Health Tips: ವೃದ್ಧಾಪ್ಯದಲ್ಲಿ ವ್ಯಾಯಾಮ ಅಗತ್ಯ ಯಾಕೆ?
ವ್ಯಾಯಾಮ ಎಲ್ಲಾ ವಯೋಮಾನದವರಿಗೂ ಕಡ್ಡಾಯ ಎನ್ನುವುದು ಎಲ್ಲರಿಗೂ ಗೊತ್ತು. ಮೊಬೈಲ್ ಗೀಳಿರುವ ಮಕ್ಕಳಿಂದ ಹಿಡಿದು, ರಾಮಾ-ಶಿವಾ ಎನ್ನುವ ಹಿರಿಯರವರೆಗೆ ಎಲ್ಲರಿಗೂ ಅವರವರ ವಯಸ್ಸಿಗೆ ಸರಿಯಾಗುವ ವ್ಯಾಯಾಮಗಳು ಬೇಕು. ಹಾಗಾದರೆ 60ವರ್ಷ ಮೀರಿದವರಿಗೆ ಎಂಥಾ ವ್ಯಾಯಾಮ ಬೇಕಾಗುತ್ತದೆ ಅಥವಾ ಸಾಕಾಗುತ್ತದೆ?
(ಸಂಗ್ರಹ ಚಿತ್ರ) -
ನವದೆಹಲಿ: ವ್ಯಾಯಾಮ ಎಲ್ಲಾ ವಯೋಮಾನದವರಿಗೂ ಕಡ್ಡಾಯ ಎನ್ನುವುದು ಎಲ್ಲರಿಗೂ ಗೊತ್ತು. ಮೊಬೈಲ್ ಗೀಳಿರುವ ಮಕ್ಕಳಿಂದ ಹಿಡಿದು, ರಾಮಾ-ಶಿವಾ ಎನ್ನುವ ಹಿರಿಯರವರೆಗೆ ಎಲ್ಲರಿಗೂ ಅವರವರ ವಯಸ್ಸಿಗೆ ಸರಿಯಾಗುವ ವ್ಯಾಯಾಮಗಳು ಬೇಕು. ಹಾಗಾದರೆ 60ವರ್ಷ ಮೀರಿದವರಿಗೆ ಎಂಥಾ ವ್ಯಾಯಾಮ (Exercise for old age) ಬೇಕಾಗುತ್ತದೆ ಅಥವಾ ಸಾಕಾಗುತ್ತದೆ? ಲಘುವಾದ ಯೋಗ ಅಥವಾ ನಡಿಗೆಯಂಥವು ಹಿರಿಯ ನಾಗರಿಕರಿಗೆ ಸಾಕಾಗುತ್ತವೆ ಎಂದು ಹೆಚ್ಚಿನ ಬಾರಿ ವೈದ್ಯರು ಶಿಫಾರಸು ಮಾಡುತ್ತಾರೆ. ನಡಿಗೆಯನ್ನಾದರೂ ಎಷ್ಟು ಮಾಡಬೇಕು? ಯುವ ಜನರಂತೆ ಫಿಟ್‌ನೆಸ್ ಬ್ಯಾಂಡನ್ನು ಕೈಗೆ ಬಿಗಿದುಕೊಂಡು ಹೆಜ್ಜೆ ಲೆಕ್ಕ ಇಡಬೇಕೇ? ಅಥವಾ ಇಷ್ಟು ಕಿ.ಮೀ. ನಡೆಯಲೇ ಬೇಕು ಎಂದು ಶರೀರಕ್ಕೆ ಒತ್ತಾಯ ಮಾಡಬೇಕೇ? ಹಿರಿಯರಿಗೆ ದಿನಕ್ಕಿಷ್ಟೇ ನಡಿಗೆ ಸಾಕು ಅಥವಾ ಬೇಕು ಎಂಬುದನ್ನು ನಿರ್ಧರಿಸಲು ಯಾವ ಮಾನದಂಡವನ್ನು ಅನುಸರಿಸಬೇಕು?
ಆರೋಗ್ಯ ತಜ್ಞರ ಪ್ರಕಾರ, ಎಷ್ಟು ನಡೆಯಬೇಕು ಎನ್ನುವುದನ್ನು ನಿರ್ಧರಿಸುವ ಮುನ್ನ ಮಾಡಲೇ ಬೇಕಾದ ಇನ್ನೊಂದು ನಿರ್ಧಾರವಿದೆ. ಅದು- ನಿಯಮಿತವಾಗಿ ವಾಕಿಂಗ್ ಮಾಡಬೇಕೆನ್ನುವ ತೀರ್ಮಾನ. ಅಂದರೆ, ವಾರದಲ್ಲಿ ಒಂದೆರಡು ದಿನ ಆರೋ ಎಂಟೋ ಕಿ.ಮೀ. ನಡೆದು, ಉಳಿದೆಲ್ಲಾ ದಿನಗಳು ಕಾಲ ನೋವೆಂದು ಕುಳಿತುಕೊಳ್ಳುವುದು ಆರೋಗ್ಯಕ್ಕೆ ಒಳಿತಿಗಿಂತ ಹೆಚ್ಚು ಕೆಡುಕನ್ನೇ ತರುತ್ತದೆ. ಬದಲಿಗೆ, ದಿನವೂ ಎರಡು ಕಿ.ಮೀ. ನಡೆಯುವ ಗುರಿಯನ್ನು ಇರಿಸಿಕೊಳ್ಳುವುದು ಜಾಣತನ.
ಎಷ್ಟು? ಹೇಗೆ?: ನಿಖರವಾಗಿ ಹೇಳುವುದಾದರೆ, ಇದು ಅವರವರ ಆರೋಗ್ಯಕ್ಕೆ ಸಂಬಂಧಿಸಿದ ವಿಷಯ. ಆದರೆ ಸಾಮಾನ್ಯವಾಗಿ ಹೇಳುವುದಾದರೆ, 60 ವರ್ಷಕ್ಕೆ ಮೇಲ್ಪಟ್ಟವರಿಗೆ ದಿನಕ್ಕೆ 30 ನಿಮಿಷಗಳ ನಡಿಗೆ ಸಾಕಾಗಬಹುದು. ಎಪ್ಪತ್ತು-ಎಂಬತ್ತು ವರ್ಷಕ್ಕೆ ಮೇಲ್ಪಟ್ಟವರಿಗೆ ಇಪ್ಪತ್ತು ಅಥವಾ ಹದಿನೈದು ನಿಮಿಷಗಳ ನಿಯಮಿತ ನಡಿಗೆಯೂ ಲಾಭದಾಯಕ. ಜೋರಾಗಿ ಬೆವರು ಹರಿಯುವಂತೆ ಅಥವಾ ಬಿಪಿ ಏರಿ ತಲೆ ಸುತ್ತುವಂತೆ ನಡೆಯುವುದು ಖಂಡಿತಾ ಬೇಕಿಲ್ಲ. ನಿಂನಿಮ್ಮ ಶರೀರಕ್ಕೆ ಹಿತ ಎನಿಸುವ ವೇಗದಲ್ಲಿ ನಡೆಯುವುದು ಸಾಕಾಗುತ್ತದೆ.
ಏನು ಪ್ರಯೋಜನ?: ವಯಸ್ಸಾಗುತ್ತಿದ್ದಂತೆ ದೇಹದಲ್ಲಿ ಮೂಳೆಗಳ ಸಾಂದ್ರತೆ ಕುಸಿಯಬಹುದು. ಸ್ನಾಯುಗಳ ಕ್ಷಮತೆ ಕ್ಷೀಣಿಸಬಹುದು. ಇಂಥವುಗಳಿಂದ ಕೀಲುಗಳ ಸವೆತ, ಚಲನೆಯಲ್ಲಿ ತೊಂದರೆ ಕಾಣಿಸಬಹುದು. ನಡೆಯುವಾಗ ಶರೀರ ಓಲಾಡಿದಂತೆ ಭಾಸವಾಗಿ, ಬಿದ್ದು ಮೂಳೆ ಮುರಿಯ ಬಹುದು. ಇಂಥವೆಲ್ಲ ತೊಂದರೆಗಳು ಕಾಡದಂತೆ ಮಾಡಲು ನಿಯಮಿತವಾದ ವ್ಯಾಯಾಮ ನೆರವಾಗುತ್ತದೆ. ಜೊತೆಗೆ, ಮಧುಮೇಹ, ರಕ್ತದೊತ್ತಡಗಳನ್ನು ನಿಯಂತ್ರಣದಲ್ಲಿ ಇರಿಸಲು ಸಹಾಯ ಮಾಡುತ್ತದೆ. ಇವೆಲ್ಲವುಗಳ ಫಲವಾಗಿ, ಹೃದಯದ ತೊಂದರೆ, ಪಾರ್ಶ್ವವಾಯು ಮುಂತಾದ ಮಾರಕ ರೋಗಗಳನ್ನು ದೂರದಲ್ಲಿ ಇರಸಬಹುದು. ಹಾಗಾಗಿ ದಿನವೂ ನಿಯಮಿತವಾದ ನಡಿಗೆ ಅಗತ್ಯ.
Health Tips: ಗರ್ಭಾವಸ್ಥೆಯಲ್ಲಿ ಮಾಡುವ ಈ ತಪ್ಪಿನಿಂದ ಮಗುವಿನ ಮೇಲೆ ಏನೆಲ್ಲಾ ಪರಿಣಾಮ ಗೊತ್ತಾ?
ಹೇಗೆ?: ನಡೆಯುವುದಕ್ಕೆ ಇಂಥದ್ದೇ ಕ್ರಮವೆಂಬುದಿಲ್ಲ. ಆದರೂ ಕೆಲವು ನಿಯಮಗಳನ್ನ ಪಾಲಿಸಬಹುದು. ಮೊದಲಿಗೆ, ನಿಮ್ಮ ವಯಸ್ಸು ಮತ್ತು ಶರೀರವನ್ನು ಗಮನದಲ್ಲಿ ಇರಿಸಿಕೊಂಡು ನಡಿಗೆ ವೇಗ ಮತ್ತು ದೂರವನ್ನು ನಿರ್ಧರಿಸಿಕೊಳ್ಳಿ. ವಾರಕ್ಕೆ 150 ನಿಮಿಷಗಳವರೆಗಿನ ಲಘು ವ್ಯಾಯಾಮ ಹಿರಿಯರಿಗೆ ಸಾಕಾಗುತ್ತದೆ ಎನ್ನುತ್ತವೆ ಅಧ್ಯಯನಗಳು. ಆದರೆ ನಿಮ್ಮ ದೇಹಕ್ಕೆ ಹೇಗೆ ಎನ್ನುವುದನ್ನು ನೀವು ನಿರ್ಧರಿಸಬೇಕಷ್ಟೆ. ಆರೋಗ್ಯದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅಥವಾ ಗೊಂದಲವಿದ್ದರೆ ವೈದ್ಯರಲ್ಲಿ ಮಾತಾಡಿ, ನಂತರ ನಿರ್ಧರಿಸಿ.
ವಾಕಿಂಗ್ ಮಾಡುವುದಕ್ಕೆ ಆರಾಮದಾಯಕವಾದ ಶೂಗಳು ಕಡ್ಡಾಯ. ಅದಿಲ್ಲದಿದ್ದರೆ ಕಾಲು ನೋವು ಬರುವ, ಕುಂಟುವ, ಬಿದ್ದು ಪೆಟ್ಟಾಗುವ ಸಂಭವಗಳಿವೆ. ಹಾಗಾಗಿ ಒಳ್ಳೆಯ ವಾಕಿಂಗ್ ಶೂ ನಿಮ್ಮ ಸಂಗಾತಿಯಾಗಿರಲಿ. ಮೊಬೈಲ್‌ನಲ್ಲಿ ಮಾತಾಡುತ್ತಾ ವಾಕಿಂಗ್ ಮಾಡುವ ಬದಲು, ಜೊತೆಗೆ ನಡೆಯಲು ಮಿತ್ರರನ್ನು ಹುಡುಕಿಕೊಳ್ಳಿ. ಇದರಿಂದ ನಡಿಗೆಯು ಶ್ರಮವೆನಿಸುವುದಿಲ್ಲ, ಬೋರೆನಿ ಸುವುದಿಲ್ಲ, ಮನಸ್ಸೂ ಹಗುರಾಗುತ್ತದೆ. ನಡೆಯುವುದಕ್ಕೆ ಸರಿಯಾದ ಹುಲ್ಲಿನ ಅಥವಾ ಸಮತಟ್ಟಾದ ಮಣ್ಣಿನ ದಾರಿಗಳು ಲಭ್ಯವೇ ಎನ್ನುವುದನ್ನು ನೋಡಿ. ಗಟ್ಟಿಯಾದ ಕಾಂಕ್ರೀಟ್ ಅಥವಾ ಡಾಂಬರು ರಸ್ತೆಗಳಿಗಿಂತ ಇಂಥ ಮೃದುವಾದ ದಾರಿಗಳು ಕೀಲುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತವೆ.