ವಿದ್ಯಮಾನ
ನನಗನಿಸುವುದು, ಕರ್ನಾಟಕದ ಕೆಲವು ಮಂತ್ರಿಗಳನ್ನು ಪಕ್ಷದ ವಕ್ತಾರರನ್ನಾಗಿ ನೇಮಿಸಬೇಕು. ಅದರಲ್ಲೂ ರಾಷ್ಟ್ರೀಯ ವಕ್ತಾರರಾಗಿ ನೇಮಿಸುವುದು ಒಳಿತು. ಪಕ್ಷದ ರಾಷ್ಟ್ರೀಯ ನಾಯಕತ್ವದ ಮನೋಧೋರಣೆಗೆ ಸರಿಯಾಗಿ ಇವರುಗಳು ಮಾತನಾಡುತ್ತಾರೆ. ಮೋದಿ ಏನು ಮಾಡಬೇಕು, ಏನು ಮಾಡಬಾರದು, ಡಾಲರ್ ಭವಿಷ್ಯ ಹೇಗಿದೆ, ಮೋದಿ ಟ್ರಂಪ್ ಸಂಬಂಧ ಹಳಸಿದ್ದೇಕೆ, ಇಸ್ರೇಲಿಗರು ಹಮಾಸ್ ಮೇಲೆ ಯುದ್ಧ ನಿಲ್ಲಿಸಬೇಕೆ ಅಥವಾ ಬೇಡವೇ- ಹೀಗೆ ರಾಷ್ಟ್ರೀಯ ಹಾಗೂ ಅಂತಾ ರಾಷ್ಟ್ರಿಯ ವಿಷಯಗಳ ಕುರಿತು ಅಧ್ಯಯನ ಉಳ್ಳವರಾಗಿದ್ದಾರೆ.
ಆದರೆ, ಇವರು ತಮ್ಮ ಖಾತೆಯ ಕೆಲಸಗಳನ್ನು ಬಿಟ್ಟು ಬೇರೆ ಎಲ್ಲವನ್ನೂ ಮಾಡುತ್ತಾರೆ. ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಇತರರ ತಟ್ಟೆಯಲ್ಲಿನ ನೊಣವನ್ನು ‘ಜೂಮ’ ಮಾಡಿ ನೋಡುವ ಗುಣ ಇವರದ್ದು. ಇವರಿಗೆ ಒಂದು ರಾಜ್ಯ ಸರಕಾರದ ಮಂತ್ರಿಯ ಕೆಲಸ ಎನ್ನುವುದು ಬಹಳ ಕಡಿಮೆಯೆನಿಸುತ್ತದೆ.
ಹಾಗಾಗಿ ಇವರು ಹೆಚ್ಚಿನ ಜವಾಬ್ದಾರಿಗಳಿಗೆ ಅರ್ಹರು ಎನಿಸುತ್ತಿದೆ. ಅಥವಾ, ಪಕ್ಷ ಇವರನ್ನು ಮಂತ್ರಿ ಮಾಡಿದ್ದೇ ಈ ತರಹ ಮಾತನಾಡಲಿಕ್ಕೇ ಇರಬೇಕು ಎನಿಸುತ್ತಿದೆ. ಗ್ರಾಮೀಣಾಭಿವೃದ್ಧಿ ಚಿವರಾದರೂ, ಆರೆಸ್ಸೆಸ್‌ನವರಿಂದ ಪ್ರಾಥಮಿಕ ಶಾಲಾ ಮಕ್ಕಳ ಮನಸ್ಸಿನ ಮೇಲಾಗುವ ದುಷ್ಪಪರಿಣಾಮಗಳ ಕುರಿತು ಪ್ರಿಯಾಂಕ್ ಖರ್ಗೆಯವರು ತೋರಿಸುತ್ತಿರುವ ಕಾಳಜಿಯನ್ನು ನೋಡುವಾಗ, ಯಾರಿಗಾ ದರೂ ‘ಅವರು ಇನ್ನೆಲ್ಲೋ ಇರಬೇಕಾಗಿತ್ತು’ ಅನಿಸಿದರೆ ತಪ್ಪಲ್ಲ.
ಇದನ್ನೂ ಓದಿ: Vinayaka V Bhat Column: ಪ್ರತ್ಯೇಕ ಧರ್ಮವೆಂಬ ಅಪ್ರಸ್ತುತ ಪ್ರಸಂಗ...
ಶಾಲಾ ಕಾಲೇಜುಗಳು, ಸಣ್ಣ ಸಂಘ ಸಂಸ್ಥೆಗಳೇ ತಮ್ಮ ಸುವರ್ಣಮಹೋತ್ಸವವನ್ನು ಅದ್ದೂರಿ ಯಾಗಿ ಆಚರಿಸಿಕೊಳ್ಳುವಾಗ, ಸ್ವಯಂ ಸೇವಕರಿಂದ ನಡೆಯುವ ಜಗತ್ತಿನ ಅತಿದೊಡ್ಡ ಸಂಘಟನೆ ಯೊಂದು, ಅದರಲ್ಲೂ ಕೇಂದ್ರದಲ್ಲಿ ತನ್ನ ಮಾರ್ಗದರ್ಶನದಲ್ಲಿ ನಡೆಯುವ ಬಿಜೆಪಿ ಅಧಿಕಾರ ದಲ್ಲಿದ್ದರೂ, ತನ್ನ ಶತಮಾನೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಿಕೊಳ್ಳುತ್ತಿತ್ತು.
ಅಕ್ಟೋಬರ್ ಒಂದನೇ ತಾರೀಖಿನಂದು ದೆಹಲಿಯಲ್ಲಿ ಪ್ರಧಾನಿಯವರು ಭಾಗವಹಿಸಿದ ಪ್ರಧಾನ ಸಮಾರಂಭವನ್ನು ಹೊರತುಪಡಿಸಿ, ಅವರ ಸ್ವರ್ಣಸಂಭ್ರಮದ ಇನ್ನಾವ ಕಾರ್ಯಕ್ರಮವೂ ದೊಡ್ಡ ಸುದ್ದಿ ಮಾಡಿರಲಿಲ್ಲ. ಬೆಂಗಳೂರು ಮುಂತಾದ ಕಡೆ ಪಥಸಂಚಲನ ನಡೆದಿತ್ತು ಅಷ್ಟೆ.
ಆರೆಸ್ಸೆಸ್, ಬಹುತೇಕ ಭಾರತದ ಜನಮಾನಸದಲ್ಲಿ ಹಾಸುಹೊಕ್ಕಾಗಿದ್ದರೂ, ಇತ್ತೀಚೆಗೆ ತನ್ನ ಮೃದು ಧೋರಣೆಯಿಂದಾಗಿ ಸ್ವಲ್ಪ ಕಳೆಗುಂದಿತ್ತು ಎಂತಲೇ ಹೇಳಬಹುದು. ಮೊದಲು ಊರೂರಿನಲ್ಲಿ ಅವರು ನಡೆಸುವ ಶಾಖೆಗಳೂ ಈಗೀಗ ಅಷ್ಟಾಗಿ ಕಾಣುತ್ತಿರಲಿಲ್ಲ. ಅಂತೂ ಅವರಾಯಿತು ಅವರ ಕೆಲಸವಾಯಿತು ಎನ್ನುವ ಹಾಗೆ ಸಂಘ ತಣ್ಣಗೆ ಕೆಲಸಮಾಡಿಕೊಂಡಿತ್ತು.
ಕರ್ನಾಟಕದಲ್ಲಂತೂ ಆರೆಸ್ಸೆಸ್‌ನ ಸುದ್ದಿಯೇ ಇರಲಿಲ್ಲವೆನ್ನಬಹುದು. ಶತಮಾನೋತ್ಸವದ ಅಂಗವಾಗಿ ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿ ಶಾಂತಿಯುತ ಪಥಸಂಚಲನ ಕಾರ್ಯಕ್ರಮವೊಂದು ನಡೆಯಿತು. ಇದ್ದಕ್ಕಿದ್ದ ಹಾಗೆ ನಮ್ಮ ಖರ್ಗೆಯವರಿಗೆ ಏನಾಯಿತೋ ಗೊತ್ತಿಲ್ಲ, ಮುಖ್ಯಮಂತ್ರಿಗಳಿಗೆ ಸುದೀರ್ಘ ಪತ್ರ ಬರೆದೇಬಿಟ್ಟರು.

‘ಸರಕಾರಿ ಜಾಗ, ಸರಕಾರಿ ಶಾಲಾ ಕಾಲೇಜು ಅವರಣ, ಮುಜರಾಯಿ ದೇವಸ್ಥಾನಗಳ ಜಾಗಗಳಲ್ಲಿ ಆರೆಸ್ಸೆಸ್ ನ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು; ಅವರ ವಿಚಿತ್ರ ವೇಷಭೂಷಣ, ದೊಣ್ಣೆ ಹಿಡಿದು ಓಡಾಡುವ ಅವರ ವರ್ತನೆ ಹಾಗೂ ಅವರು ನಡೆಸುವ ಶಾಖೆಗಳು, ಮಕ್ಕಳ ಮನಸ್ಸಿನ ಮೇಲೆ ದ್ವೇಷದ ಭಾವನೆಯನ್ನು ಬಿತ್ತುತ್ತವೆ’ ಎನ್ನುವುದು ಖರ್ಗೆಯವರ ಅನಿಸಿಕೆ. ಖರ್ಗೆಯವರ ಹೇಳಿಕೆ ಬಂದಿದ್ದೇ ತಡ, ಆರೆಸ್ಸೆಸ್‌ಗೆ ಎಲ್ಲಿಲ್ಲದ ಮಹತ್ವ ಬಂದುಬಿಟ್ಟಿತು.
ಎಲ್ಲಿ ನೋಡಿದರೂ ಈಗ ಆರೆಸ್ಸೆಸ್‌ನ ನಿರ್ಬಂಧದ್ದೇ ಸುದ್ದಿ. ಹಾಗೆ ನೋಡಿದರೆ, ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಆರೆಸ್ಸೆಸ್‌ಗೆ ಪುಕ್ಕಟೆಯಾಗಿ ಪ್ರಚಾರ ಸಿಗುವಂತೆ ಮಾಡಿರುವುದಕ್ಕೆ ಪ್ರಿಯಾಂಕ್ ಖರ್ಗೆಯವರಿಗೆ ಸಂಘವು ಚಿರಋಣಿಯಾಗಿರಬೇಕು.
ಸಂಘದಿಂದ ತೀಕ್ಷ್ಣ ಪ್ರತಿಕ್ರಿಯೆಯನ್ನು ಖರ್ಗೆ ಹಾಗೂ ಕಾಂಗ್ರೆಸ್ ಪಕ್ಷ ನಿರೀಕ್ಷಿಸಿತ್ತೇನೋ! ಆದರೆ, ಈ ಕುರಿತು ಆರೆಸ್ಸೆಸ್ ದಿವ್ಯ ನಿರ್ಲಕ್ಷ್ಯವನ್ನೇ ತೋರಿತು. ಇದೇ ಸಂದರ್ಭದಲ್ಲಿ ದತ್ತಾತ್ರೇಯ ಹೊಸಬಾಳೆ ಯವರು ಬೆಂಗಳೂರಿಗೆ ಬಂದಿದ್ದರು, ಅವರು ಪತ್ರಿಕಾಗೋಷ್ಠಿ ಕರೆದು ತಕ್ಕ ಉತ್ತರ ನೀಡಲಿದ್ದಾರೆ ಎಂದುಕೊಂಡವರಿಗೆ ನಿರಾಶೆಯಾಯಿತು. ಬೇರೇನೋ ಕೆಲಸಕ್ಕೆ ಬಂದಿದ್ದ ಹೊಸಬಾಳೆಯವರು, ತಮ್ಮ ಕೆಲಸ ಮುಗಿಸಿ, ಏನೂ ಆಗಿಲ್ಲವೆನ್ನುವಂತೆ ಮೌನವಾಗಿ ಮರಳಿದರು.
ಬಿಜೆಪಿಯ ಕೆಲವು ಸ್ಥಾನಿಕರು ಪ್ರತಿಕ್ರಿಯಿಸಿದರೇ ಹೊರತು, ರಾಷ್ಟ್ರಮಟ್ಟದ ಯಾವ ನಾಯಕರೂ ತಲೆ ಕೆಡಿಸಿಕೊಂಡಂತೆ ಕಂಡಿಲ್ಲ. ಸಮಾಜದ ಮೂಲೆಮೂಲೆಯಿಂದ, ಮಾಧ್ಯಮಗಳಿಂದ ಹಾಗೂ ಇತರ ಹಿಂದೂ ಸಂಘಟನೆಗಳಿಂದ ಕಟುವಾದ ಪ್ರತಿಕ್ರಿಯೆ ನಿರಂತರವಾಗಿ ಹರಿಯಿತು. ಸಂಘವನ್ನು ಬಿಟ್ಟು ಬೇರೆ ಎಲ್ಲರೂ ಸಂಘದ ಪರವಾಗಿ, ಸಚಿವರ ಹೇಳಿಕೆಯ ವಿರುದ್ಧವಾಗಿ ಸಂವೇದನೆಯನ್ನು ವ್ಯಕ್ತಪಡಿಸಿದರು.
ಪ್ರಿಯಾಂಕ್ ಖರ್ಗೆ ಮತ್ತು ಸರಕಾರದ ಕ್ರಮಕ್ಕೆ ಪ್ರತಿಕ್ರಿಯಿಸದೇ, ಸಂಘ ತನ್ನ ಘನತೆಯನ್ನು ಇನ್ನೂ ಹೆಚ್ಚಿಸಿಕೊಂಡಿತು ಎನ್ನಬಹುದು. ಅಹಂಕಾರಕ್ಕೆ ಉದಾಸೀನವೇ ಮದ್ದು ಎನ್ನುವ ಧೋರಣೆಯನ್ನು ಸಂಘ ತಳೆದಂತೆ ಕಂಡುಬಂತು. ಎಲ್ಲದಕ್ಕೂ ಮೂಗು ತೂರಿಸುವ ಒಂದಿಬ್ಬರು ಸಚಿವರನ್ನು ಹೊರತುಪಡಿಸಿ, ಕಾಂಗ್ರೆಸ್ಸಿನ ಹಿರಿಯ ಸಚಿವರೂ ಮೌನವಾಗಿದ್ದು, ಪ್ರಿಯಾಂಕ್ ಅವರ ವಿಚಾರ ವನ್ನು ದೊಡ್ಡ ಮಟ್ಟದಲ್ಲಿ ಬೆಂಬಲಿಸಲಿಲ್ಲ.
ಇನೊಂದು ವಿಶೇಷವೆಂದರೆ, ಪ್ರಿಯಾಂಕ್ ಅವರ ಪತ್ರ ಮುಖ್ಯಮಂತ್ರಿಗಳ ಕೈ ಸೇರಿದ್ದೇ ತಡ, ವಿಳಂಬ ಮಾಡದೇ, ಈ ಪತ್ರಕ್ಕೆ ಕಾಯ್ದುಕೊಂಡಿದ್ದವರಂತೆ, ಸೂಕ್ತ ಕ್ರಮ ಜರುಗಿಸಲು ಅವರು ಕೂಡಲೇ ಶಿಫಾರಸು ಮಾಡಿಯೇಬಿಟ್ಟರು. ವಿರೋಧ ಪಕ್ಷದವರು, ಉದ್ದಿಮೆ ದಾರರು ಅಥವಾ ಇನ್ನಾರೋ ಹೊರಗಿನವರಾದರೆ, ಪತ್ರ ಬರೆದು ಮುಖ್ಯಮಂತ್ರಿಗಳ ಗಮನ ಸೆಳೆಯುವುದು ಸಹಜ.
ತಮ್ಮದೇ ಮಂತ್ರಿಮಂಡಳದ ಸದಸ್ಯರೊಬ್ಬರು ಪತ್ರ ಬರೆಯುವುದು, ಅದರ ಮೇಲೆ ಮುಖ್ಯಮಂತ್ರಿ ಗಳು ಕೂಡಲೇ ಕ್ರಮ ಜರುಗಿಸುವಂತೆ ಆದೇಶ ಮಾಡುವುದು ನೋಡಿದರೆ ಯಾರಿಗಾದರೂ ಸ್ವಲ್ಪ ವಿಚಿತ್ರವಾಗೇ ಕಾಣಿಸುತ್ತದೆ. ‘ನ್ಯಾಯಾಲಯದ ಆದೇಶ ಇರುವುದರಿಂದ, ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದನ್ನು, ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದನ್ನೂ ಸರಕಾರ ನಿರ್ಬಂಧಿಸಬೇಕು’ ಎನ್ನುವ ಯತ್ನಾಳ್ ಅವರ ಪತ್ರಕ್ಕೆ ಮಾತ್ರ ಮುಖ್ಯಮಂತ್ರಿಗಳ ದಿವ್ಯ ಮೌನವೇ ಉತ್ತರವಾಗಿದೆ.
ಯಾವುದೇ ಸಂಘಟನೆಯು ಜನರಿಗೆ ತೊಂದರೆ ನೀಡದಂತೆ ನೋಡಿಕೊಳ್ಳುವುದು ಹೇಗೆ ಎಂದು ತಮ್ಮ ಸರಕಾರ ಪರಿಶೀಲಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ ಒಂದು ದಿನದ ನಂತರ, ಸರಕಾರಿ ಶಾಲಾ ಮತ್ತು ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ತಡೆಗಟ್ಟಲು ನಿಯಮಗಳನ್ನು ಪರಿಚಯಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ, ಗೃಹ ಇಲಾಖೆ, ಕಾನೂನು ಇಲಾಖೆ ಮತ್ತು ಶಿಕ್ಷಣ ಇಲಾಖೆ ಈ ಹಿಂದೆ ಹೊರಡಿಸಿದ ಆದೇಶಗಳನ್ನು ಒಟ್ಟುಗೂಡಿಸಿ, ಕಾನೂನು ಮತ್ತು ಸಂವಿಧಾನದ ಚೌಕಟ್ಟಿನೊಳಗೆ ಹೊಸ ನಿಯಮವು ಜಾರಿಗೆ ಬರಲಿದೆ ಎಂದು ಖರ್ಗೆ ಹೇಳಿದ್ದಾರೆ.
ಇದರಿಂದ, ಸಾರ್ವಜನಿಕ ಸ್ಥಳಗಳಲ್ಲಿ ಯಾರು ಏನು ಬೇಕಾದರೂ ಮಾಡಲು ಸಾಧ್ಯವಿಲ್ಲ. ಏನು ಮಾಡಬೇಕೋ ಅದನ್ನು ಸರಕಾರದ ಅನುಮತಿ ಪಡೆದ ನಂತರವೇ ಮಾಡಬೇಕಾಗುತ್ತದೆ ಎಂದು ಸಚಿವರು ಹೇಳಿದರು. ಆರೆಸ್ಸೆಸ್ ಸಂಘಟನೆ ತನ್ನ ಚಟುವಟಿಕೆಗಳಿಗೆ ಸರಕಾರಿ ಸ್ಥಳಗಳನ್ನು ಬಳಸುತ್ತಿದೆ, ಇದಕ್ಕೆ ಅವಕಾಶ ಕೊಡಬಾರದು, ಶಾಲೆಗಳಲ್ಲಿ ಕೋಮು ವಿಷಬೀಜ ಬಿತ್ತಲು ನಾವು ಬಿಡಬಾರದು ಎಂದು ಹೇಳುತ್ತಾ, ತಮಿಳುನಾಡಿನಲ್ಲಿ ಸರಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಈ ತರಹದ ಚಟುವಟಿಕೆಗಳನ್ನು ನಿಷೇಧಿಸಿರುವುದರಿಂದ, ಇಲ್ಲಿಯೂ ನಿಷೇಧಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳುತ್ತಾರೆ.
“ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ-ಮದ್ಯಪಾನ, ಮೂತ್ರವಿಸರ್ಜನೆ ಮಾಡುವವರ ಸಂಖ್ಯೆ, ಕಸ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ, ಇದರಿಂದ ಪರಿಸರ ಮಾಲಿನ್ಯ ಉಂಟಾಗಿ ಸಾರ್ವಜನಿಕರ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ರಸ್ತೆಗಳ ಗುಂಡಿಗಳಿಂದ ಅನೇಕ ಜನ ಪ್ರಾಣ ಕಳೆದುಕೊಳ್ಳು ತ್ತಿದ್ದಾರೆ.
ಅನೇಕ ಸರಕಾರಿ ಶಾಲೆಗಳ ಆವರಣದಲ್ಲಿ, ರಾತ್ರಿ ಇಸ್ಪೀಟ್ ಆಡುವುದು, ಗುಂಡಿನ ಪಾರ್ಟಿಗಳು ಮುಂತಾದ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ, ನೀವು ಪತ್ರ ಬರೆದರೆ, ಮುಖ್ಯಮಂತ್ರಿಗಳು ಕೂಡಲೇ ಸಚಿವ ಸಂಪುಟದ ಒಪ್ಪಿಗೆ ಪಡೆದು ಕ್ರಮಜರುಗಿಸುತ್ತಾರೆ, ಹಾಗಾಗಿ ಈ ಎಲ್ಲ ವಿಷಯ ಗಳನ್ನು ಸೇರಿಸಿ ಮುಖ್ಯಮಂತ್ರಿಗಳಿಗೆ ಇನ್ನೊಂದು ಪತ್ರ ಬರೆದು ಸಮಾಜಕ್ಕೆ ಉಪಕರಿಸಬೇಕು" ಎಂದು ಸಚಿವರನ್ನೂ ಹಾಗೂ ಮುಖ್ಯಮಂತ್ರಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಿಚಾಯಿಸ ಲಾಗುತ್ತಿದೆ.
ಪ್ರಕರಣ ಇಲ್ಲಿಗೇ ನಿಲ್ಲಲಿಲ್ಲ, ಸರಕಾರಿ ನೌಕರರು ಆರೆಸ್ಸೆಸ್ ಚಟುವಟಿಕೆಗಳಲ್ಲಿ ಭಾಗಿಯಾದರೆ ಶಿಸ್ತುಕ್ರಮ ಕೈಗೊಳ್ಳಿ ಎಂದು ಪ್ರಿಯಾಂಕ್ ಮತ್ತೊಂದು ಪತ್ರ ರವಾನಿಸಿದ್ದಾರೆ. ಸರಕಾರದ ನಿಯಮ ದಲ್ಲಿ ಏನು ಇದೆಯೋ ಅದು ಪಾಲನೆಯಾಗಬೇಕು. ಗಣವೇಷ ಹಾಕಿಕೊಂಡು ಪಿಡಿಒಗಳು, ಆರೋಗ್ಯ ಅಧಿಕಾರಿಗಳು ಓಡಾಡುತ್ತಿದ್ದು ಅವರನ್ನು ಅಮಾನತು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ಮೊನ್ನೆ ತಮ್ಮದೇ ಇಲಾಖೆಯ ಒಬ್ಬ ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ.
ಕರ್ನಾಟಕ ನಾಗರಿಕ ಸೇವಾನಿಯಮಗಳ ಪ್ರಕಾರ, ಯಾರೇ ಸರಕಾರಿ ನೌಕರನು, ರಾಜಕೀಯ ಪಕ್ಷದ ಅಥವಾ ರಾಜಕಾರಣದಲ್ಲಿ ಭಾಗವಹಿಸುವಂಥ ಯಾವುದೇ ಸಂಘ ಸಂಸ್ಥೆಯ ಸದಸ್ಯನಾಗಿರ ತಕ್ಕದ್ದಲ್ಲ ಅಥವಾ ಅವುಗಳೊಂದಿಗೆ ಸಂಬಂಧ ಹೊಂದಿರತಕ್ಕದ್ದಲ್ಲ ಅಥವಾ ಯಾವುದೇ ರಾಜಕೀಯ ಚಳವಳಿ ಅಥವಾ ಚಟುವಟಿಕೆಯಲ್ಲಿ ಭಾಗವಹಿಸತಕ್ಕದ್ದಲ್ಲ, ಅದರ ಸಹಾಯಾರ್ಥ ವಂತಿಗೆ ನೀಡತಕ್ಕದ್ದಲ್ಲ ಎಂದು ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಸರಕಾರಿ ಅಧಿಕಾರಿಗಳು ಹಾಗೂ ನೌಕರರು ಭಾಗವಹಿಸುತ್ತಿರುವುದನ್ನು ಗಮನಿಸಲಾಗಿದೆ.
ರಾಜ್ಯದ ಸರಕಾರಿ ಅಧಿಕಾರಿ ಮತ್ತು ನೌಕರರು ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸುವು ದನ್ನು ಕಟ್ಟುನಿಟ್ಟಾಗಿ ನಿಷೇಧಿಸುವಂತೆ ಹಾಗೂ ಇದನ್ನು ಉಲ್ಲಂಘಿಸುವ ಅಧಿಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಖರ್ಗೆ ಮುಖ್ಯಮಂತ್ರಿಗಳಿಗೆ ಮತ್ತೊಂದು ಪತ್ರ ಬರೆದಿದ್ದಾರೆ.
ಆರೆಸ್ಸೆಸ್, ರಾಜಕೀಯ ಪಕ್ಷ ಅಥವಾ ಸಂಘಟನೆ ಅಲ್ಲದೇ ಕೇವಲ ಸ್ವಯಂಸೇವೆಯ ಆಧಾರದಲ್ಲಿ ನಡೆಯುವ ಸಂಘಟನೆಯಾಗಿರುವುದರಿಂದ, ಅದರಲ್ಲಿ ಸರಕಾರಿ ಅಧಿಕಾರಿಗಳು ಭಾಗವಹಿಸದಂತೆ ತಡೆಯುವುದು, ಅವರಿಗೆ ಸಂವಿಧಾನ ನೀಡಿದ ಹಕ್ಕನ್ನು ಮೊಟಕು ಮಾಡಿದಂತಾಗುತ್ತದೆ, ಸರಕಾರದ ಈ ಕ್ರಮವನ್ನು ಕಾನೂನು ಪುರಸ್ಕರಿಸುವುದಿಲ್ಲ ಎಂದು ಕಾನೂನು ತಜ್ಞರು ಹೇಳುತ್ತಿದ್ದರೆ, ಧರ್ಮ ನಿರಪೇಕ್ಷತೆಯನ್ನು ಸಾರುವ ಸಂವಿಧಾನದ ಅಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಶಾಸಕರು ಹಾಗೂ ಮಂತ್ರಿಗಳೂ, ‘ಇಫ್ತಾರ್’ ಕೂಟಗಳಲ್ಲಿ ಭಾಗವಹಿಸಬಾರದು ಎಂದು ಸಾರ್ವಜನಿಕರು ಖರ್ಗೆಯವರ ಕಾಲೆಳೆಯುತ್ತಿದ್ದಾರೆ.
“ನಾನು ಹಿಂದೂ ವಿರೋಧಿಯಲ್ಲ, ಆದರೆ ಆರೆಸ್ಸೆಸ್ ವಿರೋಧಿ ಹೌದು, ಬಿಜೆಪಿಯವರು ಬೇಕಾದರೆ ಗೋಮೂತ್ರ ಕುಡಿಯಲಿ, ಅವರ ಮಕ್ಕಳನ್ನು ಶಾಖೆಗೆ ಸೇರಿಸಲಿ, ಸಂಘದ ಅಂಗ ಸಂಸ್ಥೆಗಳು ನಡೆಸುವ ಶಾಲೆಗಳಿಗೆ ಅವರ ಮಕ್ಕಳನ್ನು ಕಳಿಸುವ ಮನಸ್ಸು ಮಾಡಲಿ, ಆವಾಗ ಮಾತ್ರ ನನ್ನ ಬಾಯಿ ಮುಚ್ಚಿಸಲು ಸಾಧ್ಯ" ಎನ್ನುತ್ತಿರುವ ಖರ್ಗೆಯವರಿಗೆ, ಸಂಘದ ಅಂಗಸಂಸ್ಥೆಯಾದ ರಾಷ್ಟ್ರೋ ತ್ಥಾನ ಸಂಸ್ಥೆ ನಡೆಸುವ ಶಾಲೆಗಳಲ್ಲಿ, ಅಲ್ಲಿ ಉತ್ತಮ ಮಟ್ಟದ ಶಿಕ್ಷಣ ಒದಗಿಸುವ ಕಾರಣಕ್ಕೆ, ತಮ್ಮ ಮಕ್ಕಳಿಗೆ ಪ್ರವೇಶ ದೊರಕಿಸಲು ಕಾಂಗ್ರೆಸ್ಸಿನ ನಾಯಕರೂ ವಶೀಲಿ ಮಾಡುತ್ತಾರೆ ಎನ್ನುವುದು ಗೊತ್ತಿದ್ದಂತೆ ಕಾಣುತ್ತಿಲ್ಲ.
ಆರೆಸ್ಸೆಸ್ ಏಕೆ ನೋಂದಣಿ ಮಾಡಿಸಲಿಲ್ಲ, ಮಾಡಿಸಿದ್ದರೆ ಅದರ ನೋಂದಣಿ ಪತ್ರವನ್ನು ತೋರಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೇಳುತ್ತಾರೆ. ಇದೇ ಪ್ರಶ್ನೆಯನ್ನು ಹಿಂದೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮುಂತಾದ ನಾಯಕರುಗಳೂ ಕೇಳಿದ್ದಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ವಯಂಪ್ರೇರಿತ, ಲಾಭರಹಿತ ಹಾಗೂ ಸಾಂಸ್ಕೃತಿಕ ಸಂಘಟನೆಯಾಗಿದೆ, ಹಾಗಾಗಿ ನೋಂದಣಿಯ ಅಗತ್ಯವಿಲ್ಲ ಎಂದು ಸಂಘ ಹಿಂದೆ ಅನೇಕ ಬಾರಿ ಸಮಜಾಯಿಷಿ ನೀಡಿದೆ.
ಆರೆಸ್ಸೆಸ್ ಔಪಚಾರಿಕ ಸದಸ್ಯತ್ವ ಪ್ರಕ್ರಿಯೆಯನ್ನು ಹೊಂದಿಲ್ಲ. ಬದಲಿಗೆ, ಇದು ದೈನಂದಿನ ಶಾಖೆಗಳಲ್ಲಿ ಭಾಗವಹಿಸುವ ಸ್ವಯಂಸೇವಕರನ್ನು ಸದಸ್ಯರೆಂದು ಪರಿಗಣಿಸುತ್ತದೆ. ಆರೆಸ್ಸೆಸ್ ತನ್ನ ಸ್ವಯಂಸೇವಕರಿಂದ ಮಾತ್ರ ಸ್ವಯಂಪ್ರೇರಿತ ದೇಣಿಗೆಗಳನ್ನು ಸ್ವೀಕರಿಸುತ್ತದೆ. ಸಾರ್ವಜನಿಕರಿಂದ ದೇಣಿಗೆಗಳನ್ನು ಸ್ವೀಕರಿಸುವುದಿಲ್ಲ ಮತ್ತು ಸರಕಾರದ ಧನಸಹಾಯದ ಮೇಲೆ ಅವಲಂಬಿತವಾಗಿಲ್ಲ ಎನ್ನುವುದನ್ನು ಪ್ರಿಯಾಂಕ ಖರ್ಗೆಯವರು ಗಮನಿಸಬೇಕಿದೆ.
1925ರಲ್ಲಿ ಸ್ಥಾಪಿತವಾದ ಆರೆಸ್ಸೆಸ್, ನಾಗರಿಕರಲ್ಲಿ ಸಾಂಸ್ಕೃತಿಕ ಜಾಗೃತಿ, ಶಿಸ್ತು, ಸೇವೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುತ್ತಿದೆ. ಆರೆಸ್ಸೆಸ್ ರಾಷ್ಟ್ರೀಯ ಪುನರ್ನಿರ್ಮಾಣಕ್ಕಾಗಿನ ಒಂದು ವಿಶಿಷ್ಟ ಜನ-ಪೋಷಿತ ಚಳವಳಿಯಾಗಿದೆ. ಸನಾತನ ಧರ್ಮದಲ್ಲಿ ಬೇರೂರಿರುವ ಭಾರತದ ರಾಷ್ಟ್ರೀಯ ವೈಭವದ ದೃಷ್ಟಿಕೋನದ ಭಾವನಾತ್ಮಕ ಅನುರಣನ, ಸಂಘದ ನಿರಂತರ ಬೆಳವಣಿಗೆಗೆ ಕಾರಣವಾಗಿದೆ.
ಸಂಘವು ದೇಶಭಕ್ತಿ ಮತ್ತು ರಾಷ್ಟ್ರೀಯ ಚಾರಿತ್ರ್ಯ ರಚನೆ, ತಾಯ್ನಾಡಿನ ಬಗ್ಗೆ ಭಕ್ತಿ, ಶಿಸ್ತು, ಸ್ವಯಂ ಸಂಯಮ, ಧೈರ್ಯ ಮತ್ತು ವೀರತ್ವವನ್ನು ತುಂಬಲು ಪ್ರಯತ್ನಿಸುತ್ತದೆ. ಸಂಘದ ಅಂತಿಮಗುರಿ ಭಾರತದ ಸರ್ವಾಂಗೀಣ ಉನ್ನತಿಯೇ ಆಗಿದೆ. ಇದಕ್ಕಾಗಿ ಅಲ್ಲಿ ಪ್ರತಿಯೊಬ್ಬ ಸ್ವಯಂಸೇವಕನೂ ತನ್ನನ್ನು ಸಮರ್ಪಿಸಿಕೊಳ್ಳುತ್ತಾನೆ. ಕಳೆದ ಶತಮಾನದಲ್ಲಿ ಆರೆಸ್ಸೆಸ್ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ ಮತ್ತು ವಿಪತ್ತು ಪರಿಹಾರದಲ್ಲಿ ಮಹತ್ವದ ಪಾತ್ರ ವಹಿಸಿರುವುದನ್ನು ಯಾರೂ ಮರೆಯುವ ಹಾಗಿಲ್ಲ.
ಸಂಘದ ಶಿಬಿರಕ್ಕೆ ಮಹಾತ್ಮ ಗಾಂಧಿ ಅವರು ಭೇಟಿ ನೀಡಿ, ಸಂಘದ ಸಮಾನತೆ, ಸಹಾನುಭೂತಿ ಮತ್ತು ಸೌಹಾರ್ದದ ಮನೋಭಾವವನ್ನು ಬಹಿರಂಗವಾಗಿ ಹೊಗಳಿದ್ದರು. ಡಾ. ಹೆಡ್ಗೆವಾರ್ ಅವರಿಂದ ಇಂದಿನವರೆಗೆ ಸಂಘದ ಪ್ರತಿಯೊಬ್ಬ ಸರಸಂಘಚಾಲಕರು ತಾರತಮ್ಯ ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ್ದಾರೆ.
ಪೂಜ್ಯ ಗುರೂಜಿಯವರು ‘ನ ಹಿಂದೂ ಪತಿತೋ ಭವೇತ್’ ಎಂಬ ಭಾವನೆಯನ್ನು ನಿರಂತರವಾಗಿ ಸಾರಿದ್ದಾರೆ. ಅಂದರೆ ಪ್ರತಿಯೊಬ್ಬ ಹಿಂದೂ ಒಂದೇ ಕುಟುಂಬದ ಭಾಗವಾಗಿದ್ದಾನೆ, ಇಲ್ಲಿ ಯಾರೂ ಕೀಳಲ್ಲ ಅಥವಾ ಪತಿತನಲ್ಲ, ಅಸ್ಪೃಶ್ಯತೆ ಪಾಪವಲ್ಲದಿದ್ದರೆ, ಜಗತ್ತಿನಲ್ಲಿ ಮತ್ತಾವುದೂ ಪಾಪವಲ್ಲ ಎಂದು ಬಾಳಾಸಾಹೇಬ್ ದೇವರಸ್ ಹೇಳಿರುವುದನ್ನು, ಆರೆಸ್ಸೆಸ್ ಸಂಘಟನೆಯನ್ನು ‘ಭಾರತದ ತಾಲಿಬಾನ್’ ಎನ್ನುವವರು ಗಮನಿಸಬೇಕಾಗಿದೆ.
ಅಂತೂ, ಯಾರದ್ದೋ ಪೂರ್ವನಿರ್ಧಾರದಂತೆ ಪ್ರಿಯಾಂಕ್ ಖರ್ಗೆಯವರು ವಿನಾಕಾರಣ ಸಂಘ ವನ್ನು ಕೆಣಕಿಯಾಗಿದೆ, ಅದರ ಫಲ- ಪರಿಣಾಮ, ಕಲಬುರ್ಗಿಗೆ ಮಾತ್ರ ಸೀಮಿತವಾಗುತ್ತೋ, ಅಥವಾ ಕರ್ನಾಟಕವನ್ನೆ ವ್ಯಾಪಿಸುತ್ತೋ ಎನ್ನುವುದನ್ನು ಮಾತ್ರ ಕಾದು ನೋಡಬೇಕಿದೆ.