Prakash Shesharaghavachar Column: ಠುಸ್ ಎಂದಿತು ರಾಹುಲ್ ಸಿಡಿಸಿದ ಆಟಂಬಾಂಬ್..!
ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಕಡೆ ನೋಂದಾಯಿಸಿರುವುದು ಹೊಸದಲ್ಲ. ವರ್ಗಾವಣೆಯ ಕೆಲಸದಲ್ಲಿರುವವರು, ಮನೆ ಅಥವಾ ಊರು ಬದಲಾಯಿಸಿದವರು, ತಾವು ತೆರಳಿದ ಸ್ಥಳದ ವ್ಯಾಪ್ತಿಯಲ್ಲಿ ಮತ್ತೆ ನೋಂದಣಿ ಮಾಡಿಸುವುದರಿಂದ ಅವರ ಹೆಸರು ಒಂದಕ್ಕಿಂತ ಹೆಚ್ಚು ಸ್ಥಳದಲ್ಲಿ ನೋಂದಣಿ ಯಾಗಿರುತ್ತದೆ. ಈ ರೀತಿ ವಿಳಾಸ ಬದಲಾಯಿಸಿದವರು ಫಾರಂ 7ನ್ನು ಸಲ್ಲಿಸಿ, ತಮ್ಮ ಹೆಸರನ್ನು ಕೈ ಬಿಡಲು ಕೋರಬೇಕು.


ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ಚುನಾವಣಾ ಆಯೋಗದ ವಿರುದ್ಧ ನಾನು ಹೊರಹಾಕುವ ಮಾಹಿತಿಯು ಅಣುಬಾಂಬ್ ಸ್ಫೋಟ ದಂತೆ ಇರಲಿದೆ" ಎಂಬುದಾಗಿ ಸಂಸತ್ತಿನ ಆವರಣದಲ್ಲಿ ಗರ್ಜಿಸಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ತಮ್ಮ ಆ ಸ್ಫೋಟಕ ಹೇಳಿಕೆಯಿಂದ ತಲ್ಲಣವನ್ನೇ ಸೃಷ್ಟಿಸಿ ಬಿಟ್ಟರು.
“ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಭಾಗವಾದ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅವ್ಯವಹಾರ ನಡೆದಿದೆ. ಕಳೆದ 6 ತಿಂಗಳಿಂದ ಮತದಾರರ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅನೇಕ ಆಘಾತಕಾರಿ ವಿಷಯಗಳು ಬಯಲಾಗಿವೆ. ಇದನ್ನು ಸಾಕ್ಷಿ ಸಮೇತ ಸಾಬೀತುಪಡಿಸುವೆ" ಎಂದು ಅವರು ಘೋಷಿಸಿದ್ದರ ಜತೆಗೆ, “ಚುನಾವಣಾ ಆಯೋಗ ವು ಬಿಜೆಪಿಯ ಕೈಗೊಂಬೆಯಾಗಿ ವರ್ತಿಸಿ ಮತದಾರರ ಪಟ್ಟಿಯಲ್ಲಿ ಭಾರಿ ವಂಚನೆ ನಡೆಸಿದೆ" ಎನ್ನುವ ಮೂಲಕ ಈ ಸಂವಿಧಾನಬದ್ಧ ಸಂಸ್ಥೆಯನ್ನು ‘ವಂಚಕ’ ಎಂದು ಹೀಗಳೆದರು.
ದೆಹಲಿಯಲ್ಲಿ ಆಗಸ್ಟ್ 7ರಂದು ಅವರು ನಡೆಸಿದ ಬಹುನಿರೀಕ್ಷಿತ ಪತ್ರಿಕಾಗೋಷ್ಠಿಯಲ್ಲಿ, “ಮಹದೇವ ಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸುಮಾರು ಒಂದು ಲಕ್ಷದ ಇನ್ನೂರೈವತ್ತು ನಕಲಿ ಮತದಾರರನ್ನು ಸೇರ್ಪಡೆ ಮಾಡಲಾಗಿದ್ದು, ಇದರಿಂದಾಗಿ ಕಾಂಗ್ರೆಸ್ ಅಭ್ಯರ್ಥಿ 35 ಸಾವಿರ ಮತಗಳ ಅಂತರದಿಂದ ಸೋಲುವಂತಾಯಿತು" ಎಂದರು.
ರಾಹುಲರು ಪಟ್ಟಿ ಮಾಡಿದ ಐದು ಬಗೆಯ ಲೋಪಗಳು ಹೀಗಿವೆ:
೧. ನಕಲಿ ಮತದಾರರು: 11,965
೨. ನಕಲಿ ಮತ್ತು ಅಮಾನ್ಯ ವಿಳಾಸಗಳು: 40009
೩. ಒಂದೇ ವಿಳಾಸದಲ್ಲಿ ಹೆಚ್ಚು ಮತಗಳು: 10,452
೪. ಅಮಾನ್ಯ ಫೋಟೋಗಳು: 4132
೫. ಫಾರಂ ೬ರ ದುರುಪಯೋಗ: 33692
ರಾಹುಲ್ ಗಾಂಧಿಯವರು ಮಹದೇವಪುರ ಮೀಸಲು ಕ್ಷೇತ್ರವನ್ನು ತಮ್ಮ ಪ್ರಯೋಗಕ್ಕೆ ಆಯ್ಕೆ ಮಾಡಿಕೊಂಡಿದ್ದು ಆಚ್ಚರಿದಾಯಕವಾಗಿದೆ. ಈ ಕ್ಷೇತ್ರದಲ್ಲಿ 3 ಬಾರಿ ಶಾಸಕರಾಗಿದ್ದ ಅರವಿಂದ ಲಿಂಬಾವಳಿಯವರು 4ನೇ ಬಾರಿಗೆ ತಮ್ಮ ಪತ್ನಿಯನ್ನು ಗೆಲ್ಲಿಸಿಕೊಂಡಿದ್ದಾರೆ.
ಕ್ಷೇತ್ರದ ಮೇಲೆ ಅವರಿಗೆ ಅಂಥದೊಂದು ಹಿಡಿತವಿರುವಾಗ ಆರೋಪ ಮಾಡುವವರು ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಾಗಿತ್ತು. ಆದರೆ ಅವರು ದೆಹಲಿಯಲ್ಲಿ ಕುಳಿತು ತಮ್ಮ ಸಂಶೋಧನಾ ತಂಡಕ್ಕೆ ಮತದಾರರ ಪಟ್ಟಿಯನ್ನು ನೀಡಿ, ಅದರಲ್ಲಿರುವ ತಪ್ಪುಗಳನ್ನು ಪತ್ತೆ ಹಚ್ಚುವಂತೆ ತಾಕೀತು ಮಾಡಿದ್ದಾರೆ.
ತಲಸ್ಪರ್ಶಿ ವಾಸ್ತವಿಕತೆಯ ಅರಿವಿಲ್ಲದೆ ಅಥವಾ ತಪ್ಪು ಮಾಹಿತಿಯನ್ನು ನೀಡಿ ಜನರನ್ನು ದಾರಿ ತಪ್ಪಿಸುವ ಸಲುವಾಗಿಯೇ, “ಮತದಾರರ ಪಟ್ಟಿಯಲ್ಲಿ ನಕಲಿ ಮತದಾರರನ್ನು ಸೇರಿಸಿ ಬಿಜೆಪಿಯು ಚುನಾವಣೆಯನ್ನು ಗೆಲ್ಲುತ್ತಿದೆ" ಎಂದು ಅಪಪ್ರಚಾರ ಕೈಗೊಳ್ಳುವ ತಂತ್ರಗಾರಿಕೆಯನ್ನು ರಾಹುಲ್ ರವರು ಅನುಸರಿಸುತ್ತಿದ್ದಾರೆ. ಮಹದೇವಪುರ ಕ್ಷೇತ್ರದಲ್ಲಿ 11,965 ನಕಲಿ ಮತದಾರರಿದ್ದಾರೆ, ಒಂದಕ್ಕಿಂತ ಹೆಚ್ಚು ಕಡೆ ಮತದಾರರಾಗಿ ನೋಂದಣಿ ಮಾಡಿಸಿದ್ದಾರೆ ಎಂಬುದು ಇವರ ಮೊದಲ ಆರೋಪ. ಅವರೆಲ್ಲರೂ ಬಿಜೆಪಿಗೇ ವೋಟು ಮಾಡಿದ್ದಾರೆಂದು ರಾಹುಲ್ ಪತ್ತೆ ಹಚ್ಚಿದ್ದಾರೆಂದರೆ ಅದೆಂಥಾ ಪವಾಡಸದೃಶ ಸಂಶೋಧನೆ!
ವಾಸ್ತವವೇನೆಂದರೆ, ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಕಡೆ ನೋಂದಾಯಿಸಿರುವುದು ಹೊಸ ದಲ್ಲ. ವರ್ಗಾವಣೆಯ ಕೆಲಸದಲ್ಲಿರುವವರು, ಮನೆ ಅಥವಾ ಊರು ಬದಲಾಯಿಸಿದವರು, ತಾವು ತೆರಳಿದ ಸ್ಥಳದ ವ್ಯಾಪ್ತಿಯಲ್ಲಿ ಮತ್ತೆ ನೋಂದಣಿ ಮಾಡಿಸುವುದರಿಂದ ಅವರ ಹೆಸರು ಒಂದಕ್ಕಿಂತ ಹೆಚ್ಚು ಸ್ಥಳದಲ್ಲಿ ನೋಂದಣಿಯಾಗಿರುತ್ತದೆ. ಈ ರೀತಿ ವಿಳಾಸ ಬದಲಾಯಿಸಿದವರು ಫಾರಂ 7ನ್ನು ಸಲ್ಲಿಸಿ, ತಮ್ಮ ಹೆಸರನ್ನು ಕೈಬಿಡಲು ಕೋರಬೇಕು.
ಆದರೆ ಬಹುತೇಕರು ಅರ್ಜಿ ಸಲ್ಲಿಸುವ ಗೋಜಿಗೇ ಹೋಗುವುದಿಲ್ಲ. ಹೀಗಾಗಿ ಅವರ ಹೆಸರು ಒಂದಕ್ಕಿಂತ ಹೆಚ್ಚು ಸ್ಥಳದಲ್ಲಿ ನೋಂದಣಿಯಾಗಿರುತ್ತದೆ. ಅದನ್ನು ರುಜುವಾತುಪಡಿಸಿದಾಗ ಅವರ ಮೇಲೆ ಚುನಾವಣಾ ಆಯೋಗವು ಕ್ರಮವನ್ನು ಜರುಗಿಸಬಹುದು. ಆದರೆ ರಾಹುಲ್ ತಮ್ಮ ಆರೋಪ ವನ್ನು ದೃಢಪಡಿಸಲು ಈತನಕ ಯಾವ ಸಾಕ್ಷ್ಯವನ್ನೂ ನೀಡಿಲ್ಲ.
ನಕಲಿ ಮತ್ತು ಅಮಾನ್ಯ ವಿಳಾಸಗಳ ಬಾಬತ್ತಿನಲ್ಲಿ ಅವರು 40 ಸಾವಿರ ಮತಗಳು ಎಂದು ಲೆಕ್ಕ ಹಾಕಿದ್ದಾರೆ. ಮತದಾರರ ಪಟ್ಟಿಯಲ್ಲಿ ಪುಟಗಟ್ಟಳೆಯಾಗಿ ಮನೆಗಳ ಸಂಖ್ಯೆಯನ್ನು ‘ಸೊನ್ನೆ’ ಎಂದು ತಪ್ಪಾಗಿ ನಮೂದಿಸಲಾಗಿದೆ ಎಂಬುದು ರಾಹುಲರ ಎರಡನೆಯ ಆರೋಪ. ಇದು ಮಹದೇವಪುರ ಕ್ಷೇತ್ರಕ್ಕಷ್ಟೇ ಸೀಮಿತವಾಗಿಲ್ಲ; ಮಸ್ಕಿ, ಸೊಂಡೂರು, ಸಿದ್ದರಾಮಯ್ಯನವರ ವರುಣಾ, ಡಿ.ಕೆ. ಶಿವಕುಮಾರ್ರವರ ಕನಕಪುರ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಈ ಪರಿಯನ್ನು ಕಾಣಬಹುದು.
ಇದರರ್ಥ ಈ ವಿಳಾಸಗಳು ನಕಲಿ ಅಂತಲ್ಲ; ಅಲ್ಲಿ ಮನೆಗಳಿವೆ ಮತ್ತು ಮತದಾರರ ಪಟ್ಟಿಯಲ್ಲಿರು ವವರು ಆ ಮನೆಗಳಲ್ಲಿ ವಾಸಮಾಡುತ್ತಿದ್ದಾರೆ ಎಂದರ್ಥ. ರಾಹುಲ್ ಗಾಂಧಿಯವರು ಇಂಥ ವಿಳಾಸದ ಮನೆಗಳ ತಪಾಸಣೆ ಮಾಡಿಸಿ, ಆ ವಿಳಾಸದಲ್ಲಿ ಮತದಾರರು ಇದ್ದಾರಾ ಅಥವಾ ಖಾಲಿ ನಿವೇಶನವಾ? ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿತ್ತು. ಆದರೆ, ಅವರು ವಾಸ್ತವಿಕತೆ ಯನ್ನು ಅರಿಯದೆ ‘ಸೊನ್ನೆ’ ಎಂದು ನಮೂದಿಸಿರುವ ಮನೆಗಳನ್ನು ‘ನಕಲಿ ಮತದಾರರು’ ಎಂದು ಹಣೆ ಪಟ್ಟಿ ಕಟ್ಟಿಬಿಟ್ಟರು!
ಇನ್ನು, ಒಂದೇ ವಿಳಾಸದಲ್ಲಿ 10,452ಕ್ಕೂ ಹೆಚ್ಚು ಮತಗಳಿವೆ ಎಂಬ ಆರೋಪವು, ಮತ್ತದೇ ತಲ ಸ್ಪರ್ಶಿ ಮಾಹಿತಿ ಪಡೆಯದೆ ಮಾಡಿರುವಂಥದ್ದು. ಮುನಿರೆಡ್ಡಿ ಗಾರ್ಡನ್ ‘ಮನೆ ಸಂಖ್ಯೆ 35’ ಇಂದು ದೇಶದಲ್ಲೆಲ್ಲಾ ಚಿರಪರಿಚಿತವಾಗಿದೆ. ಈ ಮನೆಯ ಹೆಸರಲ್ಲಿ 80 ಮತಗಳು ನೋಂದಣಿ ಯಾಗಿವೆ ಎಂಬ ಗಂಭೀರ ಆರೋಪ ರಾಹುಲರದ್ದು. ಆದರೆ ಇದರ ಹಿನ್ನೆಲೆಯನ್ನು ಒಮ್ಮೆ ತನಿಖೆ ಮಾಡಿದ್ದಿ ದ್ದರೆ ಅವರಿಗೆ ಸತ್ಯ ಗೊತ್ತಾಗುತ್ತಿತ್ತು.
ಆ ಮನೆಯಲ್ಲಿ ಕಳೆದ 10 ವರ್ಷದಿಂದ ಬಾಡಿಗೆಗೆ ಬಂದವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಂಡಿರುತ್ತಾರೆ; ಅವರು ಮನೆ ಬಿಟ್ಟು ಬೇರೆಡೆಗೆ ಹೋಗಿ ಹೊಸದಾಗಿ ಬಾಡಿಗೆಗೆ ಬಂದವರು ಅದೇ ವಿಳಾಸವನ್ನು ಕೊಟ್ಟು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸುತ್ತಿದ್ದರು ಮತ್ತು ಮನೆಬಿಟ್ಟು ಹೋದವರು ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆಸಲು ಅರ್ಜಿಯನ್ನು ಕೊಡುತ್ತಿರಲಿಲ್ಲ.
ಹೀಗಾಗಿ ಒಂದೇ ವಿಳಾಸದಲ್ಲಿ 80 ಮತದಾರರ ನೋಂದಣಿಯಾಗಿದೆ. ವಾಸ್ತವವಾಗಿ ಆ ವಿಳಾಸದಲ್ಲಿ ಸದ್ಯ ವಾಸವಿರುವ 6 ಜನ ಮಾತ್ರವೇ ಮತದಾನ ಮಾಡಿರುವುದು. ಗಾಂಧಿನಗರ, ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಇಂಥ ಪ್ರಕರಣಗಳು ದೊರೆಯುತ್ತವೆ. ಪಾಲಿಕೆಯ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು ಸರಿಯಾಗಿ ಕೆಲಸ ಮಾಡಿದ್ದರೆ, ವಿಳಾಸದಲ್ಲಿ ವಾಸ ವಿಲ್ಲದ ಮತದಾರರು ಪಟ್ಟಿಯಿಂದ ಎಂದೋ ಹೊರಗಿರುತ್ತಿದ್ದರು.
“ನನ್ನ ಮತ ಈಗಲೂ ಮೂರು ಕಡೆ ಇದೆ, ಕಾರಣ ವರ್ಗಾವಣೆಯಾಗಿ ಹೋದ ಊರಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದೆ. ಫಾರಂ 7 ಸಲ್ಲಿಸಿ ನನ್ನ ಹೆಸರನ್ನು ತೆಗೆಸಲು ಕೋರುವ ತಾಪತ್ರಯಕ್ಕೆ ಹೋಗಿಲ್ಲ" ಎನ್ನುತ್ತಾರೆ ನನ್ನ ಸ್ನೇಹಿತರೊಬ್ಬರು. ಮತದಾರರ ಪಟ್ಟಿಯಿಂದ ಹೆಸರು ತೆಗೆಯುವ ಪ್ರಕ್ರಿಯೆ ಸರಳೀಕರಣಗೊಂಡಿಲ್ಲ.
ಹೀಗಾಗಿ ಅದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇದಕ್ಕೆ ಪರಿಹಾರವೆಂದರೆ, ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಣೆ ಮಾಡುವುದು. ಆಗ ಹೆಚ್ಚುವರಿ ಯಾಗಿರುವ ಸಾವಿರಾರು ಮತದಾರರು ಪಟ್ಟಿಯಿಂದ ಹೊರ ಹೋಗುತ್ತಾರೆ. ಮಹದೇವಪುರದ ಐಟಿ ಕ್ಷೇತ್ರದ ಮತದಾರರು ಒಂದಕ್ಕಿಂತ ಹೆಚ್ಚು ಕಡೆ ಮತ ಚಲಾಯಿಸಿದ್ದಾರೆ ಎಂದರೆ ಅದು ನಂಬ ಲಾಗದ ವಿಷಯ.
ಯಾರೂ ತಮ್ಮ ಭವಿಷ್ಯವನ್ನು ಪಣಕ್ಕಿಟ್ಟು ಹೀಗೆ ನಕಲಿ ಮತವನ್ನು ಚಲಾಯಿಸುವುದಿಲ್ಲ. ಅವರು ಒಮ್ಮೆ ಬಂದು ಮತ ಚಲಾಯಿಸಿದರೆ ಸಾಕಾಗಿದೆ; ಹೀಗಿರುವಾಗ ಇನ್ನೂ 2-3 ಬಾರಿ ವೋಟು ಹಾಕಿ ಸಿಕ್ಕಿಬಿದ್ದು ಜೈಲಿಗೆ ಹೋಗುವಷ್ಟು ಮೂರ್ಖರಲ್ಲ ಅವರು. ಇನ್ನು, ವಲಸೆ ಬಂದ ಕಾರ್ಮಿಕರು ತಮ್ಮ ಜೀವನ ನಿರ್ವಹಣೆಯಾದರೆ ಸಾಕಪ್ಪ ಅಂತ ಇರುತ್ತಾರೆ, ಅವರು ಯಾರನ್ನೋ ಗೆಲ್ಲಿಸಲು ತಮ್ಮ ಭವಿಷ್ಯವನ್ನು ಅಪಾಯಕ್ಕೆ ತಳ್ಳಿಕೊಳ್ಳುತ್ತಾರೆ ಎಂದರೆ ಅದನ್ನು ರಾಹುಲ್ ಗಾಂಧಿ ಯವರಷ್ಟೇ ನಂಬಬೇಕು.
ಎರಡೆರಡು ಕಡೆ ನೋಂದಣಿಯಾಗಿರುವುದು, ಮನೆಯ ವಿಳಾಸವನ್ನು ‘ಸೊನ್ನೆ’ ಎಂದು ತಪ್ಪಾಗಿ ನಮೂದಿಸಿರುವುದು ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಅಧಿಕಾರಿಗಳ ಕರ್ತವ್ಯಲೋಪ ದಿಂದ ಆಗಿರುವಂಥದ್ದೇ ವಿನಾ, ಅದರಲ್ಲಿ ಯಾವುದೇ ರಾಜಕೀಯ ಪಕ್ಷದ ಕೈವಾಡವಿರಲು ಸಾಧ್ಯವೇ ಇಲ್ಲ. ಆದಾಗ್ಯೂ, ಬಿಜೆಪಿಯು ಚುನಾವಣೆಯನ್ನು ವಂಚನೆಯಿಂದ ಗೆಲ್ಲುತ್ತಿದೆ ಎಂದು ಜನರನ್ನು ನಂಬಿಸುವ ಸಲುವಾಗಿ ತಪ್ಪು ಮಾಹಿತಿಯನ್ನು ನೀಡಲಾಗುತ್ತಿದೆ.
‘ಶಗುನ್ ರಾಣಿ ಎಂಬ 70 ವರ್ಷದ ಹಿರಿಯ ನಾಗರಿಕರ ಹೆಸರು 3 ಕಡೆ ಇದೆ ಮತ್ತು ಅವರು 2 ಕಡೆ ವೋಟು ಮಾಡಿದ್ದಾರೆ’ ಎಂದು ಹೇಳಿ ಫೋಟೋಶಾಪ್ ಮಾಡಲಾದ ಚಿತ್ರವನ್ನು ಬಳಸಿ ರಾಹುಲ್ ಆಕೆಗೆ ಅಪಮಾನ ಮಾಡಿದ್ದಾರೆ, ಹಲವು ಮತದಾರರ ವಿವರವನ್ನು ಹೇಳಿ ಆ ಅಮಾಯಕರಿಗೆ ತೀವ್ರ ಮುಜುಗರ ಉಂಟು ಮಾಡಿದ್ದಾರೆ.
ಇವರ ಪೈಕಿ ಯಾರಾದರೂ ಒಂದೊಮ್ಮೆ ಮನನೊಂದು ನ್ಯಾಯಾಲಯದ ಮೆಟ್ಟಿಲೇರಿದರೆ ರಾಹುಲ್ ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತ. ಇನ್ನು, ಮತದಾರರ ಪಟ್ಟಿಯಲ್ಲಿ 4132 ಜನರ -ಟೋ ಚಿಕ್ಕದಿರುವುದನ್ನು ಕಂಡು ರಾಹುಲರು ‘ಅಮಾನ್ಯ ಫೋಟೋ’ ಎಂದು ನಿರ್ಧರಿಸಿ ಬಿಟ್ಟಿದ್ದಾರೆ; ಮತದಾನದ ದಿನದಂದು ಡ್ರೈವಿಂಗ್ ಲೈಸೆನ್ಸ್ ಅಥವಾ ಆಧಾರ್ ಕಾರ್ಡ್ ಮುಂತಾದ, ಚುನಾವಣಾ ಆಯೋಗವು ತಿಳಿಸಿರುವ 32 ಬಗೆಯ ಗುರುತಿನ ಚೀಟಿಗಳ ಪೈಕಿ ಒಂದನ್ನು ತೋರಿಸಬಹುದು.
ಆದ್ದರಿಂದ ಈ ಆರೋಪವೂ ನಿರಾಧಾರವಾಗಿದೆ. 2014, 2019 ಮತ್ತು 2024ರ ವರ್ಷಗಳಲ್ಲಿ ಲೋಕಸಭಾ ಚುನಾವಣೆಗಳು ನಡೆದಾಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿತ್ತು. ರಾಜ್ಯ ಸರಕಾರದ ಸಿಬ್ಬಂದಿಗಳೇ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವವರು ಎಂಬ ಪ್ರಾಥಮಿಕ ಮಾಹಿತಿಯು ರಾಹುಲ್ರವರಿಗೆ ತಿಳಿದಿಲ್ಲವಾ? ಮತದಾರರ ಪಟ್ಟಿಯಲ್ಲಿ ದೋಷವಿದ್ದರೆ, ಆ ಕಾಲ ಘಟ್ಟದ ರಾಜ್ಯ ಸರಕಾರವು ಅದರ ಹೊಣೆಯನ್ನು ಹೊರಬೇಕು; ಆದರೆ ಇದರ ಕುರಿತು ಸತ್ಯವನ್ನು ನುಡಿದ ಸಚಿವ ರಾಜಣ್ಣನವರನ್ನು ಸಂಪುಟದಿಂದ ವಜಾ ಮಾಡಲಾಗಿದೆ.
ಚುನಾವಣಾ ಆಯೋಗದ ಮೇಲೆ ಜನರಿಟ್ಟಿರುವ ವಿಶ್ವಾಸವನ್ನು ಹಾಳು ಮಾಡುವ ಪ್ರಯತ್ನವು ನಿರಂತರವಾಗಿ ನಡೆಯುತ್ತಿದೆ. ಚುನಾವಣೆಗಳಲ್ಲಿ ಬಿಜೆಪಿಯು ಮತ ವಂಚನೆಯ ಮೂಲಕ ಗೆಲ್ಲು ತ್ತಿದೆ ಎಂದು ನಂಬಿಸಲು ಕಾಂಗ್ರೆಸ್ ಪಕ್ಷವು ಶಕ್ತಿಮೀರಿ ಪ್ರಯತ್ನಿಸುತ್ತಿರುವುದು ಸ್ಪಷ್ಟ. ಅಂತೆಯೇ, ತಮ್ಮ ಉದ್ದೇಶ ಸಾಧನೆಗೆಂದು ಸಂವಿಧಾನಬದ್ಧ ಸಂಸ್ಥೆಯೊಂದನ್ನು ಬೆದರಿಸುವ ಅತಿರೇಕದ ವರ್ತನೆ ಯನ್ನು ರಾಹುಲ್ ಗಾಂಧಿಯವರು ತೋರಿ ತಮ್ಮ ಹತಾಶೆಯನ್ನು ಬಯಲು ಮಾಡಿ ಕೊಂಡಿದ್ದಾರೆ, ಅಷ್ಟೇ!
(ಲೇಖಕರು ಬಿಜೆಪಿಯ ವಕ್ತಾರರು)