ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಪೈಲಟ್‌ ಅಮಾನತು ಚರ್ಚೆ

ಕ್ಯಾಪ್ಟನ್ ಲಾಮಾ ಅವರ ವೃತ್ತಿಜೀವನದಲ್ಲಿ ಅವರು ಅಮಾನತು ಗೊಂಡಿರುವುದು ಇದು ಮೊದಲ ಬಾರಿಯಲ್ಲ, ಬದಲಿಗೆ ನಾಲ್ಕನೇ ಬಾರಿಗೆ. ಕ್ಯಾಪ್ಟನ್ ಲಾಮಾ ನೇಪಾಳದಲ್ಲಿ ಕೇವಲ ಒಬ್ಬ ಪೈಲಟ್ ಮಾತ್ರವಲ್ಲ, ಅವರೊಬ್ಬ ಸೂಪರ್ ಸ್ಟಾರ್, ಒಬ್ಬ ಜನಪ್ರಿಯ ನಟ, ಗಾಯಕ ಮತ್ತು ಟಿವಿ ನಿರೂಪಕ. ಗಣನೀಯ ಸಂಖ್ಯೆಯ ಸಿನಿಮಾಗಳಲ್ಲಿ ನಟಿಸಿರುವ ಅವರು ನೇಪಾಳದಲ್ಲಿ ಮನೆಮಾತು.

ಸಂಪಾದಕರ ಸದ್ಯಶೋಧನೆ

ನೇಪಾಳ ಏರ್‌ಲೈನ್ಸ್‌ನ ಅತ್ಯಂತ ಪ್ರಸಿದ್ಧ ಮತ್ತು ಹಿರಿಯ ಪೈಲಟ್ ಕ್ಯಾಪ್ಟನ್ ವಿಜಯ್ ಲಾಮಾ ಅವರನ್ನು ಅಮಾನತುಗೊಳಿಸಿರುವ ವಿಷಯ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಮಾನ ಯಾನ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯು ಕೇವಲ ಒಬ್ಬ ವ್ಯಕ್ತಿಯ ಮೇಲಿನ ಶಿಸ್ತುಕ್ರಮದ ವಿಷಯವಾಗಿರದೇ, ವಿಮಾನಯಾನ ಸುರಕ್ಷತೆ, ಸೆಲೆಬ್ರಿಟಿ ಸಂಸ್ಕೃತಿ ಮತ್ತು ವೃತ್ತಿಪರ ಜವಾಬ್ದಾರಿಗಳ ನಡುವಿನ ಸಂಘರ್ಷವನ್ನು ಎತ್ತಿ ತೋರಿಸಿದೆ.

ವಿಜಯ್ ಲಾಮಾ ಅವರು ವಿಮಾನವನ್ನು ಚಲಾಯಿಸುತ್ತಿದ್ದ ಸಂದರ್ಭದಲ್ಲಿ, ಫೋಟೋ ಮತ್ತು ವಿಡಿಯೋಗಳನ್ನು ಸೆರೆ ಹಿಡಿಯುತ್ತಿದ್ದರು ಎಂಬುದು ಅವರ ಮೇಲಿರುವ ಗಂಭೀರ ಆರೋಪ. ವಿಮಾನಯಾನದ ನಿಯಮಗಳ ಪ್ರಕಾರ, ವಿಮಾನ ಹಾರಾಟದ ನಿರ್ಣಾಯಕ ಹಂತಗಳಲ್ಲಿ ಅಥವಾ ಕಾಕ್‌ಪಿಟ್‌ನಲ್ಲಿರುವಾಗ ಪೈಲಟ್‌ಗಳು ತಮ್ಮ ಗಮನವನ್ನು ಸಂಪೂರ್ಣವಾಗಿ ವಿಮಾನದ ನಿಯಂತ್ರ ಣದ ಮೇಲೆಯೇ ಇರಿಸಬೇಕಾಗುತ್ತದೆ.

ವೈಯಕ್ತಿಕ ಫೋಟೋಶೂಟ್ ಅಥವಾ ವಿಡಿಯೋ ರೆಕಾರ್ಡಿಂಗ್ ಮಾಡುವುದು ‘ಫ್ಲೈಟ್ ಡೆಕ್’ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದರೆ, ನಿಯಂತ್ರಕರು ಹೇಳುವಂತೆ, ಲಾಮಾ ಅವರು ಈ ನಿಯಮವನ್ನು ಮುರಿದಿದ್ದಾರೆ.

ಇದನ್ನೂ ಓದಿ: Vishweshwar Bhat Column: ಪೈಲಟ್‌ ಮೆರೆದ ಮಾನವೀಯತೆ

ಆಘಾತಕಾರಿ ವಿಷಯವೆಂದರೆ, ಕ್ಯಾಪ್ಟನ್ ಲಾಮಾ ಅವರ ವೃತ್ತಿಜೀವನದಲ್ಲಿ ಅವರು ಅಮಾನತು ಗೊಂಡಿರುವುದು ಇದು ಮೊದಲ ಬಾರಿಯಲ್ಲ, ಬದಲಿಗೆ ನಾಲ್ಕನೇ ಬಾರಿಗೆ. ಕ್ಯಾಪ್ಟನ್ ಲಾಮಾ ನೇಪಾಳದಲ್ಲಿ ಕೇವಲ ಒಬ್ಬ ಪೈಲಟ್ ಮಾತ್ರವಲ್ಲ, ಅವರೊಬ್ಬ ಸೂಪರ್ ಸ್ಟಾರ್, ಒಬ್ಬ ಜನಪ್ರಿಯ ನಟ, ಗಾಯಕ ಮತ್ತು ಟಿವಿ ನಿರೂಪಕ. ಗಣನೀಯ ಸಂಖ್ಯೆಯ ಸಿನಿಮಾಗಳಲ್ಲಿ ನಟಿಸಿರುವ ಅವರು ನೇಪಾಳದಲ್ಲಿ ಮನೆಮಾತು.

ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಲಕ್ಷಾಂತರ ಹಿಂಬಾಲಕರಿದ್ದಾರೆ. ಅವರ ಪ್ರತಿಯೊಂದು ಪೋಸ್ಟ್ ವೈರಲ್ ಆಗುತ್ತದೆ. ಪೈಲಟ್ ಆಗಿಯೂ ಅವರು ಸಾಮಾನ್ಯರಲ್ಲ. ಅವರ ಬಳಿ 25 ಸಾವಿರ ಕ್ಕೂ ಹೆಚ್ಚು ಗಂಟೆಗಳ ಹಾರಾಟದ ಅಗಾಧ ಅನುಭವವಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ಅವರು ವಿಮಾನ ಹಾರಿಸಿದ್ದಾರೆ. ಆದರೆ, ಇದೇ ‘ಸೆಲೆಬ್ರಿಟಿ ವರ್ಚಸ್ಸು’ ಮತ್ತು ‘ಅತಿಯಾದ ಆತ್ಮವಿಶ್ವಾಸ’ ಅವರಿಗೆ ಮುಳುವಾಗುತ್ತಿದೆ.

ವಿಜಯ್ ಲಾಮಾ ಅವರು ವಿವಾದಕ್ಕೆ ಸಿಲುಕಿರುವುದು ಇದೇ ಮೊದಲೇನಲ್ಲ. ಇವರ ಹಿಂದಿನ ವರ್ತನೆಗಳೂ ಅಷ್ಟೇ ಚರ್ಚಾಸ್ಪದವಾಗಿದ್ದವು. ಕೆಲವು ವರ್ಷಗಳ ಹಿಂದೆ ನಡೆದ ಒಂದು ಘಟನೆ ಪ್ರಪಂಚದಾದ್ಯಂತ ಸುದ್ದಿಯಾಗಿತ್ತು. ವಿಶ್ವದ ಅತ್ಯಂತ ಪ್ರಸಿದ್ಧ ಏವಿಯೇಷನ್ ಯುಟ್ಯೂಬರ್ ( Aviation YouTuber) ಸ್ಯಾಮ್ ಚುಯ್ ನೇಪಾಳಕ್ಕೆ ಭೇಟಿ ನೀಡಿದ್ದಾಗ, ಕ್ಯಾಪ್ಟನ್ ಲಾಮಾ ಅವರು ಹಾರಾಟದ ಸಮಯದಲ್ಲಿ ಸ್ಯಾಮ್ ಚುಯ್ ಅವರನ್ನು ಕಾಕ್‌ಪಿಟ್ ಒಳಗೆ ಆಹ್ವಾನಿಸಿದ್ದರು.

ವಿಮಾನ ಹಾರಾಟದ ಸಮಯದಲ್ಲಿ ಅನಧಿಕೃತ ವ್ಯಕ್ತಿಗಳನ್ನು ಕಾಕ್‌ಪಿಟ್‌ಗೆ ಸೇರಿಸುವುದು ಸುರಕ್ಷತಾ ದೃಷ್ಟಿಯಿಂದ ದೊಡ್ಡ ಅಪರಾಧ. ಸ್ಯಾಮ್ ಚುಯ್ ವಿಡಿಯೋ ವೈರಲ್ ಆಗುತ್ತಿದ್ದಂತೆ, ನೇಪಾಳದ ವಿಮಾನಯಾನ ಪ್ರಾಧಿಕಾರ ತನಿಖೆಗೆ ಆದೇಶಿಸಿತ್ತು. ಅಂದು ಕೂಡ ಲಾಮಾ ಅವರ ವರ್ತನೆ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿತ್ತು.

ಹಳೆಯ ತಪ್ಪುಗಳಿಂದ ಪಾಠ ಕಲಿಯುವ ಬದಲಿಗೆ, ಅವರು ಮತ್ತೆ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂಬುದು ಈಗಿನ ಅಮಾನತು ತೋರಿಸಿದೆ. ಈ ಪ್ರಕರಣದಲ್ಲಿ ಅತ್ಯಂತ ಆಶ್ಚರ್ಯಕರ ಸಂಗತಿ ಯೆಂದರೆ, ಇಂಥ ತಪ್ಪುಗಳನ್ನು ಮಾಡುತ್ತಿರುವುದು ಒಬ್ಬ ಹೊಸ ಪೈಲಟ್ ( Rookie) ಅಲ್ಲ.

ಅನುಭವಿ ಹಿರಿಯ ಕ್ಯಾಪ್ಟನ್ ಒಬ್ಬರು, ಪ್ರತಿಯೊಬ್ಬ ಪೈಲಟ್‌ಗೂ ತಿಳಿದಿರುವ ಮೂಲಭೂತ ನಿಯಮಗಳನ್ನು ಪದೇ ಪದೆ ಉಲ್ಲಂಘಿಸುತ್ತಿದ್ದಾರೆ. ವಿಮಾನಯಾನದಲ್ಲಿ ’Sterile Cockpit Rule’ ಎಂಬ ಒಂದು ನಿಯಮವಿದೆ. ಇದರ ಪ್ರಕಾರ, ಹಾರಾಟದ ಸಮಯದಲ್ಲಿ ಪೈಲಟ್‌ಗಳು ಅನಗತ್ಯ ಮಾತುಕತೆ ಅಥವಾ ಚಟುವಟಿಕೆಗಳಲ್ಲಿ ತೊಡಗುವಂತಿಲ್ಲ.

ಫೋಟೋ ಅಥವಾ ವಿಡಿಯೋ ತೆಗೆಯುವುದು ಗಮನವನ್ನು ಬೇರೆಡೆ ಸೆಳೆಯುತ್ತದೆ. ಇದು ನೂರಾರು ಪ್ರಯಾಣಿಕರ ಜೀವಕ್ಕೆ ಕುತ್ತು ತರಬಲ್ಲದು. ಒಬ್ಬ ಅನುಭವಿ ಪೈಲಟ್ ಆಗಿ, ಅವರು ಕಿರಿಯರಿಗೆ ಮಾದರಿಯಾಗಬೇಕು. ಆದರೆ, ಇಲ್ಲಿ ಅವರೇ ನಿಯಮಗಳನ್ನು ಮುರಿಯುತ್ತಿರುವುದು ವಿಮಾನಯಾನ ಸಂಸ್ಥೆಯ ಶಿಸ್ತಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ವಿಶ್ವೇಶ್ವರ ಭಟ್‌

View all posts by this author