ಸಂಪಾದಕರ ಸದ್ಯಶೋಧನೆ
ಇದು ಕೆಲ ವರ್ಷಗಳ ಹಿಂದಿನ ಸಂಗತಿ. ಮುಂದಿನ ರಾಷ್ಟ್ರಪತಿಯನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಪ್ರಶ್ನೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಕಾಡುತ್ತಿತ್ತು. ಯಾರ ಹೆಸರೂ ಅಂತಿಮವಾಗಿರಲಿಲ್ಲ. ಆದರೆ ಪ್ರಣಬ್ ಮುಖರ್ಜಿಯವರಿಗೆ ತಮ್ಮ ಹೆಸರೇ ಅಂತಿಮ ವಾಗಬಹುದು ಎಂಬುದು ಅದ್ಹೇಗೋ ತಿಳಿದಿತ್ತು. ಆದರೆ ಅವರು ಯಾರ ಮುಂದೆಯೂ ಹೇಳಿರ ಲಿಲ್ಲ. ಅದಾಗಿ 2 ದಿನಗಳ ಬಳಿಕ, ಸೋನಿಯಾರ ರಾಜಕೀಯ ಕಾರ್ಯದರ್ಶಿ ಮತ್ತು ನಂಬುಗಸ್ಥ ಅಹ್ಮದ್ ಪಟೇಲ್, ಮುಖರ್ಜಿಯವರನ್ನು ಭೇಟಿಯಾದರು.
‘ನಿಮ್ಮನ್ನು (ಮುಖರ್ಜಿ) ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡಿದರೆ, ಎಡಪಕ್ಷ ಮತ್ತು ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷಗಳ ಬೆಂಬಲ ಪಡೆದು, ಚುನಾವಣೆಯಲ್ಲಿ ಗೆಲ್ಲುತ್ತೀರಿ ಎಂದು ನಾನು ಸೋನಿಯಾರಿಗೆ ಹೇಳಿದ್ದೇನೆ’ ಎಂದು ಪಟೇಲ್ ತಿಳಿಸಿದರು.
ಆಗ ಸೋನಿಯಾ ಗಾಂಧಿಯವರು, ‘ಸರಿ, ಪ್ರಣಬ್ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದರೆ, ಅವರ ಅನುಪಸ್ಥಿತಿಯಲ್ಲಿ ಸರಕಾರಕ್ಕೇನಾದರೂ ಆದರೆ, ನಿಭಾಯಿಸುವವರು ಯಾರು?’ ಎಂದು ಕೇಳಿದರಂತೆ. ಆಗ ಅಹ್ಮದ್ ಪಟೇಲ್, ಸೋನಿಯಾರಿಗೆ ಒಂದು ಸಲಹೆ ನೀಡಿದರಂತೆ.
ಇದನ್ನೂ ಓದಿ: Vishweshwar Bhat Column: ಇದು ಭಾಗ್ಯ...ಇದು ಭಾಗ್ಯ !
ಪ್ರಧಾನಿ ಡಾ.ಮನಮೋಹನ ಸಿಂಗ್ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಭಡ್ತಿ ನೀಡಿ, ಪ್ರಣಬ್‌ರನ್ನು ಪ್ರಧಾನಿಯನ್ನಾಗಿ ಮಾಡಿದರೆ ಹೇಗೆ? ಎಂದು ಸೂಚಿಸಿದರಂತೆ. ಈ ಪ್ರಶ್ನೆಗೆ ಸೋನಿಯಾ ತುಟಿ ಪಿಟಿಕ್ಕೆನ್ನಲಿಲ್ಲವಂತೆ. ಸೋನಿಯಾ ಏನಾದರೂ ಹೇಳಬಹುದು ಎಂದು ಪಟೇಲ್ ಎರಡು ನಿಮಿಷ ಮೌನವಾಗಿದ್ದರಂತೆ. ಆದರೆ ಸೋನಿಯಾ ಮಾತನ್ನು ಮುಂದುವರಿಸಲಿಲ್ಲವಂತೆ. ಅಹ್ಮದ್ ಪಟೇಲ್ ಹೇಳಿದ ಆ ಒಂದು ಮಾತಿನಿಂದ ಮುಖರ್ಜಿಯವರಲ್ಲಿ ಪ್ರಧಾನಿಯಾಗುವ ಕೊನೆಯ ಆಸೆ ಚಿಗುರಿತ್ತಂತೆ.
ಅದಾಗಿ ಒಂದು ವಾರದ ನಂತರ ಸೋನಿಯಾರನ್ನು ಭೇಟಿಯಾಗಿ ಬಂದಾಗ, ಡಾ.ಸಿಂಗ್ ಅವರನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಿಲ್ಲಿಸಿದರೂ ನಿಲ್ಲಿಸಬಹುದು ಎಂದು ಮುಖರ್ಜಿ ಯವರಿಗೆ ಅನ್ನಿಸಿತ್ತಂತೆ. ಒಂದು ವೇಳೆ ಅವರನ್ನು (ಡಾ.ಸಿಂಗ್) ರಾಷ್ಟ್ರಪತಿ ಹುದ್ದೆಗೆ ಪರಿಗಣಿಸಿದರೆ, ತಮ್ಮನ್ನು ಪ್ರಧಾನಿಯನ್ನಾಗಿ ಮಾಡಬಹುದು ಎಂದು ಅಂದುಕೊಂಡರಂತೆ.
ಆದರೆ ಅವರ ಊಹೆ ಸುಳ್ಳಾಗಿತ್ತು. ಅದಾಗಿ ಒಂದು ವಾರದ ಬಳಿಕ, ಪ್ರಣಬ್ ಅವರು ಸೋನಿಯ ರನ್ನು ಭೇಟಿ ಮಾಡಿದರಂತೆ. ಆ ಭೇಟಿಯ ಸಂದರ್ಭದಲ್ಲಿ ಸೋನಿಯಾ ಉಲ್ಲಸಿತರಾಗಿದ್ದರು. ಮುಂದಿನ ರಾಷ್ಟ್ರಪತಿ ಆಯ್ಕೆ ಪ್ರಶ್ನೆ ಬಂತು. ಪ್ರಣಬ್ ಬೇರೆ ವಿಷಯ ಪ್ರಸ್ತಾಪ ಮಾಡಬಹುದು ಎಂದು ಭಾವಿಸಿದ ಸೋನಿಯಾ, ‘ರಾಷ್ಟ್ರಪತಿ ಹುದ್ದೆಗೆ ನಿಮ್ಮ ಹೆಸರನ್ನು ಸೂಚಿಸುತ್ತಿದ್ದೇನೆ’ ಎಂದು ಥಟ್ಟನೆ ಹೇಳಿದರಂತೆ.
ಇದು ನಿರೀಕ್ಷಿಸದೇ ಇದ್ದ ಬೆಳವಣಿಗೆಯೇನೂ ಆಗಿರಲಿಲ್ಲ. ಹೀಗಾಗಿ ಪ್ರಣಬ್‌ಗೆ ಆಶ್ಚರ್ಯವಾಗಲಿಲ್ಲ. ‘ನಾನು ಪಕ್ಷದ ಕಾರ್ಯಕರ್ತ. ಪಕ್ಷ ಹೇಳುವ ಯಾವ ಜವಾಬ್ದಾರಿಯನ್ನಾದರೂ ನಿಭಾಯಿಸಲು ನಾನು ಸಿದ್ಧ’ ಎಂದರಂತೆ. ಸೋನಿಯಾ ಅವರ ತಲೆಯಲ್ಲಿ ಪ್ರಣಬ್ ಬದಲಿಗೆ ಎಂ.ಹಮೀದ್ ಅನ್ಸಾರಿ ಅವರ ಹೆಸರು ಮೊದಲ ಸ್ಥಾನದಲ್ಲಿ ಇತ್ತೆಂದು ಹಿರಿಯ ಅಧಿಕಾರಿಗಳೊಬ್ಬರು ಪ್ರಣಬ್‌ಗೆ ಹೇಳಿದ್ದರಂತೆ. ಆದರೆ ಅದರ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಕಷ್ಟ.
ಅನ್ಸಾರಿಯವರನ್ನು ರಾಷ್ಟ್ರಪತಿ ಚುನಾವಣೆಗೆ ನಿಲ್ಲಿಸಿದರೆ, ಎಲ್ಲ ಪಕ್ಷಗಳಿಂದ ನಿರೀಕ್ಷಿತ ಬೆಂಬಲ ಸಿಗಲಿಕ್ಕಿಲ್ಲವೆಂದು ಸೋನಿಯಾಗೆ ಅನಿಸಿತಂತೆ. ಆ ಚುನಾವಣೆಯಲ್ಲಿ ಗೆಲ್ಲಲು ಮಮತಾ ಬ್ಯಾನರ್ಜಿ ಯವರ ಬೆಂಬಲ ತೀರಾ ಅಗತ್ಯವಾಗಿತ್ತು. ಬಂಗಾಳದ ಅಭ್ಯರ್ಥಿಯನ್ನು ಮಮತಾ ಬೆಂಬಲಿಸ ಬಹುದು ಎನಿಸಿದ್ದರಿಂದ ಪ್ರಣಬ್ ಪರ ಸೋನಿಯಾ ವಾಲಿದರು.