ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ಭಾರತದ ಇತಿಹಾಸದಲ್ಲಿ 1984 ಅತ್ಯಂತ ಕರಾಳ ಪರ್ವ. ಆ ವರ್ಷದಲ್ಲಿ ಇಂದಿರಾ ಗಾಂಧಿಯವರ ಹತ್ಯೆ ನಡೆದ ನಂತರ ಸಿಖ್ ನರಮೇಧ ನಡೆಯಿತು. ಇದರಲ್ಲಿ 3000 ಸಿಖ್ಖರ ಮಾರಣಹೋಮ ವಾಯಿತು. 1984ರ ಡಿಸೆಂಬರ್ ೩ರಂದು ದೇಶದ ಕೈಗಾರಿಕಾ ಇತಿಹಾಸದಲ್ಲೇ ಅತಿ ದೊಡ್ಡ ದುರಂತ ಘಟಿಸಿತು- ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ಸೋರಿಕೆಯಾದ ಮೀಥೈಲ್ ಐಸೋಸೈನೆಟ್ ಎಂಬ ವಿಷಕಾರಕ ಅನಿಲವು ಹತ್ತತ್ತಿರ 20000 ಜನರ ಪ್ರಾಣವನ್ನೇ ತೆಗೆದುಬಿಟ್ಟಿತು ಮತ್ತು ೫ ಲಕ್ಷ ಜನರನ್ನು ವಿವಿಧ ರೀತಿಯಲ್ಲಿ ಬಾಧಿಸಿತು. ಈ ದುರಂತ ನಡೆದು 26 ವರ್ಷಗಳ ತರುವಾಯ ಕೇವಲ ೮ ಜನರಿಗೆ ೨ ವರ್ಷಾವಧಿಯ ಶಿಕ್ಷೆಯ ಘೋಷಣೆಯಾಯಿತು.
ಆದರೆ, ಇಷ್ಟೂ ಮಂದಿಗೆ ಜಾಮೀನು ದೊರೆತ ಪರಿಣಾಮ, ಘೋರ ಅಪರಾಧವನ್ನು ಎಸಗಿದ್ದರೂ ಶಿಕ್ಷೆಯೇ ಇಲ್ಲದೆ ಅವರು ಪಾರಾದರು. ನಂಬಲಸಾಧ್ಯವಾದ ಸಂಗತಿಯೆಂದರೆ, ೮ನೆಯ ಅಪರಾಧಿ ಎನಿಸಿದ್ದ ಯೂನಿಯನ್ ಕಾರ್ಬೈಡ್ ಕಂಪನಿಯ ಸಿಇಒ ವಾರೆನ್ ಆಂಡರ್‌ಸನ್ ಅವರನ್ನು ಭಾರತ ದಿಂದ ಅಮೆರಿಕಕ್ಕೆ ವಿಶೇಷ ವಿಮಾನದಲ್ಲಿ ಗೌರವಪೂರ್ಣವಾಗಿ ಕಳಿಸಿ ಕೊಟ್ಟು, ದುರಂತದಲ್ಲಿ ಮಡಿದವರಿಗೆ ಅಪಮಾನವೆಸಗಿದರು ರಾಜೀವ್ ಗಾಂಧಿಯವರು!
ಇಂಥ ಮತ್ತಷ್ಟು ನಿದರ್ಶನ ಗಳ ಕಡೆಗೆ ಗಮನಹರಿಸೋಣ: 1981ರ ಫೆಬ್ರವರಿಯಲ್ಲಿ ಬೆಂಗಳೂರಿನ ಓಕಳೀಪುರಂ ರಸ್ತೆಯ ರೇಲ್ವೆ ಜಾಗದಲ್ಲಿ ಠಿಕಾಣಿ ಹೂಡಿದ್ದ ‘ವೀನಸ್ ಸರ್ಕಸ್’ನಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ೯೨ ಜನರು ಮೃತ ಪಟ್ಟರು. ಅವರಲ್ಲಿ ಬಹುತೇಕರು ಮಕ್ಕಳಾಗಿದ್ದರು. ಆದರೆ ಈ ಅನಾಹುತದಲ್ಲೂ ಯಾರಿಗೂ ಶಿಕ್ಷೆಯೇ ಆಗಲಿಲ್ಲ.
ಅದೇ ವರ್ಷ ಘಟಿಸಿದ ಬೆಂಗಳೂರಿನ ಮುನಿರೆಡ್ಡಿ ಪಾಳ್ಯದ (ಜೆ.ಸಿ. ನಗರ) ಕಳ್ಳಭಟ್ಟಿ ದುರಂತದಲ್ಲಿ 308 ಜನರು ಅಸುನೀಗಿದರು. ಈ ಪ್ರಕರಣಕ್ಕೆ ಸಂಬಂಧಿಸಿದ 63 ಜನರ ಮೇಲೆ ಆರೋಪಪಟ್ಟಿ ಸಲ್ಲಿಸ ಲಾಗಿತ್ತು. ವಾಸ್ತವವಾಗಿ ಓರ್ವ ‘ಲೇಡಿ ಡಾನ್’ ಈ ದುರಂತದ ಪ್ರಮುಖ ಆರೋಪಿಯಾಗಿ ದ್ದರು. ಆದರೆ ಸೂಕ್ತ ಸಾಕ್ಷ್ಯಾಧಾರವಿಲ್ಲದೆ, ಕೆಲವು ವರ್ಷಗಳ ತರುವಾಯ ಆರೋಪಿಗಳೆಲ್ಲರೂ ಖುಲಾಸೆ ಯಾದರು. ವಿಪರ್ಯಾಸವೆಂದರೆ, ಸದರಿ ಕಳ್ಳಭಟ್ಟಿ ದುರಂತಕ್ಕೆ ಕಾರಣವಾಗಿದ್ದ ಆ ‘ಲೇಡಿ ಡಾನ್’, ಎರಡು ದಶಕದ ತರುವಾಯ ಬೆಂಗಳೂರು ನಗರ ಪಾಲಿಕೆಯ ಸದಸ್ಯೆಯಾಗಿ ಚುನಾಯಿತರಾದರು!
ಇದನ್ನೂ ಓದಿ: Prakash Shesharaghavachar Column: ಬದಲಾದ ಬಿಹಾರ, ಬದಲಾಗದ ನಿತೀಶ್ ಸರಕಾರ
1983ರಲ್ಲಿ, ಬೆಂಗಳೂರಿನ ಸುಬೇದಾರ್ ಛತ್ರಂ ರಸ್ತೆಯ ಕಪಾಲಿ ಚಿತ್ರಮಂದಿರದ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದ ‘ಗಂಗಾರಾಮ್ ಕಟ್ಟಡ’ವು ಕಳಪೆ ಕಾಮಗಾರಿಯಿಂದಾಗಿ ಕುಸಿದು, 123 ಕಾರ್ಮಿಕರು ಕಟ್ಟಡದ ಅವಶೇಷದಡಿ ಸಿಲುಕಿ ಅಸುನೀಗಿದರು. ಸಾಕ್ಷ್ಯಾಧಾರದ ಕೊರತೆಯಿಂದಾಗಿ ನ್ಯಾಯಾಲಯವು ೨೨ ವರ್ಷಗಳ ತರುವಾಯ ಎಲ್ಲಾ ಆರೋಪಿಗಳನ್ನೂ ಖುಲಾಸೆ ಮಾಡಿತು.
ದುರಂತದಲ್ಲಿ ಮೃತಪಟ್ಟವರೆಲ್ಲಾ ಕೂಲಿ ಕಾರ್ಮಿಕರಾಗಿದ್ದರಿಂದಾಗಿ, ಆ ಸಾವುಗಳಿಗೆ ಕಾರಣ ರಾದವರು ಶಿಕ್ಷೆಯಿಂದ ಸುಲಭವಾಗಿ ಪಾರಾದರು. 1997ರಲ್ಲಿ ದೆಹಲಿಯ ಉಪಾಹಾರ್ ಚಿತ್ರ ಮಂದಿರದಲ್ಲಿ ಪ್ರದರ್ಶನ ನಡೆಯುತ್ತಿದ್ದಾಗಲೇ ಸಂಭವಿಸಿದ ಅಗ್ನಿ ಅವಘಡದಲ್ಲಿ ೫೯ ಜನರು ಮೃತಪಟ್ಟರು (ಅನೇಕ ತಂದೆ-ತಾಯಿಯರು ತಮ್ಮ ಮಕ್ಕಳನ್ನು ಕಳೆದುಕೊಂಡರು) ಹಾಗೂ 103 ಜನರು ಗಂಭೀರವಾಗಿ ಗಾಯಗೊಂಡರು.
೧೮ ವರ್ಷಗಳವರೆಗೆ ನಡೆದ ಈ ಮೊಕದ್ದಮೆಯ ವಿಚಾರಣೆಯ ತರುವಾಯ 2015ರಲ್ಲಿ ಚಿತ್ರ ಮಂದಿರದ ಮಾಲೀಕರಿಗೆ ೨ ವರ್ಷಗಳ ಶಿಕ್ಷೆ ನೀಡಲಾಯಿತು. ಮೊಕದ್ದಮೆಯ ವಿಚಾರಣೆ ನಡೆಯುವ ಸಂದರ್ಭದಲ್ಲಿ ಮಿಕ್ಕ ತಪ್ಪಿತಸ್ಥರು ಜೈಲಿನಲ್ಲಿದ್ದ ಕಾರಣ ಅವರ ಶಿಕ್ಷೆಯು ಕಾರ್ಯಗತ ವಾಗಲಿಲ್ಲ.
2005ರ ಜನವರಿಯಲ್ಲಿ, ಮಹಾರಾಷ್ಟ್ರದ ಸತಾರ ಜಿಲ್ಲೆಯ ಮಂದಾರ್‌ದೇವಿ ದೇವಸ್ಥಾನದಲ್ಲಿ ದೇವಿಯ ದರ್ಶನಕ್ಕೆ ೩ ಲಕ್ಷ ಜನರು ಸೇರಿದ್ದರು. ವದಂತಿಯನ್ನು ನಂಬಿ ಏಕಾಏಕಿ ಜನರು ನುಗ್ಗಿದ ಕಾರಣ ಕಾಲ್ತುಳಿತ ನಡೆದು 291 ಭಕ್ತಾದಿಗಳು ಸಾವನ್ನಪ್ಪಿದರು.
2008ರಲ್ಲಿ ಹಿಮಾಚಲ ಪ್ರದೇಶದ ನೈನಾದೇವಿ ಮಂದಿರದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ 146 ಭಕ್ತರು ಅಸುನೀಗಿದರು ಹಾಗೂ 150ಕ್ಕೂ ಹೆಚ್ಚು ಜನರು ಗಾಯಗೊಂಡರು. ಯಥಾಪ್ರಕಾರ ಈ ದುರಂತಕ್ಕೆ ಯಾರೂ ಹೊಣೆಯಾಗದ ಕಾರಣ, ಮಂದಿರದ ಆಡಳಿತ ಮಂಡಳಿಯವರು ಯಾವುದೇ ಶಿಕ್ಷೆಯಿಲ್ಲದೆ ಪಾರಾದರು.
2010ರಲ್ಲಿ ಉತ್ತರ ಪ್ರದೇಶದ ಪ್ರತಾಪಗಢದ ‘ರಾಮಜಾನಕಿ ದೇಗುಲ’ದಲ್ಲಿ ನಡೆದ ಕಾಲ್ತುಳಿತದ ದುರಂತದಲ್ಲಿ 63 ಭಕ್ತಾದಿಗಳು ಮೃತಪಟ್ಟು, 74 ಮಂದಿ ಗಂಭೀರವಾಗಿ ಗಾಯಗೊಂಡರು. ರಾಜಕಾರಣಿಗಳು ತಮ್ಮ ಮಾಮೂಲು ಧಾಟಿಯಲ್ಲಿ ವಿಷಾದ ವ್ಯಕ್ತಪಡಿಸಿ, ಸರಕಾರದ ವತಿಯಿಂದ ಪರಿಹಾರ ನೀಡಿ ಕೈತೊಳೆದುಕೊಂಡರು. ದುರಂತಕ್ಕೆ ಕಾರಣರಾದವರ ಮೇಲೆ ಯಾವ ಕ್ರಮವನ್ನೂ ಜರುಗಿಸುವ ಗೋಜಿಗೇ ಹೋಗಲಿಲ್ಲ.
2024ರ ಜುಲೈನಲ್ಲಿ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಬೋಲೆ ಬಾಬಾ ಸತ್ಸಂಗದ ಸಮಯದಲ್ಲಿ ನಡೆದ ಕಾಲ್ತುಳಿತದಲ್ಲಿ 121 ಜನರು ಅಸುನೀಗಿದರು, 150 ಜನರು ಗಾಯಗೊಂಡರು. ಸ್ವಯಂ ಘೋಷಿತ ದೇವಮಾನವ ಬೋಲೆ ಬಾಬಾರ ಪಾದ ಸ್ಪರ್ಶಿಸಿದ್ದ ಮಣ್ಣನ್ನು ಪಡೆಯಲು ನಡೆದ ನುಗ್ಗಾಟದಲ್ಲಿ ಈ ಅನಾಹುತ ಸಂಭವಿಸಿತ್ತು.
2024ರ ನವೆಂಬರ್‌ನಲ್ಲಿ ಉತ್ತರ ಪ್ರದೇಶದ ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಬೆಂಕಿ ಅಪಘಾತದಲ್ಲಿ, ಜಗತ್ತಿಗೆ ಕಣ್ಣು ಬಿಟ್ಟ ಕೆಲವೇ ಗಂಟೆಗಳಲ್ಲಿ ೧೦ ನವಜಾತ ಶಿಶುಗಳು ಮೃತಪಟ್ಟವು. ಆಸ್ಪತ್ರೆಯ ಆಡಳಿತ ಮಂಡಳಿಯ ಬೇಜವಾಬ್ದಾರಿತನ ಇದಕ್ಕೆ ಕಾರಣವಾಗಿತ್ತು.
2025ರ ಜೂನ್‌ನಲ್ಲಿ, ಆರ್‌ಸಿಬಿ ತಂಡವು ಚೊಚ್ಚಲ ಐಪಿಎಲ್ ಗೆಲುವನ್ನು ಸಂಭ್ರಮಿಸಲು ತವಕಿಸು ತ್ತಿತ್ತು. ಬೆಂಗಳೂರಿನ ಕೆಎಸ್‌ಸಿಎ ಕ್ರೀಡಾಂಗಣದ ಮುಂಭಾಗದಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಕ್ರಿಕೆಟ್ ಪ್ರೇಮಿಗಳು ಸ್ಟೇಡಿಯಂನ ಒಳಹೋಗಲು ಧಾವಿಸಿ, ಆಗ ನಡೆದ ನೂಕು ನುಗ್ಗಲಿನಲ್ಲಿ ೧೧ ಮಂದಿ ಕ್ರೀಡಾಪ್ರೇಮಿಗಳು ಸಾವನ್ನಪ್ಪಿದರು. ಸರಕಾರ ಮತ್ತು ಆರ್‌ಸಿಬಿ ತಂಡದ ಆಡಳಿತ ವ್ಯವಸ್ಥೆಯ ಬೇಜವಾಬ್ದಾರಿ ಇದಕ್ಕೆ ಕಾರಣವಾಗಿತ್ತು.
2025ರ ಜೂನ್ ೩೦ರಂದು, ತೆಲಂಗಾಣ ರಾಜ್ಯದ ಸಂಗರೆಡ್ಡಿ ಜಿಲ್ಲೆಯ ಪಾಶಮೈಲಾರಂನಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ರಿಯಾಕ್ಟರ್ ಘಟಕವನ್ನು ಹೊಂದಿದ್ದ ಕಟ್ಟಡದ ಮೇಲೆ ಸ್ಫೋಟ ದ ನಂತರ ಬೆಂಕಿ ಕಾಣಿಸಿಕೊಂಡಿತು. ಇದಕ್ಕೆ ೪೬ ಮಂದಿ ಬಲಿಯಾಗಿ, ೩೩ ಮಂದಿ ಗಾಯ ಗೊಂಡರು. ಸುರಕ್ಷತೆಯಲ್ಲಿನ ದೋಷದಿಂದಾಗಿ ಅನಾಹುತ ಸಂಭವಿಸಿದೆ ಎಂಬ ವಿಚಾರವು ನಂತರ ದಲ್ಲಿ ಬಯಲಾಯಿತು.
2025ರ ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನ ಕರೂರಿನಲ್ಲಿ, ಚಿತ್ರನಟ ವಿಜಯ್‌ರವರ ಟಿವಿಕೆ ಪಕ್ಷದ ಪ್ರಚಾರ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ೪೨ ಜನರು ಮೃತಪಟ್ಟು ನೂರಾರು ಜನರು ಗಾಯಗೊಂಡರು. ಆದರೆ, ಸರಕಾರ ಮತ್ತು ಟಿವಿಕೆ ಪಕ್ಷದವರು ನಡೆಸುತ್ತಿರುವ ಆರೋಪ- ಪ್ರತ್ಯಾ ರೋಪಗಳ ನಡುವೆ, ಮೃತಪಟ್ಟವರ ಕುಟುಂಬಿಕರಿಗೆ ನ್ಯಾಯ ದೊರೆಯುವುದು ದೂರದ ಮಾತಾಗಿದೆ.
2025ರ ಡಿಸೆಂಬರ್ ೬ರಂದು ಗೋವಾದ ರೋಮಿಯೇ ಲೇನ್ ನೈಟ್‌ಕ್ಲಬ್‌ನಲ್ಲಿ ನಡೆದ ಬೆಂಕಿ ಅವಘಡದಲ್ಲಿ ೨೫ ಜನರು ಸುಟ್ಟು ಕರಕಲಾದರು. ಸುರಕ್ಷತಾ ನಿಯಮವನ್ನು ಉಲ್ಲಂಘಿಸಿ, ಗಾಳಿ ಯಾಡಲು ಕೂಡ ಅವಕಾಶವಿಲ್ಲದ ನೆಲಮಹಡಿಯಲ್ಲಿ ಅಡುಗೆ ಮನೆಯನ್ನು ಸಜ್ಜುಗೊಳಿಸ ಲಾಗಿತ್ತು.
ಸಿಲಿಂಡರ್ ಸ್ಫೋಟವಾಗಿದ್ದರಿಂದ ಕ್ಲಬ್ ನೌಕರರು ಉಸಿರುಕಟ್ಟಿ ಮೃತಪಟ್ಟರು. ಆದರೆ, ೨೫ ಜನರ ಸಾವಿನ ನಂತರ, ‘ಈ ಕ್ಲಬ್ನಿಯಮಾವಳಿಯನ್ನು ಉಲ್ಲಂಘಿಸಿ ಕಾರ್ಯಾಚರಣೆ ನಡೆಸುತ್ತಿತ್ತು’ ಎಂದು ಈಗ ಅಧಿಕಾರಿಗಳು ಉಲಿಯುತ್ತಿದ್ದಾರೆ. ಪ್ರಾಯಶಃ ದೇಶದ ಜನಸಂಖ್ಯೆಯು 140 ಕೋಟಿಯನ್ನು ದಾಟಿರುವ ಕಾರಣ, ಜನರ ಪ್ರಾಣದ ಬಗ್ಗೆ ಸಂಬಂಧಪಟ್ಟವರಿಗೆ ಯಾವ ಕಾಳಜಿಯೂ ಇಲ್ಲವಾಗಿದೆ ಎನಿಸುತ್ತದೆ. ಸತ್ತವರ ಬಗ್ಗೆ ನಾಲ್ಕು ಸಂತಾಪದ ಮಾತಾಡಿ ಎರಡು ಹನಿ ‘ಮೊಸಳೆ ಕಣ್ಣೀರು’ ಸುರಿಸಿ ಬಿಟ್ಟರೆ, ಸರಕಾರದ ವತಿಯಿಂದ ಒಂದಿಷ್ಟು ಪರಿಹಾರ ಧನವನ್ನು ನೀಡಿಬಿಟ್ಟರೆ ಆಯಿತು!
ಆದರೆ ನಿರ್ಲಕ್ಷ್ಯದ ಕಾರಣ ಪದೇಪದೆ ಸಂಭವಿಸುತ್ತಿರುವ ದುರಂತಗಳನ್ನು ತಡೆಯುವ ಕುರಿತು ಯಾರಿಗೂ ಆಲೋಚನೆಯೇ ಇಲ್ಲದಂತಾಗಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುವ ಸಂದರ್ಭದಲ್ಲಿ ನೂರಾರು ಕಾಲ್ತುಳಿತ ಪ್ರಕರಣಗಳು ಸಂಭವಿಸಿವೆ. ಹಬ್ಬ-ಹರಿದಿನ ಗಳಲ್ಲಿ ಜನದಟ್ಟಣೆ ತಲೆದೋರುವ ಬಗ್ಗೆ ಸರಕಾರಕ್ಕೆ ಮತ್ತು ಆಯಾ ದೇವಸ್ಥಾನಗಳ ಆಡಳಿತ ಮಂಡಳಿಗಳಿಗೆ ಮಾಹಿತಿಯಿರುತ್ತದೆ.
ಆದರೆ ಅದಕ್ಕನುಗುಣವಾಗಿ, ಜನಸಂದಣಿಯ ನಿಯಂತ್ರಣಕ್ಕೆ ಅನುಸರಿಸಬೇಕಾದ ಮಾರ್ಗ ಸೂಚಿಯ ಪಾಲನೆಯಾಗುವುದಿಲ್ಲ. ಆಡಳಿತ ಮಂಡಳಿಗಳು ಜನರ ಸುರಕ್ಷತೆಯನ್ನು ದೇವರ ಮೇಲೆ ಹಾಕಿ ನಿಶ್ಚಿಂತೆ ಯಿಂದ ಇರುವ ಕಾರಣಕ್ಕೆ ಅಮಾಯಕ ಭಕ್ತರು ಬಲಿಯಾಗುತ್ತಿದ್ದಾರೆ.
ಅಪರಾಧ ದೊಡ್ಡದಾದಷ್ಟೂ ಕಾನೂನಿನ ಹಿಡಿತದಿಂದ ಬಚಾವಾಗುವುದು ನಮ್ಮಲ್ಲಿ ಬಹಳ ಸುಲಭ. ಭೋಪಾಲ್ ಅನಿಲ ದುರಂತದಲ್ಲಿ 20,000 ಜನರು ತರಗೆಲೆಗಳಂತೆ ಮೃತ ಪಟ್ಟಾಗಲೂ ಯಾರಿಗೂ ಶಿಕ್ಷೆಯಾಗಲಿಲ್ಲ ಎಂದರೆ, ನಮ್ಮ ನ್ಯಾಯದಾನ ವ್ಯವಸ್ಥೆಯ ಶಿಥಿಲತೆಗೆ ಅದಕ್ಕಿಂತ ಉದಾಹರಣೆ ಬೇಕೇ? ಸುರಕ್ಷತಾ ನಿಯಮಗಳನ್ನು ಅನುಸರಿಸದೆ, ನೀತಿ- ನಿಯಮಾವಳಿಗಳನ್ನು ಕಾಲಕಸಕ್ಕಿಂತ ಕಡೆಯಾಗಿ ಕಾಣುತ್ತಿದ್ದರೂ ಅಧಿಕಾರಿಗಳು ಅದರ ಬಗ್ಗೆ ಕ್ರಮ ಜರುಗಿಸುವುದಿಲ್ಲ.
ಆಡಳಿತವನ್ನು ಡೆಸುವವರು, ಅನಾಹುತ ನಡೆದ ಮೇಲೆ ಎದ್ದೇಳುತ್ತಾರೆ. ಅವಘಡಗಳು ಸಂಭವಿಸು ತ್ತಿದ್ದರೂ ಅದರಿಂದ ಯಾರೂ ಪಾಠ ಕಲಿಯುತ್ತಿಲ್ಲ. ಯಾರದೋ ನಿರ್ಲಕ್ಷ್ಯಕ್ಕೆ ಸಾವಿರಾರು ಜನರು ಸಾಯುವಂತಾಗುತ್ತಿದೆ. ಶೇ.90ರಷ್ಟು ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲದಿರುವುದು ತೀವ್ರ ನೋವಿನ ಸಂಗತಿ.
ಹೆಚ್ಚುತ್ತಿರುವ ಜನಸಂಖ್ಯೆಯ ಕಾರಣ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನಸಂದಣಿ ಮಿತಿಮೀರಿ ಸೇರುತ್ತಿದೆ. ಹೀಗಾಗಿ, ಆಡಳಿತ ನಡೆಸುವವರು ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿ ಕೊಳ್ಳದೆ, ನಿಯಮಾವಳಿ ಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತಾಗುವ ನೀತಿ ಜಾರಿಗೆ ಬರಬೇಕಾ ಗಿದೆ.
ನಿರ್ದಿಷ್ಟ ಅನಾಹುತ ಸಂಭವಿಸಿದ ನಂತರ, ಯಾವೆಲ್ಲ ನಿಯಮಗಳ ಉಲ್ಲಂಘನೆಯಾಗಿತ್ತು ಎಂದು ಪಟ್ಟಿ ಮಾಡುವ ಬದಲು, ಅದು ಸಂಭವಿಸದ ಹಾಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳ ಬೇಕಾಗಿದೆ. ದುರಂತ ನಡೆದಾಗ, ಅದಕ್ಕೆ ಹೊಣೆಗಾರರು ಯಾರು ಎಂಬುದನ್ನು ಗುರುತಿಸುವ ಪರಿಪಾಠವಿಲ್ಲ, ಇದರಿಂದಾಗಿ ಮೃತ ಪಟ್ಟವರಿಗೆ ನ್ಯಾಯವು ದೊರೆಯುತ್ತಿಲ್ಲ.
ಇದರೊಂದಿಗೆ, ಮೊಕದ್ದಮೆಯ ವಿಚಾರಣೆಯು ಸುದೀರ್ಘವಾಗಿ ನಡೆಯುವ ಕಾರಣದಿಂದಾಗಿ ಬೇಸತ್ತ ಸಂತ್ರಸ್ತರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ, ಹೀಗಾಗಿ ಅನೇಕ ಆರೋಪಿಗಳು ಕಾನೂನಿನ ಹಿಡಿತದಿಂದ ಪಾರಾಗುತ್ತಿದ್ದಾರೆ. ಜನರು ತಮ್ಮ ಪ್ರಾಣಕ್ಕಾಗುವ ಅಪಾಯವನ್ನು ಲೆಕ್ಕಿಸದೆ ಅನಗತ್ಯ ತಳ್ಳಾಟದಲ್ಲಿ ತೊಡಗುವುದರಿಂದ ಮತ್ತು ಎಲ್ಲರನ್ನೂ ಹಿಂದೆ ಹಾಕಿ ಮುನ್ನುಗ್ಗಲು ಪ್ರಯತ್ನಿಸುವು ದರಿಂದ ಕಾಲ್ತುಳಿತ ಉಂಟಾಗುತ್ತದೆ.
ಅತಿ ಹೆಚ್ಚು ಜನಸಂದಣಿ ಇರುವ ಜಾಗಗಳಿಗೆ ಮಕ್ಕಳೊಂದಿಗೆ ಹೋಗಬಾರದು ಎಂಬ ವಿವೇಕವು ಅನೇಕರಲ್ಲಿ ಇಲ್ಲದಿರುವುದೂ ಶೋಚನೀಯ ಸಂಗತಿ. ಜನದಟ್ಟಣೆಯ ಜಾಗದಲ್ಲಿ ನಾಗರಿಕರು ಕೇವಲ ಸರಕಾರವನ್ನು ಅವಲಂಬಿಸದೆ ತಮ್ಮ ಸುರಕ್ಷತೆಯ ಬಗ್ಗೆ ಗಮನ ನೀಡಬೇಕಿದೆ. ಅವರು ತಂತಮ್ಮ ಪ್ರಾಣವನ್ನು ಕಾಪಾಡಿಕೊಳ್ಳಲು ಇದು ಅನಿವಾರ್ಯವಾಗಿದೆ.
(ಲೇಖಕರು ಬಿಜೆಪಿಯ ವಕ್ತಾರರು)