Yagati Raghu Naadig Column: ಛಾಯಾಗ್ರಾಹಕರಿಗೆ ಅರಿವಾಯ್ತು ʼಛಾಯೆʼಯ ಮಹತ್ವ !
ಚಿತ್ರೀಕರಿಸಿದ ದೃಶ್ಯ ಹೇಗೆ ಬಂದಿದೆ ಎಂಬುದು ಛಾಯಾಗ್ರಾಹಕರಿಗೆ ಕೆಲವೊಮ್ಮೆ ಗೊತ್ತಾಗುತ್ತಿದ್ದುದು ಚಿತ್ರ ಬಿಡುಗಡೆ ಯಾದ ಮೇಲೆಯೇ ಅಥವಾ ಅವಕಾಶ ಸಿಕ್ಕಲ್ಲಿ ಸಂಕಲನದ ಕೊಠಡಿಯಲ್ಲಿ! ಹೀಗಾಗಿ ಛಾಯಾ ಗ್ರಾಹಕ ಚಿಟ್ಟಿಬಾಬು ಮನದ ಮೂಲೆಯಲ್ಲಿ ‘ಎಚ್ಚರಿಕೆಯ ಗಂಟೆ’ ಹೊಡೆದು ಕೊಳ್ಳುತ್ತಲೇ ಇತ್ತು. ಅದು ತನ್ನ ಸದ್ದನ್ನು ನಿಲ್ಲಿಸಿದ್ದು, ಪುಟ್ಟಣ್ಣರು ಚಿತ್ರದ ಸಂಕಲನ ಕಾರ್ಯದ ವೇಳೆ ಚಿಟ್ಟಿ ಬಾಬುರನ್ನು ಕರೆಸಿಕೊಂಡು ಆ ದೃಶ್ಯವನ್ನು ‘ಮೂವಿಯಾಲಾ’ದಲ್ಲಿ ತೋರಿಸಿದ ಮೇಲೆಯೇ!

ಹಿರಿಯ ಉಪಸಂಪಾದಕ ಹಾಗೂ ಅಂಕಣಕಾರ ಯಗಟಿ ರಘು ನಾಡಿಗ್

ರಸದೌತಣ
ಯಗಟಿ ರಘು ನಾಡಿಗ್
naadigru@gmail.com
ಧೀರೇಂದ್ರ ಗೋಪಾಲರು ‘ನಾಗರಹಾವು’ ಚಿತ್ರದ ತುಕಾರಾಮನ ಪಾತ್ರಕ್ಕೆ ಆಯ್ಕೆಯಾದ ಪರಿ ಮತ್ತು ತಾಂತ್ರಿಕ ಯಡವಟ್ಟಿನಿಂದಾಗಿ ಕುಸಿದುಹೋಗಿದ್ದ ಪುಟ್ಟಣ್ಣರನ್ನು ಮಾಸ್ಟರ್ ಹಿರಣ್ಣಯ್ಯನವರು ಉತ್ತೇಜಿಸಿ ಮತ್ತೊಮ್ಮೆ ಚಿತ್ರೀಕರಣಕ್ಕೆ ಸಜ್ಜುಗೊಳಿಸಿದ ಪ್ರಸಂಗವನ್ನು ಕಳೆದ ಸಂಚಿಕೆಯಲ್ಲಿ ಓದಿ ದಿರಿ. ಈಗ ಮತ್ತಷ್ಟು ಬಿಡಿ ಪ್ರಸಂಗಗಳು..
***
ಯಾವುದೇ ಚಿತ್ರದ ಪ್ರಾರಂಭಕ್ಕೂ ಮುನ್ನ, ಸಂಭಾಷಣೆ/ ಹಾಡಿನ ಭಾಗಗಳಿಗೆ ಹೊರಾಂಗಣದ ಹಿನ್ನೆಲೆ ಅಗತ್ಯವಿದ್ದರೆ ಅಂಥ ಸೂಕ್ತ ತಾಣಗಳನ್ನು ಹೆಕ್ಕಲೆಂದು ನಿರ್ಮಾಪಕರು /ನಿರ್ದೇಶಕರು ಊರೂರು ಸುತ್ತುವುದುಂಟು. ಪುಟ್ಟಣ್ಣ ಕಣಗಾಲರೂ ಇದಕ್ಕೆ ಹೊರತಾಗಿರಲಿಲ್ಲ. ಅದರಲ್ಲೂ, ‘ನಾಗರಹಾವು’ ಚಿತ್ರದ ನಿರ್ವಹಣೆಯನ್ನು ಸ್ವತಃ ಹೆಗಲ ಮೇಲೆ ಹೊತ್ತಿದ್ದರಿಂದಾಗಿ ಹೊರಾಂಗಣದ ಆಯ್ಕೆಗೆ ಒಂದು ಗುಕ್ಕು ಹೆಚ್ಚೇ ಆಸ್ಥೆ ವಹಿಸಿದ್ದರು. ‘ನಾಗರಹಾವು’ ಕಥೆ ನಡೆಯುವುದು ಚಿತ್ರ ದುರ್ಗದ ಹಿನ್ನೆಲೆಯಲ್ಲೇ ಆದರೂ, ಇದಕ್ಕೆ ಆಧಾರವಾಗಿದ್ದ ತರಾಸು ಅವರ ಕಾದಂಬರಿಗಳಲ್ಲಿ ಅಲ್ಲಿನ ಕೋಟೆ-ಕೊತ್ತಲಗಳ ಬಗ್ಗೆ ವಿವರಣೆಯಿರಲಿಲ್ಲ. ಹೀಗಾಗಿ, ಚಿತ್ರದುರ್ಗದ ಕೋಟೆಯ ವೈಶಿಷ್ಟ್ಯ ಮತ್ತು ಚಾರಿತ್ರಿಕ ಹಿನ್ನೆಲೆಯೇನು, ಅದರ ಹಿಂದೆ ಯಾವೆಲ್ಲಾ ರಾಜರ ವೀರತ್ವ-ವೈಭವ ವಿತ್ತು, ಅದಕ್ಕೆ ಲಗ್ಗೆ ಹಾಕಲು ಹೈದರಾಲಿ ಹೂಡಿದ ಸಂಚನ್ನು ವೀರವನಿತೆ ಓಬವ್ವ ಹೇಗೆ ವಿಫಲ ಗೊಳಿಸಿದಳು ಎಂಬುದನ್ನು ಕನ್ನಡ ಚಿತ್ರರಸಿಕರಿಗೆ ಕಟ್ಟಿಕೊಡ ಬೇಕು ಎಂದು ಸಂಕಲ್ಪಿಸಿದ್ದ ಪುಟ್ಟ ಣ್ಣ, ಇದಕ್ಕಾಗಿ ಕೋಟೆಯನ್ನು ಸಾಕಷ್ಟು ಸಲ ಹತ್ತಿಳಿದರು, ಮೂಲೆಗಳನ್ನೆಲ್ಲಾ ತಡಕಿದರು.

ಏಕನಾಥೇಶ್ವರಿ ದೇಗುಲದ ಮುಂದೆ ನಿಂತು ಎರಡೂ ಕೈಗಳ ಹೆಬ್ಬೆರಳು ತೋರುಬೆರಳುಗಳನ್ನೊಮ್ಮೆ ಅಗಲಿಸಿ, ಕ್ಯಾಮೆರಾ ಕಣ್ಣಿನಂತೆ ಮಾಡಿಕೊಂಡು, ರಾಮಾಚಾರಿಗೆ ಚಾಮಯ್ಯ ಮೇಷ್ಟ್ರು ಬೆತ್ತದಿಂದ ಬಾರಿಸುವ, ಅದಕ್ಕೆ ರಾಮಾಚಾರಿ ಕ್ರೋಧಗೊಂಡು ಅವರ ಮೇಲೆ ಅಪ್ಪಳಿಸಲು ಪೇಡುಗಲ್ಲನ್ನು ಎತ್ತಿಹಿಡಿಯುವ ದೃಶ್ಯಗಳನ್ನೆಲ್ಲಾ ಕಲ್ಪಿಸಿಕೊಂಡರು. ಚಾಮಯ್ಯ ಮೇಷ್ಟ್ರು ತಮ್ಮ ಪಟ್ಟಶಿಷ್ಯನನ್ನು ಒಲಿಸಿಕೊಳ್ಳಲು ಕಡಿದಾದ ಬಂಡೆಯೇರಿ ತಲುಪಬೇಕಾಗಿ ಬರುವ ತುಪ್ಪದ ಕೊಳ, ರಾಮಾಚಾರಿ-ಜಲೀಲನ ಫೈಟಿಂಗ್ ನಡೆಯುವ ರಂಗಯ್ಯನ ಬಾಗಿಲು ತಾಣ, ಊರಿನ ಗರಡಿಮನೆ, ಸುಲ್ತಾನ್ ಬತೇರಿ ಇವೆಲ್ಲವನ್ನೂ ಗುರುತು ಹಾಕಿಕೊಂಡರು. ಅಷ್ಟಕ್ಕೂ, ಚಿತ್ರಕಥೆ ಬರೆಯುವ ಹಂತದಲ್ಲೇ ‘ನಾಗರ ಹಾವು’ ಅವರ ಮಿದುಳಿನಲ್ಲಿ ಸಾಕಷ್ಟು ಸಲ ಸುಳಿದಾಡಿ ಹೆಡೆಬಿಚ್ಚಿ ಆಗಿತ್ತಲ್ಲಾ?!
ಯಾವುದೇ ಚಲನಚಿತ್ರದಲ್ಲಿ ಜನಜಂಗುಳಿ/ಸಮೂಹ ನೃತ್ಯದ ದೃಶ್ಯವನ್ನು ಚಿತ್ರೀಕರಿಸುವಾಗ, ಪ್ರಮುಖ ತಾರಾಗಣದಲ್ಲಿಲ್ಲದ ‘ಜೂನಿಯರ್ ಕಲಾವಿದರನ್ನು’ ಬಳಸಿಕೊಳ್ಳುವುದುಂಟು. ‘ನಾಗರ ಹಾವು’ ಚಿತ್ರದ ‘ಕನ್ನಡನಾಡಿನ ವೀರರಮಣಿಯ, ಗಂಡುಭೂಮಿಯ ವೀರನಾರಿಯ’ ಹಾಡಿನಲ್ಲಿ ಬರುವ ಮದಕರಿ ನಾಯಕ ಹಾಗೂ ಹೈದರಾಲಿಯ ಸೈನ್ಯದ ಸೆಣಸಾಟವನ್ನು ಬಿಂಬಿಸುವಾಗ ಇಂಥ ದೇ ಅನಿವಾರ್ಯತೆ ಎದುರಾಗಿತ್ತು. ಆದರೆ ಪುಟ್ಟಣ್ಣ ಈ ವಿಷಯದಲ್ಲೂ ಹೊರಳುದಾರಿ ತುಳಿದರು. ಎರಡೂ ಬಣಗಳ ಸೈನಿಕರ ಪಾತ್ರಗಳಿಗೆ ಅವರು ಬಳಸಿದ್ದು ಜೂನಿಯರ್ ಕಲಾವಿದ ರನ್ನಲ್ಲ, ಬದಲಿಗೆ ಕರ್ನಾಟಕ ರಾಜ್ಯದ ‘ಗೃಹರಕ್ಷಕ ದಳ’ದಲ್ಲಿ ಸೇವೆ ಸಲ್ಲಿಸುತ್ತಿದ್ದ ‘ಹೋಮ್ ಗಾರ್ಡ್’ಗಳನ್ನು. ಹೌದು, ಈ ಹಾಡಿನ ದೃಶ್ಯದಲ್ಲಿ ಮದಕರಿ ನಾಯಕ ಮತ್ತು ಹೈದರಾಲಿ ಬಣದ ಸೈನಿಕರಾಗಿ, ಎರಡು ಬಗೆಯ ಸೇನಾ-ಸಮವಸ ತೊಟ್ಟು ಅಭಿನಯಿಸಿದವರು ಬರೋಬ್ಬರಿ 220 ಮಂದಿ ಹೋಮ್ ಗಾರ್ಡ್‌ಗಳು! ಇವರೆಲ್ಲಾ ಇದೇ ಮೊದಲ ಬಾರಿಗೆ ಸಿನಿಮಾ ಕ್ಯಾಮೆರಾವನ್ನು ಎದುರಿಸಿರುವವರು, ಕಲಾವಿದ ವೃತ್ತಿಗೆ ಹೊರತಾದವರು ಎಂಬುದು ಪ್ರೇಕ್ಷಕರಿಗೆ ಅರಿವಾಗದಷ್ಟರ ಮಟ್ಟಿಗೆ ಅವರನ್ನು ಬಿಂಬಿಸಿದ ಹೆಗ್ಗಳಿಕೆ ಪುಟ್ಟಣ್ಣನವರದ್ದು. ರಾಜ ಮನೆತನಗಳಲ್ಲಿ ಹಾಸುಹೊಕ್ಕಾಗಿದ್ದ ವೈಭವ, ಸಂಚುಗಾರಿಕೆ, ಗೂಢಚರ್ಯೆ, ಆಕ್ರಮಣಕಾರಿ ವರ್ತನೆ, ಯುದ್ಧದ ಹಪಾಹಪಿಗಳನ್ನು ಮಾತ್ರವಲ್ಲದೆ, ಮೂಲೆಯಲ್ಲೆಲ್ಲೋ ಇದ್ದು ತಮ್ಮ ಕರ್ತವ್ಯ ನಿರ್ವಹಿಸುತ್ತಾ ಯಾರಿಗೂ ಗೊತ್ತಾಗದ ಎಲೆಮರೆಯ ಕಾಯಿಗಳಾಗೇ ಉಳಿದುಬಿಡುವ ‘ಒನಕೆ ಓಬವ್ವ’ ರಂಥವರನ್ನು ಇದೊಂದೇ ಹಾಡಿನಲ್ಲಿ ಸಮರ್ಥ ವಾಗಿ ಬಿಂಬಿಸಿದ ಪುಟ್ಟಣ್ಣರ ಪ್ರತಿಭೆಗೆ ಸಾಟಿಯುಂಟೇ!
ತನ್ನ ಅನುರಾಗಕ್ಕೆ ‘ಎಳ್ಳು-ನೀರು’ ಬಿಟ್ಟು, ಅಣ್ಣನಾಗಿ ಅಲಮೇಲುವಿನ ಮದುವೆ ನಡೆಸಿಕೊಡ ಬೇಕಾದ ‘ಪರಿಸ್ಥಿತಿಯ ಶಿಶು’ವಾಗುವ ರಾಮಾಚಾರಿ, ತರುವಾಯದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಮಾರ್ಗರೇಟಳ ಮೋಹಪಾಶಕ್ಕೆ ಸಿಲುಕುವಂತಾಗುತ್ತದೆ. ‘ನಾವಿಬ್ಬರೂ ಹಾವು-ಮುಂಗುಸಿ ಇದ್ದಂತೆ, ಈ ಸಂಬಂಧ ಸಲ್ಲ’ ಎಂದು ಮಾರ್ಗರೇಟಳಿಗೆ ರಾಮಾಚಾರಿ ಎಷ್ಟೇ ಮನವರಿಕೆ ಮಾಡಿಕೊಟ್ಟರೂ ಅವಳ ಆಗ್ರಹಕ್ಕೆ ಮನಸೋತು ‘ಮನದನ್ನ’ ಆಗಬೇಕಾಗುತ್ತದೆ. ನಿಮಗೆ ನೆನಪಿರಲಿ, ಧರ್ಮ-ಧರ್ಮ ಗಳ ನಡುವೆ ಈಗ ಕಾಣುತ್ತಿರುವ ಅಸಮಾಧಾನ-ಸಹಿಷ್ಣುತೆಗಳು ‘ನಾಗರಹಾವು’ ಕಥೆಯ ಕಾಲಘಟ್ಟ ದಲ್ಲೂ ಇದ್ದವು, ಸಾಕಷ್ಟು ತೀವ್ರವಾಗಿದ್ದವು. ಇಂಥ ವಿಷಪರ್ವ ದಲ್ಲಿ, ಸಂಪ್ರದಾಯಸ್ಥ ಮಾಧ್ವ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ರಾಮಾಚಾರಿ ಹಾಗೂ ಕ್ರೈಸ್ತ ಧರ್ಮಕ್ಕೆ ಸೇರಿದ ‘ಅಲ್ಟ್ರಾ-ಮಾಡ್ರನ್’ ಶೈಲಿಯ ಮಾರ್ಗರೇಟಳ ನಡುವಿನ ‘ಹೃದಯ-ಮಿಲನ’ವನ್ನು ಮಾತ್ರವಲ್ಲದೆ, ಎರಡು ವಿಭಿನ್ನ ಧರ್ಮಗಳ ‘ಧರ್ಮ-ಸಂಕರ’ದ ಅಗತ್ಯವನ್ನೂ ತೆರೆಯ ಮೇಲೆ ಮನಮುಟ್ಟುವಂತೆ ಬಿಂಬಿಸುವುದು ಪುಟ್ಟಣ್ಣರ ಆಶಯವಾಗಿತ್ತು. ಅದನ್ನು ‘ವಾಚ್ಯ’ವಾಗಿ ಹೇಳುವುದಕ್ಕಿಂತ ‘ಸೂಚ್ಯ’ವಾಗಿ ಸಂಕೇತಿಸಿ ದರೆ ಹೇಗೆ? ಎಂಬ ಸುಳಿಮಿಂಚು ಅವರ ಮನದಲ್ಲಿ ಸುಳಿದಾಡಿತು. ಹೀಗಾಗಿ ಛಾಯಾಗ್ರಾಹಕ ಚಿಟ್ಟಿಬಾಬುರನ್ನು ಸನಿಹಕ್ಕೆ ಕರೆದು ಕೈ-ಬಾಯಿ ಆಡಿಸಿಕೊಂಡು ಅದೇನೋ ವಿವರಿಸಿದರು. ಆಗ ಚಿಟ್ಟಿಬಾಬು, ‘ಸರ್, ನಿಮ್ಮ ಕಲ್ಪನೆ ಯೇನೋ ಚೆನ್ನಾಗಿದೆ, ಆದರೆ ಅದು ಅಂದುಕೊಂಡಂತೆಯೇ ತೆರೆಯ ಮೇಲೆ ಬರುತ್ತಾ?’ ಎಂದು ಸಂದೇಹಿಸಿದರು. ಆಗ ಪುಟ್ಟಣ್ಣ ‘ಈಗ ನಾನು ಹೇಳಿದಂತೆ ನೀವು ಮಾಡಿ ರಾಜಾ.... ಒಂದೊಮ್ಮೆ ಅದು ಸರಿಯಾಗಿ ಬರದಿದ್ರೆ ನೀವು ಹೇಳಿದಂತೆ ನಾನು ಕೇಳ್ತೀನಿ...’ ಎಂದು ತೊಡೆತಟ್ಟಿದರು. ಹುರುಪುಗೊಂಡ ಚಿಟ್ಟಿ ಬಾಬು ಡಬಲ್ ಉತ್ಸಾಹದಲ್ಲಿ ಆ ದೃಶ್ಯವನ್ನು ಚಿತ್ರೀಕರಿಸಿಕೊಟ್ಟರು,
ಈಗೆಲ್ಲ ಚಿತ್ರೀಕರಣದ ವಿಷಯದಲ್ಲಿ ಸಾಕಷ್ಟು ತಾಂತ್ರಿಕ ಪ್ರಗತಿಗಳಾಗಿವೆ, ಚಿತ್ರೀಕೃತ ದೃಶ್ಯವನ್ನು ಮರುಕ್ಷಣವೇ ತಾಂತ್ರಿಕ ಪರಿಕರದಲ್ಲಿ ವೀಕ್ಷಿಸಿ, ಅದು ಸರಿಯಾಗಿ ಬಂದಿದೆಯೇ ಇಲ್ಲವೇ? ಮರು ಚಿತ್ರೀಕರಿಸಬೇಕೇ? ಎಂಬು ದನ್ನೆಲ್ಲಾ ನೋಡಿಕೊಂಡು ದೃಶ್ಯಪ್ರಸ್ತುತಿಯನ್ನು ಮತ್ತಷ್ಟು ‘ಪಕ್ಕಾ’ ಮಾಡಿಕೊಳ್ಳಲು ಸಾಧ್ಯವಿದೆ. ಆದರೆ ನೆನಪಿಡಿ, ನಾಗರಹಾವು ಚಿತ್ರೀಕರಣಗೊಂಡಿದ್ದು 1971-72ರ ಕಾಲಘಟ್ಟದಲ್ಲಿ, ಆಗ ಇಷ್ಟೊಂದು ತಾಂತ್ರಿಕ ಪರಿಕರಗಳು ಲಭ್ಯವಿರಲಿಲ್ಲ. ಚಿತ್ರೀಕರಿಸಿದ ದೃಶ್ಯ ಹೇಗೆ ಬಂದಿದೆ ಎಂಬುದು ಛಾಯಾಗ್ರಾಹಕರಿಗೆ ಕೆಲವೊಮ್ಮೆ ಗೊತ್ತಾಗುತ್ತಿದ್ದುದು ಚಿತ್ರ ಬಿಡುಗಡೆ ಯಾದ ಮೇಲೆಯೇ ಅಥವಾ ಅವಕಾಶ ಸಿಕ್ಕಲ್ಲಿ ಸಂಕಲನದ ಕೊಠಡಿಯಲ್ಲಿ! ಹೀಗಾಗಿ ಛಾಯಾ ಗ್ರಾಹಕ ಚಿಟ್ಟಿಬಾಬು ಮನದ ಮೂಲೆಯಲ್ಲಿ ‘ಎಚ್ಚರಿಕೆಯ ಗಂಟೆ’ ಹೊಡೆದು ಕೊಳ್ಳುತ್ತಲೇ ಇತ್ತು. ಅದು ತನ್ನ ಸದ್ದನ್ನು ನಿಲ್ಲಿಸಿದ್ದು, ಪುಟ್ಟಣ್ಣರು ಚಿತ್ರದ ಸಂಕಲನ ಕಾರ್ಯದ ವೇಳೆ ಚಿಟ್ಟಿ ಬಾಬುರನ್ನು ಕರೆಸಿಕೊಂಡು ಆ ದೃಶ್ಯವನ್ನು ‘ಮೂವಿಯಾಲಾ’ದಲ್ಲಿ ತೋರಿಸಿದ ಮೇಲೆಯೇ! (ಸಂಕಲನಕಾರರು ತಮ್ಮ ಕಾರ್ಯ ಹೇಗೆ ಬಿಂಬಿತವಾಗಿದೆ ಎಂಬುದನ್ನು ತಾಳೆ ನೋಡಲು ಬಳಸುವ ಒಂದು ಪುಟ್ಟ ವೀಕ್ಷಣಾ ಸಾಧನವೇ ಮೂವಿಯಾಲಾ). ಆ ದೃಶ್ಯ ಯಾವುದು ಗೊತ್ತೇ? ತಮ್ಮ ನಡು ವಿನ ಪ್ರೀತಿಯು ಮಾಗಿ ಪರಾಕಾಷ್ಠೆಗೆ ಮುಟ್ಟಿದೆ ಹಾಗೂಅದು ಜಾತಿ-ಧರ್ಮ ಗಳ ಗೋಡೆಯನ್ನೂ ಸೀಳಿಕೊಂಡು ಸಾಗುವ ಪ್ರೇಮವಾಹಿನಿಯಾಗಿದೆ ಎಂಬುದನ್ನು ತೋರಿಸಲು ರಾಮಾಚಾರಿ ಮತ್ತು ಮಾರ್ಗರೇಟ್ ಕ್ರಮವಾಗಿ ತಮ್ಮ ಕೊರಳಲ್ಲಿನ ಹನುಮಂತನ ತಾಯಿತ ಹಾಗೂ ಕ್ರಿಸ್ತನ ಶಿಲುಬೆಯ ಲಾಕೆಟ್ ಎರಡನ್ನೂ ಜೋಡಿಸಿ ಬೆಸೆದು ಪರಸ್ಪರರ ಕಂಗಳನ್ನೇ ದೃಷ್ಟಿಸ ತೊಡಗುತ್ತಾರೆ. ಶುರುವಿ ನಲ್ಲಿ ಬೆಳ್ಳಿತೆರೆಯ ತುಂಬಾ ಎದುರು-ಬದುರು ಈ ಇಬ್ಬರ ಮುಖ, ನಡುವೆ ಪರಸ್ಪರ ಬಂಧಿಸ ಲ್ಪಟ್ಟ ತಾಯಿತ-ಶಿಲುಬೆಗಳು ಕಾಣುತ್ತವೆ. ಕ್ರಮೇಣ ಕ್ಯಾಮೆರಾ ‘ಝೂಮ್-ಇನ್’ ಆಗಿ, ಇಬ್ಬರ ಮುಖಗಳೂ ಪಕ್ಕಕ್ಕೆ ಸರಿದು, ಸೂರ್ಯನ ಬೆಳಕಿನ ಹಿನ್ನೆಲೆಯಲ್ಲಿ ತಾಯಿತ-ಶಿಲುಬೆ ಸಂಪೂರ್ಣ ಬೆಳ್ಳಿತೆರೆಯನ್ನು ಆವರಿಸುತ್ತವೆ. ‘ಸಂಗಮ ಸಂಗಮ, ಅನುರಾಗ ಸಂಗ ಸಂಗಮ’ ಹಾಡು ಮೂಡಿ ಬರುತ್ತದೆ. ಈ ದೃಶ್ಯ ಪರಿಣಾಮಕಾರಿಯಾಗಿ ಮೂಡಿಬರುವುದರ ಬಗ್ಗೆ ಛಾಯಾಗ್ರಾಹಕ ಚಿಟ್ಟಿಬಾಬು ಅವರಿಗೇ ಸಂದೇಹವಿತ್ತು, ಆದರೆ ಕಿಲಾಡಿ ಪುಟ್ಟಣ್ಣ, ಹಿನ್ನೆಲೆಯಲ್ಲಿರುವ ಸೂರ್ಯನ ರಂಗಿಗೆ ಪ್ರತಿಯಾಗಿ ತಾಯಿತ-ಶಿಲುಬೆಗಳು ಛಾಯಾರೂಪದಲ್ಲಿ ಒಡ್ಡಿಕೊಂಡಿರುವಂತೆ ದೃಶ್ಯವನ್ನು ಸೆರೆಹಿಡಿದಿದ್ದರು. ಚಿತ್ರಮಂದಿರದಲ್ಲಿ ಈ ರಮ್ಯ ಮತ್ತು ಸಾಂಕೇತಿಕ ಪ್ರಸ್ತುತಿಯನ್ನು ಕಂಡವರು ನಿರಂತರ ಶಿಳ್ಳೆ ಹೊಡೆದಿದ್ದುಂಟು..!
***
ತಮ್ಮ ಚಿತ್ರದಲ್ಲಿ ಸುಮಧುರ ಸಂಗೀತ ಮತ್ತು ಅರ್ಥಪೂರ್ಣ ಹಾಡುಗಳಿಗೆ ಇನ್ನಿಲ್ಲದ ಒತ್ತು ನೀಡುತ್ತಿದ್ದುದು ಪುಟ್ಟಣ್ಣರ ಹೆಚ್ಚುಗಾರಿಕೆಯಾಗಿತ್ತು. ಅದರಲ್ಲೂ ‘ನಾಗರಹಾವು’ ಚಿತ್ರವು ತಮ್ಮ ಹಿಂದಿನ ‘ಶರಪಂಜರ’ವನ್ನು ಮೀರಿಸುವಷ್ಟರ ಮಟ್ಟಿಗಿನ ‘ಮಾಸ್ಟರ್ ಪೀಸ್’ ಆಗಿ ಹೊಮ್ಮಬೇಕು ಎಂಬ ಬಯಕೆ ಅವರಲ್ಲಿ ಮನೆಮಾಡಿತ್ತು. ಜತೆಗೆ, ಅದುವರೆಗಿನ ತಮ್ಮ ಬಹುಪಾಲು ಚಿತ್ರಗಳ ನಾಯಕಿಯಾಗಿದ್ದ ಕಲ್ಪನಾರಿಗೆ, ‘ನೀವಿಲ್ಲ ದೆಯೂ ನಾನು ಚಿತ್ರವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಬಲ್ಲೆ’ ಎಂಬ ಪರೋಕ್ಷ ಸಂದೇಶ ರವಾನಿಸುವ ಅಗತ್ಯವೂ ಪುಟ್ಟಣ್ಣರಿಗೆ ಇತ್ತು. ಈಗಾಗಲೇ ಉಲ್ಲೇಖಿಸಿರುವಂತೆ, ‘ಗೆಜ್ಜೆಪೂಜೆ’ ಚಿತ್ರ ದಲ್ಲಿ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಆರತಿಯವರು ‘ನಾಗರಹಾವು’ ನಾಯಕಿಯರ ಪೈಕಿ ಒಬ್ಬರಾಗಿ ಆಯ್ಕೆಯಾಗಿದ್ದರ ಜತೆಗೆ, ಪುಟ್ಟಣ್ಣರ ಅಂತರಂಗಕ್ಕೂ ಹತ್ತಿರವಾಗಿದ್ದರು. ಅದು ವೃತ್ತಿ ಸಂಬಂಧವನ್ನೂ ಮೀರಿದ ಬಾಂಧವ್ಯವಾಗಿದ್ದ ರಿಂದ, ಅವರನ್ನು ಬೆಳ್ಳಿತೆರೆಯಲ್ಲಿ ಹಿಂದೆ ಯಾರೂ ಬಿಂಬಿಸದ ರೀತಿಯಲ್ಲಿ ಅತಿವಿಶಿಷ್ಟವಾಗಿ ಚೆಂದಗಾಣಿಸಬೇಕು ಎಂಬ ಹಂಬಲ ಪುಟ್ಟಣ್ಣರಲ್ಲಿ ಮೊಳೆಯಿತು. ಸಾಮಾನ್ಯವಾಗಿ, ಚಿತ್ರದ ಗೀತೆಗಳ ಧ್ವನಿಮುದ್ರಣವು ಸ್ಟುಡಿಯೋ ದಲ್ಲಿ ನಡೆಯುವುದಕ್ಕೂ ಮುನ್ನ, ಗೀತರಚನೆ ಮತ್ತು ರಾಗಸಂಯೋ ಜನೆಯ ಬಾಬತ್ತುಗಳಿಗಾಗಿ ಚಿತ್ರ ನಿರ್ಮಾತೃಗಳು ಯಾವು ದಾದರೂ ಹೋಟೆಲ್‌ನಲ್ಲಿ ರೂಮ್ ವ್ಯವಸ್ಥೆ ಮಾಡಿ, ಅಲ್ಲಿ ಪರಸ್ಪರ ಚರ್ಚಿಸುವುದುಂಟು. ಆದರೆ, ನಾಗರಹಾವು ಚಿತ್ರೀಕರಣದ ವೇಳೆ ಚಿಗುರೊಡೆದ ಈ ಅನುರಾಗ ದಿಂದಾಗಿ ಪುಟ್ಟಣ್ಣ ಕೊಂಚ ‘ರೊಮ್ಯಾಂಟಿಕ್’ ಆಗಿಬಿಟ್ಟಿದ್ದರು. ಹೀಗಾಗಿ ಗೀತರಚನೆ, ರಾಗಸಂಯೋಜನೆಗೆಂದು ಜನದಟ್ಟಣೆ -ಜಂಜಾಟವಿರುವ ನಗರದ ಹೋಟೆಲ್ ನಲ್ಲಿ ರೂಮ್ ಹಾಕಿಸುವ ಬದಲಿಗೆ, ಶಿವನಸಮುದ್ರದ ಬಳಿಯ ಸುಂದರ-ಪ್ರಶಾಂತ ಸ್ಥಳವಾದ ಶಿಂಷಾದಲ್ಲಿನ ಪ್ರವಾಸಿ ಬಂಗಲೆಗೆ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಮತ್ತು ಗೀತರಚನೆಕಾರ ರನ್ನು ಕರೆದುಕೊಂಡು ಹೋದರು. ಅಲ್ಲಿ ಮೊದಲಿಗೆ ಸಂಯೋಜನೆಗೊಂಡಿದ್ದು ‘ಬಾರೆ ಬಾರೆ, ಚೆಂದದ ಚೆಲುವಿನ ತಾರೆ’ ಹಾಡು. ವಿಶೇಷವೆಂದರೆ, ಈ ಹಾಡಿನ ಪಲ್ಲವಿಯನ್ನು ನೀಡಿದ್ದು ರಸಿಕ ಪುಟ್ಟಣ್ಣನವರೇ... ಅದಕ್ಕೆ ಕಾರಣವೇನು? ಆ ಸಾಲುಗಳು ಯಾರನ್ನು ಕುರಿತದ್ದು? ಎಂಬುದನ್ನೆಲ್ಲಾ ಮತ್ತೊಮ್ಮೆ ವಿವರಿಸಬೇಕಿಲ್ಲ. ಹಾಡಿನ ರಾಗಸಂಯೋಜನೆಗೆಂದು ಕೂತಿದ್ದವರೆಲ್ಲಾ, ಓಹೋಹೋ... ಏನಿವತ್ತು ನಮ್ ಡೈರೆಕ್ಟ್ರು ಸಾಹೇಬ್ರು ತುಂಬಾನೇ ರೊಮ್ಯಾಂಟಿಕ್ ಆಗಿಬಿಟ್ಟಿದ್ದಾರಲ್ಲಾ...?!" ಎಂದು ರೇಗಿಸಿದರು.
ಪುಟ್ಟಣ್ಣ ಆ ಕಾಮೆಂಟಿಗೆ ಬೇಸರಿಸಿಕೊಳ್ಳಲೂ ಇಲ್ಲ, ಅದನ್ನು ನಿರಾಕರಿಸಲೂ ಇಲ್ಲ..!
(ಮುಂದುವರಿಯುವುದು)