳ್ತಾನೆ?
- We couldn't win due to dew
ಸಣ್ಣ ಮಕ್ಕಳೂ ಕೋಡಿಂಗ್ ಕಲಿಯುತ್ತಿರೋ ಈ ಸಮಯದಲ್ಲಿ ಅತಿಬುದ್ಧಿವಂತರಂತೆ ಮಾತಾಡೋರನ್ನ ಏನಂತ ಬಯ್ತಾರೆ?
- ನಿಂಗೇನ್ ಎರಡ್ ಕೋಡಿದೆಯಾ?
ಭಾರತದ ನಾವೇ ತಯಾರಿಸಿದ ಆಪ್‌ಗಳನ್ನ ಏನೆನ್ನಬಹುದು?
- ಅಪ್ ನೇ ಆಪ್
ಬಹಳ ವರ್ಷಗಳವರೆಗೆ ರಸ್ತೆಯಲ್ಲಿ ಓಡಾಡಿ ಸವೆದುಹೋಗಿರುವ ಕಾರಿನ ಟೈರ್
- ಟೈರ್ಡ್