ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಬಾಸ್ಕೆಟ್‌ ಬಾಲ್‌ ಆಟದ ಮೂಲಕ ಪ್ರದ್ಯೋತ್‌ ವೊಲೇಟಿ ಶಿಕ್ಷಣ ಯಜ್ಞ

ನೋಯ್ಡಾದ ಗೆಝಾ ಗ್ರಾಮದ ಧೂಳು ತುಂಬಿದ ಮೈದಾನದಲ್ಲಿ ಕೇವಲ ನಾಲ್ಕು ಮಕ್ಕಳೊಂದಿಗೆ ಆರಂಭವಾದ ಒಂದು ಸಣ್ಣ ಪ್ರಯತ್ನ, ಇಂದು ಸಾವಿರಾರು ಬಡ ಮಕ್ಕಳ ಬದುಕಿನಲ್ಲಿ ದೊಡ್ಡ ಬೆಳಕಾಗಿದೆ. ಇದು ‘ಡ್ರಿಬಲ್ ಅಕಾಡೆಮಿ’ಯ (Dribble Academy) ಸಂಸ್ಥಾಪಕ ಮತ್ತು ಬಾಸ್ಕೆಟ್ ಬಾಲ್ ತರಬೇತುದಾರ ಪ್ರದ್ಯೋತ್ ವೊಲೇಟಿ ಅವರ ಸ್ಪೂರ್ತಿದಾಯಕ ಕಥೆ.

ಒಂದೊಳ್ಳೆ ಮಾತು

ನೋಯ್ಡಾದ ಗೆಝಾ ಗ್ರಾಮದ ಧೂಳು ತುಂಬಿದ ಮೈದಾನದಲ್ಲಿ ಕೇವಲ ನಾಲ್ಕು ಮಕ್ಕಳೊಂದಿಗೆ ಆರಂಭವಾದ ಒಂದು ಸಣ್ಣ ಪ್ರಯತ್ನ, ಇಂದು ಸಾವಿರಾರು ಬಡ ಮಕ್ಕಳ ಬದುಕಿನಲ್ಲಿ ದೊಡ್ಡ ಬೆಳಕಾಗಿದೆ. ಇದು ‘ಡ್ರಿಬಲ್ ಅಕಾಡೆಮಿ’ಯ (Dribble Academy) ಸಂಸ್ಥಾಪಕ ಮತ್ತು ಬಾಸ್ಕೆಟ್ ಬಾಲ್ ತರಬೇತುದಾರ ಪ್ರದ್ಯೋತ್ ವೊಲೇಟಿ ಅವರ ಸ್ಪೂರ್ತಿದಾಯಕ ಕಥೆ.

ಪ್ರದ್ಯೋತ್‌ಗೆ 11ನೇ ವಯಸ್ಸಿನಿಂದಲೇ ಬಾಸ್ಕೆಟ್ ಬಾಲ್ ಎಂದರೆ ಅಪಾರ ಪ್ರೀತಿ. ದೆಹಲಿ ಪರವಾಗಿ ಅಂಡರ್-19 ಮಟ್ಟದಲ್ಲಿ ಆಡಿದ್ದ ಅವರು, ಕ್ಲಿನಿಕಲ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನಂತರವೂ ಆಟದ ಮೇಲಿನ ಒಲವನ್ನು ಬಿಡಲಿಲ್ಲ.

ಭಾರತದಲ್ಲಿ ಬಾಸ್ಕೆಟ್ ಬಾಲ್ ತರಬೇತಿಯ ಗುಣಮಟ್ಟ ಅಷ್ಟಾಗಿ ಇರಲಿಲ್ಲ ಎಂಬುದು ಅವರ ಅನುಭವಕ್ಕೆ ಬಂದಿತ್ತು. ಈ ಕೊರತೆಯನ್ನು ನೀಗಿಸಲು ನಿರ್ಧರಿಸಿದ ಪ್ರದ್ಯೋತ್, ಅಮೆರಿಕಾದ ಹೆಸರಾಂತ ಸಂಸ್ಥೆಗಳಲ್ಲಿ ತರಬೇತಿ ಪಡೆದರು. ಅಮೆರಿಕಾದ ‘ಎನ್‌ಬಿಎ ಕೇರ್ಸ್’ ಕಾರ್ಯಕ್ರಮ ದಿಂದ ಪ್ರೇರಿತರಾದ ಅವರು, 2015ರಲ್ಲಿ ಭಾರತಕ್ಕೆ ಮರಳಿ ಬಂದು ಬಡ ಮಕ್ಕಳಿಗಾಗಿ ಏನಾದರೂ ಮಾಡಲು ನಿರ್ಧರಿಸಿದರು. ಹಾಗೆ ಹುಟ್ಟಿಕೊಂಡಿದ್ದೇ ‘ಡ್ರಿಬಲ್ ಅಕಾಡೆಮಿ -ಫೌಂಡೇಶನ್’.

ಇದನ್ನೂ ಓದಿ: Roopa Gururaj Column: ಮುತ್ತು ಎತ್ತಿಕೊಟ್ಟ ಹನುಮಂತನಿಂದ ಬಂತು ʼಮುತ್ತೆತ್ತಿʼ ಹೆಸರು

ಆರಂಭದಲ್ಲಿ ತಮ್ಮ ಚಾಲಕನ ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಕೇವಲ ನಾಲ್ಕು ಮ ಕ್ಕಳಿಗೆ, ಬಿದಿರಿನ ಕಂಬಗಳಿಗೆ ಬುಟ್ಟಿಯನ್ನು ಕಟ್ಟಿ ತರಬೇತಿ ನೀಡಲು ಶುರು ಮಾಡಿದರು. ಇಂದು ಈ ಅಕಾಡೆಮಿಯು 8 ಹಳ್ಳಿಗಳ 3000ಕ್ಕೂ ಹೆಚ್ಚು ಬಡ ಮಕ್ಕಳಿಗೆ ಬಾಸ್ಕೆಟ್ ಬಾಲ್ ನಲ್ಲಿ ತರಬೇತಿ ನೀಡುತ್ತಿದೆ. ಇಲ್ಲಿ ತರಬೇತಿ ಪಡೆಯುವ ಮಕ್ಕಳು ಪ್ಲಂಬರ್, ಎಲೆಕ್ಟ್ರಿಷಿಯನ್, ತೋಟಗಾರರು ಮತ್ತು ಮನೆಗೆಲಸ ಮಾಡುವವರ ಕುಟುಂಬಕ್ಕೆ ಸೇರಿದವರು ಎನ್ನುವುದು ಮತ್ತೂ ವಿಶೇಷ. ಸರಿಯಾದ ಮಾರ್ಗದರ್ಶನವಿಲ್ಲದೆ ಕಳ್ಳತನ, ಗಾಂಜಾ ಅಥವಾ ಇತರೆ ತಪ್ಪು ಹಾದಿ ಹಿಡಿಯುವ ಅಪಾಯ ದಲ್ಲಿದ್ದ ಮಕ್ಕಳಿಗೆ ಪ್ರದ್ಯೋತ್ ಬಾಸ್ಕೆಟ್ ಬಾಲ್ ಮೂಲಕ ಶಿಸ್ತು ಮತ್ತು ಹೊಸ ಭರವಸೆಯನ್ನು ನೀಡಿದರು.

ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಮ ಕ್ಕಳಲ್ಲಿ ಶೇಕಡಾ 45ರಷ್ಟು ಹೆಣ್ಣುಮಕ್ಕಳಿದ್ದಾರೆ. ಕಡು ಬಡತನ, ಕೌಟುಂಬಿಕ ಹಿಂಸಾಚಾರ ಮತ್ತು ಅಪೌಷ್ಟಿಕತೆಯ ನಡುವೆಯೂ ಈ ಮಕ್ಕಳು ಮೈದಾನಕ್ಕೆ ಬಂದು ಆಡುತ್ತಾರೆ. ಪ್ರದ್ಯೋತ್ ಅವರ ಕಠಿಣ ಪರಿಶ್ರಮದ ಫಲವಾಗಿ ಇಲ್ಲಿನ ಮ ಕ್ಕಳು ಜಿ ಮಟ್ಟದ ಪಂದ್ಯಾವಳಿಗಳನ್ನು ಗೆದ್ದಿರುವುದಲ್ಲದೆ, ಹಲವರು ಪ್ರತಿಷ್ಠಿತ ಶಾಲೆ ಮತ್ತು ಕಾಲೇಜು ಗಳಲ್ಲಿ ಸಂಪೂರ್ಣ ಉಚಿತ ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ.

ಈ ಅಕಾಡೆಮಿಯ ಹೆಮ್ಮೆಯ ತಾರೆಗಳಾದ ದಿನೇಶ್ ಪಾಲ್ ಮತ್ತು ಸಚಿನ್ ಯಾದವ್ ಎಂಬ ಇಬ್ಬರು ವಿದ್ಯಾರ್ಥಿಗಳು ಅಮೆರಿಕಾದ ಫ್ಲೋರಿಡಾ ದಲ್ಲಿ ನಡೆದ ‘ಜೂನಿಯರ್ ಎನ್‌ಬಿಎ ಗ್ಲೋಬಲ್ ಚಾಂಪಿಯನ್‌ಶಿಪ್’ನಲ್ಲಿ ಭಾರತ ವನ್ನು ಪ್ರತಿನಿಧಿಸಿ ಮಿಂಚಿದ್ದಾರೆ. ತಂದೆ ಎಲೆಕ್ಟ್ರಿಷಿಯನ್ ಆಗಿರುವ ದಿನೇಶ್, ತಾವು ಅಮೆರಿಕಾಗೆ ವಿಮಾನದಲ್ಲಿ ಹೋಗಿ ಆಡುತ್ತೇನೆ ಎಂದು ಎಂದಿಗೂ ಭಾವಿಸಿರಲಿಲ್ಲ ಎಂದು ಹಂಚಿಕೊಂಡಿ ದ್ದನ್ನು ಕೇಳಿದಾಗ ಮನಸ್ಸು ತುಂಬಿ ಬರುತ್ತದೆ.

ಇಂದು ಈ ಇಬ್ಬರೂ ಯುವಕರು ಬೆಂಗಳೂರಿನ ಪ್ರತಿಷ್ಠಿತ ಸೇಂಟ್ ಕ್ಲಾರೆಟ್ ಕಾಲೇಜಿನಲ್ಲಿ 100% ಸ್ಕಾಲರ್‌ಶಿಪ್ ಪಡೆದು ಓದುತ್ತಿದ್ದಾರೆ. ಪ್ರದ್ಯೋತ್ ಅವರ ಅಕಾಡೆಮಿ ಕೇವಲ ಆಟಕ್ಕೆ ಸೀಮಿತ ವಾಗಿಲ್ಲ. ಅವರು ಇಲ್ಲಿ ಒಂದು ಸಾಕ್ಷರತಾ ಕೇಂದ್ರವನ್ನು ನಡೆಸುತ್ತಿದ್ದಾರೆ. ಇಲ್ಲಿ ಮಕ್ಕಳಿಗೆ ಕಂಪ್ಯೂಟರ್ ಬೇಸಿಕ್ಸ್, ಕೋಡಿಂಗ್, ಇಂಗ್ಲಿಷ್ ಭಾಷೆ, ಪಬ್ಲಿಕ್ ಸ್ಪೀಕಿಂಗ್ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಕಲಿಸಲಾಗುತ್ತದೆ. ಮೊದಲು ವಿದ್ಯಾರ್ಥಿ, ಆಮೇಲೆ ಕ್ರೀಡಾಪಟು ಎಂಬುದು ಪ್ರದ್ಯೋತ್ ಅವರ ನಿಯಮ. ಕಂಪ್ಯೂಟರ್ ತರಗತಿಗೆ ಬಾರದಿದ್ದರೆ ಮೈದಾನದಲ್ಲಿ ಆಡಲು ಬಿಡುವುದಿಲ್ಲ!

ಆರಂಭದಲ್ಲಿ ತಮ್ಮದೇ ಸ್ವಂತ ಖರ್ಚಿನಲ್ಲಿ ತರಬೇತಿ ನೀಡುತ್ತಿದ್ದ ಪ್ರದ್ಯೋತ್, 2019ರಲ್ಲಿ ‘ಕೌನ್ ಬನೇಗಾ ಕರೋಡ್‌ಪತಿ’ (KBC) ಶೋನಲ್ಲಿ 25 ಲಕ್ಷ ರೂಪಾಯಿ ಗೆದ್ದು ಆ ಹಣವನ್ನು ಅಕಾಡೆಮಿ ಯ ಬೆಳವಣಿಗೆಗೆ ಬಳಸಿದರು. ಇಂದು ಹಲವು ಕಾರ್ಪೊರೇಟ್ ಕಂಪನಿಗಳು ಇವರ ನೆರವಿಗೆ ಬಂದಿವೆ. ಮುಂದಿನ 10 ವರ್ಷ ಗಳಲ್ಲಿ 100 ಹಳ್ಳಿಗಳಿಗೆ ಈ ಯೋಜನೆಯನ್ನು ವಿಸ್ತರಿಸಿ, 1 ಲಕ್ಷ ಮಕ್ಕಳ ಬದುಕನ್ನು ಬದಲಾಯಿಸುವ ದೊಡ್ಡ ಕನಸನ್ನು ಪ್ರದ್ಯೋತ್ ಹೊಂದಿದ್ದಾರೆ.

ಕ್ರೀಡೆಯ ಮೂಲಕ ಸಮಾಜದಲ್ಲಿ ದೊಡ್ಡ ಬದಲಾವಣೆ ತರಬಹುದು ಎಂಬುದಕ್ಕೆ ಪ್ರದ್ಯೋತ್ ವೊಲೇಟಿ ಅವರ ಈ ‘ಡ್ರಿಬಲ್ ಅಕಾಡೆಮಿ’ ಅತ್ಯುತ್ತಮ ಉದಾಹರಣೆಯಾಗಿದೆ. ಇಂತಹವರ ಜೀವನ ಇನ್ನೂ ಅನೇಕರನ್ನು ಪ್ರೇರೇಪಿಸಲಿ. ನಮ್ಮ ದೇಶದ ಭವಿಷ್ಯ ಬರೆಯುವ ಮಕ್ಕಳಿಗೆ ಒಳ್ಳೆಯ ವಿದ್ಯಾರ್ಜನೆ ದೊರಕುವಂತಾಗಲಿ.

ರೂಪಾ ಗುರುರಾಜ್

View all posts by this author