ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Keshava Prasad B Column: ಮೋದಿಯುಗದಲ್ಲಿ ಲಾಭದ ಹಳಿಗೆ ಮರಳಿದ ಸಾರ್ವಜನಿಕ ಬ್ಯಾಂಕ್‌ʼ !

ಬ್ಯಾಂಕ್‌ಗಳಿಗೆ ಸಾಲ ವಸೂಲಾತಿ ಸಾಧ್ಯವಾಗದೆ, ಅವುಗಳ ಬ್ಯಾಲೆನ್ಸ್ ಶೀಟ್ ಹಾಳಾಗಿತ್ತು. ಇದನ್ನು ಟ್ವಿನ್ ಬ್ಯಾಲೆನ್ಸ್ ಶೀಟ್ ಸಮಸ್ಯೆ ಎನ್ನುತ್ತಾರೆ. ಇದರ ಪರಿಣಾಮವಾಗಿ ಕಂಪನಿಗಳ ಬಳಿ ಹಣವಿರಲಿಲ್ಲ. ಬ್ಯಾಂಕುಗಳ ಬಳಿ ಸಾಲ ಕೊಡಲು ಹಣವಿರಲಿಲ್ಲ. ಹೀಗಾಗಿ ದೇಶದಲ್ಲಿ ಹೊಸ ಉದ್ಯೋಗ ಸೃಷ್ಟಿ ಮತ್ತು ಹೂಡಿಕೆ ಸಂಪೂರ್ಣ ನಿಂತು ಹೋಯಿತು.

ಮನಿ ಮೈಂಡೆಡ್

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತೀಯ ಸಾರ್ವಜನಿಕ ಬ್ಯಾಂಕ್‌ಗಳು ನಷ್ಟದ ಸುಳಿಯಿಂದ ಹೊರ ಬಂದು ಲಾಭದ ಹಳಿಗೆ ಮರಳಿರುವುದು ಮತ್ತು ಇತಿಹಾಸದ ಎಂದೂ ಕಂಡರಿ‌ ಯದ ಮಟ್ಟಿನ ಲಾಭ ಗಳಿಸುತ್ತಿರುವುದು ವಿಸ್ಮಯಕಾರಿ ಯಶೋಗಾಥೆಯಾಗಿದೆ.

ಭಾರತೀಯ ಆರ್ಥಿಕತೆಯ ಪವಾಡಸದೃಶ ಸುಧಾರಣೆಗಳಲ್ಲಿ ಇದನ್ನು ಸೇರಿಸಬಹುದು. ಭಾರತೀಯ ಬ್ಯಾಂಕ್‌ಗಳ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಪಬ್ಲಿಕ್ ಸೆಕ್ಟರ್ ಬ್ಯಾಂಕ್‌ಗಳು 2025-26ರಲ್ಲಿ 1.9 ಲಕ್ಷ ಕೋಟಿ ರುಪಾಯಿಗಳ ದಾಖಲೆಯ ಲಾಭ ಗಳಿಸಿವೆ!

2023-24ರಲ್ಲಿ 1.41 ಲಕ್ಷ ಕೋಟಿ ರುಪಾಯಿ ಲಾಭ ಗಳಿಸಿದ್ದವು. 2018ರಲ್ಲಿ 85,390 ಕೋಟಿ ರುಪಾಯಿ ನಷ್ಟದಲ್ಲಿದ್ದವು. 2025-26ರಲ್ಲಿ ಸಾರ್ವಜನಿಕ ಬ್ಯಾಂಕ್‌ಗಳು 156 ಲಕ್ಷ ಕೋಟಿ ಡೆಪಾಸಿಟ್‌ಗಳನ್ನು ಗಳಿಸಿವೆ. ಒಟ್ಟಾರೆ ಬಿಸಿನೆಸ್ 283 ಲಕ್ಷ ಕೋಟಿ ರುಪಾಯಿಗೆ ಏರಿಕೆಯಾಗಿದೆ. ಎಸ್‌ಬಿಐ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮುಂತಾದ ಸರಕಾರಿ ಬ್ಯಾಂಕುಗಳು ಗಣನೀಯ ಲಾಭವನ್ನು ದಾಖಲಿಸಿವೆ.

ಅದೇ ರೀತಿ ಸಾರ್ವಜನಿಕ ಬ್ಯಾಂಕ್ಗಳಲ್ಲಿ ಒಟ್ಟಾರೆ ವಸೂಲಾಗದ ಸಾಲ (ಜಿಎಸ್‌ಪಿಎ) 1.9 ಪರ್ಸೆಂಟ್ನ ಚಾರಿತ್ರಿಕ ಇಳಿಕೆಯ ಮಟ್ಟಕ್ಕೆ ತಲುಪಿದೆ. ಕೆಲವು ವರ್ಷಗಳ ಹಿಂದೆ ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಯುಕೋ ಬ್ಯಾಂಕ್ ಸೇರಿದಂತೆ ಬಹುತೇಕ ಬ್ಯಾಂಕುಗಳು ನಷ್ಟ ಮತ್ತು ಅತಿಯಾದ ಎನ್‌ಪಿಎಯಿಂದ ಬಳಲುತ್ತಿದ್ದವು. ಆದರೆ ಇಂದು ಸಾರ್ವಜನಿಕ ವಲಯದ ಬ್ಯಾಂಕ್ಗ ಳೆಲ್ಲ ಲಾಭದ ಹಳಿಗೆ ಮರಳಿವೆ.

ಇದನ್ನೂ ಓದಿ: Keshava Prasad B Column: ತ್ರಿವಳಿ ಸವಾಲಿನ ನಡುವೆಯೂ ಬೆಳೆಯುತ್ತಿದೆ ಭಾರತದ ಆರ್ಥಿಕತೆ !

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದೇ ವಾರ್ಷಿಕವಾಗಿ ರೂ.55000 ಕೋಟಿಗೂ ಅಧಿಕ ನಿವ್ವಳ ಲಾಭ ಗಳಿಸುವಷ್ಟು ಬೃಹತ್ತಾಗಿ ಬೆಳೆದಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ 2017-18ರಲ್ಲಿ 12,283 ಕೋಟಿ ರುಪಾಯಿ ನಷ್ಟದಲ್ಲಿತ್ತು. 2024-25ರಲ್ಲಿ 16630 ಕೋಟಿ ರುಪಾಯಿ ಲಾಭ ಗಳಿಸಿದೆ. ಯುಕೊ ಬ್ಯಾಂಕ್ 2017-2025 ರ ಅವಧಿಯಲ್ಲಿ 1851 ಕೋಟಿ ರುಪಾಯಿ ನಷ್ಟದಿಂದ 2768 ಕೋಟಿ ಲಾಭಕ್ಕೆ ಪ್ರಗತಿ ಹೊಂದಿದೆ. ಭಾರತದ ಬ್ಯಾಂಕಿಂಗ್ ವಲಯ ಕಳೆದ ಹನ್ನೆರಡು ವರ್ಷಗಳ ಅವಧಿಯಲ್ಲಿ ಅಭೂತಪೂರ್ವ ಬದಲಾವಣೆಗೆ ಸಾಕ್ಷಿಯಾಗಿದೆ.

2014ಕ್ಕಿಂತ ಮೊದಲು ಬ್ಯಾಂಕ್‌ಗಳು ವಸೂಲಾಗದಿರುವ ಸಾಲ, ಹಳೆಯ ಪದ್ಧತಿಗಳು ಮತ್ತು ಆರ್ಥಿಕ ಒತ್ತಡಗಳಿಂದ ಬಳಲುತ್ತಿತ್ತು. ದೊಡ್ಡ ಸಾಲಗಳು ರಿಕವರಿ ಆಗದೆ ವಸೂಲಾಗದ ಸಾಲದ (ಎನ್ʼಪಿಎ) ಪ್ರಮಾಣ ತೀವ್ರವಾಗಿತ್ತು. 2000ರ ಆರ್ಥಿಕ ಚೇತರಿಕೆಯ ಅವಧಿಯಲ್ಲಿ ಕಾರ್ಪೊರೇಟ್ ವಲಯದ ಕಂಪನಿಗಳು, ಮುಖ್ಯವಾಗಿ ಮೂಲಸೌಕರ್ಯ, ಇಂಧನ, ಉಕ್ಕು ಕಂಪನಿಗಳು ಭಾರಿ ಸಾಲವನ್ನು ಮಾಡಿದ್ದವು. ಆದರೆ ಕ್ರಮೇಣ ಸಾಲ ತೀರಿಸಲಾಗದೆ ಕಂಪನಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ೨೦೧೪ರ ವೇಳೆಗೆ ಕಾರ್ಪೊರೇಟ್ ಕಂಪನಿಗಳಿಗೆ ಸಾಲ ಮರು ಪಾವತಿಸಲು ಸಾಧ್ಯವಾಗದೆ, ಅವುಗಳ ಬ್ಯಾಲೆ ಶೀಟ್ ಬಿಕ್ಕಟ್ಟಿಗೆ ಸಿಲುಕಿತ್ತು.

ಬ್ಯಾಂಕ್‌ಗಳಿಗೆ ಸಾಲ ವಸೂಲಾತಿ ಸಾಧ್ಯವಾಗದೆ, ಅವುಗಳ ಬ್ಯಾಲೆನ್ಸ್ ಶೀಟ್ ಹಾಳಾಗಿತ್ತು. ಇದನ್ನು ಟ್ವಿನ್ ಬ್ಯಾಲೆನ್ಸ್ ಶೀಟ್ ಸಮಸ್ಯೆ ಎನ್ನುತ್ತಾರೆ. ಇದರ ಪರಿಣಾಮವಾಗಿ ಕಂಪನಿಗಳ ಬಳಿ ಹಣವಿರ ಲಿಲ್ಲ. ಬ್ಯಾಂಕುಗಳ ಬಳಿ ಸಾಲ ಕೊಡಲು ಹಣವಿರಲಿಲ್ಲ. ಹೀಗಾಗಿ ದೇಶದಲ್ಲಿ ಹೊಸ ಉದ್ಯೋಗ ಸೃಷ್ಟಿ ಮತ್ತು ಹೂಡಿಕೆ ಸಂಪೂರ್ಣ ನಿಂತುಹೋಯಿತು.

ಬ್ಯಾಂಕಿಂಗ್ ವ್ಯವಸ್ಥೆಯು ಆರ್ಥಿಕತೆಯ ರಕ್ತಪರಿಚಲನೆಯಂತೆ. ಅದುವೇ ನಿಂತಾಗ ದೇಶದ ಜಿಡಿಪಿ ಬೆಳವಣಿಗೆಯ ವೇಗ ಕಡಿಮೆಯಾಯಿತು. 2014ರ ನಂತರ ಈ ‘ಟ್ವಿನ್ ಬ್ಯಾಲೆನ್ಸ್ ಶೀಟ್’ ಸಮಸ್ಯೆ ಯನ್ನು ಹೋಗಲಾಡಿಸಲು ಹಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ‌2016ರಲ್ಲಿ ಮಹತ್ವದ ಐಬಿಸಿ ಕಾಯಿದೆ *(Insolvency and Bankruptcy Code) ಜಾರಿಗೆ ಬಂದಿತು.

2026-06-05 06_59_48-vishwavani-epaper-2026-06-05.pdf and 2 more pages - Profile 1 - Microsoft​ Edge

ಸಾಲ ತೀರಿಸದ ಕಂಪನಿಗಳನ್ನು ದಿವಾಳಿ ಎಂದು ಘೋಷಿಸಿ, ಅವುಗಳ ಆಸ್ತಿಯನ್ನು ಹರಾಜು ಹಾಕಿ ಬ್ಯಾಂಕುಗಳ ಹಣವನ್ನು ವಸೂಲಿ ಮಾಡಲು ಈ ಕಾನೂನು ತರಲಾಯಿತು. ಮುಳುಗುತ್ತಿದ್ದ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಕೇಂದ್ರ ಸರಕಾರವು ಲಕ್ಷಾಂತರ ಕೋಟಿ ರೂಪಾಯಿಗಳ ಹಣವನ್ನು ನೀಡಿ ಅವು ಮರುಜೀವ ಪಡೆಯುವಂತೆ ಮಾಡಿತು. ಸಣ್ಣ ಮತ್ತು ದುರ್ಬಲವಾಗಿದ್ದ ಬ್ಯಾಂಕುಗಳನ್ನು ಸದೃಢವಾದ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಿ, ಆಡಳಿತ ವ್ಯವಸ್ಥೆಯನ್ನು ಬಲಪಡಿಸಲಾಯಿತು. ಈ ಕಠಿಣ ಕ್ರಮಗಳ ಪರಿಣಾಮವಾಗಿ ಭಾರತವು ಇಂದು ‘ಟ್ವಿನ್ ಬ್ಯಾಲೆನ್ಸ್ ಶೀಟ್ ಸಮಸ್ಯೆ’ಯಿಂದಸಂಪೂರ್ಣವಾಗಿ ಹೊರಬಂದಿದೆ.

ಇಂದು ಭಾರತದ ಕಾರ್ಪೊರೇಟ್ ಕಂಪನಿಗಳು ಲಾಭದಲ್ಲೂ ಇವೆ ಮತ್ತು ಬ್ಯಾಂಕುಗಳ ಎನ್‌ಪಿಎ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ತಲುಪಿ ಅತ್ಯಂತ ಸದೃಢವಾಗಿವೆ. ಬ್ಯಾಂಕಿಂಗ್ ಅನ್ನು 2024ಕ್ಕೆ ಮೊದಲು ಮತ್ತು ನಂತರ ಎಂದು ಪ್ರತ್ಯೇಕಿಸಿ ನೋಡಿದರೆ ಬದಲಾವಣೆ ಗೊತ್ತಾಗುತ್ತದೆ. 2014ಕ್ಕೆ ಮೊದಲು ಎನ್‌ಪಿಎ ಅಥವಾ ವಸೂಲಾಗದ ಸಾಲ ಆತಂಕಕಾರಿ ಮಟ್ಟದಲ್ಲಿ ಇತ್ತು.

2026ರಲ್ಲಿ ಚಾರಿತ್ರಿಕ 2.15 ಪರ್ಸೆಂಟ್‌ನ ಕಡಿಮೆ ಮಟ್ಟಕ್ಕೆ ಇಳಿಕೆಯಾಗಿದೆ. ಕೋಟ್ಯಂತರ ಮಂದಿಗೆ ಬ್ಯಾಂಕ್ ಖಾತೆಗಳೇ ಇದ್ದಿರಲಿಲ್ಲ. ಜನ್ ಧನ್ ಮೂಲಕ 57 ಕೋಟಿಗೂ ಹೆಚ್ಚು ಅಕೌಂಟ್‌ಗಳು ಸೃಷ್ಟಿಯಾಗಿದ್ದು, ಸಾರ್ವತ್ರಿಕ ಬ್ಯಾಂಕಿಂಗ್ ಲಭಿಸಿದೆ. ಇವುಗಳಲ್ಲಿ 2.94 ಲಕ್ಷ ಕೋಟಿ ಡೆಪಾಸಿಟ್ ಕೂಡ ಇದೆ. ಮೊದಲು ನಗದು ಮತ್ತು ಚೆಕ್ ಬುಕ್‌ಗಳದ್ದೇ ಕಾರುಬಾರು ಇತ್ತು. ಈಗ ಯುಪಿಐ, ಮೊಬೈಲ್ ಬ್ಯಾಂಕಿಂಗ್ ಪ್ರಾಬಲ್ಯವಿದೆ. ಸಾಲ ಪ್ರಕ್ರಿಯೆಯಲ್ಲಿ ಈ ಹಿಂದೆ ಕಾಗದಪತ್ರಗಳ ಪರಿಶೀಲನೆ ಗೆ ವಾರಗಟ್ಟಲೆ ಸಮಯ ತೆಗೆದುಕೊಳ್ಳುತ್ತಿತ್ತು. ಈಗ ನಿಮಿಷಗಳಲ್ಲಿ ಡಿಜಿಟಲ್ ಸಾಲ ಮಂಜೂರಾತಿ ಯ ವ್ಯವಸ್ಥೆಯೂ ಇದೆ. ಈ ಎಲ್ಲ ಸುಧಾರಣೆಯ ಪರಿಣಾಮವಾಗಿ ಬ್ಯಾಂಕ್‌ಗಳು ಸದೃಢವಾಗಿದ್ದು, ಲಾಭದ ಹಳಿಗೆ ಮರಳಿವೆ!

ಭಾರತದ ಆರ್ಥಿಕ ವಲಯದಲ್ಲಿ ಬಹುದೊಡ್ಡ ಆರ್ಥಿಕ ಸುಧಾರಣೆಯಾದ ಐಬಿಸಿ ಕಾಯಿದೆಗೆ ಈಗ 10 ವರ್ಷವಾಗಿದೆ. 2016ರಲ್ಲಿ ಜಾರಿಗೆ ಬಂದ ಈ ಕಾಯಿದೆಗೆ ಈಗ 2026ರ ವೇಳೆಗೆ ದಶಕವಾಗುತ್ತಿದೆ. ಈ ಅವಧಿಯಲ್ಲಿ ಬ್ಯಾಂಕುಗಳು ಯಶಸ್ಸನ್ನು ದಾಖಲಿಸಿವೆ. 4 ಲಕ್ಷ ಕೋಟಿಗೂ ಹೆಚ್ಚು ಸುಸ್ತಿ ಸಾಲವನ್ನು ಮರು ವಸೂಲು ಮಾಡಿಕೊಳ್ಳಲಾಗಿದೆ.

ಬ್ಯಾಂಕುಗಳಿಂದ ದೊಡ್ಡ ಕಂಪನಿಗಳು ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು, ನಷ್ಟದ ಕಾರಣದಿಂದಲೋ ಅಥವಾ ಉದ್ದೇಶಪೂರ್ವಕವಾಗಿಯೋ ಅದನ್ನು ಮರುಪಾವತಿಸದೆ ಇದ್ದಾಗ ವಸೂಲಾಗದ ಸಾಲ ಎನ್ನಲಾಗುತ್ತದೆ. ಈ ಹಿಂದೆ ಇಂತಹ ಕಂಪನಿಗಳಿಂದ ಹಣ ವಸೂಲಿ ಮಾಡು ವುದು ದಶಕಗಳ ಕಾಲ ಹಿಡಿಯುತ್ತಿತ್ತು. ಆದರೆ ಐಬಿಸಿ ಕಾಯಿದೆಯ ಅಡಿಯಲ್ಲಿ, ನ್ಯಾಯ ಮಂಡಳಿ ಗಳ (NCLT) ಮೂಲಕ ಇಂತಹ ಆಸ್ತಿಗಳನ್ನು ಹರಾಜು ಹಾಕಿ ಅಥವಾ ಬೇರೆ ಕಂಪನಿಗಳಿಗೆ ಮಾರಾಟ ಮಾಡಿ ( Resolution Plan), ಬ್ಯಾಂಕುಗಳು ಕಳೆದ 10 ವರ್ಷಗಳಲ್ಲಿ 4 ಲಕ್ಷ ಕೋಟಿ ರೂಪಾಯಿ ಗಿಂತಲೂ ಹೆಚ್ಚು ಹಣವನ್ನು ಯಶಸ್ವಿಯಾಗಿ ವಸೂಲಿ ಮಾಡಿವೆ.

ಹಾಗಾದರೆ ಐಬಿಸಿ ಹೇಗೆ ಕೆಲಸ ಮಾಡುತ್ತದೆ? ಈ ಹಿಂದೆ ಯಾವುದೇ ಕಂಪನಿ ಮುಳುಗಿದರೆ ಸಾಲ ಕೊಟ್ಟಿದ್ದ ಬ್ಯಾಂಕುಗಳು ಮರು ವಸೂಲಿಗೋಸ್ಕರ ಕೋರ್ಟ್ ಮೆಟ್ಟಿಲೇರಬೇಕಿತ್ತು. ಆದರೆ ಐಬಿಸಿ ಬಂದ ಮೇಲೆ ನಿಯಮಗಳು ಬದಲಾದವು. ಕಂಪನಿ ಸಾಲ ತೀರಿಸದಿದ್ದರೆ, ಅದರ ಸಂಪೂರ್ಣ ನಿಯಂತ್ರಣವು ಸಾಲ ಕೊಟ್ಟ ಬ್ಯಾಂಕುಗಳ ಒಕ್ಕೂಟಕ್ಕೆ ಸಿಗುವಂತಾಯಿತು.

ಕಂಪನಿಯನ್ನು ಸಂಪೂರ್ಣವಾಗಿ ಮುಚ್ಚಿ ಬೀಗ ಹಾಕುವ ಬದಲಿಗೆ, ಅದನ್ನು ಬೇರೆ ಸಮರ್ಥ ಉದ್ಯಮಿಗಳಿಗೆ ಅಥವಾ ಕಂಪನಿಗಳಿಗೆ ಮಾರಾಟ ಮಾಡಿ, ಉದ್ಯೋಗಗಳನ್ನು ಉಳಿಸಿ ಆ ಮೂಲಕ ಬ್ಯಾಂಕಿನ ಹಣವನ್ನು ವಸೂಲಿ ಮಾಡಲಾಗುತ್ತದೆ.

ಐಬಿಸಿ ಅಡಿಯಲ್ಲಿ ಕಳೆದ 10 ವರ್ಷಗಳಲ್ಲಿ ಸುಮಾರು 9 ಸಾವಿರ ಪ್ರಕರಣಗಳು ದಾಖಲಾಗಿತ್ತು. 7 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿವೆ. ಇದರಿಂದ ಬ್ಯಾಂಕಿಂಗ್ ಕ್ಷೇತ್ರಕ್ಕಾದ ಲಾಭ ವೇನು? ವಸೂಲಾತಿಯ ಪ್ರಮಾಣ ಹೆಚ್ಚಳವಾಗಿದೆ. ಜತೆಗೆ ಸಮಯದ ಉಳಿತಾಯ. ಈ ಮೊದಲು ಒಂದು ಮುಳುಗಿದ ಕಂಪನಿಯಿಂದ ಸಾಲದ ರಿಕವರಿಗೆ 6 ರಿಂದ 8 ವರ್ಷ ಬೇಕಾಗುತ್ತಿತ್ತು. ಈಗ ಕೇವಲ 1.5ರಿಂದ 2 ವರ್ಷಗಳಲ್ಲಿ ಇತ್ಯರ್ಥವಾಗುತ್ತಿದೆ.

ಬ್ಯಾಂಕಿನಿಂದ ಸಾಲ ಪಡೆದು ತೀರಿಸದಿದ್ದರೆ ನಮ್ಮ ಕಂಪನಿ ಕೈತಪ್ಪಿ ಹೋಗುತ್ತದೆ ಎಂಬ ಅರಿವು ಉದ್ಯಮಿಗಳಲ್ಲಿ ಮೂಡಿದೆ. ಇದರಿಂದಾಗಿ ಸಾಲ ಮರುಪಾವತಿಯ ಶಿಸ್ತು ಹೆಚ್ಚಾಗಿದೆ. ಅದೇ ರೀತಿ ಮತ್ತೊಂದು ಸ್ವಾರಸ್ಯಕರ ಸಂಗತಿ ಏನೆಂದರೆ, ಭಾರತದ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ರೈಟ್ ಆ- ಆಗಿದ್ದ ಸಾಲಗಳ ಪೈಕಿ 35000 ಕೋಟಿ ರುಪಾಯಿಗಳನ್ನು 2025-26 ರಲ್ಲಿ ಮರು ವಸೂಲಿ ಮಾಡು ವಲ್ಲಿ ಬ್ಯಾಂಕ್‌ಗಳು ಯಶಸ್ವಿಯಾಗಿವೆ!

ರೈಟ್ ಆಫ್ ಅಂದ್ರೆ ಸಾಲ ಮತ್ತೆ ವಸೂಲಾಗುವ ಸಾಧ್ಯತೆ ಕಡಿಮೆ ಎಂದೇ ಟೀಕಿಸಲಾಗುತ್ತಿತ್ತು. ಆದರೆ ಇದೀಗ ರೈಟ್ ಆಫ್ ಸಾಲವನ್ನೂ ಮರು ವಸೂಲು ಮಾಡುವ ನಿಟ್ಟಿನಲ್ಲಿ ಬ್ಯಾಂಕ್‌ಗಳು ಯಶಸ್ವಿ ಯಾಗಿರುವುದು ವಿಶೇಷ.

ಹಾಗಾದರೆ ಏನಿದು ರೈಟ್ ಆಫ್? ಯಾವುದಾದರೂ ಒಂದು ಸಾಲವು ದೀರ್ಘಕಾಲದವರೆಗೆ ಮರು‌ ಪಾವತಿಯಾಗದೆ, ಅದನ್ನು ವಸೂಲಿ ಮಾಡುವುದು ಅಸಾಧ್ಯ ಎಂದು ಬ್ಯಾಂಕಿಗೆ ಅನ್ನಿಸಿದಾಗ, ಬ್ಯಾಂಕು ತನ್ನ ಬ್ಯಾಲೆ ಶೀಟ್ ಅನ್ನು ಸ್ವಚ್ಛಗೊಳಿಸಲು ಆ ಸಾಲದ ಮೊತ್ತವನ್ನು ತನ್ನ ಲಾಭ-ನಷ್ಟದ ಖಾತೆಯಿಂದ ಹೊರಗಿಡುತ್ತದೆ. ಇದನ್ನು ‘ರೈಟ್ ಆಫ್’ (Write- off) ಎನ್ನಲಾಗುತ್ತದೆ. ‌

ಸಾಲವನ್ನು ‘ರೈಟ್ ಆಫ್’ ಮಾಡುವುದೆಂದರೆ ಸಾಲವನ್ನು ಮನ್ನಾ (Wave- of) ಮಾಡುವುದು ಎಂದಲ್ಲ. ಬ್ಯಾಂಕು ತನ್ನ ಲೆಕ್ಕದ ಪುಸ್ತಕದಿಂದ ಅದನ್ನು ತೆಗೆದುಹಾಕಿದರೂ, ಆ ಗ್ರಾಹಕನಿಂದ ಹಣ ವಸೂಲಿ ಮಾಡುವ ಪ್ರಕ್ರಿಯೆ ಮುಂದುವರಿಯುತ್ತದೆ. ಐಬಿಸಿ ಕಾಯಿದೆಯ ಅಡಿಯಲ್ಲಿ ದೊಡ್ಡ ಕಂಪನಿಗಳ ಆಸ್ತಿ ಹರಾಜು ಪ್ರಕ್ರಿಯೆ ಚುರುಕಾಗಿರುವುದು ಸಹಕಾರಿಯಾಗಿದೆ. ಜತೆಗೆ ಸರಕಾರ ಸ್ಥಾಪಿಸಿರುವ ನ್ಯಾಶನಲ್ ಅಸೆಟ್ ರಿಕನ್‌ಸ್ಟ್ರಕ್ಷನ್ ಕಂಪನಿಯು ದೊಡ್ಡ ಮೊತ್ತದ ವಸೂಲಾಗದ ಸಾಲವನ್ನು ಮರು ವಸೂಲು ಮಾಡುತ್ತಿದೆ.

ಬ್ಯಾಂಕ್‌ಗಳು ಸಾಲಗಾರರೊಡನೆ ಮಾತುಕತೆ ನಡೆಸಿ ಒಂದೇ ಬಾರಿಗೆ ರಿಯಾಯಿತಿಯ ಬಡ್ಡಿ ದರದಲ್ಲಿ ಸಾಲ ಇತ್ಯರ್ಥಪಡಿಸಿಕೊಳ್ಳುತ್ತಿವೆ. ಇವೆಲ್ಲದರ ಪರಿಣಾಮವಾಗಿ ಬ್ಯಾಂಕ್‌ಗಳ ಒಟ್ಟಾರೆ ವಸೂಲಾಗದ ಸಾಲದ ಪ್ರಮಾಣ ಇಳಿಕೆಯಾಗಿದೆ. ರೈಟ್ ಆಫ್ ಆಗಿದ್ದ ಸಾಲದ ಮರು ವಸೂಲಾತಿ‌ ಯೂ ನಡೆದಿದೆ.

ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿರುವುದರಿಂದ ಮೂಲಸೌಕರ್ಯ, ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲಗಳಿಗೆ ಭಾರಿ ಬೇಡಿಕೆ ಬಂದಿದೆ. ಬ್ಯಾಂಕುಗಳು ಹೆಚ್ಚಿನ ಸಾಲ ನೀಡಿ, ಬಡ್ಡಿ ಆದಾಯ ಗಳಿಸುತ್ತಿವೆ. ಹೀಗಾಗಿ ಭಾರತದ ಸಾರ್ವಜನಿಕ ವಲಯದ ಬ್ಯಾಂಕುಗಳ ಇತಿಹಾಸ ದಲ್ಲಿ ಡಾ. ಮನಮೋಹನ್ ಸಿಂಗ್ ಹಾಗೂ ನರೇಂದ್ರ ಮೋದಿ ಅವರ ಆಡಳಿತಾವಧಿಗಳು ಸಂಪೂರ್ಣ ವಿಭಿನ್ನವಾದ ಎರಡು ಘಟ್ಟಗಳನ್ನು ಪ್ರತಿನಿಧಿಸುತ್ತವೆ. ಮನಮೋಹನ್ ಸಿಂಗ್ಅವರ ಕಾಲದಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಅತಿಯಾದ ಸಾಲ ವಿತರಣೆ ಮತ್ತು ಬಿಕ್ಕಟ್ಟಿನ ಆರಂಭ ಕಂಡುಬಂದರೆ, ಮೋದಿಯವರ ಕಾಲದಲ್ಲಿ ಸ್ವಚ್ಛತಾ ಪ್ರಕ್ರಿಯೆ (Clean- up) ಸುಧಾರಣೆ ಮತ್ತು ದಾಖಲೆ ಯ ಲಾಭ ಕಂಡುಬಂದಿದೆ.

ಕೇಶವ ಪ್ರಸಾದ್​ ಬಿ

View all posts by this author