ಮನಿ ಮೈಂಡೆಡ್
ಜಾಗತಿಕ ಅಭಿವೃದ್ಧಿ ಪಥದಲ್ಲಿ ಭಾರತವು ಪ್ರಸ್ತುತ ಪ್ರಮುಖ ಮೈಲಿಗಂದನ್ನು ತಲುಪಿದೆ. ವಿಶ್ವ ಬ್ಯಾಂಕ್ನ ಅಕ್ಟೋಬರ್ 2026ರ ‘ಬಡತನ ಮತ್ತು ಸಮಾನತೆ’ ಕುರಿತ ಸಂಕ್ಷಿಪ್ತ ವರದಿಯ ಪ್ರಕಾರ, ಕಳೆದ ಒಂದು ದಶಕದಲ್ಲಿ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬಡತನವನ್ನು ತಗ್ಗಿಸಿದ ದೇಶಗಳಲ್ಲಿ ಒಂದಾಗಿ ಹೊರಹೊಮ್ಮಿದೆ!
2011ರಿಂದ 2023ರ ನಡುವೆ ಭಾರತದಲ್ಲಿ ಕಡು ಬಡವರ ಸಂಖ್ಯೆಯು ಶೇಕಡಾ 27.1ರಿಂದ ಶೇಕಡಾ 2.6ಕ್ಕೆ ಕುಸಿದಿದೆ. ಇಲ್ಲಿ ಕಡು ಬಡವರು ಎಂದರೆ ದಿನಕ್ಕೆ 3 ಡಾಲರ್ಗಿಂತ (284 ರುಪಾಯಿ) ಕಡಿಮೆ ಸಂಪಾದಿಸುವವರು. ಕೆಳ-ಮಧ್ಯಮ ಆದಾಯದ ಬಡತನ ರೇಖೆಯಲ್ಲಿ (4.20/ದಿನಕ್ಕೆ, 397 ರುಪಾಯಿ) ಬಡತನದ ಪ್ರಮಾಣವು ಶೇಕಡಾ 57.7ರಿಂದ ಶೇಕಡಾ 16.1ಕ್ಕೆ ತೀವ್ರವಾಗಿ ತಗ್ಗಿದೆ. ಅಂದರೆ ಸುಮಾರು 49 ಕೋಟಿ 60 ಲಕ್ಷ ಜನರು ಬಡತನದ ರೇಖೆಯಿಂದ ಮೇಲಕ್ಕೆ ಬಂದಿದ್ದಾರೆ. ಈ ಗಣನೀಯ ಬದಲಾವಣೆಯ ಹಿನ್ನೆಲೆ ಏನು? ಅದಕ್ಕೆ ಕಾರಣವಾದ ಮೂಲಭೂತ ಅಂಶಗಳ ಯಾವುವು ಮತ್ತು ರಾಜಕೀಯ ನರೇಟಿವ್ಗಳ ಆಚೆಗಿನ ವಾಸ್ತವವನ್ನು ವಿಶ್ಲೇಷಿಸುವುದು ಇಂದಿನ ಅಗತ್ಯವಾಗಿದೆ.
2023-24ರ ‘ಗೃಹ ಬಳಕೆಯ ವೆಚ್ಚ ಸಮೀಕ್ಷೆ’ (HCES) ಬಿಡುಗಡೆಯಾದ ನಂತರ ವಿಶ್ವ ಬ್ಯಾಂಕ್ ತನ್ನ ದೀರ್ಘಾವಧಿಯ ಸರಣಿಯನ್ನು ನವೀಕರಿಸಿದೆ. 2004-05 ಮತ್ತು 2011-12ರ ನಡುವೆ ತೆಂಡೂಲ್ಕರ್ ಸಮಿತಿಯ ಮಾನದಂಡದ ಪ್ರಕಾರ ಬಡತನವು ಶೇಕಡಾ 37.2ರಿಂದ ಶೇಕಡಾ 21.9ಕ್ಕೆ ಇಳಿದಿತ್ತಾ ದರೂ, ಬಡವರ ಒಟ್ಟು ಸಂಖ್ಯಾತ್ಮಕ ಪ್ರಮಾಣ ದೊಡ್ಡದಾಗಿಯೇ ಇತ್ತು. ಆದರೆ, 2011-12ರ ಮೂಲಾಧಾರದಿಂದ (baseline) 2022-23 ಮತ್ತು 2023-24ರ ಸಮೀಕ್ಷೆಗಳವರೆಗಿನ ಅವಧಿಯಲ್ಲಿ ಸಂಭವಿಸಿದ ಇಳಿತವು ಶೇಕಡಾವಾರು ಪ್ರಮಾಣದಲ್ಲಷ್ಟೇ ಅಲ್ಲದೆ, ಒಟ್ಟು ಸಂಖ್ಯೆಯ ದೃಷ್ಟಿ ಯಿಂದಲೂ ಬೃಹತ್ ಪ್ರಮಾಣದಲ್ಲಿದೆ.
ಇದನ್ನೂ ಓದಿ: Keshava Prasad B Column: ಮೂಕ ಜೀವಿಗಳ ಕಣ್ಣೀರು ಒರೆಸುವ ಅನಂತ್ ಅಂಬಾನಿ
ವಿಶ್ವ ಬ್ಯಾಂಕ್ ತನ್ನ ವರದಿಯಲ್ಲಿ ಭಾರತದಲ್ಲಿನ ಈ ಕಡು ಬಡತನದ ಇಳಿಕೆಗೆ ಯಾವುದೇ ಒಂದು ತಾತ್ಕಾಲಿಕ ಕಾರಣವನ್ನು ಪ್ರತಿಪಾದಿಸದೆ, ಮೂಲಭೂತ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ಗಳ ಕಾರಣಗಳನ್ನು ಪಟ್ಟಿ ಮಾಡಿದೆ. ಕಲ್ಯಾಣ ಯೋಜನೆಗಳು ಮತ್ತು ಡಿಬಿಟಿ (ನೇರ ನಗದು ವರ್ಗಾವಣೆ), ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಅಡಿಯಲ್ಲಿ ಉಚಿತ ಧಾನ್ಯ ವಿತರಣೆ, ಪಿಎಂ ಆವಾಸ್ ಯೋಜನೆ, ಪಿಎಂ-ಕಿಸಾನ್ ಯೋಜನೆಗಳು ಕೆಳವರ್ಗದ ಜನರ ಕನಿಷ್ಠ ಬಳಕೆಯ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ತಲಾವಾರು ಗೃಹ ಬಳಕೆಯ ವೆಚ್ಚದಲ್ಲಿ ಕಂಡುಬಂದ ನಿರಂತರ ಹೆಚ್ಚಳವು ಜನರ ಕೊಳ್ಳುವ ಶಕ್ತಿಯನ್ನು ಸುಧಾರಿಸಿದೆ. ದೇಶದ ಗ್ರಾಮೀಣ ಭಾಗದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2017 ಮತ್ತು 2023ರ ನಡುವೆ ಭಾರತದಲ್ಲಿ ಉದ್ಯೋಗಗಳ ಸಂಖ್ಯೆ 13.4 ಕೋಟಿ ಯಷ್ಟು ಹೆಚ್ಚಾಗಿದೆ.
ಇದು ಕಾರ್ಯನಿರತ ವಯಸ್ಸಿನ ಜನಸಂಖ್ಯೆಯ ಬೆಳವಣಿಗೆಗಿಂತ ದುಪ್ಪಟ್ಟಾಗಿದ್ದು, ಹೆಚ್ಚಾಗಿ ಗ್ರಾಮೀಣ ಮಹಿಳೆಯರು ಸಂಘಟಿತ ಹಾಗೂ ವೇತನ ಸಹಿತ ಕೆಲಸಗಳಿಗೆ ಸೇರ್ಪಡೆಗೊಂಡಿರುವುದು ಮುಖ್ಯ ಕಾರಣವಾಗಿದೆ. ಬಡತನ ಇಳಿಕೆಯ ವರದಿಗಳು ಬಂದಾಗಲೆ ದೇಶದಲ್ಲಿ ರಾಜಕೀಯ ಆಕ್ಷೇಪಣೆಗಳು ವ್ಯಕ್ತವಾಗುವುದು ಹೊಸದೇನಲ್ಲ.
2024ರಲ್ಲಿ ನೀತಿ ಆಯೋಗವು 24.82 ಕೋಟಿ ಜನರು ಬಹುಆಯಾಮದ ಬಡತನದಿಂದ ಹೊರ ಬಂದಿದ್ದಾರೆ ಎಂದಾಗ, ಕಾಂಗ್ರೆಸ್ ಅದನ್ನು ಹಾಸ್ಯಾಸ್ಪದ ಸುಳ್ಳು ಎಂದು ಬಣ್ಣಿಸಿತ್ತು. 2025ರಲ್ಲಿ ವಿಶ್ವ ಬ್ಯಾಂಕ್ ಅತ್ಯಂತಿಕ ಬಡತನ ಶೇಕಡಾ 5.3ಕ್ಕೆ ಇಳಿದಿದೆ ಎಂದಾಗ, ದಿನಕ್ಕೆ 3 ಡಾಲರ್ ಕೇವಲ ಹಸಿವಿನಿಂದ ಬದುಕಿರಲು ಮಾತ್ರ ಸಾಕು, ಗೌರವಯುತ ಜೀವನಕ್ಕಲ್ಲ ಎಂದು ಆಕ್ಷೇಪಿಸಿತ್ತು.
ದಶಕಗಳ ಕಾಲ ‘ಗರೀಬಿ ಹಟಾವೋ’ದಂತಹ ಘೋಷಣೆಗಳನ್ನು ನೀಡಿದ್ದರೂ ಫಲಿತಾಂಶ ತಲುಪಿರ ಲಿಲ್ಲ ಎಂಬುದು ಆಡಳಿತ ಪಕ್ಷದ ವಾದವಾದರೆ, ಪ್ರಸ್ತುತ ಬಳಸಲಾಗುತ್ತಿರುವ ಬಡತನ ರೇಖೆಯ ಮಾನದಂಡಗಳು ಮತ್ತು ಸಮೀಕ್ಷೆಯ ವಿಧಾನಗಳನ್ನೇ ಪ್ರಶ್ನಿಸುವುದು ವಿರೋಧ ಪಕ್ಷಗಳ ತಂತ್ರವಾಗಿದೆ. ಹೀಗಿದ್ದರೂ, ವಿಶ್ವ ಬ್ಯಾಂಕ್ನ ಅಂತಾರಾಷ್ಟ್ರೀಯ ಮಾನದಂಡ ಮತ್ತು ಇತ್ತೀಚಿನ ಗೃಹ ಬಳಕೆಯ ಸಮೀಕ್ಷೆಗಳ ಆಧಾರದ ಮೇಲೆ ಸಿದ್ಧಪಡಿಸಲಾದ ಅಕ್ಟೋಬರ್ 2026ರ ವರದಿ ಯನ್ನು ಸಂಪೂರ್ಣವಾಗಿ ತಳ್ಳಿಹಾಕುವುದು ಸುಲಭವಲ್ಲ.
ಬಡತನ ನಿರ್ಮೂಲನೆಯಲ್ಲಿ ಸಾಧಿಸಲಾದ ಈ ಸಾಧನೆಯು ದೊಡ್ಡದಾಗಿದ್ದರೂ, ಸಂಪೂರ್ಣ ಸವಾಲು ಗಳು ಮುಗಿದಿವೆ ಎಂದರ್ಥವಲ್ಲ. ವಿಶ್ವ ಬ್ಯಾಂಕ್ ವರದಿಯೂ ಬೊಟ್ಟುಮಾಡುವಂತೆ ಕೆಲವು ಪ್ರಮುಖ ಸವಾಲುಗಳು ಮುಂದಿವೆ. ಸೃಷ್ಟಿಯಾಗುತ್ತಿರುವ ಉದ್ಯೋಗಗಳ ಗುಣಮಟ್ಟ ಮತ್ತು ಅವು ನೀಡುವ ಆದಾಯದ ಭದ್ರತೆ ಸುಧಾರಿಸಬೇಕಿದೆ.
ಶಿಕ್ಷಣ ಪಡೆದ ಯುವಜನರಿಗೆ ಸೂಕ್ತವಾದ ಉನ್ನತ ಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸು ವುದು ಮುಖ್ಯ. ಕೆಲವು ನಿರ್ದಿಷ್ಟ ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ಇಂದಿಗೂ ಬಡತನದ ಸಾಂದ್ರತೆ ಹೆಚ್ಚಿರುವುದು ಸವಾಲಾಗಿ ಪರಿಣಮಿಸಿದೆ. ಭಾರತವು ಕಡು ಬಡತನವನ್ನು ಶೇಕಡಾ 2.6ಕ್ಕೆ ತಗ್ಗಿಸಿರುವುದು ಒಂದು ಐತಿಹಾಸಿಕ ಸಾಧನೆಯಾಗಿದೆ.
ರಾಜಕೀಯ ಆರೋಪ-ಪ್ರತ್ಯಾರೋಪಗಳು ಏನೇ ಇದ್ದರೂ, ಅಂತಾರಾಷ್ಟ್ರೀಯ ಮಾನದಂಡಗಳ ಆಧಾರದ ಮೇಲೆ ದಾಖಲಾಗಿರುವ ಈ ದತ್ತಾಂಶವು ಭಾರತದ ಆರ್ಥಿಕತೆಯ ಸಕಾರಾತ್ಮಕ ಪಥವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಮುಂದಿನ ದಿನಗಳಲ್ಲಿ ಈ ಸಾಧನೆಯನ್ನು ಕಾಯ್ದುಕೊಂಡು, ಉದ್ಯೋಗದ ಗುಣಮಟ್ಟವನ್ನು ಹೆಚ್ಚಿಸುವುದು ಭಾರತದ ಮುಂದಿರುವ ಪ್ರಮುಖ ಆದ್ಯತೆಯಾಗ ಬೇಕಿದೆ.
ಸ್ವತಂತ್ರ ಭಾರತದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸದಲ್ಲಿ ಬಡತನ ನಿರ್ಮೂಲನೆ ಎಂಬುದು ಕೇವಲ ಒಂದು ಸರ್ಕಾರಿ ಯೋಜನೆಯಾಗಿ ಉಳಿಯದೆ, ಅಧಿಕಾರದ ಚುಕ್ಕಾಣಿ ಹಿಡಿಯುವ ಪ್ರಮುಖ ರಾಜಕೀಯ ಅಸವಾಗಿಯೂ ಬೆಳೆದುಬಂದಿದೆ. 1970ರ ದಶಕದಲ್ಲಿ ಇಂದಿರಾ ಗಾಂಧಿಯವರು ಮೊಳಗಿಸಿದ ‘ಗರೀಬಿ ಹಟಾವೋ’ ಘೋಷಣೆಯಿಂದ ಹಿಡಿದು, ಪ್ರಸ್ತುತ ನರೇಂದ್ರ ಮೋದಿಯವರ ಆಡಳಿತದ ‘ಡಿಜಿಟಲ್ ಕಲ್ಯಾಣ ಮಾದರಿ’ಯವರೆಗೆ ಭಾರತದ ಬಡತನ ನಿರ್ಮೂ ಲನೆಯ ಕಾರ್ಯತಂತ್ರಗಳು ದೊಡ್ಡ ಮಟ್ಟದ ವೈಚಾರಿಕ ರೂಪಾಂತರಕ್ಕೆ ಸಾಕ್ಷಿಯಾಗಿವೆ.
1971ರ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರು ತಂದ ‘ಗರೀಬಿ ಹಟಾವೋ’ ಘೋಷಣೆಯು ದೇಶದ ಬಡವರಲ್ಲಿ ಹೊಸ ಭರವಸೆ ಮೂಡಿಸಿತು. ಬ್ಯಾಂಕುಗಳ ರಾಷ್ಟ್ರೀಕರಣ, 20 ಅಂಶಗಳ ಕಾರ್ಯಕ್ರಮ ಹಾಗೂ ಭೂ ಸುಧಾರಣೆಯಂತಹ ಕ್ರಮಗಳು ಸಮಾಜವಾದಿ ಚೌಕಟ್ಟಿನಲ್ಲಿ ಬಡವರಿಗೆ ಆರ್ಥಿಕ ಶಕ್ತಿ ನೀಡುವ ಉದ್ದೇಶ ಹೊಂದಿದ್ದವು. ಆದರೆ, ಈ ಮಾದರಿಯಲ್ಲಿದ್ದ ಸವಾಲೆಂದರೆ ಅತಿಯಾದ ಸರ್ಕಾರಿ ನಿಯಂತ್ರಣ ಮತ್ತು ಸೋರಿಕೆ. ರಾಜೀವ್ ಗಾಂಧಿಯವರೇ ಒಮ್ಮೆ ಬಹಿರಂಗವಾಗಿ ಒಪ್ಪಿಕೊಂಡಂತೆ, ದಿಲ್ಲಿಯಿಂದ ಬಿಡುಗಡೆಯಾಗುವ 1 ರೂಪಾಯಿಯಲ್ಲಿ ಬಡವನಿಗೆ ತಲುಪುತ್ತಿದ್ದುದು ಕೇವಲ 15 ಪೈಸೆ ಮಾತ್ರ.
ರಾಜಕೀಯವಾಗಿ ‘ಗರೀಬಿ ಹಟಾವೋ’ ದೊಡ್ಡ ಯಶಸ್ಸು ತಂದರೂ, ಆಡಳಿತಾತ್ಮಕ ಕೆಂಪು ಪಟ್ಟಿ ಮತ್ತು ಭ್ರಷ್ಟಾಚಾರದಿಂದಾಗಿ ತಳಮಟ್ಟದ ಬಡತನ ನಿರ್ಮೂಲನೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. 2004ರಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರವು ಬಡತನ ನಿರ್ಮೂಲನೆಗೆ ಕಾನೂನಾ ತ್ಮಕ ಹಕ್ಕಿನ ರೂಪ ನೀಡಿತು. ಕೇವಲ ಯೋಜನೆಗಳನ್ನು ಘೋಷಿಸುವುದಕ್ಕಿಂತ, ಜನರಿಗೆ ಕೆಲಸ ಮತ್ತು ಆಹಾರದ ಹಕ್ಕನ್ನು ಕಾನೂನಿನ ಮೂಲಕ ಭರವಸೆ ನೀಡುವುದು ಈ ಮಾದರಿ. ‘ಮನರೇಗಾ’ ಯೋಜನೆಯ ಮೂಲಕ ಗ್ರಾಮೀಣ ಕುಟುಂಬಗಳಿಗೆ ಕನಿಷ್ಠ 100 ದಿನಗಳ ಕೂಲಿ ಕೆಲಸದ ಶಾಸನಬದ್ಧ ಹಕ್ಕು ನೀಡಲಾಯಿತು.
ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ ಮೂಲಕ ಬಡವರಿಗೆ ಅಗ್ಗದ ದರದಲ್ಲಿ ಧಾನ್ಯದ ವ್ಯವಸ್ಥೆ ಮಾಡಲಾಯಿತು. ಈ ಅವಧಿಯಲ್ಲಿ ತೆಂಡೂಲ್ಕರ್ ಸಮಿತಿಯ ಲೆಕ್ಕಾಚಾರದಂತೆ ಬಡತನದ ಪ್ರಮಾಣ ಶೇ. 37.2ರಿಂದ ಶೇ. 21.9ಕ್ಕೆ ಇಳಿಯಿತಾದರೂ, ಮಧ್ಯವರ್ತಿಗಳ ಹಸ್ತಕ್ಷೇಪ ಮತ್ತು ಕಲ್ಯಾಣ ಧನದ ದುರುಪಯೋಗ ತಪ್ಪಿರಲಿಲ್ಲ.
ಮೋದಿಯುಗದಲ್ಲಿ 2014ರಿಂದೀಚೆಗೆ ‘ಮೂಲಸೌಕರ್ಯ ಅಭಿವೃದ್ಧಿ ಮತ್ತು ಜ್ಯಾಮ್’ ತಂತ್ರಜ್ಞಾನ ಪವಾಡ ಸದೃಶ ಬದಲಾವಣೆಗೆ ಕಾರಣವಾಯಿತು. ಸಮಾಜವಾದಿ ಸಿದ್ಧಾಂತಕ್ಕಿಂತ ಟೆಕ್ನಾಲಜಿ ಮತ್ತು ಸಂಪತ್ತಿನ ಸೃಷ್ಟಿ ಇದರ ವಿಶೇಷತೆ. ಜನ್ಧನ್- ಆಧಾರ್- ಮೊಬೈಲ್ (ಜ್ಯಾಮ್) ಪರಿಕಲ್ಪನೆ ಭಾರತದಲ್ಲಿ ಸರಕಾರಿ ಸೌಲಭ್ಯಗಳ ಸೋರಿಕೆ ಆಗದಂತೆ ತಡೆದಿದೆ.
ಬ್ಯಾಂಕ್ ಖಾತೆಗಳನ್ನು ನೇರವಾಗಿ ಆಧಾರ್ಗೆ ಜೋಡಿಸಿ, ಮಧ್ಯವರ್ತಿಗಳನ್ನು ಸಂಪೂರ್ಣವಾಗಿ ಹೊರಗಿಟ್ಟು ನೇರ ನಗದು ವರ್ಗಾವಣೆ (ಡಿಬಿಟಿ) ಜಾರಿಗೆ ತಂದಿರುವುದು ಮೋದಿ ಸರ್ಕಾರದ ಬಹು ದೊಡ್ಡ ಸುಧಾರಣೆಗಳಂದು. ಕೇವಲ ನಗದು ಕೊಡುವುದಕ್ಕಿಂತ ಶೌಚಾಲಯ (ಸ್ವಚ್ಛ ಭಾರತ್), ಉಚಿತ ಅಡುಗೆ ಅನಿಲ (ಉಜ್ವಲ), ಪಕ್ಕಾ ಮನೆ (ಪಿಎಂ ಆವಾಸ್) ಮತ್ತು ಕುಡಿಯುವ ನೀರು (ಜಲ ಜೀವನ್) ಒದಗಿಸುವುದಕ್ಕೆ ಆದ್ಯತೆ ನೀಡಲಾಯಿತು.
ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ ಮೂಲಕ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ ನೀಡಿ ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲೂ ಬಡತನ ಹೆಚ್ಚಾಗದಂತೆ ತಡೆಯ ಲಾಯಿತು. ಬೀದಿ ಬದಿ ವ್ಯಾಪಾರಿಗಳು, ಸಣ್ಣ ತರಕಾರಿ ಮಾರಾಟಗಾರರು ಕೂಡ ಕ್ಯೂಆರ್ ಕೋಡ್ ಬಳಸಿ ಡಿಜಿಟಲ್ ಪಾವತಿ ಪಡೆಯುವಂತೆ ಮಾಡಿದ್ದು, ಸಣ್ಣ ವ್ಯಾಪಾರಿಗಳ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿದೆ. ತಂತ್ರಜ್ಞಾನ ಆಧರಿತ ಬಯೋಮೆಟ್ರಿಕ್ ವ್ಯವಸ್ಥೆಯಿಂದಾಗಿ, ವಲಸೆ ಕಾರ್ಮಿಕರು ದೇಶದ ಯಾವುದೇ ಮೂಲೆಯಲ್ಲಿದ್ದರೂ ತಮ್ಮ ಪಡಿತರವನ್ನು ಸುಲಭವಾಗಿ ಪಡೆಯಲು ಸಾಧ್ಯವಾಗಿದೆ.
ಯಾವುದೇ ಭದ್ರತೆ ಇಲ್ಲದೆ ಬೀದಿ ಬದಿ ವ್ಯಾಪಾರಿಗಳಿಗೆ ಡಿಜಿಟಲ್ ವ್ಯವಸ್ಥೆಯ ಮೂಲಕ ಶೀಘ್ರವಾಗಿ ಕಿರು ಸಾಲ ಸೌಲಭ್ಯ ಒದಗಿಸಲಾಗಿದೆ. ಹೀಗೆ, ತಂತ್ರಜ್ಞಾನವನ್ನು ಕೇವಲ ಶ್ರೀಮಂತರ ಆಸ್ತಿಯನ್ನಾಗಿ ಮಾಡದೆ, ಅದನ್ನು ಬಡವರ ಸಬಲೀಕರಣ ಹಾಗೂ ಪಾರದರ್ಶಕ ಆಡಳಿತದ ಅಸ್ತ್ರವನ್ನಾಗಿ ಬಳಸಿದ್ದು ಭಾರತದ ಬಡತನ ನಿರ್ಮೂಲನೆಗೆ ಪ್ರಮುಖ ಕಾರಕವಾಗಿದೆ.
ಡಿಬಿಟಿ ಮತ್ತು ಆಡಳಿತಾತ್ಮಕ ಸುಧಾರಣೆಗಳಿಂದಾಗಿ ನಕಲಿ/ ಕಾಲ್ಪನಿಕ ಫಲಾನುಭವಿಗಳನ್ನು ತಡೆದು ಭಾರತ ಸರ್ಕಾರಕ್ಕೆ ಇದುವರೆಗೆ 3.48 ಲಕ್ಷ ಕೋಟಿಗೂ ಹೆಚ್ಚು (ಕೆಲವು ವರದಿಗಳು/ಲೆಕ್ಕಾಚಾರಗಳ ಪ್ರಕಾರ 4.31 ಲಕ್ಷ ಕೋಟಿವರೆಗೂ) ಸೋರಿಕೆ ತಡೆದು ಉಳಿತಾಯವಾಗಿದೆ.
300ಕ್ಕೂ ಹೆಚ್ಚು ಕೇಂದ್ರ ಸರ್ಕಾರದ ಯೋಜನೆಗಳ ಅಡಿಯಲ್ಲಿ ಸುಮಾರು 43.95 ಲಕ್ಷ ಕೋಟಿಗೂ ಅಧಿಕ ಮೊತ್ತವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ತಲುಪಿಸಲಾಗಿದೆ. ಹಣವು ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುವುದರಿಂದ ಏಜೆಂಟರು ಅಥವಾ ಮಧ್ಯವರ್ತಿಗಳ ಕಮಿಷನ್ ದಂಧೆ ಮುಕ್ತಾಯಗೊಂಡಿದೆ. ಈ ಹಿಂದೆ ಚೀನಾ ಅಪರೂಪದ ಖನಿಜಗಳ ರಫ್ತಿನ ಮೇಲೆ ನಿರ್ಬಂಧ ಹೇರಿದಾಗ, ಭಾರತವು ಚೀನಾದ ಮುಂದೆ ಕೈಚಾಚಿ ಬೇಡಲಿಲ್ಲ!
ಬದಲಿಗೆ, ನಮ್ಮ ದೇಶದ ಸ್ಟಾರ್ಟಪ್ಗಳ ಕಡೆಗೆ ಮುಖ ಮಾಡಿತು. ಈ ಭಾರತೀಯ ಸ್ಟಾರ್ಟಪ್ಗಳು ಕಮಾಲ್ ಮಾಡಿ, ಆ ಖನಿಜಗಳ ಅಗತ್ಯವೇ ಇಲ್ಲದ ಅತ್ಯಂತ ದಕ್ಷತೆಯ ಮೋಟಾರುಗಳನ್ನು ಅಭಿವೃದ್ಧಿಪಡಿಸಿ ಸವಾಲನ್ನು ಮೆಟ್ಟಿ ನಿಂತವು. ಚೀನಾ ಇತ್ತೀಚೆಗೆ, 2026ರ ನವೆಂಬರ್ 18ರಿಂದ ಸುರಂಗ ಕೊರೆಯುವ ಯಂತ್ರಗಳ ರಫ್ತಿನ ಮೇಲೆ ಹೊಸ ಲೈಸೆನ್ಸ್ ನಿಯಮಗಳನ್ನು ಜಾರಿಗೆ ತರುತ್ತಿದೆ. ಭಾರತದ ಅಭಿವೃದ್ಧಿ ಯೋಜನೆಗಳಿಗೆ ತೊಂದರೆ ಕೊಡುವುದೇ ಇದರ ಉದ್ದೇಶ. ಆದರೆ ಇದಕ್ಕೆ ಭಾರತ ಖಡಕ್ ಪ್ರತ್ಯುತ್ತರ ನೀಡುತ್ತಿದೆ. ಏಕೆಂದರೆ, ಭಾರತ ಮುಂದಿನ ಐದು ವರ್ಷಗಳಲ್ಲಿ ಬರೋಬ್ಬರಿ 7 ರಿಂದ 8 ಲಕ್ಷ ಕೋಟಿ ವೆಚ್ಚದ ಬೃಹತ್ ಸುರಂಗ ಯೋಜನೆಗಳಿಗೆ ಸಜ್ಜಾಗುತ್ತಿದೆ!
ಚೀನಾ ಕೊಡದಿದ್ದರೇನಂತೆ, ಭಾರತ ತನ್ನದೇ ಟನೆಲ್ ಬೋರಿಂಗ್ ಮೆಶೀನ್ ಗಳನ್ನು ತಯಾರಿಸಲಿದೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ. ಇದು ಈಗಿನ ಭಾರತದ ಧಿರೋದಾತ್ತ ನಡೆ.