ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Vishwa Column: ನಗರ ನಕ್ಸಲರ ಟಾರ್ಗೆಟ್:‌ ಧರ್ಮಸ್ಥಳ

ಧರ್ಮಸ್ಥಳದ ಮಂಜುನಾಥನೆಂದರೆ ಅಸಾಮಾನ್ಯ ಶಕ್ತಿ. ವರ್ಷಕ್ಕೆ ಒಮ್ಮೆಯಾದರೂ ಸ್ವಾಮಿಯ ದರ್ಶನ ಮಾಡಿದರೆ ಕಷ್ಟಗಳು ಹತ್ತಿರವೂ ಸುಳಿಯುವುದಿಲ್ಲ. ದಕ್ಷಿಣ ಕನ್ನಡದಲ್ಲಿ ಹಿಂದೂಗಳ ಬೃಹತ್ ಧಾರ್ಮಿಕ ಶಕ್ತಿಕೇಂದ್ರ ಧರ್ಮಸ್ಥಳ. ಹಲವು ದಶಕಗಳಿಂದ ಕರ್ನಾಟಕದ ವಿವಿಧ ಭಾಗಗಳಿಂದ ಭಕ್ತರು ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

Mohan Vishwa Column: ನಗರ ನಕ್ಸಲರ ಟಾರ್ಗೆಟ್:‌ ಧರ್ಮಸ್ಥಳ

ಮೋಹನ್‌ ವಿಶ್ವ ಮೋಹನ್‌ ವಿಶ್ವ Aug 16, 2025 7:50 AM

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಹಿಂದುತ್ವದ ಭದ್ರಕೋಟೆ. ಈ ಕೋಟೆಯನ್ನು ಭೇದಿಸ ಬೇಕಾದರೆ ಹಿಂದೂ ಸಮಾಜದಲ್ಲಿ ಒಡಕು ಮೂಡಿಸಬೇಕೆಂಬ ಸ್ಪಷ್ಟತೆ ನಗರ ನಕ್ಸಲರಿಗಿದೆ. ಧರ್ಮಸ್ಥಳದ ಎಸ್‌ಐಟಿ ತನಿಖೆಯ ನೆಪವನ್ನು ಮುಂದಿಟ್ಟುಕೊಂಡು, ಹಿಂದೂಗಳ ಒಗ್ಗಟ್ಟನ್ನು ಒಡೆಯುವ ಹುನ್ನಾರ ನಡೆಯುತ್ತಿದೆ. ತನಿಖೆಯ ವೇಳೆ ಸಾಮಾಜಿಕ ಜಾಲತಾಣ ಗಳಲ್ಲಿ ಧರ್ಮಸ್ಥಳದ ಬಗ್ಗೆ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದುದು ಇದಕ್ಕೆ ಸಾಕ್ಷಿ.

ನಮ್ಮ ಅಜ್ಜ, ಮುತ್ತಜ್ಜನ ಕಾಲದಿಂದಲೂ ಬಹುತೇಕ ಹಿಂದೂಗಳ ಮನೆಗಳಲ್ಲಿ ಕಷ್ಟ ಬಂದ ಕೂಡಲೇ ಧರ್ಮಸ್ಥಳದ ಮಂಜುನಾಥನಿಗೆ ಹರಕೆ ಹೊತ್ತು ಕುಟುಂಬ ಸಮೇತರಾಗಿ ಮಂಜುನಾಥನ ದರ್ಶನ ಮಾಡಿ ಬರುವುದು ರೂಢಿಯಲ್ಲಿದೆ. ಇಂದಿಗೂ ಮನಸ್ಸಿಗೆ ಬಂದ ಕೂಡಲೇ ರಾತ್ರೋರಾತ್ರಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಮಾಡಿಕೊಂಡು ಬರುವ ಸಾವಿರಾರು ಭಕ್ತರಿ ದ್ದಾರೆ.

ಮನೆಯಲ್ಲಿ ಅಪ್ಪಿತಪ್ಪಿಯೂ ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆ ಮಾಡಿ ಸುಳ್ಳು ಹೇಳುವವ ರಿಲ್ಲ. ಅನೇಕ ಬಾರಿ ಸಂದಿಗ್ಧ ಪರಿಸ್ಥಿತಿಯಲ್ಲಿ ‘ಮಂಜುನಾಥನ ಮೇಲೆ ಆಣೆ ಮಾಡಿ ಹೇಳು’ ಎಂದು ಹೇಳುವುದು ಅನೇಕ ಹಿಂದೂಗಳ ದೃಢ ನಂಬಿಕೆ. ದೊಡ್ಡ ದೊಡ್ಡ ರಾಜಕಾರಣಿಗಳು ಅನೇಕ ಸಂದರ್ಭಗಳಲ್ಲಿ ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆ ಮಾಡಲು ಹೇಳಿದ ಉದಾಹರಣೆ ಗಳಿವೆ.

ಧರ್ಮಸ್ಥಳದ ಮಂಜುನಾಥನೆಂದರೆ ಅಸಾಮಾನ್ಯ ಶಕ್ತಿ. ವರ್ಷಕ್ಕೆ ಒಮ್ಮೆಯಾದರೂ ಸ್ವಾಮಿಯ ದರ್ಶನ ಮಾಡಿದರೆ ಕಷ್ಟಗಳು ಹತ್ತಿರವೂ ಸುಳಿಯುವುದಿಲ್ಲ. ದಕ್ಷಿಣ ಕನ್ನಡದಲ್ಲಿ ಹಿಂದೂಗಳ ಬೃಹತ್ ಧಾರ್ಮಿಕ ಶಕ್ತಿಕೇಂದ್ರ ಧರ್ಮಸ್ಥಳ. ಹಲವು ದಶಕಗಳಿಂದ ಕರ್ನಾಟಕದ ವಿವಿಧ ಭಾಗಗಳಿಂದ ಭಕ್ತರು ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

ಇದನ್ನೂ ಓದಿ: Mohan Vishwa Column: ಸಾವರ್ಕರ್‌ ಮತ್ತು ಬೋಸರ ಭಾರತೀಯ ಸೇನೆ

ಹಲವು ದಶಕಗಳಿಂದ ಒಂದು ಮಾತಿದೆ- ‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ತೀರ್ಥ ಯಾತ್ರೆಗೆ ಹೊರಟರೆ, ಹೋಟೆಲುಗಳಲ್ಲಿ ಊಟ ಮಾಡಬೇಕಾದ ಪ್ರಸಂಗವೇ ಬರುವುದಿಲ್ಲ’ ಅಂತ. ಇದು ನಿಜ. ಧರ್ಮಸ್ಥಳ, ಉಡುಪಿ, ಕುಕ್ಕೆಸುಬ್ರಹ್ಮಣ್ಯ, ಹೊರನಾಡು, ಆನೆಗುಡ್ಡ, ಕೊಲ್ಲೂರು, ಕಮಲಶಿಲೆ ಹೀಗೆ ಅನೇಕ ದೇವಸ್ಥಾನಗಳಲ್ಲಿ, ಬರುವ ಭಕ್ತಾದಿಗಳಿಗೆ ವರ್ಷದ 365 ದಿವಸ ಅನ್ನ ಸಂತರ್ಪಣೆ ನಡೆಯುತ್ತದೆ.

ಹಲವು ದಶಕಗಳಿಂದ ಧರ್ಮಸ್ಥಳಕ್ಕೆ ಭೇಟಿ ನೀಡುತ್ತ ಬಂದಿರುವ ಲಕ್ಷಾಂತರ ಭಕ್ತರಿಗೆ, ದರ್ಶನದ ನಂತರ ಉಚಿತವಾಗಿ ಅನ್ನ ಸಂತರ್ಪಣೆ ನಡೆಯುತ್ತಾ ಬಂದಿದೆ. ಧರ್ಮಸ್ಥಳಕ್ಕೆ ಹೋದವರು ಊಟ ವಿಲ್ಲದೆ ಬಂದಿರುವ ಉದಾಹರಣೆಯಿಲ್ಲ. ಪ್ರತಿನಿತ್ಯ ಕಡಿಮೆಯೆಂದರೂ 25000 ಜನರಿಗೆ ಅನ್ನ ಸಂತರ್ಪಣೆ ನಡೆಯುತ್ತದೆ.

ಸಾಲು ಸಾಲು ರಜೆಗಳ ಸಂದರ್ಭದಲ್ಲಿ ಊಟ ಮಾಡಿದವರ ಸಂಖ್ಯೆ ದಿನವೊಂದಕ್ಕೆ ಲಕ್ಷ ದಾಟಿರುತ್ತದೆ. ಅನ್ನದಾನ ಶ್ರೇಷ್ಠದಾನವೆಂದು ಹೇಳಲಾಗುತ್ತದೆ. ಹಸಿದು ಬಂದ ಭಕ್ತರಿಗೆ ಹೊಟ್ಟೆ ತುಂಬಾ ಅನ್ನ ನೀಡುವ ಹಿಂದೂಗಳ ಧಾರ್ಮಿಕ ಶಕ್ತಿಕೇಂದ್ರವೇ ಧರ್ಮಸ್ಥಳ. ಆದರೆ ಕೆಲದಿನ ಗಳಿಂದ, ತನಿಖೆ ನಡೆಸುವ ನೆಪದಲ್ಲಿ ಕೋಟ್ಯಂತರ ಭಕ್ತರು ನಂಬಿರುವ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಕಳಂಕ ತರುವ ಷಡ್ಯಂತ್ರ ದೊಡ್ಡಮಟ್ಟದಲ್ಲಿ ನಗರ ನಕ್ಸಲರ ಮೂಲಕ ನಡೆಯುತ್ತಿದೆ.

ಧರ್ಮಸ್ಥಳದಲ್ಲಿ ರಾಜ್ಯ ಸರಕಾರ ನಡೆಸುತ್ತಿರುವ ಎಸ್‌ಐಟಿ ತನಿಖೆಯ ಬಗ್ಗೆ ನಮಗೆ ತಕರಾರಿಲ್ಲ. ಸಮಾಜದಲ್ಲಿ ನೊಂದವರಿಗೆ ನ್ಯಾಯ ಸಿಗಲೇಬೇಕು. ಆದರೆ ತನಿಖೆಯ ನೆಪದಲ್ಲಿ ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಕಾರ್ಯ ಸತತವಾಗಿ ಕೆಲದಿನಗಳಿಂದ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಲಂಗು ಲಗಾಮಿಲ್ಲದೆ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವ ಕೆಲಸ ಭರದಿಂದ ಸಾಗಿದೆ.

ತಂತ್ರಜ್ಞಾನವನ್ನು ಬಳಸಿ ಕೃತಕ ಬುದ್ಧಿಮತ್ತೆಯ (ಎಐ) ಮೂಲಕ ಸಿನಿಮಾವನ್ನು ಮೀರಿಸುವ ರೀತಿಯಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಯಿತು. ಎಸ್‌ಐಟಿ ತನಿಖೆ ಪ್ರಾರಂಭವಾದ ದಿನದಿಂದಲೂ ಪ್ರತಿನಿತ್ಯ ಮಾಧ್ಯಮಗಳಲ್ಲಿ ಗುಂಡಿಗಳದ್ದೇ ಸುದ್ದಿ. ಮೊದಲ ಗುಂಡಿಯಿಂದ ಹದಿಮೂರನೇ ಗುಂಡಿಯವರೆಗೂ ಪ್ರಸಾರವಾದ ಸುದ್ದಿಯ ಹಿಂದೆ ಧರ್ಮಸ್ಥಳದ ಹೆಸರು ದೊಡ್ಡದಾಗಿ ಟಿವಿ ಪರದೆಯಲ್ಲಿ ರಾರಾಜಿಸುತ್ತಿತ್ತು.

ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಗಳೆಲ್ಲವೂ ಧರ್ಮಸ್ಥಳದ ಹೆಸರಿನಲ್ಲಿದ್ದಾಗ, ‘ಧರ್ಮಸ್ಥಳ ವನ್ನು ಟಾರ್ಗೆಟ್ ಮಾಡುತ್ತಿಲ್ಲ’ ಎಂಬ ಸಬೂಬನ್ನು ಒಪ್ಪಲಾಗದು. ಹಲವು ದಶಕಗಳಿಂದ, ಕುಡಿತದ ಚಟವಿರುವ ಅನೇಕರನ್ನು ಧರ್ಮಸ್ಥಳಕ್ಕೆ ಕರೆತಂದು ಚಟಬಿಡಿಸಲಾಗುತ್ತದೆ. ಕುಡಿತದ ಚಟ ಬಿಟ್ಟು ತನ್ನ ಕುಟುಂಬದವರ ಜತೆ ಸುಖಜೀವನ ನಡೆಸುತ್ತಿರುವ ಲಕ್ಷಾಂತರ ಕುಟುಂಬಗಳಿವೆ. ಕುಡಿತದ ಚಟದಿಂದ ಲಕ್ಷಾಂತರ ಕುಟುಂಬಗಳು ಬೀದಿಗೆ ಬೀಳುವುದನ್ನು ತಪ್ಪಿಸಿರುವ ಧರ್ಮಸ್ಥಳದ ಬಗ್ಗೆ ಕೆಟ್ಟದಾಗಿ ಮಾತನಾಡುವ ನೈತಿಕತೆ ಎಡಚರರಿಗೆ ಇಲ್ಲ. ತನಿಖೆ ನಡೆಯಬೇಕೆಂಬ ಬೇಡಿಕೆ ಒಂದು ನೆಪ ಮಾತ್ರ.

ಅವರ ಟಾರ್ಗೆಟ್ ಹಿಂದೂಗಳ ಶಕ್ತಿಕೇಂದ್ರ ಧರ್ಮಸ್ಥಳ. ದಕ್ಷಿಣ ಭಾರತದಲ್ಲಿ ಕೋಟ್ಯಂತರ ಭಕ್ತರು ಆಗಮಿಸುವ ಶ್ರೀಕ್ಷೇತ್ರ ಧರ್ಮಸ್ಥಳ. ಅದರ ಬಗ್ಗೆ ಅಪಪ್ರಚಾರ ನಡೆಸಿ ಭಕ್ತರನ್ನು ಬರದಂತೆ ತಡೆಯುವುದು ನಟೋರಿಯಸ್ ನಗರ ನಕ್ಸಲರ ಉದ್ದೇಶ. ಪ್ರತಿನಿತ್ಯ ಸುಳ್ಳುಗಳ ಸರಮಾಲೆಗಳನ್ನು ಪೋಣಿಸಿ ಧರ್ಮಸ್ಥಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುವ ಕೆಲಸ ನಡೆಸುತ್ತಿದ್ದಾರೆ. ಒಬ್ಬನಂತೂ ಬಹಿರಂಗವಾಗಿ, ‘ಧರ್ಮಸ್ಥಳಕ್ಕೆ ಹೋಗಬೇಡಿ, ಮಂಜುನಾಥ ಹಿಮಾಲಯಕ್ಕೆ ಹೋಗಿದ್ದಾನೆ’ ಎಂದು ಹೇಳುತ್ತಾನೆ.

ಆದರೀಗ ಹಿಂದೂ ಸಮಾಜದ ತಾಳ್ಮೆಯ ಕಟ್ಟೆ ಒಡೆದಿದೆ. ರಾಜ್ಯದ ಮೂಲೆಮೂಲೆಗಳಲ್ಲಿ ಲಕ್ಷಾಂತರ ಭಕ್ತರು ಧರ್ಮಸ್ಥಳದ ಪರವಾಗಿ ನಿಂತಿದ್ದಾರೆ. ಹಿಂದೂಗಳ ಧಾರ್ಮಿಕ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿ ಅಪಪ್ರಚಾರ ಮಾಡುವ ಕೆಲಸ ಭಾರತದಲ್ಲಿ ನಿರಂತರವಾಗಿ ನಡೆಯುತ್ತಿದೆ. ತಮಿಳುನಾಡಿನ ಕೊಯಮತ್ತೂರಿನ ‘ಈಶಾ’ ಸಂಸ್ಥೆಯನ್ನು ಟಾರ್ಗೆಟ್ ಮಾಡಲಾಯಿತು.

ಕೇರಳದ ಶಬರಿಮಲೆಯನ್ನು ಟಾರ್ಗೆಟ್ ಮಾಡಿ ಅಪಪ್ರಚಾರ ಮಾಡಲಾಯಿತು. ಈಗ ನಗರ ನಕ್ಸಲರ ಕಣ್ಣು ಧರ್ಮಸ್ಥಳದ ಮೇಲೆ ಬಿದ್ದಿದೆ. ರಾಜ್ಯ ಸರಕಾರ ಅಪಪ್ರಚಾರ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಹಾಗಾಗಿ ಸರಕಾರದ ನಿಲುವನ್ನು ಜನರು ಅನುಮಾನದಿಂದ ನೋಡುತ್ತಿದ್ದಾರೆ.

ಬೆಂಗಳೂರಿನ ಹೃದಯ ಭಾಗದಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅವ್ಯವಹಾರ ನಡೆದಿದೆಯೆಂದು ರಾಜ್ಯ ಸರಕಾರವು ಮುಜರಾಯಿ ಇಲಾಖೆಗೆ ಸೇರಿಸಿಕೊಂಡಿತು. ಆದರೆ ಪ್ರತಿಷ್ಠಿತ ಬಾಲ್ಡವಿನ್ ಶಿಕ್ಷಣ ಸಂಸ್ಥೆಯ ಮೂಲಸಂಸ್ಥೆಯಾದ ‘ಮೆಥಡಿ ಚರ್ಚ್’ನ ಮಾಜಿ ಆರ್ಚ್ ಬಿಷಪ್ ‘ಕರ್ಕರೆ’ ಅವರ ಮೇಲೆ 300 ಕೋಟಿ ರುಪಾಯಿಗೂ ಅಧಿಕ ಅವ್ಯವಹಾರ ನಡೆಸಿರುವ ಆರೋಪವಿದೆ.

ಚರ್ಚಿನ ಹಿಂಬಾಲಕರು ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಸರಕಾರ ಮಾತ್ರ ಆ ಸಂಸ್ಥೆಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಧರ್ಮಸ್ಥಳದ ವಿಚಾರದಲ್ಲಿ ಮನವಿ ಮಾಡಿದ 48 ಗಂಟೆಗಳಲ್ಲಿ ಎಸ್‌ಐಟಿಯನ್ನು ರಚನೆ ಮಾಡಿದೆ. ದಕ್ಷಿಣ ಭಾರತದಲ್ಲಿ ದೇವಸ್ಥಾನ ಗಳೆಂದರೆ ನೆನಪಾಗುವುದು ತಮಿಳುನಾಡು.

ಇಲ್ಲಿನ ಅಷ್ಟ ದಿಕ್ಕುಗಳಲ್ಲಿ ಸಾವಿರಾರು ದೇವಸ್ಥಾನಗಳಿವೆ. ಸಾವಿರಾರು ಹಿಂದೂಗಳ ದೇವಸ್ಥಾನ ವಿರುವ ತಮಿಳುನಾಡಿನಲ್ಲಿ ದೇವರನ್ನೇ ನಂಬದ ದ್ರಾವಿಡ ಚಳವಳಿಯೊಂದು ಪ್ರಾರಂಭವಾಯಿತು. ಪರಿಣಾಮ ದೇವಾಲಯಗಳ ನಾಡಿನಲ್ಲಿ ದೇವರನ್ನೇ ನಂಬದ ಪಕ್ಷವು ದಶಕಗಳಿಂದ ಆಡಳಿತ ನಡೆಸುತ್ತಾ ಬಂದಿದೆ.

ದೇವಸ್ಥಾನದಿಂದ ಬರುವ ಆದಾಯ ನೇರವಾಗಿ ಸರಕಾರಕ್ಕೆ ಹೋಗುತ್ತಿದೆ. ಆದರೆ ಸರಕಾರವನ್ನು ನಡೆಸುತ್ತಿರುವವರು ಪ್ರತಿನಿತ್ಯ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಕ್ರಿಶ್ಚಿಯನ್ ಮಿಷನರಿಗಳು ತಮಿಳುನಾಡಿನ ಅನೇಕ ಜಿಲ್ಲೆಗಳನ್ನು ಟಾರ್ಗೆಟ್ ಮಾಡಿ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿವೆ. ಕನ್ಯಾಕುಮಾರಿಯು ತಮಿಳುನಾಡಿ ನಲ್ಲಿ ಹೆಚ್ಚು ಮತಾಂತರಕ್ಕೊಳಗಾಗಿರುವ ಜಿಲ್ಲೆ.

ಇಲ್ಲಿನ ಅನೇಕ ಚರ್ಚುಗಳು ನೋಡುವುದಕ್ಕೆ ದೇವಸ್ಥಾನದ ರೀತಿ ಕಾಣುತ್ತವೆ. ತಮಿಳುನಾಡಿನ ಮಾದರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಚರ್ಚುಗಳ ಮುಂದೆ ಹಿಂದೂ ದೇವಸ್ಥಾನ ದಲ್ಲಿರುವಂತೆ ‘ಗರುಡಗಂಬ’ಗಳನ್ನು ಕಾಣಬಹುದು. ತಕ್ಷಣಕ್ಕೆ ನೋಡಿದಾಕ್ಷಣ ಅದನ್ನು ಚರ್ಚ್ ಎಂದು ಹೇಳುವುದಕ್ಕೆ ಆಗುವುದಿಲ್ಲ.

ತಮಿಳುನಾಡಿನ ಮಾದರಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಿಂದೂ ಧಾರ್ಮಿಕ ಕ್ಷೇತಗಳನ್ನು ಟಾರ್ಗೆಟ್ ಮಾಡಿ, ಜನರ ತಲೆಯಲ್ಲಿ ಅಪನಂಬಿಕೆ ಮೂಡಿಸುವ ಷಡ್ಯಂತ್ರ ಬಹಳ ದಿನದಿಂದಲೂ ನಡೆಯುತ್ತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಹಿಂದುತ್ವದ ಭದ್ರಕೋಟೆ. ಈ ಕೋಟೆಯನ್ನು ಭೇದಿಸಬೇಕಾದರೆ ಹಿಂದೂ ಸಮಾಜದಲ್ಲಿ ಒಡಕು ಮೂಡಿಸಬೇಕೆಂಬ ಸ್ಪಷ್ಟತೆ ನಗರ ನಕ್ಸಲರಿಗಿದೆ.

ಧರ್ಮಸ್ಥಳದ ಎಸ್‌ಐಟಿ ತನಿಖೆಯ ನೆಪವನ್ನು ಮುಂದಿಟ್ಟುಕೊಂಡು, ಹಿಂದೂಗಳ ಒಗ್ಗಟ್ಟನ್ನು ಒಡೆಯುವ ಹುನ್ನಾರ ನಡೆಯುತ್ತಿದೆ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಧರ್ಮಸ್ಥಳದ ಬಗ್ಗೆ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೂ, ಸರಕಾರ ಸುಮ್ಮನಿರುವುದು ಹಿಂದೂ ಸಮಾಜದ ಅನುಮಾನಕ್ಕೆ ಕಾರಣವಾಗಿದೆ.

ಧರ್ಮಸ್ಥಳವು ಶಿಕ್ಷಣ ಕಾಶಿ. ಉಜಿರೆಯಲ್ಲಿರುವ ಧರ್ಮಸ್ಥಳದ ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ಜನರಿಗೆ ಹಲವು ದಶಕಗಳಿಂದ ವಿದ್ಯಾದಾನ ಮಾಡುತ್ತಾ ಬಂದಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಧರ್ಮಸ್ಥಳಕ್ಕೆ ಬರುತ್ತಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧರ್ಮಸ್ಥಳದ ಶಿಕ್ಷಣ ಸಂಸ್ಥೆಗಳಿವೆ. ಅಂಗವಿಕಲರ ಶಿಕ್ಷಣಕ್ಕಾಗಿ ‘ಮಂಗಳ ಜ್ಯೋತಿ’ ಶಾಲೆ ಇದೆ.

ಕಾನೂನು, ವೈದ್ಯಕೀಯ, ತಾಂತ್ರಿಕ ಶಿಕ್ಷಣ ಸಂಸ್ಥೆಗಳಿವೆ. ಧರ್ಮಸ್ಥಳದಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸ ವಿರುವ ಭಾರತದ ಆಯುರ್ವೇದ ವೈದ್ಯಕೀಯ ಪದ್ದತಿಯನ್ನು ದೇಶದೆಡೆ ಪ್ರಚಾರ ಮಾಡುವುದರಲ್ಲಿ ಧರ್ಮಸ್ಥಳದ ಪಾತ್ರ ಬಹಳ ದೊಡ್ಡದು.

ಇಂದಿಗೂ ರಾಜ್ಯದ ಮೂಲೆಮೂಲೆಗಳಿಂದ ಅನೇಕರು ಧರ್ಮಸ್ಥಳ ಆಯುರ್ವೇದ ಕೇಂದ್ರಕ್ಕೆ ಭೇಟಿ ನೀಡಿ ಅಧ್ಯಯನ ನಡೆಸುತ್ತಾರೆ ಮತ್ತು ವಿದೇಶದಿಂದ ಬಂದು ಚಿಕಿತ್ಸೆ ಪಡೆಯುತ್ತಾರೆ. ಶಿಥಿಲಾವಸ್ಥೆ ಯಲ್ಲಿರುವ ನೂರಾರು ವರ್ಷಗಳ ಹಳೆಯ ಹಿಂದೂ ದೇವಸ್ಥಾನಗಳನ್ನು ಪುನರುಜ್ಜೀವನ ಗೊಳಿಸುವಲ್ಲಿ ಧರ್ಮಸ್ಥಳ ದೇವಸ್ಥಾನ ಕಟಿಬದ್ಧವಾಗಿದೆ.

ಇದರ ತೆಕ್ಕೆಯಲ್ಲಿರುವ ‘ಧರ್ಮೋತ್ಥಾನ’ ಸಂಸ್ಥೆಯ ಮೂಲಕ ಇದುವರೆಗೂ 25 ಜಿಲ್ಲೆಗಳ 240 ಹಿಂದೂ ದೇವಸ್ಥಾನಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಧರ್ಮಸ್ಥಳವೆಂಬ ದೊಡ್ಡ ಆಲದಮರದಲ್ಲಿ ಶಿಕ್ಷಣ, ವೈದ್ಯಕೀಯ, ಹೈನುಗಾರಿಕೆ, ಆಯುರ್ವೇದ, ಗ್ರಾಮೀಣಾಭಿವೃದ್ಧಿ, ಸಣ್ಣ ಉದ್ದಿಮೆ, ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಕೋಟ್ಯಂತರ ಜನರು ಆಶ್ರಯ ಪಡೆದಿದ್ದಾರೆ.

ಸರಕಾರ ಮಾಡಬೇಕಿರುವ ಅನೇಕ ಸಮಾಜಮುಖಿ ಕಾರ್ಯಗಳನ್ನು ಹಿಂದೂ ಧರ್ಮದ ದೇವಸ್ಥಾನ ವೊಂದು ತಲೆಮಾರುಗಳಿಂದ ಮಾಡುತ್ತಾ ಬಂದಿದೆ. ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿ ಅಪಪ್ರಚಾರ ಮಾಡಿ, ಧರ್ಮಸ್ಥಳವೆಂಬ ದೊಡ್ಡ ಆಲದಮರಕ್ಕೆ ಕೊಡಲಿ ಹಾಕುವುದು ನಗರ ನಕ್ಸಲರ ಹುನ್ನಾರ. ತಲೆಬುಡವಿಲ್ಲದ ವಾದಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತೇಲಿ ಬಿಟ್ಟು ಹಿಂದೂಗಳ ಮತ್ತೊಂದು ಪ್ರಮುಖ ಶ್ರದ್ಧಾಕೇಂದ್ರಕ್ಕೆ ಧಕ್ಕೆ ತಂದು ಧರ್ಮಸ್ಥಳದ ಮೇಲಿನ ನಂಬಿಕೆಗೆ ಪೆಟ್ಟು ನೀಡಬೇಕೆಂಬ ನಗರ ನಕ್ಸಲರ ಷಡ್ಯಂತ್ರ ದಿನದಿಂದ ದಿನಕ್ಕೆ ಬಯಲಾಗುತ್ತಿದೆ.