Vinayak Bhat Naroor Column: ತೆಂಗಿನಕಾಯಿ ಸಿಪ್ಪೆ ಸುಲಿದು ಹಾಕುತ್ತಿರುವ ನಿಶಾಚರಿ!
ಕಳೆದ ಮಳೆಗಾಲದ ಒಂದು ದಿನ ನಮ್ಮ ಹಿತ್ತಲಿನ ಮಾವಿನ ಮರದ ಕೆಳಗೆ ಮುಳ್ಳುಹಂದಿಯ (ಪಾರ್ಕ್ಯು ಪೈನ್) ಕಣೆ (ಮುಳ್ಳು) ಬಿದ್ದಿತ್ತು. ಎತ್ತಿ ತಂದು ಮಡದಿಗೆ ತೋರಿಸಿದೆ. ‘ನಿಂಗ ಅಂತೂ ಹೊತ್ತು ಗೊತ್ತಿಲ್ಲದೆ ಕಂಡ ಕಂಡಲ್ಲಿ ತಿರುಗ್ತಿ. ಸ್ವಲ್ಪ ಹುಷಾರಾಗಿರಿ’ ಅಂತ ಕಾಳಜಿ ಪೂರ್ವಕ ಉಪದೇಶ ಬಂತು. ಆದರೆ ನಮ್ಮೂರಿನ ಆಸುಪಾಸಿನಲ್ಲಿ ಇಷ್ಟು ವರ್ಷದ ಕಾಡಿನ ಓಡಾಟದಲ್ಲಿ ಇಲ್ಲಿಯವರೆಗೆ ಈ ವಿಲಕ್ಷಣ ಜೀವಿ ಕಂಡಿಲ್ಲ
Source : Vishwavani Daily News Paper
ವಿನಾಯಕ ಭಟ್ ನರೂರ
ಮಲೆನಾಡಿನ ತೋಟದಲ್ಲಿ ನಡುರಾತ್ರಿ ಅದಾರೋ ತೆಂಗಿನ ಸಿಪ್ಪೆ ಸುಲಿದು ಹಾಕುತ್ತಿದ್ದಾರೆ! ನಿಶಾಚರಿ ಗಳ ಪತ್ತೆಯಾದರೂ, ನಷ್ಟ ತಪ್ಪಿಸಲು ಆಗಲಿಲ್ಲ. ಇತ್ತ ಕಾಯಿ ಸಿಪ್ಪೆ, ನಾರಿನ ಉದ್ಯಮ ವೃದ್ಧಿ ಯಾಗುತ್ತಿದೆ!
ಮುದ್ದು ಮೊಗದ ಕೆಂದಳಿಲಿನ ಚಿತ್ರದೊಡನೆ ಪರಿಸರವಾದಿ ಲೇಖನ ಬರೆದಾಗ, ನನ್ನ ಕೆಲವು ಸಂಬಂಧಿಕರು ಅಟ್ಟಿಸಿಕೊಂಡು ಬಂದಿದ್ದರು - ‘ನಿನಗೆ ಕ್ಯಾಸಾಳದ ಉಪದ್ವ್ಯಾಪ ಗೊತ್ತಿಲ್ಲೆ. ಯಂಗಕ್ಕಂತೂ ಸಾಕಾಗೋದ್ಯು’ ಅಂತ.
ಕಳೆದ ಮಳೆಗಾಲದ ಒಂದು ದಿನ ನಮ್ಮ ಹಿತ್ತಲಿನ ಮಾವಿನ ಮರದ ಕೆಳಗೆ ಮುಳ್ಳುಹಂದಿಯ (ಪಾರ್ಕ್ಯುಪೈನ್) ಕಣೆ (ಮುಳ್ಳು) ಬಿದ್ದಿತ್ತು. ಎತ್ತಿ ತಂದು ಮಡದಿಗೆ ತೋರಿಸಿದೆ. ‘ನಿಂಗ ಅಂತೂ ಹೊತ್ತು ಗೊತ್ತಿಲ್ಲದೆ ಕಂಡ ಕಂಡಲ್ಲಿ ತಿರುಗ್ತಿ. ಸ್ವಲ್ಪ ಹುಷಾರಾಗಿರಿ’ ಅಂತ ಕಾಳಜಿಪೂರ್ವಕ ಉಪ ದೇಶ ಬಂತು. ಆದರೆ ನಮ್ಮೂರಿನ ಆಸುಪಾಸಿನಲ್ಲಿ ಇಷ್ಟು ವರ್ಷದ ಕಾಡಿನ ಓಡಾಟದಲ್ಲಿ ಇಲ್ಲಿಯ ವರೆಗೆ ಈ ವಿಲಕ್ಷಣ ಜೀವಿ ಕಂಡಿಲ್ಲ.
ಒಮ್ಮೆ ಮಾತ್ರ ಹುಲೇಮಳಗಿಯ ಬೆಟ್ಟದಲ್ಲಿ ಇಂಗುಗುಂಡಿ ಪರಿಶೀಲನೆ ವೇಳೆ ನೆಲದಲ್ಲಿ ಅಗೆದ ಬಿಲ ತೋರಿಸಿ ‘ಯಾರೋ ಮುಳ್ಳಂದಿ ಹುಡುಕಿದ್ದ ನೋಡು’ ಅಂತ ವಿವರಿಸಿದ್ದ ಗೆಳೆಯ ಗಣಪತಿ. ಮನುಷ್ಯನ ನಾಲಿಗೆಯ ಚಪಲಕ್ಕೆ ಬೆರಗಾಗಿದ್ದೆ ಆಗ. ಎರಡು ತಿಂಗಳ ಕೆಳಗೆ ವಿವಿಧ ಕಾರಣದಿಂದ ನಾಲ್ಕೈದು ದಿನ ತೋಟಕ್ಕೆ ಹೋಗಲಾಗಿರಲಿಲ್ಲ.
ಆಮೇಲೆ ಹೋದಾಗ ಅಚ್ಚರಿಯೊಡನೆ ಆಘಾತ ಕಾದಿತ್ತು. ತೆಂಗಿನ ಮರದಡಿಗೆ ಬಿದ್ದ ಕಾಯಿಯನ್ನು ಯಾರೋ ಕತ್ತಿಯಲ್ಲಿ ಕೊಚ್ಚಿ, ಸಿಪ್ಪೆ ತೆಗೆದು ಒಯ್ದಿದ್ದರು. ಕೃಷಿ ಭೂಮಿಯಲ್ಲಿ ಕಳ್ಳತನ ವೆಂದರೆ ದೊಡ್ಡ ಕಂಟಕವೇ ಸರಿ. ನಮ್ಮ ತೋಟದಲ್ಲಿ ಕಳವಿನ ಪ್ರಸಂಗ ತೀರ ವಿರಳ. ಕೆಲಸಕ್ಕೆ ಬರುವ ಇಬ್ಬರು ಖಾಯಂ ಸಹಾಯಕರ ಬಗ್ಗೆ ವಿಶ್ವಾಸವಿತ್ತು. ಅಂಥದರಲ್ಲಿ ವಿರಾಮವಾಗಿ ಕುಳಿತು ಸುಲಿದ ಕಾಯಿಯ ಸಿಪ್ಪೆ ರಾಶಿ ಕಂಡರೆ ಆಘಾತವಾಗದೆ ಇನ್ನೇನು.
ವಾರದ ನಂತರ ತೋಟದ ಇನ್ನೊಂದು ಭಾಗದಲ್ಲಿ ಈ ದೃಶ್ಯದ ಪುನರಾವರ್ತನೆ! ಮೊದಲೇ ಮಂಗನ ದಾಂಧಲೆಯಲ್ಲಿ ತೆಂಗು ಸಿಗುವುದು ದುಸ್ತರವಾದಾಗ ಇದೊಂದು ಹೊಸ ತಲೆಶೂಲೆ. ಅತ್ತ ಮಾರುಕಟ್ಟೆಯಲ್ಲಿ ಕಾಯಿಯ ದರ ಬೇರೆ ದುಪ್ಪಟ್ಟಾಗಿದೆ.
ತೆಂಗಿನ ಕಾಯಿ ಮಾಯ!
ಮೊನ್ನೆ ಜನ್ನಣ್ಣನ ತೋಟದಲ್ಲಿ ಹನಿ ನೀರಾವರಿ ಚಾಲೂ ಮಾಡಿದ್ದ ನಾರಾಯಣ ನನ್ನನ್ನು ಕಂಡು ‘ಮುಳ್ಳಕ್ಕಿದು ಹೊಸಾ ಕಾಟ ಶುರುವಾಗೈತಿ. ರಾತ್ರಿ ಬೆಳಗಾಗದ್ರಲ್ಲಿ ತೆಂಗಿನಕಾಯಿ ಮಾಯ ಆಗ್ತಾವೆ’ ಅಂದ. ಬೇಲಿಯ ಪಕ್ಕದ ತಾಜಾ ಸಿಪ್ಪೆಯ ಗುಪ್ಪೆಯಿಂದ ಗಟ್ಟಿ ಕರಟದ ಅವಶೇಷಗಳನ್ನು ಹೆಕ್ಕಿ ತೋರಿಸಿದ. ಅರೆ, ನಮ್ಮ ತೋಟದ ಸಿಪ್ಪೆಯ ರಾಶಿಯೂ ಹೀಗೇ ಇತ್ತಲ್ಲ!
ಮನೆಗೆ ಬಂದವನು ಆಕರ ಮೂಲಗಳನ್ನು ಜಾಲಾಡಿದೆ. ಗಡ್ಡೆ ಗೆಣಸು, ನೆಲಕ್ಕೆ ಬಿದ್ದ ಹಣ್ಣು, ಕಾಳು, ಹುಲ್ಲು, ಎಲೆ, ಮರದ ತೊಗಟೆ, ಕೀಟ, ಸಣ್ಣ ಕಶೇರುಕಗಳು ಕೊನೆಗೆ ಸತ್ತ ಪ್ರಾಣಿಯ ಮೂಳೆ ಕೂಡ ಈ ದಂಶಕದ (ರೋಡೆಂಟ್) ಆಹಾರ ಟ್ಟಿಯಲ್ಲಿರುವ ಮಾಹಿತಿ ದೊರಕಿತು. ಯುಟ್ಯೂಬಿನಲ್ಲಿ ಅಚ್ಚು ಕಟ್ಟಾಗಿ ತೆಂಗಿನ ಚಿಪ್ಪು ಹೆರೆಯುತ್ತಿರುವ ವಿಡಿಯೋ ವೀಕ್ಷಣೆಯೂ ಆಯ್ತು. ಹುಲಿ, ಚಿರತೆ, ಕಾಡಾನೆ, ಕಾಡೆಮ್ಮೆ, ಕೋತಿ, ಜಿಂಕೆ, ಕೃಷ್ಣಮೃಗ, ನವಿಲು, ಮುಳ್ಳು ಹಂದಿ.... ಇವೆಲ್ಲ ‘ದೂರದ ಅರಣ್ಯ’ದಲ್ಲಿ ಇದ್ದಾಗ ನೋಡಲು ಚೆನ್ನ. ಆದರೆ ಅವು ನಮ್ಮ ಜಮೀನಿಗೆ ಬಂದು ಕೃಷಿ ಉತ್ಪನ್ನದಲ್ಲಿ, ಸಾಕು ಪ್ರಾಣಿಗಳಲ್ಲಿ ಪಾಲು ಪಡೆದಾಗ ಸಂಕಟ, ಸಂಘರ್ಷ ತಪ್ಪಿದ್ದಲ್ಲ.
ಆವಾಸ ನಾಶ, ಸಂಖ್ಯಾವೃದ್ಧಿ, ನೈಸರ್ಗಿಕ ನಿಯಂತ್ರಣದ ಏರುಪೇರು, ಆಹಾರ ಕೊರತೆ... ಕಾರಣಗಳು ಅನೇಕ, ಪರಿಣಾಮ ಒಂದೇ. ಇಷ್ಟಾಗಿ ನಮ್ಮ ತೋಟದಲ್ಲಿ ನಿಶಾಚರಿ ಕಣೆಹಂದಿ ಇನ್ನೂ ಕಣ್ಣಿಗೆ ಬಿದ್ದಿಲ್ಲ. ಆದರೆ, ಅಕ್ಕಪಕ್ಕದಲ್ಲಿ ಕಾಯಿಸಿಪ್ಪೆ ನಾರಿನ ಉದ್ಯಮ ವೃದ್ಧಿಸುತ್ತಿದೆ.
ಇದನ್ನೂ ಓದಿ: Basavaraj Shivappa Giraganvi column: ಅಮೆರಿಕ ವಿಶ್ವಕ್ಕೆ ದೊಡ್ಡಣ್ಣ, ಆದರೆ ನಿಸರ್ಗಕ್ಕೆ ?