ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Keshava Prasad B Column: ತ್ರಿವಳಿ ಸವಾಲಿನ ನಡುವೆಯೂ ಬೆಳೆಯುತ್ತಿದೆ ಭಾರತದ ಆರ್ಥಿಕತೆ !

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಭಾರತದ ಆರ್ಥಿಕ ಬೆಳವಣಿಗೆಗೆ ಎದುರಾಗಿರುವ ಸವಾಲುಗಳು ಮತ್ತು ಇಕಾನಮಿಯ ಬಲಾಬಲಗಳ ಬಗ್ಗೆ ಮಾತನಾಡಿದ್ದಾರೆ. ಜತೆಗೆ ‘ಆರ್ಥಿಕತೆ ಕುಸಿಯುತ್ತಿದೆ, ಎಲ್ಲವೂ ಕೈಮೀರಿ ಹೋಗುತ್ತಿದೆ’ ಎಂದು ಬಿಂಬಿಸುತ್ತಿರುವ ನಕಾರಾತ್ಮಕವಾದಿ‌ ಗಳಿಗೆ, ‘ನಿರಾಶಾದಾಯಕ ಮತ್ತು ಭೀತಿ ಹುಟ್ಟಿಸುವ ಅಂತೆ-ಕಂತೆಗಳು ಅಗತ್ಯವಿಲ್ಲ’ ಎಂದು ಖಡಕ್ ಆಗಿಯೇ ಹೇಳಿದ್ದಾರೆ.

ತ್ರಿವಳಿ ಸವಾಲಿನ ನಡುವೆಯೂ ಬೆಳೆಯುತ್ತಿದೆ ಭಾರತದ ಆರ್ಥಿಕತೆ !

-

ಮನಿಮೈಂಡೆಡ್

ನಮ್ಮ ದೇಶದಲ್ಲಿ ವಾಕ್ ಸ್ವಾತಂತ್ರ್ಯ, ಸ್ವತಂತ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅನುಕೂಲ ಎಷ್ಟು ಚೆನ್ನಾಗಿದೆ ಎಂದರೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಡಾ. ಪರಕಾಲ ಪ್ರಭಾಕರ್ ಅವರೇ ದೇಶದ ಆರ್ದಥಿಕ ನೀತಿಗಳ ಬಗ್ಗೆ ಹಲವಾರು ಬಾರಿ ಬಹಿರಂಗವಾಗಿ ತೀವ್ರವಾಗಿ ಟೀಕಿಸಿದ್ದಾರೆ. ನಾರ್ವೆಯ ಪತ್ರಕರ್ತೆಗೆ ಇದೆಲ್ಲ ತಿಳಿದಿದೆಯೋ, ಇಲ್ಲವೋ. ಭಾರತದಲ್ಲಿ ಪತ್ನಿ ದೇಶದ ಹಣಕಾಸು ಮಂತ್ರಿಯಾಗಿದ್ದರೂ, ಖುದ್ದು ಪತಿಯೇ ಸರಕಾರದ ಆರ್ಥಿಕ ನೀತಿಗಳನ್ನು ಪ್ರತಿಪಕ್ಷಗಳನ್ನೂ ಮೀರಿಸುವ ರೀತಿಯಲ್ಲಿ ಟೀಕಿಸುತ್ತಾರೆ.

ಅಮಿತ್ ಶಾ ಆಗಲಿ, ಮೋದಿಯವರಾಗಲಿ ಈ ಬಗ್ಗೆ ಯಾವತ್ತೂ ಚಕಾರವೆತ್ತಿಲ್ಲ. ಗಂಡ ಮತ್ತು ಹೆಂಡತಿ ಒಂದೇ ರೀತಿಯ ರಾಜಕೀಯ ಅಥವಾ ಆರ್ಥಿಕ ಅಭಿಪ್ರಾಯ ಹೊಂದಿರಬೇಕು ಎಂಬ ನಿಯಮವಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ ಎಂದು ಈ ಭಿನ್ನಾಭಿಪ್ರಾಯಗಳನ್ನು ಗೌರವಿಸಿದ್ದಾರೆ. ಆದರೆ ಟೀಕೆಗಳು ರಚನಾತ್ಮಕವಾಗಿರಬೇಕು. ವಸ್ತುನಿಷ್ಠವಾಗಿರಬೇಕು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಭಾರತದ ಆರ್ಥಿಕ ಬೆಳವಣಿಗೆಗೆ ಎದುರಾಗಿರುವ ಸವಾಲುಗಳು ಮತ್ತು ಇಕಾನಮಿಯ ಬಲಾಬಲಗಳ ಬಗ್ಗೆ ಮಾತನಾಡಿದ್ದಾರೆ. ಜತೆಗೆ ‘ಆರ್ಥಿಕತೆ ಕುಸಿಯುತ್ತಿದೆ, ಎಲ್ಲವೂ ಕೈಮೀರಿ ಹೋಗುತ್ತಿದೆ’ ಎಂದು ಬಿಂಬಿಸುತ್ತಿರುವ ನಕಾರಾತ್ಮಕ ವಾದಿಗಳಿಗೆ, ‘ನಿರಾಶಾದಾಯಕ ಮತ್ತು ಭೀತಿ ಹುಟ್ಟಿಸುವ ಅಂತೆ-ಕಂತೆಗಳು ಅಗತ್ಯವಿಲ್ಲ’ ಎಂದು ಖಡಕ್ ಆಗಿಯೇ ಹೇಳಿದ್ದಾರೆ.

ಭಾರತದ ಆರ್ಥಿಕತೆಯು ಇಂದಿಗೂ ಸಕಾರಾತ್ಮಕ ಮತ್ತು ಚೇತೋಹಾರಿಯಾಗಿದೆ. ದೇಶದ ಸಾಮಾನ್ಯ ಜನರು ಮತ್ತು ಉದ್ಯಮಿಗಳು ಮಾಡುತ್ತಿರುವ ಸಾಧನೆಗಳನ್ನು ಮರೆತು, ಕೇವಲ ಭಯದ ವಾತಾವರಣ ಸೃಷ್ಟಿಸುವುದು ಸರಿಯಲ್ಲ. ಭಾರತಕ್ಕೆ ಈಗ ಇಂತಹ ನಕಾರಾತ್ಮಕ ನರೇಟಿವ್‌ಗಳ ಅಗತ್ಯವಿಲ್ಲ, ಬದಲಿಗೆ ಜನರಲ್ಲಿ ಆತ್ಮವಿಶ್ವಾಸ ತುಂಬುವ ಮಾತು ಮತ್ತು ಕೆಲಸಗಳ ಅಗತ್ಯವಿದೆ ಎಂದಿದ್ದಾರೆ.

ಇದನ್ನೂ ಓದಿ: Keshava Prasad B Column: ತೈಲದ ಮೇಲೆ ಯುದ್ಧದ ಪರಿಣಾಮ ತಡೆಯಲು ಸಾಧ್ಯವೇ ?!

ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾದ ವಾರ್ಷಿಕೋತ್ಸವ ಕಾರ್ಯಕ್ರಮ ದಲ್ಲಿ ಮಾತನಾಡುತ್ತಾ, ದೇಶದ ಆರ್ಥಿಕ ಪರಿಸ್ಥಿತಿಯ ವಾಸ್ತವವನ್ನು ವಿವರಿಸಿದ್ದಾರೆ. ಈಗ ಎದುರಾ ಗಿರುವ ಆರ್ಥಿಕ ಸವಾಲುಗಳು ಭಾರತ ಸ್ವತಃ ಸೃಷ್ಟಿಸಿಕೊಂಡಿದ್ದಲ್ಲ. ಬದಲಿಗೆ ಇವು ಸಂಪೂರ್ಣವಾಗಿ ಬಾಹ್ಯ ಸವಾಲುಗಳಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಪಶ್ಚಿಮ ಏಷ್ಯಾ ಬಿಕ್ಕಟ್ಟು, ರೆಡ್ಸೀ ಮತ್ತು ಹಾರ್ಮುಜ್ ಜಲಸಂಧಿಯ ಭಾಗದಲ್ಲಿ ಉಂಟಾಗಿರುವ ತೊಂದರೆಗಳು ಜಾಗತಿಕ ಸಪ್ಲೆ ಚೈನ್ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಇದರಿಂದಾಗಿ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ, ರಸಗೊಬ್ಬರ, ಮತ್ತು ಚಿನ್ನದ ಬೆಲೆಗಳು ಗಗನಕ್ಕೇರಿವೆ.

ಸದ್ಯದ ಜಾಗತಿಕ ಪರಿಸ್ಥಿತಿಯಲ್ಲಿ ಭಾರತವು ಪ್ರಮುಖವಾಗಿ ಮೂರು ಸವಾಲುಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಅವುಗಳೆಂದರೆ- ಇಂಧನ, ರಸಗೊಬ್ಬರ ಮತ್ತು ವಿದೇಶಿ ವಿನಿಮಯ ಸಂಗ್ರಹ (ಫಾರೆಕ್ಸ್). ಈ ಮೂರಕ್ಕೂ ನಾವು ವಿದೇಶಿ ವಿನಿಮಯದ, ಮುಖ್ಯವಾಗಿ ಡಾಲರ್‌ಗಳಲ್ಲಿಹಣ ಪಾವತಿ ಮಾಡಬೇಕಿರುವುದರಿಂದ ಜಾಗತಿಕ ಮಟ್ಟದ ಬಿಕ್ಕಟ್ಟುಗಳು ನಮ್ಮ ಮೇಲೂ ಪ್ರಭಾವ ಬೀರುತ್ತಿವೆ. ಆದರೆ ಇದನ್ನು ಎದುರಿಸಿಯೂ ಭಾರತದ ಆರ್ಥಿಕತೆ ಸದೃಢವಾಗಿದೆ.

ಜನತೆಗೆ ಇಂಧನ ಬೆಲೆ ಏರಿಕೆಯಾಗದಂತೆ ತಡೆಯಲು ಸರ್ಕಾರ ಈಗಾಗಲೇ ಸಾಕಷ್ಟು ಶ್ರಮಿಸಿದೆ. ಅಬಕಾರಿ ಸುಂಕವನ್ನ ಕಡಿತಗೊಳಿಸುವ ಮೂಲಕ ವಾರ್ಷಿಕವಾಗಿ ಸುಮಾರು 1 ಲಕ್ಷ ಕೋಟಿ ರೂಪಾಯಿ ಆದಾಯ ನಷ್ಟವನ್ನು ತಾನೇ ಭರಿಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈಗ ಆಗುತ್ತಿರುವ ಬೆಲೆ ಏರಿಕೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಕಂಪನಿಗಳು ಖರೀದಿಸುವ ದರಕ್ಕೆ ಅನುಗುಣವಾಗಿ ಆಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ಸುಳ್ಳು ವದಂತಿಗಳಿಗೆ ಅಥವಾ ನಕಾರಾತ್ಮಕ ಚರ್ಚೆಗಳಿಗೆ ಕಿವಿಗೊಡಬೇಡಿ ಎಂದು ಹಣಕಾಸು ಸಚಿವರು ಕರೆ ನೀಡಿದ್ದಾರೆ.

image keshava

ಆತ್ಮವಿಶ್ವಾಸವನ್ನು ತುಂಬಿಕೊಳ್ಳಲು ಎಂಬತ್ತರ ದಶಕದಿಂದ ಇಲ್ಲಿಯವರೆಗಿನ ಆರ್ಥಿಕ ಬೆಳವಣಿಗೆ ಯ ಅಂಕಿ ಅಂಶಗಳೇ ಸಾಕು, ಗಮನಿಸಿ. 1980-81ರಿಂದ 1989-90ರ ತನಕ ವಾರ್ಷಿಕ ಸರಾಸರಿ 5.7 ಪರ್ಸೆಂಟ್ ಜಿಡಿಪಿ ಬೆಳವಣಿಗೆ ಆಗಿತ್ತು. 1990-91ರಿಂದ 1999-2000 ತನಕ 5.8 ಪರ್ಸೆಂಟ್, 2000-01ರಿಂದ 2009-10 ತನಕ 6.3 ಪರ್ಸೆಂಟ್, 2010-11ರಿಂದ 2019-20 ತನಕ 6.6 ಪರ್ಸೆಂಟ್, 2022-23ರಿಂದ 2025-26 ತನಕ 7.7 ಪರ್ಸೆಂಟ್ ಜಿಡಿಪಿ ಬೆಳವಣಿಗೆ ದಾಖಲಾಗಿದೆ!

ತಲಾ ಆದಾಯವೂ ಇದೇ ಅವಧಿಯಲ್ಲಿ 3.5 ಪರ್ಸೆಂಟ್‌ನಿಂದ 6.7 ಪರ್ಸೆಂಟ್‌ಗೆ ಏರಿಕೆಯಾಗಿದೆ. ಸವಾಲುಗಳ ಎದುರು ಕುಗ್ಗದೆಯೇ ಭಾರತದ ಆರ್ಥಿಕತೆ ಬೆಳವಣಿಗೆಯಾಗುತ್ತಿದೆ. ಪ್ರಪಂಚದಲ್ಲಿಯೇ ಇವತ್ತು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಿದೆ.

ಇದನ್ನು ಹೆಮ್ಮೆಯಿಂದ, ಅಭಿಮಾನದಿಂದ ಹೇಳಬಹುದು. ಆದರೂ ಅತಿಯಾದ ನಿರಾಶೆಯ ನೆಗೆಟಿವ್ ನರೇಟಿವ್ಬಿ ತ್ತುವವರನ್ನು ಏನೆಂದು ಕರೆಯಬೇಕು? ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಭಾರತ ಸೇರಿದಂತೆ ಏಷ್ಯಾ, ಯುರೋಪ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಇಂಧನ ಬಿಕ್ಕಟ್ಟು ತಾರಕಕ್ಕೇರಿದೆ. ಫೆಬ್ರವರಿ ಅಂತ್ಯಕ್ಕೆ ಆರಂಭವಾದ ಇರಾನ್ ಯುದ್ಧ ಇನ್ನೂ ನಿಂತಿಲ್ಲ. ಹೀಗಿದ್ದರೂ 2026ರ ಏಪ್ರಿಲ್‌ನಲ್ಲಿ ಭಾರತದ ಆರ್ಥಿಕತೆ ಸಕ್ರಿಯವಾಗಿತ್ತು.

ಇಂಡಸ್ಟ್ರಿಯಲ್ ಮತ್ತು ಸರ್ವೀಸ್ ಸೆಕ್ಟರ್‌ನಲ್ಲಿ ಚಟುವಟಿಕೆಗಳು ಪ್ರಬಲವಾಗಿತ್ತು. ಆಹಾರದ ಬೆಲೆಗಳ ಏರಿಕೆಯಿಂದಾಗಿ ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರ 3.5 ಪರ್ಸೆಂಟ್‌ಗೆ ಏರಿತ್ತಾದರೂ, ಆರ್‌ಬಿಐ ಮಾನದಂಡದ ಪ್ರಕಾರ ಸುರಕ್ಷಿತ ಮಟ್ಟದಲ್ಲಿಯೇ ಇದೆ. ಮಾರ್ಚ್‌ನಲ್ಲಿ ನಿವ್ವಳ ವಿದೇಶಿ ನೇರ ಬಂಡವಾಳ ಹೂಡಿಕೆ ಪಾಸಿಟಿವ್ ಆಗಿತ್ತು. ದುರದೃಷ್ಟವಶಾತ್ ಜಾಗತಿಕ ಆರ್ಥಿಕ ಪರಿಸ್ಥಿತಿಯು ಇಂದಿಗೂ ಸೂಕ್ಷ ಹಾಗೂ ಅಸ್ಥಿರವಾಗಿದೆ. ನಾನಾ ದೇಶಗಳಲ್ಲಿ ಉಂಟಾಗಿರುವ ತಲ್ಲಣಗಳು, ಗಗನಕ್ಕೇರಿರುವ ಇಂಧನ ವೆಚ್ಚಗಳು ಸವಾಲಾಗಿ ಪರಿಣಮಿಸಿದೆ.

ಆರ್ಥಿಕ ಬೆಳವಣಿಗೆ ಹಾಗೂ ಹಣದುಬ್ಬರದ ಭವಿಷ್ಯದ ಬಗೆಗಿನ ಅನಿಶ್ಚಿತತೆಯು ಜಗತ್ತನ್ನು ಆವರಿಸಿಕೊಂಡಿದೆ. ಪಶ್ಚಿಮ ಏಷ್ಯಾದ ಸಂಘರ್ಷಗಳು ಜಾಗತಿಕ ಮಾರುಕಟ್ಟೆ, ವ್ಯಾಪಾರ ಮತ್ತು ಸರಬರಾಜು ಸಪ್ಲೆ ಚೈನ್ ಮೇಲೆ ನಿರಂತರ ಒತ್ತಡ ಹೇರುತ್ತಿವೆ. ಇದು ಹಣಕಾಸು ಮಾರುಕಟ್ಟೆಯಲ್ಲಿ ಏರಿಳಿತಗಳಿಗೆ ಕಾರಣವಾಗಿದೆ. ಆದರೆ, ಇಂತಹ ಕಠಿಣ ಜಾಗತಿಕ ಸನ್ನಿವೇಶದಲ್ಲೂ, ಭಾರತವು ಅತ್ಯಂತ ಸದೃಢವಾದ ಆರ್ಥಿಕ ಬಲದೊಂದಿಗೆ ಬೆಳೆಯುತ್ತಿದೆ.

ದೇಶೀಯ ಬೇಡಿಕೆಯೂ ಸದೃಢವಾಗಿದೆ. ಸೇವಾ ಕ್ಷೇತ್ರ ಚುರುಕಾಗಿದೆ. ದೇಶಕ್ಕೆ 11 ತಿಂಗಳಿನ ಇಡೀ ಆಮದು ವೆಚ್ಚಕ್ಕೆ ಸಾಕಾಗುವಷ್ಟು ವಿದೇಶಿ ವಿನಿಮಯ ಸಂಗ್ರಹ ಇದೆ. 2025-26ರಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಮಾಣವು 2024-25ಕ್ಕಿಂತಲೂ ವೃದ್ಧಿಸಿದೆ.

ಹೀಗಿದ್ದರೂ, ಇಂಧನ ಸಮಸ್ಯೆ ಇದೆಯಲ್ಲವೇ, ಅದರ ಆಯಾಮಗಳು ಹಲವು. ಕಚ್ಚಾ ತೈಲ ಮತ್ತು ಬಂಗಾರದ ಆಮದು ಕುರಿತ ಬಿಲ್ ಹೆಚ್ಚಳವಾಗಿದೆ. ವ್ಯಾಪಾರ ಕೊರತೆ ಕಾಡುತ್ತಿದೆ. ಸ್ಟಾಕ್ ಮಾರು ಕಟ್ಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳನ್ನು ಮಾರುತ್ತಿದ್ದರೂ, ದೇಶೀಯ ಹೂಡಿಕೆದಾರರು ಭರ್ಜರಿ ಹೂಡಿಕೆ ಮಾಡುತ್ತಿದ್ದಾರೆ. ಭಾರತದ ಆರ್ಥಿಕ ಬೆಳವಣಿಗೆಯ ಬಗ್ಗೆ ಈಕ್ವಿಟಿ ಹೂಡಿಕೆದಾರರು ಎಷ್ಟು ಆತ್ಮ ವಿಶ್ವಾಸ ಹೊಂದಿದ್ದಾರೆ ಎಂಬುದನ್ನುಅಂಕಿ ಅಂಶಗಳೇ ಬಿಂಬಿಸುತ್ತವೆ.

ಇದು ಅತ್ಯಂತ ಭರವಸೆದಾಯಕವಾಗಿದೆ. ಭಾರತೀಯ ಮ್ಯೂಚುವಲ್ ಫಂಡ್ ಅಸೋಸಿಯೇಷನ್ ಬಿಡುಗಡೆ ಮಾಡಿರುವ ಇತ್ತೀಚಿನ (2026ರ ಆರಂಭದ) ಅಂಕಿ-ಅಂಶಗಳ ಪ್ರಕಾರ, ಸದ್ಯಕ್ಕೆ ದೇಶದಲ್ಲಿ ಪ್ರತಿ ತಿಂಗಳು ಸಿಪ್ (SIP) ಮೂಲಕ ಸರಾಸರಿ 25000 ಕೋಟಿ ರೂಪಾಯಿ ಮಾರುಕಟ್ಟೆಗೆ ಹೂಡಿಕೆ ಯಾಗುತ್ತಿದೆ.

ಸಕ್ರಿಯವಾಗಿರುವ ಒಟ್ಟು ಸಿಪ್ ಖಾತೆಗಳ ಸಂಖ್ಯೆ ಸುಮಾರು 8.5ರಿಂದ 9 ಕೋಟಿಯನ್ನು ದಾಟಿದೆ. ಸರಾಸರಿಯಾಗಿ ಒಬ್ಬ ಹೂಡಿಕೆದಾರ ತಿಂಗಳಿಗೆ 2500 ರುಪಾಯಿಗಳಿಂದ 3000 ರುಪಾಯಿ ತನಕ ಸಿಪ್ ಮೂಲಕ ಹೂಡಿಕೆ ಮಾಡುತ್ತಿದ್ದಾನೆ. ಜಾಗತಿಕ ಏರಿಳಿತಗಳ ನಡುವೆಯೂ ಭಾರತದ ಮಾರುಕಟ್ಟೆ ಸ್ಥಿರವಾಗಿರಲು ಈ ದೇಶೀಯ ಸಿಪ್ ಹೂಡಿಕೆಯೇ ಪ್ರಮುಖ ಕಾರಣವಾಗಿದೆ.

ಭಾರತದಲ್ಲಿ CDSL ಮತ್ತು NSDL ಸೇರಿ ಒಟ್ಟು ಡಿಮ್ಯಾಟ್ ಖಾತೆಗಳ ಸಂಖ್ಯೆ 16 ಕೋಟಿಯ ಗಡಿ ದಾಟಿದೆ. ಪ್ರತಿ ತಿಂಗಳು ಹೊಸದಾಗಿ 25 ರಿಂದ 30 ಲಕ್ಷ ಹೊಸ ಡಿಮ್ಯಾಟ್ ಖಾತೆಗಳು ಸೇರ್ಪಡೆ ಯಾಗುತ್ತಿವೆ. ಕಾರ್ಪೊರೇಟ್ ವಲಯ, ಉದ್ದಿಮೆಗಳ ಪ್ರಗತಿಯನ್ನು ಇದು ಬಿಂಬಿಸಿದೆ.

ಇದು ಮಾತ್ರವಲ್ಲದೆ, ಚಿಲ್ಲರೆ ಹೂಡಿಕೆದಾರರು ನೇರವಾಗಿ ಷೇರು ಮಾರುಕಟ್ಟೆಯಲ್ಲಿ ಪ್ರತಿ ತಿಂಗಳು ಸರಾಸರಿ 15000 ಕೋಟಿಯಿಂದ 20000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದಾರೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸುತ್ತಾರೆ.

ಕೆಲವರು ಭಾರತದ ಸಾಲ ಅತಿ ಆಯಿತು. ಅಪಾಯದ ಮಟ್ಟದಲ್ಲಿದೆ ಎಂದು ಆರೋಪಿಸುತ್ತಾರೆ. ಆದರೆ ವಾಸ್ತವವಾಗಿ ಭಾರತದ ಸಾಲದ ಮಟ್ಟ ಅಪಾಯಕಾರಿ ಮಟ್ಟದಲ್ಲಿ ಇಲ್ಲವೇ ಇಲ್ಲ. ಆತಂಕ ಪಡಬೇಕಿಲ್ಲ. ಕೇಂದ್ರ ಸರ್ಕಾರದ ಒಟ್ಟು ಸಾಲ ಮತ್ತು ಇತರ ಹೊಣೆಗಾರಿಕೆಗಳು ಸುಮಾರು ೧೯೭.೧೮ ಲಕ್ಷ ಕೋಟಿ (2025-26ರ ಪರಿಷ್ಕೃತ ಅಂದಾಜು) ದಾಟಿದ್ದು, ಇದು 2026-27ರ ಅಂತ್ಯಕ್ಕೆ ಸುಮಾರು 214.82 ಲಕ್ಷ ಕೋಟಿ ತಲುಪಬಹುದು ಎಂದು ಅಂದಾಜಿಸಲಾಗಿದೆ.

ಸಾಲ ಮತ್ತು ಜಿಡಿಪಿ ಅನುಪಾತ ( Debt- to- GDP Ratio) ಗಮನಿಸಿದರೆ ಆತಂಕಕ್ಕೆ ಕಾರಣವಿಲ್ಲ. ಏಕೆಂದರೆ ಆರ್ಥಿಕತೆಯಲ್ಲಿ ಸಾಲದ ಪ್ರಮಾಣವನ್ನು ಅಳೆಯಲು ಇದನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಭಾರತದ ಸಾಲ ಮತ್ತು ಜಿಡಿಪಿ ಅನುಪಾತವು ಪ್ರಸ್ತುತ 55.6 ಪರ್ಸೆಂಟ್‌ನಷ್ಟಿದೆ. (2026- 27ರ ಬಜೆಟ್ ಅಂದಾಜು). ಇದು ಕಳೆದ ವರ್ಷ (56.1%)ಕ್ಕಿಂತ ಕಡಿಮೆಯಾಗಿರುವುದು ಸಕಾರಾತ್ಮಕ ಆಂಶವಾಗಿದೆ.

ಸಾರ್ವಜನಿಕ ಬ್ಯಾಂಕ್‌ಗಳ ಒಟ್ಟು ಎನ್‌ಟಿಎ 2018ರ ಸುಮಾರಿಗೆ ಸುಮಾರು 14.6%ರಷ್ಟು ಅತ್ಯಂತ ಕಳವಳಕಾರಿ ಮಟ್ಟಕ್ಕೆ ತಲುಪಿತ್ತು. ಆದರೆ, ಸರಕಾರದ ಮತ್ತು ಆರ್‌ಬಿಐ ನಿಕಟ ಉಸ್ತುವಾರಿ ಯಿಂದಾಗಿ ಪ್ರಸ್ತುತ ಇದು 2.8 ಪರ್ಸೆಂಟ್ ಆಸುಪಾಸಿಗೆ ಇಳಿಕೆಯಾಗಿದೆ. ಇದು ಕಳೆದ ಒಂದು ದಶಕದ ಅತ್ಯಂತ ಕನಿಷ್ಠ ಮಟ್ಟವಾಗಿದೆ.

ಒಂದೊಮ್ಮೆ ನಷ್ಟದಲ್ಲಿದ್ದ ದೇಶದ ಸಾರ್ವಜನಿಕ ವಲಯದ ಬ್ಯಾಂಕುಗಳು ಈಗ ಸತತವಾಗಿ ಬಂಪರ್ ಲಾಭವನ್ನು ಗಳಿಸುತ್ತಿವೆ. ಬ್ಯಾಂಕುಗಳ ಬಳಿ ವಸೂಲಾಗದ ಸಾಲದ ಹೊರೆ ಕಡಿಮೆ ಯಾದಾಗ, ಹೊಸದಾಗಿ ಸಾಲ ನೀಡಲು ಅವರ ಬಳಿ ಹೆಚ್ಚಿನ ಹಣ ಲಭ್ಯವಿರುತ್ತದೆ.

ಪ್ರಸ್ತುತ ಬ್ಯಾಂಕುಗಳು ಉದ್ಯಮಿಗಳಿಗೆ, ಸಣ್ಣ ಉದ್ದಿಮೆ ಮತ್ತು ಜನಸಾಮಾನ್ಯರಿಗೆ (ಮನೆ, ವಾಹನ, ಶಿಕ್ಷಣ ಸಾಲ) ಮುಕ್ತವಾಗಿ ಸಾಲ ನೀಡುತ್ತಿವೆ. ಇದು ಮಾರುಕಟ್ಟೆ ಯಲ್ಲಿ ಹಣದ ಚಲಾವಣೆಯನ್ನು ಹೆಚ್ಚಿಸಿದೆ. ದೇಶದ ಆರ್ಥಿಕತೆ ಗಮನಾರ್ಹವಾಗಿ ಬೆಳೆಯುತ್ತಿದೆ ಎನ್ನಲು ಇನ್ನೂ ಹಲವಾರು ನಿದರ್ಶನಗಳು ಇವೆ. ಇವು ಸ್ಯಾಂಪಲ್ ಅಷ್ಟೇ.